ಎನ್ನ ಹೃದಯ ದೇಗುಲದಲ್ಲಿ ನೀ ಹಚ್ಚಿದ ಪ್ರೀತಿ ಹಣತೆ ನೀನಿಲ್ಲದೆಯೂ ಉರಿಯುತ್ತಿದೆ, ಸದಾ ಕಾಲ ಅದು ಉರಿಯು ತ್ತಲೇ ಇರುತ್ತದೆ. ಅದು ಎಂದಿಗೂ ಆರದಂತೆ ನೋಡಿಕೊಳ್ಳುವೆ.
ರೂಪೇಶ್ ಸುಮ್ಮನೆ
ಬಿಡು ಆ ದಿನ ನಮ್ಮದಲ್ಲ! ವಿಧಿಯ ಬರವಣಿಗೆಗೆ ನಮ್ಮ ಪ್ರೀತಿ ಪುಟವಾಗಿ ಹರಿದ ದಿನ ಅಷ್ಟೇ. ಅಷ್ಟಕ್ಕೂ ಅವತ್ತು ನಾನಾಡಿದ ಮಾತುಗಳಲ್ಲಿ ತಪ್ಪೆನಿತ್ತು? ‘ಒಂದೇ ವಾರ ಕಣೋ, ನೀನು ಕಣ್ಮುಚ್ಚಿ ಕಣ್ತೆರೆಯುವುದರಲ್ಲಿ ಊರಿಗೋಗಿ ಬಂದ್ಬಿಡ್ತಿನಿ’ ಅಂದವಳು, ‘ಇನ್ನು ನಾನು ಮರಳಿ ಬರಲಾರೆ ಮರೆತುಬಿಡು’ ಅಂದಾಗ, ನಾನು ಮಾತಾಡಬೇಕಾದದ್ದರು ಏನು? ಆ ನನ್ನ ಎರಡು ಮಾತುಗಳಿಗೆ
ಅಷ್ಟೊಂದು ಶಕ್ತಿ ಇದ್ದಿತಾ.. ’ಲೈಫ್ ಟೈಮ್ ಗ್ಯಾರಂಟಿ’ ಎನ್ನುತ್ತಿದ್ದ ಆ ನಿನ್ನ ಪ್ರೀತಿ ಮೂರೇ ತಿಂಗಳಿಗೆ ಮುಕ್ತಾಯ ಕಾಣಿಸುವಷ್ಟು!
’ಮಣ್ಮಲ್ಲಿ ಮಣ್ಣಾಗೊವರೆಗು ಪ್ರೀತಿಸುತ್ತೇನೇ ಕಣೋ.. ನಾನಿಲ್ಲ ಅಂಥ ಬೇರೆ ಹುಡ್ಗಿರ್ ಕಡೆ ನೋಡ್ದೊ ಮಗ್ನೆ ಕೊಂದ್ಬಿಡ್ತೀನಿ’ ಅನ್ನುತ್ತಿದ ಆ ನಿನ್ನ ಮಾತುಗಳು ಬರೇ ಬಿಲ್ಡಪ್ಗಳಾಗಿದ್ದವ? ಹೇಳು.. ಮನದಲ್ಲಿ ಸಾವಿರಾರು ಪ್ರಶ್ನೆಗಳ ಅಲೆಯೆಬ್ಬಿಸಿ ನೀ ಸುಪ್ತಸಾಗರದಂತೆ ಸುಮ್ಮನಿರುವುದಾದರೂ ಯಾಕೆ? ಈ ಪ್ರೀತಿ ಅನ್ನೋ ಮಾಯೆ ಎಂಥವರನ್ನ ಬೇಕಾದರೂ ಮೂರ್ಖರನ್ನಾಗಿಸಿ ಬಿಡುತ್ತದೆ ಅಲ್ವಾ? ಅಮವಾಸ್ಯೆ ಕತ್ತಲ್ಲಲ್ಲೂ ಚಂದ್ರನನ್ನು ಹುಡುಕುವಂತೆ! ನೀನು ನನಗೆ ಸಿಗುವುದು ತುಂಬಾ ಕಷ್ಟ ಅಂತ ನಮ್ಮ ಪ್ರೀತಿಯ ಆರಂಭದಲ್ಲೇ ಗೊತ್ತಿತ್ತಾದರೂ ಈ ಹೃದಯ ನಿನ್ನನ್ನೇ ಇಷ್ಟಪಟ್ಟಿತ್ತು ಯಾಕೆ ಗೊತ್ತಾ? ನೀ ಸಿಗುತ್ತೀಯ- ಬಿಡುತ್ತೀಯ ಎನ್ನುವ ಲೆಕ್ಕಚಾರದ ಪ್ರೀತಿ ಅದಕ್ಕೆ ಬೇಕಿರಲಿಲ್ಲ. ಅಷ್ಟಕ್ಕೂ ನಾನು ನಿನ್ನಲ್ಲಿ ಬಯಸಿದ್ದು ಕಬ್ಬನ್ ಪಾರ್ಕಿನ ಖಾಲಿ ಬೆಂಚಿನ ಮೇಲೆ ಕೂತು ಗಂಟೆಗಟ್ಟಲೇ ಹರಟುವುದನ್ನೊ, ಟಾಕೀಸಿನಲ್ಲಿ ಒಬ್ಬರ ಮೇಲೊಬ್ಬರೊರಗಿ ಸಿನಿಮಾ ನೋಡುವುದನ್ನೋ ಅಥವಾ ಸಿನಿಮಾ ಶೈಲಿಯಲ್ಲಿ ಒಂದೇ ಕಾಫಿ ಕಪ್ಪಿಗೆ ಎರಡು ಸ್ಟ್ರಾ ಹಾಕಿ ಹೀರುವದನ್ನೋ ಅಲ್ಲ!
ನಾ ಮನಃಪೂರ್ವಕವಾಗಿ ಬಯಸಿದ್ದು ರಾಧಾಕೃಷ್ಣರಂತ ಪವಿತ್ರ -ನಿಷ್ಕಲ್ಮಶ ಪ್ರೇಮವನ್ನು. ದೇಹ ಎರಡಾದರೂ ಜೀವ ಒಂದೇ
ಎನ್ನುವ ತನ್ಮಯತೆಯನ್ನು. ಅಗಿದಾಯ್ತ ಬಿಡು.. ಅದ್ದಾದ್ದದರು ಏನು? ಹೃದಯಕ್ಕೆ ಸಣ್ಣ ಪೆಟ್ಟು ತಾನೇ..! ಕಾಲದ ಬಳಿ ಅದಕ್ಕೆ ಮುಲಾಮು ಇದ್ದೇ ಇದೆ. ಹಚ್ಚಿಕೊಳ್ಳುವೆ. ಲೋಕದ ದುರಂತ ಪ್ರೇಮಕಥೆಗಳಲ್ಲಿ ನನ್ನದೂ ಒಂದು ಎಂದುಕೊಳ್ಳುವೆ. ಒಂದಂತೂ ಸತ್ಯ, ತಿಳಿದುಕೋ ಎನ್ನ ಹೃದಯ ದೇಗುಲದಲ್ಲಿ ನೀ ಹಚ್ಚಿದ ಪ್ರೀತಿ ಹಣತೆ ನೀನಿಲ್ಲದೆಯು ಉರಿಯುತ್ತಿದೆ, ಸದಾ ಕಾಲ ಅದು ಉರಿಯುತ್ತಲೇ ಇರುತ್ತದೆ. ಅದು ಎಂದಿಗೂ ಆರದಂತೆ ನೋಡಿಕೊಳ್ಳುವೆ. ಅದರಲ್ಲೆ ನನ್ನ ಬದುಕನ್ನು ಬೆಳಗಿಸಿಕೊಳ್ಳುವೆ.
ಪ್ರೀತಿಗೆ ಸಾವಿಲ್ಲವೆ?
ನಿಜವಾದ ಪ್ರೀತಿಗೆ ಸಾವಿಲ್ಲ ಅಂತಾರೆ, ನಿನ್ನ ಪ್ರೀತಿ ನಿಜವಾದ್ದೇ ಅಗಿತ್ತಾ? ಇಲ್ಲ ನನ್ನದೆ ಭ್ರಮೆಯಾಗಿತ್ತಾ? ನಿನ್ನ ಪ್ರೀತಿ
ನಾಟಕವೇ ಅಗಿದ್ದಾರೆ ನನ್ನ ಹೃದಯವೇ ರಂಗಸಜ್ಜಿಕೆ ಅಗಬೇಕಿತ್ತಾ! ನನಗೊಂದು ಸತ್ಯ ಹೇಳು ಹುಡುಗಿ.. ನಿನ್ನ ಪಾಲಿಗೆನಾದರೂ ನನ್ನ ಹೃದಯ ಕಂಠೀರವ ಸ್ಟೇಡಿಯಂನಂತೆ ಕಾಣಿಸಿತ್ತಾ? ಆಟ ಮುಗಿದ ಮೇಲೇ ಎದ್ದು ಹೋಗುವಂತೆ ಎದ್ದು ಹೋದೆಯಲ್ಲ.
ನೀನೇನೊ ನನ್ನಿಂದ ನೆಪ ಮಾಡಿ ದೂರಾಗಿಬಿಟ್ಟೆೆ, ಅದರೆ ನಿನ್ನ ನೆನಪುಗಳು? ದೇಹಕ್ಕಂಟಿದ ಚರ್ಮಗಳಂತೆ ಅಗೇ ಉಳಿದಿವೆ ಯಲ್ಲ! ಕಾಡುವ ನೆನಪುಗಳನ್ನು ಕೊಲ್ಲುವುದಾದರು ಹೇಗೇ? ನೀನೇ ಹೇಳು.