ಬೇಲೂರು ರಾಮಮೂರ್ತಿ
ಪ್ರತಿ ಮನೆಯಲ್ಲಿಯೂ ದೇವರ ಮನೆ ಎಂಬುದೊಂದು ಕೋಣೆ ಇದ್ದೇ ಇರುತ್ತದೆ. ಅಥವಾ ದೇವರಿಗೆಂದು ಪ್ರತ್ಯೇಕವಾದ ಸ್ಥಾನ ವನ್ನಾದರೂ ಮೀಸಲಿರಿಸಿರುತ್ತಾರೆ. ಇಲ್ಲಿ ಪ್ರತಿದಿನ ಜ್ಯೋತಿ ಬೆಳಗಿ ದೇವರಿಗೆ ನಮಸ್ಕರಿಸಲಾಗುತ್ತದೆ.
ಹಬ್ಬ, ಮಕ್ಕಳ ಹುಟ್ಟಿದ ಹಬ್ಬ ಮತ್ತಿತರ ಸಮಾರಂಭಗಳಲ್ಲಿ ದೇವರ ಕೋಣೆಯನ್ನು ಸಿಂಗರಿಸಿ ದೇವರಿಗೆ ಅಲಂಕಾರವನ್ನೂ ಮಾಡಲಾಗುತ್ತದೆ. ಹಿರಿ ಕಿರಿಯರೆನ್ನದೆ ಈ ದೇವರ ಕೋಣೆ ಎಲ್ಲರಿಗೂ ಭಕ್ತಿ ವ್ಯಕ್ತಪಡಿಸುವ ತಾಣ. ಈ ಬ್ರಹ್ಮಾಂಡಕ್ಕೆಲ್ಲ ಅವನೇ ಒಡೆಯ ಅಂದ ಮೇಲೆ ಈ ಮನೆಯೂ ಅದರಲ್ಲೇ ಸೇರಿಹೋಗುತ್ತದೆ. ಹಾಗಿದ್ದರೆ ಈ ಮನೆಗೆ ಅವನೇ ಮಾಲೀಕ. ನಾವು ವಾಸ ಮಾಡುತ್ತಿದ್ದೇವೆ ಅಷ್ಟೆ.
ದೇವರ ಕೋಣೆಯೆಂಬುದು ಮನೆಯ ಮುಖ್ಯ ವಿಭಾಗ. ಈ ಮನೆ ಆ ಭಗವಂತನದು ನಾವು ಇಲ್ಲಿ ಇರುವವರು ಮಾತ್ರ ಅನ್ನುವ ಒಂದು ವಿನೀತ ಭಾವ ಮೂಡುವಾಗ ನಮಗೆ ಈ ಪ್ರಪಂಚದಲ್ಲಿ ನಾವು ಏನು ಅನ್ನುವುದು ಅರಿವಾಗುತ್ತದೆ. ಹೀಗಾಗಿ ಆ ಭಗವಂತನನ್ನು ನಮ್ಮ ಮನೆಯ ಒಬ್ಬ ಮಖ್ಯ ಅತಿಥಿ ಅಂತ ಕರೆಯಬಹುದೇ. ಹೀಗಾಗಿ ಮುಖ್ಯ ಅತಿಥಿಗೆ ಒಂದು ಕೋಣೆಯನ್ನು ಮೀಸಲಾಗಿಡುವಂತೆ ದೇವರಿಗೂ ಒಂದು ಕೋಣೆಯನ್ನು ಮೀಸಲಾಗಿಡಬೇಕು. ಅವನಿಲ್ಲದೆ ಬೇರಿಲ್ಲ, ಅವನಿಲ್ಲದೇ, ಅವನ ಅನುಗ್ರಹವಿಲ್ಲದೇ ಯಾವುದೇ ಕೆಲಸವನ್ನು ಪ್ರಾರಂಭ ಮಾಡಲಾಗುವುದೂ ಇಲ್ಲ, ಮುಕ್ತಾಯ ಮಾಡಲಾಗುವುದೂ ಇಲ್ಲ.
ಹೀಗಾಗಿ ಯಾವುದೇ ಕೆಲಸದ ಪ್ರಾರಂಭಕ್ಕೆ ಮುನ್ನ, ಅವನನ್ನು ನಾವು ಪ್ರಾರ್ಥಿಸುತ್ತೇವೆ. ಅವನೊಂದಿಗೆ ಸಂಭಾಷಿಸುತ್ತೇವೆ. ನಮಗೆ ಏಕಾಂತ ಬೇಕಾಗಲು, ಭಗವಂತನನ್ನು ಪ್ರಾರ್ಥಿಸಲು ಒಂದು ದೇವರ ಮನೆ ಬೇಕು. ಅಲ್ಲಿ ಇರುವ ಶಾಂತಿಯಿಂದಾಗಿ, ಮಂತ್ರ ಪಠನದಿಂದ ಉಂಟಾಗುವ ಧ್ವನಿತರಂಗಗಳು, ಅವುಗಳಿಂದ ಉಂಟಾಗುವ ಮಾನಸಿಕ ಆನಂದ, ದೀಪ, ಧೂಪ, ಪುಷ್ಪ
ಇವುಗಳಿಂದ ವಾತಾವರಣದಲ್ಲಿ ಉಂಟಾಗುವ ತನ್ಮಯತೆ ಇವುಗಳನ್ನು ಕಾಣಬೇಕಾದರೆ ನಮಗೆ ಒಂದು ದೇವರ ಮನೆ ಬೇಕು.
ಇನ್ನು ನಾವು ಎಡದಿಂದ ಬಲಕ್ಕೆ ಪ್ರದಕ್ಷಿಣೆ ಮಾಡುವಾಗ ಭಗವಂತ ಸದಾ ನಮ್ಮ ಬಲಭಾಗದಲ್ಲಿ ಇರುತ್ತಾನೆ. ಬಲಭಾಗ ಶ್ರೇಷ್ಠ ವಾದದ್ದು. ಜಗೆ ನಾವು ಸರಿಯಾದ ಬದುಕು ಸಾಗಿಸಲು ನಮ್ಮನ್ನು ನಾವೇ ಎಚ್ಚರಿಸಿಕೊಳ್ಳುತ್ತಿರುತ್ತೇವೆ. ಇದಕ್ಕೆ ನಮಗೆ ಸಹಕಾರ ಸಿಗೋದು ಭಗವಂತನ ದಯೆ, ಕರುಣೆ, ಮುಂತಾದವುಗಳಿಂದ. ದೇವಸ್ಥಾನಗಳಲ್ಲಿ ಯಾದರೆ ಭಗವಂತನ ಗುಡಿಯ ಸುತ್ತ ಪ್ರದಕ್ಷಿಣೆ ಮಾಡುತ್ತೇವೆ. ಆದರೆ ಮನೆಯಲ್ಲಿ ಪೂಜೆ ಮಾಡಿದಾಗ ನಾವು ನಿಂತಲ್ಲಿಯೇ ಮೂರು ಸುತ್ತು ಹಾಕಿ ಪ್ರದಕ್ಷಿಣೆ ಮಾಡುತ್ತೇವೆ. ಇದಕ್ಕೂ ಒಂದು ವಿಶೇಷವಿದೆ. ನಾವು ನಮ್ಮ ಸುತ್ತಲೇ ಪ್ರದಕ್ಷಿಣೆ ಮಾಡಿಕೊಂಡಾಗ ನಮ್ಮೊಳಗಿರುವ ಭಗವಂತನಿಗೆ ಪ್ರದಕ್ಷಿಣೆ ಹಾಕಿದಂತಾಗುತ್ತದೆ.