ಟೆಕ್ ಫ್ಯೂಚರ್
ವಸಂತ ಗ ಭಟ್
ಇದು ಧಾವಂತದ ಯುಗ. ಎಲ್ಲದರಲ್ಲೂ ಅವಸರ. ಮೊಬೈಲ್ ಚಾರ್ಜಿಂಗ್ ಬಹುಬೇಗನೆ ನಡೆಯವಂತಹ ತಂತ್ರಜ್ಞಾನ ಇಂದು ಬಂದಿದೆ. ಆದರೆ ಇದರಲ್ಲಿ ಕೆಲವು ತೊಡಕುಗಳಿವೆ. ಅವುಗಳಲ್ಲಿ ಮುಖ್ಯವಾದುದೆಂದರೆ, ವೇಗವಾಗಿ ಚಾರ್ಜ್ ಮಾಡಿದಷ್ಟೂ ಮೊಬೈಲ್‌ನ ಬಾಳಿಕೆ ಕಡಿಮೆಯಾಗುತ್ತದೆ!
2000 ದ ಇಸವಿಯ ಆರಂಭದ ದಿನಗಳಲ್ಲಿ ಹೆಚ್ಚಿನ ಜನ ಬಳಸುತ್ತಿದ್ದ ನೋಕಿಯಾ ಮೊಬೈಲ್ ಒಮ್ಮೆ ಪೂರ್ತಿ ಚಾರ್ಜ್ ಆಗಲು ಸುಮಾರು ಒಂದು ಘಂಟೆ ತೆಗೆದುಕೊಳ್ಳುತ್ತಿತ್ತು. ನಂತರ ಮಾರುಕಟ್ಟೆಗೆ ಬಂದ ಎಲ್ ಜಿ, ಹೆಚ್ ಟಿಸಿ ಸಂಸ್ಥೆಗಳ ಸ್ಮಾರ್ಟ್ ಫೋನ್ ಗಳು ಸಹ ಸೊನ್ನೆಯಿಂದ ನೂರು ಪ್ರತಿಶತ ಚಾರ್ಜ್ ಆಗಲು ಒಂದರಿಂದ ಎರಡು ಘಂಟೆ ತೆಗೆದುಕೊಳ್ಳುತ್ತಿದ್ದವು. 2015 ರ
ನಂತರ ಮೊಬೈಲ್ ಚಾರ್ಜಿಂಗ್‌ನಲ್ಲಿ ಬಹಳಷ್ಟು ಮಹತ್ವದ ಬದಲಾವಣೆಗಳಾಗಿದ್ದು ವೇಗದ ಚಾರ್ಜಿಂಗ್, ಅತೀ ವೇಗದ
ಚಾರ್ಜಿಂಗ್ ವಿಧಾನ ಬಳಕೆಗೆ ಬಂತು. ಇದರಿಂದಾಗಿ ಹೊಸದಾಗಿ ಬರುತ್ತಿರುವ ಎಂಐ ಮತ್ತು ಒನ್ ಪ್ಲಸ್ ನಂತಹ ಮೊಬೈಲ್ ಗಳನ್ನು ಸೊನ್ನೆಯಿಂದ 50 ಪ್ರತಿಶತ ಚಾರ್ಜ್ ಮಾಡಲು ಬೇಕಾಗುವ ಸಮಯ ಕೇವಲ ಐದು ನಿಮಿಷ!
ಚಾರ್ಜಿಂಗ್ ಬಗೆಗಿನ ಆವಿಷ್ಕಾರಗಳು ಹೀಗೆ ಮುಂದುವರಿದರೆ ಸಧ್ಯದಲ್ಲೇ ಕೆಲವೇ ನಿಮಿಷಗಳಲ್ಲಿ ಸೊನ್ನೆಯಿಂದ ನೂರು ಪ್ರತಿಶತದಷ್ಟೂ ಮೊಬೈಲ್ ಚಾರ್ಜ್ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಅಷ್ಟೊಂದು ವೇಗದಲ್ಲಿ ಮೊಬೈಲ್ ಬ್ಯಾಟರಿಯನ್ನು ಚಾರ್ಜ್ ಮಾಡುವುದು ನಿಜಕ್ಕೂ ಮೊಬೈಲ್‌ನ ಬಾಳಿಕೆಗೆ ಪೂರಕವೇ? ವೇಗದ ಚಾರ್ಜಿಂಗ್ ತಂತ್ರಜ್ಞಾನವು ಮೊಬೈಲ್‌ನ ಆಯುಷ್ಯದ ಮೇಲೆ ಪರಿಣಾಮ ಬೀರಬಲ್ಲದೆ? ಅಷ್ಟಕ್ಕೂ ಇಷ್ಟೊಂದು ವೇಗದಲ್ಲಿ ಮೊಬೈಲ್ ಬ್ಯಾಟರಿ ಚಾರ್ಜ್ ಆಗಲು ಹೇಗೆ ಸಾಧ್ಯ?
ಹೇಗೆ ನಡೆಯುತ್ತದೆ ಬ್ಯಾಟರಿ ಚಾರ್ಜಿಂಗ್
ಬ್ಯಾಟರಿಯಲ್ಲಿ ಒಂದು ಧನಾತ್ಮಕ ಮತ್ತು ಒಂದು ಋಣಾತ್ಮಕ ಲೋಹವಿರುತ್ತವೆ. ಋಣಾತ್ಮಕ ಲೋಹದಲ್ಲಿರುವ ಎಲೆಕ್ಟ್ರೋನ್ ಗಳು ಧನಾತ್ಮಕ ಲೋಹಡೆದೆಗೆ ಸಹಜವಾಗಿ ಚಲಿಸುತ್ತವೆ. ಮತ್ತು ಈ ರೀತಿ ಎಲೆಕ್ಟ್ರೋನ್ ಗಳು ಚಲಿಸುವಾಗ ಮಾರ್ಗ ಮಧ್ಯದಲ್ಲಿ ರುವ ಯಾವುದೇ ಉಪಕರಣಕ್ಕಾದರೂ ಅವು ಶಕ್ತಿಯನ್ನು ವರ್ಗಾಯಿಸುತ್ತವೆ.
ಒಮ್ಮೆ ಹೆಚ್ಚಿನ ಎಲೆಕ್ಟ್ರಾನ್‌ಗಳು ಧನಾತ್ಮಕ ಲೋಹವನ್ನು ತಲುಪಿದ ನಂತರ ಅದನ್ನು ಮತ್ತೆ ಋಣಾತ್ಮಕ ಲೋಹಡೆದೆಗೆ
ಕಳುಹಿಸಲು ಹೊರಗಿನಿಂದ ಶಕ್ತಿಯ ಅವಶ್ಯಕತೆ ಇರುತ್ತದೆ. ಅದಕ್ಕಾಗಿಯೇ ನಾವು ಮೊಬೈಲ್‌ಅನ್ನು ವಿದ್ಯುತ್ ಮೂಲಕ
ಚಾರ್ಜ್ ಮಾಡುವುದು. ನಾವು ಮೊಬೈಲ್‌ಗೆ ವಿದ್ಯುತ್ ಅನ್ನು ಹರಿಸಿದ ನಂತರ ಆ ವಿದ್ಯುತ್ ಶಕ್ತಿಯಿಂದ ಎಲೆಕ್ಟ್ರೋನ್‌ಗಳು ಧನಾತ್ಮಕ ಲೋಹದಿಂದ ಋಣಾತ್ಮಕ ಲೋಹವನ್ನು ತಲುಪುತ್ತವೆ.
ನಾವು ಮೊಬೈಲ್‌ಅನ್ನು ಯಾವುದೇ ಕೆಲಸಕ್ಕೆ ಉಪಯೋಗಿಸಿದ ನಂತರ ಮತ್ತೆ ಎಲೆಕ್ಟ್ರೋನ್‌ಗಳು ಧನಾತ್ಮಕ ಲೋಹದೆಡೆಗೆ ಹರಿಯಲಾರಂಭಿಸುತ್ತವೆ. ಧನಾತ್ಮಕ ಮತ್ತು ಋಣಾತ್ಮಕ ಲೋಹವನ್ನು ಬೇರ್ಪಡಿಸಲು ಬ್ಯಾಟರಿ ತಯಾರಕರು ಇವೆರಡರ
ಮಧ್ಯ ಒಂದು ಪದರವನ್ನು ನೀಡಿರುತ್ತಾರೆ. ಮೊಬೈಲ್ ಮತ್ತು ಹಚ್ಚಿನ ಎಲ್ಲಾ ಚಾರ್ಜಿಂಗ್ ಉಪಕರಣಗಳು ಕಾರ್ಯನಿರ್ವಹಿಸು ವುದು ಇದೇ ವಿಧಾನದಲ್ಲಿ.
ವೇಗದ ಚಾರ್ಜಿಂಗ್ ಕಾರ್ಯ ನಿರ್ವಹಿಸುವುದು ಸಹ ಇದೇ ರೀತಿಯಲ್ಲಿ. ಆದರೆ ಒಂದು ಮುಖ್ಯ ಬದಲಾವಣೆ ಇದೆ. ಅದೆಂದರೆ ಎಲೆಕ್ಟ್ರೋನ್‌ಗಳನ್ನು ಧನಾತ್ಮಕ ಲೋಹದಿಂದ ಋಣಾತ್ಮಕ ಲೋಹಕ್ಕೆ ವೇಗವಾಗಿ ಸಾಗಿಸಲಾಗುತ್ತದೆ, ತನ್ಮೂಲಕ ಮೊಬೈಲ್ ಚಾರ್ಜಿಂಗ್ ವೇಗವಾಗುವಂತೆ ನೋಡಿಕೊಳ್ಳಲಾಗುತ್ತದೆ.
ವೇಗದ ಚಾರ್ಜಿಂಗ್ ಸಮಸ್ಯೆಗಳೇನು ?
ವೇಗವಾಗಿ ಚಾರ್ಜಿಂಗ್ ಅಂದರೆ ವೇಗವಾದ ಎಲೆಕ್ಟ್ರೋನ್ ಗಳ ಸಂಚಾರ, ವೇಗದ ಸಂಚಾರ ಎಂದ ತಕ್ಷಣ ಶಾಖ ಉತ್ಪತ್ತಿಯಾಗು ವುದು ಸಹಜ. ಜತೆಗೆ ಪೂರ್ತಿ ಚಾರ್ಜ್ ಆದ ನಂತರವೂ ವಿದ್ಯುತ್ ಅನ್ನು ಹೀರಿಕೊಳ್ಳುವುದರಿಂದ ಮೊಬೈಲ್ ಮತ್ತಷ್ಟು ಬಿಸಿ ಯಾಗುತ್ತದೆ. ಹೆಚ್ಚು ಹೆಚ್ಚು ಶಾಖ ಉತ್ಪತ್ತಿಯಾದಂತೆ ಲ್ಲಾ, ಮೊಬೈಲ್‌ನ ಬ್ಯಾಟರಿ ಬಾಳಿಕೆ ಕ್ರಮೇಣ ಕಡಿಮೆಯಾಗುತ್ತದೆ. ಅಧ್ಯಯನದ ಪ್ರಕಾರ 30 ಡಿಗ್ರಿ ತಾಪಮಾನದಲ್ಲಿ ಮೊಬೈಲ್ ಅನ್ನು ವೇಗವಾಗಿ ಚಾರ್ಜ್ ಮಾಡುತ್ತಿದ್ದರೆ, ಒಂದೇ ವರ್ಷದಲ್ಲಿ ಮೊಬೈಲ್ ನ ಬ್ಯಾಟರಿ ತನ್ನ 20 ಪ್ರತಿಶತ ಕಾರ್ಯಕ್ಷಮತೆಯನ್ನು ಕಳೆದುಕೊಳ್ಳುತ್ತದೆ.
ಒಂದು ವೇಳೆ 40 ಡಿಗ್ರಿ ತಾಪಮಾನದಲ್ಲಿ ಮೊಬೈಲ್‌ಅನ್ನು ವೇಗವಾಗಿ ಚಾರ್ಜ್ ಮಾಡುತ್ತಿದ್ದರೆ ಒಂದೇ ವರ್ಷದಲ್ಲಿ ಬ್ಯಾಟರಿ ತನ್ನ 40 ಪ್ರತಿಶತ ಕಾರ್ಯಕ್ಷಮತೆಯನ್ನು ಕಳೆದುಕೊಳ್ಳುತ್ತದೆ. ಎರಡನೆಯ ಮುಖ್ಯ ಸಮಸ್ಯೆಯೆಂದರೇ ಮೊಬೈಲ್ ವೇಗದಲ್ಲಿ ಚಾರ್ಜ್ ಆಗಬೇಕೆಂದರೆ ಧನಾತ್ಮಕ ಮತ್ತು ಋಣಾತ್ಮಕ ಲೋಹಗಳ ನಡುವೆ ಇರುವ ಪದರದ ಗಾತ್ರ ದೊಡ್ಡದಾಗಿರಬೇಕಾಗತ್ತದೆ. ಅದರಿಂದ ಎಲೆಕ್ಟ್ರಾನ್‌ಗಳು ಎಲ್ಲೋಲ್ಲೋ ಹರಿಯದೆ ನಿಗದಿತ ಸರ್ಕ್ಯೂಟ್ ನಲ್ಲಿ ಸರಾಗವಾಗಿ ಹರಿಯುತ್ತವೆ.
ಇಲ್ಲಿನ ಸಮಸ್ಯೆೆ ಎಂದರೆ, ಈ ಪದರದ ಗಾತ್ರ ದೊಡ್ಡದಾದಂತೆಲ್ಲಾ ಮೊಬೈಲ್‌ನ ಬ್ಯಾಟರಿ ಸಾಮರ್ಥ್ಯ ಕಡಿಮೆಗೊಳ್ಳುತ್ತದೆ.
ಈಚಿನ ದಿನಗಳಲ್ಲಿ ಮುನ್ನಲೆಗೆ ಬರುತ್ತಿರುವ ಅಲ್ಟ್ರಾ ಫಾಸ್ಟ್ ಚಾರ್ಜಿಂಗ್‌ನಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಎರಡು ಬ್ಯಾಟರಿಗಳನ್ನು ಮೊಬೈಲ್‌ನಲ್ಲಿ ನೀಡುತ್ತಿದ್ದಾರೆ. ಇದರಿಂದ ಇನ್ನೊಂದು ಸಮಸ್ಯೆ ಉದ್ಭವವಾಗಿದೆ.
ಅದೆಂದರೆ, ಮೊಬೈಲ್‌ನ ತೂಕದ ಸಮಸ್ಯೆೆ. ಸಹಜವಾಗಿ ಎರಡು ಬ್ಯಾಟರಿ ನೀಡಿದಾಗ, ಮೊಬೈಲ್ ನ ತೂಕ ಹೆಚ್ಚಿಸುವುದಲ್ಲದೆ ಹೆಚ್ಚು ಜಾಗವನ್ನು ಸಹ ಆಕ್ರಮಿಸಿಕೊಳ್ಳುತ್ತದೆ. ಇದೇ ಕಾರಣದಿಂದಾಗಿ, ಇಂದು ಲಭ್ಯವಿರುವ ದುಬಾರಿ ಮೊಬೈಲ್’ನಲ್ಲೂ ಅಲ್ಟ್ರಾ ಫಾಸ್ಟ್ ಚಾರ್ಜಿಂಗ್ ಬಳಕೆಯಾಗುತ್ತಿಲ್ಲ. ವೇಗವಾಗಿ ಚಾರ್ಜ್ ಮಾಡುವ ವ್ಯವಸ್ಥೆ ಅಳವಡಿಸಿದಾಗ ತಲೆದೋರುವ ಮತ್ತೊಂದು ಸಮಸ್ಯೆಯೆಂದರೆ ವೇಗದ ಚಾರ್ಜಿಂಗ್ ನಲ್ಲಿ ನಾವು ಮೊಬೈಲ್ ಗೆ ನೀಡಿದ ಎಲ್ಲಾ ವಿದ್ಯುತ್ ಸದ್ವಿನಿಯೋಗ ವಾಗುವುದಿಲ್ಲ. ವೇಗದ ಚಾರ್ಜಿಂಗ್ ನ ಜಾಹೀರಾತನ್ನು ನೋಡಿರಬಹುದು, ಸೊನ್ನೆಯಿಂದ 50 ಪ್ರತಿಶತ ಚಾರ್ಜ್ ಆಗಲು ಇಂತಿಷ್ಟೂ ನಿಮಿಷ ಬೇಕು ಎಂದು ಅವರು ಜಾಹೀರಾತನ್ನು ನೀಡುತ್ತಾರೆ. ಮುಂದಿನದನ್ನು ಆ ಜಾಹೀರಾತು ವಿವರಿಸುವುದಿಲ್ಲ!
ಏಕೆಂದರೆ 50 ಪ್ರತಿಶತ ಚಾರ್ಜ್ ಆದ ನಂತರ, ಚಾರ್ಜ್ ಅಷ್ಟೊಂದು ವೇಗವಾಗಿ ಆಗುವುದಿಲ್ಲ. ಕಾರಣ ಮೊಬೈಲ್ ಅನ್ನು ಅಷ್ಟು ವೇಗದಲ್ಲಿ 100 ಪ್ರತಿಶತ ಚಾರ್ಜ್ ಮಾಡುವುದು ಮೊಬೈಲ್ ಬಾಳಿಕೆಯ ದೃಷ್ಟಿಯಿಂದ ಒಳ್ಳೆಯದಲ್ಲ ಎನ್ನುವುದು ಮೊಬೈಲ್ ತಯಾರಿಕರಿಗೂ ತಿಳಿದಿದೆ. ಇದರಿಂದಾಗಿ 50 ಪ್ರತಿಶತ ಚಾರ್ಜ್ ಆದ ನಂತರ ಚಾರ್ಜಿಂಗ್ ನೀಧಾನವಾಗುತ್ತದೆ. ಹಾಗಾಗಿ ನಾವು 60
ವಾಟ್ ಚಾರ್ಜರ್ ಬಳಸುವುದರಿಂದ 30 ವಾಟ್ ಚಾರ್ಜರ್ ತೆಗೆದುಕೊಳ್ಳುವ ಅರ್ಧದಷ್ಟು ಸಮಯದಲ್ಲಿ ಮೊಬೈಲ್ ಅನ್ನು ಚಾರ್ಜ್ ಮಾಡಲಾಗುವುದಿಲ್ಲ.
ಹಾಗಾದರೆ ಫಾಸ್ಟ್ ಚಾರ್ಜಿಂಗ್ ಬಳಸದಿರುವುದೇ ಒಳ್ಳೆಯದೇ ?
ಇದಕ್ಕೆ ಉತ್ತರಿಸುವುದು ಸ್ವಲ್ಪ ಕಷ್ಟ. ಏಕೆಂದರೆ ಯಾವುದೇ ಮೊಬೈಲ್‌ನ್ನು ನಿಧಾನವಾಗಿ ಚಾರ್ಜ್ ಮಾಡಿದರು ಸಹ 2 ವರ್ಷ ಗಳಲ್ಲಿ ಬ್ಯಾಟರಿ ತನ್ನ ಕಾರ್ಯಕ್ಷಮತೆಯ ಅರ್ಧದಷ್ಟನ್ನು ಕಳೆದುಕೊಳ್ಳುತ್ತದೆ. ಮೇಲೆ ಹೇಳಿದ ಸಮಸ್ಯೆಗಳನ್ನು ಬಗೆಹರಿಸಲು ವೇಗದ ಚಾರ್ಜಿಂಗ್ ತಯಾರಿಕಾ ಸಂಸ್ಥೆಗಳು ಒಂದಿಷ್ಟು ಪರಿಹಾರವನ್ನು ಕಂಡುಹಿಡಿದಿದ್ದಾರೆ. ಮೊದಲನೆಯದು ಮೊಬೈಲ್ ಚಾರ್ಜ್ ಆದ ನಂತರ ಯಾವುದೇ ವಿದ್ಯುತ್ ಅನ್ನು ಮೊಬೈಲ್ ಹೀರಿಕೊಳ್ಳುವುದಿಲ್ಲ.
ಎರಡನೆಯದು ಒಪ್ಟಿಮೈಸಡ್ ಚಾರ್ಜಿಂಗ್. ಈ ವಿಧಾನದಲ್ಲಿ ಮೊಬೈಲ್ ಬಳಕೆದಾರನ ಜೀವನಕ್ರಮವನ್ನು ಅನುಸರಿಸಿ
ಮೊಬೈಲ್ ಅನ್ನು ಇಡೀ ರಾತ್ರಿ ಚಾರ್ಜ್‌ಗೆ ಹಾಕಿದರೂ, ಬಳಕೆದಾರ ಏಳುವ ಒಂದು ಘಂಟೆಯ ಮೊದಲು ಮೊಬೈಲ್ 100 ಪ್ರತಿಶತ ಚಾರ್ಜ್ ಆಗುತ್ತದೆ. ವೇಗದ ಮತ್ತು ನಿಧಾನ ಚಾರ್ಜಿಂಗ್ ನಡುವಿನ ಹಂತದ ಚಾರ್ಜಿಂಗ್ ಬರುವುದರಿಂದ ಮುಂದಿನ ದಿನಗಳಲ್ಲಿ ಬಳಕೆದಾರನಿಗೆ ಹೆಚ್ಚು ಲಾಭವಾಗಬಹುದು.