Saturday, 12th October 2024

ಸುಂದರ ಪಯಣದ ಜತೆ ಸೆಲ್ಫಿ ಕಥೆ ಹೇಳುವ ಗ್ರೂಫಿ

ಇಂದಿನ ಯುವ ಜನತೆಯಲ್ಲಿ ಸೆಲ್ಫಿ ಕ್ರೇಜ್ ತುಸು ಜಾಸ್ತಿಯೆ. ಕೈಯಲ್ಲಿ ಮೊಬೈಲ್ ಇದ್ದರೆ ಸಾಕು, ನಿಂತಲ್ಲಿಯೇ ಪೋಟೋ ಕ್ಲಿಕ್ಕಿಸುವ ಧಾವಂತ. ಅನಿಸಿದ ಕಡೆ ಪೋಟೋ ತೆಗೆದುಕೊಳ್ಳಬೇಕು. ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಬೇಕು ಎಂಬ ಆತುರ.

ಈ ಆತುರದಲ್ಲಿ ಸಂಭವಿಸುವ ಅನಾಹುತಗಳು ಒಂದೆರಡಲ್ಲ. ಈ ಹಿಂದೆ ಇಂತಹ ಸಾಕಷ್ಟು ಅನಾ ಹುತಗಳು ನಡೆದಿವೆ. ಆದರೂ ಇದರಿಂದ ಪಾಠ ಕಲಿಯದೆ ಹಲವರು ಸೆಲಿ ಗೀಳಿಗೆ ಬಲಿಯಾಗು ತ್ತಿದ್ದಾರೆ. ಇಂತಹ ಸೆಲ್ಫಿ ಹುಚ್ಚಿನಿಂದ ಸಂಭವಿಸಿದ ನೈಜ ಘಟನೆಗಳನ್ನು ಆಧರಿಸಿ ಗ್ರೂಫಿ ಸಿನಿಮಾ ಸಿದ್ಧವಾಗಿದ್ದು ಇಂದು ತೆರೆಗೆ ಬಂದಿದೆ. ಒಬ್ಬರೇ ಪೋಟೋ ತೆಗೆದುಕೊಂಡರೆ ಅದು ಸೆಲಿ, ಗುಂಪಾಗಿ ತೆಗೆದುಕೊಂಡರೆ ಅದು ಗ್ರೂಫಿ.

ಇದು ನೈಜ ಘಟನೆಗಳನ್ನು ಆಧರಿಸಿದ ಸಿನಿಮಾವಾಗಿದ್ದು, ಸಮಾಜಕ್ಕೆ ಉತ್ತಮ ಸಂದೇಶ ಕೊಡುವ ಕಥೆಯೂ ಈ ಚಿತ್ರದಲ್ಲಿದೆ. ಗ್ರೂಫಿ ಚಿತ್ರದಲ್ಲಿ ನಗುವಿದೆ, ಅಳುವಿದೆ, ಎಲ್ಲಕ್ಕೂ ಹೆಚ್ಚಾಗಿ ಸೆಲ್ಫಿ ಕ್ರೇಜಿಗೆ ಬಲಿಯಾದವರ ಕರುಣಾ ಜಕ ಕಥೆಯಿದೆ. ಕೆಲವು ನೈಜ ಘಟನೆಗಳನ್ನು ಆಧರಿಸಿ, ಅದಕ್ಕೆ ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳನ್ನು ಬೆರೆಸಿ ತೆರೆಗೆ ತರಲಾಗುತ್ತಿದೆ. ಹಾಗಂತ ಗ್ರೂಫಿ ಸೆಲ್ಫಿ ಕಥೆಗೆ ಸೀಮಿತ ವಾಗಿಲ್ಲ. ನಿಸರ್ಗದ ಒಡಲಾಳ, ಪ್ರಾಕೃತಿಕ ವಿಕೋಪದ ಬಗ್ಗೆಯೂ ಚಿತ್ರ ಸಾರಿ ಹೇಳುತ್ತದೆ.

ಕಾನನ ಸುತ್ತುವ ಕಾರ್ತಿಕ 
ಚಿತ್ರದಲ್ಲಿ ಬರುವ ಕಾರ್ತಿಕ್ ಎಂಬ ಪಾತ್ರ ಪ್ರಮುಖವಾಗಿದೆ. ಕಾರ್ತಿಕ್ ಪೋಟೋ ಜರ್ನಲಿಸ್ಟ್. ಪ್ರಕೃತಿಯ ರಮಣೀಯ ಸಿರಿಯನು ಇಷ್ಟಪಡುವ ಕಾರ್ತಿಕ್, ಕ್ಯಾಮೆರಾ ಹಿಡಿದು ಹೊರಟರೆ, ಪ್ರಕೃತಿಯ ಸೌಂದರ್ಯ ಅದರಲ್ಲಿ ಸೆರೆಯಾಗುತ್ತದೆ. ತನ್ನ ನೆಚ್ಚಿನ ತಾಣಗಳಲ್ಲಿ ಆಗುತ್ತಿರುವ ವಿಕೋಪಗಳು ಅರಿವಾದಾಗ ಅದಕ್ಕೆ ಕಾರಣವನ್ನು ಹುಡುಕಲು ಹೊರಡುತ್ತಾನೆ. ಈ ನಡುವೆ ಸೆಲ್ಫಿ ಹುಚ್ಚಿನ ಭುವನಾ, ಸದಾ ಭಯಪಡುವ ಪುನೀತ್, ಹೊಸತನ್ನು ಕಂಡುಹಿಡಿಯಬೇಕು ಎಂದು ಬಯಸುವ ಪೂರ್ವಿ, ತಿಂಡಿಪೋತಿ ಸಾನಿಕಾ, ಸಂಗೀತ ಪ್ರಿಯ ಶಶಾಂಕ್, ಇವೆರೆಲ್ಲರು ಮಲೆನಾಡಿನ ಸುಂದರ ತಾಣದಲ್ಲಿ ಸಂದಿಸುತ್ತಾರೆ. ಇವರು ಇಲ್ಲಿಗೆ ಬಂದದ್ದು ಯಾಕೆ, ಆ ಬಳಿಕ ನಡೆಯುವ ಘಟನೆಗಳು ಏನು ಎಂಬುದೆ ಚಿತ್ರದ ಸಸೆನ್ಸ್. ಅದನ್ನು ಚಿತ್ರ ನೋಡಿಯೇ ತಿಳಿಯಬೇಕು ಎನ್ನುತ್ತಾರೆ ನಿರ್ದೇಶಕ ರವಿ ಅರ್ಜುನ್.

ನಿಸರ್ಗದ ಒಡಲು
ಪಶ್ಚಿಮ ಘಟ್ಟಗಳಲ್ಲಿ ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ಪ್ರಾಕೃತಿಕ ವಿಕೋಪಗಳು ಅದಕ್ಕೆ ಕಾರಣ ಇವೆಲ್ಲವೂ ಚಿತ್ರದ ಕಥೆಯಲ್ಲಿ ಹಾಸು ಹೊಕ್ಕಾಗಿವೆ. ಅದಕ್ಕೆ ಕಾರಣ ಏನು ಎಂಬುದನ್ನು ಹುಡುಕುವ ಪ್ರಯತ್ನವೂ ಸಿನಿಮಾ ದಲ್ಲಿದೆ. ಚಿತ್ರದಲ್ಲಿ ಐದು ಪಾತ್ರಗಳು ಮುಖ್ಯವಾಗಿದ್ದು, ಪ್ರತಿಪಾತ್ರವೂ ಒಂದೊಂದು ಕಥೆ ಹೇಳುತ್ತಾ ಸಾಗುತ್ತದೆ. ಲವ್, ಸೆಂಟಿಮೆಂಟ್, ಥ್ರಿಲ್ಲರ್, ಸಸ್ಪೆನ್ಸ್, ಹಾರರ್ ಹೀಗೆ ಎಲ್ಲಾ ಆಯಾಮಗಳಲ್ಲಿ ಕಥೆ ಸಾಗುತ್ತದೆ. ಗಗನ್, ಉಮಾ ಮಯೂರಿ, ಸಂಧ್ಯಾ, ಶ್ರೀಧರ್, ಸಂಗೀತಾ, ರಜನಿಕಾಂತ್ ಚಿತ್ರದ ತಾರಾಬಳಗದಲ್ಲಿದ್ದಾರೆ.

***

ಕೆಲವು ಅಧ್ಯಯನಗಳ ಪ್ರಕಾರ ಸೆಲಿ ಕ್ರೇಜ್‌ನಲ್ಲಿ ಭಾರತವೇ ನಂ.೧ ಸ್ಥಾನದಲ್ಲಿದೆ. ಜತೆಗೆ ಇದರಿಂದ ಆಗುವ ಅನಾಹುತಗಳಲ್ಲಿ ಯುವಜನತೆಯೇ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಅದು ಯಾಕೆ ಹೇಗೆ ಎಂಬುದನ್ನು ತೆರೆದಿಡುವ ಪ್ರಯತ್ನವನ್ನು ಈ ಚಿತ್ರದ ಮೂಲಕ ಮಾಡಿದ್ದೇವೆ. ಇದರ ಜತೆಗೆ ಪ್ರಕೃತಿಯ ಒಡಲಾಳದ ಕಥೆಯನ್ನು ಹೇಳಿದ್ದೇವೆ.
– ರವಿ ಅರ್ಜುನ್ ನಿರ್ದೇಶಕ

ಗ್ರೂಫಿಯಲ್ಲಿ ಮನರಂಜನೆಯ ಜತೆಗೆ ಸಾಮಾಜಿಕ ಸಂದೇಶ ಸಾರುವ ಒಳ್ಳೆಯ ಕಥೆಯೂ ಇದೆ. ಬಹು ಮುಖ್ಯವಾಗಿ ಇಂದಿನ ಯುವಜನರು ಮತ್ತು ಪೋಷಕರು
ಚಿತ್ರವನ್ನು ನೋಡಲೇಬೇಕು. ಗ್ರೂಫಿ, ಪ್ರಕೃತಿ ಸೊಬಗಿನೊಂದಿಗೆ ಸಾಗುವ ಸುಂದರ ಪಯಣ ಅನ್ನಬಹುದು. ಜತೆಗೆ ಹಾಡುಗಳು ಸದಾ ಕಾಡುತ್ತವೆ.
– ಕೆ.ಜೆ.ಸ್ವಾಮಿ ನಿರ್ಮಾಪಕರು