Friday, 13th December 2024

ಸದಾ ಸಲ್ಲುವ ಗುರುಶಿಷ್ಯ ಪರಂಪರೆ

ಪ್ರತಿಯೊಬ್ಬ ವ್ಯಕ್ತಿಯಲ್ಲೂ ಅವನದೇ ಆದ ರೀತಿಯಲ್ಲಿ ಸಾಮರ್ಥ್ಯವಿರುತ್ತದೆ. ಇರುವ ಸಾಮರ್ಥ್ಯವನ್ನು ದುಡಿಸಿ ಕೊಳ್ಳಲು ಒಂದೋ ಅವಕಾಶ ಸಿಗಬೇಕು, ಇಲ್ಲವೇ ನಾವೇ ಸೃಷ್ಟಿಸಿಕೊಳ್ಳಬೇಕು.

ರಾಜಮ್ಮ ಡಿ.ಕೆ

ತಮ್ಮ ಪ್ರವಚನವನ್ನು ತನ್ಮಯತೆಯಿಂದ ಆಲಿಸುತ್ತಿದ್ದ ತರುಣನೆಡೆಗೆ ದೃಷ್ಟಿ ಹರಿಸಿದ ಆಚಾರ್ಯರಿಗೆ ಅವನ ಮುಖದಲ್ಲೇನೋ ವಿಚಿತ್ರ ಕಳೆ ಇರುವಂತೆ ಭಾಸವಾಯಿತು. ಊರಿಗೆ ಹೊಸಬನಂತೆ ಕಾಣುತ್ತಿರುವ ಈ ಅಪರಿಚಿತ ಯುವಕ ಯಾರಿರಬಹುದೆಂದು ತಿಳಿಯುವ ಕುತೂಹಲದಿಂದ ಪ್ರವಚನ ಮುಗಿದ ಬಳಿಕ ಅವನನ್ನು ತಮ್ಮ ಬಳಿಗೆ ಬರಮಾಡಿಕೊಂಡರು.

ಆತನ ಮುಖವನ್ನು ಕ್ಷಣ ಕಾಲ ದಿಟ್ಟಿಸಿ ನೊಡಿದ ಆಚಾರ್ಯರಿಗೆ, ಈ ಮುಖಚರ್ಯೆ ಸಾಮಾನ್ಯವಾದುದಲ್ಲ, ಯಾವುದೋ
ಮಹತ್ಕಾರ್ಯ ಸಾಧಿಸುವ ಲಕ್ಷಣವುಳ್ಳ ಮುಖ ಎಂದುಕೊಂಡು ‘ನಿಮ್ಮ ಹೆಸರೇನು? ಯಾವ ಊರು? ಇಲ್ಲಿಗೆ ಬಂದ ಉದ್ದೇಶ ವೇನು’ ಎಂದು ಕೇಳಿದರು.

ತನ್ನ ಹೆಸರು, ಊರಿನ ಹೆಸರನ್ನು ಹೇಳಿದ ತರುಣ ‘ವಿದ್ಯೆ ಕಲಿಯುವ ಉತ್ಕಟ ಬಯಕೆಯಿಂದ ಬಂದಿದ್ದೇನೆ’ ಎಂದ. ‘ನಿಮ್ಮ ಬಯಕೆಯೇನೋ ಒಳ್ಳೆಯದೇ. ಆದರೆ ವಿದ್ಯೆ ಕಲಿಯುವ ವಯಸ್ಸೇ ನಿಮ್ಮದು? ಬೇರೆ ಬಯಕೆಗಳು ಮನಸೆಳೆಯುವ ಈ ವಯಸ್ಸಿ ನಲ್ಲಿ ವಿದ್ಯೆಯ ತುಡಿತ ಇರುವುದು ನಿಜಕ್ಕೂ ಅಚ್ಚರಿಯ ಸಂಗತಿಯೇ ಸರಿ’ ಎಂದರು ಆಚಾರ್ಯರು.

‘ಗುರುಗಳೇ, ವಿದ್ಯೆೆಗೆ ವಯಸ್ಸಿನ ನಿರ್ಬಂಧವಿದೆಯೆಂದು ನನಗನಿಸುವುದಿಲ್ಲ. ಅದು ಯಾವಾಗಲೂ ಚಿರಂತನ ಸತ್ಯ. ಕಲಿಯಲು ವಯಸ್ಸು ಮುಖ್ಯವಲ್ಲ ಮನಸ್ಸು ಮುಖ್ಯ. ಕಲಿಯುವ ಮನಸ್ಸು, ಆಸಕ್ತಿ ಇದ್ದರೆ ವಯಸ್ಸು ತಾನೇ ಏನು ಮಾಡೀತು?’ ಎಂದ ತರುಣ.

‘ವಯಸ್ಸನ್ನು ಹಿಮ್ಮೆಟ್ಟಿಸುವಷ್ಟು ತೀವ್ರವಾಗಿದೆಯೇ ನಿಮ್ಮ ವಿದ್ಯಾರ್ಜನೆಯು ತೃಷೆ?’ ಕೇಳಿದರು ಆಚಾರ್ಯರು. ‘ಹೌದು ಗುರು ಗಳೇ, ಅದು ನನ್ನ ಜೀವಾಳವೂ ಆಗಿದೆ’ ಉತ್ತರಿಸಿದ ಅವನು. ‘ಹಾಗಿದ್ದಲ್ಲಿ ಇಷ್ಟು ದಿನ ಯಾವ ಪ್ರಯತ್ನವನ್ನೂ ಮಾಡದೆ ಏಕೆ ಸುಮ್ಮನಿದ್ದಿರಿ?’ ಮರುಪ್ರಶ್ನೆ ಹಾಕಿದರು ಆಚಾರ್ಯರು. ‘ನಾನು ನಿರಂತರವಾಗಿ ಪ್ರಯತ್ನಿಸುತ್ತಲೇ ಇದ್ದೆ. ಆದರೆ ನನ್ನ ಹುಟ್ಟು, ಪರಿಸರ, ಕುಲಕಸುಬು, ಹಿರಿಯರ ಅಂಧಶ್ರದ್ಧೆಗಳು ನನ್ನ ಬಯಕೆಯನ್ನು ಈಡೇರಿಸಿಕೊಳ್ಳಲು ಅಡ್ಡಿಯಾಗಿದ್ದವು. ಹಾಗೆಂದು ನಾನು ಅಧೀರನಾಗಲಿಲ್ಲ. ತಾಳ್ಮೆಯನ್ನೂ ಕಳೆದುಕೊಳ್ಳಲಿಲ್ಲ. ಸಾಧಿಸುವ ಛಲವಿದ್ದರೆ ಎಂತಹ ಸಂಕಲೆಯನ್ನೂ ಮುರಿಯ ಬಹುದೆಂಬ ನಂಬಿಕೆ ನನ್ನಲ್ಲಿ ಬಲವಾಗಿದ್ದುದರಿಂದ ಕೊನೆಗೂ ಅವುಗಳ ಬಂಧನವನ್ನು ಬಿಡಿಸಿಕೊಂಡು ಇಲ್ಲಿಗೆ ಬಂದಿದ್ದೇನೆ’ ಎಂದ ತರುಣ.

‘ನಿಮ್ಮ ವಿದ್ಯಾರ್ಜನೆಯ ಉದ್ದೇಶ ಜೀವನೋಪಾಯ, ಅಂದರೆ ಅನ್ನ ಬಟ್ಟೆಯ ಗಳಿಕೆ ಎಂದುಕೊಳ್ಳಬಹುದೇ?’ ಕೇಳಿದರು ಆಚಾ ರ್ಯರು. ಇಲ್ಲವೆಂದರೆ ಸುಳ್ಳು ಹೇಳಿದಂತಾಗುತ್ತದೆ. ಬದುಕಲು ಅನ್ನವೂ ಬೇಕು, ವಸ್ತ್ರವೂ ಬೇಕು. ಆದರೆ ಬದುಕು ಇಷ್ಟಕ್ಕೇ
ಸೀಮಿತ ಎಂದುಕೊಂಡಿದ್ದಿದ್ದರೆ, ನಾನೂ ನನ್ನ ಕುಲಕಸುಬಾಗಿರುವ ಬಳೆ ಮಾರುವ ಕೆಲಸವನ್ನೇ ಮಾಡಿಕೊಂಡಿರಬಹುದಿತ್ತು. ಆದರೆ ಅನ್ನ ವಸ್ತ್ರ ಗಳಿಕೆಯ ಆಚೆಗೂ ಬದುಕಿದೆಯಲ್ಲವೇ? ಅಂತಹ ಬದುಕನ್ನು ಕಟ್ಟಿಕೊಳ್ಳುವ ಬಯಕೆಯನ್ನು ನಾನು ಬಾಲ್ಯ ದಿಂದಲೂ ಹೊಂದಿದ್ದೇನೆ’ ಎಂದ ಅವನು.

‘ಯಾವುದು ಅಂತಹ ಬಯಕೆ?’ ಕೇಳಿದರು ಆಚಾರ್ಯರು. ‘ಕಾವ್ಯ ರಚನೆಗೆ ಅಗತ್ಯವಾದ ಭಾಷೆ, ವ್ಯಾಾಕರಣ, ಅಲಂಕಾರ
ಶಾಸ್ತ್ರಗಳ ಅಭ್ಯಾಸ ಮಾಡಿ ಕವಿಯಾಗಬೇಕೆಂಬ ಬಯಕೆ.’ ‘ಒಂದು ಮೆಟ್ಟಲನ್ನೂ ಹತ್ತದವನು ಬೆಟ್ಟವನ್ನು ಹತ್ತಲು ಪ್ರಯತ್ನಿಸು ವಂತಿದೆ ನಿಮ್ಮ ಬಯಕೆ. ಬಯಕೆಗೂ ಒಂದು ಮಿತಿ ಇರಬೇಕಲ್ಲವೇ?’ ಕೇಳಿದರು ಆಚಾರ್ಯರು.

‘ಖಂಡಿತವಾಗಿಯೂ, ಹಾಗೆಂದುಕೊಂಡು ಈ ವಿಷಯದಲ್ಲಿ ಮಿತಿಯನ್ನು ಹಾಕಿಕೊಂಡರೆ ನನ್ನ ನಂಬಿಕೆಗೆ ನಾನೇ ದ್ರೋಹ ಬಗೆ ದಂತಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಅವನದೇ ಆದ ಸಾಮರ್ಥ್ಯವಿರುತ್ತದೆ. ಇರುವ ಸಾಮರ್ಥ್ಯವನ್ನು ದುಡಿಸಿ ಕೊಳ್ಳಲು ಒಂದೋ ಅವಕಾಶ ಸಿಗಬೇಕು, ಇಲ್ಲವೇ ನಾವೇ ಸೃಷ್ಟಿಸಿಕೊಳ್ಳಬೇಕು. ಅಂತಹ ಅವಕಾಶ ಇಲ್ಲಾದರೂ ಸಿಗಬಹುದೇನೋ ಎಂಬ ನಿರೀಕ್ಷೆಯಿಂದ ಧರ್ಮ ಪಂಡಿತರೂ, ಸಾಹಿತ್ಯವಿದ್ವಾಂಸರೂ, ಸಾಹಿತ್ಯಾಭಿಮಾನಿಗಳಿಂದ ಕೂಡಿರುವ ಈ ಊರಿಗೆ ಬಂದಿದ್ದೇನೆ. ನನ್ನ ಮಹದಾಸೆಯನ್ನು ಈಡೇರಿಸಿಕೊಳ್ಳುವ ಅವಕಾಶ ಇಲ್ಲಿ ಸಿಗಬಹುದೇ ಗುರುಗಳೇ?’ ಕೇಳಿದ ಅವನು.

ಉದ್ಧಟತನವಾಗಲೀ, ಒಣ ಆಡಂಬರವಾಗಲೀ, ಪೌರುಷದ ಪ್ರದರ್ಶನವಾಗಲೀ ಇಲ್ಲದ ನೇರ, ದಿಟ್ಟ ಹಾಗೂ ಆತ್ಮವಿಶ್ವಾಸದಿಂದ ಕೂಡಿದ ಅವನ ಮಾತುಗಳಿಂದ ಸಂತಸಗೊಂಡ ಆಚಾರ್ಯರು, ಕಲಿಯಬೇಕೆಂಬ ತುಡಿತವಿರುವ ಶಿಷ್ಯನಿಗೆ ಕಲಿಯಲು ಅವಕಾಶ ಕಲ್ಪಿಸಿಕೊಡುವುದು, ಅವನ ಮನಸ್ಸಿನಲ್ಲೇನಿದೆ ಎಂಬುದನ್ನು ಅರ್ಥಮಾಡಿಕೊಂಡು ‘ಸೂಕ್ತ ಮಾರ್ಗದರ್ಶನ ನೀಡುವುದು ಗುರು ವಿನ ಆದ್ಯ ಕರ್ತವ್ಯ. ನಿಮಗೆ ಇಲ್ಲಿರಲು ಬೇಕಾದ ಅನುಕೂಲಗಳನ್ನು ಕಲ್ಪಿಸಿ ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಿ ಕೊಡುತ್ತೇನೆ.

ನಿಮ್ಮ ಇಷ್ಟಾರ್ಥ ಸಿದ್ಧಿಯಾಗಲಿ’ ಎಂದು ಹರಸಿದರು. ಹಾಗೆ ಹರಸಿದ ಆ ಆಚಾರ್ಯರೇ ಆ ಕಾಲದ ಪ್ರಸಿದ್ಧ ಗುರುಗಳಾದ ಅಜಿತ ಸೇನಾಚಾರ್ಯರು. ಅವರಿಂದ ಹರಸಲ್ಪಟ್ಟ ಆ ತರುಣನೇ ಮುಂದೆ ಕವಿ ಚಕ್ರವರ್ತಿ ಎಂಬ ಬಿರುದಿಗೆ ಪಾತ್ರನಾಗಿ ಕನ್ನಡ ಸಾಹಿತ್ಯದ ಕವಿ ರತ್ನತ್ರಯರಲ್ಲಿ ಒಬ್ಬನಾದ ಮಹಾಕವಿ ರನ್ನ.

‘ಶಿಷ್ಯರೇ, ನೀವು ನನ್ನ ಕಡೆಗೆ ಒಂದು ಹೆಜ್ಜೆ ಇಡಿ. ನಾನು ನಿಮ್ಮ ಕಡೆಗೆ ಹತ್ತು ಹೆಜ್ಜೆ ಇಡುತ್ತೇನೆ. ನಿಮಗೇನು ಬೇಕೆಂಬುದು ನನಗೆ ಗೊತ್ತು. ಕೊಡುವ ಕರ್ತವ್ಯವನ್ನು ನನಗೆ ಬಿಡಿ. ನಾನು ಕೊಟ್ಟಿದ್ದನ್ನು ಕಟ್ಟಿಕೊಂಡು ಸಮಚಿತ್ತದಿಂದ ಬಾಳಿ’ ಎಂದು ಕೊಡಬೇಕಾ ದುದನ್ನು ಕೊಡುವ ಗುರು, ಒಂದು ನಿರ್ದಿಷ್ಟ ಗುರಿ, ಆ ಗುರಿಸಾಧನೆಗೆ ಪೂರಕವಾದ ಆಸಕ್ತಿ, ನಂಬಿಕೆ, ಶ್ರದ್ಧೆ, ಆತ್ಮವಿಶ್ವಾಸ ದೊಂದಿಗೆ ತಾನು ಪಡೆಯಬೇಕಾದುದನ್ನು ಪಡೆಯಲು ಗುರುವಿನ ಬಳಿಗೆ ಹೆಜ್ಜೆಯಿಡುವ ಶಿಷ್ಯ ಎಲ್ಲ ಕಾಲಕ್ಕೂ ಸಲ್ಲುತ್ತಾರೆ.

ಉತ್ತಮ ಸಮಾಜದ ನಿರ್ಮಾಣಕ್ಕೆ, ರಾಷ್ಟ್ರದ ಪ್ರಗತಿಗೆ ಅಂತಹ ಗುರುಶಿಷ್ಯ ಪರಂಪರೆಯ ಅಗತ್ಯ ಎಲ್ಲ ಕಾಲಕ್ಕೂ ಸಲ್ಲುತ್ತದೆ.