Saturday, 12th October 2024

ಕತ್ತಿ ಹಿಡಿದು ಹೋರಾಡಿದ ಕರುನಾಡ ಹೆಣ್ಣು

ಡಾ.ಉಮೇಶ್ ಪುತ್ರನ್

(ಸ್ವಾತಂತ್ರ‍್ತದ ಆ ಕ್ಷಣಗಳು ಭಾಗ – 5)

ರಾಜ ಸಿಂಹಾಸನದಲ್ಲಿ ಇದ್ದ ಪತಿಯನ್ನು ಕಳೆದುಕೊಳ್ಳುತ್ತಾಳೆ. ಅದೇ ವರ್ಷ ಪ್ರೀತಿ ಪಾತ್ರನಾದ ಮಗನನ್ನು ಕಳೆದುಕೊಳ್ಳುತ್ತಾಳೆ. ಪುನಹ ಅದೇ ವರ್ಷ ರಾಜ್ಯ ವನ್ನು ಕೂಡ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಒಬ್ಬಳು ಹೆಣ್ಣಿಗೆ ಹೀಗಾದಾಗ ಆಕೆ ಅನ್ಯಾಯದ ವಿರುದ್ಧ ಸೆಟೆದು ನಿಂತು, ಸನ್ನಿವೇಶವನ್ನು ಪೂರ್ತಿ
ತನ್ನ ಹತೋಟಿಗೆ ತೆಗೆದುಕೊಂಡ ಉದಾಹರಣೆ ನಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಇದ್ದರೆ, ಅದು ಕೇವಲ ಕಿತ್ತೂರು ರಾಣಿ ಚೆನ್ನಮ್ಮನ ಅಧ್ಯಾಯದಲ್ಲಿ ಮಾತ್ರ.

ಜಾನ್ಸಿ ರಾಣಿ ಲಕ್ಷ್ಮೀಬಾಯಿ ಪ್ರಕರಣ ಇದಕ್ಕೆ ಹೋಲುತ್ತದೆಯಾದರೂ ಕೂಡ, ಆ ಸಂದರ್ಭದಲ್ಲಿ ಆಕೆ ಮೊದಲು ಮಗನನ್ನು ಕಳೆದುಕೊಳ್ಳುತ್ತಾಳೆ, ನಂತರ ಪತಿ ಗಂಗಾಧರರಾವ್ ತೀರಿ ಹೋಗುತ್ತಾರೆ. ಕಿತ್ತೂರಿನ ನಾಯಕ ವಂಶದ ರಾಜ ಮಲ್ಲರುದ್ರ ಸರ್ಜಾನ ದ್ವಿತೀಯ ಪತ್ನಿಯೇ ರಾಣಿ ಚೆನ್ನಮ್ಮ. ಮೊದಲನೆಯ ಪತ್ನಿ ವೀರಮ್ಮ. ಬ್ರಿಟಿಷರ ವಿರುದ್ಧ ಎಲ್ಲಾ ದೇಸಾಯಿ ನಾಯಕರನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದ ಮಲ್ಲರುದ್ರ ಸರ್ಜಾ ಒಮ್ಮೆ ಬೆಳಗಾವಿ ಸಮೀಪದ ಕಾಕಟಿಗೆ ಬಂದಾಗ, ಅಲ್ಲಿ ಲಿಂಗಾಯತ ಮನೆತನದ ಧೂಳಪ್ಪ ಗೌಡ ದೇಸಾಯಿ ಅವರ ಮಗಳಾದ ಚೆನ್ನಮ್ಮನನ್ನು ನೋಡಿ ಮದುವೆಯಾದ. ಚೆನ್ನಮ್ಮ ಹುಟ್ಟಿದ್ದು 1778ರ ಅಕ್ಟೋಬರ್ 23 ರಂದು. ಬಾಲ್ಯದ ಕುದುರೆ ಸವಾರಿ, ಕತ್ತಿವರಸೆ ಮತ್ತು ಬಿಲ್ಲುವಿದ್ಯೆಗಳಲ್ಲಿ ಪರಿಣತಿಯನ್ನು ಹೊಂದಿದ ಬಾಲಕಿ ಈಕೆ.

ರಾಜ ಮಲ್ಲರುದ್ರ ಸರ್ಜಾ 1824ರಲ್ಲಿ ತೀರಿಹೋದ. ಅದೇ ವರ್ಷ ಚೆನ್ನಮ್ಮನ ಮಗ ಕೂಡ ತೀರಿಹೋದ. ಧೃತಿ ಗೆಡದ ಚೆನ್ನಮ್ಮ ತನ್ನ ರಾಜ್ಯವನ್ನು ಉಳಿಸಿ ಕೊಳ್ಳಲಿಕ್ಕೋಸ್ಕರ ಶಿವಲಿಂಗಪ್ಪ ಎನ್ನುವ ಬಾಲಕನನ್ನು ಸಿಂಹಾ ಸನದ ಮೇಲೆ ಕುಳ್ಳಿಸಿದಳು. ಲಾರ್ಡ್ ಡಾಲ್ ಹೌಸಿ ಜಾರಿಗೆ ತಂದ ‘ದತ್ತು ಮಕ್ಕಳಿಗೆ ಹಕ್ಕಿಲ್ಲ’ ಎನ್ನುವ ಆದೇಶ ಪತ್ರವು ಧಾರವಾಡದ ಕಲೆಕ್ಟರ್ ಜಾನ್ ಥ್ಯಾಕರೆ ಮೂಲಕ ಚನ್ನಮ್ಮನ ಕೈಸೇರಿತು. ಚೆನ್ನಮ್ಮ ಬಾಂಬೆ ಪ್ರೆಸಿಡೆನ್ಸಿಯ ಲೆಫ್ಟಿನೆಂಟ್ ಜನರಲ್ ಮೌಂಟ್ ಸ್ಟುವರ್ಟ್ ಎಲಿನ್ ಸ್ಟನ್ ಗೆ ಪತ್ರ ಬರೆದರೂ ಪ್ರಯೋಜನ ವಾಗಲಿಲ್ಲ.

ಅಂದು ಅಕ್ಟೋಬರ್ 23, 1824. ಜಾನ್ ಥ್ಯಾಕರೆಯು ಸೈನ್ಯದೊಂದಿಗೆ ಕಿತ್ತೂರಿನ ಖಜಾನೆಗೆ ಬೀಗಮುದ್ರೆ ಒತ್ತಲು ಬಂದ. ಆಗ ಖಜಾನೆಯಲ್ಲಿ 15 ಲಕ್ಷ ರೂಪಾಯಿಗಳು ಇದ್ದಿದ್ದವು. ಕಿತ್ತೂರಿನ ಕೋಟೆಯ ಬಾಗಿಲನ್ನು ಚೆನ್ನಮ್ಮ ಮುಚ್ಚಲು ಆದೇಶಿಸಿದಳು. ಥ್ಯಾಕರೆಯ ಸೇನೆಯು ಕೋಟೆಯ ಮೇಲೆ ದಾಳಿ ಮಾಡಿತು. ಆಗ ಚೆನ್ನಮ್ಮನ ಸೇನಾನಿ ಅಮತೂರು ಬಾಳಪ್ಪ ಥ್ಯಾಕರೆಯನ್ನು ಕೊಂದ. ಮತ್ತಿಬ್ಬರು ಬ್ರಿಟಿಷ್ ಅಧಿಕಾರಿಗಳನ್ನು ಸೆರೆಹಿಡಿಯಲಾಯಿತು.

ಚೆನ್ನಮ್ಮ ಬ್ರಿಟಿಷ್ ಅಧಿಕಾರಿಗಳನ್ನು ಒಪ್ಪಂದದ ಪ್ರಕಾರ ಬಿಡುಗಡೆಗೊಳಿಸಿದಳು. ಆದರೆ ಬ್ರಿಟಿಷರು ಒಪ್ಪಂದಕ್ಕೆ ಬೆಲೆಯೇ ಕೊಡಲಿಲ್ಲ. ಇದಾದ ಸ್ವಲ್ಪವೇ ದಿನಗಳಲ್ಲಿ ಎರಡನೇ ಬಾರಿ ಬ್ರಿಟಿಷ್ ಸೇನೆ ದಂಡೆತ್ತಿ ಬಂದಿತು. ಆಗ ನಡೆದ ಹೋರಾಟದಲ್ಲಿ ಆಗಿನ ಮದ್ರಾಸ್ ಪ್ರೆಸಿಡೆನ್ಸಿಯ ಗವರ್ನರ್ ಥಾಮಸ್ ಮನ್ರೋನ ಅಳಿಯನನ್ನು ಕೊಲ್ಲಲಾಯಿತು. ರಾಣಿ ಚೆನ್ನಮ್ಮ ತನ್ನ ಸಮರ್ಥ ಸೇನಾಽಪತಿ ಸಂಗೊಳ್ಳಿ ರಾಯಣ್ಣ ಮತ್ತು ಗುರುಸಿದ್ದಪ್ಪ ಜೊತೆಗೂಡಿ ಹೋರಾಡಿದಳು. ಆದರೆ ಬ್ರಿಟೀಷರ ಕೈ ಮೇಲಾಯಿತು. ರಾಣಿ ಚೆನ್ನಮ್ಮ ಮತ್ತು ವೀರಮ್ಮ ಇಬ್ಬರನ್ನು ಹಿಡಿದು ಬೈಲಹೊಂಗಲ ಕೋಟೆಯೊಳಗೆ ನೂಕಲಾಯಿತು.

ನಾಲ್ಕು ವರ್ಷಗಳ ನಂತರ, 21 ಫೆಬ್ರವರಿ 1829 ರಂದು ರಾಣಿ ಚೆನ್ನಮ್ಮ ಸೆರೆಮನೆಯಲ್ಲಿ ಮಡಿದಳು. ಭಾರತ ಕಂಡ ವೀರವನಿತೆಯೊಬ್ಬಳು ಇತಿಹಾಸ ಸೇರಿದಳು. 2007ರಲ್ಲಿ ರಾಣಿ ಚೆನ್ನಮ್ಮನ ಪ್ರತಿಮೆಯನ್ನು ದೆಹಲಿಯ ಲೋಕಸಭಾ ಸಂಕೀರ್ಣದಲ್ಲಿ ಸ್ಥಾಪಿಸಲಾಯಿತು. ಆಕೆಯ ಪ್ರತಿಮೆಯನ್ನು ಕಿತ್ತೂರು, ಬೆಳಗಾವಿ, ಹುಬ್ಬಳ್ಳಿ ಹಾಗೂ ಬೆಂಗಳೂರಿನಲ್ಲಿ ನೋಡಬಹುದು.

ಬ್ರಿಟಿಷರ ಮೋಸ – ಫ್ರೆಂಚರ ಸಹವಾಸ 1780 ರ ಘಟನೆ. ಆಗಷ್ಟೇ ಅಮೆರಿಕಾದ ಸ್ವಾತಂತ್ರ್ಯ ಸಮರ ಮುಕ್ತಾಯಗೊಂಡಿತ್ತು. ನಮ್ಮ ದೇಶದಲ್ಲಿ ಇಂಗ್ಲೆಂಡಿನ
ವೈರಿಗಳಾದ ಫ್ರೆಂಚರು ಮತ್ತು ಡಚ್ಚರು ಹೋರಾಟ ನಡೆಸಿದ್ದರು. ಹಾಗೆಯೇ ಇಲ್ಲಿ ಕೂಡ ಹೈದರ್ ಆಲಿ ಪರವಾಗಿ ಫ್ರೆಂಚರು ಮತ್ತು ಡಚ್ಚರು, ಇಂಗ್ಲೆಂಡ್ ವಿರುದ್ಧ ಹೋರಾಟ ಮಾಡಿದರು. ಯುದ್ಧದಲ್ಲಿ ಭಾಗವಹಿಸಿದ ಹೆಚ್ಚಿನ ಬ್ರಿಟಿಷ್ ಸೈನಿಕರು ಈಸ್ಟ್ ಇಂಡಿಯಾ ಕಂಪನಿಯ ಸೈನಿಕರಾಗಿದ್ದರು. ಇಂಗ್ಲೆಂಡಿನ ಬ್ರಿಟಿಷ್
ಸರಕಾರದ ಸೇನೆ ಹಾಗೂ ಇಂಗ್ಲೆಂಡ್ ಆಡಳಿತವಿರುವ ಜರ್ಮನಿಯ ಹನೋವರ್ ಸೇನೆ ಕೂಡ ಭಾರತಕ್ಕೆ ಆಗ ಬಂದಿತ್ತು.

ಒಂದನೇ ಆಂಗ್ಲೋ ಮೈಸೂರು ಯುದ್ಧದ ಕೊನೆಗೆ ನಡೆದ ಮದ್ರಾಸ್ ಒಪ್ಪಂದದ ಪ್ರಕಾರ ಹೈದರ್ ಆಲಿಯ ಮೇಲೆ ಹೊರಗಿನವರು ಆಕ್ರಮಣ ಮಾಡಿದಾಗ ಬ್ರಿಟಿಷರು ರಕ್ಷಿಸಬೇಕಿತ್ತು. ಆದರೆ ಮರಾಠರು ದಾಳಿ ಮಾಡಿದಾಗ ಬ್ರಿಟಿಷರು ಸಹಾಯಕ್ಕೆ ಬರಲಿಲ್ಲ. ಇದರಿಂದ ಕ್ರೋಧಗೊಂಡ ಹೈದರ್ ಆಲಿ ಬ್ರಿಟಿಷರ ವಿರುದ್ಧ
ಕಾದಾಡಲು ಫ್ರೆಂಚರ ಸ್ನೇಹ ಸಂಪಾದಿಸಿದ. 1778ರಲ್ಲಿ ಯುರೋಪ್ ನಲ್ಲಿ ಫ್ರೆಂಚರು ಇಂಗ್ಲೀಷರ ಮೇಲೆ ಯುದ್ಧ ಸಾರಿದರು. ಭಾರತದಿಂದ ಕೂಡ ಫ್ರೆಂಚರನ್ನು ಓಡಿಸಬೇಕೆಂದು ಇಂಗ್ಲಿಷರು ಪಣ ತೊಟ್ಟರು. ಅದರಂತೇ ಬ್ರಿಟಿಷರು ಫ್ರೆಂಚರ ವಸಾಹತುಗಳಾದ ಪಾಂಡಿಚೇರಿ ಹಾಗೂ ಮಾಹೆಯನ್ನು ವಶಪಡಿಸಿಕೊಂಡರು.

ಫ್ರೆಂಚರಿಂದ ಮಾಹೆ ಬಂದರಿನ ಮೂಲಕ ಹೈದರಾಲಿಗೆ ಸರಬರಾಜು ಆಗುತ್ತಿದ್ದ ಮದ್ದುಗುಂಡುಗಳ ಪೂರೈಕೆ ನಿಂತಾಗ ಹೈದರಲಿ ಸಿಡಿದೆದ್ದನು. ಮರಾಠರು ಹಾಗೂ ನಿಜಾಮರ ಬೆಂಬಲದೊಂದಿಗೆ ಹೈದರಾಲಿ ಪೂರ್ವ ಕರಾವಳಿಯ ಆರ್ಕಾಟ್ ಪ್ರದೇಶವನ್ನು 80000 ಸೈನಿಕರೊಂದಿಗೆ ಮುತ್ತಿಗೆ ಹಾಕಿದ. ತನ್ನ ಮಗ
ಟಿಪ್ಪುಸುಲ್ತಾನನ ನೇತ್ರತ್ವ ದೊಂದಿಗೆ ಒಂದು ತುಕಡಿ ಸೈನ್ಯವನ್ನು ಗುಂಟೂರಿಗೆ ಕಳುಹಿಸಿದ. ಅಲ್ಲಿ ಇಂಗ್ಲಿಷ್ ಸೇನಾಧಿಪತಿ ವಿಲಿಯಂ ಬೈಲಿಯ ಸೈನ್ಯದೊಂದಿಗೆ ಟಿಪ್ಪುಸುಲ್ತಾನನ ಸೇನೆ ಮುಖಾಮುಖಿಯಾಯಿತು. ಒಂದೇ ದಿನದಲ್ಲಿ ಸುಮಾರು 350 ಇಂಗ್ಲಿಷ್ ಸೈನಿಕರ ಮಾರಣ ಹೋಮ ನಡೆಯಿತು. ಅಗಾಧ ಪ್ರಮಾಣದ ಸೈನಿಕರು ಗಾಯಗೊಂಡು ರಕ್ತದ ಕೋಡಿಯೇ ಹರಿಯಿತು.

(ಮುಂದುವರಿಯುವುದು)