Wednesday, 11th December 2024

ಸ್ಕಾಟ್’ಲೆಂಡ್’ನ ಹೈಲ್ಯಾಂಡ್ಸ್’ನಲ್ಲಿ

ಡಾ.ಕೆ.ಎಸ್.ಪವಿತ್ರ

ಸ್ಕಾಟ್‌ಲೆಂಡ್‌ನ ಬೆಟ್ಟಗುಡ್ಡಗಳ ಪ್ರದೇಶವು ನೋಡಲು ಸುಂದರ. ಇಲ್ಲಿನ ಸರೋವರದಲ್ಲಿ ನೆಸ್ಸಿ ಎಂಬ ನಿಗೂಢ ಪ್ರಾಣಿ ಇದೆ ಎಂದು ಪ್ರಚಾರ ಮಾಡಿ, ಆ ಪ್ರಚಾರವನ್ನೇ ಪ್ರವಾಸೋದ್ಯಮಕ್ಕೆ ಬಳಸಿಕೊಳ್ಳುವ ಆ ಜನರ ಕೌಶಲ ಮನ ಸೆಳೆಯು ತ್ತದೆ.

ಎಡಿನ್‌ಬರೋದ ಕೋಟೆಯ ಸುತ್ತ ತಿರುಗಾಡುತ್ತಿದ್ದೆವು. ನಮ್ಮ ಹತ್ತು ದಿನಗಳ ಸ್ಕಾಟ್‌ಲೆಂಡ್ ಪ್ರವಾಸದಲ್ಲಿ ಆಗಿದ್ದದ್ದು ಇನ್ನೂ ಮೂರೇ ದಿನ. ಆಗಲೇ ನಾವು ನೋಡಿದ್ದು, ಕ್ಯಾಸಲ್‌ನ ಬೀದಿಯಲ್ಲಿ ಹಾಕಿದ್ದ ‘ಹೈಲ್ಯಾಂಡ್ಸ್‌ ಪ್ರವಾಸ’ ದ ಜಾಹೀರಾತು. ಮಕ್ಕಳು ಕೇಳಿದ್ದರು.

‘ಏನಿದು ಹೈಲ್ಯಾಂಡ್ಸ್‌? ಬೆಟ್ಟ-ಗುಡ್ಡದ ಟ್ರೆಕಿಂಗ್‌ಗಾ? ಘಾಟ್ ಸೆಕ್ಷನ್ನಾದರೆ ಬೇಡವೇ ಬೇಡ’ ಎಂದು ಹೆದರಿದ್ದರು. ನಿಜವಾಗಿ ಹೇಳ ಬೇಕೆಂದರೆ ನನಗೂ ‘ಹೈಲ್ಯಾಂಡ್ಸ್‌’ ಎಂದರೆ ‘ಪರ್ವತ ಪ್ರದೇಶ’ ಎಂಬುದರ ಸಾಮಾನ್ಯ ಜ್ಞಾನ ಬಿಟ್ಟರೆ ಮತ್ತೇನೂ ಗೊತ್ತಿರಲಿಲ್ಲ. ಎಲ್ಲರನ್ನೂ ಒಪ್ಪಿಸಿ ಒಂದು ದಿನದ ಹೈಲ್ಯಾಂಡ್ಸ್ ಪ್ರವಾಸಕ್ಕೆ ಸೀಟುಗಳನ್ನು ಕಾದಿರಿಸಿಯೇ ಬಿಟ್ಟೆ.

ಅಕ್ಟೋಬರ್‌ನ ಛಳಿಯಲ್ಲಿ, 5 ಗಂಟೆಯ ಬೆಳಗಿನ ಜಾವ, ಇನ್ನೂ ಕತ್ತಲಿರುವಾಗಲೇ, ಒಂದು ದೊಡ್ಡ ಬಸ್ಸಿನ ಒಳಗೆ ಕುಳಿತೆವು. ಹೊರಗಿನ ನೋಟ ಸ್ಪಷ್ಟವಾಗಿ ಕಾಣುವ ರೀತಿಯಲ್ಲಿದೊಡ್ಡ, ಸರಳುಗಳಿಲ್ಲದ, ಕೇವಲ ಪಾರದರ್ಶಕ ಗಾಜಿರುವ ಕಿಟಕಿಗಳು ನಾವು ಹೊರಗೇ ಕುಳಿತಿದ್ದೇವೆ ಎಂಬ ಭ್ರಮೆ ಮೂಡಿಸುವಂತಿತ್ತು. ಪ್ರವಾಸದಲ್ಲಿ ನಾವು ಹೋಗುವ ಸ್ಥಳದ ಬಗೆಗಿನ ವಿವರಣೆಯನ್ನು ನೀಡುವ ಮಾರ್ಗದರ್ಶಕನೂ, ನಮ್ಮ ಚಾಲಕನೂ ಆಗಿದ್ದ ಜಾರ್ಜ್, ಸ್ಟಾಟ್ಡ್ಲ್ಯಾಂಡ್‌ನ ಪುರುಷರ ಚೌಕಳಿಯ ಸ್ಕರ್ಟ್ ಧರಿಸಿಯೇ ಬಂದಿದ್ದ. ನಮ್ಮ ಬಸ್ಸನ್ನೇ ಕೈಯಲ್ಲಿ ಹಿಡಿದು ಓಡಬಹುದೇನೋ ಎಂಬ ಭಾವನೆ ಬರಿಸುವ ಆತನ ಬೃಹದಾಕಾರಕ್ಕೂ, ಆತ ನುಟ್ಟಿದ್ದ ಪಕ್ಕಾ ಹುಡುಗಿಯರದ್ದು ಎಂದು ಭಾವಿಸುವ ನೆರಿಗೆಯ ಸ್ಕರ್ಟ್‌ಗೂ ವಿಚಿತ್ರ ಸಂಬಂಧ ಎನಿಸಿ, ಮಕ್ಕಳು ನಕ್ಕಿದ್ದೂ ನಕ್ಕಿದ್ದೇ.

ವಿಭಿನ್ನ ಪಾರ್ವತೇಯ ಸಂಸ್ಕೃತಿ
15ರಿಂದ 20ನೇ ಶತಮಾನದ ಮಧ್ಯ ಭಾಗದವರೆಗೆ ಸ್ಕಾಟ್’ಲ್ಯಾಂಡ್’ನ ಲೋಲ್ಯಾಂಡ್ಸ್’‌‌ಗಿಂತ ಪರ್ವತ ಪ್ರದೇಶ ಅಥವಾ ಹೈಲ್ಯಾಂಡ್ಸ್‌ ಬೇರೆಯಾಗಿದ್ದದ್ದು ಮುಖ್ಯವಾಗಿ ಮಾತನಾಡುವ ಭಾಷೆಯಿಂದ. ‘ಗೇಲಿಕ್’ ಎಂಬ ಭಾಷೆಯ ಪ್ರದೇಶ ಇದು. ಇಂದು ಇಂಗ್ಲಿಷ್ ಇಲ್ಲಿಯ ಭಾಷೆಯಾಗಿದ್ದರೂ, ಅದಕ್ಕೂ ಗೇಲಿಕ್ ಲೇಪನವಿದೆ. ಭಾಷೆಯೊಂದಿಗೆ ಇಲ್ಲಿನ ಸಂಸ್ಕೃತಿಯೂ ವಿಶಿಷ್ಟ.

ಧರಿಸುವ ವೇಷಭೂಷಣ, ಆತಿಥ್ಯ, ಆಹಾರ, ಜೀವನಶೈಲಿ ಎಲ್ಲವೂ ಬೇರೆ. ಅದರ ಒಂದು ಕುರುಹಾಗಿಯೇ ನಮ್ಮ ಮಾರ್ಗದರ್ಶಕ ಜಾರ್ಜ್ ಸ್ಕರ್ಟ್ ಧರಿಸಿ ಬಂದಿದ್ದು. ಐತಿಹಾಸಿಕವಾಗಿ ಹೈಲಾಂಡ್‌ಸ್‌‌ನ ಮುಖ್ಯ ಸಾಮಾಜಿಕ ಪಂಗಡ ‘ಕ್ಲ್ಯಾನ್’ -ಇದು ಸ್ಕಾಟಿಷ್ ರಾಜರಿಗೆ ಒಂದು ಸವಾಲಾಗಿತ್ತು. ನೆಲದ ಕಾನೂನಿನ ಹಿಡಿತಕ್ಕೆ ಈ ‘ಕ್ಲ್ಯಾನ್’ ಪಂಗಡ ಸಿಕ್ಕುತ್ತಿರಲಿಲ್ಲ. ಅದಕ್ಕೆೆ ಕಾರಣ ಅವರವರದ್ದೇ ಆದ ಕಾನೂನುಗಳು. ಕ್ರಮೇಣ ನಡೆದ ಹಲವು ಸಂಘರ್ಷಗಳು, ಏಳು-ಬೀಳು ಎಲ್ಲದರ ನಂತರ ಈಗ ಹೈಲ್ಯಾಂಡ್ಸ್‌ ಒಂದು ಪ್ರಾಕೃತಿಕ, ಸಾಂಸ್ಕೃತಿಕ, ಸುಂದರ, ಅಷ್ಟೇನೂ ಜನರಿರದ ತಾಣ. ‘ಸಿಹಿ -ಮಸಾಲೆಯುಕ್ತ ಹಣ್ಣು- ಮಾಲ್ಟ್‌ ಮಿಶ್ರಣ’ದ ವಿಸ್ಕಿ ಸಿಗುವ ಪ್ರಸಿದ್ಧ ಸ್ಥಳ.

ಉತ್ತರ ಭಾಗದ ಪರ್ವತ ಪ್ರದೇಶದಲ್ಲಿರುವ ಲಾಕ್ ನೆಸ್ ಎಂಬ ದೊಡ್ಡ ಸರೋವರದ ಸುತ್ತಮುತ್ತ ಹಲವು ಪ್ರೇಕ್ಷಣೀಯ ಸ್ಥಳ ಗಳಿವೆ. ಹಾಗಾಗಿ ಲಾಕ್ ನೆಸ್ ಗೆ ಹೋದರೆ ಹೈಲ್ಯಾಂಡ್ಸ್‌‌ನ ಅನುಭವ ನಮಗೆ ಒಂದೇ ದಿನದಲ್ಲಿ ಲಭ್ಯ. ‘ಗ್ಲೆನ್’ ಎಂಬ ಪರ್ವತ ಮಾರ್ಗದಲ್ಲಿ ಸುತ್ತುತ್ತಾ, ಬಸ್ಸಿನಲ್ಲಿ ಕುಳಿತರೆ, ಭೌಗೋಳಿಕತೆ ಬದಲಾಗುವುದು ಕಾಣತೊಡಗುತ್ತದೆ. ಮರಗಳು, ಹುಲ್ಲಿನ ರೀತಿ, ಹೂವುಗಳು, ಮನೆ ಕಟ್ಟುವ ಶೈಲಿ ಎಲ್ಲವೂ ಬದಲಾಗುವುದನ್ನು ಪ್ರದೇಶದಿಂದ ಪ್ರದೇಶಕ್ಕೆೆ ಗಮನಿಸಬಹುದು. ‘ಪ್ರಯಾ
ಣವೇ ಒಂದು ಬಹು ಮುಖ್ಯ ಆನಂದ’ ಎಂಬ ಮಾತನ್ನು ನೆನಪಿಸಿಕೊಂಡು ವಾಂತಿಯ ಭಯದಿಂದ ಮಲಗಿದ್ದ ಮಕ್ಕಳನ್ನು
ಎಬ್ಬಿಸಿ, ದಾರಿಯುದ್ದಕ್ಕೂ ಜಾರ್ಜ್ ನ ಕಮೆಂಟರಿ ಕೇಳುತ್ತಾ ಸಾಗಿದೆವು.

ಪಯಣಿಸುತ್ತಾ ಮಧ್ಯೆ ಒಂದೆರಡು ಕಡೆ ಯುದ್ಧ ಸ್ಮಾರಕ, ಮತ್ಯಾವುದೋ ಮ್ಯೂಸಿಯಂ ಎಂದು ನಿಲ್ಲಿಸುತ್ತಾರೆ. ಸುಮಾರು ಆರು ಗಂಟೆಗಳ ಪ್ರಯಾಣ ಮಾಡಿ, ನಾವು ಹೋಗಿದ್ದು ‘ಸರೋವರ ನೆಸ್’, ‘ಲಾಕ್‌ನೆಸ್’ನ ಒಂದು ಬದಿಗೆ.

ಉರುಕ್ವುಹಾರ್ಟ್ ಕೋಟೆ
ಇನ್‌ವರ್‌ನೆಸ್ ಎಂಬ ಪಟ್ಟಣದ ಬಳಿ ಇರುವ ನೆಸ್ ಸರೋವರ ಸ್ಕಾಟ್‌ಲ್ಯಾಂಡ್‌ನ ದೊಡ್ಡ ಸರೋವರಗಳಲ್ಲಿ ಒಂದು. ಇವರ ದಡದ ಮೇಲೆ ಉರ್‌ಕ್ವುಹಾರ್ಟ್ ಕೋಟೆ. ಈ ಕೋಟೆ ಸ್ಕಾಟ್ಲ್ಯಾಂಡ್‌ನ ದೊಡ್ಡ ಕೋಟೆಗಳಲ್ಲಿ ಒಂದು. ಗ್ರೇಟ್ ಗ್ಲೆೆನ್ ಎಂಬ ರಸ್ತೆಯಿಂದ ಈ ಕೋಟೆಯ ದೃಶ್ಯಪಳೆಯುಳಿಕೆಯ ಸುಂದರತೆಯಿಂದ ಕಾಣುತ್ತದೆ. ಸುಮಾರು 13-14ನೇ ಶತಮಾನದಲ್ಲಿ ನಿರ್ಮಿಸಿರಬಹುದಾದ ಈ ಕೋಟೆ ಸ್ಕಾಟಿಷ್ ಯುದ್ಧಗಳಲ್ಲಿ, ಸ್ಕಾಟ್ಲ್ಯಾಂಡ್‌ನ ಸ್ವಾತಂತ್ರ್ಯ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ರಾಸ್‌ನ ಮ್ಯಾಕ್ ಡೊನಾಲ್ಡ್‌ ಅರ್ಲ್‌ನಿಂದ ಬಹಳಷ್ಟು ಬಾರಿ ದಾಳಿಗೆ ಸಿಲುಕಿಯೂ ಉಳಿಯಿತು. 17ನೇ ಶತಮಾನದಲ್ಲಿ ಈ ಕೋಟೆಯಲ್ಲಿ ಯಾರೂ ಉಳಿಯದಂತೆ ಹಾನಿಗೊಳಗಾಯಿತು. ಈಗ ಸ್ಕಾಟ್‌ಲ್ಯಾಂಡ್‌ನ ಒಂದು ಪ್ರೇಕ್ಷಣೀಯ ಸ್ಥಳವಾಗಿ,
ಐತಿಹಾಸಿಕ ಸ್ಮಾರಕವಾಗಿ ಉಳಿದಿದೆ. ನಮ್ಮ ಬಸ್ಸಿನ ಬಹಳಷ್ಟು ಸಹ ಪ್ರಯಾಣಿಕರು ಕೋಟೆಯವರೆಗೆ ನಡೆದು ಹೋಗುವ
ಉತ್ಸಾಹ ತೋರಿಸಲೇ ಇಲ್ಲ! ದೂರದಿಂದಲೇ ಕೋಟೆ ನೋಡಿ, ಫೋಟೋ ತೆಗೆದು, ಗೂಗ್ಲಿಸಿ ಇತಿಹಾಸ ಓದಿ ಕೋಟೆಯ ಸಂದರ್ಶನ ಮುಗಿಸಿಬಿಟ್ಟರು!

ನೆಸ್ಸಿ ಮಾನ್‌ಸ್ಟರ್
ಪ್ರವಾಸಿಗರ ನಿರುತ್ಸಾಹ ನೋಡಿ ನಮ್ಮ ಮಾರ್ಗದರ್ಶಕ ಜಾರ್ಜ್ ಕೇಳಿದ ‘ನೀವೆಲ್ಲಾ ‘ನೆಸ್ಸಿ ಮಾನ್‌ಸ್ಟರ್’ ನೋಡಲಾದರೂ ಕ್ರೂಸ್‌ಗೆ ಬರ್ತೀರಾ ಇಲ್ವಾ?’ ಏನಿದು ನೆಸ್ಸೀ ಮಾನ್ ಸ್ಟರ್? ನೆಸ್ ಸರೋವರಕ್ಕೆ ಆ ಹೆಸರು ಬಂದಿರುವುದೇ ‘ನೆಸ್ಸೀ’ ದೈತ್ಯ ಪ್ರಾಣಿ ಆ ಸರೋವರದಲ್ಲಿ ಕಾಣಬಹುದೆಂಬ ಕಲ್ಪನೆಯಿಂದ. ಸಾವಿರದೈನೂರು ವರ್ಷಗಳ ಹಿಂದಿನ ಪುರಾಣಗಲ್ಲಿನ ದೈತ್ಯ ಹಲ್ಲಿಯಂತಹ ಪ್ರಾಣಿಯ ಬಗೆಗಿನ ಜನರ ಉತ್ಸಾಹ ಇನ್ನೂ ಕಡಿಮೆಯಾಗಿಲ್ಲ. 800 ಅಡಿ ಆಳವಿರುವ, 23 ಮೈಲುಗಳಷ್ಟು ಉದ್ದವಿರುವ ಈ ಸರೋವರದಲ್ಲಿ ‘ನೆಸ್ಸಿಯನ್ನು ಹುಡುಕುವ ಜಲಯಾತ್ರೆಗಳೇ ನಡೆಯುತ್ತವೆ.

ಸರೋವರದ ಪಾತ್ರ ದೊಡ್ಡದು. ಅದರ ಮೇಲೆ ದೋಣಿಯಲ್ಲಿ ಯಾನ ಮಾಡುವುದೂ ನಮ್ಮ ಪ್ರವಾಸದ ಮುಖ್ಯ ಭಾಗ. ‘ನೆಸ್ಸಿ’ ಎಂಬ ದೈತ್ಯ ಪ್ರಾಣಿಯ ಒಂದು ದೊಡ್ಡ ಕಲ್ಲಿನ ಪ್ರತಿಮೆಯನ್ನೇ ಅಲ್ಲಿ ಮಾಡಿಟ್ಟಿದ್ದಾರೆ. ಸಂಜೆ ಐದಕ್ಕೆ ಮತ್ತೆ ವಾಪಸ್ ಹೊರಟು, ಇನ್‌ವರ್‌ನೆಸ್ ಮೂಲಕ, ಗ್ರಾಂಪಿಯನ್ ಪರ್ವತಗಳನ್ನು ನೋಡುತ್ತಾ, ಕಾಡಿನ ಮಧ್ಯೆ ಹಾದು ಎಡಿನ್‌ಬರೋಗೆ ವಾಪಸ್ಸಾದೆವು. ಸ್ಕಾಟ್ಲ್ಯಾಂಡ್‌ನ ಹೈಲ್ಯಾಂಡ್ಸ್‌ ಪ್ರವಾಸ ಒಂದೇ ದಿನದ್ದಾದರೂ, ನೋಡುವಂತಹದ್ದನ್ನು ನೋಡಿದ್ದೆೆವು. ಮುಂದೊಮ್ಮೆ ಬಂದು ಹೈಲ್ಯಾಂಡ್ಸ್ ನಲ್ಲಿಯೇ ಉಳಿಯುವಂತಾದರೆ ಎಂಬ ಕನಸು ಕಾಣುತ್ತಾ ಎಡಿನ್‌ಬರೋಗೆ ಮರಳಿದೆವು.

ಕಾಲ್ಪನಿಕ ಪ್ರಾಣಿಗೆ ಪ್ರಚಾರ
ಸಂತ ಕೊಲಂಬಿಯಾ ಎನ್ನುವಾತ, ಏಳನೇ ಶತಮಾನದ ತನ್ನ ಬರಹಗಳಲ್ಲಿ ಇನ್‌ವರ್‌ನೆಸ್‌ನ ಸರೋವರದ ಬಳಿ ಜನರನ್ನು
ಕೊಲ್ಲುತ್ತಿದ್ದ ದೈತ್ಯ ಒಂದು ಪ್ರಾಣಿಯ ಬಗ್ಗೆ ಬರೆಯುತ್ತಾನೆ. 1933ರಲ್ಲಿ, ಲಂಡನ್‌ನ ವರ್ತಮಾನ ಪತ್ರಿಕೆಗಳು ‘ನೆಸ್ಸಿ’ಯನ್ನು ನೋಡಿದವರಿಗೆ ಬಹುಮಾನ ಘೋಷಿಸಿದ್ದೇ, ‘ನೆಸ್ಸಿ’ಯನ್ನು ನೋಡಿದವರ ಸುದ್ದಿಗಳು ಹರಡಿದವು. ಡೇಲಿ ಮೇಲ್ ಎಂಬ ಪತ್ರಿಕೆಯಂತೂ ‘ನೆಸ್ಸೀ ಮಾನ್‌ಸ್ಟರ್ ದಂತಕತೆಯಲ್ಲ, ನಿಜಸಂಗತಿ’ ಎಂಬ ಶೀರ್ಷಿಕೆಯೊಂದಿಗೆ ದೊಡ್ಡ ಪಾದದ ಗುರುತನ್ನು ಪ್ರಕಟಿಸಿ ಬಿಟ್ಟಿತ್ತು. ಆದರೆ ಅದರ ವಿಶ್ಲೇಷಣೆ ಬ್ರಿಟಿಷ್ ಮ್ಯೂಸಿಯಂನಲ್ಲಿ ನಡೆದಾಗ, ಅದು ನೀರು ನಾಯಿಯ ಹೆಜ್ಜೆ ಎಂಬುದು ದೃಢವಾಯಿತು.

ಕೊನೆಗೆ ‘ನೆಸ್ಸಿ’ಯ ಬಗೆಗೆ ಈಗ ಗೊತ್ತಾಗಿರುವ ವೈಜ್ಞಾನಿಕ ಮಾಹಿತಿ ಪ್ರಕಾರ ‘ಹತ್ತು ಸಾವಿರ ವರ್ಷಗಳ ಹಿಂದೆ ಇದ್ದ ಡೈನೋಸಾರ್
ನ ಒಂದು ಜಾತಿಯ ಪಳೆಯುಳಿಕೆಯೇ ನೆಸ್ಸಿ ಕಲ್ಪನೆಗೆ ಮೂಲ ಆಗಿರಬೇಕು’. ಆದರೆ ಇಂದೂ ನೆಸ್ಸೀ ಮಾನ್‌ಸ್ಟರ್ ಇದ್ದೇ ಇದೆ
ಎಂದು ನಂಬುವವರೂ ಇದ್ದಾರೆ!