Wednesday, 11th December 2024

ಚಿತ್ರಗಳ ಮೂಲಕ ಅಜರಾಮರ

ಚಂದಮಾಮ ಪತ್ರಿಕೆಯಲ್ಲಿ ಸುಮಾರು ಅರವತ್ತು ವರ್ಷಗಳ ಕಾಲ ಚಿತ್ರಗಳನ್ನು ರಚಿಸಿ, ಮಕ್ಕಳ ಕಥೆಗಳಿಗೆ ಜೀವ ತುಂಬಿದ ಈ ಕಲಾವಿದ, ತನ್ನ ಚಿತ್ರಗಳ ಮೂಲಕ ಎಲ್ಲರ ಮನ ದಲ್ಲಿ ನಿಂತಿದ್ದಾರೆ.

ಕಮಲಾಕರ ಕೆ ಆರ್ ತಲವಾಟ

ಬೇತಾಳನನ್ನು ಹೊತ್ತ ರಾಜನ ಚಿತ್ರವು ‘ಚಂದಮಾಮ’ ಪತ್ರಿಕೆಯನ್ನು ಓದುತ್ತಿದ್ದವರಿಗೆ ಬಹು ಚಿರಪರಿಚಿತ. ಬೆನ್ನಮೇಲೆ ಶವ ಹೊತ್ತು ನೋಡುಗರ ಕಡೆ ಮುಖ ಮಾಡಿರುವ ರಾಜಾ ವಿಕ್ರಮ, ಅವನ ಕೈಯಲ್ಲಿ ಒಂದು ಚೂಪಾದ ಖಡ್ಗ, ಸ್ಮಶಾನವನ್ನು ನೆನಪಿಸುವ ಹುಣಿಸೆಯೋ ಮತ್ತೊಂದು ಮರ, ಮರದಲ್ಲಿ ಮತ್ತು ನೆಲದ ಮೇಲೆ ಮನುಷ್ಯನ ತಲೆ ಬುರುಡೆಗಳು. ಇವಷ್ಟು ಸಾಕಾಗಿತ್ತು ನಮ್ಮಂತಹ ಮಕ್ಕಳ ಕುತೂಹಲ ಕೆರಳಿಸಲು. ಮಲೆನಾಡಿನಲ್ಲಿ ಆಗೆಲ್ಲಾ ಬಚ್ಚಲು ಮನೆ ಮನೆಯ ಹೊರಗಿದ್ದು ವಿಕ್ರಮ ಬೇತಾಳ ಕಥೆ ಓದಿದ ಮೇಲೆ, ಸೂಸು ಮಾಡಲು ಹೋಗಲೂ ಭಯ. ದೊಡ್ಡವರ ಸಹಾಯ ಬೇಕಿತ್ತು.

ಸೂಸು ಮಾಡುವಾಗಲೂ ಹೆದರಿಕೆಯಿಂದ ಹಿಂದೆ ತಿರುಗಿ ನೋಡಿದ್ದು ಸಹ ವಿಕ್ರಮ ಬೇತಾಳ ಕಥೆಯ, ಬೇತಾಳ ಚಿತ್ರದ ಪರಿಣಾಮ. ಆಗೆಲ್ಲಾ ತಿಂಗಳಿಗೊಮ್ಮೆ ಬರುವ ಚಂದಮಾಮ ಪತ್ರಿಕೆಗೆ ಚಾತಕ ಪಕ್ಷಿಯಂತೆ ಕಾಯುತ್ತಿದ್ದೆವು. 1960 , 1970ರ ದಶಕ ಅದು. ಅಂದು ಚಂದಮಾಮ ಮಕ್ಕಳ ಮತ್ತು ದೊಡ್ಡವರ ಅಚ್ಚುಮೆಚ್ಚಿನ ಪತ್ರಿಕೆಯಾಗಿತ್ತು. ಚಂದಮಾಮದ ಪರೋಪಕಾರಿ ಪಾಪಣ್ಣ, ವಿಕ್ರಮ- ಬೇತಾಳ ಮತ್ತು ಇತರ ಕಥೆಗಳು ನಮ್ಮನ್ನು ಬೇರೊಂದು ಬಣ್ಣಬಣ್ದದ ಲೋಕಕ್ಕೆ ಕರೆದೊಯ್ಯುತ್ತಿದ್ದವು. ಟಿವಿ, ಸಿನಿಮಾ ಇಲ್ಲದ ಕಾಲ. ಸಂಜೆ ಸ್ಕೂಲಿಂದ ಬಂದ ಮೇಲೆ ಆ ತಿಂಗಳ ಚಂದಮಾಮ ಬಂದರೆ ಕೆಲವೊಂದು ಸಾರಿ ಎರಡು ಜನ ಒಟ್ಟೊಟ್ಟಿಗೆ ಅಕ್ಕಪಕ್ಕ ಕೂತು ಓದುತ್ತಿದ್ದೆವು. ಚಂದಮಾಮದ ಈ ಕುತೂಹಲಕಾರಿ ಕಥೆಗಳು, ಚಿತ್ರಗಳು ಮಕ್ಕಳ ಮೇಲೆ ಮೋಡಿ
ಮಾಡುತ್ತಿದ್ದವು.

ರಾತ್ರಿ ಹಾಸಿಗೆಯಲ್ಲಿ ಬೆಚ್ಚಗೆ ಹೊದ್ದು ಕ್ಲಾಸಿನ ಪುಸ್ತಕ ಓದುತ್ತಾ ನಿದ್ರೆ ಬರುತ್ತಾ ಇದ್ದರೂ ಅದನ್ನು ಬದಿಗಿಟ್ಟು, ಚಂದಮಾಮದ
ಕಥೆಗಳನ್ನು ಸೀಮೆ ಎಣ್ಣೆಯ ದೀಪದ ಬೆಳಕಿನಲ್ಲಿ ಓದುತ್ತಾ ನಿದ್ರೆಗೆ ಜಾರುತ್ತಿದ್ದುದು ಇಂದೂ ನೆನಪಿದೆ. ಮರದಲ್ಲಿ ಜೋತಾಡುವ ಬೇತಾಳ ವಿಕ್ರಮಬೇತಾಳ ಕಥೆಯ ಪೂರ್ವಬಾವಿಯಾಗಿ ‘ರಾಜಾ ವಿಕ್ರಮ ರಾತ್ರಿ ಸ್ಮಶಾನಕ್ಕೆ ಹೋಗಿ ಮರ ಹತ್ತಿ ಯಥಾ ಪ್ರಕಾರ ನೇತಾಡುತ್ತಿದ್ದ ಬೇತಾಳವನ್ನು ಕೆಳಗಿಳಿಸಿ ಹೆಗಲಿಗೇರಿಸಿ ನಡೆಯತೊಡಗಿದ. ದಾರಿಸಾಗಲು ಹೇಗಲ ಮೇಲಿನ ಶವ ಮಾತನಾಡ ತೊಡಗಿತು..ಕಥೆ ಹೇಳತೊಡಗಿತು…’ ಸಾಮಾನ್ಯವಾಗಿ ಅದು ರಾಜರಾಣಿಯರದ್ದೊ ಮತ್ತೊಂದೊ ಇರುತ್ತಿತ್ತು.

ಕಥೆಯ ಕೊನೆ ಯಲ್ಲಿ ಬೇತಾಳ ಕಥೆಗೆ ಸಂಬಂಧಿಸಿದಂತೆ ಪ್ರಶ್ನೆ ಕೇಳುತ್ತದೆ ಮತ್ತು ‘..ಸರಿಯಾಗಿ ಉತ್ತರಿಸದಿದ್ದರೆ ನಿನ್ನ ತಲೆ ಸಾವಿರ ಹೋಳಾದೀತು…ಎಚ್ಚರ ಎನ್ನುವುದು..’ ರಾಜಾ ವಿಕ್ರಮ ಅದರ ಸಮಸ್ಯೆಗೆ ಸಮಂಜಸ ಉತ್ತರ ಕೊಡುವುದು. ಇದು ಕಥೆ.
ಆ ಕಥೆಗಳಿಗೆ ಅರ್ಥಪೂರ್ಣ ಚಿತ್ರಗಳನ್ನು ಚಿತ್ರಸುತ್ತಿದ್ದ ಕಲಾವಿದ ಕೆ.ಸಿ.ಶಿವಶಂಕರ್ (ಶಿವಶಂಕರನ್). ಮಕ್ಕಳನ್ನು ಅದ್ಭುತ ಲೋಕಕ್ಕೆ ಕರೆದೊಯ್ಯುತ್ತಿದ್ದ ಆ ವಿಕ್ರಮ ಮತ್ತು ಬೇತಾಳದ ಕಥೆಗಳಿಗೆ, ಸೂಕ್ತ ಚಿತ್ರ ಬರೆದು, ಕಥೆುನ್ನುಕಣ್ಣಿ ಕಟ್ಟಿಕೊಟ್ಟಿದ್ದು, ಕೆ.ಸಿ. ಶಿವಶಂಕರ್ ಅವರು.

13 ಭಾಷೆಗಳಲ್ಲಿ ತಮಿಳುನಾಡಿನ ಈರೋಡಿನವರಾದ ಶಿವಶಂಕರ್ ಚೈನ್ನೂನ ನಾಗಿರೆಡ್ಡಿ ಮತ್ತು ಚಕ್ರಪಾಣಿ ಪ್ರಾರಂಭಿಸಿದ್ದ ಚಂದಮಾಮದಲ್ಲಿ 1951ರಲ್ಲಿ ಕಲಾವಿದರಾಗಿ ಕೆಲಸಕ್ಕೆ ಸೇರಿದರು. ಚಂದಮಾಮ 13 ಭಾಷೆಗಳಲ್ಲಿ ಅಚ್ಚಾಗುತ್ತಿತ್ತು. ಈ ಪತ್ರಿಕೆ ಯಲ್ಲಿ ಇವರು ಸುಮಾರು 60ವರ್ಷ ಕೆಲಸ ಮಾಡಿದರು. ಚಂದಮಾಮ ಪತ್ರಿಕೆಯಲ್ಲಿ ಮಕ್ಕಳ ಕಥೆಗಳಿಗೆ ಚಿತ್ರಗಳಿಗೆ ಜೀವ ತುಂಬುವ ಕೆಲಸ ಮಾಡಿದ್ದ ಶಿವಶಂಕರ್ ಮೊನ್ನೆ ಸಪ್ಟೆೆಂಬರ್ 30ರಂದು ತಮ್ಮ 97ನೇ ವಯಸ್ಸಿನಲ್ಲಿ ವಿಧಿವಶರಾದರು. ಇವರು ಚಂದಮಾಮ ಟೀಮಿನ ಕೊನೆಯ ಕೊಂಡಿ. ತಮ್ಮ ಚಿತ್ರಗಳಿಂದಾಗಿ, ಚಂದಮಾಮ ಪತ್ರಿಕೆಯ ಮೂಲಕ ದೇಶದಾದ್ಯಂತ
ಮನೆ ಮಾತಾದರು. ಇವರಿಗಿಂತ ಇವರ ಚಿತ್ರಗಳು ಹೆಚ್ಚು ಜನಪ್ರಿಯವಾದವು ಎನ್ನುವುದು ಹೆಚ್ಚು ಸೂಕ್ತ. ವಿಕ್ರಮ ಬೇತಾಳ ಚಿತ್ರಗಳ ಜತೆ, ಇವರು ರಾಮಾಯಣ, ಮಹಾಭಾರತದ ಕಥೆಗಳಿಗೂ ಆಕರ್ಷಕ ಮತ್ತು ಅರ್ಥಪೂರ್ಣ ಚಿತ್ರಗಳನ್ನು ರಚಿಸಿದ್ದರು.
ಚಂದಾಮಾಮ ಮಕ್ಕಳ ಪತ್ರಿಕೆಯನ್ನು 2007ರಲ್ಲಿ ಜಿಯೋಡೆಸಿಕ್ ಕಂಪನಿ ತನ್ನ ತೆಕ್ಕೆಗೆ ತೆಗೆದುಕೊಂಡರೂ, 2013ರಲ್ಲಿ ಚಂದ ಮಾಮ ತನ್ನ ಉಸಿರಾಟವನ್ನು ನಿಲ್ಲಿಸಿತು.

ಕಲಾವಿದನಿಗೆ ಸಾವುಂಟು ಕಲೆಗೆ ಸಾವಿಲ್ಲ. ಚಂದಮಾಮದಲ್ಲಿ ಚಿತ್ರ ರಚಿಸಿದ ಶಿವಶಂಕರ್ ಅವರು, ಆ ಚಿತ್ರಗಳು ಜನರ ಮನಸ್ಸಿ ನಲ್ಲಿ ಅಚ್ಚೊತ್ತಿದ ರೀತಿಯಿಂದ ಅಜರಾಮರಾಗಿದ್ದಾರೆ.