Saturday, 14th December 2024

ಭಾರತದ ಹೃದಯ ಕಾಶಿ

ಡಾ. ಎಸ್. ಜಯಸಿಂಹ

ಹದಿನೆಂಟನೆಯ ಶತಮಾನದಲ್ಲಿ ರಾಣಿ ಅಹಲ್ಯಾ ಬಾಯಿ ಹೋಳ್ಕರ್ ಅವರು ಕಾಶಿಯಲ್ಲಿ ವಿಶ್ವನಾಥನ ದೇಗುಲವನ್ನು ಮರು ನಿರ್ಮಿಸಿದರು. ಆ ನಂತರ, ಇದೇ ಮೊದಲ ಬಾರಿಗೆ ಇಪ್ಪತ್ತೊಂದನೆಯ ಶತಮಾನದಲ್ಲಿ ಕಾಶಿಯಲ್ಲಿ ನಾನಾ ರೀತಿಯ ಅಭಿವೃದ್ಧಿ ಕಾಮಗಾರಿಗಳು ನಡೆದು, ನಮ್ಮ ದೇಶದ ಸಾಂಸ್ಕೃತಿಕ ಪರಂಪರೆಗೆ ಹೊಸತನವನ್ನು ಕಟ್ಟಿಕೊಟ್ಟಿವೆ.

ಕಾಶಿ – ಈ ಹೆಸರನ್ನು ಕೇಳದವರಾರು? ಕಾಶಿ ಎಂದ ಕೂಡಲೇ ಪ್ರತಿಯೊಬ್ಬ ಭಾರತೀಯನೂ ಭಾವುಕ ನಾಗಿಬಿಡುತ್ತಾನೆ. ತನ್ನ ಜೀವಿತದಲ್ಲಿ ಒಮ್ಮೆ ಯಾದರೂ ಈ ಪವಿತ್ರ ಕ್ಷೇತ್ರಕ್ಕೆ ಭೇಟಿಕೊಟ್ಟು, ವಿಷ್ಣು ಪಾದೋದ್ಭವೆಯಾದ ಗಂಗೆಯಲ್ಲಿ ಮಿಂದು ತನ್ನ ಪಾಪರಾಶಿಗಳನ್ನು ಕಳೆದುಕೊಂಡು ಧನ್ಯನಾಗುವ ಕನಸು ಕಾಣುತ್ತಾನೆ.

ಕ್ಷೇತ್ರರಾಜನೆಂದೇ ಹೆಸರಾಗಿರುವ ಕಾಶಿಕ್ಷೇತ್ರವನ್ನು ಸೇವಿಸುವುದೂ, ಅಲ್ಲಿ ವಿರಾಜಮಾನನಾಗಿರುವ ವಿಶ್ವನಾಥನನ್ನು ಸಂದರ್ಶಿಸುವುದೂ ತನ್ನ ಬದುಕಿನ ಬಹುದೊಡ್ಡ ಭಾಗ್ಯವೆಂದು ಭಾವಿಸುತ್ತಾನೆ. ಕಾಶಿ ಪಟ್ಟಣಕ್ಕೆ ಪ್ರಾಚೀನ ಕಾಲದ ಪೌರಾಣಿಕ ಹಿನ್ನೆಲೆ ಇದೆ. ‘ಕಾಶತೇ ಬ್ರಹ್ಮ ಅಸ್ಯಾಂ’ ಪರಬ್ರಹ್ಮನು ಪ್ರಕಾಶಿಸುವ ಸ್ಥಳವಾದುದರಿಂದ ಈ ಸ್ಥಳಕ್ಕೆ ‘ಕಾಶಿ’ ಎಂಬ ಹೆಸರು ಬಂದಿದೆ. ಐತಿಹಾಸಿಕ ದೃಷ್ಟಿ ಯಿಂದಲೂ ‘ಕಾಶಿ’ ಪ್ರಪಂಚದ ಎಲ್ಲಾ ನಗರಗಳಿಗಿಂತಲೂ ಅತ್ಯಂತ ಪ್ರಾಚೀನವಾದ ನಗರವಾಗಿದೆ. ಇದು ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದು.

ವೇದಗಳಲ್ಲಿ ಅನೇಕ ಕಡೆ ಕಾಶಿಯ ಪ್ರಸ್ತಾಪ ಬರುತ್ತದೆ. ‘ಅಯೋಧ್ಯಾ iಥುರಾ ಮಾಯಾ ‘ಕಾಶೀ’ ಕಾಂಚಿ ಆವಂತಿಕಾ| ಪುರಿ ದ್ವಾರಾವತೀ ಚೈವ ಸಪ್ತೆ ತೇ ಮೋಕ್ಷದಾ ಯಕಾಃ’ ಎಂಬ ಉಕ್ತಿಯಂತೆ ‘ಕಾಶಿ’ ಸಪ್ತಮೋಕ್ಷಪುರಿಗಳಲ್ಲಿ ಒಂದು. ಅದರಲ್ಲಿಯೂ ಈ ಶ್ಲೋಕಮಧ್ಯದಲ್ಲಿ ಹೇಳಿರುವ ಕಾಶಿ ಮೋಕ್ಷಪುರಿ ಗಳಲ್ಲಿಯೇ ಉತ್ತಮವಾದದ್ದು.

ಉಳಿದ ಪುರಿಗಳು ಕಾಲಾಂತರದಲ್ಲಿ ಕಾಶಿ ಪ್ರಾಪ್ತಿಯನ್ನು ಉಂಟುಮಾಡಿಯೇ ಮೋಕ್ಷವನ್ನು ಕೊಡುತ್ತದೆ ಎಂದು ಸ್ಥಳಪುರಾಣ ಸಾರುತ್ತದೆ. ‘ನನಗೆ ಕಾಶಿ ಯಲ್ಲಿ ಪ್ರೀತಿಯಿದ್ದಂತೆ ಕೈಲಾಸ ಪರ್ವತ, ಮಂದರಶೈಲ ಮುಂದಾದವುಗಳಲ್ಲಿ ಪ್ರೀತಿಯಿಲ್ಲ’ ಎಂದು ಸಾಕ್ಷಾತ್ ಶಿವನೇ ಅಭಿಪ್ರಾಯಪಡುತ್ತಾನೆಂದು ಕಾಶಿಖಂಡದಲ್ಲಿ ಉಲ್ಲೇಖವಿದೆ. ಹಾಗಾಗಿ ಕಾಶಿಯ ಮಹತ್ವವನ್ನು ಎಷ್ಟು ಹೇಳಿದರೂ ಸಾಲದು.

ಈ ಪಟ್ಟಣಕ್ಕೆ ಕಾಶೀ, ವಾರಣಾಸೀ, ಅವಿಮುಕ್ತ, ಆನಂದಾನನ, ಮುಕ್ತಿಪುರಿ ಮೊದಲಾದ ಅನೇಕ ಹೆಸರುಗಳು ಪುರಾಣದಲ್ಲಿ ಕಂಡುಬರುತ್ತವೆ. ಶಂಕರನ ತ್ರಿಶೂಲದಲ್ಲಿ ನಿಂತಿರುವ ಈ ಪಟ್ಟಣವು ಪ್ರಳಯಕಾಲದಲ್ಲಿಯೂ ಸಹ ನಾಶವಾಗುವುದಿಲ್ಲವೆಂದು ಹೇಳುತ್ತಾರೆ. ವರಣಾ ಮತ್ತು ಅಸೀ ಎಂಬ ಎರಡು ನದಿಗಳ ಮಧ್ಯದಲ್ಲಿರುವುದರಿಂದ ಈ ಪಟ್ಟಣಕ್ಕೆ ‘ವಾರಣಾಸಿ’ ಎನ್ನುವ ಹೆಸರು ಬಂದಿದೆ.

ಕಾಶ್ಯಾಂತು ಮರಾಣಾನ್ಮುಕ್ತಿಃ ಎಂಬ ಉಕ್ತಿಯನ್ನು ಅನುಸರಿಸಿ ಅನೇಕರು ಮುಪ್ಪಿನಲ್ಲಿ, ಮರಣಸಮಯದಲ್ಲಿ ಕಾಶೀ ವಾಸವನ್ನು ಬಯಸಿ ಇಲ್ಲಿಯೇ ಇರುತ್ತಾರೆ. ಮರಣ ಸಮಯದಲ್ಲಿ ಸ್ವಯಂ ಶಂಕರನೇ ಜೀವಿಗಳ ಕಿವಿಗಳಲ್ಲಿ ತಾರಕ ಮಂತ್ರವನ್ನುಚ್ಚರಿಸುವನೆಂಬ ನಂಬಿಕೆ ಹಲವರಲ್ಲಿದೆ. ಮರಣ ಕಾಲದಲ್ಲಿ ಈಗಲೂ ಕಾಶಿಯಿಂದ ತಂದ ಗಂಗಾಜಲ ವನ್ನು ಬಾಯಿಗೆ ಹಾಕುವ ಪದ್ಧತಿ ಪ್ರಚಲಿತದಲ್ಲಿದೆ.

ನಮ್ಮ ನಾಡಿನಲ್ಲಿ ಮದುವೆಯ ಸಂದರ್ಭದಲ್ಲಿ ವರನು ಕಾಶಿಯಾತ್ರೆಗೆ ಸಿದ್ಧನಾಗಿ ಹೊರಡುತ್ತಾನೆ. ಇದೊಂದು ಪ್ರಮುಖ ಸಂಪ್ರದಾಯವಾಗಿ ಈಗಲೂ ರೂಢಿಯಲ್ಲಿದೆ. ಕಾಶಿಯು ಪ್ರಾಚೀನ ಕಾಲದಿಂದಲೂ ಬಹುದೊಡ್ಡ ವಿದ್ಯಾಕೇಂದ್ರ. ಅಲ್ಲಿರುವ ಆಧುನಿಕ ‘ಕಾಶಿ ಅಥವಾ ಬನಾರಸ್ ವಿಶ್ವವಿದ್ಯಾಲಯ’ ಈಗಲೂ ಹೆಸರುವಾಸಿ. ಕಾಶಿ ತನ್ನ ಪಾವಿತ್ರ್ಯತೆಯಿಂದ ಕೇವಲ ಜನಸಾಮಾನ್ಯರನ್ನಷ್ಟೇ ಅಲ್ಲದೆ ದೇಶದ ಹಲವಾರು ವಿದ್ವನ್ಮಣಿಗಳನ್ನು ಸೂಜಿಗಲ್ಲಿನಂತೆ ಸೆಳೆಯುವ ‘ಪಂಡಿತಪುರಿ’ಯಾಗಿದೆ. ಅಸಂಖ್ಯಾತ ಘನ ವಿದ್ವಾಂಸರನ್ನು ಕಾಶಿ ಜಗತ್ತಿಗೆ ಕೊಡುಗೆಯಾಗಿ ನೀಡಿದೆ.

ಹಾಗಾಗಿ ‘ಕಾಶಿ’ ಎಂಬುದು ವಿದ್ವತ್ತಿಗೆ, ಸಮೃದ್ಧಿಗೆ, ಸಾರ್ಥಕತೆಗೆ, ಸಾ-ಲ್ಯಕ್ಕೆ, ಪರಮೋನ್ನತಿಗೆ ಮತ್ತೊಂದು ಹೆಸರಾಗಿ ಮಾರ್ಪಟ್ಟಿದೆ ಎಂದರೂ ತಪ್ಪಾಗಲಿಕ್ಕಿಲ್ಲ.

ಹರಿದಾಸರ ಸ್ಫೂರ್ತಿಕೇಂದ್ರ
ಕಾಶಿ ಹಲವಾರು ಹರಿದಾಸರ ಸ್ಪೂರ್ತಿಕೇಂದ್ರ. ಇಲ್ಲಿ ಪ್ರಸಿದ್ಧ ವಾಗಿರುವ ಬಿಂದುಮಾಧವ ಹರಿದಾಸರಿಗೆ ಇಷ್ಟದೈವ. ಪುರಂದರದಾಸರಾದಿಯಾಗಿ ಅನೇಕ ಕನ್ನಡದ ಹರಿದಾಸರು ‘ಕಾಶಿ’ಯ ಮಹಾತ್ಮೆ ಯನ್ನು ಕೊಂಡಾಡಿದ್ದಾರೆ.

ಕಂಗಳು ಕಾಶಿಯ ಕಾಂಬೋದೆ ಹಬ್ಬ ಪಂಕಜನಾಭನ ಭಜಿಸುವುದೆ ಹಬ್ಬ|
ಭೂಲೋಕದೊಳು ಕಾಶಿವಾಸವೆ ಹಬ್ಬ
ಪುರಂದರ ವಿಠಲನ ಸ್ಮರಣೆಯೆ ಹಬ್ಬ|

ಎಂದು ‘ಸಾಧುಸಜ್ಜನರೊಳಗಿರುವೋದೆ ಹಬ್ಬ’ ಎನ್ನುವ ತಮ್ಮ ಕೀರ್ತನೆಯಲ್ಲಿ ಹಾಡಿರುವ ದಾಸರು ‘ಕಾಶಿವಾಸವನ್ನು ಬಹುದೊಡ್ಡ ಹಬ್ಬ’ವೆಂದು ಪರಿಗಣಿಸಿದ್ದಾರೆ. ‘ಬಿಂದುಮಾಧವನ ಘಟ್ಟಕ್ಕೆ ಪೋಗುವೆ ತಾರೆ ಬಿಂದಿಗೆಯ’ ಎಂದು ಕರೆನೀಡುವ ಪುರಂದರದಾಸರು, ಒಮ್ಮೆ ಕಾಶಿಕ್ಷೇತ್ರಕ್ಕೆ ಹೋಗಿ
ದ್ದಾಗ ತಾವು ಕಂಡ ಮಗುವಿನ ಚೆಲುವನ್ನು ಬಣ್ಣಿಸುತ್ತಾ ‘ಕಾಶಿಗೆ ಹೋಗಿ ನಾ ಕೂಸಿನ ಪಡೆದೆ, ಪುರಂದರವಿಠಲನ ದಾಸರಿಗೆ ತಕ್ಕ ಮಗುವೇ ನಮ್ಮಮ್ಮ’ ಎಂದು ಹಾಡಿದ್ದಾರೆ.

ಇದೇ ಮಾದರಿಯಲ್ಲಿ ಪುರಂದರದಾಸರ ಪರಂಪರೆಯಲ್ಲಿಯೇ ಬಂದ ವಿಜಯದಾಸರೂ ಸಹ ಕಾಶಿಯನ್ನು ಮುಕ್ತಕಂಠದಿಂದ ಕೊಂಡಾಡಿದ್ದಾರೆ. ಕಾಶಿ ವಿಜಯದಾಸರ ಬದುಕಿನ ದಿಕ್ಕನ್ನೇ ಬದಲಾಯಿಸಿ ಅವರ ಸಾಹಿತ್ಯಸೃಷ್ಟಿಗೆ ಪ್ರಮುಖ ಸೂರ್ತಿಕೇಂದ್ರವಾದ ಪುಣ್ಯಭೂಮಿ. ದಾಸರಿಗೆ ‘ವಿಜಯವಿಠಲ’ ಎಂಬ ಅಂಕಿತದೀಕ್ಷೆ ದೊರಕಿದ್ದೂ ಸಹ ಕಾಶಿಯಲ್ಲಿಯೇ. ದಾಸರು ಕಾಶಿಯನ್ನು ಕುರಿತು, ಅಲ್ಲಿ ಹರಿಯುವ ದೇವನದಿಯಾದ ಗಂಗೆಯನ್ನು ಕುರಿತು,
ಕಾಶೀವಾಸನಾದ ವಿಶ್ವನಾಥ ಮತ್ತು ಬಿಂದುಮಾಧವನನ್ನು ಕುರಿತು ಹಲವಾರು ಸುಳಾದಿ ಹಾಗೂ ಕೀರ್ತನೆಗಳನ್ನು ರಚಿಸಿದ್ದಾರೆ.

ದಾಸರ ಈ ಎಲ್ಲಾ ಕೃತಿಗಳೂ ಸಹ ಕಾಶಿಯ ಹಿರಿಮೆಯನ್ನು ಧ್ವನಿಪೂರ್ವಕವಾಗಿ ಸಾರುತ್ತದೆ. ಇದೇ ಮಾದರಿಯಲ್ಲಿ ವಾದಿರಾಜರು, ಸತ್ಯಧರ್ಮರು
ಮೊದಲಾದ ಯತಿವರೇಣ್ಯರು, ಮುದ್ದು ಮೋಹನದಾಸರು, ಗುರು ಗೋವಿಂದದಾಸರು ಮುಂತಾದ ಹಲವಾರು ಹರಿದಾಸರು ಕಾಶಿ ಹಾಗೂ ಗಂಗಾ ನದಿಯ ಮಹಿಮೆಯನ್ನು ತಮ್ಮ ಕೃತಿ, ಕೀರ್ತನೆಗಳಲ್ಲಿ ಹಿಡಿದಿಟ್ಟಿದ್ದಾರೆ. ಅವರೆಲ್ಲರೂ ಕಾಶಿ ಕ್ಷೇತ್ರ ದರ್ಶನಕ್ಕೆ ತಿಂಗಳಾನುಗಟ್ಟಲೆ ಪರಿಶ್ರಮ ಪಟ್ಟಿದ್ದರು ಎಂಬುದು ವೇದ್ಯ.

ಇಂತಹ ಪುಣ್ಯಪುರಿಯಾದ ಕಾಶಿ, ಭಾರತದ ಹೃದಯವೆಂದರೆ ಬಹುಶಃ ತಪ್ಪಾಗಲಿಕ್ಕಿಲ್ಲ. ಕೆಲವೇ ವರ್ಷಗಳ ಹಿಂದೆ ಕಿಷ್ಕಿಂಧೆಯಂತೆ ಕಿರಿದಾಗಿ, ಅಡ್ಡಾ ದಿಡ್ಡಿ ರಸ್ತೆಗಳಿಂದ, ಸ್ವಚ್ಚತೆಯ ಸ್ಪರ್ಶವೇ ಇಲ್ಲದ ಜನರಿಂದ, ಮುಜಗರವೆನ್ನಿ ಸುವಷ್ಟು ಮಾಲಿನ್ಯದಿಂದ ತುಂಬಿದ್ದ ಈ ಪಟ್ಟಣ ಇಂದು ನಮ್ಮ ಪ್ರಧಾನ ಮಂತ್ರಿಗಳ ಭಗೀರಥ ಪ್ರಯತ್ನದಿಂದ ಹೊಸರೂಪವನ್ನು ತಳೆದು ಕಂಗೊಳಿಸುತ್ತಿದೆ.

ಗಂಗಾ ನದಿಯ ತಟದಿಂದ ನೇರವಾಗಿ ವಿಶ್ವನಾಥನ ದೇಗುಲಕ್ಕೆ ನಡೆದು ಸಾಗಬಹುದಾದ ವಿಶಾಲವಾದ ಪಥವನ್ನು ಈಗ ಉದ್ಘಾಟಿಸಲಾಗಿದೆ. ಜತೆಗೆ ನಿರ್ಮಾಣವಾಗಿರುವ ಇತರ ಹಲವು ಕಟ್ಟಡಗಳು, ಸೌಲಭ್ಯಗಳು ಆ ಊರಿನ ಔನ್ನತ್ಯವನ್ನು ಹೆಚ್ಚಿಸಲು ಸಹಕಾರಿ ಎನಿಸಿವೆ. ತನ್ನ ಸಂಸ್ಕೃತಿಯನ್ನು
ಪ್ರೀತಿಸುವ ಪ್ರತಿಯೊಬ್ಬ ಭಾರತೀಯನ ‘ಹೃದಯ ಮಿಡಿತ’ವನ್ನು ಅರಿತು ಇಂತಹ ಸಾಹಸ ಕಾರ್ಯವನ್ನು ಸಾಧಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿಯವರು ದೇಶದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಇತಿಹಾಸದ ಸುವರ್ಣಸಂಪುಟದಲ್ಲಿ ಶಾಶ್ವತವಾದ ಸ್ಥಾನವನ್ನು ಪಡೆದುಕೊಂಡಿದ್ದಾರೆ.