Wednesday, 11th December 2024

ಶರವೇಗದ ಪಯಣ ಹೈಪರ್‌ ಲೂಪ್‌

ಟೆಕ್‌ ಫ್ಯೂಚರ್‌

ವಸಂತ ಗ ಭಟ್‌

ಬುಲೆಟ್ ರೈಲು ಪಯಣವನ್ನು ಹೋಲುವ, ಆದರೆ ಟ್ರ್ಯಾಕ್ ಅವಶ್ಯಕತೆ ಇಲ್ಲದೇ ಅಯಸ್ಕಾಂತೀಯ ಶಕ್ತಿಯಿಂದ ಚಲಿಸುವ ಹೈಪರ್ ಲೂಪ್‌ಗಳು ಭವಿಷ್ಯದ ಸಂವಹನದ ಸಾಧನಗಳು.

ನಾವು ಪ್ರಯಾಣಿಸುವ ವಾಹನಗಳಾದ ಕಾರು, ಬೈಕ್, ವಿಮಾನ, ಹಡಗು ಇವೆಲ್ಲವೂ ಇಂಜಿನ್‌ನಲ್ಲಿ ಉತ್ಪಾದನೆಯಾದ ಶಕ್ತಿಯ ಅನುಸಾರ ಚಲಿಸುವುದಿಲ್ಲ. ಕಾರಣ ಇಂಜಿನ್‌ನ ಸಾಮರ್ಥ್ಯ ಹೊರತಾಗಿ ಹಲವು ಬಾಹ್ಯ ತೊಡಕುಗಳಿರುತ್ತವೆ. ಅದರಲ್ಲಿ ಮುಖ್ಯವಾದುದು ಗಾಳಿ ಒಡ್ಡುವ ಒತ್ತಡ ಅಥವಾ ಫ್ರಿಕ್ಷನ್ ಫೋರ್ಸ್.

ವಾಹನಗಳು ತಾವು ಚಲಿಸುವ ಮಾಧ್ಯಮಕ್ಕೆ ಅನುಗುಣವಾಗಿ ಗಾಳಿ, ನೀರು, ಗುರುತ್ವದ ಒತ್ತಡವನ್ನು ಸೀಳಿ ಸಾಗಬೇಕಾಗುತ್ತದೆ.
ಈ ಪ್ರಕ್ರಿಯೆ ವಾಹನದಲ್ಲಿ ಉತ್ಪಾದನೆಯಾದ ಶಕ್ತಿಯ ಮಹತ್ವದ ಪಾಲನ್ನು ಮೀಸಲಿಡಬೇಕಾಗುತ್ತದೆ. ಇದೇ ಕಾರಣಕ್ಕೆ ಒಂದು ಲೀಟರ್‌ಗೆ 100 ಕಿಲೋಮೀಟರ್ ಓಡುವ ಸಾಮರ್ಥ್ಯವಿರುವ ಬೈಕ್ ರಸ್ತೆಯ ಮೇಲೆ ಹೆಚ್ಚೆಂದರೆ 60 ಕಿಲೋಮೀಟರ್ ಚಲಿಸುತ್ತದೆ.

ಈ ಸಮಸ್ಯೆಗೆ ಕೆಲವು ಪರಿಹಾರಗಳಿವೆ. ಅದರಲ್ಲಿ ಹೆಚ್ಚು ಮಹತ್ವ ಗಳಿಸಿರುವುದೆಂದರೆ ಹೈಪರ್ ಲೂಪ್. 2013 ರಲ್ಲಿ ಇಲೋನ್ ಮಸ್ಕ್, ತನ್ನ ಟೆಸ್ಲಾ ಕಾರುಗಳು ವ್ಯವಹಾರಿಕವಾಗಿ ಯಶಸ್ಸುಗಳಿಸುತ್ತಿರುವಾಗ ಈ ಹೈಪರ್ ಲೂಪ್ ಎನ್ನುವ ಯೋಚನೆಯನ್ನು ಜಗತ್ತಿಗೆ ಪ್ರಚುರಪಡಿಸುತ್ತಾನೆ. ಹೈಪರ್ ಲೂಪ್ ಎಂದರೆ ಮುಚ್ಚಿರುವ ಲೋಹದ ಕೊಳವೆಯಲ್ಲಿ ವಾಹನ ಅಥವಾ ಮೆಟ್ರೊ ಮಾದರಿಯ ರೈಲನ್ನು ಓಡಿಸುವುದು. ವಾತಾವರಣದ ಒತ್ತಡಗಳು ಈ ಕೊಳವೆಯ ಒಳಗೆ ಇಲ್ಲದ ಕಾರಣದಿಂದ ವಾಹನ ಈ ಹೈಪರ್ ಲೂಪ್ ಒಳಗಡೆ ವೇಗವಾಗಿ ಅಂದರೆ ಸುಮಾರು ಪ್ರತಿ ಘಂಟೆಗೆ 1000 ಕಿಲೋಮೀಟರ್ ಚಲಿಸುವ ಸಾಮರ್ಥ್ಯವನ್ನು ಹೊಂದಲಿದೆ.

ಇಲೋನ್ ಮಸ್ಕ್ 2013 ರ ಈ ಯೋಜನೆಯನ್ನು ಪ್ರಸ್ತಾಪಿಸಿದರೂ, ಇನ್ನೂ ಇದು ಸಾಮಾನ್ಯ ಪ್ರಯಾಣಿಕ ಬಳಸುವ ಮಟ್ಟಕ್ಕೆ ಅಭಿವೃದ್ಧಿ ಹೊಂದಿಲ್ಲ. ಏಕೆ?

ಮುಚ್ಚಿದ ಕವಚದಲ್ಲಿ ಪಯಣ
ಇಲೋನ್ ಮಸ್ಕ್ ಇದರ ಬಗ್ಗೆ ಹಲವು ಬಾರಿ ಮಾತನಾಡಿದ್ದು ಹೌದಾದರೂ, ಇದೇನು ಅತ್ಯಂತ ಹೊಸ ಆಲೋಚನೆಯಲ್ಲ.
೧೮ ನೇ ಶತಮಾನದಲ್ಲಿ ಲಂಡನ್‌ನಲ್ಲಿ ಆರಂಭವಾದ ಭೂಮಿಯ ಒಳಗೆ ಸಾಗುವ ರೈಲು ಸಹ ಸಣ್ಣ ಮಟ್ಟದಲ್ಲಿ ಹೈಪರ್ ಲೂಪ್ ಯೋಚನೆಯನ್ನೇ ಅಳವಡಿಸಿಕೊಂಡಿತ್ತು. ಆದರೆ ಆ ಮುಚ್ಚಿದ ಕವಚದ ಒಳಗೆ ವಿಶೇಷ ರೈಲನ್ನು ಓಡಿಸದೆ ಸಾಮಾನ್ಯ ರೈಲನ್ನೇ ಓಡಿಸುತ್ತಿದ್ದರು.

ನಂತರದ ದಿನಗಳಲ್ಲಿ ವಿಮಾನದ ಬಳಕೆ ಹೆಚ್ಚಿದಂತೆ, ಅವು ಜನ ಮಾನಸದಿಂದ ನಿಧಾನವಾಗಿ ಕಡಿಮೆಯಾದವು. ಹೈಪರ್
ಲೂಪ್ ಅಂದರೆ ಕೇವಲ ಲೋಹದ ಕವಚದ ಒಳಗಡೆ ಸಾಮಾನ್ಯ ರೈಲನ್ನು ಓಡಿಸುವುದಲ್ಲ. ಚೀನಾ ಮತ್ತು ಜಪಾನ್ ದೇಶಗಳ ಬುಲೆಟ್ ರೈಲುಗಳು ವೇಗವಾಗಿ ಚಲಿಸಲು ಆಯಸ್ಕಾಂತಿಯ ಬಲವನ್ನು ಬಳಸುವಂತೆಯೇ, ಹೈಪರ್ ಲೂಪ್ ಒಳಗಡೆ ಓಡಾಡುವ ವಾಹನ ಅಥವಾ ಪೊಡ್‌ಗಳು ಸಹ ಆಯಸ್ಕಾಂತಿಯ ಬಲವನ್ನು ಬಳಸಿ ಒಂದೆಡೆಯಿಂದ ಇನ್ನೊಂದೆಡೆಗೆ ಪ್ರಯಾಣ ಮಾಡುತ್ತವೆ. ಹೈಪರ್ ಲೂಪ್ ಚಕ್ರದ ಬಳಕೆ ಇರುವುದಿಲ್ಲ. ಇದು ಒತ್ತಡವನ್ನು ಇನ್ನಷ್ಟು ಕಡಿಮೆ ಮಾಡಿ ವಾಹನ ವೇಗವಾಗಿ ಪ್ರಯಾಣ ಮಾಡುವಂತೆ ನೋಡಿಕೊಳ್ಳುತ್ತದೆ.

ಜೊತೆಗೆ ಪೊಡ್‌ನ ಪಥವನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಬದಲಾಯಿಸಲು ಸಹ ಯಾವುದೇ ಟ್ರಾಕ್ ಬಳಕೆಯಾವುದಿಲ್ಲ. ಆಯಸ್ಕಾಂತಿಯ ಬಲದ ಮೂಲಕವೇ ಪೊಡ್‌ಗಳು ಒಂದು ಪಥದಿಂದ ಇನ್ನೊಂದು ಪಥಕ್ಕೆ ತಿರುಗಿಕೊಳ್ಳುತ್ತದೆ. ಇದು ಏಕೆ ಅತ್ಯಂತ ಮಹತ್ವದ ವಿಚಾರವೆಂದರೆ ಒಂದು ಸಾಮಾನ್ಯ ರೈಲಿನ ಪ್ರಯಾಣಿಕರ ಸಾಮರ್ಥ್ಯ ರೈಲು ಈ ರೀತಿ ಪಥ ಬದಲಿಸುವುದರ ಮೇಲೆ ಅವಲಂಬಿತವಾಗಿರುತ್ತದೆ.

ಒಂದು ಚಿಕ್ಕ ರೈಲು ಪಥವನ್ನು ಬದಲಾಯಿಸಲು ದೊಡ್ಡದಾದ ತಿರುವು ಹೊಂದಿದ್ದರು ಸುಲಭವಾಗಿ ತಿರುಗುತ್ತದೆ. ಇದೇ
ಮಾತು ದೊಡ್ಡ ರೈಲಿಗೆ ಅನ್ವಯವಾಗುವುದಿಲ್ಲ. ಇದರಿಂದ ಮುಂದಿರುವ ದೊಡ್ಡ ರೈಲು ಹಳಿಯನ್ನು ಬದಲಾಯಿಸುವವರೆಗೂ ಹಿಂಬದಿಯ ರೈಲು ಕಾಯಬೇಕಾಗುತ್ತದೆ. ಈ ರೀತಿಯ ಪಥ ಬದಲಾಯಿಸುವ ಕ್ರಮ ಹೈಪರ್ ಲೂಪ್‌ನಲ್ಲಿ ಇಲ್ಲದ ಕಾರಣ ಒಂದೇ ಕೊಳವೆಯಲ್ಲಿ ಹಲವಾರು ಪೊಡ್ ಗಳು ಒಟ್ಟಿಗೆ ಚಲಿಸಬಹುದು.

ಇಲೋನ್ ಮಸ್ಕ್ ಹೈಪರ್ ಲೂಪ್ ಯೋಚನೆಯನ್ನು ಹೇಳಿದ್ದರೂ, ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ರಿಚರ್ಡ್ ಬ್ರಾನ್‌ಸನ್ ಒಡೆತನದ ವರ್ಜಿನ್ ಸಂಸ್ಥೆ ವರ್ಜಿನ್ ಹೈಪರ್ ಲೂಪ್ ಅನ್ನು ಭಾರತ, ಸೌದಿ ಅರೇಬಿಯಾ ಮತ್ತು ಅಮೇರಿಕದಲ್ಲಿ ಪರೀಕ್ಷೆಗೆ ಒಳಪಡಿಸುತ್ತಿದೆ. ಸದ್ಯ ಅಮೆರಿಕದ ಪರೀಕ್ಷಾ ಕೇಂದ್ರದಲ್ಲಿ ವರ್ಜಿನ್ ಹೈಪರ್ ಲೂಪ್ ಸಂಸ್ಥೆಯ ಪ್ರಮುಖರು ಕುಳಿತು ಘಂಟೆಗೆ 110 ಮೈಲಿ ವೇಗದಲ್ಲಿ 500 ಯಾರ್ಡ್‌ನಷ್ಟು ಚಲಿಸಿ ಹೈಪರ್ ಲೂಪ್‌ಗಳು ಮಾನವ ಸಂಚಾರಕ್ಕೆ ಯೋಗ್ಯವಾಗಿದೆ ಎಂದು ನಿರೂಪಿಸಿದ್ದಾರೆ.

ಯುರೋಪ್ ಹೈಪರ್ ಲೂಪ್ ಭವಿಷ್ಯದ ಮುಖ್ಯ ಸಾರಿಗೆ ಯಾಗಲಿದೆ ಎಂಬುದನ್ನು ಅರಿತು ಅದಾಗಲೇ ಹೈಪರ್ ಲೂಪ್
ಯೋಜನೆಗೆ ಅವಶ್ಯಕವಾದ ನಿಯಮಗಳನ್ನು ರೂಪಿಸುತ್ತಿದೆ. ಮುಖ್ಯವಾಗಿ ಯಾವುದೇ ಸಂಸ್ಥೆ ಹೈಪರ್ ಲೂಪ್ ಅನ್ನು ರೂಪಿಸಿ ದರೂ ಅದು ಇನ್ನೊಂದು ಸಂಸ್ಥೆಯ ಹೈಪರ್ ಲೂಪ್ ನೋಡನೆ ಜೋಡಿಕೆಯಾಗುವ ಸಾಮರ್ಥ್ಯವನ್ನು ಹೊಂದಿರಬೇಕು, ಅಷ್ಟೇ ಅಲ್ಲದೆ ೨೦ ಕಿಲೋಮೀಟರ್ ನಷ್ಟು ಪರೀಕ್ಷಾ ಹೈಪರ್ ಲೂಪ್ ಅನ್ನು ಸಹ ರೂಪಿಸಲಿದೆ ಮತ್ತು ಯಾವುದೇ ಹೊಸ ಸಂಸ್ಥೆ ತನ್ನ ಪೊಡ್‌ಅನ್ನು ಅಲ್ಲಿ ಪರೀಕ್ಷೆ ಮಾಡಬಹುದು.

ಹೈಪರ್‌ಲೂಪ್ ನಮಗೆ ಬೇಕೆ?
ಹೈಪರ್ ಲೂಪ್ ನ ಅವಶ್ಯಕತೆ ನಮಗೆ ಖಂಡಿತವಾಗಿಯೂ ಇದೆ. ಹೈಪರ್ ಲೂಪ್ ಯೋಜನೆ ಪೂರ್ಣಗೊಂಡು ಎಡೆಯೂ ಲಭ್ಯವಿದ್ದರೆ, ಒಂದು ಘಂಟೆಯಲ್ಲಿ ಬೆಂಗಳೂರಿನಿಂದ 1000 ಕಿಮೀ ದೂರದ ಮುಂಬೈಗೆ ಪಯಣಿಸಬಹುದು! ವಿಮಾನದಲ್ಲೂ ವೇಗವಾಗಿ ಪ್ರಯಾಣಿಸಬಹುದ ಎಂದು ನೀವು ಯೋಚಿಸುತ್ತಿರಬಹುದು.

ವಿಮಾನದ ಪ್ರಯಾಣ ವೇಗವಾದರೂ, ಮೊದಲು ನಡೆಯುವ ಬೋರ್ಡಿಂಗ್ ಪ್ರಕ್ರಿಯೆ ಪೂರ್ಣಗೊಳ್ಳಲು ಕೆಲವು ಘಂಟೆ ತೆಗೆದು ಕೊಳ್ಳಲಿದ್ದು ನೀವು ಒಂದೇ ಘಂಟೆ ವಿಮಾನದಲ್ಲಿ ಪ್ರಯಾಣಮಾಡಿದರೂ, ಒಟ್ಟು ಮೂರು ಘಂಟೆ ಕಾಲಾವಕಾಶಬೇಕು. ಭವಿಷ್ಯ ದಲ್ಲಿ ಸರಕಾರಗಳು ಹೆಚ್ಚು ಸಬ್ಸಿಡಿ ನೀಡಿದರೆ ಹೈಪರ್‌ಲೂಪ್ ನಲ್ಲಿ ಓಡಾಟ ಬಹಳ ಕಡಿಮೆ ಖರ್ಚಿನಲ್ಲಿ ಸಾಧ್ಯವಾಗಲಿದೆ.

ಹೈಪರ್ ಲೂಪ್ ಇಷ್ಟೆಲ್ಲ ಲಾಭಹೊಂದಿದ್ದರು ವ್ಯವಹಾರಿಕವಾಗಿ ರೂಪಿತಗೊಳ್ಳಲು ಕೆಲವು ತೊಡಕುಗಳಿವೆ. ಜಾಗದ ಖರೀದಿ, ತಂತ್ರಜ್ಞಾನದ ಅಭಿವೃದ್ಧಿ, ಸುರಕ್ಷಿತಾ ಪರೀಕ್ಷೆ ಮೊದಲಾದ ಹಂತಗಳನ್ನು ದಾಟಿ, ಹೈಪರ್ ಲೂಪ್ ಮುಂದಿನ ವರ್ಷಗಳಲ್ಲಿ ಕಾರ್ಯಸಾಧುವಾಗಬಹುದು.