ಆವಿಷ್ಕಾರದ ಹರಿಕಾರ ಪುಸ್ತಕದ ಆಯ್ದಭಾಗ
ಸೆಡರೊಟ್‌ನಲ್ಲಿ ಅಪಾಯದ ಸೈರನ್ ಮೊಳಗಿತು. ಇಸ್ರೇಲಿನ ಪುಟ್ಟ ಪಟ್ಟಣದ ಜನರೆಲ್ಲ ಸಮೀಪದ ಬಾಂಬ್ ಷೆಲ್ಟರ್‌ಗೆ ಹೋಗಿ ಅಡಗಿಕೊಂಡರು.
ಗಾಜಾದಿಂದ ಕೇವಲ ಅರ್ಧ ಕಿ.ಮೀ. ದೂರದಲ್ಲಿರುವ ಊರಿದು. ಎಲ್ಲೆಡೆ ವಿಲಕ್ಷಣ ಶಬ್ದ ಆವರಿಸಿಕೊಂಡಿತು. ನಂತರ ಕ್ಷಿಪಣಿ ದು
ಅತ್ತ ತೂರಿಬರುತ್ತಿರುವುದನ್ನು ಸ್ಪಷ್ಟವಾಗಿ ಹೇಳುವಂತೆ ಸಣ್ಣದೊಂದು ಸುಂಯ್ ಶಬ್ದ ಆರಂಭವಾಗಿ ನಿಧಾನವಾಗಿ ಜೋರಾಗ ತೊಡಗಿತು. ಅದರ ಬೆನ್ನಲ್ಲೇ ಕಿವಿ ಕಿವುಡು ಮಾಡುವಂತಹ ಬಾಂಬ್ ಶಬ್ದ. ಕಿಟಕಿ ಗಾಜುಗಳು ಒಡೆದು ಚೂರು ಚೂರಾದವು. ಕಾರಿನ ಅಲಾರ್ಮ್ ಮೊಳಗಿದವು.
೨೦೧೪ರ ಜುಲೈ ತಿಂಗಳು ಅದು. ಕೇವಲ ಮೂರು ತಾಸಿನ ಹಿಂದಷ್ಟೇ ನಾನೆಲ್ಲಿ ನಿಂತಿದ್ದೆನೋ ಅದೇ ಜಾಗಕ್ಕೆ ಒಂದು ರಾಕೆಟ್ ಅಪ್ಪಳಿಸಿತ್ತು. ಟಿವಿಯಲ್ಲಿ ಅಲ್ಲಿನ ದೃಶ್ಯವನ್ನು ಲೈವ್ ನಲ್ಲಿ ನೋಡುತ್ತಿದ್ದೆ. ಜೆರುಸಲೇಂನ ಮನೆಗೆ ಬಂದು ಅದೃಷ್ಟವಶಾತ್ ಬದುಕಿಕೊಂಡೆ ಎನ್ನಿಸಿತು.
೨೦೦೧ರಿಂದ ದಕ್ಷಿಣ ಇಸ್ರೇಲ್‌ನಲ್ಲಿ ಇಂತಹ ಕ್ಷಿಪಣಿ ದಾಳಿಗಳು ಪ್ರತಿದಿನ ಎಂಬಂತೆ ಸರ್ವೇಸಾಮಾನ್ಯ ಎಂಬಂತಾಗಿಬಿಟ್ಟಿತ್ತು. ಕಳೆದ ಎರಡು ದಶಕಗಳಲ್ಲಿ ಈ ಭಯೋತ್ಪಾದಕ ಗುಂಪುಗಳು ಸಾವಿರಾರು ರಾಕೆಟ್ ಕ್ಷಿಪಣಿಗಳನ್ನು ತಯಾರಿಸಿ ಗುಡ್ಡೆ ಹಾಕಿ ಕೊಂಡಿವೆ. ಇವರ ಜೊತೆ ಯುದ್ಧ ಅನಿವಾರ್ಯ ಎಂಬುದು ೨೦೦೪ರಲ್ಲೇ ಬಹುತೇಕರಿಗೆ ಮನದಟ್ಟಾಗಿತ್ತು.
ಇಸ್ರೇಲಿ ಮಿಲಿಟರಿಗೆ ಈ ಕ್ಷಿಪಣಿ ದಾಳಿಗೊಂದು ಪರಿಹಾರ ಬೇಕಾಗಿತ್ತು. ಆದರೆ, ಸೇನೆಯ ತಜ್ಞರು ಕಂಗಾಲಾಗಿ ಕುಳಿತಿದ್ದರು. ಇಸ್ರೇಲ್‌ನಲ್ಲಿ ಜನಸಾಮಾನ್ಯರ ಬದುಕು ದಿನೇ ದಿನೆ ಅಸಹನೀಯವಾಗುತ್ತಿದೆ ಎಂದು ಅವರು ನೊಂದುಕೊಂಡಿದ್ದರು. ಕೊನೆಗೆ ಇದಕ್ಕೊಂದು ಪರಿಹಾರ ಕಂಡುಹಿಡಿಯುವ ಹೊಣೆ ಇಸ್ರೇಲ್ ಮಿಲಿಟರಿಯ ಹೊಸ ಶಸಾಸಗಳನ್ನು ಅಭಿವೃದ್ಧಿಪಡಿಸುವ ವಿಭಾಗದ ಅಧಿಕಾರಿ ಡ್ಯಾನಿ ಗೋಲ್ಡ್ ಮೇಲೆ ಬಿತ್ತು. ಅವರು ಈ ಬಗ್ಗೆ ಐಡಿಯಾ ಕೊಡುವಂತೆ ರಕ್ಷಣಾ ಸಲಕರಣೆಗಳನ್ನು ಉತ್ಪಾದಿಸುವ ಕಂಪನಿಗಳಿಗೆ ಒಂದು ಮನವಿ ಕಳುಹಿಸಿದ. ಹೆಚ್ಚಿನವರು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ.
ಹೀಗಾಗಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಹಾಗೂ ವಾಣಿಜ್ಯ ವಿಷಯದಲ್ಲಿ ಡಬಲ್ ಪಿಎಚ್.ಡಿ. ಹೊಂದಿದ್ದ ಜನರಲ್ ಡ್ಯಾನಿ ಗೋಲ್ಡ್ ಸ್ವತಃ ತಾನೇ ಇದರ ಬಗ್ಗೆ ಅಧ್ಯಯನ ಮಾಡಲು ಕುಳಿತ. ಆಗಸದಲ್ಲಿ ಹಾರಿಬರುತ್ತಿರುವಾಗಲೇ ಕ್ಷಿಪಣಿಯನ್ನು ಹೊಡೆ ದುರುಳಿಸುವ ವ್ಯವಸ್ಥೆಯೊಂದನ್ನು ಅಭಿವೃದ್ಧಿ ಪಡಿಸುವುದು ಅವನ ಯೋಚನೆಯಾಗಿತ್ತು. ಇಸ್ರೇಲ್‌ನ ಸೇನಾಪಡೆ ಯಲ್ಲಿದ್ದ ಪ್ರಮುಖ ನಾಯಕರೆಲ್ಲ ಡ್ಯಾನಿ ಗೋಲ್ಡ್ ಈ ಯೋಚನೆ ಮುಂದಿಟ್ಟಾಗ ಇಂತಹದ್ದೊಂದು ವ್ಯವಸ್ಥೆ ಕಾರ್ಯರೂಪಕ್ಕೆ ಬರುವು ದಿಲ್ಲ ಎಂದು ಒಳಗೊಳಗೇ ನಿರ್ಧರಿಸಿದರು.
ಸ್ವತಃ ಗೋಲ್ಡ್ ನ ಸಹೋದ್ಯೋಗಿಗಳು ಹಾಗೂ ಮೇಲಧಿಕಾರಿಗಳು ಕೂಡ ಇದೊಂದು ಭ್ರಮೆ ಎಂದರು. ಪ್ಯಾಲಸ್ತೀನ್ ಹಾಗೂ ಹಿಜ್ಬುಲ್ಲಾದ ಬಹುತೇಕ ರಾಕೆಟ್‌ಗಳು ಕೆಲವೇ ಅಡಿ ಉದ್ದ ಮತ್ತು ಅಗಲವಾಗಿರುತ್ತಿದ್ದವು. ಅವು ಸಾಮಾನ್ಯವಾಗಿ ನಿರ್ದಿಷ್ಟ ಪಥದಲ್ಲಿ ಹಾರದೆ ಯದ್ವಾತದ್ವಾ ಹಾರಿಬಂದು ಕ್ಷಣಮಾತ್ರದಲ್ಲಿ ಇಸ್ರೇಲ್‌ಗೆ ಅಪ್ಪಳಿಸುತ್ತಿದ್ದವು. ಅಂತಹ ಅನಿರೀಕ್ಷಿತ ಕ್ಷಿಪಣಿ ದಾಳಿಯನ್ನು ಯಾವುದಾದರೂ ರಕ್ಷಣಾ ವ್ಯವಸ್ಥೆ ಹೇಗೆ ತಡೆಯಲು ಸಾಧ್ಯ?
ಅದು ಸಾಧ್ಯವಿತ್ತೆ?
ಶನೋಲ್ ಲೀವೈನ್ ಅದುರುತ್ತಿದ್ದ. ಕ್ಷಿಪಣಿಗಳು ಬಂದು ಮನೆಯ ಹೊರಗೇ ನೆಲಕ್ಕಪ್ಪಳಿಸುತ್ತಿದ್ದ ಶಬ್ದ ಅವನ ಎದೆಯನ್ನು ನಡುಗಿಸಿತ್ತು. ವಾಷಿಂಗ್ಟನ್ ಡಿ.ಸಿ.ಯಲ್ಲಿ ಎರಡು ವರ್ಷ ಇದ್ದ ಆತ ಆ ಬೇಸಿಗೆಯಲ್ಲಷ್ಟೇ ಇಸ್ರೇಲಿಗೆ ಮರಳಿದ್ದ. ಅಮೆರಿಕದಲ್ಲಿ ಅವನು ರಕ್ಷಣಾ ಇಲಾಖೆಯ ಜೊತೆ ಕೆಲಸ ಮಾಡುತ್ತಿದ್ದ. ಇಸ್ರೇಲ್ ಮೂಲದ ರಕ್ಷಣಾ ತಂತ್ರಜ್ಞಾನ ಕಂಪನಿಯಾದ ರಫೆಲ್ ಅಡ್ವಾನ್ಸ್ಡ್ ಡಿಫೆನ್ಸ್ ಸಿಸ್ಟಮ್ಸ್‌ನಲ್ಲಿ ಹಿರಿಯ ಎಂಜಿನಿಯರ್ ಆಗಿ ಅವನು ಅಮೆರಿಕದಲ್ಲಿ ನೆಲಸಿದ್ದ.
ಅಲ್ಲಿ ಕೆಲಸ ಮಾಡುವಾಗ ಸುಧಾರಿತ ಸ್ಫೋಟಕಗಳಿಂದ ಆಗುವ ಹಾನಿಯನ್ನು ಕಡಿಮೆ ಮಾಡುವುದು ಹೇಗೆ ಎಂಬ ಬಗ್ಗೆ ಸಂಶೋಧನೆ ನಡೆಸಿದ್ದ. ಈಗ ಉತ್ತರ ಇಸ್ರೇಲ್‌ನಲ್ಲಿ ರಫೆಲ್‌ನ ಕಚೇರಿಯ ಸಮೀಪದಲ್ಲೇ ಮಿಸೈಲ್‌ಗಳ ಸುರಿಮಳೆಯಾಗುತ್ತಿತ್ತು.
ಅದರ ಬಗ್ಗೆ ಮಾತನಾಡಲು ಓರೋನ್ ಓರಿಯೋಲ್ ಇವನನ್ನು ತನ್ನ ಆಫೀಸಿಗೆ ಕರೆಸಿಕೊಂಡಿದ್ದ. ಓರಿಯೋಲ್, ರಫೆಲ್‌ನ
ಏರ್-ಟು-ಏರ್ ಮಿಸೈಲ್ ಯೋಜನೆಯ ಮುಖ್ಯಸ್ಥನಾಗಿದ್ದ.
ಅವನು ಲೀವೈನ್‌ಗೆ ಹೊಸತೊಂದು ಅಸೈನ್‌ಮೆಂಟ್ ನೀಡಿದ. ಅದೇನೆಂದರೆ, ಶಾರ್ಟ್ ರೇಂಜ್ ಮಿಸೈಲ್‌ಗಳನ್ನು ಅತ್ಯಂತ ಸೋವಿ ಖರ್ಚಿನಲ್ಲಿ ಪರಿಣಾಮಕಾರಿಯಾಗಿ ತಡೆಯುವುದು ಹೇಗೆ ಎಂದು ಸಂಶೋಧನೆ ನಡೆಸುವುದು. ಇದಕ್ಕಾಗಿ ಲೀವೈನ್
ತನ್ನದೇ ಆದ ಒಂದು ತಂಡವನ್ನು ಹುಡುಕಿಕೊಳ್ಳಬೇಕಿತ್ತು. ನಂತರ ಅವರ ಜೊತೆ ಸೇರಿ ಪ್ರಸ್ತಾವನೆಯೊಂದ್ನು ಸಿದ್ಧಪಡಿಸಿ
ಗೋಲ್ಡ್‌ಗೆ ಸಲ್ಲಿಸಬೇಕಿತ್ತು. ಅದು ಒಪ್ಪಿಗೆಯಾದರೆ ರಫೆಲ್‌ಗೆ ಈ ಯೋಜನೆಯ ಗುತ್ತಿಗೆ ಸಿಗುತ್ತಿತ್ತು.
ಸುಮಾರು ಮೂರು ತಿಂಗಳ ನಂತರ ೨೦೦೬ ನವೆಂಬರ್‌ನಲ್ಲಿ ಲೀವೈನ್ ಮತ್ತು ಅವನ ತಂಡದವರು ಟೆಲ್ ಅವಿವ್‌ನಲ್ಲಿರುವ
ಇಸ್ರೇಲ್‌ನ ರಕ್ಷಣಾ ಸಚಿವಾಲಯದಲ್ಲಿ ಡ್ಯಾನಿ ಗೋಲ್ಡ್‌ಗೆ ತಮ್ಮ ಯೋಜನೆಯ ಐಡಿಯಾವನ್ನು ತೋರಿಸಿದರು. ಬಹಳ ಕಡಿಮೆ ವೆಚ್ಚದಲ್ಲಿ ಅತ್ಯಂತ ಪರಿಣಾಮಕಾರಿಯಾದ ಕ್ಷಿಪಣಿ ವ್ಯವಸ್ಥೆಯೊಂದನ್ನು ಲೀವೈನ್ ರೂಪಿಸ ಬೇಕಾಗಿತ್ತು. ಪ್ರತಿರೋಧಕ ಕ್ಷಿಪಣಿಗೆ ತಮಿರ್ ಎಂದೂ, ಅದನ್ನು ಹಾರಿಸುವ ಯಂತ್ರಕ್ಕೆ ‘ಐರನ್ ಡೋಮ್’ ಎಂದೂ ಹೆಸರು ಫೈನಲ್ ಆಯಿತು.
ಪ್ರತಿರೋಧಕ ಕ್ಷಿಪಣಿಯ ವೆಚ್ಚ ನಿಜವಾದ ಕ್ಷಿಪಣಿ ಬೆಲೆಯ ಹತ್ತರಲ್ಲಿ ಒಂದು ಭಾಗ ಮಾತ್ರ ಆಗಿರಬೇಕು ಎಂದು ಗೋಲ್ಡ್ ಹಾಗೂ
ಲೀವೈನ್ ಇಬ್ಬರೂ ನಿರ್ಧರಿಸಿದ್ದರು. ೨೦೧೧ರ ಮಾರ್ಚ್‌ವೇಳೆಗೆ ಐರನ್ ಡೋಮ್ ಶತ್ರುಗಳ ರಾಕೆಟ್‌ಗಳನ್ನು ಹೊಡೆದು ಹಾಕಲು ಸಿದ್ಧವಾಗಿ ನಿಂತಿತ್ತು. ಅದರ ಸಾಮರ್ಥ್ಯ ಅಗಾಧವಾಗಿತ್ತು. ಅದು ರಾಕೆಟ್‌ಗಳನ್ನು, ಆರ್ಟಿಲರಿಗಳನ್ನು ಹಾಗೂ ಮಾರ್ಟರ್‌ಗಳಿಗೆ ಗುರಿಯಿಟ್ಟು ಕ್ಷಿಪಣಿಗಳನ್ನು ಹಾರಿಸುವ ಚಾಕಚಕ್ಯತೆ ಹೊಂದಿತ್ತು.
ವಿಮಾನಗಳನ್ನು, ಹೆಲಿಕಾಪ್ಟರ್ ಗಳನ್ನು ಹಾಗೂ ಡ್ರೋನ್‌ಗಳನ್ನು ಕೂಡ ಹೊಡೆದುರುಳಿಸುವ ಸಾಮರ್ಥ್ಯ ಅದಕ್ಕಿತ್ತು. ೪೩
ಮೈಲುಗಳ ರೇಂಜ್‌ನಲ್ಲಿ ಎಲ್ಲಾ ರೀತಿಯ ಕ್ಷಿಪಣಿಗಳು ಹಾಗೂ ಹಾರುವ ಯಂತ್ರಗಳನ್ನು ಪತ್ತೆ ಹಚ್ಚಿ ಹೊಡೆಯುವಂತೆ ಅದನ್ನು ರೂಪಿಸಲಾಗಿತ್ತು. ಮಳೆ, ಹಿಮ, ಇಬ್ಬನಿ ಹಾಗೂ ಧೂಳಿನ ಗಾಳಿ ಹೇಗೆ ಯಾವ ರೀತಿಯ ವಾತಾವರಣದಲ್ಲಿ ಬೇಕಾದರೂ ಅದು ಕೆಲಸ ಮಾಡುತ್ತಿತ್ತು.
ಬುದ್ಧಿವಂತ ಯಂತ್ರ
ಈ ಐರನ್ ಡೋಮ್ ಎಷ್ಟು ಬುದ್ಧಿವಂತ ಯಂತ್ರವೆಂದರೆ, ಇದರಲ್ಲಿರುವ ಸಾಫ್ಟ್‌ವೇರ್ ಒಬ್ಬ ಚಾಣಾಕ್ಷ ಮನುಷ್ಯನಿಗಿಂತ
ಬುದ್ಧಿವಂತಿಕೆಯಿಂದ ಕೆಲಸ ಮಾಡುತ್ತದೆ. ಶತ್ರುವಿನ ಕ್ಷಿಪಣಿ ಯಾವ ವೇಗದಲ್ಲಿ ಬರುತ್ತಿದೆ ಮತ್ತು ಯಾವ ಪ್ರದೇಶವನ್ನು
ಗುರಿಯಾಗಿಸಿಕೊಂಡಿದೆ, ಅದು ಬಂದು ಅಪ್ಪಳಿಸುವ ಜಾಗ ಜನವಸತಿಯ ಪ್ರದೇಶವೋ ಅಥವಾ ಖಾಲಿ ಪ್ರದೇಶವೋ, ಆ ಜಾಗ ಮಿಲಿಟರಿಗೆ ಸೇರಿದ್ದೇ ಇತ್ಯಾದಿ ಪ್ರತಿಯೊಂದು ಸಂಗತಿ ಯನ್ನೂ ಅದು ಕ್ಷಣಮಾತ್ರದಲ್ಲಿ ಲೆಕ್ಕ ಹಾಕುತ್ತದೆ. ನಂತರ
ಅದಕ್ಕೆ ತಕ್ಕಂತೆ ತಮಿರ್ ಕ್ಷಿಪಣಿಯನ್ನು ಉಡಾಯಿಸುತ್ತದೆ.
ಸಾಮಾನ್ಯವಾಗಿ ಐರನ್ ಡೋಮ್ ಪ್ರತಿ ಬಾರಿಯೂ ಎರಡು ತಮಿರ್ ಪ್ರತಿ ಕ್ಷಿಪಣಿಗಳನ್ನು ಹಾರಿಸುತ್ತದೆ. ಮೊದಲನೆಯದು
ಗುರಿ ತಲುಪದಿದ್ದರೆ ಎರಡನೆಯದಾದರೂ ಶತ್ರುವಿನ ಕ್ಷಿಪಣಿಯನ್ನು ಹೊಡೆದುರುಳಿಸಲಿ ಎಂದು. ಆ ಎಪ್ರಿಲ್‌ನಲ್ಲಿ ಐಡಿಎಫ್ನವರು ಗಾಜಾದ ಬಳಿ ಎರಡು ಐರನ್ ಡೋಮ್ ಬ್ಯಾಟರಿಗಳನ್ನು ಅಳವಡಿಸಿದರು. ಅಳ್ಕೆಲಾನ್‌ನಲ್ಲಿ ಒಂದು, ಬೀರ್ ಶೆವಾದಲ್ಲಿ ಇನ್ನೊಂದು.
ಇಸ್ರೇಲ್‌ನತ್ತ ನುಗ್ಗಿ ಬರುವ ಹಮಾಸ್‌ನ ಯಾವುದೇ ರಾಕೆಟ್ ಗಳನ್ನು ಹೊಡೆದುರುಳಿಸಲು ಸೇನಾಪಡೆಯ ಮುಖ್ಯಸ್ಥರು
ಅನುಮತಿ ಪಡೆದರು. ಎಪ್ರಿಲ್ ೭ ರಂದು ಐಡಿಎಫ್‌ಗೆ ತನ್ನ ಜವಾಬ್ದಾರಿ ನಿಭಾಯಿಸುವ ಮೊದಲ ಅವಕಾಶ ದೊರೆಯಿತು.
ಅಶ್ಕೆಲಾನ್ ಕರಾವಳಿ ನಗರವನ್ನು ಗುರಿಯಾಗಿಸಿಕೊಂಡು ಹಮಾಸ್ ಒಂದು ರಾಕೆಟ್ ಉಡಾಯಿಸಿತು. ಕೆಲವೇ ಕ್ಷಣದಲ್ಲಿ
ಐರನ್ ಡೋಮ್‌ನಿಂದ ಪ್ರತಿ-ಕ್ಷಿಪಣಿ ಉಡಾವಣೆಗೊಂಡಿತು. ಆಗಸದಲ್ಲಿ ದಟ್ಟ ಬಿಳಿ ಮೋಡ ಕವಿಯಿತು.
ತಮಿರ್ ಕ್ಷಿಪಣಿಗಳು ಶತ್ರು ಕ್ಷಿಪಣಿಯನ್ನು ಅಲ್ಲೇ ಹೊಡೆದುರುಳಿಸಿದ್ದವು. ಲೀವೈನ್ ತನ್ನ ಸಂಶೋಧನೆ ಆರಂಭಿಸಿದ ಐದು ವರ್ಷಗಳ ನಂತರ, ಒಂದು ಕಾಲದ ಸೊಕಾಲ್ಡ್ ಅಸಾಧ್ಯ ಯೋಜನೆ, ಅದ್ಭುತ ಯಶಸ್ಸು ಕಂಡಿತ್ತು. ‘ರಾಕೆಟ್ ಸೈನ್ಸ್‌ನಲ್ಲಿ ನಾವಿದನ್ನು ಪವಾಡ ಎಂದು ಕರೆಯುತ್ತೇವೆ’ ಎನ್ನುತ್ತಾರೆ ಇಸ್ರೇಲ್‌ನ ಮಿಸೈಲ್ ಡಿಫೆನ್ಸ್ ಸಂಸ್ಥೆಯ ಮಾಜಿ ಮುಖ್ಯಸ್ಥ ಯೇರ್
ರಮತಿ.
೨೦೧೪ರ ಜುಲೈ ವೇಳೆಗೆ ಐರನ್ ಡೋಮ್ ಇಸ್ರೇಲ್‌ನ ಬಹುತೇಕ ಎಲ್ಲಾ ನಗರಗಳನ್ನೂ ಹಮಾಸ್‌ನ ಕ್ಷಿಪಣಿಗಳಿಂದ ರಕ್ಷಿಸಿತ್ತು. ಅದರ ಯಶಸ್ಸಿನ ದರ ಶೇ.೯೦ರಷ್ಟಿತ್ತು. ಇದರಿಂದಾಗಿ ಕೊನೆಗೂ ಇಸ್ರೇಲಿಗಳಿಗೆ ತಮ್ಮ ಜೀವದ ಮೇಲಿದ್ದ ಅನುಕ್ಷಣದ ಭಯ ಮಾಯವಾಯಿತು. ಅದರ ಪರಿಣಾಮವಾಗಿ ಅಟ್ಲಾಂಟಿಕ್ ಸಾಗರದ ಎರಡೂ ಕಡೆಯಿರುವವರಿಗೆ ಅರಬ್ಬರನ್ನೂ, ಯಹೂದಿ ಗಳನ್ನೂ ಮಾತುಕತೆಯ ಮೇಜಿಗೆ ಕರೆತರುವ ಶಕ್ತಿ ಹಾಗೂ ಗಡಿಯ ಎರಡೂ ಕಡೆ ಜೀವಗಳನ್ನು ರಕ್ಷಿಸುವ ಶಕ್ತಿ ಈ ಐರನ್ ಡೋಮ್ ಗಳಿಗಿವೆ ಎಂದು ಅನ್ನಿಸತೊಡಗಿತು.
‘ಐರನ್ ಡೋಮ್ ಕೇವಲ ಜನರನ್ನು ರಕ್ಷಿಸುವ ಕೆಲಸಕ್ಕಷ್ಟೇ ಸೀಮಿತವಾಗಿರಲಿಲ್ಲ. ಅದು ರಾಜತಾಂತ್ರಿಕತೆಗೆ ಹೂಡಿದ
ಬಂಡವಾಳವಾಗಿತ್ತು. ಶಾಂತಿ ಸ್ಥಾಪನೆಗೆ ಬೇಕಾದ ಮಾತುಕತೆಗೆ ಅದು ಸೂಕ್ತ ವಾತಾವರಣ ನಿರ್ಮಾಣ ಮಾಡಿತ್ತು’ ಎನ್ನುತ್ತಾರೆ
ಅಮೆರಿಕದಲ್ಲಿನ ಮಾಜಿ ಇಸ್ರೇಲ್ ರಾಯಭಾರಿ ಮೈಕಲ್ ಓರೆನ್.