Wednesday, 11th December 2024

ಆಪತ್ತಿಗಾಗುವರೇ ಆಪತ್ಬಾಂಧವರು

ಗೌರಿ ಚಂದ್ರಕೇಸರಿ ಶಿವಮೊಗ್ಗ

ಮದುವೆ ಎಂದರೆ ಅದೊಂದು ದೊಡ್ಡ ಗುರುತರ ಕಾರ್ಯ. ಇಂತಹ ಶುಭ ಕಾರ್ಯಗಳಲ್ಲಿ ಒಮ್ಮೊವ್ಮೆು ಕೊನೆಯ ಕ್ಷಣದಲ್ಲಿ ಏರುಪೇರು ಗಳಾಗುವುದುಂಟು. ಆಗ ಸಹಾಯಕ್ಕೆ ಬಂದು, ಮದುವೆ ಸುಸೂತ್ರವಾಗಿ ನಡೆಯುವಂತೆ ಮಾಡುವ ಆಪದ್ಬಾಂಧವರೇ ಮುಂದಿನ ದಿನಗಳ ಕುರಿತು ಆಶಾಭಾವನೆಯನ್ನು ಮೂಡಿಸುತ್ತಾರೆ.

ಹುಡುಗ ಅಥವಾ ಹುಡುಗಿ ಮದುವೆಯ ವಯಸ್ಸಿಗೆ ಕಾಲಿಡುತ್ತಿದ್ದಂತೆಯೇ ಹೆತ್ತವರ ಹೆಗಲನ್ನೇರುತ್ತದೆ ಹೊಸತೊಂದು ಜವಾಬ್ದಾರಿ. ಸೂಕ್ತವಾದ ಸಂಬಂಧವನ್ನು ಹುಡುಕಿ, ಅವರೊಡನೆ ಮಾತುಕತೆಯಾಡಿ ವಿವಾಹ ಮಾಡುವ ಗುರುತರ ಜವಾಬ್ದಾರಿಯು ಪೋಷಕರ ಮೇಲೆ ಬೀಳುತ್ತದೆ. ತಮ್ಮ ಮಕ್ಕಳ ವಿವರಗಳನ್ನು ಆಸಕ್ತರಿಗೆ ನೀಡಿ ಅಥವಾ ವೆಬ್‌ಸೈಟ್‌ನಲ್ಲಿ ಪ್ರಚುರಪಡಿಸಿ, ಸರಿಹೊಂದುವ ಸಂಬಂಧವನ್ನು ಹುಡುಕುವ ಕೆಲಸ ಆರಂಭ.

ಬಂಧುಗಳೋ, ನೆರೆ-ಹೊರೆಯವರೋ ಅಥವಾ ಸ್ನೇಹಿತರ ನೆರವಿನಿಂದ ಮದುವೆ ಗೊತ್ತಾಗುತ್ತಿದ್ದಂತೆಯೇ ಹೆತ್ತವರಿಗೆ ಸಂತೋಷ ಒಂದು ಕಡೆ ಯಾದರೆ ಮತ್ತೊಂದೆಡೆ ವಿವಾಹ ಸುಸೂತ್ರವಾಗಿ ನಡೆದರೆ ಸಾಕು ಎಂಬ ಕಾಳಜಿ. ಸದಾ ಒಂದು ಬಗೆಯ ಒತ್ತಡ, ಧಾವಂತ. ಬೀಗರು ಮದುವೆಯಲ್ಲಿ ಏನಾದರೂ ಕೊಸರು ತೆಗೆದರೆ? ಎಂಬ ದುಗುಡ. ಯಾವುದೇ ಕೊಂಕಿಲ್ಲದೇ ಮದುವೆ ನಡೆದರೆ ಹೆತ್ತವರಲ್ಲಿ ಒಂದು ನಿರಾಳ ಭಾವ.

ಹೊಸ ರೀತಿಯ ಅಳುಕು

ಇತ್ತೀಚಿನ ಮದುವೆಗಳಲ್ಲಿ ಮದುವೆ ಮುಗಿದು ವಧು- ವರರು ಒಂದಾಗುವವರೆಗೂ ಹೆತ್ತವರಲ್ಲಿ ಒಂದು ಹೊಸ ರೀತಿಯ ಅಳುಕು ಮನೆ ಮಾಡಿರುತ್ತದೆ. ಹುಡುಗನಿಗೋ ಅಥವಾ ಹುಡುಗಿಗೋ ಬೇಡವಾದ ಮದುವೆಯಾಗಿದ್ದಲ್ಲಿ ಅಥವಾ ಒತ್ತಾಯದ ಮದುವೆ ಆಗಿದ್ದಲ್ಲಿ ಯಾವ ವೇಳೆಯಲ್ಲಿ ಏನಾಗು ತ್ತದೆ ಎಂದು ಹೇಳಲಾಗದು. ಅದೇನೋ ಕಾರಣದಿಂದ ಕೊನೆಯ ತನಕ ಮೌನವಾಗಿದ್ದುಕೊಂಡು, ಏನಾದೀತು ಎಂದು ನಿರೀಕ್ಷಿಸುತ್ತಾರೋ ಏನೋ!

ಮದುವೆಯ ಹಿಂದಿನ ದಿನವೋ ಇಲ್ಲವೇ ಮದುವೆಯ ದಿನದಂದು ಇಷ್ಟವಿಲ್ಲದ ವರ ಅಥವಾ ಮದುವೆಯ ಮಂಟಪದಿಂದ ಮಾಯವಾಗುವ
ಸುದ್ದಿ ಅಲ್ಲಲ್ಲಿ ಕೇಳಿರುವುದುಂಟು. ಇಂತಹ ನಾಟಕೀಯ ಅಥವಾ ಸಿನಿಮೀಯ ಸನ್ನಿವೇಶಗಳಿಗೆ ಸಿನಿಮಾಗಳ ಸ್ಫೂರ್ತಿ, ಪ್ರೋತ್ಸಾಹ, ಪ್ರೇರಣೆ ದೊರೆಯುವುದೂ ನಿಜ. ತಾವು ಇಷ್ಟಪಟ್ಟವರೊಂದಿಗೇ ತಮ್ಮ ಮುಂದಿನ ಬದುಕು ಎಂಬ ಧೃಢ ನಿರ್ಧಾರ ಹೊಂದಿದವರು ಇಂತಹ ನಿರ್ಧಾರವನ್ನು
ತೆಗೆದುಕೊಳ್ಳುವುದು ಸಹಜ.

ಇಂತಹ ಪರಿಸ್ಥಿತಿ ನಿರ್ಮಾಣವಾದರೆ ಹೆತ್ತವರು ಅಕ್ಷರಷಃ ಭೂಮಿಗಿಳಿದು ಹೋಗುತ್ತಾರೆ. ಅವಮಾನ, ಜನ ನಿಂದನೆಯನ್ನು ಅವರು ಎದುರಿಸ ಬೇಕಾಗುತ್ತದೆ. ಕೆಲವೊಮ್ಮೆ ಆದ ಆಘಾತವನ್ನು ತಡೆದುಕೊಳ್ಳಲಾಗದೇ ಬದುಕಿನಲ್ಲಿ ವಿವರಲಿಸಲಾಗದ ಗುರುತರ ನೋವುಗಳೂ ಸಂಭವಿಸಬಹುದು. ಮುಂದೇನು ಎಂದು ಹೆತ್ತವರು ತಲೆಯ ಮೇಲೆ ಕೈಹೊತ್ತು ಕುಳಿತಾಗ ಅರ್ಧಕ್ಕೆ ನಿಂತ ಮದುವೆಗಳು ಕೆಲವೊಮ್ಮೆೆ ಸುಸೂತ್ರವಾಗಿ ನಡೆದು ಹೋಗಿ ಬಿಡುತ್ತವೆ.

ಯಾರೋ ಒಬ್ಬ, ಒಬ್ಬಳು ಆಪತ್ಪಾಂಧವರಂತೆ ಬಂದು ಸಕಲ ಸಿದ್ಧಗೊಂಡಿರುವ ಮಂಟಪಕ್ಕೆ ನಡೆದು ಒಂಟಿಯಾದವರಿಗೆ ಜಂಟಿಯಾಗಿ ಮದುವೆ ನಡೆಯಲು ಕಾರಣರಾಗುತ್ತಾರೆ. ಇಂತಹ ಆಪತ್ಭಾಂಧವರು ಸಂಬಂಧಿಗಳೊ, ಪರಿಚಿತರೋ, ಕೆಲವೊಮ್ಮೆ ಅಪರಿಚಿತರೂ ಆಗಿರಬಹುದು. ಇದನ್ನು ಸಹ ಸಿನಿಮೀಯ ಎಂದೇ ಹೇಳಬಹುದು.

ತನ್ನ ಬಾಳ ಸಂಗಾತಿಯಾಗಬೇಕಾದವರನ್ನು ಅಳೆದು ಸುರಿದು ಆಯ್ಕೆ ಮಾಡಿಕೊಳ್ಳುವ ಕಾಲವಿದು. ರೂಪ, ವಿದ್ಯೆ, ಸಂಪತ್ತು, ಒಳ್ಳೆಯ ಗುಣ ಗಳೆಲ್ಲವೂ ಮೇಳೈಸಿರುವವರು ಸಿಗುವವರೆಗೂ ಸಂಗಾತಿಗಳನ್ನು ಅನ್ವೇಷಿಸುತ್ತಲೇ ಇರುತ್ತಾರೆ. ಎಲ್ಲವೂ ಸರಿಯಾಗಿದ್ದರೂ ಮದುವೆಯಾಗಿ ಹಳತಾರಕ್ಕೆ ಬಿದ್ದ ಮೇಲೆ ಸಂಗಾತಿಯಲ್ಲಿ ಅವಗುಣಗಳನ್ನು ಹುಡುಕುವವರೂ ಇದ್ದಾರೆ. ಆದರೆ ಯಾರದೋ ಮದುವೆಗೆಂದು ಹೋಗಿ ಅಲ್ಲಿ ನಡೆದ ಪ್ರಮಾದ ವನ್ನು ಸರಿಪಡಿಸಲು ಮುಂದೆ ಬರುವ ವ್ಯಕ್ತಿಗಳ ಗುಣವನ್ನು ಮೆಚ್ಚಲೇ ಬೇಕು. ಜೀವನದುದ್ದಕ್ಕೂ ಬದುಕನ್ನು ಹಂಚಿಕೊಳ್ಳಬೇಕಾದ ತನ್ನ ಸಂಗಾತಿ ಹಾಗಿರಬೇಕು, ಹೀಗಿರಬೇಕು ಎಂದು ಯೋಚಿಸದೇ ತತ್ ಕ್ಷಣದಲ್ಲಿಯೇ ಬಾಳು ಕೊಡಲು ಮುಂದಾಗುವವರು ಆದರ್ಶ ವ್ಯಕ್ತಿಗಳೇ ಸರಿ.

ವಧು ಇಲ್ಲವೇ ವರ ಮದುವೆ ಮಂಟಪಕ್ಕೆ ಬೆನ್ನು ತೋರಿಸಿ ಹೊರ ನಡೆದಾಗ ಆ ಮದುವೆ ಮುರಿದು ಬೀಳುತ್ತದೆ. ಆಗ ಎರಡೂ ಮನೆಯವರಿಗೂ ಆಘಾತ. ಆರ್ಥಿಕ ನಷ್ಟದ ಜತೆಗೆ ಮನಸುಗಳೂ ಒಡೆದು ಹೋಗುತ್ತವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ತಮ್ಮ ಒಂದು ನಿರ್ಧಾರದ ಮೂಲಕ ಮತ್ತೆ
ಸಂಭ್ರಮವನ್ನು ಮೂಡಿಸುತ್ತಾರಲ್ಲ ಕೆಲವರು, ಇವರನ್ನು ನೋಡಿಯೇ ಹೇಳಿರಬಹುದೇನೋ, ‘ಆಪತ್ತಿಗಾದವನೇನೆಂಟ’ ಎಂದು. ಅರ್ಧಕ್ಕೇ ನಿಂತ ಮದುವೆಗಳೆಲ್ಲ ಸುಖಾಂತ್ಯಗೊಳ್ಳುತ್ತವೆ ಎಂದು ಹೇಳಲಾಗದು.

ಮದುವೆ ನಿಂತು ಹೋಗಿ ಮದುವೆ ಊಟಕ್ಕೆ ಕಲ್ಲು ಬಿತ್ತು ಎಂದು ಹಳಹಳಿಸುವವರು ಸಹ ಇರುವ ಈ ಜಗತ್ತಿನಲ್ಲಿ, ಪರಿಚಿತರ ಒಳಿತನ್ನು ಯೋಚಿಸುವ, ಅವರ ಕಷ್ಟಕ್ಕೆ ಮಿಡಿವ ಹೃದಯಗಳು ಅಲ್ಲಿ ಉಪಸ್ಥಿತವಿದ್ದಲ್ಲಿ ಮಾತ್ರ ಇಂತಹ ಒಳ್ಳೆಯ ಘಟನೆಗಳು ನಡೆಯುತ್ತವೆ. ಅಮವಾಸ್ಯೆಯ ಆಕಾಶದಲ್ಲಿ ಬೆಳಕು ಬೀರುವ ನಕ್ಷತ್ರಗಳಂತೆ ಅಲ್ಲೊಬ್ಬರು ಇಲ್ಲೊಬ್ಬರು ಇಂತಹ ಆದರ್ಶವಾದಿಗಳು ಕಂಡು ಬರುತ್ತಾರೆ. ಅವರ ಸಹಕಾರ, ಸಹಾಯ, ಒತ್ತಾಸೆ, ಬೆಂಬಲ, ಪ್ರೋತ್ಸಾಹವೇ ಈ ಸಮಾಜದಲ್ಲಿ ಒಳ್ಳೆಯತನ ಇನ್ನೂ ಉಳಿದುಕೊಂಡಿರುವುದಕ್ಕೆ ಪುರಾವೆ.