Friday, 13th December 2024

ನಾಲ್ಕು ಲಕ್ಷ ಫೋಟೋ ಸಂಗ್ರಾಹಕ

ರವಿ ಮಡೋಡಿ ಬೆಂಗಳೂರು

ಸುಮಾರು 40 ವರುಷಗಳಿಂದ ನಾಲ್ಕು ಲಕ್ಷಕ್ಕೂ ಹೆಚ್ಚು ಯಕ್ಷಗಾನ ಸಂಬಂಧಿ ಫೋಟೊಗಳನ್ನು ಸಂಗ್ರಹಿಸಿ ಯಕ್ಷಗಾನ ಕ್ಷೇತ್ರಕ್ಕೆ ವಿಶಿಷ್ಟ ದಾಖಲೆಯನ್ನು ಒದಗಿಸಿದ ಕಲಾಭಿಮಾನಿಯೊಬ್ಬರಿದ್ದಾರೆ. ಅವರೇ ಉಡುಪಿ ಜಿಲ್ಲೆಯ ಬಡಾ ಎರ್ಮಾಳಿನ ಮನೋಹರ್ ಕುಂದರ್.

ಮನೋಹರ್ ಕುಂದರ್ ಅವರಿಗೆ ಬಾಲ್ಯದಿಂದಲೂ ಯಕ್ಷಗಾನವೆಂದರೆ ಆಸಕ್ತಿ. ಬಣ್ಣ ಹಚ್ಚಿ ಕಲಾವಿದನೆನಿಸಿಕೊಳ್ಳುವ ಆಸೆ ಯನ್ನು ಹೊಂದಿದ್ದು, ಒಂದೆರಡು ವೇಷಕ್ಕೆ ಕಾರಣಾಂತರದಿಂದ ನಿಲ್ಲಿಸಿದ್ದರು. ಆದರೆ ಕಲೆಯ ಬಗೆಗಿನ ಸೆಳೆತ ಅವರನ್ನು ಬಿಡಲಿಲ್ಲ.

ಯಕ್ಷಗಾನದ ಪಾತ್ರ ವೈವಿಧ್ಯತೆ, ವೇಷಗಾರಿಕೆ, ಮುಖವರ್ಣಿಕೆ, ನೃತ್ಯ/ನೃತ್ತ ಭಂಗಿ ಇತ್ಯಾಾದಿ ವಿಚಾರಗಳನ್ನು ಛಾಯಾಗ್ರಹಣದ ಮೂಲಕ ದಾಖಲಿಸುವ ವಿನೂತನ ಪ್ರಯತ್ನವನ್ನು ಮಾಡಿದರು. ಆದರೆ ಅವರ ಪ್ರಯತ್ನ ಅಷ್ಟು ಸರಳ ವಾಗಿರಲಿಲ್ಲ. ವೃತ್ತಿಪರ ಛಾಯಾಗ್ರಾಹಕರ ಮೂಲಕ ಚಿತ್ರಗಳನ್ನು ತೆಗೆಸಿದರೂ ಅದು ತಮ್ಮ ನಿರೀಕ್ಷೆಯಂತೆ ಬಾರದೆ ಹಣ ವ್ಯರ್ಥವಾಗಿತ್ತು. ಸ್ವತಃ ಅವರೇ ಕ್ಯಾಮೆರಾವೊಂದನ್ನು ಖರಿದೀಸಿ, ತಮ್ಮ ಇಚ್ಛೆಯ ಫೋಟೊಗಳನ್ನು ತೆಗೆಯುತ್ತ ಸಾಗಿದರು. ಇಂದು ಅವರ ಸಂಗ್ರಹದಲ್ಲಿ ಪ್ರಿಂಟ್ ಆಗಿರುವ ನಾಲ್ಕು ಲಕ್ಷ ಫೋಟೊಗಳು ಇವೆ!

7-8 ಶತಮಾನಗಳ ಇತಿಹಾಸವಿರುವ ಯಕ್ಷಗಾನದಲ್ಲಿ ಕಳೆದ ಒಂದು ಶತಮಾನದಲ್ಲಿ ನಡೆದ ಬದಲಾವಣೆಯು ಸಂಶೋ
ಧನೆಯ ವಿಷಯವಾಗಿದೆ. ಈ ನಿಟ್ಟಿನಲ್ಲಿ ಕುಂದರ್ ಅವರ ಸಂಗ್ರಹದ ಯಕ್ಷಚಿತ್ರಗಳು ಸಂಶೋಧನೆಗೆ ದಾಖಲೆಯನ್ನು ಒದಗಿಸು ತ್ತವೆ. ಅವರ ಛಾಯಾಕೃತಿಗಳಲ್ಲಿ ಕಲಾತ್ಮಕತೆಗಿಂತ ಹೆಚ್ಚು ಯಕ್ಷಗಾನದ ಸೂಕ್ಷ್ಮ ವಿಷಯಗಳನ್ನು ದಾಖಲಿಸುವ ಪ್ರಯತ್ನವನ್ನು ಮಾಡಿರುವುದು ಇದಕ್ಕೆ ಪೂರಕವೆನಿಸುತ್ತವೆ.

ಪಾತ್ರಗಳ ನಿಲುವು, ಹಸ್ತಾಭಿನಯ, ಮುಖವರ್ಣಿಕೆ, ಹುಬ್ಬು, ನಾಮಗಳು, ಮುದ್ರೆಗಳು, ಪದ್ಧತಿಗಳು, ಮೀಸೆ, ಗಡ್ಡ ಇತ್ಯಾಾದಿಗಳು ಯಕ್ಷಗಾನ ಪರಂಪರೆಯ ಕ್ರಮಗಳ ಬಗ್ಗೆ ಸವಿಸ್ತಾರ ವಾದ ಮಾಹಿತಿಯನ್ನು ಒದಗಿಸುತ್ತವೆ. ಸೂಕ್ಷ್ಮಗ್ರಾಹಿ ಛಾಯಾಚಿತ್ರಗ್ರಾಹಕ ಯಕ್ಷಗಾನದಲ್ಲಿ ಹಲವು ಮಟ್ಟು, ತಿಟ್ಟುಗಳಿವೆ. ಪ್ರತಿಯೊಂದರಲ್ಲೂ ಬೇರೆಯಾದ ಆಹಾರ್ಯ ಪದ್ಧತಿಗಳು, ನೂರಾರು ಪಾತ್ರ ವೈವಿಧ್ಯತೆಗಳು, ಹಲವು ಬಗೆಯ ವೇಷ ಕ್ರಮಗಳು ಇವೆ.

ಕುಂದರ್ ಒಂದು ವಿಷಯಕ್ಕೆ ಮಾತ್ರ ತಮ್ಮನ್ನು ಸಿಮೀತವಾಗಿಸಿಕೊಳ್ಳದೇ ಸಮಗ್ರವಾದ ಯಕ್ಷಗಾನವನ್ನು ಛಾಯಾಚಿತ್ರಗಳ ಮೂಲಕ ದಾಖಲಿಸುವ ಪ್ರಯತ್ನವನ್ನು ಮಾಡಿದ್ದಾರೆ. ಸ್ವತಃ ತಾಳಮದ್ದಲೆಯ ಅರ್ಥಧಾರಿ, ಪ್ರವಚನಕಾರರು ಆಗಿರುವ ಕುಂದರ್ ಅವರು ಇಲ್ಲಿ ಚಿತ್ರಗಳನ್ನು ಮಾತ್ರ ತೆಗೆಯದೇ ಅದರ ಅಂತಃಸತ್ವವನ್ನು, ಸೂಕ್ಷ್ಮವನ್ನು ಅರಿಯುವ ಪ್ರಯತ್ನ ವನ್ನು ಮಾಡಿದ್ದಾರೆ.

ತಮ್ಮ ಸಂಗ್ರಹದ ಚಿತ್ರಗಳ ವೈಶಿಷ್ಟ್ಯ ಏನು, ಪಾತ್ರಧಾರಿ/ಗಳು ಯಾರು? ಸಂದರ್ಭ ಯಾವುದು ಇತ್ಯಾದಿಗಳ ಕುಂದರ್ ಬಗ್ಗೆ ವಿವರಿಸಬಲ್ಲರು. ಯಕ್ಷಗಾನದ ಯಾವುದೇ ಕಮ್ಮಟವಿರಲಿ, ಕಾರ್ಯಗಾರವಿರಲಿ ಅಲ್ಲಿಗೆ ಹೋಗಿ ಅಲ್ಲಿನ ವಿಚಾರಗಳನ್ನು ಟಿಪ್ಪಣಿ, ಟೇಪ್ ರೆಕಾರ್ಡರ್‌ಗಳಲ್ಲಿ ದಾಖಲಿಸುತ್ತಾರೆ. ಹಾಗಾಗಿಯೇ ಅವರ ಸಂಗ್ರಹದಲ್ಲಿ ಚಿತ್ರಗಳ ಜೊತೆಗೆ ನೂರಾರು ಟಿಪ್ಪಣಿ ಯನ್ನು ಮಾಡಿಕೊಂಡ ಪುಸ್ತಕಗಳು ಹಾಗೂ ಧ್ವನಿ ಮುದ್ರಿಕೆಗಳು ಇವೆ. ಜೊತೆಗೆ ಹಳೆಯ ಯಕ್ಷಗಾನದ ಫೋಟೊಗಳನ್ನು(1886ರ ಯಕ್ಷಗಾನದ ಫೋಟೊ ಇದೆ), ಪುಸ್ತಕಗಳನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ.

ಕುಂದರ್ ಅವರ ಛಾಯಚಿತ್ರಗಳ ಬಗ್ಗೆ ಮಾತನ್ನು ಆಡುವಾಗ ಅಂದಿನ ಕ್ಯಾಮೆರಾ ಕುರಿತ ಹೇಳಬೇಕು. 40 ವರುಷಗಳ ಹಿಂದೆ ಆ ಕ್ಷಣದಲ್ಲಿ ಫೋಟೊಗಳನ್ನು ಅಳಿಸಿ ಹಾಕುವ ಅಥವಾ ತಿದ್ದುವ ಅವಕಾಶವಿರಲಿಲ್ಲ. ಅಂದಿನ ರೀಲ್ ಕ್ಯಾಮೆರಾಗಳಲ್ಲಿ ತೆಗೆದ ಫೋಟೊಗಳು ಸರಿಯಾಗಿ ಬಂದಿದೆಯೇ ಎಂದು ತಿಳಿಯುತ್ತಿದ್ದದ್ದು ಫೋಟೊವನ್ನು ಪ್ರಿಂಟ್ ತೆಗೆದ ಬಳಿಕವಷ್ಟೇ. ಯಕ್ಷಗಾನ ರಂಗಸ್ಥಳದ ಫೋಟೊಗಳನ್ನು ರೀಲ್ ಕ್ಯಾಮರದಲ್ಲಿ ತೆಗೆಯುವುದು ಸುಲಭ ವಿರಲಿಲ್ಲ. ರಂಗಸ್ಥಳದಲ್ಲಿ ಬೆಳಕಿನ ವ್ಯವಸ್ಥೆಯಾಗಲಿ, ಹಿಂದಿನ ಪರದೆಯಾಗಲಿ ಸರಿಯಾಗಿರ ಲಿಲ್ಲ. ಮೈಕ್ ಗಳು ಅಡ್ಡವಿರುತ್ತಿದ್ದವು.

ರಂಗದಲ್ಲಿ ನೃತ್ಯ ಭಂಗಿಗಳು, ಪಾತ್ರದ ಆಂಗಿಕ ಕ್ರಿಯೆಗಳು ನಡೆಯುತ್ತಿರುವಾಗಲೇ ಸೆರೆ ಹಿಡಿಯು ವುದು ಕ್ಯಾಮರಾಗಳಲ್ಲಿ ಸವಾಲಿನ ಕಾರ್ಯವಾಗಿದ್ದವು. ಅವರ ಚಿತ್ರ ಸಂಗ್ರಹದಲ್ಲಿನ ಶೇಕಡಾ 80 ಭಾಗ ರೀಲ್ ಕ್ಯಾಮೆರಾ ಚಿತ್ರಗಳು ಎನ್ನುವುದು ವಿಶೇಷವಾಗಿದೆ.

ಖರ್ಚಿನ ಬಾಬ್ತು
1980-90 ದಶಕದ ಫೋಟೊಗ್ರಫಿಯಲ್ಲಿ ಒಂದು ಯಕ್ಷಗಾನದ ಫೋಟೊ ತೆಗೆಯಲು ಕನಿಷ್ಠ 10 ರೋಲ್ ಗಳು ಬೇಕಾಗಿದ್ದವು. ಅದಕ್ಕೆ 1000 ರೂ ಖರ್ಚಾಗುತ್ತಿತ್ತು. ಇನ್ನು ಸಂಸ್ಕರಿಸುವುದಕ್ಕೆ ಮತ್ತು ಪೋಟೊಗಳನ್ನು ಪ್ರಿಂಟ್ ಗಳನ್ನು ತೆಗೆಯುವುದಕ್ಕೆ 1500 ರೂ ಗಳು ಖರ್ಚಾಗುತ್ತಿದ್ದವು. ಈಗ ಕುಂದರ್ ಸಂಗ್ರಹದಲ್ಲಿ 4 ಲಕ್ಷ ಫೋಟೊಗಳಿವೆ. ಅಂದರೆ ಅದಕ್ಕಾಗಿ ಅವರು ಆ ಕಾಲದಲ್ಲಿ ವ್ಯಯಿಸಿದ ಹಣ ಎಷ್ಟಿರಬಹುದು!

ಜೀವನ ನಿರ್ವಹಣೆಯ ಜೊತೆಗೆ ಕೌಟುಂಬಿಕ ಸಮಸ್ಯೆಗಳ ಮಧ್ಯೆದಲ್ಲಿ 20 ವರುಷಗಳ ಅಸೌಖ್ಯದಿಂದ ಮಲಗಿದ್ದ ತಾಯಿಯನ್ನು ನೋಡಿಕೊಳ್ಳುವ ಹೊಣೆಗಾರಿಕೆಯ ಜತೆ ಯಕ್ಷಗಾನದ ಚಿತ್ರಗಳನ್ನು ಸಂಗ್ರಹಿಸಿದ ಕೆಲಸ ಬಹು ಅಮೂಲ್ಯ. ಕುಂದರ್ ಅವರು ಯಕ್ಷಗಾನದ ಜತೆಯಲ್ಲೇ, ಭೂತಾರಾಧನೆ, ಜನಪದ ಆಚರಣೆಗಳು, ಉತ್ಸವ, ಕರಾವಳಿಯ ಧಾರ್ಮಿಕ ಆಚರಣೆಗಳು, ನಾಗಾ ರಾಧನೆ, ಬ್ರಹ್ಮಮಂಡಲ, ನಾಗಮಂಡಲ, ಡಕ್ಕೆ ಬಲಿ, ಬುಡಕಟ್ಟು ಜನರ ಜೀವನ ಕ್ರಮ ಇತ್ಯಾದಿ ಕರಾವಳಿಯ ಜನಪದ ಬದುಕನ್ನು ದಾಖಲಿಸಿದ್ದಾರೆ.

ಫೋಟೊಗಳಿಗಾಗಿ ಕಾಸರಗೋಡಿನಿಂದ ಕಾರವಾರದವರೆಗೆ ಓಡಾಡಿದ್ದಾರೆ. ಮಳೆಗಾಲದಲ್ಲಿ ಕರಾವಳಿಯಲ್ಲಿ ತೀವ್ರವಾದ ಮಳೆ ಬೀಳುವುದರಿಂದ ಪ್ರಿಂಟ್‌ ಗಳನ್ನು ಸಂರಕ್ಷಿಸಿ ಇಡುವುದು ಸವಾಲಿನ ಕೆಲಸ. ಹಲವು ವರುಷಗಳಿಂದ ಜತನದಿಂದ ಫೋಟೊಗಳು ಹಾಳಾಗದಂತೆ ಕಾಪಿಟ್ಟುಕೊಂಡು ಬರುತ್ತಿದ್ದಾರೆ.

ಒಂದು ವಿಶ್ವವಿದ್ಯಾಲಯ ಅಥವಾ ಸರ್ಕಾರ ಮಾಡಬಹುದಾಗಿರುವ ಕಾರ್ಯ ವನ್ನು ಕುಂದರ್ ಅವರು ಕೇವಲ ತಮ್ಮ ಆಸಕ್ತಿಯಿಂದ ಸಾಧ್ಯವಾಗಿಸಿಕೊಂಡಿ ದ್ದಾರೆ. ಒಂದರ್ಥದಲ್ಲಿ ಅವರ ಚಿತ್ರಗಳು ಕೇವಲ ಚಿತ್ರವಾಗಿರದೆ ಪರಂಪರೆ ಯನ್ನು ಸಾರುವ ಅಮೂಲ್ಯ ದೃಶ್ಯಕಾವ್ಯವಾಗಿವೆ.

ಪುಸ್ತಕ ರೂಪದಲ್ಲಿ

ತಮ್ಮ 365 ಛಾಯಚಿತ್ರಗಳ ‘ಚಿತ್ರಗಳ ಮೂಲಕ ಸಮಕಾಲೀನ ಯಕ್ಷಗಾನ’ ಎಂಬ ಚಿತ್ರಸಂಪುಟವನ್ನು ಮನೋಹರ್ ಕುಂದರ್ 1998ರಲ್ಲಿ ಹೊರತಂದರು. ಮತ್ತೆ 2013ರಲ್ಲಿ ‘ಯಕ್ಷಗಾನ ರಂಗವೈಭವ’ ಎಂಬ ಕನ್ನಡ/ ಇಂಗ್ಲೀಷ್ ಭಾಷೆಯಲ್ಲಿ ಮತ್ತೊಂದು ಹೊತ್ತಿಗೆಯನ್ನು ಹೊರತಂದಿದ್ದಾರೆ. ನೂರಾರು ಸ್ಥಳಗಳಲ್ಲಿ ‘ಯಕ್ಷ ಫೋಟೋ ಪ್ರದರ್ಶನ’ಗಳನ್ನು ಮಾಡಿದ್ದಾರೆ. ಯಕ್ಷಗಾನದ ಅನೇಕ ಪುಸ್ತಕಗಳಲ್ಲಿ, ಕಮ್ಮಟ, ಕಾರ್ಯಾಗಾರದಲ್ಲಿ ಇವರ ಫೋಟೋಗಳು ಬಳಕೆಯಾಗಿವೆ. ಮಂಗಳೂರು ವಿಶ್ವವಿದ್ಯಾಲಯ ತನ್ನ ಯಕ್ಷಗಾನ ಮ್ಯೂಸಿಯಂಗಾಗಿ ಇವರ ಛಾಯಚಿತ್ರಗಳನ್ನು ಬಳಸಿಕೊಂಡಿದೆ.