Friday, 13th December 2024

ಕುರ್ಚಿ ಎಂದರೆ ನಂಗಿಷ್ಟ !

ದೊಡ್ಡಣ್ಣನ ಮನೆಯಲ್ಲಿ ಧಮಕಿ ರಾಜಕೀಯ

ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಪ್ರಕ್ರಿಯೆ ಇಡೀ ವಿಶ್ವದ ಗಮನ ಸೆಳೆಯುವ ವಿದ್ಯಮಾನ. ಆದ್ದರಿಂದಲೇ, ಅಲ್ಲಿ 
ನಡೆಯುವ ಅಪಸವ್ಯಗಳು ಬಹು ಬೇಗನೆ ಪ್ರಚಾರ ಪಡೆಯುತ್ತವೆ. ಈಗ ಆಗುತ್ತಿರುವುದೂ ಅದೇ. ಮರು ಚುನಾವಣೆ ಬಯಸಿರುವ  ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಪರವಾಗಿ ಸಾಕಷ್ಟು ಮತಗಳು ಬೀಳದೇ ಇದ್ದರೂ, ಎದುರಾಳಿ ಜೋ ಬೈಡೆನ್ ಬಹುಮತ ಗಳಿಸುವತ್ತ ಸಾಗಿದ್ದು ಜಯದ ಹೊಸ್ತಿಲಲ್ಲಿದ್ದರೂ, ಅಧ್ಯಕ್ಷ ಸ್ಥಾನದಲ್ಲಿರುವ ಟ್ರಂಪ್ ಅವರದ್ದು ಒಂದೇ ಮಂತ್ರ – ನಾನು ಗೆದ್ದಿದ್ದೇನೆ! ಮತ ಎಣಿಕೆಯಲ್ಲಿ ಅಕ್ರಮವಾಗಿದೆ ಎಂದು ನ್ಯಾಯಾಲಯದ ಮೊರೆ ಹೋಗಿರುವ ಟ್ರಂಪ್ ಅವರು, ಅಮೆರಿಕದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದೊಡ್ಡದೊಂದು ಅಗ್ನಿಪರೀಕ್ಷೆಗೆ ಗುರಿ ಮಾಡಿದ್ದಾರೆ. ಇವಿಎಂ ಬಳಸದ, ಬಹು ನಿಧಾನವಾಗಿ ಮತ ಎಣಿಕೆ ನಡೆಯುತ್ತಿರುವ ಅಲ್ಲಿನ ಚುನಾವಣಾ ವ್ಯವಸ್ಥೆಯು ಇನ್ನೂ ಹಳೆಯ ಕಾಲದಲ್ಲೇ ಇದೆ. ಅದನ್ನುತನ್ನ ಉಪಯೋಗಕ್ಕೆೆ ಬಳಸಿಕೊಳ್ಳಲು ಪ್ರಯತ್ನಿಸುತ್ತಿರುವ ಹಾಲಿ ಅಧ್ಯಕ್ಷ ಟ್ರಂಪ್, ತನ್ನ ಬೆಂಬಲಿಗರಿಗೆ ದಂಗೆ ಏಳಿ ಎಂದೂ ಕರೆ ನೀಡುತ್ತಿದ್ದಾರೆ!

ಶಶಿಧರ ಹಾಲಾಡಿ

ಹೀಗೊಂದು ಸನ್ನಿವೇಶ ಕಲ್ಪಿಸಿಕೊಳ್ಳಿ. ಭಾರತದಲ್ಲಿ ಚುನಾವಣೆ ಮುಗಿದು, ಇವಿಎಂ ಸೌಲಭ್ಯದ ಸಹಾಯದಿಂದ ಬಹುಬೇಗನೆ ಫಲಿತಾಂಶ ಹೊರಬೀಳುತ್ತಿದೆ. ಪ್ರಧಾನಿಯಾಗಿರುವವರ ಪಕ್ಷ ಬಹುಮತ ಕಳೆದುಕೊಂಡು, ಪ್ರಮುಖ ವಿರೋಧ ಪಕ್ಷ ಸ್ಪಷ್ಟ ಬಹುಮತ ಪಡೆಯುವುದು ಇನ್ನೇನು ಖಚಿತವಾಗಿದೆ. ಮತದಾನದ ಮೂಲಕ ಜನತೆ ಸ್ಪಷ್ಟ ಆದೇಶ ನೀಡಿದ್ದು, ಅಧಿಕಾರ ಹಿಡಿದ ಪಕ್ಷ ಸೋಲುವುದು ಖಚಿತ ಎನಿಸಿದೆ.

ಲುಣ್ಣುತ್ತಿರುವ ಪಕ್ಷದ ಪ್ರಧಾನಿ, ಏಕಾ ಏಕಿ ಟಿವಿ ಮುಂದೆ ಬಂದು ‘ನಮ್ಮ ಪಕ್ಷ ಗೆದ್ದಿದೆ, ನಾನೇ ಮುಂದಿನ ಪ್ರಧಾನಿ. ಮತ ಎಣಿಕೆಯಲ್ಲಿ ನಾವೇ ಮುಂದಿದ್ದೇವೆ, ಆದರೆ, ಮತ ಎಣಿಕೆಯ ಅಕ್ರಮದಿಂದಾಗಿ ಕೊನೆ ಕೊನೆಯ ಮತಗಳು ವಿರೋಧ ಪಕ್ಷಕ್ಕೆ ಹೋಗುತ್ತಿವೆ. ಆರಂಭದಲ್ಲಿ ನಾವೇ ಮುಂದಿದ್ದೆವು, ಆದ್ದರಿಂದ ನಾವೇ ಗೆದ್ದಿದ್ದೇವೆ. ನಾನು ಅಧಿಕಾರ ಬಿಡುವುದಿಲ್ಲ! ಮತ ಎಣಿಕೆಯ ಅಕ್ರಮ ನಿಲ್ಲಿಸಲು ನ್ಯಾಯಾಲಯದ ಮೊರೆ ಹೋಗುತ್ತೇನೆ, ಹೊರತು ಅಧಿಕಾರ ಬಿಡುವುದಿಲ್ಲ!’ ಎಂದು ಹೇಳಿದರೆ ಹೇಗಿದ್ದೀತು!

ಮೇಲಿನ ಸನ್ನಿವೇಶ ಕಾಲ್ಪನಿಕ. ಆದರೆ, ಇದನ್ನು ತದ್ವತ್ ಹೋಲುವ ವಿದ್ಯಮಾನ ಮೊನ್ನೆಯಿಂದ ಬೃಹತ್ ಅಮೆರಿಕದಲ್ಲಿ
ನಡೆಯುತ್ತಿದೆ. ಗೆಲುವು ದಾಖಲಿಸಲು ಅಗತ್ಯವಿರುವ 270 ಮತಗಳಿಂದ ಬಹುದೂರವಿರುವ, ಕೇವಲ 214 ಮತ ಗಳಿಸಿರುವ
(ಇದನ್ನು ಬರೆಯುವ ವೇಳೆ) ಹಾಲಿ ಅಧ್ಯಕ್ಷರು, ‘ಅಮೆರಿಕದ ಚುನಾವಣೆ ಪ್ರಕ್ರಿಯೆಯಲ್ಲಿ ಮೋಸ ನಡೆದಿದೆ, ನಾನು ಗೆದ್ದಿದ್ದೇನೆ’ ಎಂದು ಘೋಷಿಸಿದ್ದಾರೆ.

ಜಗತ್ತಿನ ಅತಿ ಪ್ರಬಲ ಪ್ರಜಾಪ್ರಭುತ್ವ ಹೊಂದಿರುವ ದೇಶದ ಅಧ್ಯಕ್ಷರೊಬ್ಬರು, ಸೋಲಿನ ಸುಳಿಯಲ್ಲಿರುವಾಗ ಈ ರೀತಿ ಬಡಬಡಿಸುತ್ತಿದ್ದುದು ಎಂತಹ ಅಭಾಸವನ್ನು ಸೃಷ್ಟಿಸಿ ತೆಂದರೆ, ಅಧ್ಯಕ್ಷರ ಮಾತುಗಳನ್ನು ನೇರ ಪ್ರಸಾರ ಮಾಡುತ್ತಿದ್ದ ಟಿವಿಗಳು, ಆ ದೃಶ್ಯವನ್ನು ಮರೆಗೆ ಸರಿಸಿ, ಉದ್ಘೋಷಕರು ಮಧ್ಯಪ್ರವೇಶಿಸಿ ‘ಸನ್ಮಾನ್ಯ ಅಧ್ಯಕ್ಷರು ಹೇಳುವ ವಿಚಾರ ಸತ್ಯಕ್ಕೆ ದೂರವಾದುದು, ಯಾರು ಗೆದ್ದಿದ್ದಾರೆ ಎಂಬ ಫಲಿತಾಂಶ ಇನ್ನೂ ಘೋಷಣೆ ಯಾಗಿಲ್ಲ, ಆದ್ದರಿಂದ ಟ್ರಂಪ್ ಗೆದ್ದಿದ್ದಾರೆ ಎಂದು ಈಗಲೇ ಹೇಳುವುದು ತಪ್ಪಾಗುತ್ತದೆ’ ಎಂಬ ಸೃಷ್ಟೀಕರಣ ನೀಡಿದವು! ಇದನ್ನು ಕಂಡ ಜಗತ್ತಿನ ಜನರು ಮೊದಲಿಗೆ ಬೆರಗಾ ದರು, ನಂತರ ಅಪಹಾಸ್ಯ ಮಾಡಿ ನಕ್ಕರು!

ಇಷ್ಟಾದರೂ, ತಾನೇ ಗೆದ್ದಿದ್ದು ಮತ್ತು ಮತ ಎಣಿಕೆಯ ಅಕ್ರಮಗಳ ವಿರುದ್ಧ ನ್ಯಾಯಾಲ ಯದ ಮೊರೆ ಹೋಗುತ್ತೇನೆ ಎಂದು ಟ್ರಂಪ್ ಸಂದೇಶಗಳನ್ನು ಕಳಿಸುತ್ತಲೇ ಇದ್ದು, ಕೆಲವು ರಾಜ್ಯಗಳ ನ್ಯಾಯಾಲಯದಲ್ಲಿ ದಾವೆಯನ್ನೂ ಹೂಡಿದ್ದಾರೆ. ಜತೆಗೆ, ತನ್ನ ಬೆಂಬಲಿಗರಿಗೆ ಬೀದಿಗಿಳಿದು ಪ್ರತಿಭಟಿಸಿ ಎಂದು ಕರೆಕೊಟ್ಟಿದ್ದರಿಂದ, ಹತ್ತೈವತ್ತು ನಗರಗಳಲ್ಲಿ ಅವರ ಬೆಂಬಲಿಗರು ದೊಂಬಿಯ ಸ್ಥಿತಿ ನಿರ್ಮಿಸಿದ್ದಾರೆ.

ಸಾಯುವ ತನಕ ಹೋರಾಡಿ ಅಧ್ಯಕ್ಷ ಟ್ರಂಪ್ ಅವರ ಸಂದೇಶಗಳಿಗಿಂದ ಅಪಾಯಕಾರಿ ಎನಿಸುವ ಹೇಳಿಕೆಗಳನ್ನು ಅವರ ಕುಟುಂಬದವರು ಮತ್ತು ಬೆಂಬಲಿಗರು ನೀಡುತ್ತಿದ್ದಾರೆ! ಟ್ರಂಪ್ ಅವರ ಆಪ್ತರೆನಿಸಿದ ಸ್ಟೀವ್ ಬ್ಯಾನ್ ಅವರು ‘ಡಾ.ಅಂಟೋನಿ ಫಾಕ್ಕಿ ಮತ್ತು ಎಫ್ ಬಿಐ ನಿರ್ದೇಶಕ ಕ್ರಿಸ್ಟೋಫರ್ ರೇ ಅವರ ತಲೆ ಕತ್ತರಿಸಿ’ ಎಂದು ಟ್ವೀಟ್ ಮಾಡಿದ್ದಾರೆ! ಈ ಪ್ರಚೋದನಾಕಾರಿ ಸಂದೇಶ ಕಳಿಸಿದ್ದರಿಂದಾಗಿ, ಅವರ ಖಾತೆ ನಿಷೇಧಕ್ಕೊಳಗಾಗಿದೆ. ಅಧ್ಯಕ್ಷ ಟ್ರಂಪ್ ಅವರ ಮಗ ಜೂನಿಯರ್ ಟ್ರಂಪ್ ಅವರು ‘ಸಾಯುವ ತನಕ ಈ ಚುನಾವಣೆಯಲ್ಲಿ ಹೋರಾಡಿ’ ಎಂದು ಕರೆಕೊಟ್ಟಿದ್ದಾರೆ.

ಅಧ್ಯಕ್ಷ ಟ್ರಂಪ್ ಅವರು ತನ್ನ ಬೆಂಬಲಿಗರಿಗೆ ದೊಂಬಿ ಮಾಡಲು ಕರೆ ಪದೇ ಪದೇ ಕೊಟ್ಟಿದ್ದರಿಂದ, ಅವರ ಕೆಲವು ಬೆಂಬಲಿಗರು ಗನ್ ಹಿಡಿದು ಬೀದಿಯಲ್ಲಿ ಓಡಾಡುತ್ತಿದ್ದಾರೆ. ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ನಿಸ್ಪಕ್ಷಪಾತ ಚುನಾವಣೆ ಯನ್ನು ಇಂತಹದ್ದೇ ರೀತಿ ನಡೆಸಿ ಎಂದು ತಾಕೀತು ಮಾಡುವ ಅಮೆರಿಕವು, ತನ್ನ ದೇಶದ ಚುನಾವಣೆಯಲ್ಲಿ ನಡೆಯುತ್ತಿರುವ ಈ ಗೊಂದಲಗಳನ್ನು, ಅಪಸವ್ಯಗಳನ್ನು ಕಂಡು ತಾನೇ ತಲೆ ತಗ್ಗಿಸುವಂತಾಗಿದೆ.

ಸೋಲಿನ ಅಂಚಿನಲ್ಲಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಬಹಿರಂಗವಾಗಿ ಜನರನ್ನು ದಂಗೆ ಏಳಲು ಕರೆ ನೀಡಿರುವ ವಿಷಯ ಒಂದು ವೈಪರೀತ್ಯ ಎನಿಸಿದರೂ,ಕಾನೂನಿನ ಪ್ರಕಾರ ಅವರಿಗೆ ಇನ್ನೂ ಅಧಿಕಾರವಿದೆ. ಅಧಿಕೃತವಾಗಿ ಅವರು 20.1.2021 ತನಕ ಶ್ವೇತಭವನದಲ್ಲಿ ಅಧ್ಯಕ್ಷ ಸ್ಥಾನದಲ್ಲಿ ಕೂರಲು ಅರ್ಹರು. ಅಮೆರಿಕದ ಮತ ಎಣಿಕೆ ನಿರ್ಣಾಯಕ ಹಂತದಲ್ಲಿದ್ದು, ಜೋ ಬೈಡನ್ ಅವರು 270 ಮತಗಳ ಅತಿ ಸನಿಹಕ್ಕೆ ಬಂದಿದ್ದಾರೆ. ತಮಾಷೆಯೆಂದರೆ, ಇವಿಎಂ ನಂತಹ ಸೌಲಭ್ಯವಿಲ್ಲದ, ಮತಪತ್ರಗಳ ಮೂಲಕ ನಡೆದ ಮತಗಳ ಸಂಪೂರ್ಣ ಎಣಿಕೆ ಕಾರ್ಯ ಮುಗಿಯಲು ಇನ್ನೂ ಒಂದೆರಡು ವಾರಗಳ ಕಾಲಾವಕಾಶ ಬೇಕು, ಆ ಮುಂದುವರಿದ ದೇಶದಲ್ಲಿ!

ಅದೇನಿದ್ದರೂ, ನಿರ್ಣಾಯಕ ಎನಿಸುವ ಕೆಲವು ರಾಜ್ಯಗಳಲ್ಲೂ ಜೋ ಬೈಡನ್ ಮುನ್ನಡೆ ಸಾಧಿಸಿರುವುದರಿಂದ, ಡೊನಾಲ್ಡ್‌
ಟ್ರಂಪ್ ಅವರ ಅಧ್ಯಕ್ಷ ಸ್ಥಾನದ ಕನಸು ಕಮರಿಹೋಗಿದೆ. ಆದರೂ, ಶತಾಯ ಗತಾಯ ತಾನು ಅಧಿಕಾರದಲ್ಲಿ ಮುಂದುವರಿ ಯುವೆ ಎಂಬ ಟ್ರಂಪ್ ಅವರ ಜಿಗುಟುತನಕ್ಕೆ, ಇತಿಹಾಸದಲ್ಲಿ ಕೆಲವು ಉದಾಹರಣೆಗಳಿವೆ. ನಮ್ಮ ದೇಶದ ವಿಚಾರಕ್ಕೆ ಬಂದರೆ, 1975ರಲ್ಲಿ ಇಂದಿರಾ ಗಾಂಧಿಯವರು, ಇದನ್ನು ಹೋಲುವ ಸನ್ನಿವೇಶದಲ್ಲಿ, ಎರಡು ವರ್ಷಕ್ಕೂ ಅಧಿಕ ಅವಧಿಯ ತನಕ ತಮ್ಮ ಗಾದಿಗೆ ಅಂಟಿಕೊಂಡಿದ್ದರು.

ನ್ಯಾಯಾಲಯವು ಅವರ ಚುನಾವಣಾ ಅಕ್ರಮಗಳನ್ನು ಎತ್ತಿ ಹಿಡಿದು, ಅವರ ಆಯ್ಕೆಯನ್ನು ಅನರ್ಹಗೊಳಿಸಿ, ಮುಂದಿನ
ಆರು ವರ್ಷ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದಾಗ, ಒಮ್ಮೆಗೇ ದೇಶದ ಮೇಲೆ ತುರ್ತುಪರಿಸ್ಥಿತಿಯನ್ನು ಹೇರಿ, ತಮ್ಮ
ಹುದ್ದೆಯಲ್ಲಿ ಮುಂದುವರಿದದ್ದು ಅಧಿಕಾರದ ಆಸೆಯಿಂದಾಗಿಯೇ. ಈಗ ಅಮೆರಿಕದಲ್ಲೂ, ಡೊನಾಲ್ಡ್‌ ಟ್ರಂಪ್‌ಗೆ ಅಧಿಕಾರದ
ಆಸೆ ಹತ್ತಿದೆ. ಕಾನೂನಿನಲ್ಲಿ ಇರಬಹುದಾದ ಕೆಲವು ಲೋಪದೋಷಗಳನ್ನು ತನ್ನ ಲಾಭಕ್ಕೆ ಉಪಯೋಗಿಸಿಕೊಂಡು, ಹೇಗಾದರೂ ಮಾಡಿ ಇನ್ನೊಂದು ಅವಧಿಗೆ ಅಧ್ಯಕ್ಷನಾಗಿ ಮುಂದುವರಿಯಬೇಕೆಂಬ ಪ್ರಯತ್ನ ಮಾಡುತ್ತಿದ್ದಾರೆ.

ಕಳೆದ ಚುನಾವಣೆಯಲ್ಲಿ ಅಮೆರಿಕದಲ್ಲಿ ಶೇ.23ರಷ್ಟು ಇರುವ ಪ್ರೊಟೆಸ್ಟೆಂಟ್ ಇವಾಂಜೆಲಿಕಲ್ ಪಂಥದ ಜನರ ಬೆಂಬಲ
ಪಡೆದು, ಗೆಲುವು ಸಾಧಿಸಿದ್ದ ಟ್ರಂಪ್ ಅವರು, ತನ್ನ ಅಧಿಕಾರದ ಅವಧಿಯಲ್ಲಿ ಹಲವು ಬಾರಿ ಬಲಪಂಥೀಯರಿಗೆ ಅನುಕೂಲ
ಮಾಡಿಕೊಟ್ಟಿದ್ದು, ಅವರ ಬೆಂಬಲದಿಂದ ಮರು ಚುನಾವಣೆ ಬಯಸಿದ್ದರು. ಆದರೆ ಈ ಬಾರಿ ಅವರ ತಂತ್ರ ಯಶ ಕೊಡಲಿಲ್ಲ.
ಜನರು ಮತದಾನ ಮಾಡಿ, ಸ್ಪಷ್ಟ ಆದೇಶ ನೀಡಿ ಸೋಲಿಸಿದರೂ, ತಾನು ಅಧ್ಯಕ್ಷ ಪದವಿಯನ್ನು ಬಿಡುವುದಿಲ್ಲ ಎನ್ನುತ್ತಿರುವ
ಟ್ರಂಪ್, ಅದಕ್ಕಾಗಿ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇನೆ ಎನ್ನುವುದನ್ನು ಕಂಡು, ಇಡೀ ವಿಶ್ವವೇ ನಗುತ್ತಿದೆ.

ಪ್ರಜಾಪ್ರಭುತ್ವದ ಅಣಕ ಎಂಬ ಪದವನ್ನು ಅಲ್ಲಲ್ಲಿ ಬಳಕೆ ಮಾಡುವ ಪದ್ಧತಿ ಇದೆ, ಡೊನಾಲ್ಡ್‌ ಟ್ರಂಪ್ ಅವರ ಈ ವಾರದ
ನಡೆಗಳು, ನುಡಿಗಳು ಅದಕ್ಕೆ ಪೂರಕ ಎನಿಸುವುದಿಲ್ಲವೆ?

ಜೋ ಬೈಡನ್ ಮತ್ತು ಕಮಲಾ ಹ್ಯಾರಿಸ್
20.11.1942ರಂದು ಜನಸಿದ ಜೋ ಬೈಡನ್, ಶ್ವೇತ ಭವನವನ್ನು ಪ್ರವೇಶಿಸುವ ಅತಿ ಹಿರಿಯ ಅಧ್ಯಕ್ಷರೆನಿಸುವ ದಾಖಲೆ ಬರೆಯ ಲಿದ್ದಾರೆ. ಏಳು ಬಾರಿ ಸೆನೆಟರ್ ಆಗಿದ್ದ, ಎರಡು ಬಾರಿ ಉಪಾಧ್ಯಕ್ಷರಾಗಿದ್ದ ಜೋ ಬೈಡನ್, ಅಮೆರಿಕದ ರಾಜಕಾರಣದಲ್ಲಿ ಬಹು ಪಳಗಿದ ಹಿರಿಯ ಮುತ್ಸದ್ದಿ. ಇವರ ಅಧ್ಯಕ್ಷಾವಧಿಯಲ್ಲಿ ಅಮೆರಿಕ ಮತ್ತು ಭಾರತದ ಸಂಬಂಧ ಈಗಿರುವಂತೆಯೇ ಮುಂದು ವರಿಯಬಹುದು ಎಂಬ ನಿರೀಕ್ಷೆ ಇದೆ. ಜೋ ಬೈಡನ್ ಅಧ್ಯಕ್ಷರಾಗುವ ಪ್ರಕ್ರಿಯೆಯಲ್ಲಿ, ಭಾರತದ ಮೇಲೆ ತುಸು ಪರಿಣಾಮ ಬೀರಬಲ್ಲ ಒಂದು ಬೆಳವಣಿಗೆ ಎಂದರೆ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಉಪಾಧ್ಯಕ್ಷರಾಗುವ ಅವಕಾಶ.

ಜೋ ಬೈಡನ್ ಜತೆಯಲ್ಲೇ ಉಪಾಧ್ಯಕ್ಷರಾಗುವ ಕಮಲಾ ಹ್ಯಾರಿಸ್, ಭವಿಷ್ಯದಲ್ಲಿ ಅಮೆರಿಕದ ರಾಜಕೀಯದಲ್ಲಿ ಬಹು ಮುಖ್ಯ ನಿರ್ಣಯ ತೆಗೆದುಕೊಳ್ಳುವ ಸಂದರ್ಭ ಬರಬಹುದು. ಜೋ ಬೈಡೆನ್ ಒಮ್ಮೆ ಮಾತ್ರ ಅಧ್ಯಕ್ಷರಾಗಿ, ಮರು ಚುನಾವಣೆ ಬಯಸುವು ದಿಲ್ಲ ಎಂದು ತಿಳಿಯಲಾಗಿದೆ. ಹಾಗಾದಲ್ಲಿ, 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ಅಭ್ಯರ್ಥಿಯಾಗುವ ಅವಕಾಶವೂ ಇದೆ!

ಕಮಲಾ ಹ್ಯಾರಿಸ್ ಅವರ ತಾಯಿಯ ಮೂಲವು ತಮಿಳು ನಾಡು ಎನಿಸಿದರೂ, ಅವರ ತಂದೆ ಆಫ್ರಿಕನ್ ಮೂಲದವ
ರಾಗಿರುವುದರಿಂದ, ಕಮಲಾ ಅವರು ಆ ವಿಚಾರವನ್ನು ಮುನ್ನೆಲೆಯಲ್ಲಿಟ್ಟುಕೊಂಡು ಚುನಾವಣಾ ಪ್ರಚಾರವನ್ನು ಮಾಡಿದ್ದರು. ಅದೇನೇ ಇದ್ದರೂ, ಕಮಲಾ ಹ್ಯಾರಿಸ್ ಉಪಾಧ್ಯಕ್ಷರಾಗುವ ಸಂದರ್ಭವನ್ನು ತಮಿಳುನಾಡಿನ ತಿರುವಾರೂರು ಜಿಲ್ಲೆಯ ತುಳ ಸೇಂದ್ರಪುರಂ ಊರಿನ ಜನರು ಬಹುವಾಗಿ ಸಂಭ್ರಮಿಸಿದರು. ಮನೆ ಮುಂದೆ ರಂಗೋಲಿ ಹಾಕಿ ಕಮಲಾ ಹ್ಯಾರಿಸ್‌ಗೆ ಜಯವನ್ನು ಹಾರೈಸಿದರು. ತನ್ನ ಹಿರಿಯರು ಯಾವ ದೇಶದವರೇ ಆಗಿರಲಿ, ಪ್ರಸ್ತುತ ಜಾಗತಿಕ ಸನ್ನಿವೇಶದಲ್ಲಿ ಕಮಲಾ ಹ್ಯಾರಿಸ್ ಅವರ ರಾಜಕೀಯ ನಿಲುವುಗಳು ಸ್ಪಷ್ಟವಿವೆ. ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕಿದಾಗ ಅವರು ಭಾರತ ಸರಕಾರದ ನಡೆಯನ್ನು ಟೀಕಿಸಿದ್ದುಂಟು. ಆದ್ದರಿಂದ, ಅವರು ಉಪಾಧ್ಯಕ್ಷರೇ ಆಗಲಿ, ಮುಂದೊಂದು ದಿನ ಅಮೆರಿಕದ ಅಧ್ಯಕ್ಷರೇ ಆಗಲಿ, ಅವರ ನಿರ್ಣಯಗಳೇನಿದ್ದರೂ, ಅಮೆರಿಕದ ಪರ, ಅಲ್ಲಿನ ಸಮಾಜದ ಪರ ಎಂದಷ್ಟೇ ಈಗ ಹೇಳಬಹುದು.