Saturday, 14th December 2024

ಸಂಶೋಧನೆಯ ಒಳಸುಳಿಗಳು

ವಸುಂಧರಾ ದೇಸಾಯಿ

ಇತಿಹಾಸವನ್ನರಿಯುವಲ್ಲಿ ಶಿಲಾ ಶಾಸನಗಳ ಪಾತ್ರ ಬಹು ಮಹತ್ವದ್ದು. ನಾಶವಾಗದ ಶಿಲೆಯ ಮೇಲೆ, ಅಕ್ಷರ, ನಾಶ ವಾಗದ ಬರಹ ನಿಖರವಾದ ಮಾಹಿತಿಯನ್ನೇ ನೀಡುತ್ತೆಯಾದ್ದರಿಂದ ಅವು ಶಿಲೆಗಳಲ್ಲಡಗಿದ ಸತ್ಯ ಎಂದೇ ಪರಿಗಣಿಸ ಲ್ಪಟ್ಟಿವೆ. ಆದರೆ ಒಮ್ಮೊಮ್ಮೆ ಈ ಶಿಲಾಶಾಸನಗಳು ತಪ್ಪು ದಾರಿಗೂ ಎಳೆಯುತ್ತವೆ ಎಂದು ಹೇಳಿದರೆ ತಮಗೆ ಅಚ್ಚರಿಯಾಗಬಹುದು. ಹೌದು! ವಿಶ್ವಮಟ್ಟದ ಸ್ಮಾರಕ ಎನಿಸಿರುವ ಹಂಪೆಯ ‘ಬಿಷ್ಟಪ್ಪಯ್ಯ ಗೋಪುರ’ ನಿರ್ಮಾಣದ ವಿಷಯದಲ್ಲಿ ಇತಿಹಾಸವನ್ನು ತಪ್ಪು ದಾರಿಗೆ ಎಳೆಯುತ್ತ, ಗೋಪುರದ ಪಕ್ಕದಲ್ಲೇ ನಿಂತಿರುವ ನಿಂತಿರುವ ಒಂದು ಶಿಲಾಶಾಸನದ ಕಥೆಯನ್ನು ತುಸು-ವ್ಯಥೆಯಿಂದಲೇ ಹೇಳಲೇಬೇಕಾಗಿ ಬಂದಿದೆ. ಹನ್ನೊಂದು ಅಂತಸ್ತಿನ ಆ ಗೋಪುರ ವನ್ನು ನಿರ್ಮಿಸಿದವರು ಯಾರು ಎಂಬ ಜಿಜ್ಞಾಸೆಗೆ, ಪಕ್ಕದಲ್ಲೇ ನಿಂತಿರುವ ಈ ಶಿಲಾಶಾಸನದ ವ್ಯಾಖ್ಯೆಯನ್ನು ಓದಿ, ಅದರಲ್ಲಿರುವ ಬರಹವನ್ನೇ ಹಲವು ಇತಿಹಾಸ ತಜ್ಞರು ಉಲ್ಲೇಖಿಸುತ್ತಾ ಗೊಂದಲವನ್ನು ಸೃಷ್ಟಿಸುವಂತಾಗಿದೆ. ಬೇರೊಂದು ಜಾಗದಲ್ಲಿದ್ದ ಆ ಶಿಲಾಶಾಸನವು, ಗೋಪುರದ ಪಕ್ಕದಲ್ಲಿ ಬಂದು ವಿರಾಜ ಮಾನವಾಗಿದ್ದು ಹೇಗೆ? ಶಾಸನ ಏನು ಹೇಳಿದೆ? ಹಂಪೆಯಲ್ಲಿ ತಲೆ ಎತ್ತಿರುವ ಹನ್ನೊಂದು ಅಂತಸ್ತಿನ ಆ ಗೋಪುರವನ್ನು ನಿರ್ಮಿಸಿದವರು ಯಾರು? ಇತಿಹಾಸದ ಕೆಲವು ಒಳಸುಳಿಗಳನ್ನು ಚರ್ಚಿಸುವ ಈ ಲೇಖನದಲ್ಲಿ ಇವೆಲ್ಲವನ್ನೂ ಚರ್ಚಿಸಲಾಗಿದೆ. ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ.

ಹಂಪೆಯ ವಿರೂಪಾಕ್ಷ ದೇಗುಲದ ಎದುರಿನಲ್ಲಿ, ಹನ್ನೊಂದು ಅಂತಸ್ತಿನ ಭವ್ಯ ಗೋಪುರವು ಎಲ್ಲರ ಗಮನ ಸೆಳೆಯುತ್ತಿದೆ. ವಿಶ್ವ ಪರಂಪರೆಯ ತಾಣ ಎನಿಸಿರುವ ಹಂಪೆಯ ಪ್ರತೀಕ ಎನಿಸುವಷ್ಟು ಪ್ರಸಿದ್ಧವಾಗಿ ಈ ಗೋಪುರ. ಮುಗಿಲೆತ್ತರಕ್ಕೆ ಏರಿರುವ ಈ ಗೋಪರವನ್ನು ‘ಬಿಷ್ಟಪ್ಪಯ್ಯ ಗೋಪುರ’ ಎಂದೇ ಎಲ್ಲರೂ ಕರೆಯುತ್ತಾರೆ.

ಕ್ರಿ.ಶ. 1660 ರಿಂದ 1975ರ ವರೆಗೂ ‘ಹಂಪಿಯ ಮಹಾಗೋಪುರವನ್ನು ನಿರ್ಮಿಸಿದ್ದು ಬಿಷ್ಟಪ್ಪಯ್ಯ ನವರು’ ಎಂಬುದನ್ನು ಇಡೀ ಸಮಾಜವೇ ಅನುಮಾನರಹಿತವಾಗಿ ಒಪ್ಪಿತ್ತು. ‘ವಿರೂಪಾಕ್ಷ ವಸಂತೋತ್ಸವ’ ಚಂಪೂ ಗ್ರಂಥದಲ್ಲಿ ಈ ಮಾಹಿತಿ ಅಧಿಕೃತ ವಾಗಿಯೇ ಉಲ್ಲೇಖವಾಗಿದೆಯಷ್ಟೇ? ಮೇಲಾಗಿ ಎರಡನೇ ಅಂತಸ್ತು ಕಟ್ಟುವಾಗ ಅದು ಮತ್ತೆ ಮತ್ತೆ ಬೀಳತೊಡಗಿತು. ಆಗ ಬಿಷ್ಟಪ್ಪಯ್ಯನವರ ತುಂಬು ಗರ್ಭಿಣಿ ಪತ್ನಿ ಗೋಪುರಕ್ಕಾಗಿ ಆತ್ಮಾಹುತಿ ನೀಡಿದರು ಎಂಬ ಮೌಖಿಕ ಮಾಹಿತಿಯಂತೂ ಅತ್ಯಂತ ಗಟ್ಟಿಯಾಗಿದೆ.

ಎರಡನೇ ಅಂತಸ್ತಿನಲ್ಲಿ ಅವಳ ಸ್ಮಾರಕ ಇದ್ದು ಗೋಪುರದಮ್ಮ ಹೆಸರಿನಿಂದ ಅರ್ಚಿಸಲ್ಪಡುತ್ತಿದೆ. ಹೀಗಾಗಿ ಪುರಾತತ್ವ ಇಲಾಖೆಯ ಹಿರಿಯ ಅಧಿಕಾರಿ ಡಾ. ಪಾಂಡುರಂಗ ದೇಸಾಯಿಯವರು ಸೇರಿದಂತೆ ಅಂದಿನ ಎಲ್ಲ ವಿದ್ವಾಂಸರೂ ‘ಮಹಾ ಗೋಪುರವನ್ನು ಬಿಷ್ಟಪ್ಪಯ್ಯ ಎಂಬ ಶಿವಭಕ್ತ ನಿರ್ಮಿಸಿದರು ’ ಎಂದೇ ತಮ್ಮ ಪುಸ್ತಕಗಳಲ್ಲಿ ಬರೆದಿದ್ದರು. ಗೋಪುರದ ಹತ್ತಿರ ‘ಬಿಷ್ಟಪಯ್ಯ ಗೋಪುರ’ ಎಂಬ ನಾಮಫಲಕ ಕೂಡ ಇತ್ತು. ಬಳ್ಳಾರಿ ಕಲೆಕ್ಟರ್ ಆಗಿದ್ದ ಬ್ರಿಟಿಷ್ ಅಧಿಕಾರಿ ಥಾಮಸ್ ಮುನ್ರೋ (ಮುನ್ರಪ್ಪ) ಬಿಷ್ಟಪ್ಪಯ್ಯನವರ ಬಗ್ಗೆ ಮಾಹಿತಿ ಪಡೆ ಯಲು ಬಹಳ ಪ್ರಯತ್ನಪಟ್ಟಿದ್ದರು, ಹುಡುಕಾಟ ನಡೆಸಿದ್ದರು ಎಂದು ಹಿರಿಯ ವಿದ್ವಾಂಸ ಡಾ. ಎಚ್.ಎಸ್. ಗೋಪಾಲರಾವ್ ಉಲ್ಲೇಖಿಸಿದ್ದಾರೆ.

ಆದರೆ ಯಾವಾಗ ಸಂಶೋಧನೆಯ ಉದ್ದೇಶದಿಂದ ಒಂದೊಂದೇ ಸಂಸ್ಥೆಗಳು ಹೊರಗಿನಿಂದ ಬಂದು ಹಂಪೆಯಲ್ಲಿ ಸ್ಥಾಪನೆಯಾಗ ತೊಡಗಿದವೋ, ಯಾವಾಗ ವಿಭಿನ್ನ ಹಿನ್ನೆಲೆಯ ವಿದ್ವಾಂಸರು, ಇತಿಹಾಸವನ್ನು ಬಗೆಯ ತೊಡಗಿದರೋ ಆಗ ಕ್ರಮೇಣ ಈ ವಿಚಾರವನ್ನು ಪ್ರಶ್ನಿಸುವವರ ಸಂಖ್ಯೆ ಹೆಚ್ಚಾಯಿತು. ಗೋಪುರದ ನಿರ್ಮಾತೃವಿನ ಬಗ್ಗೆ ಅನುಮಾನಗಳು ಹುಟ್ಟಿ ಕೊಳ್ಳತೊಡಗಿ ದವು. ಗೋಪುರದ ದಾಖಲೆ ಕ್ರಮೇಣ ಈ ಕೆಳಗಿನಂತೆ ರೂಪಾಂತರ ಹೊಂದಿತು!

ಅ) ಈ ಮಹಾಗೋಪುರವನ್ನು ಬಿಷ್ಟಪ್ಪಯ್ಯ ಎಂಬ ಶಿವಭಕ್ತನು ನಿರ್ಮಿಸಿದನು, ಆದ್ದರಿಂದ ಇದನ್ನು ಬಿಷ್ಟಪ್ಪಯ್ಯ ಗೋಪುರ ಎಂದು ಕರೆಯುತ್ತಾರೆ.
ಆ) ಈ ಮಹಾಗೋಪುರವನ್ನು ಬಿಷ್ಟಪ್ಪಯ್ಯ ಎಂಬ ಶಿವಭಕ್ತನು ನಿರ್ಮಿಸಿದನೆಂದು ಹೇಳುತ್ತಾರೆ.
ಇ) ಈ ಮಹಾಗೋಪುರವನ್ನು ಬಿಷ್ಟಪ್ಪಯ್ಯ ಗೋಪುರ ಎಂದು ಕರೆಯುತ್ತಾರೆ.
ಈ) ಬಿಷ್ಟಪ್ಪಯ್ಯ ಗೋಪುರವನ್ನು ಯಾರು ಯಾವಾಗ ನಿರ್ಮಿಸಿದರು ತಿಳಿದು ಬಂದಿಲ್ಲ.
ಉ) ಮಹಾಗೋಪುರದ ಕಾಲ ಮತ್ತು ಕರ್ತೃವಿನ ಬಗ್ಗೆ ಮಾಹಿತಿ ಸಿಕ್ಕಿಲ್ಲ

ಈ ರೀತಿ ವ್ಯಾಖ್ಯಾನ ಬದಲಾವಣೆಯಾಗುತ್ತ ಬಂದು ಕೊನೆಗೊಂದು ದಿನ, ಗೋಪುರದಮ್ಮನ ಶಿಲ್ಪ, ಚಂಪೂಕಾವ್ಯದ ಉಲ್ಲೇಖ, ಗಟ್ಟಿಯಾದ ಮೌಖಿಕ ಪರಂಪರೆ, ನೂರಾರು ವಿದ್ವಾಂಸರ ಅಭಿಪ್ರಾಯಗಳನ್ನು ತಳ್ಳಿ ಹಾಕಿ ಎ.ಎನ್.ನೀಲಕಂಠ ಶಾಸ್ತ್ರಿಗಳ ಪುರಾವೆರಹಿತ, ದುರ್ಬಲ ಆಧಾರಿತ ಒಂದೇ ಅಭಿಪ್ರಾಯವನ್ನಾಧರಿಸಿ ‘ಹದಿನೈದನೇ ಶತಮಾನದಲ್ಲಿ ಪ್ರೋಲಗಂಟಿ ತಿಪ್ಪ ಕಟ್ಟಿ ದನು’ ಎಂದು ದಾಖಲಿಸಿಬಿಟ್ಟರು.

ಈ ದಾಖಲೆಯನ್ನು ಡಾ.ವಸುಂಧರಾ ಫಿಲಿಯೋಜಾ ಮುಂತಾದ ವಿದ್ವಾಂಸರು ಖಂಡಿಸಿದ್ದಾರೆ. ಆ ದಾಖಲೆ ಈಗ ಬಹುಶಃ ನಾನು
ನಿಖರ ಮಾಹಿತಿ ಕೊಟ್ಟ ಮೇಲೆ, ‘ಈ ವಿರೂಪಾಕ್ಷೇಶ್ವರ ಗೋಪುರ ಗುಡಿಯ ಗೋಪುರವನ್ನು ಬಹುಷಃ ಹದಿನೈದನೇ  ಶತಮಾನ ದಲ್ಲಿ ಪ್ರೋಲಗಂಟಿ ತಿಪ್ಪ ಕಟ್ಟಿರಬಹುದು’ ಎಂದು ಪುರಾತತ್ವ ಇಲಾಖೆಯ ಪುಸ್ತಕದಲ್ಲಿ ಪ್ರಕಟವಾಗಿದೆ. ಮತ್ತು ವಿಶ್ವ ಮಟ್ಟದ ಸ್ಮಾರಕದ ಇಂಥ ಅಸಂಬದ್ಧ ಅಪದ್ಧ ‘ಬಹುಶಃ, ಬಹುದು’ ಎಂಬ ದಾಖಲೆಯನ್ನು ನಿಖರ ಮಾಹಿತಿ ಹೊರ ಬಂದ ಮೇಲೂ ಇತಿಹಾಸಕ್ಕೆ ಬದ್ಧವಾಗಿರುವ ಯಾರೊಬ್ಬ ವಿದ್ವಾಂಸರೂ ಪ್ರಶ್ನಿಸದೇ ಮೌನವಾಗಿರುವುದು ಅಚ್ಚರಿ ಹುಟ್ಟಿಸುತ್ತಿದೆ.

ವಿಜಯನಗರೋತ್ತರ ನಿರ್ಮಾಣ

ಗೋಪುರ ನಿರ್ಮಾಣದ ಕಾಲ ಇದುವರೆಗೆ ನಿಖರವಾಗಿ ತಿಳಿದು ಬಂದಿರದಿದ್ದೇನು? ‘ಬಿಷ್ಟೇಶ ವಿಜಯ’ ಚರಿತ್ರೆಯಲ್ಲಿ ‘ವಿಜಯ ನಗರರೋತ್ತರ ಕಾಲ’ ಎಂದು ಸ್ಪಷ್ಟವಾಗಿದೆ. ಪುರಾತತ್ವ ಇಲಾಖೆಯ ಹಿರಿಯ ಅಧಿಕಾರಿ ಯಾಗಿದ್ದ ಡಾ.ಪಾಂಡುರಂಗರಾವ್  ದೇಸಾಯಿ, ತಮ್ಮ ‘ಹಂಪೆ’ ಪುಸ್ತಕದಲ್ಲಿ ‘ಬಿಷ್ಟಪ್ಪಯ್ಯ ಎಂಬ ಶಿವಭಕ್ತನು ಇತ್ತೀಚಿಗೆ (ಅಂದರೆ ಸಾಮ್ರಾಜ್ಯ ಪತನಾನಂತರ) ನಿರ್ಮಿಸಿದನು’ ಎಂದು ಮೊಟ್ಟ ಮೊದಲಿಗೆ ಬರೆದರು. ಹಂಪೆ ವಿಶ್ವ ಪರಂಪರೆ ಪಟ್ಟಿಗೆ ಸೇರಿದ ಮೇಲೆ ಯುನಸ್ಕೋ ತಜ್ಞರೂ, ‘ವಿಜಯನಗರ ರೀಸರ್ಚ್ ಪ್ರಾಜೆಕ್ಟ್‌’ನ ನಿರ್ದೇಶಕರೂ ಆಗಿರುವ ಡಾ. ಜಾರ್ಜ್‌ ಮಿಷಲ್, ಡಾ. ಜಾನ್ ಫ್ರಿಡ್ಝ್‌‌ ಅವರು ಹಂಪೆಯನ್ನು ಅತ್ಯಂತ ಶ್ರದ್ಧೆ, ಕುತೂಹಲ, ಬೆರಗುಗಳಿಂದ ಅಧ್ಯಯನ ಮಾಡತೊಡಗಿದರು.

‘ದಕ್ಷಿಣ ಭಾರತದ ಗೋಪುರಗಳು’ ಇವರ ವಿಶೇಷ ಅಧ್ಯಯನ. ಅವರು, ‘ಮಹಾಗೋಪುರ ನಿರ್ಮಾಣವೂ ಸೇರಿದಂತೆ, ಬಹಳಷ್ಟು ಕೆಲಸ ಸಾಮ್ರಾಜ್ಯ ಪತನಾನಂತರ ಆಗಿದೆ. ತನ್ನ ಹೆಸರು ದಾಖಲಿಸದೇ ಈ ಎಲ್ಲ ಕೆಲಸ ಮಾಡಿರುವ ಮಹಾಪುರುಷ ಯಾರು? ಇದೊಂದು ನಿಗೂಢ, ವಿಸ್ಮಯ’ ಎಂದು ಕಳೆದ 25-30 ವರ್ಷಗಳಿಂದ ತಮ್ಮ ಪುಸ್ತಕಗಳಲ್ಲಿ ಹೇಳುತ್ತ ಬಂದಿದ್ದಾರೆ. ಹೌದು! ಈ ಮಹನೀಯರ ಅಭಿಪ್ರಾಯದಂತೆ ಬಿಷ್ಟಪ್ಪಯ್ಯನವರು ಗೋಪುರವನ್ನು ಕ್ರಿ.ಶ.1660-94ರ ಅವಧಿಯಲ್ಲಿ ನಿರ್ಮಿಸಿದರೆಂದು ನನ್ನ  ಅಧ್ಯಯನದಲ್ಲಿ ತಿಳಿದು ಬಂದಿತು.

ಹಿರಿಯ ವಿದ್ವಾಂಸರಾದ ಚಿದಾನಂದ ಮೂರ್ತಿ, ಕಲ್ಬುರ್ಗಿ, ಅ.ಸುಂದರ, ಷ.ಶೆಟ್ಟರ್, ಸೂರ್ಯನಾಥ ಕಾಮತ್ ಅವರನ್ನೆಲ್ಲ
ಖುದ್ದಾಗಿ ಭೇಟಿಯಾಗಿ ಹಳೆಯ ಹಸ್ತಪ್ರತಿಗಳನ್ನು, ಮಾಹಿತಿಯನ್ನು ನೀಡಿದೆ. ಸೂರ್ಯನಾಥ ಕಾಮತ್ ಅವರು ಕರ್ನಾಟಕ
ಇತಿಹಾಸ ಅಕಾಡೆಮಿಯ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಲು ನೀಡಿದ ಸೂಚನೆಯಂತೆ 8.9.2007 ರಂದು
ಹಗರಿಬೊಮ್ಮನಹಳ್ಳಿಯಲ್ಲಿ ನಡೆದ ವಿಚಾರಸಂಕಿರಣದಲ್ಲಿ ಪ್ರಬಂಧವನ್ನೂ ಮಂಡಿಸಿದೆ ಮತ್ತು 17.10.2007ರಂದು
ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿದೆ.

ಹಂಪೆಯ ಬಗ್ಗೆ ಅಪಾರವಾದ ಪ್ರೀತಿಯುಳ್ಳ ಹಂಪಿ ವಿಶ್ವಪರಂಪರೆ ಪಟ್ಟಿಗೆ ಸೇರಲು ಶ್ರಮಿಸಿದ ಅಂತಾರಾಷ್ಟ್ರೀಯ ವಿದ್ವಾಂಸರಾದ ಡಾ. ವಸುಂಧರಾ ಫಿಲಿಯೋಝಾ ಅಂದೇ ಶಿವಮೊಗ್ಗೆಗೆ ಬಂದದ್ದು ಒಂದು ಯೋಗಾಯೋಗವೆಂದೇ ಹೇಳಬೇಕು.
ಆರಂಭದಿಂದಲೂ ನನ್ನಿಂದ ಮಾಹಿತಿ ಪಡೆಯುತ್ತ ಬಂದಿದ್ದ ಅವರು, ನಾನು ಪತ್ರಿಕಾಗೋಷ್ಠಿಗೆ ಅವರ ಉಪಸ್ಥಿತಿಯನ್ನು
ಕೋರಿದೊಡನೆ ಇಷ್ಟು ಮಹತ್ವದ ಸ್ಮಾರಕದ ಸಂಶೋಧನೆಯೊಂದು ಯಾವುದೇ ಗೊಂದಲ, ವಿರೋಧವಿಲ್ಲದೇ ಸುಖಾಂತ್ಯ
ಕಾಣುತ್ತಿದೆಯೇ ಎಂದು ಸಂತಸಪಟ್ಟರು.

ಶಾಸನ ತಂದ ಗೊಂದಲ
ಇಲ್ಲ! ನಮ್ಮಲ್ಲಿ ಸತ್ಯ ಸ್ಥಾಪನೆಯಾಗುವುದು ಅಷ್ಟು ಸುಲಭವೇ? ಹಸ್ತಪ್ರತಿಗಳನ್ನು, ಸಂಬಂಧಿಸಿದ ಶಿಲ್ಪಗಳನ್ನು ಮತ್ತೊಮ್ಮೆ ಪರಿಶೀಲಿಸಿ, ನನ್ನಿಂದ ವಿವರಣೆಗಳನ್ನು ಪಡೆದಾದ ಮೇಲೆ ವಸುಂಧರಾ ಮ್ಯಾಡಂ ಅವರು ನೀಡಿದ ಅಭಿಪ್ರಾಯ ಅಕ್ಷರಶಃ ನನಗೆ ಬಾಂಬ್ ಸ್ಫೋಟಿಸಿದಷ್ಟು ಆಘಾತಕಾರಿಯಾಗಿ ಪರಿಣಮಿಸಿತು.

ಅವರು ಹೇಳಿದರು- ‘ಹೂಂ! ಎಲ್ಲ ಸರಿ, ಆದರೆ ಈ ಗೋಪುರದ ಬದಿಯಲ್ಲಿರುವ ಶಿಲಾಶಾಸನ ಹಿರಿಯ ಗೋಪುರವನ್ನು ಕೃಷ್ಣದೇವರಾಯರು 1510ರಲ್ಲಿ ಜೀರ್ಣೊದ್ಧಾರ ಗೊಳಿಸಿದ ಎಂದು ಹೇಳುತ್ತದೆ. (ಈ ಶಿಲಾಶಾಸನದ ರೋಚಕವಾದ ಗುಟ್ಟು ಈ ಲೇಖನದ ಕೊನೆಯಲ್ಲಿ ಬಯಲಾಗಿದೆ.) ಹಾಗಾಗಿ ಬಿಷ್ಟಪ್ಪಯ್ಯನವರು ನಂತರ ಜೀರ್ಣೊದ್ಧಾರಗೊಳಿಸಿರಬಹುದು, ಜೀರ್ಣೊದ್ಧಾರ ಎಂದರೆ ಮೊದಲೇ ಇದ್ದ ಗೋಪುರವನ್ನು ಅಲ್ಪಸ್ವಲ್ಪ ದುರಸ್ತಿಗೊಳಿಸುವುದು ಎಂಬರ್ಥವಷ್ಟೇ?’ ‘ಅಡಿಪಾಯ ತೋಡಿದ್ದಕ್ಕೆ ಪುರಾವೆ ಇದೆ.

ತೊಲೆ ಹಾಕಿದ್ದಕ್ಕೆ ಪುರಾವೆ ಇದೆ. ತೊಲೆಗಳಲ್ಲಿ, ಮೊದಲ ಅಂತಸ್ತಿನಲ್ಲಿ ಗುರು ಬಿಷ್ಟೇಶರಿಗೆ ಸಂಬಂಧಿಸಿದ ಶಿಲ್ಪಗಳಿವೆ. ಎಲ್ಲಕ್ಕಿಂತ ಮುಖ್ಯವಾಗಿ ಎರಡನೆಯ ಮಹಡಿಯಲ್ಲಿಯೇ ಗೋಪುರಕ್ಕೆ ಆತ್ಮಾಹುತಿ ನೀಡಿದ ಗೋಪುರದಮ್ಮನ ಶಿಲ್ಪವಿದೆ. ಜೀರ್ಣೊದ್ಧಾರಗೊಳಿಸಲು ತುಂಬು ಗರ್ಭಿಣಿ ಚಿತೆ ಹಾರಲು ಸಾಧ್ಯವೆ? ಜೀರ್ಣೋದ್ಧಾರ ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವೆ ಇಲ್ಲ’ ಎಂದು ನಾನು ಕೇವಲ ಸತ್ಯ ಮತ್ತು ನ್ಯಾಯದ ನೈತಿಕ ಬಲದ ಸಹಾಯದಿಂದ ಆ ಹಿರಿಯ ವಿದ್ವಾಂಸರೊಡನೆ ಅಕ್ಷರಶಃ ವಾಗ್ವಾದಕ್ಕಿಗಳಿದೆ. ಶಿಲಾಶಾಸನ ಅಲ್ಲಗೆಳೆಯಲಾಗದು, ಜೀರ್ಣೋದ್ಧಾರ ಒಪ್ಪಲಾಗದು ಎಂಬ ನಮ್ಮಿಬ್ಬರ ವಾಗ್ವಾದಕ್ಕೆ ಪರಿಹಾರ ಸೂಚಿಸಿದ್ದು ಹಿರಿಯರಾದ ಡಾ. ಬಿ.ಎಸ್.ರಾಮಭಟ್ಟರು.

‘ಜೀರ್ಣೋದ್ಧಾರ ಎಂಬ ಪದ ಇಲ್ಲಿ ಸೂಕ್ತವಾಗದು, ಶಿಲಾಶಾಸನ ಅಲ್ಲಗಳೆಯಲಾಗದು ಎಂದರೆ, ಪುನರ್‌ನಿರ್ಮಿಸಿದರು ಎಂದು ಹೇಳೋಣ’ ಎಂದು ಇತ್ಯರ್ಥಗೊಳಿಸಿದರು. ಜಾರ್ಜ್ ಮಿಷಲ್ ಅವರು ‘ಈ ಶಿಲಾಶಾಸನ ಹೇಳುವಂತೆ, ಈ ಗೋಪುರವು ಕೃಷ್ಣದೇವ ರಾಯರಿಗಿಂತ ಮುಂಚೆಯೇ ಆಗಿದೆ ಎಂಬುದನ್ನು ಒಪ್ಪಲು, ನಂಬಲು ಖಂಡಿತ ಸಾಧ್ಯವಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ದ ಹಿಂದು ಪತ್ರಿಕೆಯಲ್ಲಿ ಬಂದಿರುವ ವಿಸ್ತತ ವರದಿಯನ್ನು ಚಾನ್ ಪ್ರಿಡ್ಝ್‌‌ ಅವರಿಗೆ ಕಳಿಸಿದೆ. ಗೋಪುರ ಹದಿನೇಳನೆಯ
ಶತಮಾನದಲ್ಲೇ ಆಗಿದೆ ಎಂದು ತಮ್ಮ ನಿರ್ಣಯ ಸರಿಯಾದುದಕ್ಕೆ ಅತೀವ ಸಂತಸ ವ್ಯಕ್ತಪಡಿಸಿದ ಅವರು ತಕ್ಷಣ ನನ್ನನ್ನು ಅಭಿನಂದಿಸಿ ಮಾರುತ್ತರ ಬರೆದರು ಮತ್ತು ಜನವರಿ 2008ರಲ್ಲಿ ತೋರಣಗಲ್ಲಿನ ಅಂತಾರಾಷ್ಟ್ರೀಯ ವಿಜಯನಗರ ವಿಚಾರ ಸಂಕಿರಣಕ್ಕೆ ನನ್ನನ್ನು ಆಹ್ವಾನಿಸಿದರು.

ಬಿಷ್ಟಪ್ಪಯ್ಯ ನಿರ್ಮಿತ ಎಂಬ ಘೋಷಣೆ

ಪ್ರಮುಖ ಅಂತಾರಾಷ್ಟ್ರೀಯ ವಿದ್ವಾಂಸರೆಲ್ಲ ಸೇರಿ ನನ್ನಿಂದ ಪುರಾವೆ, ವಿವರಣೆಗಳನ್ನು ಪಡೆದು ಒಪ್ಪಿಗೆಯಾದ ಮೇಲೆ
ಜಾರ್ಜ್ ಮಿಷೆಲ್ ಅವರು ತಮ್ಮ ಪ್ರಾತ್ಯಕ್ಷಿಕೆಯ ಸಂದರ್ಭದಲ್ಲಿ ‘ಮುಖ್ಯಗೋಪುರವು ಬಿಷ್ಟಪ್ಪಯ್ಯ ಎಂಬ ಸಂತರಿಂದ ನಿರ್ಮಿಸಲ್ಪಟ್ಟಿದೆ’ ಎಂದು ವಿವರಣೆ ನೀಡಿದರು. ಅಂದಿನ ಸಭೆಯಲ್ಲಿ ಪುರಾತತ್ವ ಇಲಾಖೆಯ ಅಧಿಕಾರಿಗಳು, ಹಂಪಿ ಕನ್ನಡ ವಿಶ್ವವಿದ್ಯಾಲಯ ಹಲವು ಉಪನ್ಯಾಸಕರು ಹಾಜರಿದ್ದರು.

ಸಭೆ ಮುಗಿದ ನಂತರ ಕವಿವಿಯ ಪುರಾತತ್ವ ವಿಭಾಗದ ಉಪನ್ಯಾಸಕ, ಪ್ರೊ.ಸಿ.ಎಸ್.ವಾಸುದೇವನ್ ಅವರು ‘ಮಿಷೆಲ್
ಅವರೇ ಒಪ್ಪಿಕೊಂಡ ಮೇಲೆ ಇನ್ಯಾರು ವಿರೋಧಿಸುವ ಹಾಗಿಲ್ಲ’ ಎಂದು ಅಭಿನಂದಿಸಿದರು. ನಂತರ ಪುಸ್ತಕ ಪ್ರಕಟವಾದ ಮೇಲೆ
‘ಪುಸ್ತಕ ಬಹಳ ಚೆನ್ನಾಗಿದೆ, ಎಲ್ಲಿಯೂ ಅನುಮಾನಗಳು ಬರದಷ್ಟು ಪುರಾವೆಗಳಿವೆ’ ಎಂದು ಮೆಚ್ಚಿಕೊಂಡರು. ಅವರು
ಈಚೆಗೆ ಹಂಪಿ ಸ್ಮಾರಕಗಳ ಬಗ್ಗೆ ಬರೆದ ಪುಸ್ತಕದಲ್ಲಿ ಮಹಾಗೋಪುರವನ್ನು ಬಹುಶಃ 15ನೇ ಶತಮಾನದಲ್ಲಿ ಪ್ರೋಲಗಂಟಿ ತಿಪ್ಪ ಕಟ್ಟಿರಬಹುದು ಎಂದು ಬರೆದಿದ್ದಾರೆ.

ಜಾನ್ ಫ್ರಿಡ್ಝ್‌ ಅವರು ಇನ್ನೂ ಹಲವು ಕಾರ್ಯಗಳು ಸಾಮ್ರಾಜ್ಯ ಪತನಾನಂತರ ಆಗಿವೆ ಎಂದು ಮಾಹಿತಿ ನೀಡಿದರು. ನನಗಂತೂ ಬಿಷ್ಟಪ್ಪಯ್ಯನವರು ಇನ್ನೂ ಎಲ್ಲೆಲ್ಲಿ, ಏನೇನು, ಯಾವಾಗ ಮಾಡಿರಬಹುದು ಎಂಬುದನ್ನು ತಿಳಿಯಬೇಕೆಂಬ ತುಡಿತ ಕಾಡು ತ್ತಿತ್ತು. ಹುಡುಕಾಟ ಮುಂದುವರೆಸಿದೆ. ಹಿಂದಿನ ವಿದ್ವಾಂಸರು ಯಾವೆಲ್ಲ ಕೆಲಸಗಳು ಸಾಮ್ರಾಜ್ಯ ಪತನಾನಂತರ ಆಗಿವೆ ಎಂದು ತೀರ್ಮಾನಿಸಿದ್ದರೋ ಅವೆಲ್ಲವನ್ನೂ ಬಿಷ್ಟಪ್ಪಯ್ಯನವರೇ ಮಾಡಿದ್ದೆಂದು ಗಟ್ಟಿಯಾದ ಪುರಾವೆಗಳೊಡನೆ ತಿಳಿದು ಬಂದಿತು.

ಬಿಷ್ಟಪ್ಪಯ್ಯನಿಂದ ಹಲವು ಕಾರ್ಯಗಳು
ಹಂಪಿಗೆ ಸಂಬಂಧಿಸಿದಂತೆ ಬಿಷ್ಟಪ್ಪಯ್ಯನವರು ಹಲವು ಕಾರ್ಯಗಳನ್ನು ಮಾಡಿದ್ದಾರೆ. ಅವುಗಳಲ್ಲಿ  ಮುಖವಾದವುಗಳೆಂದರೆ,
1. ಮಹಾಗೋಪುರ ನಿರ್ಮಾಣ, ಗುಡಿಯ ಆವರಣ ಮತ್ತು ರಥಬೀದಿಯ ಜೀರ್ಣೋದ್ಧಾರ
2. ಪಂಪಾಪತಿಯ ಚಿನ್ನದ ಮುಖವಾದ ಮತ್ತು ವಿದ್ಯಾರಣ್ಯ ಸ್ವಾಮೀಜಿಯ ಕಿರೀಟದ ಕಾಣಿಕೆ
3. ರಂಗಮಂಟಪದ ವರ್ಣಚಿತ್ರಗಳು

4. ಪಂಪಾಪತಿ ಪುನಃ ಸ್ಥಾಪನೆ
5. ವಿಜಯ ವಿಠ್ಠಲ ಮತ್ತು ಅನಂತಶಯನ ಸೇರಿದಂತೆ ಹಲವು ವಿಗ್ರಹಗಳ ಸ್ಥಳಾಂತರ

ವಿಶೇಷವೆಂದರೆ ‘ವಿರೂಪಾಕ್ಷ ವಸಂತೋತ್ಸವ’ ಎಂಬ ಚಂಪೂ ಕಾವ್ಯದ ಕರ್ತೃ ಬಿಷ್ಟಪ್ಪಯ್ಯನವರ ಮೊಮ್ಮಗ. ಹೌದು! ತನ್ನ ತಾತ ನಿರ್ಮಿಸಿದ ಗೋಪುರಕ್ಕೆ ಮೊಮ್ಮಗ ಗುರು ಮಹಾದೇವಪ್ಪಯ್ಯನವರು ಕ್ರಿ.ಶ 1717ರಲ್ಲಿ ಅತ್ಯಂತ ವಿಜೃಂಭಣೆಯಿಂದ ಕಳಸ
ಸಮಾರೋಪ ಮಾಡಿದರು. ಆಗ ಲಕ್ಷಾಂತರ ಭಕ್ತರು, ಸ್ಥಳೀಯ ನಾಯಕರಲ್ಲದೇ ಕಾಶ್ಮೀರದ ರಾಜನು ತನ್ನ ಕುಲವೈವದ ಉತ್ಸವಕ್ಕೆಂದು ಬಂದಿದ್ದನಂತೆ. ಉತ್ಸವದ ವೀಕ್ಷಕ ವಿವರಣೆಯಂತಿರುವ ಈ ಕಾವ್ಯ ಸಾಹಿತ್ಯಕವಾಗಿ, ಪೌರಾಣಿಕವಾಗಿ, ಐತಿಹಾಸಿಕವಾಗಿ ಬಹು ಅಮೂಲ್ಯವಾಗಿದೆ ಎಂದು ವಿದ್ವಾಂಸರು ಬಣ್ಣಿಸಿದ್ದಾರೆ.

ಇದರಲ್ಲಿ ಕವಿ, ಗೋಪುರವನ್ನು ವಿಷ್ಟಷೇಶ ಗೋಪುರ (ಬಿಷ್ಟೇಶರ ಮತ್ತೊಂದು ಹೆಸರು) ಎಂದು ಕರೆದು, ತಾನು ವಿಷ್ಟಷೇಶರ ಪ್ರಶಿಷ್ಯ ಎಂದು ಹೇಳಿದ್ದಾನೆ. ಮತ್ತು ಐದು ಕಲಶಗಳನ್ನು ಇಡಿಸಿದ್ದರಿಂದಾಗಿ ಅದನ್ನು ಪಂಚಾನನೋತ್ಸವ ಎಂದು ಕರೆದಿದ್ದಾನೆ. ಇದರ ಕಾಲ ಮತ್ತು ಕರ್ತೃವಿನ ಕುರಿತು ವಿದ್ಯಾರತ್ನ ಆರ್. ಎಸ್.ಪಂಚಮುಖಿ, ಡಾ. ಶತಾವಧಾನಿ ಗಣೇಶ್ ಸೇರಿದಂತೆ ಎಲ್ಲವರೂ ಚರ್ಚೆ ನಡೆಸಿದ್ದಾರೆ. ಸಂಸ್ಕೃತ ವಿದ್ವಾಂಸರರಾಗಿದ್ದ ಮಹಾದೇವಪ್ಪಯ್ಯನವರೇ ತಾವು ಆಯೋಜಿಸಿದ್ದ ಕಲಶ ಸಮಾರೋಪದ ಬಗ್ಗೆ ಬರೆದ ಕಾವ್ಯವಿದು.

ಏಳು ಪ್ರಬಂಧ ಮಂಡನೆ
ಈ ಎಲ್ಲ ಮಾಹಿತಿಗಳನ್ನು ಕುರಿತು ಕರ್ನಾಟಕ ಇತಿಹಾಸ ಅಕಾಡೆಮಿ, ಮಿಥಿಕ್ ಸೊಸೈಟಿ, ಹಂಪಿ ಉತ್ಸವದ ಸಂದರ್ಭದಲ್ಲಿ
ಆಯೋಜಿಸುವ ಪುರಾತತ್ವ ಇಲಾಖೆಯ ವಿಜಯನಗರ ಅಧ್ಯಯನದ ವಿಚಾರ ಸಂಕಿರಣದಲ್ಲಿ ನಾನು ಮಂಡಿಸಿದ ಏಳು ಪ್ರಬಂಧಗಳು ಪ್ರಕಟವಾಗಿವೆ. ಎಲ್ಲ ಹಿರಿಯ ವಿದ್ವಾಂಸರ ಮೆಚ್ಚುಗೆ ಸೂಚನೆಯಂತೆ ನಾನು ಬರೆದ ‘ಉಳಿದ ಹಂಪಿ ಮತ್ತು ಗುರು
ಬಿಷ್ಟಪ್ಪಯ್ಯನವರು’ ಎಂಬ ಪುಸ್ತಕ ಪ್ರಕಟವಾಗಿ ಮೆಚ್ಚುಗೆ ಗಳಿಸಿದೆ.

ಗ್ರಂಥಾಲಯ ಇಲಾಖೆ ಪುಸ್ತಕಗಳನ್ನು ಖರೀದಿಯೂ ಮಾಡಿದೆ. ಸಂಬಂಧಪಟ್ಟ ಎಲ್ಲ ಇಲಾಖೆ, ಸಂಸ್ಥೆಗಳಿಗೂ ಪುಸ್ತಕ
ತಲುಪಿಸಿದ್ದೇನೆ. ಆದರೆ ಅವರೆಲ್ಲ ಬಹುಶಃ ಪ್ರೋಲಗಂಟಿ ತಿಪ್ಪಕಟ್ಟಿರಬಹುದು ಎಂಬ ಸುಳ್ಳಿನಲ್ಲೇ ಸುಖಿಸುತ್ತಿದ್ದಾರೆ. ಸತ್ಯ
ಶೋಧಿಸಬೇಕಾದವರು ಸುಳ್ಳು ಶಿಲಾಶಾಸನದ ಗುರಾಣಿ ಹಿಡಿದುಕೊಂಡು ಸತ್ಯವನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಲು
ಪ್ರಯತ್ನಿಸುತ್ತಿದ್ದಾರೆ.

ಶಿಲಾಶಾಸನದ ಗುಟ್ಟು ಕೊನೆಗೂ ರಟ್ಟು
ಸುಳ್ಳು ಶಿಲಾಶಾಸನವೇ? ಎಂದು ನೀವೀಗ ಯೋಚಿಸುತ್ತಿರಬಹುದು ನಿಜ. ಉಳಿದ ವಿದ್ವಾಂಸರಂತಲ್ಲದೆ ಡಾ. ವಸುಂಧರಾ
ಫಿಲಿಯೋಜಾ ಅವರಿಗೆ ನನ್ನ ಅಧ್ಯಯನದ ಬಗ್ಗೆೆ ಬಹಳ ಆಸಕ್ತಿ. ಅವರ ಸೂಚನೆಯ ಮೇರೆಗೆ ಹಿರಿಯ ವಿದ್ವಾಂಸ ಡಾ.
ಗೀತಾಚಾರ್ಯನಾರಾಯಣ ಶರ್ಮ ಅವರು ತಮ್ಮ ‘ಶಾಸ್ತ್ರೀಯ ಕನ್ನಡ ವೇದಿಕೆ’ಯ ವತಿಯಿಂದ 22.2.2020ರಂದು ಒಂದು ಸಭೆ
ಕರೆದರು. ಅದರಲ್ಲಿ ಹಿರಿಯ ವಿದ್ವಾಂಸರಾದ ಡಾ. ಸದ್ಯೋಜಾತ ಭಟ್ಟ, ಡಾ. ನಾಗರಾಜ ಶರ್ಮ, ಆಗಮ ಶಾಸ್ತ್ರಜ್ಞ ಡಾ. ಶ್ರೀವತ್ಸ,
ಡಾ.ಹರಿಹರ ಶ್ರೀನಿವಾಸರಾವ್ ಸೇರಿದಂತೆ ಹಲವು ವಿದ್ವಾಂಸರು ಆಗಮಿಸಿದ್ದರು.

ಆ ಶಾಸನದ ಬಗ್ಗೆ ಚರ್ಚೆ ಶುರುವಾಯಿತು. ಹಿಂದೆ ಹಲವು ವಿದ್ವಾಂಸರು ‘ಆ ಶಾಸನ ಈ ಗೋಪುರಕ್ಕೆ ಸಂಬಂಧಿಸಿದ್ದಲ್ಲ, ಯಾವಾಗಲೋ ಸ್ಥಳಾಂತವಾಗಿದೆ’ ಎಂದು ತಿಳಿಸಿದ ವಾದವನ್ನೇ ಮತ್ತೆ ಮತ್ತೆ ಗಟ್ಟಿಯಾಗಿ ಮಂಡಿಸತೊಡಗಿದೆ. ತುಸು ಹೊತ್ತು ವಾದಗಳನ್ನು ಮೌನವಾಗಿ ಆಲಿಸುತ್ತಿದ್ದ ವಸುಂಧರಾ ಫಿಲಿಯೋಜಾ ಅವರು ಕೊನೆಗೂ ತಮ್ಮ ‘ಐತಿಹಾಸ ಮೌನ’ ಮುರಿದು ‘ಹೌದು! ತಿಪ್ಪೆಯಲ್ಲಿ ಬಿದ್ದಿದ್ದ ಅದನ್ನು ಮೇಲಕ್ಕೆತ್ತಿ ಈಚೆಗೆ ಅಲ್ಲಿ ಹಾಕಿದ್ದಾರೆ’ ಎಂದು ಹೇಳಿದರು.

ಮತ್ತು ಈಚೆಗೆ ಸಾಮಾಜಿಕ ಜಾಲತಾಣದಲ್ಲಿ ಅದರ ವಿವರಣೆಗಳನ್ನು ಈ ರೀತಿ ನೀಡಿದ್ದಾರೆ. ‘ನಾವು 1975ರಲ್ಲಿ ಹಂಪಿಗೆ ಹೋದಾಗ
ಗೋಪುರದ ಬದಿಯ ತಿಪ್ಪೆಯಲ್ಲಿ ತುಂಡಾಗಿ ಬಿದ್ದಿದ್ದ ಶಾಸನವನ್ನು ತೆಗೆದು ಓದಿದೆವು, ಅದು ‘1510ರಲ್ಲಿ ಕೃಷ್ಣದೇವರಾಯ ಹಿರಿಯ ಗೋಪುರವನ್ನು ಜೀರ್ಣೋದ್ಧಾರಗೊಳಿಸಿದನು’ ಎಂಬ ಬರಹ ಹೊಂದಿತ್ತು. ಅರ್ಚಕರಿಗೆ ಅದನ್ನು ಒಳಗೆ ಸಂರಕ್ಷಿಸಿಡಲು
ಸೂಚಿಸಿದೆವು. ಅವರು ‘ನೀವು ಲಿಖಿತದಲ್ಲಿ ಕೊಟ್ಟರೆ ಇಡುತ್ತೇವೆ’ ಎಂದರು.

ಅದು ಗುಡಿಯ ವಸ್ತುವೇ ಎಂದಾಗ ಅದನ್ನು ರಕ್ಷಿಸಿಡುವುದು ನಿಮ್ಮದೇ ಜವಾಬ್ದಾರಿ. ನಾನು ಬರೆದು ಕೊಡಬೇಕಿಲ್ಲ ಎಂದು ತಿಳಿಸಿ ಹೇಳಿದರೂ ಅವರು ಕೇಳಲಿಲ್ಲ. ನನ್ನ ಪತಿ ಫಿಲಿಯೊಝಾ ಬರೆದು ಕೊಡಲು ಮುಂದಾದರು. ಆದರೆ ಅವರು ಯುರೋಪಿಯನ್. ಒಬ್ಬ ವಿದೇಶೀಯ ನಿಮ್ಮ ಇತಿಹಾಸ ಸಂರಕ್ಷಿಸಿಕೊಳ್ಳಿ ಎಂದು ಹೇಳುವುದು ನನಗೆ ಸರಿ ಬರದಿದ್ದರಿಂದ ಅವರನ್ನು ತಡೆದೆ.

ಅವು ಅಲ್ಲೇ ಬಿದ್ದವು. ಮುಂದೆ ಡಾ. ಎಮ್. ಎಸ್.ನಾಗರಾಜರಾವ್ ಪುರಾತತ್ವ ಇಲಾಖೆಯ ಅಧಿಕಾರ ವಹಿಸಿಕೊಂಡಾಗ 1980ರಲ್ಲಿ ಅವರ ಗಮನಕ್ಕೆ ತಂದೆವು ತುಂಡುಗಳನ್ನು ಜೋಡಿಸಿ ಅಲ್ಲಿ ಸ್ಥಾಪಿಸಿದರು’. ಊಊಫ್! ಅಂದರೆ ಈ ಶಾಸನ ಮಹಾಗೋಪುರಕ್ಕೆ
ಸಂಬಂಧಿಸದ್ದಲ್ಲವೇ ಅಲ್ಲ ಎಂದು ಅವರಿಗೆ ತಿಳಿದಿತ್ತು. ಆದರೂ ಇದರ ನೆಪ ಒಡ್ಡಿ 2007ರ ಪತ್ರಿಕಾಗೋಷ್ಠಿಯಲ್ಲಿ ‘ಕೃಷ್ಣದೇವ ರಾಯ 1510ರಲ್ಲಿ ಅದನ್ನು ಜೀರ್ಣೋದ್ಧಾರ ಗೊಳಿಸಿದನೆಂಬ ಶಾಸನ ಇದೆ.

ಅದನ್ನೇ ಮತ್ತೆ ಬಿಷ್ಟಪ್ಪಯ್ಯ ಜೀರ್ಣೋದ್ಧಾರಗೊಳಿಸಿದ್ದಾರೆ’ ಎಂದು ಸ್ಥಾಪಿಸಲು ಪ್ರಯತ್ನಿಸಿದ್ದರು. ಇಷ್ಟು ವರ್ಷಗಳ ಕಾಲ ಕೆಲವರು ಇದೇ ಕಾರಣಕ್ಕೆ ಆಕ್ಷೇಪ ಎತ್ತಿದ್ದು ತಿಳಿದೂ ಮೌನವಾಗಿದ್ದವರು ಈಗಲಾದರೂ ಗುಟ್ಟು-ರಟ್ಟು ಮಾಡಿದರು. ಅವರಿಗೆ ಧನ್ಯವಾದಗಳು.

ಗುಟ್ಟು ರಟ್ಟಾದ ಮೇಲಾದರೂ ಹಂಪಿಯ ಇತಿಹಾಸದ ಬಗ್ಗೆ ವಿಶೇಷ ಪ್ರೀತಿ ಇರುವ ವಸುಂಧರಾ ಫಿಲಿಯೋಜಾ ಅವರು
ತಮ್ಮ ಮುಂದಿನ ಬರಹಗಳಲ್ಲಿ ಈ ಎಲ್ಲ ಮಾಹಿತಿಗಳು ನಿಖರವಾಗಿ ದಾಖಲಿಸುತ್ತಾರೆ ಎಂದು ಆಶಿಸಿದ್ದೆ. ತಮ್ಮ ಇಂಟ್ಯಾಕ್
ಉಪನ್ಯಾಸಕ್ಕಾಗಿ ವಿವರಗಳು ಬೇಕು ಎಂಬ ಉದ್ದೇಶದಿಂದಲೇ ವಸುಂಧರಾ ಫಿಲಿಯೋಝಾ ಅವರು ಸಭೆ ಏರ್ಪಡಿಸಲು
ಸೂಚಿಸಿದ್ದು. ಇಲ್ಲಿ ಪುರಾವೆ, ವಿವರ ಪಡೆದು, ಶಿಲಾಶಾಸನ ಆ ಗೋಪುರಕ್ಕೆ ಸಂಬಂಧಿಸಿದ್ದಲ್ಲ ಎಂಬ ಗುಟ್ಟನ್ನು ತಾವೇ ರಟ್ಟು
ಮಾಡಿದ ಮೇಲೂ ತಮ್ಮ ಇಂಟ್ಯಾಕ್ ಬರಹದಲ್ಲಿ ಬಿಷ್ಟಪ್ಪಯ್ಯ ರಿನೋವೇಟೆಡ್ / ರಿಬ್ಯುಲ್ಟ್‌ ಎಂದು ದಾಖಲಿಸಿದ್ದಾರೆ.

ಇದನ್ನೆಲ್ಲಾ ಯಾಕೆ ಹೇಳಬೇಕಾಗಿ ಬಂತೆಂದರೆ, ಗುಡಿ ಗೋಪುರಗಳ ಮೇಲೆ ಆಗುತ್ತಿರುವ ಅಪಚಾರಗಳನ್ನು ಸರಿಪಡಿಸಲು ಶ್ರಮಿಸುತ್ತಿರುವ ಗಿರೀಶ್ ಭಾರದ್ವಾಜ ಅವರು ಮಾಹಿತಿ ಹಕ್ಕು ಕಾಯಿದೆಯಡಿ ಹಂಪಿ ಪುರಾತತ್ವ ಇಲಾಖೆಗೆ ಗೋಪುರದ ವಿವರಣೆ ಈಚೆಗೆ ಕೇಳಿದ್ದರು. ಅದಕ್ಕೆ ಪುರಾತತ್ವ ಇಲಾಖೆಯು ಇದೇ ಶಾಸನವನ್ನು ಉಲ್ಲೇಖಿಸಿ ‘ಕೃಷ್ಣದೇವರಾಯ ನಿರ್ಮಿಸಿದನು’ ಎಂದು ಉತ್ತರಿಸಿದೆ. ಇಲಾಖೆಯ ಪುಸ್ತಕದಲ್ಲಿ ‘ಪ್ರೋಲಗಂಟಿ ತಿಪ್ಪ ಕಟ್ಟಿರಬಹುದು’ ಎಂದಿದ್ದರೆ, ಈಚೆಗೆ ಇಲಾಖೆ ದೂರದರ್ಶನದಲ್ಲಿ ಪ್ರಸಾರಮಾಡಿದ ಸಾಕ್ಷ್ಯಚಿತ್ರದಲ್ಲಿ ‘ಪ್ರೋಲಗಂಟಿ ತಿಪ್ಪ ಕಟ್ಟಿದನು’ ಎಂದಿದೆ. ಒಂದೇ ಸ್ಮಾರಕಕ್ಕೆ ಮೂರು ವಿಭಿನ್ನ ವಿವರಣೆಗಳು!

ಬ್ರಿಟಿಷರು ಇತಿಹಾಸ ತಿರುಚಿದರು, ಕಮ್ಯುನಿಷ್ಟರು ತಿರುಚಿದರು ಎಂದೆಲ್ಲ ಕೇಳುತ್ತಿರುತ್ತೇವೆ. ತಿರುಚಿವಿಕೆ ಹೇಗೆ ಘಟಿಸುತ್ತದೆ ಎಂಬುದಕ್ಕೆ ಇದೊಂದು ಜ್ವಲಂತ ನಿದರ್ಶನ. (ಪ್ರತಿಕ್ರಿಯಿಸಿ: viramapost@gmail.com)

ಆ ಶಾಸನದ ಇತಿಹಾಸವೇನು?
ಬಿಷ್ಟಪ್ಪಯ್ಯ ಗೋಪುರದ ಹಿಂಬದಿಯಲ್ಲಿರುವ ‘ಹಿರಿಯ ಗೋಪುರವನ್ನು ಕ್ರಿ.ಶ. 1510ರಲ್ಲಿ ಕೃಷ್ಣದೇವರಾಯರು ಜೀರ್ಣೋದ್ಧಾರಗೊಳಿಸಿದರು’ ಎಂದು ಹೇಳುವ ಶಾಸನ ಈ ಮಹಾಗೋಪುರಕ್ಕೆ ಸಂಬಂಧಿಸಿದ್ದಲ್ಲ, ತಿಪ್ಪೆಯಲ್ಲಿ ಭಿನ್ನವಾಗಿ ಬಿದ್ದಿದ್ದನ್ನು ಎಪ್ಪತ್ತರ ದಶಕದ ಕೊನೆಯಲ್ಲಿ ಅಲ್ಲಿ ತಂದು ಹಾಕಿದ್ದೆಮದು ತಿಳಿಯಿತು. ಸರಿ! ಆದರೂ ಅದರಲ್ಲಿನ ಬರಹಕ್ಕಂತೂ ಮೌಲ್ಯ ಇದ್ದೇ ಇದೆ. ಅದನ್ನು ವಿಶ್ಲೇಷಿಸದಿದ್ದರಲ್ಲಿ ಇತಿಹಾಸಕ್ಕೆ ಅಪಚಾರ ಮಾಡಿದಂತೆ. ಈಗ ಮಹಾಗೋಪುರ ಇದ್ದ ಸ್ಥಳ ದಲ್ಲಿಯೇ, ಇಮ್ಮಡಿ ದೇವರಾಯನ ಕಾಲದಲ್ಲಿ ಕ್ರಿ.ಶ. 1422-1446 ನಿರ್ಮಾಣವಾದ ಒಂದು ಚಿಕ್ಕಗೋಪುರವಿತ್ತು.

1509ರಲ್ಲಿ ಪಟ್ಟಾಭಿಷಿಕ್ತರಾದ ಕೃಷ್ಣದೇವರಾಯರು ಅದರ ನೆನಪಿಗಾಗಿ ವಿರೂಪಾಕ್ಷೇಶ್ವರ ಗುಡಿಯ ರಂಗಮಂಟಪವನ್ನು ಮುಂದಿನ ಮೂರಂತಸ್ತಿನ ಗೋಪುರವನ್ನು ನಿರ್ಮಿಸಿ ಮೊದಲಿದ್ದ ಗೋಪುರವನ್ನು ಜೀರ್ಣೋದ್ಧಾರಗೊಳಿಸಿ ಶಾಸನ ಹಾಕಿಸಿದ್ದಾರೆ. ಕೃಷ್ಣದೇವರಾಯರ ಹಿರಿಯರು ಅದನ್ನು ಕಟ್ಟಿದ್ದರಿಂದ ಮತ್ತು ವಯಸ್ಸಿನಲ್ಲಿ ಅದೇ ಎಲ್ಲ ಗೋಪುರಗಳಿಗಿಂತ ಹಿರಿದಾಗಿದ್ದರಿಂದ ಅದನ್ನು ಹಿರಿಗೋಪುರ ಎಂದು ಕರೆದಿದ್ದಾರೆ.

ಸುಮಾರು 1430ರಲ್ಲಿ ನಿರ್ಮಾಣವಾಗಿ 1510ರಲ್ಲಿ ಜೀರ್ಣೋದ್ಧಾರಗೊಂಡ ಈ ಗೋಪುರ ಸಾಮ್ರಾಜ್ಯ ಪತನಾನಂತರದ ಶತ್ರು ದಾಳಿಯಲ್ಲಿ ಸುಟ್ಟು ಹಾಳಾಗಿತ್ತು. 1660ರಲ್ಲಿ ಹಂಪಿಯ ಪುನರುತ್ಥಾನ ಕೈಗೊಂಡ ಗುರು ಬಿಷ್ಟಪ್ಪಯ್ಯನವರು ಭಾಗಶಃ ಹಾಳಾಗಿದ್ದ ರಂಗಮಂಟಪ ಮತ್ತು ರಾಯಗೋಪುರವನ್ನು ಜೀರ್ಣೋದ್ಧಾರಗೊಳಿಸಿದರು. ಮತ್ತು ಮೊದಲಿದ್ದ ಗೋಪುರದ ಸ್ಥಳದಲ್ಲಿಯೇ ಘನಶಿಲ್ಪಿಯಾಗಿದ್ದ ಈ ಯೋಗಿ, ಅಗತ್ಯ ಮತ್ತು ಭದ್ರವಾದ ಅಡಿಪಾಯ ಹಾಕುವಲ್ಲಿಂದ ಆರಂಭಿಸಿ ಏಕಾದಶ ರುದ್ರರ ಸಂಕೇತವಾಗಿ ಹನ್ನೊಮದು ಅಂತಸ್ತುಗಳ ಗೋಪುರ ನಿರ್ಮಿಸಿದರು. ಈಚೆಗೆ ಗೋಪುರದ ಬದಿಯಲ್ಲಿ ಉತ್ಖನನ ನಡೆಸಿದಾಗ ಅಲ್ಲಿ ಹಳೆಯ ಗೋಪುರಗಳ ಸುಟ್ಟ ಇಟ್ಟಿಗೆಗಳು, ಇನ್ನಿತರ ಅವಶೇಷಗಳು ಸಿಕ್ಕವೆಂದು ಪುರಾತತ್ವ ಇಲಾಖೆ ಪತ್ರಿಕೆಗೆ ವರದಿ ನೀಡಿತ್ತು. ಈಗಲೂ ಆ ಸುಟ್ಟ ಇಟ್ಟಿಗೆಗಳನ್ನು ನೋಡಬಹುದು.

ಗೋಪುರದಮ್ಮನಿಗೆ ಸಾಕ್ಷಿ ಗಣಪತಿ
ನಿಮಗೆ ಹಂಪಿಯ ಅಕ್ಕ-ತಂಗಿ ಗುಂಡು, ಬಡವಿ ಲಿಂಗಗಳ ಬಗ್ಗೆ ಗೊತ್ತು. ಗೋಪುರದಮ್ಮ, ಸಾಕ್ಷಿ ಗಣಪತಿ ಬಗ್ಗೆ ತಿಳಿದಿಲ್ಲ ಅಲ್ಲವೇ? ಗೋಪುರವನ್ನು ಹತ್ತತೊಡಗಿದರೆ ಸೀದಾ ಎರಡನೆಯ ಮಹಡಿಗೆ ಹೋಗುತ್ತೀರಿ. ಅದು ನೂರು, ನೂರೈವತ್ತು ಜನರು ಕುಳಿತುಕೊಳ್ಳಬಹುದಾದಂಥ ಕೋಣೆ. ಎದುರು ಬದುರಿನ ಗೋಡೆಗಳಲ್ಲಿ ಗಣಪತಿ-ಗೋಪುರದಮ್ಮನ ಶಿಲ್ಪಗಳು. ಗೋಪುರಕ್ಕಾಗಿ ಪ್ರಾಣಾ ರ್ಪಣೆ ಮಾಡಿದ ತನ್ನ ಪತ್ನಿ ಲಕ್ಷ್ಮಾಮಬೆಯ ಸ್ಮಾರಕವನ್ನು ಅಲ್ಲಿ ಬಿಷ್ಟಪ್ಪಯ್ಯ ನವರೇ ಪ್ರತಿಷ್ಠಾಪಿಸಿದ್ದಾರೆ.

ಶಿವ-ಪಾರ್ವತಿಯರ ಬಳಿಯಲ್ಲಿ ಎಣ್ಣೆಗಿಂಡಿ ಹಿಡಿದು ನಿಂತಿರುವ ಗರ್ಭಿಣಿಯ ಶಿಲ್ಪವದು. ಹಂಪಿಗೆ ಬಂದವರೆಲ್ಲ ಕಡ್ಡಾಯವಾಗಿ ಗೋಪುರದಮ್ಮನನ್ನೂ ಪೂಜೆಸಬೇಕೆಂಬ ನಿಯಮವಿದೆ. ಮತ್ತು ಇವರು ಪೂಜಿಸಿದರು ಎಂಬುದಕ್ಕೆ ಗಣಪತಿ ಸಾಕ್ಷಿ ಹೇಳಬೇಕಂತೆ. ಹೀಗಾಗಿ ಆತನ ಹೆಸರೇ ಸಾಕ್ಷಿ ಗಣಪತಿ.

ಬಿಷ್ಟಪ್ಪಯ್ಯನವರ ಭಕ್ತರೆಲ್ಲ ಈಗಲೂ ಈ ನಿಯಮ ಪಾಲಿಸುತ್ತಾರೆ. ಅಷ್ಟಲ್ಲದೇ ಹಂಪಿ ಸ್ಥಳೀಯರಿಗೂ ಕೂಡ ಗೋಪುರದಮ್ಮನ ಬಗ್ಗೆ ಪಂಪಾಪತಿ, ಪಂಪಾಂಬೆಯರ ಕುರಿತು ಇರುವಷ್ಟೇ ಭಕ್ತಿ, ಶ್ರದ್ಧೆ ನಂಬಿಕೆ. ಬಾಣಂತಿ, ಶಿಶುಗಳ ಕಾಯಿಲೆಗೆ ಗೋಪುರದಮ್ಮ ನಿಗೆ ಹರಕೆ ಹೊತ್ತು ಪೂಜಿಸುವ ನಂಬಿಕೆ ವ್ಯಾಪಕವಾಗಿದೆ. ಆದರೆ ಇದರ ಮಾಹಿತಿ, ಮಹತ್ವದ ಅರಿವಿಲ್ಲದ ಇಲಾಖೆ ಈಗ ಸ್ಥಳೀಯರು ಮೇಲೆ ಹತ್ತಿ ಪೂಜಿಸಲು ನಿರ್ಬಂಧ ವಿಧಿಸಿದ್ದಾರಂತೆ. ದೇವಸ್ಥಾನದ ವತಿಯಿಂದಲೇ ನಡೆಯುತ್ತಿದ್ದ ಪೂಜೆಯೂ ನಿಂತಿದೆ. ನಾನು ಅಧ್ಯಯನಕ್ಕೆಮದು ಮೊದಲ ಸಲ ಹೋದಾಗ ಗೋಪುರದಮ್ಮ ಮಣ್ಣು ಸಿಮೆಂಟುಗಳಲ್ಲಿ ಮುಚ್ಚಿ ಹೋಗಿದ್ದಳು. ಗೋಪುರದಲ್ಲಿ ಬರೆಸಿದ್ದ ಬಿಷ್ಟಪ್ಪಯ್ಯನವರ ಹೆಸರು ಮುಚ್ಚಿ ಹೋಗಿತ್ತು.

ರಾಯಗೋಪುರ ಯಾವುದು?
ಡಾ. ಎಸ್.ಎಲ್. ಭೈರಪ್ಪನವರ ಆವರಣ ಸೇರಿದಂ ಹಲವು ಬರಹಗಳಲ್ಲಿ ವಿಶೇಷವಾಗಿ ಡಾ.ಚಿದಾನಂದಮೂರ್ತಿಯವರ ಬರಹಗಳಲ್ಲಿ ರಾಯಗೋಪುರವನ್ನು ಕೃಷ್ಣದೇವ ರಾಯ ನಿರ್ಮಿಸಿದನು ಎಂದಿರುವುದನ್ನು ನೀವು ಓದಿರಬಹುದು. (ಭೈರಪ್ಪ ನವರಾದರೂ, ಚಿ.ಮೂ, ಅವರ ಪುಸ್ತಕವನ್ನಾಧರಿಸಿಯೇ ಬರೆದದ್ದು) ನಾನು ಮಾಹಿತಿ ಬೆಳಕಿಗೆ ತಂದ ಹೊಸತರಲ್ಲಿ ಹಲವರು ‘ಚಿ.ಮೂ. ಅವರೇ ಕೃಷ್ಣದೇವರಾಯ ನಿರ್ಮಿಸಿದ್ದು ಎಂದು ಹೇಳುವಾಗ ನೀವು ಹೇಗೆ ಬಿಷ್ಪಪ್ಪಯ್ಯ ನಿರ್ಮಿಸಿದ್ದು ಎನ್ನುತ್ತೀರಿ?’ ಎಂದು ನನ್ನನ್ನು ಪ್ರಶ್ನಿಸಿದ್ದೂ ಉಂಟು. ಹೌದು! ರಾಯಗೋಪುರವನ್ನು ನಿರ್ಮಿಸಿದ್ದು ಕೃಷ್ಣದೇವ ರಾಯರೇ. ಸಾಮಾನ್ಯವಾಗಿ ಒಂದು ಕ್ಷೇತ್ರದ ಮುಖ್ಯಗೋಪುರಕ್ಕೆ ರಾಯ / ರಾಜ ಗೋಪುರ ಎಂದು ಕರೆಯುವ ವಾಡಿಕೆ. ಆದರೆ ಹಂಪಿಗೆ ಸಂಬಂಧಿಸಿದಂತೆ, ಹನ್ನೊಂದು ಅಂತಸ್ತಿನ ಮುಖ್ಯ ಗೋಪುರವನ್ನು ‘ಬಿಷ್ಟಪ್ಪಯ್ಯ ಗೋಪುರ’ ಎಂದೂ, ಎರಡನೆಯ ಚಿಕ್ಕ, ಮೂರಂತಸ್ತಿನ ಗೋಪುರವನ್ನು ಕೃಷ್ಣದೇವರಾಯರು ನಿರ್ಮಿಸಿದ್ದರಿಂದ ರಾಯಗೋಪುರ ಎಂದೂ ಕರೆಯುತ್ತಾರೆ, ಆಯಾ ಗೋಪುರಗಳನ್ನು ಆಯಾ ನಿರ್ಮಾಪಕರ ಹೆಸರಿನಲ್ಲಿ.

ಆದರೆ ವಿದ್ವಾಂಸರು ‘ರಾಯಗೋಪುರವನ್ನು ಕೃಷ್ಣದೇರಾಯ ನಿರ್ಮಿಸಿದನು’ ಎಂದಷ್ಟೇ ಹೇಳುತ್ತಾರೆ. ‘ಅಶ್ವತ್ಥಾಮೋ ಹತಃ’ ಎಂಬಂತೆ. ರಾಯಗೋಪುರ ಎಂದರೆ ಚಿಕ್ಕ ಗೋಪುರ ಎಂದು ಎಲ್ಲಿಯು ಸ್ಪಷ್ಟಪಡಿಸುವುದಿಲ್ಲ. (ನಾನು ಚಿ.ಮೂ. ಅವರ ಮನೆಗೆ ಹೋಗಿ ಪುರಾವೆಗಳನ್ನು ತೋರಿಸಿದಾಗ ಸಂಭ್ರಮ ಪಟ್ಟರು. ತಕ್ಷಣ ಮಿಥಿಕ್ ಸೊಸೈಟಿಗೆ ಫೋನಾಯಿಸಿ ನನ್ನ ಉಪನ್ಯಾಸಕ್ಕೆ ಸೂಚಿಸಿದರು, 2008ರಲ್ಲಿ ಅಧ್ಯಕ್ಷತೆ ವಹಿಸಿ ಮುಕ್ತ ಕಂಠದಿಂದ ಶ್ಲಾಘಿಸಿದರು. ಅವರಿಗೆ ಹೃತ್ಪೂರ್ವಕ ವಂದನೆ ಗಳು) ಒಮ್ಮೆ ಚಿ.ಮೂ. ಅವರನ್ನು ‘ನಿಮ್ಮ ಬರಹ ಗೊಂದಲ ಮೂಡಿಸುತ್ತದೆ, ದಯವಿಟ್ಟು ರಾಯ ಗೋಪುರ ಎಂದರೆ ಚಿಕ್ಕಗೋಪುರ ಎಂದು ಸ್ಪಷ್ಟಪಡಿಸಬೇಕು’ ಎಂದು ಕೋರಿಕೊಂಡೆ.

2012ರಲ್ಲಿ ಒಮ್ಮೆ ತಾವೇ ನನಗೆ ಕರೆ ಮಾಡಿ ವಿಳಾಸ ಪಡೆದು ತಮ್ಮ ‘ಹೊಸ ಬೆಳಕಿನ ಹಂಪಿ’ ಪುಸ್ತಕ ಕಳಿಸಿದರು. ಆದರ ಶಿರೋ ನಾಮೆಯೇ ನನಗೆ ರೋಮಾಂಚನ ಮೂಡಿಸಿತು. ನನ್ನ ಮಾಹಿತಿಯನ್ನೂ ಸೇರಿಸಿರಬಹುದೆಂಬ ಭಾವನೆಯಿಂದ. ಆದರೆ ಇಲ್ಲ! ಅದರಲ್ಲಿ ಈ ‘ವಿರೂಪಾಕ್ಷ ದೇವಾಲಯದ ಗೋಪುರವನ್ನು ಕೃಷ್ಣದೇವರಾಯ ಕಟ್ಟಿಸಿದನು’ ಎಂದು ಹೇಳಿದ್ದಾರೆ, ರಾಯ ಕೈಬಿಟ್ಟು.