Saturday, 23rd November 2024

ಮಕ್ಕಳಿಗೆ ಭಾಷೆ ಕಲಿಸುವುದು ಹೇಗೆ?

ಗ.ನಾ.ಭಟ್ಟ

ಒಂದು ವಿನೂತನ ಹಾದಿ

ಇಂದು ಶಿಕ್ಷಣ ಕ್ಷೇತ್ರ ನಿಂತ ನೀರಾಗಿದೆ. ಶಿಕ್ಷಣದ ಬಗ್ಗೆ ಏನೂ ಅರಿವಿಲ್ಲದೆ ದರ್ಪಾಹಂಕಾರಗಳನ್ನೇ ಪ್ರದರ್ಶಿಸುತ್ತಾ, ಶಿಕ್ಷಕರನ್ನು ಕೂಲಿಯಾಳುಗಳಿಗಿಂತಲೂ ಕಡೆಯಾಗಿ ಕಾಣುತ್ತಿರುವ ಆಡಳಿತ ಮಂಡಳಿಗಳೇ ಮೇಲುಗೈ ಸಾಧಿಸಿವೆ. ಮಕ್ಕಳಿಗೆ ಹೊಸ ರೀತಿಯಲ್ಲಿ, ವೈಜ್ಞಾನಿಕವಾಗಿ ಕಲಿಸಬೇಕು ಎಂಬ ಸಲಹೆಗಳನ್ನು ಶಿಕ್ಷಣ ಇಲಾಖೆಗಳು ನಿರ್ಲಕ್ಷಿಸು ತ್ತಿವೆ. ಇದಕ್ಕೆ ಪರಿಹಾರ? ಹೊಸ ಕಲಿಕಾ ವಿಧಾನವನ್ನು ಪರಿಚಯಿಸುವುದು ಇಂದಿನ ತುರ್ತು ಅಗತ್ಯ.

ಶಿಕ್ಷಣ ವಿಷಯದಲ್ಲಿ ನಾನು ಓದಿದಷ್ಟು ಪುಸ್ತಕಗಳನ್ನು ಓದಿಕೊಂಡಿರುವವರು ನಿಮ್ಮಲ್ಲಿ ಬಹಳ ಮಂದಿ ಇರಲಿಕ್ಕಿಲ್ಲ. ಇದು ಆತ್ಮಸ್ತುತಿಯಂತೆ ಕೇಳಿಸುತ್ತದೆ ಅಲ್ಲವೆ? ಪರವಾಗಿಲ್ಲ. ಉದ್ದೇಶಪೂರ್ವಕವಾಗಿ ಹೀಗೆ ಹೇಳಿದ್ದೇನೆ. ಹೇಳಲು ಕಾರಣವಿದೆ. ಕೆಲವು ಕಟು ಸತ್ಯಗಳನ್ನು ಹೇಳಲು ತಾತ್ಕಾಲಿಕವಾಗಿಯಾದರೂ ಒಂದಿಷ್ಟು ಹೊತ್ತು ಆತ್ಮಸ್ತುತಿಯಂತೆ ತೋರುವ ಆತ್ಮವಿಶ್ವಾಸ ಭಾವದ ಅಗತ್ಯ ನನಗೆ ಇದೆ. ಈ ಭಾವದ ಹಿಂದೆ ಇರುವುದು ಒಂದು ವಿಲಕ್ಷಣವಾದ ಅಹಂ ಮತ್ತು ಸಿಟ್ಟು ಎಂದು ನೀವು ಅರ್ಥ ಮಾಡಿ ಕೊಳ್ಳಬಲ್ಲಿರಿ. ಈ ಅಹಂ ಮತ್ತು ಸಿಟ್ಟು ಇಲ್ಲದಿದ್ದರೆ ಯಾರೂ ಬದುಕಬೇಕಾದಂತೆ ಬದುಕಲಾರರು, ಹೇಳಬೇಕಾದುದನ್ನು ಹೇಳ ಲಾರರು’.

ಇಷ್ಟು ದಿಟ್ಟವಾಗಿ, ಆಕ್ರೋಶಭರಿತರಾಗಿ ಹೇಳಿದವರು ಖ್ಯಾತ ಕಾದಂಬರಿಕಾರ ಮತ್ತು ಚಿಂತಕ ಕೆ.ಟಿ.ಗಟ್ಟಿ ಅವರು. ಟೀಚ್ ಯುವರ್ ಚೈಲ್ಡ್ ಕನ್ನಡ ಅಂಡ್ ಇಂಗ್ಲಿಷ್ ಟುಗೆದರ್ (ನಿಮ್ಮ ಮಗುವಿಗೆ ಕನ್ನಡ ಮತ್ತು ಇಂಗ್ಲಿಷ್ ಒಟ್ಟಿಗೇ ಕಲಿಸಿರಿ) ಎಂಬ ತಮ್ಮ ಕೃತಿಯಲ್ಲಿ ಈ ಮಾತನ್ನು ಹೇಳಿದ್ದಾರೆ. ಕೆ.ಟಿ.ಗಟ್ಟಿ ಅವರು ಹೇಳಿದಂತೆ ಇಂದು ವಿಜ್ಞಾನಿಗಳೂ, ತೆರೆದ ಮನಸ್ಸಿನವರೂ ಪೂರ್ವ ಗ್ರಹರಹಿತರೂ ಆದ ಶಿಕ್ಷಕರು ತುಂಬಾ ಕ್ವಚಿತ್ತಾಗಿ ದೊರೆಯುವುದು ಮರಭೂಮಿಯಲ್ಲಿ ಓಯಸಿಸ್ ಸಿಗುವಂತೆ ಆಗಿದೆ.

ಅವರ ಸಿಟ್ಟು ಮತ್ತು ಅಹಂ ಸಕಾಲಿಕವಾದುದು; ಸಾಂದರ್ಭಿಕವಾದುದು. ಇಂದು ಶಿಕ್ಷಣ ಕ್ಷೇತ್ರ ನಿಂತ ನೀರಾಗಿ, ಪಾಚಿ ಕಟ್ಟಿ, ಕೊಳೆತು ನಾರುತ್ತಿದೆ.

ಶಿಕ್ಷಣ ವ್ಯವಸ್ಥೆಯಲ್ಲಿನ ಜಿಡ್ಡುಗಟ್ಟಿದ ವಾತಾವರಣ, ಶಿಕ್ಷಣದ ಬಗ್ಗೆ ಏನೂ ಅರಿವಿಲ್ಲದೆ ದರ್ಪಾ ಹಂಕಾರ ಗಳನ್ನೇ ಪ್ರದರ್ಶಿಸುತ್ತಾ, ಶಿಕ್ಷಕರನ್ನು ಕೂಲಿಯಾಳುಗಳಿಗಿಂತಲೂ ಕಡೆಯಾಗಿ ಕಾಣುತ್ತಾ, ಅಶೈಕ್ಷಣಿಕವಾಗಿ ನಡೆದುಕೊಳ್ಳುವ ಬಹುಸಂಖ್ಯೆಯ ಆಡಳಿತ ಮಂಡಳಿ, ಜ್ಞಾನ ದಾಯಕವಾದ, ರಚನಾತ್ಮಕವಾದ ಯಾವುದನ್ನೂ ಸ್ವೀಕರಿಸದೇ, ಹೊಸ ವಿಚಾರಗಳನ್ನು ಸ್ವೀಕರಿಸುವ ಸಂದರ್ಭ ಬಂದರೆ ಹೆದರಿ ಓಡಿಹೋಗುವವರಂತೆ ನಡೆದುಕೊಳ್ಳುವ ಶಿಕ್ಷಕ-ಶಿಕ್ಷಕಿಯರು, ಮಕ್ಕಳನ್ನು ಶಾಲೆಗೆ ಸೇರಿಸಿಬಿಟ್ಟರೆ ತಮ್ಮ ಕರ್ತವ್ಯ ಮುಗಿಯಿತೆಂದು ಭಾವಿಸುವ ಎಷ್ಟೋ ತಂದೆ-ತಾಯಂದಿರು, ಮಂತ್ರಕ್ಕಿಂತ ಉಗುಳೇ ಜಾಸ್ತಿ ಅನ್ನುವಂತೆ ಡಿಪಾರ್ಟ್ ಮೆಂಟಿನವರು ಪದೇ ಪದೇ ಏರ್ಪಡಿಸುವ ಶಿಕ್ಷಕ ತರಬೇತಿ, ಶಿಕ್ಷಕರಿಗೆ ರಾಶಿ ರಾಶಿ ಲೆಕ್ಕಪತ್ರಗಳನ್ನು ದಾಖಲಿಸುವುದಕ್ಕೆ ಆದೇಶಿಸು ವುದು ಇವೇ ಮೊದಲಾದ ನೂರೆಂಟು ಕಾರಣಗಳು ಶಿಕ್ಷಣ ಕ್ಷೇತ್ರವನ್ನು ಹದಗೆಡಿಸಿವೆ.

ಆದರೆ ಈ ಎಲ್ಲಾ ಒತ್ತಡಗಳ, ಅಪಸವ್ಯಗಳ ಮಧ್ಯೆಯೂ ಶಿಕ್ಷಕ ಮನಸ್ಸು ಮಾಡಿದರೆ ಹೊಸದನ್ನು ಸಾಧಿಸುವುದಕ್ಕೆ, ಮಕ್ಕಳಿಗೆ ನಿಜಶಿಕ್ಷಣವನ್ನು ಧಾರೆಯೆರೆಯುವುದಕ್ಕೆ ಸಾಧ್ಯವಿದೆ. ಇದನ್ನು ಎಚ್ಚರಿಸುವುದಕ್ಕೆ, ಶಿಕ್ಷಕನಾದವನು ಏನೆಲ್ಲಾ ಸಾಧಿಸಬಹುದು, ಮುಖ್ಯವಾಗಿ ಮಕ್ಕಳಿಗೆ ಒಂದು ಭಾಷೆಯನ್ನು ಅರ್ಥವತ್ತಾಗಿ ಹೇಗೆ ಕಲಿಸಬಹುದು ಅನ್ನುವುದಕ್ಕೆ ಕೆ.ಟಿ.ಗಟ್ಟಿಯವರು ಸಾಕಷ್ಟು ಚಿಂತನೆ ನಡೆಸಿದ್ದಾರೆ, ಪುಸ್ತಕ ರಚಿಸಿದ್ದಾರೆ.

ಕೆ.ಟಿ.ಗಟ್ಟಿ ಅವರು ಮೂವತ್ತು ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದವರು, ನಲವತ್ತಕ್ಕೂ ಹೆಚ್ಚು ಕಾದಂಬರಿ ಬರೆದವರು, ವೈಚಾರಿಕ ಬರಹಗಳಲ್ಲಿ ಪಳಗಿದವರು. ನಿವೃತ್ತರಾದ ಮೇಲೂ ಸುಮ್ಮನೆ ಕುಳಿತು ಕೊಂಡವರಲ್ಲ. ನಿವೃತ್ತಿಯ ನಂತರ ಈಗ
ಇಪ್ಪತ್ತೈದು ವರ್ಷಗಳಿಂದ ಗಂಭೀರ ಬರಹಗಾರರಾಗಿ ಕೆಲಸ ಮಾಡುತ್ತಿರುವವರು. ಗಟ್ಟಿಯವರ ಕೃತಿಗಳನ್ನು ಓದುವುದೆಂದರೆ
ಹೊಸ ವಿಚಾರಗಳಿಗೆ, ನವೋನವ ಚಿಂತನಗಳಿಗೆ ಬಾಗಿಲು ತೆರೆದಂತೆ. ಗಟ್ಟಿಯವರು ಸಾಂಪ್ರಾಯಿಕವಾಗಿ ಯೋಚಿಸಿದವರಲ್ಲ.
ಪರಂಪರಾಗತ ಮೌಢ್ಯ, ನಿಃಸಾರ ಮೌಲ್ಯಗಳನ್ನು ಧಿಕ್ಕರಿಸುತ್ತಲೇ ಬಂದವರು. ತಾನು ಅನುಭವಿಸಿದ್ದನ್ನು, ಕಂಡಿದ್ದನ್ನು, ಕೇಳಿದ್ದನ್ನು ವಸ್ತುವಾಗಿಸಿಕೊಂಡು ಬರೆದು ಅವಕ್ಕೆ ಜ್ಯೋತಿಸ್ಪರ್ಶ ಮಾಡಿ ಅದರ ಬೆಳಕು ಸುತ್ತೆಲ್ಲ ಹರಡುವಂತೆ ಮಾಡಿದವರು.

ಹೊಸ ರೀತಿಯ ಚಿಂತನೆ

ಶಿಕ್ಷಣಕ್ಕೆ ಸಂಬಂಧಿಸಿದಂತೆ ಅವರ ವಿಚಾರ, ಅನುಭವ ಅತ್ಯಂತ ಹೊಸದು. ಹಿಂದೆ ಯಾರೂ ತುಳಿಯದ್ದು. ಕನ್ನಡ ಮತ್ತು
ಇಂಗ್ಲಿಷ್ ಭಾಷಾ ಕಲಿಕೆಗೆ ಸಂಬಂಧಪಟ್ಟಂತೆ ಅವರು ಶತಶತಮಾನಗಳಿಂದ ಬಂದ ಅಕ್ಷರಮಾಲಾ ವಿಧಾನದ ಅಕ್ಷರ ಕಲಿಕೆ
ಯನ್ನೂ, ಕ ತಲೆಕಟ್ಟು ಕ, ಕಾ ಕಿಳಿ ಕಾ ಕಂಠಪಾಠ ವಿಧಾನವನ್ನೂ ಬಿಡಬೇಕೆಂದು ಹೇಳುತ್ತಾರೆ. ಅದರ ಬದಲಿಗೆ ಭಾಷಾ ಕಲಿಕೆ ಯನ್ನು ಆಲಿಸುವಿಕೆಯಿಂದ ಮತ್ತು ಓದುವಿಕೆಯಿಂದ ಆರಂಭಿಸಬೇಕೆಂದು ಹೇಳುತ್ತಾರೆ.

‘ಮಗುವಿಗೆ ಮೊಟ್ಟ ಮೊದಲಿನ ಶಬ್ದ ಬರುವುದು ತಾಯಿಯ ನಾಲಿಗೆಯಿಂದ. ತಾಯಿಯ ನುಡಿಗಳನ್ನು ಆಲಿಸುತ್ತಾ ಮಗು ಶಬ್ದಗಳನ್ನು ಮತ್ತು ವಾಕ್ಯಗಳನ್ನು ಕಲಿಯುತ್ತದೆ. ತಾಯಿಯ ಜತೆ ತಂದೆ ಮತ್ತು ಇತರ ಮಂದಿಯ ಮಾತು ಕೂಡಾ ಸೇರುತ್ತದೆ ಎಂದು ಪ್ರತ್ಯೇಕ ಹೇಳಬೇಕಾಗಿಲ್ಲ’ ಎಂದು ಅವರು ಹೇಳುತ್ತಾರೆ. ಹುಟ್ಟಿದ ಮಗುವೊಂದು ಬೆಳೆಯುತ್ತಾ ಯಾವ ಅಕ್ಷರಗಳ ಹಂಗೂ ಇಲ್ಲದೆ ಅದೆಷ್ಟು ಭಾಷೆಯನ್ನು ಕಲಿಯಬಹುದು ಅನ್ನುವುದು ನಮ್ಮೆಲ್ಲರ ಅನುಭವದಲ್ಲಿ ಇದೆ ತಾನೇ!

ಅದನ್ನೇ ಗಟ್ಟಿಯವರು ವಿವಿಧ ಕೋನಗಳಿಂದ ಸಮರ್ಥಿಸಿ ಈ ಕೃತಿಯನ್ನು ನಮ್ಮ ಮುಂದೆ ಇಟ್ಟಿದ್ದಾರೆ. ಈ ಪುಸ್ತಕ ಪ್ರಕಟವಾಗಿ
ಹದಿನಾಲ್ಕು ವರ್ಷಗಳಾದರೂ ತನ್ನ ಪ್ರಸ್ತುತತೆಯನ್ನು ಕಳೆದುಕೊಂಡಿಲ್ಲ. ಇದು ಎಷ್ಟು ವೈಜ್ಞಾನಿಕವಾಗಿದೆ ಮತ್ತು ಮನಃ ಶಾಸ್ತ್ರೀಯವಾಗಿದೆ ಅನ್ನುವುದನ್ನು ಇಂದಿನ ಶಿಕ್ಷಣ ಇಲಾಖೆ, ಶಿಕ್ಷಕರು ಮತ್ತು ಪಾಲಕರು ಗಮನಿಸಬೇಕಾಗಿದೆ.

ಎಲ್ಲವೂ ಸುಲಭ ಶಬ್ದ
ಪಠ್ಯಪುಸ್ತಕಗಳಲ್ಲಿ ಈಗಿರುವಂತೆ ಸುಲಭ ಶಬ್ದಗಳು, ಕಠಿಣ ಶಬ್ದಗಳು, ಹೊಸಪದಗಳು ಎಂದು ವಿಂಗಡಿಸುವ ಅತಾರ್ಕಿಕ
ಪದ್ಧತಿಯನ್ನೂ ಗಟ್ಟಿಯವರು ವಿರೋಧಿಸುತ್ತಾರೆ. ಅದನ್ನು ಮಾಡಕೂಡದೆಂದು ಹೇಳುತ್ತಾರೆ. ಮಗುವೊಂದು ಅಕ್ಷರಾಭ್ಯಾಸಕ್ಕೆ ಮೊದಲೇ ಅಪ್ಪ, ಅಣ್ಣ, ಅಕ್ಕ, ನಕ್ಷತ್ರ, ಛತ್ರಿ, ಮಿಲ್ಕು, ಬ್ರೆಡ್ಡು, ಪಕ್ಷಿ, ಹಕ್ಕಿ, ನಾಯಿ ಮೊದಲಾದ ಶಬ್ದಗಳನ್ನು ಉಚ್ಚರಿಸುವುದಕ್ಕೆ ಕಲಿತಿರುತ್ತದೆ. ಆ ಪದಗಳನ್ನೇ ಬರೆದಾಗ ಮಗು ಮತ್ತಷ್ಟು ಸಂತೋಷಪಡುತ್ತದೆ.

ಮಗುವಿಗೆ ಕಲಿಯುವ ಎಲ್ಲಾ ಶಬ್ದಗಳೂ, ವಾಕ್ಯಗಳೂ ಹೊಸದೇ ಆಗಿರುತ್ತವೆ. ಹೀಗಿರುವಾಗ ಹೊಸಪದಗಳು, ಕಠಿಣಪದಗಳು, ಸುಲಭಪದಗಳು ಎಂದು ಬೇರ್ಪಡಿಸುವುದು ಸಾಧುವಾಗದು ಅನ್ನುವುದು ಗಟ್ಟಿಯವರ ಅಭಿಪ್ರಾಯ. ಇಂದು ಬಹುಪಾಲು ಶಾಲೆ ಗಳಲ್ಲಿ ಭಾಷಾಕಲಿಕೆ ಅನ್ನುವುದು ಇಲ್ಲವೇ ಇಲ್ಲ. ಅನುವಾದ ಮೆಥಡ್ಡಲ್ಲಿ ಪಾಠ ಮಾಡುವುದು, ಮಕ್ಕಳಿಂದ ಓದಿಸಿದ ಹಾಗೆ ಮಾಡುವುದು, ಕಾಪಿ ರೈಟಿಂಗ್ ಮಾಡಿಸುವುದು, ಭಾಷಾಕಲಿಕೆಯ ವಿಧಾನ ಬಿಟ್ಟು ಅದರಲ್ಲಿಯ ಕಥೆ ಹೇಳುವುದು ಹೀಗೆ ಇಂತಹ ವನ್ನೇ ಭಾಷಾ ಕಲಿಕೆ ಎಂದು ಭಾವಿಸಿದ ಶಿಕ್ಷಕರು ಅನೇಕರಿದ್ದಾರೆ.

ಅದೆಷ್ಟೋ ಶಿಕ್ಷಕರಿಗೆ ಭಾಷೆ ಸಜೀವವಾದದ್ದು, ತಪ್ಪು ಪ್ರಯೋಗ ಮಾಡಿದರೆ ಅದು ನಮ್ಮ ಉದ್ದಿಷ್ಟ ಕೆಲಸಗಳನ್ನು ಮಾಡಿಸುವು ದಿಲ್ಲ, ಅದು ವಿಕೃತಗೊಂಡರೆ ಕೇಳಲು ಅಸಹ್ಯವಾಗುತ್ತದೆ ಎಂಬ ಅರಿವೇ ಇಲ್ಲ. ಪ್ರತಿಯೊಂದು ಭಾಷೆಯೂ ತನ್ನದೇ ಆದ ನಾದ,
ಮಾಧುರ್ಯ, ಲಯ, ರಸ, ಆಕರ್ಷಣೆಗಳನ್ನು ಹೊಂದಿದೆ ಎಂಬ ತಿಳಿವಳಿಕೆಯೇ ಇಲ್ಲ. ಭಾಷೆಯನ್ನು ದುಡಿಸಿಕೊಳ್ಳುವುದು, ಅದರಲ್ಲಿ ಹೊಸಹೊಸ ಪ್ರಯೋಗ ಮಾಡುವುದು ಆನಂದದಾಯಕ, ಅದೊಂದು ಕ್ರೀಡೆ ಎಂಬ ತಿಳಿವಳಿಕೆ ಬಹಳ ಮಂದಿಗೆ ಇಲ್ಲ. ಕೆ.ಟಿ.ಗಟ್ಟಿ ತಮ್ಮ ಈ ಕೃತಿಯಲ್ಲಿ ಈ ಎಲ್ಲವನ್ನೂ ಸಾದರಪಡಿಸಿದ್ದಾರೆ.

‘ಅಪ್ಪಾ ಇದು ಯಾವ ಊರು, ಮಳೆ ಎಲ್ಲಿಂದ ಬೀಳ್ತದೆ? ಮೀನು ಹೇಗೆ ಈಜ್ತದೆ? ಮರ ಎಲ್ಲಿಂದ ಬಂತು? ಹೂವಿನಲ್ಲಿ ಬೀಜ ಹೆಗೆ ಉಂಟಾಗುತ್ತದೆ? ಸಂತೋಷ ಅಂದ್ರೆ ಏನು? ಜೇನು ತಯಾರಾಗೋದು ಹೇಗೆ?’- ಹೀಗೆ ಯಾವುದಾದರೂ ಒಂದು ವಿಷಯವನ್ನು ಎತ್ತಿಕೊಂಡು ಅದನ್ನು ಒಂದು ಉತ್ತಮ ಸಂವಹನವನ್ನಾಗಿ ಮಾಡಿ ವಿಷಯವೊಂದರ ಜ್ಞಾನವನ್ನು ಮಾಡಿಸಿದ್ದು ಈ ಕೃತಿಯ
ಇನ್ನೊಂದು ವಿಶೇಷ.

ಅಮ್ಮ-ಮಗು ಅಥವಾ ಅಪ್ಪ-ಮಗು ಸಂಭಾಷಿಸುತ್ತಾ ಸಂಭಾಷಿಸುತ್ತಾ ಭಾಷಾಜ್ಞಾನದೊಂದಿಗೆ ಒಂದು ಹೊಸ ವಿಷಯದ ಕಡೆಗೆ ನಮ್ಮನ್ನು ಸೆಳೆಯುತ್ತಾರೆ. ಇದರ ಲಾಭ ಮಗುವಿಗೊಂದೇ ಅಲ್ಲ. ದೊಡ್ಡವರಿಗೂ ಕೂಡಾ ಆಗುತ್ತದೆ. ಉದಾಹರಣೆಗೆ ‘ಜೇನು ತಯಾರಾಗೋದು ಹೇಗೆ?’ ಎಂಬ ವಿಷಯ ಎತ್ತಿಕೊಂಡರೆ ಜೇನುಹುಳುಗಳ ಕುಟುಂಬವೊಂದು ಹೇಗಿರುತ್ತದೆ ಎಂಬ ಅರಿವುಂಟಾ ಗುತ್ತದೆ. ಸಾಮಾನ್ಯರಿಗೆ ಜೇನುಹುಳುಗಳ ಜೀವನ ವಿಧಾನ, ಅವುಗಳ ಕಾರ್ಯವೈಖರಿ, ಸಂತಾನೋತ್ಪತ್ತಿ ಮೊದಲಾದವುಗಳ ಪರಿಚಯ ವಿರುವುದಿಲ್ಲ. ಆ ಕೊರತೆಯನ್ನು ಗಟ್ಟಿಯವರು ಇಲ್ಲಿ ತುಂಬಿದ್ದಾರೆ.

ಬೀಜ ಹೇಗೆ ತಯಾರಾಗುತ್ತದೆ?
ಹಾಗೆಯೇ ಗಟ್ಟಿಯವರು ಹೂವಿನಲ್ಲಿ ಬೀಜ ಹೇಗೆ ಉಂಟಾಗುತ್ತದೆ? ಎಂಬ ವಿಚಾರ ಎತ್ತಿಕೊಂಡು ನಿಸರ್ಗದ ಒಂದು ನಿಗೂಢ ತತ್ತ್ವವನ್ನೇ ಅನಾವರಣಗೊಳಿಸುತ್ತಾರೆ. ಸಂತೋಷ ಅಂದರೆ ಏನು? ಎಂಬ ವಿಷಯದಲ್ಲಿ ಮಗುವಿನ ಮನಸ್ಸಿಗೆ ಎಟುಕುವಂತೆ,
ಮನೋಜ್ಞ ಉದಾಹರಣೆಗಳ ಮೂಲಕ ಹಿಂಸೆ-ಅಹಿಂಸೆಗಳ ಪರಿಚಯ ಮಾಡಿಕೊಡುತ್ತಾರೆ.

ಹೀಗೆ ಪ್ರತಿಯೊಂದು ವಿಷಯದಲ್ಲೂ ಮಗುವಿಗೆ ಹೊಸ ಅರಿವನ್ನು ಮೂಡಿಸುತ್ತಾ ಸಾಗುವ ಈ ಕೃತಿ ಕನ್ನಡದಲ್ಲೇ ಅನನ್ಯ.
ಆದರೆ ಇದಾವುದನ್ನೂ ಶಿಕ್ಷಣ ಇಲಾಖೆ ಗಮನಿಸದಿರುವುದು, ಶಿಕ್ಷಕರು ಕಣ್ಣೆತ್ತಿಯೂ ನೋಡದಿರುವುದು, ಪಾಲಕರು ತಟಸ್ಥ ರಾಗಿರುವುದು, ಆಡಳಿತ ಮಂಡಳಿ ಶಾಲೆಗಳನ್ನು ವ್ಯಾಪಾರೋದ್ಯಮವಾಗಿ ಮಾಡಿಕೊಂಡಿರುವುದು ಇಂದಿನ ದುರಂತ.

ಇವೆಲ್ಲದರ ಮೇಲೂ ಗಟ್ಟಿಯವರಿಗೆ ಬಹು ದೊಡ್ಡ ಆಕ್ರೋಶವಿದೆ. ಅಂತಹವರನ್ನು ಕಟುವಾದ ಭಾಷೆಯಲ್ಲೇ ತರಾಟೆಗೆ ತೆಗೆದು ಕೊಂಡಿದ್ದಾರೆ. ಶಿಕ್ಷಕರ ಸೊಂಬೇರಿತನದ ಬಗ್ಗೆ, ಅವರು ಹೊಸತನಕ್ಕೆ ತೆರೆದುಕೊಳ್ಳದೇ ತಾವು ಕಲಿತ ಹಳೇ ವಿಧಾನದಲ್ಲೇ ಬೋಧಿಸುತ್ತಿರುವುದರ ಬಗ್ಗೆ, ಅವರಿಲ್ಲಿರುವ ಮೂಢನಂಬಿಕೆಯ ಬಗ್ಗೆ ಗಟ್ಟಿಯವರು ಗಟ್ಟಿ ದನಿ ಎತ್ತಿದ್ದಾರೆ. ಅಪವಾದಕ್ಕೆ ಒಳ್ಳೆಯ ಶಿಕ್ಷಕರು ಇರುವುದರ ಬಗ್ಗೆ, ಅವರಿಗಿರುವ ಮಕ್ಕಳ ಕಾಳಜಿಯ ಬಗ್ಗೆ, ಅವರ ಶೈಕ್ಷಣಿಕ ಸಾಧನೆಯ ಬಗ್ಗೆ ಪ್ರಶಂಸಾತ್ಮಕ ಮಾತು ಗಳನ್ನೂ ಆಡಿದ್ದಾರೆ. ಇಂದು ನಮ್ಮಲ್ಲಿ ಅನುಸರಿಸಲಾಗುತ್ತಿರುವ ಶಿಕ್ಷಣ ವಿಧಾನವನ್ನೇ ಸಕಾರಾತ್ಮಕವಾಗಿ ಬದಲಿಸಬಲ್ಲ ಕೆ.ಟಿ.ಗಟ್ಟಿಯವರ ಈ ವಿಚಾರ ಧಾರೆಯ ಪರಿಚಯ ಎಲ್ಲಾ ಪ್ರಾಜ್ಞರಿಗೂ ಆಗಬೇಕೆಂಬುರದಲ್ಲಿ ಎರಡು ಮಾತಿಲ್ಲ.

***

ತಾಯಿತಂದೆಯರು ತಮ್ಮ ಮಕ್ಕಳಿಗೆ ಗುರುಗಳಾಗಿರಲು ಸಾಧ್ಯವಿಲ್ಲದಿರುವ ಒಂದೇ ಕಾರಣದಿಂದ ಸಮಾಜದಲ್ಲಿ ಶಿಕ್ಷಕನ ಸೃಷ್ಟಿ ಯಾದದ್ದು ಎನ್ನುವ ಪರಮ ಸತ್ಯವನ್ನು ಅರಿತುಕೊಳ್ಳದವನು ಶಿಕ್ಷಕನಲ್ಲ. ಅವನ ಕೈಯಲ್ಲಿ ಹಾಜರಿ ಎಂಬುದು ನಾಯಿ ಯಾಗಿ, ಪಾಠ ಪುಸ್ತಕ ಎಂಬುದು ಬೆತ್ತವಾಗಿ, ಕಲಿಸುವುದು ಎನ್ನುವುದು ಕುರಿಮೇಯಿಸುವ ಕೆಲಸವಾಗುತ್ತದೆ. ವಿಜ್ಞಾನಿಗಳೂ ತೆರೆದ ಮನಸ್ಸಿವರೂ ಪೂರ್ವಗ್ರಹರಹಿತರೂ ಆದ ಶಿಕ್ಷಕರು ಅಲ್ಲೊಬ್ಬರು ಇಲ್ಲೊಬ್ಬರು ಸಿಕ್ಕಿದರೆ ಮರುಭೂಮಿಯಲ್ಲಿ ಒಯಸಿಸ್ ಕಾಣಸಿಕ್ಕಿದಂತಾಗುತ್ತದೆ’.
-ಕೆ.ಟಿ.ಗಟ್ಟಿ