Saturday, 23rd November 2024

ಕರೆಯೋಲೆ ಕರೆ ಓಲೆ

ಲಹರಿ

ಶ್ರೀರಂಜನಿ ಅಡಿಗ

ಮದುವೆಗೆ ಕರೆಯಲು ಮನೆ ಮನೆಗೆ ಹೋಗುವ ಬದಲು ವಾಟ್ಸಾಪ್ ಸಂದೇಶದಲ್ಲೇ ಮುಗಿಸುವ ತಂತ್ರ ಹೇಳಿಕೊಟ್ಟಿದ್ದು
ಈ ವೈರಸ್ ಎಂಬ ಗುಮ್ಮ.

ಮದುವೆಗೆ ಚಿನ್ನ, ಸೀರೆ, ದಿನಸಿ ಸಾಮಾನುಗಳನ್ನು ಹೊಂದಿಸುವಷ್ಟೇ ಮುಖ್ಯವಾದದ್ದು ಕರೆಯಬೇಕಾದವರ ಪಟ್ಟಿ. ನೆಂಟರು, ಬೀಗರು, ಹಳೇ ಆಫೀಸಿನವರು, ಹೊಸ ಆಫೀಸಿನವರು, ಹೊಸ, ಹಳೆಯ ಗೆಳೆಯ,ಗೆಳತಿಯರು, ಶಾಲಾ ಕಾಲೇಜು ಗೆಳೆಯರು, ಹಳೇ ಲವ್ವರು, (ಹೊಸ ಲವ್ವರು?)..

ಹೀಗೆ ಪಟ್ಟಿ ಮುಗಿಯುವುದೇ ಇಲ್ಲ. ಪಟ್ಟಿ ಹನುಮಂತನ ಬಾಲದಂತೆ ಉದ್ದವಾಯಿತೆಂದು ‘ಅವರ ಮನೆಯ ಶ್ರಾದ್ಧಕ್ಕೆ
ಕರೆಯಲಿಲ್ಲ’ ‘ಆ ದಿನ ನನ್ನನ್ನು ನೋಡಿಯೂ ನೋಡದಂತೆ ಹೋದರು’ ಎಂಬ ಸಣ್ಣಸಣ್ಣ ಸಬೂಬುಗಳನ್ನು ಹುಡುಕಿ,
ಅಂಥವರನ್ನೆಲ್ಲಾ ಪಟ್ಟಿಯಿಂದ ತೆಗೆದು ಹಾಕಿದರೂ ಅರವಾಶಿಗಿಂತ ಹೆಚ್ಚಿನ ಹೆಸರು ಉಳಿದಿರುತ್ತದೆ.

ಇಷ್ಟೆಲ್ಲಾ ತಿಣುಕಾಡಿ, ನಿದ್ದೆಬಿಟ್ಟು ನೆನಪಿಸಿಕೊಂಡು ಪಟ್ಟಿ ಮಾಡಿಟ್ಟುಕೊಂಡಿದ್ದರೂ, ಹೇಗೋ ಒಂದಿಬ್ಬರು ಈ ಲಿಸ್ಟ್ ನಿಂದ ಜಾರಿಕೊಂಡು- ಯಾವತ್ತೋ ಸಿಕ್ಕಾಗ ‘ಏನಯ್ಯ ಮೊನ್ನೆ ನಿಮ್ಮನೆ ಮದುವೆಗೆ ನನ್ನನ್ನ ಕರಿಲೇ ಇಲ್ಲಾ?’ ಎಂದು ಪಬ್ಲಿಕ್‌ಲ್ಲೇ ಮಾನ
ಕಳೆದುಬಿಡುತ್ತಾರೆ. ಈ ಲಿಸ್ಟ್‌ ಮಾಡಿದಷ್ಟೇ ಕಡುಕಷ್ಟದ್ದು ಅದನ್ನು ಅವರವರ ಯೋಗ್ಯತೆಗನುಸಾರವಾಗಿ ಕರೆಯುವುದು. ಕೆಲವರಿಗೆ ಖುದ್ದು ಮನೆಗೆ ಬಂದು ಅಕ್ಷತೆ ಕಾಳು ಕೊಟ್ಟು ಆಮಂತ್ರಿಸಬೇಕು. ಇನ್ನು ಕೆಲವರದ್ದು ‘ಅಯ್ಯೋ ನಿಮ್ಮನೇಗಾ ಸ್ವಾಮಿ? ಕರಿದೇ ಇದ್ರೂ ಬರ್ತೀವಿ’ ಎಂಬ ಕೆಟಗರಿ.

ಬೆಂಗಳೂರಿನಲ್ಲಿ ಮನೆಗೆ ಹೋಗಿ ಕರೆಯುವ ಕಷ್ಟ ಒಂಟಿಕಾಲಿನ ತಪಸ್ಸಿಗೆ ಸಮ. ಅಟ್ಟದ ಮೇಲೆ ಧೂಳು ಹೊಡೆಯುತ್ತ ಮಲಗಿದ್ದ ಡೈರಿಯನ್ನು ತೆಗೆದು, ವಿಳಾಸ ಹುಡುಕಿ, ಮನೆಯೂ ಸಿಕ್ಕಿತು ಎಂದು ಬಾಗಿಲು ತಟ್ಟಿದರೆ, ಯಾರೋ ಅಪರಿಚಿತರು ಬಾಗಿಲು ತೆಗೆಯುತ್ತಾರೆ!

ಮಾವನ ಮನೆ ಇಲ್ಲೇ ಮೈನ್ ರೋಡಿನಲ್ಲಿ, ಹುಡುಕುವುದು ಸುಲಭ ಎಂದು ಹೋದರೆ ಆ ರೋಡು ಒನ್‌ವೇ ಎಂದು ಗೊತ್ತಾಗುವುದು ಹೋದ ಮೇಲೆಯೇ. ಇನ್ನು ಅರ್ಧಗಂಟೆ ಹಿಂದಿನ, ಮುಂದಿನ ರಸ್ತೆಯಲ್ಲಿ ಸುತ್ತಿ ಸುಳಿದು, ಅಲೆದಾಡಿ, ‘ಯುರೇಕಾ… ಮನೆ ಅಂತೂ ಸಿಕ್ಕಿತು’ ಎಂದು ಗೇಟು ತೆಗೆದರೆ ಬೀಗ ಹಾಕಿದ ಬಾಗಿಲು ಸ್ವಾಗತ ಕೋರುತ್ತದೆ.

ಹೀಗೆ- ಮಾಡಿರುವ ಲಿಸ್ಟ್ ನಲ್ಲಿ 10 ಮನೆಗಳನ್ನು ಪೂರೈಸುವಾಗ ದಿನವೊಂದು ಕಳೆದಿರುತ್ತದೆ. ಹೋದ ಮನೆಗಳಲ್ಲಿ, ಅಪರೂಪಕ್ಕೆ ಬಂದಿರುವುದು ಎಂದು ಕೊಟ್ಟ ಪಾನಕ, ಮಜ್ಜಿಗೆ, ಹಾಲು, ಕಾಫಿ, ಮಿಲ್ಕ್ಶೇಕ್, ಬೋರ್ನ್‌ವೀಟಾಗಳಿಂದ ಹೊಟ್ಟೆಯೆಂಬುದು ಬೆಂಗಳೂರಿನ ಗಟಾರ ಆಗಿಬಿಡುತ್ತದೆ.

ಊರಕಡೆಗಳಲ್ಲಿ ಇಂಥ ಫಚೀತಿಗಳಿರುವುದಿಲ್ಲ. ಒಬ್ಬರಲ್ಲ ಒಬ್ಬರು ಮನೆಯಲ್ಲಿ ಇದ್ದೇ ಇರುತ್ತಾರೆ. ಇಲ್ಲದಿದ್ದರೂ ಕನಿಷ್ಟ
ಪಕ್ಷ ತೋಟದಲ್ಲಿ ಕಾಯಿ ಕೀಳಲೋ, ಸೋಗೆ ಆರಿಸಲೋ ಹೋಗಿರುತ್ತಾರೆ. ಒಂದೆರಡು ಬಾರಿ ‘ಅಯ್ಯಾ’ ಎಂದೋ ಅಥವಾ ಒಂದು ‘ಕೂ’ ಹಾಕಿದರೆ ಮನೆಯಲ್ಲಿರುವ ಮಕ್ಕಳ ಸಂತಾನವೇ ಸ್ವಾಗತಿಸುತ್ತದೆ. ಹಾಗೆಯೇ ಬಂದ ವೇಗದಲ್ಲೇ ಮನೆಯವರನ್ನು ಕರೆಯಲು ಮಾಯವಾಗುತ್ತದೆ. ಪಕ್ಕದ ಓಣಿಯಲ್ಲಿ ಅರ್ಧ ಫರ್ಲಾಂಗು ದೂರ ಸಾಗಿದರೆ ಒಂದೈದು ಮನೆ, ಅಲ್ಲೇ ಪಕ್ಕದ ಕಂಪೌಂಡ್ ಜಿಗಿದರೆ ಮತ್ತೆರಡು ಕೇರಿಗಳು, ಅಲ್ಲೇ ಅವರವರ ನೆಂಟರಿಗೆ, ಬೀಗರಿಗೆ ಎಂದು ಪತ್ರಿಕೆ ಕೊಟ್ಟರೆ ಅರ್ಧಗಂಟೆಯಲ್ಲಿ ಲಿಸ್ಟ್ ನಲ್ಲಿರುವ 50 ಹೆಸರುಗಳು ಕ್ರಾಸ್ ಔಟ್ ಆಗುತ್ತವೆ.

ಬೆಂಗಳೂರಿನಲ್ಲಿ ಇಷ್ಟು ಸುಲಭದಲ್ಲಿ ಕೆಲಸ ಮುಗಿಯುವುದನ್ನು ಕನಸಿನಲ್ಲೂ ಊಹಿಸಲು ಸಾಧ್ಯವಿಲ್ಲ. ಮುಂಚಿನ ಕಾಲದಲ್ಲಿ ಪ್ರತಿ ಮನೆಗೂ ಹೋಗಿ ಮನೆಯವರನ್ನೆಲ್ಲಾ ಕರೆದು ಬರುವ ಅಭ್ಯಾಸವಿತ್ತು. ಎರಡು ಮೂರು ದಶಕಗಳ ಹಿಂದೆ ಫೋನೆಂಬ ಅನುಕೂಲ ಬಂದಾಗ ‘ನಿಮಗೆ ಇನ್ವಿಟೇಶನ್ ಪೋಸ್ಟ್‌ ಮಾಡಿರುವೆ, ದಯವಿಟ್ಟು ಬನ್ನಿ’ ಎಂದು ಹೇಳುವ ಕ್ರಮ ಆರಂಭವಾ ಯಿತು.

ಫೋನು ಮಾಡಿ ಕರೆದಿದ್ದಾರೆ ಎಂಬ ಗೌರವದಿಂದ ಹೋಗಲೇಬೇಕಾಗಿತ್ತು. ಈಗ? ಹೇಳಿಕೇಳಿ ಇದು ಸ್ಮಾರ್ಟ್ ಯುಗ. ಅದೂ ಈ ಸಲ
ವೈರಸ್ ಸೋಂಕು ಎಂಬ ಪೆಡಂಭೂತದ ಕೃಪೆಯಿಂದಾಗಿ, ಕರೆಯೋಲೆಯ ಸಾಫ್ಟ್ ಕಾಪಿಯನ್ನು ಪರಿಚಿತರಿಗೆಲ್ಲಾ ವ್ಯಾಟ್ಸಾಪ್ ಮಾಡಿ, ಜೊತೆಗೆ ಜಿಮ್ಯಾಪನ್ನೂ ಅಟ್ಯಾಚ್ ಮಾಡಿ, ‘ಪ್ಲೀಸ್ ಡು ಕಂ’ ಎಂದು ಟೈಪಿಸಿ, ರವಾನಿಸಿ, ಮದುವೆಗೆ ಕರೆಯುವ ಸುಲಭದ
ದಾರಿಯನ್ನು ಕಂಡುಕೊಂಡಿದ್ದಾರೆ. ಹೀಗಾಗಿ ಈ ಮೇಲಿನ ಎಲ್ಲಾ ಕರಕರೆಯಿಂದ ಮುಕ್ತರು ಮದುವೆಮನೆಯವರು. ಆದರೆ ಹೋಗುವ ಬಿಡುವ ನಿರ್ಧಾರದ ಚೆಂಡು ಮಾತ್ರ ಅತಿಥಿಗಳ ಕೋರ್ಟಿಗೆ! ಏಕೆಂದರೆ, ಅಲ್ಲೂ ವೈರಸ್ ಸೋಂಕು ಎಂಬ ಗುಮ್ಮನ ಕಾಟ ಉಂಟು!