Friday, 13th December 2024

ಹಾಂಗ್ ಕಾಂಗ್ ಮ್ಯೂಸಿಯಂ ಆಫ್‌ ಹಾರ್ಟ್‌

ಮಂಜುನಾಥ್‌ ಡಿ.ಎಸ್‌

ಸಾಮಾನ್ಯವಾಗಿ ಮ್ಯೂಸಿಯಂಗಳನ್ನು ಒಮ್ಮೆ ನೋಡಿದರೆ, ಇನ್ನೊಮ್ಮೆ ನೋಡಲು ಹೆಚ್ಚಿನ ಉತ್ಸಾಹ ಮೂಡದು. ಅವೇ ಕಲಾ ಕೃತಿಗಳು, ಅವೇ ಕಲಾವಿದರು ಎಂಬ ಏಕತಾನತೆಯಿಂದ ಮೂಡುವ ಭಾವ ಅದು. ಆದರೆ ಈ ಮ್ಯೂಸಿಯಂ ನಲ್ಲಿ ಆ ಏಕತಾನತೆ ತೊಡೆದುಹಾಕಲು, ಆಗಾಗ ಕಲಾಕೃತಿಗಳನ್ನು ಬದಲಿಸುವ ಸಂಪ್ರದಾಯವಿದೆ. ಹೊಸ ಕಲಾಕೃತಿ ಗಳನ್ನು ನೋಡಲು ಪ್ರವಾಸಿಗರು ಹಾತೊರೆಯುತ್ತಾರೆ.

ಹಾಂಗ್‌ಕಾಂಗ್ ನಗರದಲ್ಲಿ ಕಲೆ, ಚರಿತ್ರೆ, ಪರಂಪರೆ, ವಿಜ್ಞಾನ, ಬಾಹ್ಯಾಕಾಶ, ದಂಡೆಗಾವಲು, ವೈದ್ಯ ವಿಜ್ಞಾನ, ಶಿಕ್ಷಣ, ರೈಲ್ವೇ, ಮುಂತಾದ ಕ್ಷೇತ್ರಗಳಿಗೆ ಮೀಸಲಾದ ಅರವತ್ತಕ್ಕೂ ಹೆಚ್ಚು ಮ್ಯೂಸಿಯಂಗಳಿವೆ. ಹಾಂಗ್‌ಕಾಂಗ್ ಮ್ಯೂಸಿಯಂ ಆಫ್ ಆರ್ಟ್ ಇವುಗಳಲ್ಲಿ ಪ್ರಮುಖವಾದ ಹಾಗು ಇಲ್ಲಿನ ಮೊತ್ತಮೊದಲ ಸಂಗ್ರಹಾಲಯವಾಗಿದೆ. ಈಗ ಈ ನಗರವು ಚೀನಾದ ಆಡಳಿತ ದಲ್ಲಿದ್ದರೂ, ಮೊದಲಿನಿಂದಲೂ ಇಲ್ಲಿ ಕಲೆಗೆ ದೊರೆತ ಪ್ರೋತ್ಸಾಹಕ್ಕೆ ಪ್ರತೀಕ ಎನಿಸುವಂತೆ ಇಲ್ಲಿನ ಕಲಾ ಮ್ಯೂಸಿಯಂ ಪ್ರವಾಸಿ ಗರನ್ನು ಕೈ ಬೀಸಿ ಕರೆಯುತ್ತಿದೆ.

1962ರಲ್ಲಿ ಸ್ಥಾಪನೆಗೊಂಡ ವಸ್ತುಸಂಗ್ರಹಾಲಯ 1975ರ ಜುಲೈ ತಿಂಗಳಿನಲ್ಲಿ ವಿಭಜನೆಗೊಂಡು ಕಲೆ ಮತ್ತು ಚರಿತ್ರೆ ಎಂಬ ಎರಡು ಪ್ರತ್ಯೇಕ ಮ್ಯೂಸಿಯಂ ಗಳು ರೂಪುಗೊಂಡವು. ವಿಭಜಿತ ಕಲಾ ಸಂಗ್ರಹಾಲಯವು 1992 ಸೆಪ್ಟಂಬರ್ 11ರಂದು ಈಗಿರುವ ಕಟ್ಟಡದಲ್ಲಿ ಕಾರ್ಯ ಆರಂಭಿಸಿತು. ಸುಮಾರು ನಾಲ್ಕು ವರ್ಷಗಳ ನವೀಕರಣದ ನಂತರ 2019ರ ನವೆಂಬರ್ 30ರಂದು ಈ ಕಲಾಲಯ ಪುನರಾರಂಭವಾಯಿತು. ಸ್ಥಳೀಯ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವುದು ಹಾಗು ಚೀನಾ ದೇಶದ ಸುದೀರ್ಘ ಸಾಂಸ್ಕೃತಿಕ ಚರಿತ್ರೆಯ ಮೇಲೆ ಬೆಳಕು ಚೆಲ್ಲುವುದು ಈ ಮ್ಯೂಸಿಯಂನ ಮುಖ್ಯ ಧ್ಯೇಯಗಳಾಗಿವೆ.

ಸರ್ಕಾರದ ವಿರಾಮ ಮತ್ತು ಸಾಂಸ್ಕೃತಿಕ ಸೇವಾ ವಿಭಾಗದ ಉಸ್ತುವಾರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ಸಂಗ್ರಹಾಲಯ ದಲ್ಲಿ ಹದಿನೇಳು ಸಾವಿರಕ್ಕೂ ಹೆಚ್ಚಿನ ದರ್ಶಿಕೆಗಳಿವೆ. ಇವುಗಳಲ್ಲಿ ವರ್ಣಚಿತ್ರಗಳು, ಚಿತ್ರಾಕ್ಷರಗಳು (ಕ್ಯಾಲಿಗ್ರಫಿ), ಹಸ್ತಪ್ರತಿಗಳು, ಸ್ಥಳೀಯ ಕಲಾ ಪ್ರಕಾರಗಳು, ಮತ್ತು ಶಿಲ್ಪಗಳು ಪ್ರಮುಖವಾಗಿವೆ. ಷಾಂಗ್ ರಾಜ ಮನೆತನದ ಪುರಾತನ ವಸ್ತುಗಳು, ನಾಣ್ಯಗಳು, ಅಭರಣಗಳು, ಚಾರಿತ್ರಿಕ ಮಹತ್ವದ ಚಿತ್ರಗಳು ಸಹ ಇಲ್ಲಿ ಪ್ರದರ್ಶನಗೊಂಡಿವೆ.

ಕಲಾಕೃತಿಗಳ ಬದಲಾವಣೆ
ಮ್ಯೂಸಿಯಂನ್ನು ಒಮ್ಮೆ ನೋಡಿದರೆ ಇನ್ನೊಮ್ಮೆ ನೋಡಲು ಬೊರ್ ಎನಿಸಬಹುದು. ಅಂತಹ ಏಕತಾನತೆಗೆ ಮದ್ದೆೆನಿಸುವಂತೆ, ಇಲ್ಲಿನ ದರ್ಶಿಕೆಗಳನ್ನು ಆಗಿಂದಾಗ್ಗೆ ಬದಲಾಯಿಸುವ ರೂಢಿಯಿದೆ. ಎರಡು ವರ್ಷಗಳಿಗೊಮ್ಮೆ ಹಾಂಗ್‌ಕಾಂಗ್‌ನ ಸಮಕಾಲೀನ ಕಲಾವಿದರ ಕೃತಿಗಳನ್ನು ಪ್ರದರ್ಶಿಸುವ ಪದ್ಧತಿ 1975ರಿಂದ ಆರಂಭವಾಯಿತು.

ವಿಷಯಾಧಾರಿತ (ಥೀಮ್ ಬೇಸ್ಡ್‌) ಅಲ್ಪಾವಧಿ ಪ್ರದರ್ಶನಗಳನ್ನೂ ಸಂಗ್ರಹಾಲಯ ಆಯೋಜಿಸುತ್ತದೆ. ಆಗಾಗ ಬದಲಾಗುವ ಥೀಂ, ಕರ್ಶಿಕೆ, ಕಲಾಕೃತಿ, ಕಲಾವಿದರ ಕೊಡುಗೆಗಳು ನೋಡುಗರನ್ನು ಸೆಳೆಯುತ್ತವೆ. ನಾವು ಅಲ್ಲಿಗೆ ಭೇಟಿಯಿತ್ತಿದ್ದಾಗ, ಸಂಗ್ರಹಾ ಲಯದ ಹೊರ ಆವರಣದಲ್ಲಿ ‘ಸ್ಕಲ್ಪ್ಟಿಂಗ್ ದ ಲಿವಿಂಗ್ ವರ್ಲ್ಡ್‌’ ಶೀರ್ಷಿಕೆಯ ಏಕವ್ಯಕ್ತಿ ಕಲಾಪ್ರದರ್ಶನ ಆಯೋಜನೆ ಗೊಂಡಿತ್ತು.

ತೈವಾನಿನ ಹೆಸರಾಂತ ಕಲಾವಿದ ಜು ಮಿಂಗ್ ಅವರ ಈ ಕಲಾಕೃತಿಗಳು ಆಧುನಿಕ ಪಾಶ್ಚಿಮಾತ್ಯ ಸಮಾಜದ ದೈನಂದಿನ ಜೀವನ ಚಿತ್ರಗಳನ್ನು ಪ್ರತಿ ಬಿಂಬಿಸುವಂತಿದ್ದವು. ಬೇಸರ ಹಾಗು ನಿರೀಕ್ಷೆಯಿಂದ ಬೆಂಚಿನ ಮೇಲೆ ಕುಳಿತ ವ್ಯಕ್ತಿಗಳು, ಮಳೆಗಾಲದ ಒಂದು ದಿನ ಸಾಲಿನಲ್ಲಿ ನಿಂತ ಜನ, ಬಿಸಿಲಿ ನಿಂದ ರಕ್ಷಣೆ ಪಡೆಯಲು ಕೊಡೆ ಹಿಡಿದು ನಿಂತ ಪ್ರಯಾಣಿಕರು, ಪ್ಯಾರಾ ಟ್ರೂಪರ್ಸ್, ಮೂರು ತಲೆಮಾರಿ ನವರು, ಪುಟ್ಟ ಕಂದಮ್ಮನನ್ನು ಎತ್ತಿಕೊಂಡು ಸಂಭ್ರಮಿ ಸುತ್ತಿರುವ ಅಪ್ಪ, ಕವಾಯತಿಗೆ ಸಿದ್ಧರಾಗಿ ನಿಂತ ಸೈನಿಕರು, ಪಟ್ಟಾಂಗ ಹೊಡೆಯುತ್ತಾ ಕುಳಿತ ಸ್ನೇಹಿತರು, ಮೊದಲಾದ ಹತ್ತು ಹಲವು ಶಿಲ್ಪಸಮೂಹಗಳು ಮನಸೂರೆಗೊಂಡು ಮುದ ನೀಡಿದವು.

ಸೂಟ್‌ಕೇಸ್ ಒಂದನ್ನು ಎಳೆಯತ್ತಾ ನಿಂತಿರುವ ಕಲಾಕೃತಿ ಪಕ್ಕದಲ್ಲಿ, ಪ್ರವಾಸಿಗರು ತಾವೂ ಸಹ ಅಂತಹದ್ದೇ ಸೂಟ್‌ಕೇಸ್
ಹಿಡಿದು, ಫೋಟೋ ತೆಗೆಸಿಕೊಳ್ಳುವಲ್ಲಿ ಸಾಕಷ್ಟು ಉತ್ಸಾಹ ತೋರುತ್ತಾರೆ. ಮರ, ಪಿಂಗಾಣಿ, ಶಿಲೆ, ಕಂಚು, ಮತ್ತು ಉಕ್ಕು ಇವುಗಳನ್ನು ಮಾಧ್ಯಮವನ್ನಾಗಿಸಿಕೊಂಡ ಈ ಪ್ರತಿಮೆಗಳ ರಚನೆಯೇ ವಿಶಿಷ್ಟವೆನಿಸಿತು.

ಭಾವನೆಗಳನ್ನು ಸಮರ್ಪಕವಾಗಿ ವ್ಯಕ್ತಪಡಿಸಲು ಕುಳಿಗಳು, ಗೆರೆಗಳು, ಆಕೃತಿಗಳು, ಹಾಗು ಬಣ್ಣಗಳನ್ನು ಕಲಾವಿದರು ಬಳಸಿ ಕೊಂಡಿದ್ದಾರೆ. ಪ್ರದರ್ಶಿತಗೊಂಡಿದ್ದ ಶಿಲ್ಪ ಸಮೂಹಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಸಂಚಯದ ಪ್ರತಿಯೊಂದು ಪ್ರತಿಮೆಯೂ ಎತ್ತರ, ಗಾತ್ರ, ಮುಖಚರ್ಯೆ, ಭಂಗಿ, ವಸ್ತ್ರವಿನ್ಯಾಸ, ಪರಿಕರಗಳು, ಇತ್ಯಾದಿಗಳಲ್ಲಿ ಇತರ ಶಿಲ್ಪಗಳಿಗಿಂತ ವಿಭಿನ್ನವಾಗಿರುವುದು ವೇದ್ಯವಾಯಿತು. ಜುಮಿಂಗ್ ಅವರ ಕಲಾಕೃತಿಗಳು ಅವುಗಳಲ್ಲಿ ಭಾಗಿಯಾಗುವಂತೆ ವೀಕ್ಷಕರನ್ನು ಆಹ್ವಾನಿಸುತ್ತವೆ. ಸೈನಿಕರ ಸಾಲಿನಲ್ಲೋ ಅಥವಾ ಪ್ರಯಾಣಿಕರ ಗುಂಪಿನಲ್ಲೋ ಸೇರಿಕೊಳ್ಳುವ ಪ್ರಕ್ರಿಯೆ ಅಪೂರ್ವ ಅನುಭವ ನೀಡುತ್ತದೆ.

ಹಾಂಗ್‌ಕಾಂಗ್ ನಗರದ ದೃಷ್ಟಿಕೋನದ ಕಲಾಕೃತಿಗಳನ್ನು ಪ್ರದರ್ಶಿಸುವ ಈ ಮ್ಯೂಸಿಯಂಗೆ ಕೋವಿಡ್ ಸಂಕಟ ತಗುಲಿತ್ತು. ಹಲವು ತಿಂಗಳುಗಳ ಕಾಲ ಮುಚ್ಚಿದ್ದ ಈ ಕಲಾ ಮ್ಯೂಸಿಯಂ, 19 ಫೆಬ್ರವರಿ 2021ರಿಂದ ಭಾಗಶಃ ತೆರೆದಿದೆ. ಕೋವಿಡ್ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸುವುದು, ಮಾಸ್ಕ್‌ ಧರಿಸುವುದು, ಸ್ಯಾನಿಟೈಸ್ ಮಾಡಿಕೊಳ್ಳುವುದು ಇಲ್ಲಿ ಕಡ್ಡಾಯ.