Wednesday, 11th December 2024

ಭಾರತ ಆಗುತ್ತಿದೆಯೇ ಹೊಸ ಸಿಲಿಕಾನ್ ವ್ಯಾಲಿ ?

ಟೆಕ್‌ ಫ್ಯೂಚರ್‌

ವಸಂತ ಗ ಭಟ್‌

ಸಾಫ್ಟ್‌‌ವೇರ್ ಕ್ಷೇತ್ರದ ತಜ್ಞರು ವಿದೇಶಗಳಲ್ಲಿ ಕೆಲಸ ಹುಡುಕುವುದರ ಬದಲಾಗಿ, ಇಂದು ನಮ್ಮ ದೇಶದಲ್ಲೇ ಹೊಸ ಸಂಸ್ಥೆಗಳನ್ನು ಕಟ್ಟಲು ಆರಂಭಿಸಿದ್ದಾರೆ. ಇದು ಹೀಗೇ ಮುಂದುವರಿದರೆ, ಮುಂದೊಂದು ದಿನ ಭಾರತವೇ ಹೊಸ ಸಿಲಿಕಾನ್ ವ್ಯಾಲಿಯಾಗಿ ಹೊರಹೊಮ್ಮಬಲ್ಲದು.

ಕಳೆದ ಶತಮಾನದ ಕೊನೆಯ ದಶಕವು ಭಾರತದ ಪ್ರತಿಭಾವಂತ ಎಂಜಿನಿಯರ್‌ಗಳಿಗೆ ವಿಶ್ವಾದ್ಯಂತ ಅತ್ಯಂತ ಬೇಡಿಕೆಯಿದ್ದ ಸಮಯ. ಪಾಸ್‌ಪೋರ್ಟ್ ಹೊಂದಿದ ಎಂಜಿನಿಯರ್‌ಗಳಿಗೆ ಅಮೆರಿಕ ಮತ್ತು ಯೂರೋಪ್‌ನಲ್ಲಿ ಕೆಲಸ ಸಿಗುವುದು ಅಂದು
ಸುಲಭವಾಗಿತ್ತು.

2000ನೇ ಇಸವಿ ಆರಂಭವಾದಲ್ಲಿ ಗುಲ್ಲೆಬ್ಬಿಸಿದ್ದ ವೈ2ಕೆ ಎನ್ನುವ ಕಂಪ್ಯೂಟರ್ ದೋಷ ಕೂಡ ಆ ದಿನಗಳಲ್ಲಿ ಸಾವಿರಾರು ಎಂಜಿನಿಯರ್‌ಗಳು ಅಮೇರಿಕ ಸೇರಲು ಕಾರಣವಾಗಿತ್ತು. 1990 ರಿಂದ ಸುಮಾರು 2005 ರ ವರೆಗೆ ಹೆಚ್ಚಿನ ಭಾರತೀಯ ಸಾಫ್ಟ್ ‌‌ವೇರ್ ಸಂಸ್ಥೆಗಳು ಭಾರತೀಯ ಉದ್ಯೋಗಿಗಳನ್ನು ವಿದೇಶಗಳಿಗೆ ಕಳುಹಿಸಿ ಅಲ್ಲೇ ಸೇವೆ ಒದಗಿಸುವುದನ್ನೇ ಮುಖ್ಯ ಉದ್ಯೋಗ ಮಾಡಿಕೊಂಡಿದ್ದರು.

ಅಮೆರಿಕದ ಸಿಲಿಕಾನ್ ವ್ಯಾಲಿ ಆಗಿನ ಕಾಲದ ಬುದ್ಧಿವಂತ ಎಂಜಿನಿಯರ್‌ಗಳ ಕನಸಾಗಿತ್ತು. ಸಾಫ್ಟ್‌‌‌ವೇರ್ ಕ್ಷೇತ್ರದ ಹೆಚ್ಚಿನ ಹೆಸರಾಂತ ಕಂಪನಿಗಳು ಹುಟ್ಟಿದ್ದು ಇದೇ ಸಿಲಿಕಾನ್ ವ್ಯಾಲಿಯಲ್ಲಿ. 2008 ರಿಸೆಶನ್ ನಂತರ ಸಾಫ್ಟ್‌‌ವೇರ್ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಗಳಾಯಿತು. ನಮ್ಮ ದೇಶದಲ್ಲೇ ಎಂದು ಹಲವಾರು ಸಂಸ್ಥೆಗಳು ಹುಟ್ಟಿಕೊಂಡಿವು ಮತ್ತು ಲಾಭಗಳಿಸಲಾರಂಭಿಸಿ ದವು. ಸದ್ಯ ವಿದೇಶಗಳನ್ನು ಅರಸುವವರ ಸಂಖ್ಯೆ ಕಡಿಮೆಯಾಗಿ ಇಲ್ಲೇ ಏನಾದರೂ ಮಾಡಬೇಕು ಎನ್ನುವವರ ಸಂಖ್ಯೆ ಹೆಚ್ಚುತ್ತಿದೆ, ಪರಿಸ್ಥಿತಿ ಹೀಗೆ ಮುಂದುವರಿದರೆ ಭಾರತವಾಗಲಿದೆಯೇ ಮುಂದಿನ ಸಿಲಿಕಾನ್ ವ್ಯಾಲಿ?

ಆರ್ಥಿಕ ಹಿಂಜರಿತ ಕಲಿಸಿದ ಪಾಠ

2008 ರ ರಿಸೆಷನ್ ಎಲ್ಲರಿಗೂ ಒಂದು ಪಾಠ ಕಲಿಸಿತು. ವಿದೇಶದ ಪ್ರಾಜೆಕ್ಟ್‌‌ಗಳನ್ನು ತಂದು ಇಲ್ಲೇ ಆ ಕೆಲಸ ಮಾಡುತ್ತಿದ್ದ ಮತ್ತು ತಮ್ಮ ನೌಕರರನ್ನು ವಿದೇಶಕ್ಕೆ ಕಳುಹಿಸುತ್ತಿದ್ದ ಸಂಸ್ಥೆಗಳಿಗೆ ಈ ರಿಸೆಷನ್ ಬಲವಾದ ಪೆಟ್ಟುಕೊಟ್ಟಿತು. ಕೆಲ ಕಾಲ ಬಹಳಷ್ಟು ಮಂದಿ ಕೆಲಸವಿಲ್ಲದಂತಾದರು. ಆಗ ದೊಡ್ಡ ಸಂಸ್ಥೆಗಳಲ್ಲಿದ್ದ ಕೆಲವು ಪ್ರತಿಭಾವಂತರು ಈ ರೀತಿ ವಿದೇಶಿ ಸಂಸ್ಥೆಗಳ ಮೇಲೆ ಸಂಪೂರ್ಣ ಅವಲಂಬನೆ ಆಗುವ ಬದಲು ತಮ್ಮದೇ ಆದ ಸಂಸ್ಥೆ ಕಟ್ಟಲು ಯೋಚಿಸಿದರು. ಓಲಾ, ಫ್ಲಿಪ್‌ಕಾರ್ಟ್, ಜೇರೋಧ ಇನ್ನೂ ಬಹಳಷ್ಟು ಸಂಸ್ಥೆಗಳು ಆರಂಭವಾದುದು ಅದೇ ಸಮಯದಲ್ಲಿ. ಓಲಾ, ಫ್ಲಿಪ್ ಕರ್ಟ್ ತರಹದ ಸಂಸ್ಥೆಗಳು ಆದಾಗಲೇ ಜಾಗತಿಕವಾಗಿ ಲಭ್ಯವಿದ್ದ ಸೇವೆಗಳನ್ನು ಭಾರತದ ಅವಶ್ಯಕತೆಗೆ ತಕ್ಕಂತೆ ರೂಪಾಂತರಿಸಿ ಯಶಸ್ವಿಯಾದರು. ರೆಡ್ ಬಸ್ ತರಹದ ಬಸ್ ಟಿಕೀಟು ಕಾಯ್ದಿರಿಸುವ ಸಂಸ್ಥೆಗಳು ಸ್ಥಳೀಯ ಜನರ ಅಗತ್ಯಗಳನ್ನು ಕಂಡು, ಅದಕ್ಕೆೆ ಸರಿಎನಿಸುವ ಸಾಫ್ಟ್‌‌ವೇರ್ ಉತ್ಪನ್ನ ಗಳನ್ನು ಸಿದ್ಧಪಡಿಸಿದರು.

ಬದಲಾದ ವಿದೇಶಿ ಸಂಸ್ಥೆಗಳ ಅಭಿಪ್ರಾಯ

ಮೊದಲು ಭಾರತೀಯ ಎಂಜಿನಿಯರ್‌ಗಳನ್ನು ತಮ್ಮ ದೇಶಕ್ಕೆ ಕರೆಸಿಕೊಂಡು ಅವರ ಬಳಿ ತಮ್ಮ ಪ್ರಾಜೆಕ್ಟ್‌‌ಗಳನ್ನು ಮಾಡಿಸು ತ್ತಿದ್ದ ವಿದೇಶಿ ಸಂಸ್ಥೆಗಳು ಕಾಲ ಕ್ರಮೇಣ ಭಾರತದ ಮುಕ್ತ ಅಂತಾರಾಷ್ಟ್ರೀಯ ನೀತಿಯಿಂದಾಗಿ ತಮ್ಮ ಶಾಖೆಗಳನ್ನು ಇಲ್ಲೇ ತೆರೆಯಲಾರಂಭಿಸಿದವು ಮತ್ತು ಹೆಚ್ಚು ಮಾನವ ಸಂಪನ್ಮೂಲ ಬೇಡುವ ಕೆಲಸವನ್ನು ಭಾರತಕ್ಕೆ ವರ್ಗಾಯಿಸಲಾರಂಭಿಸಿದರು.

ಗೂಗಲ್, ಮೈಕ್ರೋಸಾಫ್ಟ್‌, ಲಿಂಕ್ಡ್‌‌‌ಇನ್ ತರಹದ ವಿದೇಶಿ ಸಂಸ್ಥೆಗಳು ಇಂದು ಬೆಂಗಳೂರಿನಲ್ಲಿ ತಮ್ಮ ಕಚೇರಿಯನ್ನು ಹೊಂದಿವೆ. ಯಾವಾಗ ಸಂಸ್ಥೆಗಳು ಭಾರತದಲ್ಲೇ ದೊಡ್ಡ ಕಚೇರಿಗಳನ್ನು ತೆಗೆದು ಸಾವಿರಾರು ನೌಕರರನ್ನು ಕೆಲಸಕ್ಕೆ ಇಟ್ಟುಕೊಂಡರೋ, ವಿದೇಶಕ್ಕೆ ಕಳುಹಿಸುವ ಅನಿವಾರ್ಯತೆ ಕೂಡ ಕಡಿಮೆಯಾಯಿತು.

ಇತ್ತೀಚಿನ ಕೆಲ ವರ್ಷಗಳಲ್ಲಿ ವಿದೇಶದಲ್ಲಿ ನೆಲೆಸಿ ಉತ್ತಮ ಕೆಲಸದಲ್ಲಿದ್ದ ಎಂಜಿನಿಯರ್ ಗಳು ಸಹ ಭಾರತದ ಈ ಉತ್ತಮ
ಬೆಳವಣಿಗೆಯನ್ನು ನೋಡಿ ಭಾರತಕ್ಕೆ ವಾಪಸಾಗಿ ಉದ್ಯಮವನ್ನು ಸ್ಥಾಪಿಸಿ ಯಶಸ್ವಿಯಾಗಿದ್ದಾರೆ. ಗ್ರಾಹಕ ಸೇವೆಗೆ ಅವಶ್ಯವಿರುವ ಎಲ್ಲಾ ಸೇವೆಯನ್ನು ಒದಗಿಸುವ ಫ್ರೇಶ್ ಡೆಸ್ಕ್‌, ಫರ್ನಿಚರ್‌ಗಳನ್ನು ಬಾಡಿಗೆ ಕೊಡುವ ಪೆಪ್ಪರ್ ಫ್ರೈ, ಆನ್‌ಲೈನ್‌ನಲ್ಲಿ ಡಾಕ್ಟರ್ ಅನ್ನು ಭೇಟಿ ಮಾಡುವ ಸೇವೆ ಒದಗಿಸುವ ಪ್ರಾಕ್ಟೋ ಇನ್ನೂ ಹಲವಾರು ಸಂಸ್ಥೆಗಳು ಈ ರೀತಿ ಎನ್ ಆರ್ ಐ ಎಂಜಿನಿಯರ್ ‌ಗಳಿಂದ ಆರಂಭವಾದ ಲಾಭದಾಯಕ ಸಂಸ್ಥೆಗಳು.

2020ರ ಹನ್ನೊಂದು ಸಂಸ್ಥೆಗಳು

ಯಾವಾಗ ಒಂದು ಖಾಸಗಿ ಒಡೆತನದ ಸಂಸ್ಥೆ ಒಂದು ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯವನ್ನು ಹೊಂದುತ್ತದೆಯೋ ಅಂತಹ ಸಂಸ್ಥೆಯನ್ನು ಯುನಿಕಾರ್ನ್ ಎಂದು ಹೇಳುತ್ತಾರೆ. ಭಾರತದಲ್ಲಿ ಈ ವರೆಗೆ ಒಟ್ಟು 34 ಯೂನಿಕಾರ್ನ್ ಸಂಸ್ಥೆಗಳಿದ್ದು 2020 ರಲ್ಲೇ ಹೊಸದಾಗಿ 11 ಸಂಸ್ಥೆಗಳು ಈ ಪಟ್ಟಿಗೆ ಸೇರಿದ್ದು, ಈಗ ಭಾರತ ಜಗತ್ತಿನ ಮೂರನೇ ಅತಿ ಹೆಚ್ಚು ಯೂನಿಕಾರ್ನ್ ಸಂಸ್ಥೆಗಳನ್ನು ಹೊಂದಿದ ದೇಶವಾಗಿದೆ. ಮೊಬೈಲ್‌ನಲ್ಲಿ ಹಣ ವರ್ಗಾಯಿಸುವ ಫೋನ್ ಪೆ, ಉಪಯೋಗಿಸಿದ ಕಾರುಗಳನ್ನು ಮಾರುವ ಜಾಲತಾಣ ಕಾರ್ಸ್ 24, ಆನ್‌ಲೈನ್ ಶಿಕ್ಷಣಕ್ಕೆ ಮೀಸಲಾದ ಆನ್ ಅಕಾಡೆಮಿ ಹೆಸರಿಸಬಹುದಾದಂತಹ ಕೆಲವು ಸಂಸ್ಥೆಗಳು. 2021 ರಲ್ಲೇ ಇವುಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಸೇವೆ ಆಧಾರಿತ ಕ್ಷೇತ್ರಕ್ಕೆ ಹೆಸರಾಗಿರುವ ಭಾರತವು, ಉತ್ಪನ್ನಗಳನ್ನು ಸೃಷ್ಟಿಸುವ ದೇಶವಾಗಿ ಹೊರಹೊಮ್ಮುವುದು ಬಹಳ ದೂರದ ಮಾತಲ್ಲ.

ಸಿಲಿಕಾನ್ ವ್ಯಾಲಿ ಎಂದರೇನು?
ಒಂದು ಕಾಲದಲ್ಲಿ ಕಂಪ್ಯೂಟರ್ ಆ್ಯಪ್ ಮಾಡುವ ಹಲವಾರು ಸಂಸ್ಥೆಗಳು ಈ ಪ್ರದೇಶದಲ್ಲಿ ಇದ್ದ ಕಾರಣ ಮತ್ತು ಕಂಪ್ಯೂಟರ್ ಆ್ಯಪ್‌ನಲ್ಲಿ ಸಿಲಿಕಾನ್‌ಅನ್ನು ಜಾಸ್ತಿ ಬಳಸುವುದರಿಂದ, ಅಮೆರಿಕದ ಕ್ಯಾಲಿಫೋರ್ನಿಯಾ ಪ್ರದೇಶಕ್ಕೆ ಸಿಲಿಕಾನ್ ವ್ಯಾಲಿ ಎಂಬ ಹೆಸರು ರೂಢಿಗೆ ಬಂತು.