Saturday, 14th December 2024

ಸಜ್ಜನರ ಸಾಂಗತ್ಯದಲ್ಲಿ ಹೊಸ ಜೀವನ

ಸಜ್ಜನರ ಸಂಗವು ಬದುಕಿನ ಗತಿಯನ್ನೇ ಸಕಾರಾತ್ಮಕವಾಗಿ ಬದಲಿಸಬಲ್ಲದು. ಬರಲಿರುವ ಹೊಸ ವರ್ಷದಲ್ಲಿ  ಇಂತಹ ದೊಂದು ನಡೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ, ನಮ್ಮ ಜೀವನದಲ್ಲಿ ಹೊಸ ದೀಪ ಬೆಳಗೋಣ.

ಮಹಾದೇವ ಬಸರಕೋಡ

ಮನುಷ್ಯ ಸಂಘಜೀವಿ. ಮೂಲತಃ ಅವನಿಗೆ ಒಂಟಿತನ ಅರಗಿಸಿಕೊಳ್ಳಲಾಗದ, ಇಷ್ಟವಾಗದ ಸಂಗತಿ. ಮನೆಯ ಹೊರಗೆ ಇರಲಿ, ಒಳಗೆ ಇರಲಿ, ಅವನು ಸಹವಾಸ ಬಯಸುತ್ತಾಾನೆ. ಮನೆಯಲ್ಲಿ ತಂದೆ ತಾಯಿ, ಹೆಂಡತಿ ಮಕ್ಕಳು, ಅಣ್ಣ ತಮ್ಮ, ಮಕ್ಕಳು, ಮನೆಯ ಹೊರಗೆ ಬಂಧು ಬಳಗ, ಸಮಾಜ, ಸ್ನೇಹಿತರು, ಹೀಗೆ ಒಂದಿಲ್ಲೊಂದು ಸಹವಾಸ ಅವನಿಗೆ ಅನಿವಾರ‌್ಯವೂ, ಅಗತ್ಯವೂ ಆಗಿದೆ.

ಸಹವಾಸವಿರದಿದ್ದರೆ ಅವನ ಬದುಕು ತುಂಬಾ ನೀರಸವೆನಿಸುತ್ತದೆ, ನಿರರ್ಥಕವೆನಿಸುತ್ತದೆ. ಅವನ ಸಹವಾಸದಲ್ಲಿರುವ ಪ್ರತಿ ಯೊಬ್ಬರೂ ಅವನ ದೈನಂದಿನ ಬದುಕನ್ನು ಪ್ರಭಾವಿಸಬಲ್ಲರು. ನಮ್ಮ ಬದುಕು ಸಾರ್ಥಕಗೊಳ್ಳಬೇಕಾದರೆ ನಮ್ಮ ಸ್ನೇಹಿತರು, ಸಹವಾಸ ಉತ್ತಮವಾಗಿರಬೇಕಾಗಿರುವುದು ಅತ್ಯಂತ ಅವಶ್ಯಕ. ಅಂತೆಯೇ ನಮಗೆ ಸಜ್ಜನರ ಸಾಂಗತ್ಯ, ಸಾರ್ಥಕ, ಪರಿಪೂರ್ಣ, ಹಾಗೂ ಅರ್ಥಪೂರ್ಣ ಬದುಕಿಗೆ ದಾರಿದೀಪವಾಗಬಲ್ಲದು.

ದುರ್ಜನರ ಸಂಗದಿಂದ ದೋಷದ ದಳ್ಳುರಿ ಉಂಟಾಗುತ್ತದೆ. ಅದರಿಂದ ನಾವು ತೊಂದರೆ, ಭಯ, ಹಿಂಸೆ ಅನುಭವಿಸಬೇಕಾಗು ತ್ತದೆ. ಸಜ್ಜನರದಲ್ಲದವರ ಸಾಂಗತ್ಯ, ದಾರಿಯಲ್ಲಿ ಹೊರಟ ದೆವ್ವವನ್ನು ಮನೆಗೆ ಕರೆತಂದಂತಾಗುತ್ತದೆ. ‘ಅಂತರಂಗ ಶುದ್ದ ವಿಲ್ಲದವರ ಸಂಗ ಸಂಕಟದ ನಂಜು’ ಎಂಬ ಗಾದೆ ಮಾತು ಅರ್ಥ ಪೂರ್ಣ. ಒಬ್ಬ ಅಕ್ಕಸಾಲಿಗ ತನ್ನ ಪಕ್ಕದ ಊರಿಗೆ ಹೋಗಿ ಅಲ್ಲಿ ತನ್ನ ಗ್ರಾಹಕರನ್ನು ಭೇಟಿಯಾಗಿ ಅವರಿಗೆ ಬೇಕಾದ ಚಿನ್ನದ ವಸ್ತು, ಆಭರಣಗಳ ಬೇಡಿಕೆಗಳಿಗೆ ಅನುಗುಣವಾಗಿ ತಯಾರಿಸಿ ಅವು ಗಳನ್ನು ಅವರಿಗೆ ನೀಡಿ ಹಣ ಪಡೆದು ತನ್ನ ಊರಿಗೆ ಮರಳುತ್ತಿದ್ದ.

ಕೆಲವು ಬಾರಿ ಹಳೆಯ ಚಿನ್ನದ ವಸ್ತುಗಳನ್ನು ಕೂಡಾ ತಗೆದುಕೊಂಡು ಹೋಗಿ ಅವರ ಅವಶ್ಯಕತೆಯಂತೆ ಹೊಸ ಮಾದರಿ ಒಡವೆ ತಯಾರಿಸಿಕೊಡುತ್ತಿದ್ದ. ಅವನು ಮರಳುವ ದಾರಿಯಲ್ಲಿ ತುಂಬಾ ಕಾಡು. ಕಳ್ಳರು, ದರೋಡೆಕೋರ ಭಯವಿದ್ದ ಕಾರಣ ಅವನು  ತನ್ನ ಊರಿಗೆ ಸಂಜೆಯಾಗುತ್ತಿದ್ದಂತೆ ಮರಳಿಬಿಡುತ್ತಿದ. ಅದು ಅವನ ದಿನನಿತ್ಯದ ವಾಡಿಕೆ ಕೂಡ ಆಗಿತ್ತು. ಒಂದು ಬಾರಿ ಹೀಗೆ
ಅವನು ತನ್ನ ಊರಿಗೆ ಮರಳುವಾಗ ಹೊತ್ತು ಮುಳುಗುತ್ತಿತ್ತು.

ಅವನು ಒಂದು ಕ್ಷಣ ಯೋಚಿಸಿ ಇಂದು ಕತ್ತಲಾಗುತ್ತಿದೆ, ಇಂತಹ ಸಮಯದಲ್ಲಿ ಹೋಗುವುದು ಅಪಾಯಕಾರಿ, ಇಂದು ಇಲ್ಲಿಯೇ ತಂಗಿ ನಾಳೆ ಪ್ರಯಾಣಿಸುವುದೇ ಸೂಕ್ತ ಎಂದು ಯೋಚಿಸಿ ಮರಳಿ ಹೋಗಲು ಅಣಿಯಾಗುತ್ತಿದ್ದಂತೆ, ಅದೇ ದಾರಿಯಲ್ಲಿ ಸಾಗು ತ್ತಿರುವ ವ್ಯಕ್ತಿಯೊಬ್ಬ ಅಕ್ಕಸಾಲಿಗನನ್ನು ಕುರಿತು, ‘ನಾನು ಅದೇ ಊರಿಗೆ ಹೋಗಬೇಕಿದೆ, ಇಬ್ಬರೂ ಜೊತೆಯಾಗಿ ಹೋಗಬಹುದು, ಅಲ್ಲವೇ?’ ಎಂದು ಕೇಳಿದಾಗ, ‘ಇಲ್ಲ ಈಗಲೇ ಕತ್ತಲಾಗುತ್ತಿದೆ, ದಾರಿಯಲ್ಲಿ ಕಳ್ಳರು, ದರೋಡೆಕೋರ ಹಾವಳಿ ಇರುವುದು ನಿನಗೂ
ಗೊತ್ತು.

ನನ್ನ ಹತ್ತಿರ ಚಿನ್ನ, ಹಣ ತುಂಬಾನೇ ಇದೆ, ನಾನು ನಾಳೆ ಬರುತ್ತೇನೆ’ ಎಂದು ಹಿಂದೆ ಹೆಜ್ಜೆ ಹಾಕಿದ. ಆಗ ಆ ವ್ಯಕ್ತಿ ‘ನಾನು ಅದೇ ಊರಿಗೆ ಹೋಗಬೇಕು, ಭಯ ಯಾಕೆ? ಇಬ್ಬರೂ ಜೊತೆಯಾಗಿ ಹೋದರಾಯಿತು’ ಎಂದು ಒತ್ತಾಯಿಸಿ ಕರೆದುಕೊಂಡು ಹೊರಟ.
ಕಾಡಿನ ಮಧ್ಯೆ ಹೋಗುತ್ತಿರುವಾಗ ಕುದುರೆಯ ಹೆಜ್ಜೆಯ ಸದ್ದು ಕೇಳಿಸತೊಡಗಿತು. ಅಕ್ಕಸಾಲಿಗನಿಗೆ ದರೋಡೆಕೋರರು
ಬರುತ್ತಿರುವ ಸಂಗತಿ ಗೊತ್ತಾಗಿ ಪಕ್ಕದಲ್ಲಿದ್ದ ಮರವೇರಿ ಕುಳಿತ.

ಅವನ ಜೊತೆಯಲಿದ್ದ ವ್ಯಕ್ತಿಗೂ ಮರವೇರಲು ತಿಳಿಸಿದ. ಆದರೆ ಅವನು ಕುಡಿತದ ಅಮಲಿನಲ್ಲಿದ್ದರಿಂದ ಮರವೇರಲು ಸಾಧ್ಯವಾಗದೆ ಅಲ್ಲಿಯೇ ಕುಸಿದು ಕೆಳಗೆ ಕುಳಿತುಬಿಟ್ಟ.ದರೋಡೆಕೋರರು ಅಲ್ಲಿಗೆ ಬಂದರು. ಇವನು ಅವರ ಕೈಯಲ್ಲಿ ಸಿಲುಕಿದ. ದರೋಡೆಕೋರರು ಅವನನ್ನು ಹಿಡಿದು ‘ನಿನ್ನ ಹತ್ತಿರವಿರುವ ಎಲ್ಲ ಹಣ, ಒಡವೆ ಕೊಡು’ ಎಂದು ಹೇಳಿದರು. ಅವನು ‘ತನ್ನ ಹತ್ತಿರ ಇದೊಂದೇ ಬೆಳ್ಳಿ ನಾಣ್ಯ. ಅದನ್ನು ತೆಗೆದುಕೊಂಡು ಬಿಟ್ಟುಬಿಡಿ’ ಎಂದು ಬೇಡಿಕೊಂಡ. ‘ಸುಳ್ಳು ಹೇಳುತ್ತಿರುವೆಯಾ, ಯಾವುದೋ ನಾಣ್ಯಕೊಟ್ಟು ಬೆಳ್ಳಿ ನಾಣ್ಯ ಎನ್ನುತ್ತಿರುವೆಯಾ ಅಲ್ಲವೇ? ನಿಜ ಹೇಳದಿದ್ದರೆ ನಿನಗೆ ಸಾವು ಖಂಡಿತ’ ಎಂದು ಥಳಿಸ ತೊಡಗಿದರು.

‘ನಾನು ಸುಳ್ಳು ಹೇಳುತ್ತಿಲ್ಲ, ನನ್ನನ್ನು ಬಿಟ್ಟು ಬಿಡಿ. ಬೇಕಾದರೆ ಮರದ ಮೇಲೆ ಅಕ್ಕಸಾಲಿಗ ಇದ್ದಾನೆ. ಅವನನ್ನೇ ಕೇಳಿ’ ಎಂದಾಗ, ಮರದ ಮೇಲಿದ್ದ ಅಕ್ಕಸಾಲಿಗನನ್ನು ಕೆಳಗೆ ಇಳಿಸಿ ಅವನಿಗೂ ಥಳಿಸಿ ಎಲ್ಲವನ್ನೂ ದೋಚಿಕೊಂಡು ಹೋದರು. ಮೂರ್ಖ ವ್ಯಕ್ತಿಯ ಸಹವಾಸದಿಂದ ಅಕ್ಕಸಾಲಿಗ ತೊಂದರೆ ಅನುಭವಿಸಿದ. ಎಲ್ಲವನ್ನೂ ಕಳೆದುಕೊಂಡು ಪಶ್ಚಾತಾಪ ಪಡುವಂತಾಯಿತು. ದುರ್ಜನರ ಸಂಗ ನಮಗೆ ಹೀಗೆ ಖಂಡಿತವಾಗಿ ದುರಂತ, ಅಪಾಯವನ್ನು ತರುವುದು ನಿಶ್ಚಿತ.

ಹಾಗಾಗಿ ದುರ್ಜನರ ಸಂಗದಿಂದ ದೂರವಿದ್ದು ಸಜ್ಜನರ ಸಾಂಗತ್ಯದಲ್ಲಿ ಇರುವುದು ಅವಶ್ಯಕ. ಸತ್ಯವಂತರ, ಸದಾಚಾರಿಗಳ, ಸ್ನೇಹ ಸಂಪಾದಿಸಬೇಕು, ಅಕ್ಕಮಹಾದೇವಿ ಹೇಳುವಂತೆ, ಅಯ್ಯಾ, ನಿಮ್ಮ ಅನುಭಾವಿಗಳ ಸಂಗದಿಂದ ಎನ್ನ ಮನ ಶುದ್ಧವಾ ಯಿತು, ಅಯ್ಯಾ, ನಿಮ್ಮ ಅನುಭಾವಿಗಳ ಸಂಗದಿಂದ ಎನ್ನ ತನು ಶುದ್ಧವಾಯಿತು, ಅಯ್ಯಾ, ನಿಮ್ಮ ಅನುಭಾವಿಗಳ ಸಂಗದಿಂದ ಎನ್ನ ಪ್ರಾಣ ಶುದ್ಧವಾಯಿತು ಅಯ್ಯಾ, ನಿಮ್ಮ ಅನುಭಾವಿಗಳು ಎನ್ನ ಒರೆದೊರೆದು ಆಗು ಮಾಡಿದ ಕಾರಣ ಚೆನ್ನಮಲ್ಲಿ ಕಾರ್ಜುನಯ್ಯಾ ನಿಮಗಾನು ತೊಗಡಿಯಾದೆನು..

ಎಸಜ್ಜನರ ಸಹವಾಸ ನಡೆ ನುಡಿಗಳಲ್ಲಿ ಸಾಮರಸ್ಯ ಮೂಡಬಲ್ಲದು, ಬದುಕು ಸಂಸ್ಕಾಾರಗೊಳ್ಳಬಲ್ಲದು, ಅಜ್ಞಾನದ ತಮಂಧ ಘನವ ಕಳೆದು ಸಂಭ್ರಮದ ಹೊಸ ದೀಪ ಬೆಳಗಬಲ್ಲದು. ಸಜ್ಜನರ ಸಾಂಗತ್ಯದಲ್ಲಿ ಸಂಗಮಿಸಿದಾಗ ಮಾತ್ರ ನಾವು ಬದುಕಿನಲ್ಲಿ ಹೊಸತನದ ಸಂಭ್ರಮ ಕಾಣಬಹುದು.