Friday, 13th December 2024

ಐರಾವನ್‌ಗೆ ಕಿಚ್ಚ ಸಾಥ್

ಬಹುದಿನಗಳ ಬಳಿಕ ಜಯರಾಮ್ ಕಾರ್ತಿಕ್, ‘ಐರಾವನ್’ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಭರದಿಂದ ಚಿತ್ರೀಕರಣ ನಡೆಸಿದ ಚಿತ್ರ ತಂಡ, ಶೂಟಿಂಗ್ ಮುಗಿಸಿದೆ.

ನಿರಂತರ ಪ್ರೊಡಕ್ಷ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾದ ‘ಐರಾವನ್’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಕಿಚ್ಚ ಸುದೀಪ್ ಟೀಸರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಸಿನಿಮಾ ಮೊದಲು ಚಿತ್ರಮಂದರಕ್ಕೆ ಬರಬೇಕು. ಎಲ್ಲೋ ಕಳೆದು ಹೋಗ ಬೇಡಿ. ಶ್ರಮಕ್ಕೆ ಬೆಲೆ ಸಿಗಬೇಕೆಂದರೆ, ಚಿತ್ರಮಂದಿರ ಅನ್ನುವ ದೇವಸ್ಥಾನ ಪ್ರವೇಶಿಸಲೇಬೇಕು. ಅದೇ ರೀತಿ ಇಷ್ಟು ದಿನ ಒಳ್ಳೇ ಚಿತ್ರಮಂದಿರ ಸಿಗಲಿ ಎಂದು ಕಾಯುತ್ತಿದ್ದೆವು. ಇದೀಗ ಚಿತ್ರಮಂದಿರ ಸಿಕ್ಕರೆ ಸಾಕಪ್ಪ ಎಂಬಂತಾಗಿದೆ ಎಂದರು ಕಿಚ್ಚ ಸುದೀಪ್.

ಟೀಸರ್‌ನಲ್ಲಿ ಗನ್ ಹಿಡಿದು ಮಿಂಚಿರುವ ಜೆಕೆ ಗ್ಯಾಂಗ್‌ಸ್ಟರ್‌ನಂತೆ ಕಂಗೊಳಿಸುತ್ತಾರೆ. ತಮ್ಮ ಸಿನಿಮಾ ಜರ್ನಿಯ ಬಗ್ಗೆ ಮೆಲುಕು ಹಾಕಿದ ಜೆಕೆ, ಕಷ್ಟ ಇರಲಿ, ಸುಖ ಇರಲಿ ಸುದೀಪ್ ನನ್ನ ಜತೆಗಿದ್ದಾರೆ. ಅವರ ಹಾರೈಕೆಯಿಂದ ಸಿನಿಮಾ ಗೆಲ್ಲುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಇದು ನನ್ನ ಮೊದಲ ಸಿನಿಮಾ. ಈ ಹಿಂದೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದೆ. ಇದೀಗ ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಸಿನಿಮಾ ಮಾಡಿದ್ದೇನೆ. ಅರ್ಜುನನ ಮೂರನೇ ಮಗ ‘ಐರಾವನ್’. ಅದು ರಾಕ್ಷಸ ರೂಪ. ಆ ರೂಪವನ್ನು ಈಗಿನ ಕಾಲಘಟ್ಟಕ್ಕೆ
ತಕ್ಕಂತೆ ಬದಲಿಸಿಕೊಂಡಿದ್ದೇವೆ. ಆ ಕುತೂಹಲವನ್ನು ಸಿನಿಮಾದಲ್ಲಿಯೇ ನೋಡಬೇಕು ಎನ್ನುತ್ತಾರೆ ನಿರ್ದೇಶಕ ರಾಮ್ಸ್ ರಂಗ.

ನಾಯಕಿಯಾಗಿ ಅದ್ವಿತಿ ಶೆಟ್ಟಿ ಜೆಕೆಗೆ ಜೋಡಿಯಾಗಿದ್ದಾರೆ. ವಿವೇಕ್, ಅಭಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಎಸ್ ಪ್ರದೀಪ್
ವರ್ಮಾ ಸಂಗೀತ, ದೇವೇಂದ್ರ ಛಾಯಾಗ್ರಹಣ, ಕೆ.ಎಂ ಪ್ರಕಾಶ್ ಸಂಕಲನ, ಹರಿ ಸಂತೋಷ್ ಸಾಹಿತ್ಯ, ಕಾಂತರಾಜು ಸಂಭಾಷಣೆ ಬರೆದಿದ್ದಾರೆ. ಸಾಯಿ ಚರಣ್ ಮತ್ತು ಆರ್ ಲೋಹಿತ್ ನಾಯ್‌ಕ್‌ ಸಹ ನಿರ್ದೇಶನ ಮಾಡಿದ್ದಾರೆ. ಕುಂಗ್ ಫು ಚಂದ್ರು ಅವರ ಸಾಹಸ ನಿರ್ದೇಶನವಿದೆ.