Wednesday, 11th December 2024

G Pay ಯುಪಿಐ ಪಾವತಿಗೆ ನಿಯಂತ್ರಣ

ಯುಪಿಐ ವ್ಯವಹಾರಗಳು ಅಂದರೆ ಗೂಗಲ್ ಪೇ, ಫೋನ್ ಪೇಗಳಲ್ಲಿ ಇನ್ನು ಮುಂದೆ ಹೊಸ ಆರ್‌ಬಿಐ-ಎನ್‌ಪಿಸಿಐಗೆ ನೀಡಬೇಕು. ವ್ಯವಹಾರಗಳನ್ನು ಅಥವಾ ಹೊಸ ಗ್ರಾಹಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿಕೊಳ್ಳುವುದು ಸಾಧ್ಯ ವಿಲ್ಲವೇ? ಇದರಿಂದ ಗ್ರಾಹಕರಿಗೆ ಏನು ತೊಂದರೆ? ಕಂಪೆನಿಗಳಿಗೆ ತೊಂದರೆಯೇ, ಲಾಭವೇ? ಮೊನ್ನೆ ಮೊನ್ನೆಯಷ್ಟೇ ಅಧಿಕೃತ ಮಾಹಿತಿ ಹೊರ ಬಂದಿದ್ದರೂ ೨೦೨೧ರ ಜನವರಿಯಿಂದ ಜಾರಿಗೆ ಬರಲಿರುವ ಇದರ ಸಾಧಕ ಬಾಧಕ ಗಳೊಂದಿಗೆ ಒಟ್ಟಾರೆ ಒಳನೋಟ.

ಬಡೆಕ್ಕಿಲ ಪ್ರದೀಪ್

ಟೆಕ್ ಟಾಕ್

ಯುನಿಫೈಡ್ ಪೇಮೆಂಟ್ ಇಂಟರ್ಫೆಸ್ ಅಂದರೆ ಯುಪಿಐ ಬಂದ ಮೇಲೆ ಮೊಬೈಲ್ ಮೂಲಕ ಪೇಮೆಂಟ್‌ಗಳನ್ನು ಮಾಡುವುದು
ಲೀಲಾಜಾಲವಾಗಿದೆ. ಅದೇ ರೀತಿ, ಅಲ್ಲಿ ಹಲವಾರು ಆಯ್ಕೆಗಳಿದ್ದರೂ ಗೂಗಲ್ ಪೇ ಹಾಗೂ ಫೋನ್ ಪೇ ಜನರಿಗೆ ಹತ್ತಿರವಾಗಿ ಬಿಟ್ಟಿದೆ.

ಹೆಚ್ಚು ಕಮ್ಮಿ ೮೦ ಶೇಕಡಾ ಒಟ್ಟು ವ್ಯವಹಾರಗಳನ್ನು ಈ ಎರಡು ಆಪ್‌ಗಳ ಮೂಲಕವೇ ಜನ ಮಾಡುತ್ತಿದ್ದಾರೆ. ಜನರಿಗಂತೂ ಅಂಗೈಯಲ್ಲಿ ಬ್ಯಾಂಕ್ ಸ್ವರೂಪದಲ್ಲಿ ಈ ಪಾವತಿ ವಿಧಾನ ಜನಪ್ರಿಯವಾಗಿದೆ. ಜೇಬಲ್ಲಿ ದುಡ್ಡಿಲ್ಲದಿದ್ದರೂ, ಏನು ಬೇಕಾದರೂ ಖರೀದಿಸುವ ಅವಕಾಶ! ಅಂದರೆ ಲೆಕ್ಕ ಹಾಕಿ!

ಒಂದೆಡೆ ಏರುತ್ತಿರುವ ವ್ಯವಹಾರದ ಸಂಖ್ಯೆ ಹಾಗೂ ಹಲವಾರು ಆಯ್ಕೆಗಳ ಮಧ್ಯೆ ಈ ಎರಡೂ ಕಂಪೆನಿಗಳೂ ತಲಾ ೪೦ ಶೇಕಡಾದಷ್ಟು ವ್ಯವಹಾರವನ್ನು ಆಕರ್ಷಿಸುತ್ತಿರುವುದನ್ನು ಮನಗಂಡೋ ಏನೋ ಎನ್‌ಪಿಸಿಐ (ನ್ಯಾಶನಲ್ ಪೇಮೆಂಟ್ಸ್ ಕಾರ್ಪರೇಶನ್ ಆಫ್ ಇಂಡಿಯಾ) ಎನ್ನುವ ಇವುಗಳನ್ನು ನಿಯಂತ್ರಿಸುವ ಸಂಸ್ಥೆ ಇದಕ್ಕೊಂದು ತಡೆಯನ್ನು ತಂದಿದೆ. .೨೦೨೧ರ ಜನವರಿಯಿಂದ ಆರಂಭವಾಗುವಂತೆ ಒಂದು ಕಂಪೆನಿಯ ಒಟ್ಟೂ ವ್ಯವಹಾರ ೩೦ ಶೇಕಡಾಕ್ಕಿಂತ ಮೇಲೆ ಹೋಗುವಂತಿಲ್ಲ. ಆದರೆ ಇದು ಹಳೆಯ ಕಂಪೆನಿಗಳಿಗೆ ಈಗಲೇ ಅನ್ವಯವಾದರೆ ಅಲ್ಲೋಲಕಲ್ಲೋಲವಾದೀತೆನ್ನುವ ಕಾರಣಕ್ಕೆ ಅವು ಈ ವ್ಯವಸ್ಥೆಗೆ ಹೊಂದಿಕೊಳ್ಳಲು ೨೦೨೩ರ ವರೆಗೆ ಕಾಲಾವಕಾಶವನ್ನು ನೀಡಲಾಗಿದೆ.

ಒಟ್ಟಾರೆಯಾಗಿ, ಈ ವ್ಯವಹಾರಗಳನ್ನು ಒಂದು ತಹಬದಿಗೆ ತಂದು ಒಂದೋ ಎರಡೋ ಕಂಪೆನಿಗಳ ಕೈಗೆ ಪೂರ್ತಿ ಹಿಡಿತ
ಸಿಗಬಾರದು ಎನ್ನುವ ಉದ್ದೇಶದೊಂದಿಗೆ ಎನ್‌ಸಿಪಿಐ ಈ ತಡೆಯನ್ನು ತಂದಿದ್ದರೂ, ಇದು ಗೂಗಲ್ ಪೇ, ಫೋನ್ ಪೇಗಳಿಗೆ ಖುಷಿ ಕೊಟ್ಟಿಲ್ಲವಾದರೂ, ಪೇಟಿಎಂ, ಅಮೆಜಾನ್ ಪೇ, ಮೊಬಿಕ್ವಿಕ್‌ನಂತಹ ಕಂಪೆನಿಗಳಿಗೆ ಇದರಿಂದ ಸಂತೋಷವಾಗಿದೆ. ಇನ್ನು ಇವೆಲ್ಲಾ ಸೇರಿ ೨೦ ಶೇಕಡಾ ವ್ಯವಹಾರವನ್ನು ಹಂಚಿಕೊಂಡರೂ, ಸರಕಾರದ ನಿಯಂತ್ರಣದಲ್ಲಿರುವ ಭೀಮ್ ಪೇ ಇದ್ದುದರಲ್ಲಿ ಕಡಿಮೆ ವ್ಯವಹಾರವನ್ನು ಕಾಣುತ್ತಿದೆ.

ಸರಳ ವಿಧಾನ
ಇವೆಲ್ಲಕ್ಕೂ ಕಾರಣ, ಗೂಗಲ್‌ಪೇ ಹಾಗೂ ಫೋನ್ ಪೇಯಲ್ಲಿ ಜನರಿಗೆ ಬಳಕೆಗೆ ಸರಳತೆ ಹಾಗೂ ಬಳಕೆ ಮಾಡಲು ಆರಂಭಿಸಿರುವ ವ್ಯಾಪಕತೆ ಎನ್ನುತ್ತಾರೆ ಪರಿಣತರು. ಆದರೀಗ ಅದೇ ವ್ಯಾಪಕ ಮತ್ತು ಜನಪ್ರಿಯ ಬೆಳವಣಿಗೆಯನ್ನು ಚಿವುಟುವ ಪ್ರಯತ್ನ ಅನ್ನುವ ವರ್ಣನೆಯನ್ನೂ ಕೆಲವರು ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಒಟ್ಟಾರೆ ವ್ಯವಹಾರಗಳನ್ನು ೩೦ ಶೇಕಡಾಕ್ಕೆ ಇಳಿಸಲು ಹೇಳಿರುವ ಹಾಗೂ ಅದಕ್ಕೆ ತಕ್ಕ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಈ ಕಂಪೆನಿಗಳಿಗೆ ಹೇಳಿರುವ ಎನ್‌ಪಿಸಿಐ ಒಂದು ವೇಳೆ ಆ ಮಿತಿಯನ್ನು ಮೀರಿದರೆ ಏನು ಮಾಡಬೇಕು ಅನ್ನುವುದಕ್ಕೆ ಸ್ಪಷ್ಟ ಮಾರ್ಗಸೂಚಿಯನ್ನು ಇನ್ನೂ ನೀಡಿಲ್ಲ.

ಪೇಟಿಎಂಗೆ ಅನ್ವಯವಿಲ್ಲ
ಆದರೆ ಈ ಮಿತಿಯಂತೂ ಕೇವಲ ಪೇಮೆಂಟ್ ವ್ಯವಸ್ಥೆಯಾಗಿರುವ ಆಪ್‌ಗಳಿಗೆ (ಅಂದರೆ ಬೇರೆ ಬ್ಯಾಂಕ್‌ಗಳಿಂದ ಬೆಂಬಲ ತೆಗೆದುಕೊಳ್ಳುವವುಗಳಿಗೆ) ಮಾತ್ರ ಅನ್ವಯವಾಗಲಿದ್ದು, ತನ್ನದೇ ಪೇಮೆಂಟ್ ಬ್ಯಾಂಕನ್ನು ಹೊಂದಿರುವ ಪೇಟಿಎಂಗೆ ಇದು ಅನ್ವಯವಾಗುವುದಿಲ್ಲ.

ಇನ್ನು ಇದು ೨೦೨೩ರವರೆಗೂ ಗೂಗಲ್‌ಪೇ ಹಾಗೈ ಫೋನ್ ಪೇಗೆ ಅನ್ವಯವಾಗದಿರುವುದರಿಂದ ಅಲ್ಲಿಯವರೆಗೆ ವ್ಯವಹಾರ ತಡೆಯಾಗುವುದು ಸಾಧ್ಯವಿಲ್ಲ ಎನ್ನಲಾಗಿದೆ. ಜತೆಗೆ ಈ ರೀತಿಯ ಎಲ್ಲಾ ಪೇಮೆಂಟ್‌ಗಳು, ಗೇಟ್‌ವೇ ಎನ್ನುವ ಒಂದು ವ್ಯವಸ್ಥೆಯ ಮೂಲಕ ಹಾದು ಹೋಗುವುದರಿಂದ ಒಂದೇ ಸಮನೆ ಏರಿಕೆ ಕಂಡರೂ ಅದರಿಂದ ಫೇಲ್ ಆಗುವ ವ್ಯವಹಾರಗಳು ಹೆಚ್ಚಾಗು ವದೂ ನಡೆಯುತ್ತಿದೆ. ಜುಲೈಯಲ್ಲಿ ಶೇಕಡಾ ಫೇಲ್ ಆದ ವ್ಯವಹಾರ ಸೆಪ್ಟೆಂಬರ್‌ನಲ್ಲಿ ಶೇಕಡಾಕ್ಕೇರಿತ್ತು ಎನ್ನುತ್ತದೆ ಒಂದು ಮಾಹಿತಿ. ಇದರರ್ಥ ಈ ವ್ಯವಹಾರಗಳು ಒಂದೇ ಕಂಪೆನಿಯಡಿಯಲ್ಲಿ ನಡೆದರೆ ಫೇಲ್ ಆಗುವ ಸಾಧ್ಯತೆ ಹೆಚ್ಚು.

ಜೊತೆಗೆ ತಮ್ಮ ಆಪ್‌ಗಳ ಒಳಗೇ ಪೇಮೆಂಟ್‌ಗಳನ್ನು ಮಾಡಬೇಕೆನ್ನುವ ರೀತಿಯ ತಡೆಗಳನ್ನು ಈ ಕಂಪೆನಿಗಳು ಆದಷ್ಟು ಹಾಕಬಾರದು ಆ ಮೂಲಕ ಗ್ರಾಹಕ ಸ್ನೇಹಿಯಾಗಿರಬೇಕು ಅನ್ನುವ ಎನ್‌ಪಿಸಿಐ ಈ ಮೂಲಕ ಚ್ಯಾಟ್ ಲೋಕದ ದೈತ್ಯ ವಾಟ್ಸಾಪ್, ಸರ್ಚ್ ಲೋಕದ ದೈತ್ಯ ಗೂಗಲ್, ಶಾಪಿಂಗ್ ದೈತ್ಯ ವಾಲ್ಮಾರ್ಟ್ (ಫ್ಲಿಪ್‌ಕಾರ್ಟ್), ಅಮೆಝಾನ್‌ಗಳಂತಹ ಕಂಪೆನಿಗಳಿಗೇ ಸಂಪೂರ್ಣ ಪೇಮೆಂಟ್‌ಗಳ ನಿಯಂತ್ರಣ ಸಿಗಬಾರದು ಎನ್ನುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದೆ.

ವಾಟ್ಸಾಪ್ ಪೇ ಆಟ ಶುರು
ಇವೆಲ್ಲದರ ನಡುವೆ ಕಳೆದರಡು ವರ್ಷಗಳಿಂದ ಕೇವಲ ಬೀಟಾ ಸ್ವರೂಪದಲ್ಲಿದ್ದು, ಆರ್‌ಬಿಐನಿಂದ ಒಪ್ಪಿಗೆಗಾಗಿ ಕಾಯುತ್ತಿದ್ದ ವಾಟ್ಸಾಪ್ ಪೇ ಕೊನೆಗೂ ಕಾರ್ಯಾರಂಭ ಮಾಡಿದೆ. ಜುಲೈಯಲ್ಲಿ ಅದಕ್ಕೆ ಒಪ್ಪಿಗೆ ಸಿಕ್ಕಿದ್ದು ಇದೀಗ ಒಟ್ಟಾರೆ ಕೋಟಿ ಮಂದಿಯನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವ ಅನುಮತಿ-ಮಿತಿ ಕೂಡ ಅದಕ್ಕೆ ಸಿಕ್ಕಿದೆ. ಒಟ್ಟಾರೆ ೪೦ ಕೋಟಿ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್ ಭಾರತದಲ್ಲಿ ವ್ಯವಸ್ಥಿತವಾದ ಕಚೇರಿಯನ್ನಾಗಲಿ, ಮಾಹಿತಿಯನ್ನು ನಮ್ಮ ದೇಶದಲ್ಲೇ ಸಂಗ್ರಹಿಸುವ ವ್ಯವಸ್ಥೆಯನ್ನಾಗಲೀ ಮಾಡಿ ಕೊಂಡಿಲ್ಲದ ಕಾರಣ ಅದಕ್ಕೆ ಅನುಮತಿ ನೀಡುವುದಕ್ಕೆ ಅನುಮಾನಿಸಿತ್ತು ಆರ್‌ಬಿಐ.

ಇದೀಗ ಇದರ ಆಗಮನ, ಅದಕ್ಕೆ ನೀಡಿರುವ ಮಿತಿ ಹಾಗೂ ಉಳಿದ ಕಂಪೆನಿಗಳೂ ೩೦ ಶೇಕಡಾ ಮಿತಿಯನ್ನು ಮೀರಬಾರದು ಅನ್ನುವದೆಲ್ಲವೂ, ಒಂದೇ ಸಂಸ್ಥೆಯಡಿಯಲ್ಲಿ ಸಂಪೂರ್ಣ ಸ್ವಾಯುತ್ತತೆ ಸೇರಿ ಹೋಗುವುದು ಬೇಡ ಎನ್ನುವ ಉದ್ದೇಶಕ್ಕಾಗಿಯೇ ಎನ್ನಲಾಗುತ್ತಿದೆ.

ಹಣ ಪಾವತಿಯ ಹೊಸ ವಿಧಾನ
ಅಕ್ಟೋಬರ್‌ನಲ್ಲಿ ೨೦೦ ಕೋಟಿ ಒಟ್ಟೂ ವ್ಯವಹಾರಗಳ ಗಡಿ ದಾಟಿದ ಯುಪಿಐ ಪೇಮೆಂಟ್ ಗಳು
ಗೂಗಲ್ ಪೇ (೮೨ ಕೋಟಿ ವ್ಯವಹಾರಗಳು), ಫೋನ್ ಪೇ (೮೩.೫ ಕೋಟಿ ವ್ಯವಹಾರಗಳು)
ಉಳಿದೆಲ್ಲಾ ಯುಪಿಐ ಆಪ್‌ಗಳ ಒಟ್ಟೂ ವ್ಯವಹಾರ ೨೦ ಶೇಕಡಾದೊಳಗಿನದು.
ವರ್ಷಗಳ ಬಳಿಕ ೪೦ ಕೋಟಿ ಬಳಕೆದಾರರ ಪೈಕಿ ಕೋಟಿಯನ್ನು ಮಾತ್ರ ಸೇರಿಸಿಕೊಳ್ಳಲು ವಾಟ್ಸಾಪ್ ಪೇ ಗೆ ಅವಕಾಶ.
೨೦೨೩ರ ಫೆಬ್ರವರಿಯವರೆಗೆ ಯಾವುದೇ ಅಡೆತಡೆಗಳಿರದು, ಅದರೊಳಗೆ ಈ ಕಂಪೆನಿಗಳು ವ್ಯವಸ್ಥೆಗೆ ತಯಾರಾಗಬೇಕು.
ಒಟ್ಟಾರೆ ವ್ಯವಹಾರಗಳ ಲೆಕ್ಕವನ್ನು ಆಪ್‌ಗಳಿಗೆ ಬ್ಯಾಂಕಿಂಗ್ ಬೆಂಬಲ ನೀಡುವ ಬ್ಯಾಂಕ್‌ಗಳು ಆರ್‌ಬಿಐ-ಎನ್‌ಪಿಸಿಐಗೆ ನೀಡಬೇಕು.