Sunday, 3rd November 2024

ಕೃತಜ್ಞತೆ ಎಂಬ ನಮ್ರ ಭಾವ

ಜಯಶ್ರೀ ಕಾಲ್ಕುಂದ್ರಿ

ಬಡ ವಿದ್ಯಾರ್ಥಿಯೊಬ್ಬ ವಿದ್ಯಾಭ್ಯಾಸದ ಖರ್ಚಿಗಾಗಿ, ತನ್ನ ಮನೆಯ ಹತ್ತಿರದ ಮನೆಗಳಲ್ಲಿ ಚಿಕ್ಕಪುಟ್ಟ ಕೆಲಸಗಳನ್ನು ಮಾಡುತ್ತಿದ್ದ. ಅವರು ಕೊಡುತ್ತಿದ್ದ ಕಾಸಿನಲ್ಲಿ ಶಾಲೆಯ ಫೀಸ್ ಕಟ್ಟುತ್ತಿದ್ದ.

ಸಹಪಾಠಿಗಳಿಂದ ಎರವಲು ತಂದ ಪುಸ್ತಕಗಳನ್ನು, ರಾತ್ರಿ ಬೀದಿ ದೀಪದಲ್ಲಿ ಓದಿ ಮರಳಿಸುತ್ತಿದ್ದ. ಆತ ಕೆಲಸ ಮಾಡುತ್ತಿದ್ದ
ಮನೆಯವರು ಕೊಡುತ್ತಿದ್ದ ತಿಂಡಿ, ಬಟ್ಟೆಗಳೇ ಅವನ ಬದುಕಿಗೆ ಆಧಾರವಾಗಿದ್ದವು. ಹೀಗಿರುವಾಗ, ಚಳಿಗಾಲದ ಒಂದು ದಿನ, ಗಣ್ಯರ ಮನೆಯಲ್ಲಿ ಕೆಲಸ ಮಾಡುವ ಪ್ರಮೇಯ ಎದುರಾಯಿತು.

ಆ ದಿನ ಬೆಳಿಗ್ಗೆಯಿಂದ ಏನೂ ತಿಂದಿರಲಿಲ್ಲ. ಕೈಯಲ್ಲಿ ಕಾಸೂ ಇರಲಿಲ್ಲ. ಕೆಲಸ ಮಾಡುತ್ತಿರುವಾಗ ಬವಳಿ ಬಂದಂತಾಗಿ ಅವರ ಮನೆಯ ಅಂಗಳದಲ್ಲಿ ಕುಳಿತು ವಿಶ್ರಮಿಸಿದ. ಮನೆಯೊಡತಿಯ ಬಳಿ ತಿನ್ನಲು ಏನಾದರೂ ಕೇಳಬೇಕು ಎಂದು ನಿಶ್ಚಯಿಸಿದ.
ಮನೆಯೊಡತಿ ಆತನ ಕೆಲಸಕ್ಕೆ ಕೂಲಿ ಕೊಡಲು ಹೊರಗೆ ಬಂದಾಗ, ಸ್ವಾಭಿಮಾನಿಯಾದ ಹುಡುಗನಿಗೆ ಬೇಡಿ ಕೇಳಲು ಆಗಲಿಲ್ಲ.

ಪ್ರಯಾಸದಿಂದ, ‘ಅಮ್ಮಾ, ಒಂದು ಲೋಟಾ ನೀರು ಸಿಗಬಹುದೇ’ ಎಂದು ಕೇಳಿದ. ಹುಡುಗನ ಮುಖವನ್ನು ನೋಡಿದ ಮನೆ ಯೊಡತಿ, ಈ ಹುಡುಗ ಹಸಿದಿರಬೇಕೆಂದು ಗ್ರಹಿಸಿ, ಕೆಲವೇ ನಿಮಿಷದಲ್ಲಿ ತಿಂಡಿ ಮತ್ತು ಒಂದು ಕಪ್ ಹಾಲು ತಂದು ಅವನ ಮುಂದಿರಿಸಿ, ‘ಮಕ್ಕಳು ಹಸಿದುಕೊಂಡು ಶಾಲೆಗೆ ಹೋಗಬಾರದು’ ಎಂದಳು. ಆತ ತಿಂಡಿ ತಿಂದು ಸುಧಾರಿಸಿಕೊಂಡ.

ಆ ಮನೆಯೊಡತಿ ಆತನ ಬೆನ್ನು ತಟ್ಟಿ, ‘ಮಗೂ, ನಿನ್ನ ಹೆಸರನ್ನು ತಿಳಿಯಬಹುದೇ?’ ಎಂದಳು. ಅದಕ್ಕುತ್ತರವಾಗಿ ಆ ಹುಡುಗ, ‘ನನ್ನ ಹೆಸರು, ಹಾರ್ವರ್ಡ್ ಕೆಲ್ಲಿ, ನಿಮ್ಮ ಉಪಕಾರಕ್ಕೆ ಪ್ರತಿಯಾಗಿ, ನಾನು ಏನು ಮಾಡಲಿ?’ ಎಂದು ಕೇಳಿದ. ಮನೆಯೊಡತಿ ಪ್ರತ್ಯುತ್ತರ ನೀಡುತ್ತಾ, ‘ನಿನ್ನ ಗುಣ ಮತ್ತು ನಡತೆಗಳೇ ನಮಗೆ ಸಾಕು. ಉತ್ತಮ ಗುಣವಂತನಾಗಿ ಜೀವನದಲ್ಲಿ ಮುಂದುವರಿ. ಬೇರೇನೂ ನೀನು ಕೊಡ ಬೇಕಿಲ್ಲ’ ಎಂದಳು. ಮನೆಯೊಡತಿಯ ಮಮತೆಗೆ ತಲೆಬಾಗಿದ ಹಾರ್ವರ್ಡ್ ಕೆಲ್ಲಿ ‘ತಾಯಿ, ಕೃತಜ್ಞತೆಗಳು’ ಎಂದು ಹೊರಟುಹೋದ.

ವರ್ಷಗಳು ಸರಿದು ಹೋದಾಗ, ಆ ಮನೆಯೊಡತಿಗೆ ತೀವ್ರ ಅನಾರೋಗ್ಯವುಂಟಾಗಿ ಆಸ್ಪತ್ರೆಗೆ ದಾಖಲಾದಳು. ತಿಂಗಳುಗಳ ವರೆಗೂ ಶುಶ್ರೂಶೆ ನೀಡಿದರೂ ಊರಿನ ವೈದ್ಯರಿಂದ ಆಕೆಯ ಆರೋಗ್ಯ ಸುಧಾರಿಸಲಿಲ್ಲವಾದ್ದರಿಂದ, ಆಕೆಯ ದಯನೀಯ ಸ್ಥಿತಿಯನ್ನು ಕಂಡು ಪರಿಣಿತ ವೈದ್ಯರನ್ನು ಕರೆಸಿದರು. ತನ್ನ ಪರಿಶ್ರಮದಿಂದಾಗಿ ಪರಿಣಿತ ವೈದ್ಯರಾದ ಹಾರ್ವರ್ಡ್ ಕೆಲ್ಲಿ, ರೋಗಿಯನ್ನು ಕಾಣುತ್ತಿದ್ದಂತೆಯೇ ಆಕೆಯನ್ನು ಗುರುತಿಸಿದರು. ಹಗಲು-ರಾತ್ರಿ ಎನ್ನದೆ, ಆಕೆಯ ಶುಶ್ರೂಶೆ ಮಾಡಿ, ಸಾವಿನ ದವಡೆಯಿಂದ
ಆಕೆಯನ್ನು ಪಾರು ಮಾಡಿದರು.

‘ಪರಿಣಿತ ವೈದ್ಯರ ಶುಲ್ಕ ಎಷ್ಟಾಗಿರಬಹುದು ನನ್ನಿಂದ ಸಂದಾಯ ಮಾಡಲಾಗುವದೇ’ಎಂದು ಯೋಚಿಸುತ್ತಾ, ನಡುಗುವ ಕೈಗಳಿಂದಲೇ ಆಸ್ಪತ್ರೆಯ ಬಿಲ್ ಕೈಗೆತ್ತಿಕೊಂಡಾಗ ಮನೆಯೊಡತಿಯ ಕಣ್ಣಲ್ಲಿ ಕಂಬನಿ ಜಿನುಗಿತು. ಅದರಲ್ಲಿ ‘ಒಂದು ಲೋಟಾ ಹಾಲಿನ ಮೂಲಕ ವೈದ್ಯರ ಶುಲ್ಕ ಸಂದಾಯವಾಗಿದೆ‘ ಎಂದು ಬರೆದಿತ್ತು. ಇಂತಹ ಕೃತಜ್ಞತೆ ಪರಸ್ಪರ ಸೌಹಾರ್ದತೆಯನ್ನು ಬೆಳೆಸುತ್ತದೆ.

ಜೀವನದಲ್ಲಿ, ನಾವು ಬೇರೆಯವರಿಗೆ ಎಷ್ಟೋ ಸಹಾಯಗಳನ್ನು ಮಾಡಿದ್ದರೂ, ನಮಗೆ ಸಹಾಯ ಮಾಡಿದವರಿಗೆ ಕೃತಜ್ಞತೆ ಸಲ್ಲಿಸಿದರೆ, ನಮ್ಮ ವ್ಯಕ್ತಿತ್ವ ಶುದ್ಧವಾಗುತ್ತದೆ. ಕೃತಜ್ಞತಾ ಭಾವದಿಂದ ಭಾವನೆಗಳು ಹಗುರಾಗುತ್ತವೆ. ಬಂಧ ಗಟ್ಟಿಯಾಗುತ್ತದೆ. ಈ ಜಗತ್ತಿನಲ್ಲಿರುವ ಎಲ್ಲಾ ಜೀವಿಗಳೂ ನೆಮ್ಮದಿಯ ಬದುಕನ್ನು ಜೀವಿಸುವಂತಾಗಲಿ, ಎಂದು ಪ್ರಾರ್ಥಿಸುತ್ತಾ ಕೃತಜ್ಞತೆ ಸಲ್ಲಿಸು ವಂತಾಗಬೇಕು. ಪರಿಸರದ ಕೊಡುಗೆಗಳೆನಿಸಿದ ನೆಲ, ಜಲ, ಆಕಾಶ, ಗಾಳಿಗಳನ್ನು ನೀಡಿದ ಪ್ರಕೃತಿ ಮಾತೆಗೆ ಕೃತಜ್ಞತೆ ಸಲ್ಲಿಸುತ್ತಾ ಬಳಸಿಕೊಳ್ಳಬೇಕು. ಪರಿಸರ ದೊಂದಿಗೆ ಒಂದಾಗುವ ಭಾವವೂ ಕೃತಜ್ಞತೆಯ ಭಾವವೇ.

ಕೃತಜ್ಞತೆಯೆಂಬ ಭಾವನೆ, ಹೃದಯದಿಂದ ಹೃದಯಕ್ಕೆ ಸ್ಪಂದಿಸುವ ನಮ್ರ ಭಾವನೆ ಎನಿಸಿದೆ. ಅದಕ್ಕೆಂದೇ ಅಮೇರಿಕದ ಹಿಂದಿನ ಅಧ್ಯಕ್ಷರಾದ, ದಿ. ಜಾನ್ ಎಫ್ ಕೆನಡಿ ಅವರು, ನಮ್ಮ ಜೀವನವನ್ನು ಸುಖಮಯವಾಗಿಸಿದ ಜನರಿಗೆ ಕೃತಜ್ಞತೆ ಅರ್ಪಿಸಲು ಕೆಲ ಸಮಯವನ್ನಾದರೂ ವಿನಿಯೋಗಿಸಬೇಕು ಎಂದು ಹೇಳಿದ್ದಾರೆ.