ಮಹಾದೇವ ಬಸರಕೋಡ
ಜೀವನದಲ್ಲಿ ಯಶಸ್ಸು ಗಳಿಸಲು ದೈವಕೃಪೆ ಬೇಕು ಎಂಬುದು ಸಾಮಾನ್ಯ ತಿಳಿವಳಿಕೆ. ಹಾಗೆಂದು, ಅದಕ್ಕಾಗಿ ಕಾಯುತ್ತಾ ಸಮಯ ವ್ಯರ್ಥ ಮಾಡುವುದಲ್ಲ. ಸೂಕ್ತ ಅವಕಾಶ ದೊರೆತಾಗ ಅದನ್ನು ಅನುಸರಿಸಿ ಯಶಸ್ಸಿನ ದಾರಿ ಯನ್ನು ಹುಡುಕುವುದು ನಮ್ಮ ಕರ್ತವ್ಯ ಎನಿಸುತ್ತದೆ.
ಯಶಸ್ವಿ ಹಾಗೂ ಅರ್ಥಪೂರ್ಣ ಜೀವನಕ್ಕೆ ನಮ್ಮ ವರ್ತನೆ ಹಾಗೂ ಯೋಚನೆಗಳು ನೇರವಾಗಿ ಕಾರಣವಾಗುತ್ತವೆ. ನಮ್ಮ ಯೋಚನೆ ಹಾಗೂ ವರ್ತನೆಗಳು ನಮಗೆ ಪ್ರಕೃತಿ ಕೊಡಮಾಡಿದ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವ ದಿಸೆಯಲ್ಲಿ ಪ್ರವಹಿಸುತ್ತಿರಬೇಕು. ಪ್ರತಿಯೊಂದು ಕ್ಷಣವನ್ನು ಅತ್ಯಂತ ಸೂಕ್ಷವಾಗಿ ಅವಲೋಕಿಸಬೇಕು.
ದೊರೆತ ಅವಕಾಶಗಳು ನಮ್ಮ ಅಜಾಗರೂಗತೆಯಿಂದ ಕೈ ತಪ್ಪಿ ಹೋದರೆ ಅಂತಹ ಕ್ಷಣ ಮತ್ತೆಂದೂ ಬಾರದೇ ಹೋಗಬಹುದು. ಹಾಗಾಗಿ ಪ್ರತಿಯೊಬ್ಬರೂ ತಮಗೆ ಬಂದ ಅವಕಾಶಗಳನ್ನು ಬಿಗಿಯಾಗಿ ಅಪ್ಪಿಕೊಂಡು ಸದುಪಯೋಗ ಮಾಡಿಕೊಂಡರೆ ಬದುಕು
ಸುಂದರ ಮತ್ತು ಸಮೃದ್ದಗೊಳ್ಳಬಲ್ಲದು. ಅವುಗಳನ್ನು ಗುರುತಿಸುವಲ್ಲಿ ನಾವು ವಿಫಲವಾದರೆ ಬದುಕು ಬರಡಾಗಬಹುದು.
ಒಂದು ಬಾರಿ ಭಗವಾನ್ ಬುದ್ಧ ಪ್ರಯಾಣದಲ್ಲಿದ್ದಾಗ ಸಮುದ್ರದ ತಟದಲ್ಲಿ ತನ್ನ ಶಿಷ್ಯರೊಂದಿಗೆ ಸಾಗುತ್ತಲಿದ್ದ.
ಹೊತ್ತು ಮುಳುಗಿ ಸಂಜೆಯಾಯಿತು. ಸಮುದ್ರದ ತಟಕ್ಕೆ ಸ್ವಲ್ಪ ದೂರದಲ್ಲಿ ಒಂದು ಚಿಕ್ಕ ಗುಡಿಸಲು ಕಾಣಿಸಿತು. ಅಲ್ಲಿಯೇ ತಂಗಿ
ಬೆಳ್ಳಿಗ್ಗೆ ತಮ್ಮ ಪ್ರಯಾಣ ಮುಂದುವರೆಸಿದರಾಯಿತು ಎಂದು ನಿರ್ಧರಿಸಿ ಮನೆಯ ಹತ್ತಿರ ಹೋಗಿ ಬಾಗಿಲು ತಟ್ಟಿದರು. ಅದು
ಬೆಸ್ತರ ಮನೆಯಾಗಿತ್ತು. ಬಾಗಿಲವರೆಗೂ ಬಂದಿದ್ದ ಭಗವಾನ್ ಬುದ್ಧನನ್ನು ಮನೆಯವರು ಅತ್ಯಂತ ಸಡಗರ, ಸಂಭ್ರಮದಿಂದ
ಸ್ವಾಗತಿಸಿ ಆದರಾತಿಥ್ಯ ನೀಡಿದರು. ರಾತ್ರಿ ಅಲ್ಲಿಯೇ ತಂಗಿ ಬೆಳಿಗ್ಗೆ ಹೊರಡಲು ಬುದ್ಧ ಮತ್ತು ಅವನ ಶಿಷ್ಯರೆಲ್ಲ ಸಿದ್ಧರಾದರು.
ಆಗ ಬುದ್ಧ ಮನೆಯರನ್ನು ಕುರಿತು ‘ನಿಮ್ಮ ಆದರಾತಿಥ್ಯದಿಂದ ತುಂಬಾ ಸಂತಸವಾಗಿದೆ. ತಮಗೆ ಬೇಕಾದದ್ದನ್ನು ಕೇಳಿ’ ಎಂದ. ಅವರು ತುಂಬಾ ಸಂಕೋಚದಿಂದಲೇ ‘ಪೂಜ್ಯರೆ, ನಾವು ತುಂಬಾ ಬಡವರು. ಒಂದು ಹೊತ್ತು ಊಟ ಮಾಡಿದರೆ ಇನ್ನೊಂದು ಹೊತ್ತು ಉಪವಾಸವೇ ಗತಿ. ನಮ್ಮ ಬಡತನ ನೀಗಿಸಿ’ ಎಂದು ಅಂಗಲಾಚಿ ಬೇಡಿಕೊಂಡರು. ‘ಸರಿ, ನಿಮ್ಮಲ್ಲಿ ಯಾರಾದರೂ ಒಬ್ಬರು ನಾಳೆ ಬೆಳಿಗ್ಗೆ ಸಮುದ್ರಕ್ಕೆ ಹೋಗಿ. ಅಲ್ಲಿ ನಿಮಗಾಗಿ ಒಂದು ಪರುಷಮಣಿ ಹೊಂದಿರುವ ಚಿಪ್ಪು ದೊರಕುತ್ತದೆ. ಅದನ್ನು ಶ್ರದ್ಧೆಯಿಂದ ತೆಗೆದುಕೊಂಡು ಬನ್ನಿ.
ಅದನ್ನು ನೀವು ಯಾವುದೇ ವಸ್ತುವಿಗೆ ತಾಗಿಸಿದರೂ ಅದು ಚಿನ್ನವಾಗಿ ಪರಿವರ್ತನೆಯಾಗುತ್ತದೆ. ಅದರಿಂದ ನಿಮ್ಮ ಬಡತನ
ನಿವಾರಣೆಯಾಗಬಲ್ಲದು’ ಎಂದು ಹೇಳಿ ಬುದ್ಧ ಮತ್ತು ಶಿಷ್ಯರು ತಮ್ಮ ಗಮ್ಯದತ್ತ ಹೊರಟರು. ಮರುದಿನವೇ ಬೆಸ್ತರವನೊಬ್ಬ
ಬೆಳ್ಳಿಗ್ಗೆ ಕೈಯಲ್ಲೊಂದು ಕಬ್ಬಿಣದ ಚೂರನ್ನು ಹಿಡಿದು ಸಮುದ್ರದ ತಟಕ್ಕೆ ಹೋದ. ಒಂದೊಂದೇ ಚಿಪ್ಪು ಆರಿಸುತ್ತ ಅದನ್ನು ಕಬ್ಬಿಣಕ್ಕೆ ಸೋಕಿಸಿ ಅದು ಬಂಗಾರವಾಯಿತೇ? ಅದು ಪರುಷಮಣಿಯೇ? ಎಂದು ಪರೀಕ್ಷಿಸಲು ಪ್ರಾರಂಭಿಸಿದ.
ಒಂದು ಚಿಪ್ಪನ್ನು ತೆಗೆದುಕೊಂಡು ಅದನ್ನು ಕಬ್ಬಿಣಕ್ಕೆ ಸೋಕಿಸಿ ಅದು ಬಂಗಾರವಾಗಿ ಪರಿವರ್ತನೆಯಾಯಿತೆ? ಎಂದು ನೋಡಿ,
ಅದು ಆಗದಿದ್ದಾಗ ಆ ಚಿಪ್ಪನ್ನು ಸಮುದ್ರಕ್ಕೆ ಎಸೆಯತೊಡಗಿದ. ಹೀಗೆಯೇ ಬಹಳ ಹೊತ್ತಿನವರೆಗೂ ಕ್ರಿಯೆ ನಡೆಯುತ್ತಲೇ
ಹೋಯಿತು. ಕಬ್ಬಿಣ ಬಂಗಾರವಾಗಲಿಲ್ಲ. ಕ್ರಮೇಣ ಅದು ಅವನ ಕ್ರಿಯೆ ಯಾಂತ್ರಿಕವಾಗುತ್ತ ಹೋಯಿತು. ಸುಮ್ಮನೆ ಚಿಪ್ಪು
ತೆಗೆದುಕೊಳ್ಳುವುದು, ಕಬ್ಬಿಣಕ್ಕೆ ಸೋಕಿಸುವುದು ಸಮುದ್ರಕ್ಕೆ ಎಸೆಯುವುದನ್ನು ಮಾಡತೊಡಗಿದ.
ಚಿಪ್ಪು ಮತ್ತು ಕಬ್ಬಿಣದ ಕಡೆಗೆ ಗಮನವೇ ಇರಲಿಲ್ಲ. ಕೆಲವು ಹೊತ್ತಿನ ನಂತರ ಕಬ್ಬಿಣ ನೋಡಿದಾಗ ಅದು ಯಾವಾಗಲೋ ಬಂಗಾರವಾಗಿತ್ತು. ಅವನಿಗೆ ಅರಿವಿಲ್ಲದಂತೆ ಪರುಷಮಣಿಯ ಚಿಪ್ಪು ಸಮುದ್ರ ಸೇರಿಯಾಗಿತ್ತು. ಬದುಕಿನ ಬವಣೆ ನೀಗಿಸಬಲ್ಲ ಅಪೂರ್ವ ಅವಕಾಶವನ್ನು ಅವನು ಉಪಯೋಗಿಸಿಕೊಳ್ಳುವಲ್ಲಿ ವಿಫಲನಾಗಿದ್ದ. ತನ್ನದೇ ಅಜಾಗರೂಕತೆಯಿಂದ ಅದು ತಪ್ಪಿ ಸಮುದ್ರದಾಳಕ್ಕೆ ಸೇರಿಯಾಗಿತ್ತು.
ಬದುಕಿನ ಯಶಸ್ಸಿಗೆ ನಮಗೆ ಒದಗಿ ಬಂದ ಸದಾವಕಾಶಗಳನ್ನೆಲ್ಲ ಜಾಗರೂಕತೆಯಿಂದ ಬಳಸಿಕೊಳ್ಳುವುದು ಅತಿ ಅಗತ್ಯವಾಗಿದೆ. ಪ್ರತಿಯೊಂದು ಕ್ಷಣವೂ ನಮಗೆ ಅತಿ ಅಮೂಲ್ಯವೇ ಆಗಿರುತ್ತದೆ. ಯಾವ ಕ್ಷಣ ಯಾವ ಸೌಭಾಗ್ಯವನ್ನು ಹೊತ್ತು ತರಬಲ್ಲದು ಎನ್ನುವ ಅಂಶ ನಿಗೂಢ. ಇದರಿಂದಾಗಿ ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡಂತೆ ಎಂಬ ಗಾದೆಯಂತೆ ನಾವು ನಮ್ಮನ್ನು ಅರಸಿಕೊಂಡ ಬಂದ ಅವಕಾಶಗಳನ್ನು ಗುರುತಿಸಲು ಅಸಮರ್ಥರಾದರೆ, ಅವುಗಳನ್ನು ಬಿಗಿಯಾಗಿ ಅಪ್ಪಿಕೊಳ್ಳದಿದ್ದರೆ
ಅವು ನಮ್ಮಿಂದ ಖಂಡಿತ ಜಾರಿ ಹೋಗುತ್ತವೆ.
ದೈವದ ಕೃಪೆ ಇದ್ದರೆ ಮಾತ್ರ ನಾವು ಜೀವನದಲ್ಲಿ ಯಶಸ್ಸು ಪಡೆಯಬಹುದು ಎಂಬ ಕುರುಡು ನಂಬಿಕೆ ನಮ್ಮ ಮನಸಿನ ಬಲಹೀನತೆ ಮಾತ್ರ ಆಗಿದೆ. ಅವಕಾಶಗಳನ್ನು ಯುಕ್ತವಾಗಿ ವಿವೇಚನೆಯಿಂದ ಬಳಸಿಕೊಂಡು ಅವುಗಳನ್ನು ನಮ್ಮ ಯಶಸ್ವಿ ಬದುಕಿನ ಮೆಟ್ಟಿಲುಗಳನ್ನಾಗಿ ಬಳಸಿಕೊಳ್ಳವುದು ಜಾಣತನವಾಗಿದೆ. ನಮ್ಮ ಎಲ್ಲ ಶಕ್ತಿಗಳನ್ನು ಅದರತ್ತ ಕೇಂದ್ರೀಕರಿಸಿ ಅದರ ಕಾರ್ಯಸಿದ್ಧಿಗಾಗಿ ಶ್ರಮಿಸಬೇಕು. ಇಂತಹ ನಿರಂತರ ಪ್ರಯತ್ನಗಳು ಮಾತ್ರ ನಮ್ಮ ಬದುಕನ್ನು ಸುಂದರ ಮತ್ತು ಸಮೃದ್ದವಾಗಿಸ ಬಲ್ಲವು. ಬದುಕನ್ನು ಯಶಸ್ಸಿನ ದಡ ಸೇರಿಸಬಲ್ಲವು.