ಡಾ.ಮೋಹನ್ ರಾಘವನ್
ಅಂತಾರಾಷ್ಟ್ರೀಯ ಯೋಗದಿನವನ್ನಾಗಿ ಆರಿಸಿಕೊಂಡಿರುವ ಜೂನ್ 21, ಉತ್ತರಾರ್ಧ ಗೋಳದಲ್ಲಿ ಕತ್ತಲೆಗಿಂತ ಹಗಲಿನ ಪ್ರಮಾಣ ಅಧಿಕವಾಗಿರುವ ದಿನ.
ಕಟಕ ವಲಯದ ಮೇಲೆ ನೇರವಾಗಿ ಸೂರ್ಯನು ಬೆಳಗುವ ದಿನ. ಪ್ರಸಿದ್ಧವೂ ಪ್ರಚಲಿತವೂ ಆದ ಸೂರ್ಯನಮಸ್ಕಾರದಲ್ಲೂ ಸೂರ್ಯನ ಹೆಸರು ಅಂಕಿತವಾಗಿದೆ. ಪ್ರಸಿದ್ಧ ಗಾಯತ್ರೀಮಂತ್ರವೂ ಸವಿತೃದೇವನನ್ನು ಸ್ತುತಿಸುತ್ತದೆ. ನಾವು ಮಾಡುವ ಆಸನ-ಪ್ರಾಣಾಯಾಮಗಳಿಗೂ ಸೂರ್ಯನಿಗೂ ಏನು ಸಂಬಂಧ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಯೋಗದ ವಾಸ್ತವಿಕಾರ್ಥವನ್ನು ಗಮನಿಸಿದರೆ ಮಾತ್ರ ಈ ಪ್ರಶ್ನೆಯು ಬಗೆಹರಿಯುವುದು. ಯೋಗವೆಂದರೆ ಸೇರುವುದು, ಒಂದು ಗೂಡುವುದು. ಅಕಸ್ಮಾತ್ತಾಗಿ ರಸ್ತೆಯಲ್ಲಿ ಬಹಳ ದಿನಗಳ ನಂತರ ಪರಿಚಿತರು ಸಿಕ್ಕಿದರೆ ‘ಏನು ಸುಯೋಗ !’ ಎಂದು ಹೇಳುವು ದುಂಟು. ಹಾಗಾದರೆ ಯೋಗ-ಶಾಸ್ತ್ರ, ಯೋಗ-ದಿನ ಎಂದಾಗ ಇಲ್ಲಿ ಯಾವುದರ ಸೇರ್ಪಡೆಯನ್ನು ಹೇಳುತ್ತಿದೆ? ಇಲ್ಲಿ ಜೀವಾತ್ಮ- ಪರಮಾತ್ಮರ ಸೇರುವಿಕೆಯನ್ನು ಹೇಳುತ್ತದೆ! ನಮ್ಮನ್ನು ಪರಿಪೂರ್ಣವಾಗಿ ಭಗವಂತನಲ್ಲಿ ಒಂದಾಗಿಸಿಬಿಡುವುದನ್ನು ಹೇಳುತ್ತದೆ. ಮೈಮನಗಳನ್ನು ಮರೆತ ಆ ಪರಮಾತ್ಮಾನುಭವದ ಸ್ಥಿತಿಯನ್ನು ಹೇಳುತ್ತದೆ.
ಇದನ್ನು ಸಮಾಧಿ, ಸಹಜಾವಸ್ಥಾ ಎಂದು ಅನೇಕ ಹೆಸರುಗಳಿಂದ ಕರೆಯುವುದುಂಟು. ಆ ಸ್ಥಿತಿವಿಶೇಷಕ್ಕೆ ಅನೇಕ ಸ್ತರ ಗಳುಂಟು. ಶಂಕರಾಚಾರ್ಯರು ತಮ್ಮ ಯೋಗತಾರಾವಳಿಯಲ್ಲಿ ಪರಮಾತ್ಮನನ್ನು ಪ್ರಕಾ ಶಮಾನವಾದ ಸೂರ್ಯನಿಗೆ ಹೊಲಿಸುತ್ತಾರೆ. ಶ್ರೀರಂಗಮಹಾಗುರುಗಳು ಯೋಗದ ತುತ್ತತುದಿಯ ಅನುಭವವನ್ನು ವಿವರಿಸುತ್ತಾ, ‘ಕೋಟಿ ಕೋಟಿ ಸೂರ್ಯನೆಂದೂ ಹೇಳಬಹುದು; ಆದರೂ ಬೆಳದಿಂಗಳಂತೆ ತಂಪಾಗಿದ್ದಾನೆ’ ಎಂದು ಹೇಳಿದ್ದಾರೆ.
ನಮ್ಮೊಳಗೆ ಕಾಣುವ ಈ ಸೂರ್ಯನಾರಾಯಣನ ಹತ್ತಿರಕ್ಕೆ ಕರೆದೊಯ್ಯುವ ಮಾರ್ಗಗಳನೇಕ. ಧ್ಯಾನ ಮಾಡುವುದು, ಯಜ್ಞ-ಹೋಮ-ಹವನಗಳನ್ನು ಆಚರಿಸುವುದು, ಭಾಗವತ, ರಾಮಾಯಣ ಮುಂತಾದವುಗಳ ಪಾರಾಯಣ, ಗಾಯತ್ರೀ ಮುಂತಾದ ಮಂತ್ರಗಳ ಜಪ, ಸ್ತೋತ್ರಗಳನ್ನು ಹೇಳುವುದು, ದಿನನಿತ್ಯ ಮಾಡುವ ಪೂಜೆ ಇವೆಲ್ಲವೂ ಆ ಸಮಾಧಿಸ್ಥಿತಿಯ ಆನಂದವನ್ನು ಪಡೆಯಲು ಮಾರ್ಗಗಳು. ನಾವು ಯೋಗವೆಂದು ಗುರುತಿಸುವ ಆಸನ, ಪ್ರಾಣಾಯಾಮಗಳೇ ಮುಂತಾದ ಉಪಾಯಗಳೂ
ಅಂತಹ ಯೋಗಮಾರ್ಗಗಳ ಪೈಕಿ ಒಂದು.
ಆಸನ-ಪ್ರಾಣಾಯಾಮಗಳಿಂದ ದೊರಕುವ ಆರೋಗ್ಯಲಾಭಗಳು ಅಪಾರ. ಆದರೆ ಪತಂಜಲಿ ಮಹರ್ಷಿಗಳಿಂದ ಪ್ರಣೀತವಾಗಿ
ಪ್ರಸಿದ್ಧವಾಗಿರುವ ಅಷ್ಟಾಂಗಯೋಗದ ಪರಮ ಫಲವೆಂದರೆ ಸಮಾಧಿಯ ಆನಂದಾನು ಭವ. ಯಮ-ನಿಯಮ-ಆಸನ-ಪ್ರಾಣಾಯಾಮ-ಪ್ರತ್ಯಾಹಾರ-ಧಾರಣ-ಧ್ಯಾನ-ಸಮಾಧಿ ಎಂಬೀ ಎಂಟು ಅಂಗಗಳು ಸೇರಿ ಅಷ್ಟಾಂಗಯೋಗವೆಂದು ಕರೆಸಿ ಕೊಳ್ಳುತ್ತವೆ.
ಈ ಆಸನಗಳು ಹೇಗೆ ನಮ್ಮನ್ನು ಸಮಾಧಿಯ ಅನುಭವದತ್ತ ಕರೆದೊಯ್ಯಬಲ್ಲವು ? ಮನಸ್ಸಿನ ಸ್ಥಿತಿಯು ಅಂಗಾಂಗಗಳ ಮೇಲೆ ಒಂದು ಮುದ್ರೆಯನ್ನು ಒತ್ತಿದೆ. ಅಂತೆಯೇ ಅಂಗವಿನ್ಯಾಸವೂ ಮನಸ್ಸಿನ ಸ್ಥಿತಿಯನ್ನು ಪರಿಣಮಿಸುವುದೂಂಟು; ತೂಕಡಿಸು ತ್ತಿರುವ ವಿದ್ಯಾರ್ಥಿಯನ್ನು ಏಯ್ ಬೆನ್ನು ನೆಟ್ಟಿಗೆ ಮಾಡಿ ಕುಳಿತುಕೋ ! ಎಂದು ಗದುರಿಸುವುದುಂಟು. ಅಂತೆಯೇ ಭಾರವನ್ನು ಎತ್ತುವಾಗ, ಒಂದು ಕ್ಷಣ ನಿಶ್ಚಲವಾಗಿ, ದಮ್ಕಟ್ಟಿ ಐಸ್ಸಾ ಎಂದು ಎತ್ತಿಬಿಡುತ್ತೇವೆ.
ಹೀಗೇ ನಮ್ಮ ನಿತ್ಯಜೀವನವನ್ನು ಆಲಿಸಿದರೆ, ಅಂಗವಿನ್ಯಾಸಕ್ಕೂ ಮನಸ್ಸಿನ ಸ್ಥಿತಿಗೂ ಇರುವ ಸಂಬಂಧಗಳು ಸ್ಪಷ್ಟವಾಗುತ್ತೆ. ನಮ್ಮ ಮಹರ್ಷಿಗಳು, ಚಿತ್ತದ ವೃತ್ತಿಗಳನ್ನು ನಿಲ್ಲಿಸಿ, ನಿಸ್ತರಂಗಮಹೋದಽಯ ಸಮಾಧಿ ಸಾಮ್ರಾಜ್ಯಕ್ಕೆ ಹತ್ತಲು ಸಹಕಾರಿ ಯಾಗಿರುವ ಆಸನಗಳ ವಿನ್ಯಾಸವನ್ನೂ, ಪ್ರಾಣಾಯಾಮವನ್ನೂ ಕುಶಲತೆಯಿಂದ ಕಲ್ಪಿಸಿರುತ್ತಾರೆ. ಹೊರ ಸೂರ್ಯನು, ಅತ್ಯಂತ ಎತ್ತರವಾಗಿ ಬೆಳಗುವಂತೆ ನಾವು ಒಳಗಿನ ಜ್ಞಾನಸೂರ್ಯನನ್ನು ಬೆಳಗಿಸಿಕೊಳ್ಳುವುದಕ್ಕಾಗಿ ಗುರುವಿನ ನೆರವಿನಲ್ಲಿ
ಅಷ್ಟಾಂಗಯೋಗದಿಂದ ಪ್ರಾರಂಭಿಸೋಣ !
ಜೂನ್ 21ರಂದು ಯೋಗಾಭ್ಯಾಸ ಮಾಡೋಣ, ಗೊತ್ತಿಲ್ಲದವರು ಕಲಿಯಲು ಆರಂಭಿಸೋಣ.