Friday, 13th December 2024

ಕುಂಬಳಕಾಯಿ ಹಬ್ಬ ನೋಡಬೇಕೇ ?

ಡಾ.ಉಮಾಮಹೇಶ್ವರಿ ಎನ್‍

ಉದ್ಯಾನಗಳಿಂದ, ಅರಮನೆಗಳಿಂದ ಕಂಗೊಳಿಸುವ ಲುಡ್ವಿನ್ ಬುರ್ಗ್‌ನಲ್ಲಿ ಪ್ರತಿವರ್ಷ ನಡೆಯುವ ಕುಂಬಳಕಾಯಿ ಹಬ್ಬ ಅಥವಾ ಪಂಪ್‌ಕಿನ್ ಫೆಸ್ಟಿವಲ್ ಬಹು ಕುತೂಹಲಕಾರಿ.

ಲುಡ್ವಿಗ್ಸ್‌ ಬುರ್ಗ್ ಜರ್ಮನಿಯ ಪ್ರಸಿದ್ಧ ಪಟ್ಟಣಗಳಲ್ಲೊಂದು. ಸ್ಟುಟ್‌ಗಾರ್ಟ್ ನಗರದಿಂದ 12ಕಿ. ಮೀ. ದೂರದಲ್ಲಿ ಇದೆ. ಜನಸಂಖ್ಯೆೆ ಸುಮಾರು 88000. ಲುಡ್ವಿಗ್ಸ್‌ ಬುರ್ಗ್ ಪಟ್ಟಣದ ಸುತ್ತಲಿನ ಜಾಗ ವ್ಯುಟೆರ್ಂಬೆರ್ಗ್ ರಾಜ ಮನೆತನದ ಬೇಟೆಯಾಡುವ ತಾಣವಾಗಿತ್ತು. ದಟ್ಟ ಕಾನನಗಳುಳ್ಳ ಈ ಜಾಗಕ್ಕೆ ನೆಕಾರ್ ನದಿಯಲ್ಲಿ ದೋಣಿಗಳನ್ನು ಬಳಸಿ ತೆರಳಬಹುದಾಗಿತ್ತು.

1704 ರಲ್ಲಿ ಎಬರ್ ಹಾರ್ಡ್ ಲೂಯಿಸ್ ರಾಜನು ಇಲ್ಲಿನ ಅರಮನೆಯನ್ನು ನಿರ್ಮಿಸತೊಡಗಿದ. ಅರಮನೆಯ ಹೆಸರು ರಾಜನ ಹೆಸರಿನ ಒಂದು ಭಾಗ ವಾಗಿತ್ತು. ಲೂಯಿಸ್ ಎಂಬ ಹೆಸರನ್ನು ಜರ್ಮನ್ ಭಾಷೆಯಲ್ಲಿ ಲುಡ್ವಿಗ್ ಎನ್ನುತ್ತಾರೆ. ಆತನ ಮರಣ ಸಮಯದವರೆಗೆ ನಿರ್ಮಾಣ ಕೆಲಸಗಾರರು ಮತ್ತು ಕಲಾವಿದರು ಈ ಸುಂದರ ಅರಮನೆಯ ನಿರ್ಮಾಣದಲ್ಲಿ ನಿರತರಾಗಿದ್ದರು. ಲೂಯಿಸ್ ಮತ್ತು ಆತನ ನಂತರ ಅಧಿಪತಿಯಾದ ಚಾ‌ರ್ಲ್ಸ್‌‌ ಯೂಜೀನ್ ಸುಮಾರು 28 ವರ್ಷಗಳ ಕಾಲ ಇದನ್ನು ತಮ್ಮ ವಸತಿಯನ್ನಾಗಿ ಉಪಯೋಗಿಸಿಕೊಂಡರು. ಇಲ್ಲಿನ ಅಲಂಕಾರಕ್ಕೆ, ಇಲ್ಲಿ ನಡೆಸಿದ ಸಂಭ್ರಮದ ಹಬ್ಬಗಳಿಗೋಸ್ಕರ ಸಾಕಷ್ಟು ಧನ ವ್ಯಯಿಸಿದ್ದರು. ಅರಮನೆ ಪ್ರಸಿದ್ಧವಾಗಬೇಕು ಮತ್ತು ಸಮಕಾಲೀನ ಯುರೋಪಿನ ಅರಮ ನೆಗಳೆಲ್ಲಕ್ಕಿಂತ ಸುಂದರವಾಗ ಬೇಕೆಂಬುದೊಂದೇ ಅವರ ಧ್ಯೇಯವಾಗಿತ್ತು.

ಎಬರ್ ಹಾರ್ಡ್ ಲೂಯಿಸ್ ಸುಂದರವಾದ ಬರೋಕ್ ಶೈಲಿಯ ನಗರವನ್ನೂ ಅರಮನೆಯ ಸುತ್ತಮುತ್ತ ನಿರ್ಮಿಸುವ ಕನಸು ಕಂಡ. ಜನರಿಗೆ ಉಚಿತವಾಗಿ ಭೂಮಿ, ಗೃಹನಿರ್ಮಾಣ ಸಾಧನಗಳನ್ನು ಒದಗಿಸಿದ. 15 ವರ್ಷಗಳವರೆಗೆ ತೆರಿಗೆ  ವಿಧಿಸುವುದಿಲ್ಲ ವೆಂದು ಆಶ್ವಾಸನೆ ನೀಡಿದ. ಜನರಿಗೆ ತಮ್ಮದೇ ವೃತ್ತಿ ಮತ್ತು ಧರ್ಮವನ್ನು ಅನುಸರಿಸುವ ಸ್ವಾತಂತ್ರ್ಯ ನೀಡಿದ. ನಗರದ
ಬೆಳವಣಿಗೆ 1718 ರ ನಂತರವೇ ಮುಂದುವರಿಯಿತು. ಆಗಲೇ ಈ ಜಾಗ ವ್ಯುಟೆರ್ಂಬೆರ್ಗ್‌ನ ರಾಜಧಾನಿಯಾಯಿತು. 1733 ರಲ್ಲಿ ಲೂಯಿಸ್ ನಿಧನನಾದಾಗ ನಗರದ ಜನಸಂಖ್ಯೆ 6000ದಷ್ಟಿತ್ತು.

ನಿರ್ಮಾಣ ಕಾರ್ಯಗಳು ಸತತವಾಗಿ ಮುಂದುವರಿದಿದ್ದವು. ಅರಮನೆ ಪೂರ್ಣಗೊಂಡಾಗ ಚೌಕಾಕಾರದ ಕೇಂದ್ರ ಭಾಗದ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣದಲ್ಲಿ ನಾಲ್ಕು ಕಟ್ಟಡಗಳಿದ್ದು ಚೌಕಾಕಾರದ ನಿರ್ಮಿತಿಯನ್ನು ಪೂರ್ಣಗೊಳಿಸಿದ್ದವು. ಶಿಥಿಲ ಗೊಂಡಿದ್ದ ಭಾಗಗಳನ್ನು 20ನೇ ಶತಮಾನದಲ್ಲಿ ಮೂಲರೂಪದಲ್ಲೇ ನವೀಕರಿಸಲಾಯಿತು.

ನೂರಾರು ಕೊಠಡಿಗಳು
ಫೇವರಿಟ್ ಅರಮನೆ ಎಂಬ ವಾಸದ ಅರಮನೆಯಲ್ಲಿ 450ಕ್ಕೂ ಹೆಚ್ಚು ಕೊಠಡಿಗಳಿವೆ. ಇವುಗಳಲ್ಲಿ ಕೆಲವು ಪ್ರಮುಖವಾದ ಕೊಠಡಿಗಳನ್ನು 20 ನಿಮಿಷಗಳ ಗೈಡೆಡ್ ಟೂರ್‌ನಲ್ಲಿ ವೀಕ್ಷಿಸಬಹುದು. ರಾಜನ, ರಾಣಿಯ ವಾಸದ ಕೋಣೆಗಳು, ಅವರು ಅತಿಥಿಗಳನ್ನು ಭೇಟಿಯಾಗುತ್ತಿದ್ದ ಕೋಣೆಗಳು, ಅರಮನೆಯ ಚರ್ಚ್, ಅರಮನೆಯ ಒಳಗಿರುವ ಅಲಂಕಾರಭರಿತ ಥಿಯೇಟರ್
ಕೋಣೆ ಎಲ್ಲವನ್ನೂ ನೋಡಬಹುದು. ಮೂಲ ಬರೋಕ್ ಶೈಲಿಯ ಕೊಠಡಿಗಳು ಒಂದನೇ ಫ್ರೆಡರಿಕ್ ರಾಜನ ಕಾಲದಲ್ಲಿ ನಿಯೋ ಕ್ಲಾಸಿಕಲ್ ಶೈಲಿಗೆ ಬದಲಾಗಿದ್ದವು. ಕೊಠಡಿಗಳಲ್ಲಿರುವ ಪೀಠೋಪಕರಣಗಳನ್ನು ಸುಸ್ಥಿತಿಯಲ್ಲಿ ಇಡಲಾಗಿದೆ. ಒಳ ಅಲಂಕಾರ ಅತಿ ಸುಂದರವಾಗಿದೆ. ಇದೇ ಅರಮನೆಯ ವಿವಿಧ ಭಾಗಗಳಲ್ಲಿ ಮೂರು ಮ್ಯೂಸಿಯಂಗಳಿವೆ. ಮೊದಲನೆಯದು ಸಿರಾಮಿಕ್ ಮ್ಯೂಸಿಯಂ. 18-19 ನೇ ಶತಮಾನಗಳಲ್ಲಿ ಜರ್ಮನ್ ಭಾಷೆ ಪ್ರಚಲಿತವಾಗಿದ್ದ ಪ್ರಾಂತ್ಯಗಳಲ್ಲಿ (ಬರ್ಲಿನ್, ನಿಂಫೆನ್ ಬುರ್ಗ್, ವಿಯೆನ್ನಾ, ಲುಡ್ವಿಗ್ಸ್‌ ಬುರ್ಗ್) ಬಳಸಲಾಗುತ್ತಿದ್ದ ಬೆಲೆಬಾಳುವ ಪಿಂಗಾಣಿವಸ್ತುಗಳನ್ನು ಪ್ರದರ್ಶಿಸಲಾಗಿದೆ. ಬಟ್ಟಲುಗಳು, ಪಾತ್ರೆಗಳು, ಅಲಂಕಾರಿಕ ವಸ್ತುಗಳು, ತೂಗುದೀಪಗಳು ತಮ್ಮ ಸೌಂದರ್ಯವನ್ನು ಇನ್ನೂ ಉಳಿಸಿಕೊಂಡಿವೆ.

ಶ್ರವಣಸಾಧನವನ್ನು ತೆಗೆದುಕೊಂಡರೆ ಅದರಲ್ಲಿ ಪ್ರತಿ ವಸ್ತುವಿನ ಉಗಮ ಮತ್ತು ವಿವರಗಳು ಲಭ್ಯ. ಎರಡನೇ ಮ್ಯೂಸಿಯಂನಲ್ಲಿ ಬರೋಕ್ ಶೈಲಿಯ ಆಕರ್ಷಕ ಜರ್ಮನ್ ಮತ್ತು ಇಟಾಲಿಯನ್ ಪೈಂಟಿಂಗ್ ಗಳು ಪ್ರದರ್ಶನಕ್ಕಿವೆ. ಮೂರನೆಯದು ಫ್ಯಾಶನ್
ಮ್ಯೂಸಿಯಂ. ಕಳೆದ ಮುನ್ನೂರು ವರ್ಷಗಳ ಇತಿಹಾಸದಲ್ಲಿ ಸ್ಥಳೀಯ ಹೆಂಗಸರು, ಗಂಡಸರು ಮತ್ತು ಮಕ್ಕಳು ಧರಿಸುತ್ತಿದ್ದ ವಿವಿಧ ಉಡುಪುಗಳು (700 ಕ್ಕೂ ಹೆಚ್ಚು) ಕಣ್ಮನ ಸೆಳೆಯುತ್ತವೆ. 1953ರ ನಂತರ ಉದ್ಯಾನವನದಲ್ಲಿ ದೊಡ್ಡ ಮಟ್ಟದಲ್ಲಿ ಮಾರ್ಪಾಟುಗಳನ್ನು ಮಾಡಲಾಯಿತು. 1954ರಲ್ಲಿ ಹಾರ್ಟಿಕಲ್ಚರ್ ಪ್ರದರ್ಶನ ನಡೆಸಿ, ಜನರನ್ನು ಆಹ್ವಾನಿಸಲಾಯಿತು.

ಮೊದಲ ವರ್ಷದ ಪ್ರದರ್ಶನ ಮುಗಿಯುವುದರಲ್ಲಿ, ನವೀಕರಣಕ್ಕೆ ವ್ಯಯಿಸಿದ ದೊಡ್ಡ ಮೊತ್ತ ತಿರುಗಿ ಬಂದಿತ್ತು. ಈ ಪ್ರದರ್ಶನವೇ ಜಗತ್ಪ್ರಸಿದ್ಧ ‘‘ಕುಂಬಳ ಮೇಳ’’.

ಫೇರಿಟೇಲ್ ಉದ್ಯಾನ
1959ರಲ್ಲಿ ಗ್ರಿಮ್ ಸೋದರರ ಮಕ್ಕಳ ಕತೆಗಳನ್ನು ಆಧರಿಸಿ ಫೇರಿಟೇಲ್ ‌ಉದ್ಯಾನವನ್ನು ತೆರೆಯಲಾಯಿತು. ಇದು ಕೂಡಾ ಬಹಳ ಕಡಿಮೆ ಅವಧಿಯಲ್ಲೇ ಜನಪ್ರಿಯವಾಯಿತು. ನಲುವತ್ತು ಮಕ್ಕಳ ಕತೆಗಳನ್ನು ವಿವಿಧ ಕೊಠಡಿಳಲ್ಲಿ ದೃಶ್ಯ-ಶ್ರಾವ್ಯ ಮಾಧ್ಯಮಗಳ ಮೂಲಕ ಅತ್ಯಾಕರ್ಷಕವಾಗಿ ನಿದರ್ಶಿಸಲಾಗಿದೆ.

ಉತ್ತರ, ದಕ್ಷಿಣ, ಕೆಳಗಿನ ಪೂರ್ವ, ಮೇಲಿನ ಪೂರ್ವ ಮತ್ತು ಫೇರಿಟೇಲ್ ವಿಭಾಗಗಳೆಂದು ಈ ಉದ್ಯಾನವನ್ನು ವಿಂಗಡಿಸಲಾಗಿದೆ. ನೀರಿನ ಕಾಲುವೆಗಳಲ್ಲಿ ವಿವಿಧ ನಮೂನೆಗಳ ಜಲಕ್ರೀಡೆಗಳಿಗೆ ಅವಕಾಶವಿದೆ. ಬೋನ್ಸಾಯ್ ಗಿಡಗಳನ್ನೊಳಗೊಂಡ ಜಪಾನೀಸ್
ಗಾರ್ಡನ್ ಇದೆ. ಆರೆಂಜರಿ, ಸಣ್ಣ ಪಕ್ಷಿ ಸಂಗ್ರಹಾಲಯ ಅವಿಭಾಜ್ಯ ಅಂಗವಾಗಿವೆ. ಎತ್ತರದ ವೀಕ್ಷಣಾ ಸ್ಥಳ ಹತ್ತಿ ಸುತ್ತಲಿನ ಸೌಂದರ್ಯ ಆಸ್ವಾದಿಸಲು ಅವಕಾಶವಿದೆ.

ಉದ್ಯಾನದಲ್ಲಿನ ಹುಲ್ಲುಹಾಸು, ರಂಗುರಂಗುಗಳಿಂದ ಕಂಗೊಳಿಸುವ ಘಮಘಮಿಸುವ ಗುಲಾಬಿ, ಟುಲಿಪ್ ಹಾಗೂ ಇತರ ಹೂಗಿಡಗಳು ಕಣ್ಣುಗಳಿಗೆ ಹಬ್ಬ. ಚೈತ್ರಮಾಸವು ಹೂಗಳಿಂದ ಕಂಗೊಳಿಸುವ ಉದ್ಯಾನವನ್ನು ವೀಕ್ಷಿಸಲು ಸರಿಯಾದ ಕಾಲ.
ಅರಮನೆ ಮತ್ತು ಉದ್ಯಾನಗಳೆರಡಕ್ಕೂ ಸೇರಿ ಪ್ರವೇಶ ಪತ್ರ ಪಡೆದರೆ 18 ಯೂರೋಗಳು. ಬರೀ ಉದ್ಯಾನಕ್ಕೆ ಪ್ರವೇಶ ಶುಲ್ಕ ಪಾವತಿಸುವ ಆಯ್ಕೆಯೂ ಇದೆ.

ಪಂಪ್‌ಕಿನ್ ಫೆಸ್ಟಿವಲ್
ಕುಂಬಳಕಾಯಿ ಹಬ್ಬ ಅಥವಾ ಪಂಪ್‌ಕಿನ್ ಫೆಸ್ಚಿವಲ್ ನೋಡಲು ಆಗಸ್ಟ್‌ 30ರಿಂದ ನವೆಂಬರ್3 ರ ವರೆಗೆ ಸೂಕ್ತ ಸಮಯ. ದಕ್ಷಿಣ ಉದ್ಯಾನದ ಮಧ್ಯದಲ್ಲಿರುವ ಕೊಳದಲ್ಲಿ ಕುಂಬಳಮೇಳ ನಡೆಯುವಾಗ ವಿಚಿತ್ರ ಸ್ಪರ್ಧೆಯೊಂದು ನಡೆಯುತ್ತದೆ. ದೊಡ್ಡ ಕುಂಬಳಗಳ ಒಳಭಾಗವನ್ನು ಖಾಲಿಮಾಡಿ, ಅದರ ಸಿಪ್ಪೆಯನ್ನೇ ದೋಣಿಯಂತೆ ಉಪಯೋಗಿಸಿಕೊಂಡು ಹುಟ್ಟು ಹಾಕಿ
ದೋಣಿ ಸ್ಪರ್ಧೆಯಲ್ಲಿ ಜನ ಭಾಗವಹಿಸುತ್ತಾರೆ!

ಕುಂಬಳಕಾಯಿ ಮೇಳ ಎಂದು ಬಹಳ ಪ್ರಚಾರಪಡಿಸಿ, ಇದನ್ನೊಂದು ಪ್ರವಾಸಿ ಆಕರ್ಷಣೆ ಮಾಡುವ ಪರಿ ವಿಸ್ಮಯ ಹುಟ್ಟಿಸು ತ್ತದೆ.