Wednesday, 11th December 2024

ಕಣ್ಮರೆಯಾದ ಜೀವನದಿ

ಡಾ.ಸಿ.ಜಿ.ರಾಘವೇಂದ್ರ, ವೈಲಾಯ

ಈ ಪುಸ್ತಕದಲ್ಲಿ ಉಲ್ಲೇಖವಾಗಿರುವುದು ಕಳೆದುಹೋದ ನದಿ ಯೊಂದರ ಜೀವನಗಾಥೆ. ಆ ನದೀಪಾತ್ರದ ನಾಗರಿಕತೆಯು ಸುಮಾರು ಎರಡು ಮಿಲಿಯನ್ ಚದರ ಕಿಲೋಮೀಟರ್ ವಿಸ್ತೀರ್ಣದಷ್ಟು ವಿಶಾಲವಾಗಿ ಹಬ್ಬಿಕೊಂಡಿತ್ತು. ಆ ಮಹಾನದಿಯು ಭಾರತದ ಪೂರ್ವಭಾಗದಲ್ಲಿ ಬೃಹತ್ ನದಿಯೆನಿಸಿದ ಬ್ರಹ್ಮಪುತ್ರಕ್ಕಿಂತಲೂ
ಗಾತ್ರದಲ್ಲಿ ತುಂಬಾ ದೊಡ್ಡದಾಗಿತ್ತು. ಹಿಮಾಲಯದಲ್ಲಿ ಜನಿಸಿ ಪಶ್ಚಿಮದ ಸಮುದ್ರವನ್ನು ಸೇರುತ್ತಿದ್ದ ಆ ನದಿಯು 4600 ಕಿ.ಮೀ.ಗಳಷ್ಟು ಉದ್ದಕ್ಕೆ ಪ್ರವಹಿಸು ತ್ತಿತ್ತು. ಬಿಸಿಇ 1900ರ ಕಾಲದ ಸುಮಾರಿಗೆ ಇದ್ದಕ್ಕಿದ್ದಂತೆ ಭೂಪ ದರಗಳ ಪರಸ್ಪರ ತಿಕ್ಕಾಟದಿಂದ ಹಾಗೂ ಮುಂಗಾರು ಮಳೆಯ ನಿರಂತರ
ಅಭಾವ ದಿಂದ ಕ್ರಮೇಣವಾಗಿ ಈ ಮಹಾನದಿಯು ಕಣ್ಮರೆಯಾಗಿತ್ತೆಂದು ತಿಳಿದುಬರುತ್ತದೆ.

ಅತ್ಯಂತ ಆಶ್ಚರ್ಯಕರ ವಿಚಾರವೆಂದರೆ ಈ ಮಹಾನ್ ನದಿಯು ಕಾಣದಾಗಿ 4000 ವರ್ಷಗಳ ನಂತರವೂ ಜನಮಾನಸದಲ್ಲಿ ಅದರ ನೆನಪು ಶೃತಿ, ಸ್ಮೃತಿ ಧರ್ಮಶಾಸ್ತ್ರಗಳ ಮೂಲಕ ಪರಂಪರೆಯಿಂದ ಜನರಲ್ಲಿ ಬಾಯಿಯಿಂದ ಬಾಯಿಗೆ ಹರಿದು ಬಂದಿದೆ. ವಸಾಹತುಶಾಹೀ ಚರಿತ್ರೆಕಾರರು ಇದನ್ನು ಕಪೋಲಕಲ್ಪಿತ ಕಟ್ಟುಕಥೆಯೆಂದೇ ಕಡೆಗಣಿಸಿದರೂ ಈ ಪೂಜ್ಯ ಜಲ ಧಾರೆಯ ಪುಣ್ಯ ಸ್ಮರಣೆಯನ್ನು ದಕ್ಷಿಣ ಏಷ್ಯಾದ ಜನರು ತಮ್ಮ ನೆನಪಿನಲ್ಲಿ ಭದ್ರವಾಗಿ ಇಂದಿನವರೆಗೂ ಕಾಪಿಟ್ಟುಕೊಂಡು ಬಂದಿzರೆ. ಇದು ಅತ್ಯಂತ ರೋಮಹರ್ಷಕವಾದ ವಿಚಾರವಾಗಿದ್ದು, ಇದನ್ನು ಜಗತ್ತಿನ ಪರಮಾದ್ಭುತಗಳಲ್ಲಿ ಒಂದೆನ್ನಬಹುದು. ಮಧ್ಯಯುಗೀನ ಭಾರತದಲ್ಲಿ ಅಕ್ಬರನ ಸೇನಾ ತುಕಡಿಗಳು ಒಣಗಿ ಹೋದ ಇದೇ ನದಿಯ ಪಾತ್ರವನ್ನು ಗುಜರಾತಿನಲ್ಲಿ ಉತ್ತರ-ದಕ್ಷಿಣಗಳ ಸೇನಾ ಸಾಗಾಟಕ್ಕೆ  ಬಳಸಿಕೊಂಡಿದ್ದ ವೆಂಬುದಕ್ಕೆ ದಾಖಲೆಗಳು ಸಿಗುತ್ತವೆ.

ಸಿ.ಎಫ್. ಓಲ್ಡ್ ಹ್ಯಾಮ್ ಮೊದಲಾದ ಬ್ರಿಟಿಷರ ಕಾಲದ ಭೂನಕ್ಷಾಶಾಸ್ತ್ರಜ್ಞರು ಮತ್ತು ಅನೇಕ ಭೂವಿಜ್ಞಾನಿಗಳು ಘಗ್ಗರ್ ಹಕ್ರಾದ ಒಣಗಿದ ನದೀಪಾತ್ರವು ಪಾಳುಬಿದ್ದು ಭೂಗರ್ಭದಲ್ಲಿ ಮುಚ್ಚಿಹೋಗಿದೆಯೆಂದು ಹೇಳಿದ್ದರು. ಈ ನದಿಯು ಅಸಲಿಗೆ ವೇದಗಳಲ್ಲಿ ವಿದ್ಯುಕ್ತವಾಗಿ ವರ್ಣಿಸಲ್ಪಟ್ಟ ಸರಸ್ವತಿಯೇ ಇದ್ದೀತೆಂಬ
ಗುಮಾನಿಯನ್ನು ಅವರು ಅಂದೇ ವ್ಯಕ್ತಪಡಿಸಿದ್ದರು. ವಿಪರ್ಯಾಸವೆಂದರೆ ನಮ್ಮ ದೇಶದ ಹೆಚ್ಚಿನ ವಸಾಹತುಶಾಹೀ ಮತ್ತು ಎಡಪಂಥೀಯ ಚರಿತ್ರೆಕಾರರು
ಸರಸ್ವತಿಯ ಅಸ್ತಿತ್ವವನ್ನು ಇಂದಿಗೂ ಒಪ್ಪಲು ತಯಾರಿಲ್ಲ.

ಲ್ಯಾಂಡ್‌ಸ್ಯಾಟ್ ಚಿತ್ರ
1970ರ ದಶಕದಲ್ಲಿ ಅಮೇರಿಕಾದ ಲ್ಯಾಂಡ್‌ಸ್ಯಾಟ್ ಉಪಗ್ರಹವು ಪಶ್ಚಿಮೋತ್ತರ ಭಾರತದಲ್ಲಿ ಒಂದೊಮ್ಮೆ ಇದ್ದಿರಬಹುದಾದ ಬೃಹತ್ ಗಾತ್ರದ ನದಿಯೊಂದರ ಒಣಗಿದ ನದಿಪಾತ್ರದ ವಿವರವಾದ ಚಿತ್ರಗಳನ್ನು ಮೊತ್ತಮೊದಲ ಬಾರಿಗೆ ಜಗಜ್ಜಾಹೀರು ಮಾಡಿತು. ಆನಂತರದಲ್ಲಿ ಸರಸ್ವತಿಯು ಕೇವಲ ಅಜ್ಜಿಕಥೆಗಳ ಕಾಲ್ಪನಿಕ ನದಿಯಾಗಿ ಉಳಿಯದೇ, ಅದರ ನೈಜ ಅಸ್ತಿತ್ವವು ವೈಜ್ಞಾನಿಕವಾದ ಸಾಕ್ಷಾಧಾರಗಳಿಂದ ನ್ಯಾಯಿಕವಾಗಿ ಸ್ಥಾಪಿತವಾಯಿತು.

ತದನಂತರ ಇಸ್ರೋದಿಂದ ಉಡ್ಡಯಿತ ಅನೇಕ ಉಪಗ್ರಹಗಳು ಭಾರತೀಯ ಉಪಖಂಡದ ಜನರ ನಾಗರಿಕ ಜೀವನದ ಮೂಲ ಶೃತಿಯಾದ ಈ ನದೀಪಾತ್ರದ ಕುರಿತು ವಿಸ್ತೃತವಾದ ಚಿತ್ರಗಳನ್ನು ಕಳುಹಿಸಿ ಮಿಕ್ಕೆ ಊಹಾಪೋಹಗಳಿಗೂ ಅಂತಿಮ ತೆರೆಯೆಳೆದವು. ಭಾರತೀಯ ನಾಗರಿಕತೆಯ ಪ್ರಮುಖ ತೊಟ್ಟಿಲು ಸರಸ್ವತಿ ನದಿಯ ತೀರವೆಂದು ಈಗ ಯಾರಿಗೂ ಯಾವ ಅನುಮಾನವೂ ಉಳಿದಿಲ್ಲ. ಇದುವರೆಗೆ ಸಿಂಧೂ ನಾಗರಿಕತೆಗೆ ಸಂಬಂಧಿಸಿದವೆಂದು ಹೇಳಲಾದ 60%ಕ್ಕೂ ಹೆಚ್ಚಿನ ಜನವಸತಿಯ ಸ್ಥಳಗಳು ನಿಜವಾಗಿಯೂ ಇದ್ದಿದ್ದು ಸರಸ್ವತಿಯ ನದೀಪಾತ್ರದಲ್ಲಿಯೇ ಹೊರತು ಸಿಂಧೂ ನದೀತೀರದಲ್ಲಿ ಅಲ್ಲವೆನ್ನುವ ಸತ್ಯವೂ ಈಗ ಖಾತ್ರಿಯಾಗಿದೆ.

ಅದು ಎರಡು ಮಿಲಿಯನ್ ಚದರ ಕಿ.ಮೀ.ಗಳ ವಿಸ್ತಾರವಾದ ವಿಶಾಲವಾದ ಭೂಪ್ರದೇಶದಲ್ಲಿ ಹರಡಿಕೊಂಡಿತ್ತು. ಅಚ್ಚರಿಯ ವಿಷಯವೆಂದರೆ ಈ ಪುರಾತನ ಸಂಸ್ಕೃತಿಯು ತನ್ನ ಏಕರೂಪತೆಯನ್ನು ಇಂದಿಗೂ ಉಳಿಸಿಕೊಂಡಿದೆ. ಪಶ್ಚಿಮೋತ್ತರ ಭಾರತದಲ್ಲಿ ಇಂದಿಗೂ ಪ್ರಚಲಿತವಿರುವ ಹಿಂದೂ ಸಂಸ್ಕೃತಿಯೊಂದಿಗೆ ಅಂದಿನ ಪ್ರಾಚೀನ ನಾಗರಿಕತೆಗೆ ಇರುವ ಸಾಮ್ಯತೆ ಮತ್ತು ನಿರಂತರತೆಯು ಯಾರನ್ನೂ ಚಕಿತಗೊಳಿಸದಿರದು. ಪ್ರಪಂಚದ ಇತರೆ ನಾಗರಿಕತೆಗಳು ಅಳಿದು
ಹೋದರೂ ಇಂದಿಗೂ ಅವಿನಾಶಿಯಾಗಿ ಅವಿಚ್ಛಿನ್ನವಾಗಿ ತನ್ನ ಮೂಲ ರೂಪದ ಉಳಿದು ಬಂದಿರುವ ಏಕೈಕ ಸಂಸ್ಕೃತಿಯ ತವರು ಸರಸ್ವತಿಯ ನದೀತೀರ ವೆಂದರೆ ನಮಗೆ ರೋಮಾಂಚನವಾಗದಿರಲು ಹೇಗೆ ಸಾಧ್ಯ?

ಸಿಂಧೂ ಲಿಪಿ ಚಿತ್ರಗಳ ಸುಳಿವು
ಸಿಂಧೂ ಕಣಿವೆಯ ಜನರ ಲಿಪಿಯನ್ನು ಇವತ್ತಿನವರೆಗೂ ಸಂಪೂರ್ಣವಾಗಿ ಭೇದಿಸಲಾಗಿಲ್ಲ ಎಂಬುದು ನಿಜ. ಹಾಗಿದ್ದರೂ ಸಿಂಧೂ-ಸರಸ್ವತಿ ತಪ್ಪಲಲ್ಲಿ ದೊರೆತಿ ರುವ ಯೋಗಾಸನದ ವಿವಿಧ ಭಂಗಿಗಳಲ್ಲಿರುವ ಮನುಷ್ಯರು, ಧ್ಯಾನಸ್ಥ ಮುನಿಗಳು (ಪುರೋಹಿತರು), ಶಿವಲಿಂಗದ ಮಾದರಿ, ಸ್ತ್ರೀ ಯೋನಿಯ ಸಂಕೇತ ಗಳನ್ನೊಳಗೊಂಡ ಅಸಂಖ್ಯಾತ ಟೆರಕೋಟಾ ಮಣ್ಣಿನ ಗೊಂಬೆಗಳು ಅಂದಿನ ಜನರ ಕುರಿತು ಅನೇಕ ಸುಳಿವುಗಳನ್ನು ನೀಡಿವೆ. ಆ ಗೊಂಬೆಗಳಲ್ಲಿ ಕಂಡು ಬಂದಿರುವಂತೆ ಭ್ರೂಮಧ್ಯದಿಂದ ಮೊದಲ್ಗೊಂಡ ಬೈತಲೆ, ಹಣೆಯ ಮಧ್ಯದಲ್ಲಿ ಬೊಟ್ಟು ಮತ್ತು ಕೈತುಂಬ ಬಳೆಗಳನ್ನು ಇಂದಿಗೂ ಭಾರತದ ಹಿಂದೂ ಮಹಿಳೆಯರು ಧರಿಸುವುದನ್ನು ನಾವು ದಿನನಿತ್ಯವೂ ಕಾಣಬಹುದು.

ವೇದಗಳಲ್ಲಿ ಮತ್ತು ಹಿಂದೂ ಧರ್ಮಗ್ರಂಥಗಳಲ್ಲಿ ವಿವರಿಸಲಾದ ಪ್ರಾಕೃತಿಕ ಲಕ್ಷಣಗಳಿಗೂ ಮತ್ತು ಸಿಂಧೂ ಸರಸ್ವತಿ ಕಣಿವೆಯ ಭೌಗೋಳಿಕ ಸನ್ನಿವೇಶಗಳಿಗೂ ಅನೇಕ ಸಾಮ್ಯತೆಗಳಿರುವುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತದೆ. ಹಾಗಾಗಿ ಇವೆರಡೂ ಪರಸ್ಪರ ಒಂದೇ ಎಂದು ಅನ್ನಿಸುವುದು ಸ್ವಾಭಾವಿಕವಷ್ಟೇ! ಈ ಕುರಿತು ಪಂಡಿತರ ನಡುವೆ ತೀವ್ರವಾದ ಮೌಲಿಕ ಚರ್ಚೆಗಳಾಗಬೇಕೆಂಬುದೇ ನಮ್ಮ ಸದಾಶಯ. ಈ ಹಿಂದೆ ಮ್ಯಾಕ್ಸ್ ಮುಲ್ಲರ್ ಹಾಗೂ ಮಾರ್ಟಿಮರ್ ವೀಲರ್
ಮೊದಲಾದ ವಸಾಹತುಶಾಹಿ ಬಾಡಿಗೆ ಚರಿತ್ರಕಾರರು ಖಚಿತವಾದ ಸಿದ್ಧಾಂತವೆಂದು ಷರಾ ಬರೆದು ನಂಬಿಸಿದ ನಿರೂಪಣೆಗೂ, ಆಧುನಿಕ ವಿಜ್ಞಾನವು ಹೇಳುವ ಸತ್ಯಕ್ಕೂ ಅಜಗಜಾಂತರ.

ಇವರ ಪ್ರಕಾರ ‘ಋಗ್ವೇದಾದಿಗಳನ್ನು ಸಂಕಲಿಸಿದ ಇಂಡೋ ಆರ್ಯನ್ನರೇ ಇಂದಿನ ಹಿಂದೂ ಸಂಸ್ಕೃತಿಯ ಆದ್ಯ ಪ್ರವರ್ತಕರು. ಸ್ವತಃ ಪರಕೀಯರಾದ ಅವರು ಬಿಸಿಇ 1500ರ ಸುಮಾರಿಗೆ ತಮ್ಮ ಮೂಲ ನೆಲೆಯಾದ ಮಧ್ಯ ಏಷ್ಯಾದ ಹುಲ್ಲುಗಾವಲಿನಿಂದ ವಲಸೆ ಬಂದವರು. ಅಶ್ವದಳ ಮತ್ತು ರಥಗಳೊಂದಿಗೆ ಬಂದ ಆರ್ಯನ್ನರು ಹರಪ್ಪಾದ ಮೂಲ ನಿವಾಸಿಗಳಾದ ದ್ರಾವಿಡರೊಂದಿಗೆ ಯುದ್ಧಮಾಡಿ ಸೋಲಿಸಿ ಬೃಹತ್ ನರಸಂಹಾರದ ಮೂಲಕ ಅವರ ಮೂಲ ನಾಗರಿಕತೆ ಯನ್ನು ಧ್ವಂಸ ಮಾಡಿದರು. ಶ್ವೇತವರ್ಣದ ಉದ್ದ ನಿಲುವಿನ ಆರ್ಯನ್ನರೊಡನೆ ಕಬ್ಬಿಣದಿಂದ ಮಾಡಿದ ಹಲವು ಶಸಾಸಗಳಿದ್ದು, ಅವರಿಗೆ ಯುದ್ಧದಲ್ಲಿ ಮೇಲ್ಗೈ ಯನ್ನು ಸಾಽಸಲು ಸುಲಭಸಾಧ್ಯವಾಯಿತು.

ಹುಟ್ಟಾ ಯೋಧರಾದ ಅವರು ಶ್ಯಾಮವರ್ಣದವರೂ, ದಪ್ಪ ಮೂಗಿನವರೂ, ಕುಬ್ಜರೂ ಆದ ದ್ರಾವಿಡ ಜನರನ್ನು ಸುಲಭವಾಗಿ ಯುದ್ಧದಲ್ಲಿ ಸೋಲಿಸಿದರು.
ಆರ್ಯನ್ನರ ಯುದ್ಧದೇವತೆ ಇಂದ್ರನು ದ್ರಾವಿಡ ಜನರ 100 ನಗರಗಳ ಕೋಟೆಗಳನ್ನು (ಪುರಗಳನ್ನು) ಧ್ವಂಸಮಾಡಿ ತಾನು ಪುರಂಧರನೆನಿಸಿಕೊಂಡನು. ಹೀಗೆ ಹೀನಾಯವಾಗಿ ಸೋಲಿಸಲ್ಪಟ್ಟ ದ್ರಾವಿಡರು ತಾವು ಕ್ರಮೇಣ ವಿಂಧ್ಯಪರ್ವತದ ದಕ್ಷಿಣ ಭಾಗಕ್ಕೆ ಬಂದು ನೆಲೆಸುವಂತಾಯಿತು.’ ಕಾಮಾಲೆ ಕಣ್ಣಿನ ವಸಹತು ಶಾಹೀ ಚರಿತ್ರೆಕಾರರು ಹೀಗೆ ತಮ್ಮ ತಮ್ಮ ದೇಶಗಳಲ್ಲಿ ಪ್ರಚಲಿತವಾಗಿದ್ದ ಜನಾಂಗೀಯ ವಾದವನ್ನು ಭಾರತೀಯರ ಮೇಲೆ ಸುಖಾಸುಮ್ಮನೆ ಆರೋಪಿಸಿ, ಆರ್ಯರು ದ್ರಾವಿಡರು ಎರಡು ವಿಭಿನ್ನ ಜನಾಂಗಗಳೆಂಬ ನಿರಾಧಾರವಾದ ಕಪೋಲಕಲ್ಪಿತ ಹೊಸದೊಂದು ಸಿದ್ಧಾಂತವನ್ನು ತಾವೇ ಹುಟ್ಟುಹಾಕಿದರು. ಇದು ಆರ್ಯರ ಆಕ್ರಮಣ ಸಿದ್ಧಾಂತದ (ಎಐಟಿ) ಕೇವಲ ಒಂದು ಸೀಳುನೋಟವಷ್ಟೇ.

ಆಕ್ರಮಣದ ಸಾಕ್ಷ್ಯಾಧಾರ ಇಲ್ಲ
ಇಂದಿನವರೆಗೆ ನಡೆದ ಯಾವ ಉತ್ಖನನಗಳಲ್ಲೂ ಸಿಂಧೂ ಕಣಿವೆಯಲ್ಲಿ ಈ ರೀತಿಯ ದೊಡ್ಡ ಪ್ರಮಾಣದ ಯುದ್ಧ ಮತ್ತು ನರಸಂಹಾರಗಳು ನಡೆದಿರುವ ಕುರಿತು ಯಾವುದೇ ಸಾಕ್ಷ್ಯಾಧಾರಗಳೂ ದೊರೆತಿಲ್ಲ. ಒಂದು ಸ್ಥಳದಲ್ಲಿ 38 ಮತ್ತು ಇನ್ನೊಂದು ಕಡೆ 11 ಅಸ್ತಿಪಂಜರಗಳು ಮಾತ್ರವೇ ಇದುವರೆಗೂ ದೊರೆತಿವೆ. ಅಸ್ಥಿಪಂಜರಗಳ ಮೇಲೆ ಹರಿತವಾದ ಆಯುಧಗಳಿಂದ ಆಕ್ರಮಣ ನಡೆದಿರುವ ಯಾವುದೇ ಕುರುಹೂ ಇಲ್ಲ. ಆಂಗ್ಲ ಚರಿತ್ರೆಕಾರರು ಹೀಗೆ ಶವಗಳೇ ಇಲ್ಲದ ನರಸಂಹಾರದ ಕಟ್ಟುಕತೆಯನ್ನು ನಾಜೂಕಾಗಿ ಹೆಣೆದಿದ್ದರು.

ಇದು ನಂಬಲರ್ಹವಲ್ಲವೆಂದು ತಜ್ಞರು ಅಭಿಪ್ರಾಯಪಟ್ಟಿದ್ದು ತಿಳಿಯುತ್ತಿದ್ದಂತೆ ಎಚ್ಚೆತ್ತ ಬ್ರಿಟಿಷ್ ಚರಿತ್ರೆಕಾರರು ಈಗ ಇಂಡೋ-ಆರ್ಯನ್ ವಲಸೆಯ ಸಿದ್ಧಾಂತ ವೆಂದು (ಐಎಎಂಟಿ) ಹೊಸತೊಂದು ಸಿದ್ಧಾಂತವನ್ನು ತೇಲಿಬಿಟ್ಟರು. ತಕ್ಷಣಕ್ಕೆ ವರಸೆ ಬದಲಿಸಿಕೊಂಡ ಅವರ ಚಿಂತನೆಗಳ ಜಾಡೇ ಈಗ ಅಮೂಲಾಗ್ರವಾಗಿ ಬದಲಾಗಿತ್ತು. ಈ ಹೊಸ ಸಿದ್ಧಾಂತದ ಪ್ರಕಾರ ಆರ್ಯನ್ನರು ಏಕಾಏಕಿ ಭಾರತದ ಮೇಲೆ ಆಕ್ರಮಣ ಮಾಡಲಿಲ್ಲ. ಅದಕ್ಕೆ ಬದಲಾಗಿ ಅಲೆ ಅಲೆಯಾಗಿ, ಹಿಂಡು ಹಿಂಡುಗಳಲ್ಲಿ ಭಾರತಕ್ಕೆ ವಲಸೆ ಬಂದರೆಂದು ಈಗ ವಾದಿಸತೊಡಗಿದರು. ಇತ್ತೀಚೆಗೆ ಲಭ್ಯವಿರುವ ಪುರಾವೆಗಳ ಪ್ರಕಾರ ಈ ಹೊಸ ಸಿದ್ಧಾಂತವು ಕೂಡಾ ಆಧಾರರಹಿತವಾಗಿರುವ ಅಸತ್ಯವೆಂದು ತಿಳಿದು ಬರುತ್ತದೆ. (ಅನುವಾದಿತ ಪುಸ್ತಕದ ಆಯ್ದ ಭಾಗ)