ಸಂಡೆ ಸಮಯ
ಸೌರಭ ರಾವ್
ಕಳೆದ ತಿಂಗಳು ಮುಂಬೈನ ಸಂಜಯ್ ಗಾಂಧೀ ರಾಷ್ಟ್ರೀಯ ಉದ್ಯಾನವನದಲ್ಲಿ (ಎಸ್‌ಜಿಎನ್‌ಪಿ) ರೇಡಿಯೋ-ಕಾಲರ್ ತೊಡಿಸಿ ಬಿಟ್ಟಿದ್ದ ‘ಸಾವಿತ್ರಿ’ ಮತ್ತು ‘ಮಹಾರಾಜ’ ಎಂಬ ಹೆಸರಿನ ಎರಡು ಚಿರತೆಗಳು ತಮ್ಮ ಚಲನವಲನಗಳ ಬಗ್ಗೆ ಕುತೂಹಲಕಾರಿ ಮಾಹಿತಿಯನ್ನು ಒದಗಿಸುತ್ತಿವೆ.
ಇದರಲ್ಲಿ ನಗರದ ತುಳಸಿ ಕೆರೆಯ ಸುತ್ತ ಅವುಗಳ ‘ಪರಿಕ್ರಮಣ’ ಮತ್ತು ತುಂಗರೇಶ್ವರ ವನ್ಯಜೀವಿ ಧಾಮಕ್ಕೆ (ಟಿಡಬ್ಲ್ಯುಎಸ್) ಅವುಗಳ ನಡಿಗೆಯೂ ದಾಖಲಾಗಿದೆ. ಎಲ್ 115 ಎಂಬ ಮೂರು ವರ್ಷದ ಹೆಣ್ಣು ಚಿರತೆಯನ್ನು (ಹೆಸರು ಸಾವಿತ್ರಿ) ಡಬ್ಲ್ಯುಎಸ್‌ನ ದಕ್ಷಿಣದ ಭಾಗದಲ್ಲಿ ಫೆಬ್ರುವರಿ 20ರಂದು, ಮತ್ತು ಎಲ್ 93 ಎಂಬ 6 ರಿಂದ 8 ವರ್ಷದೊಳಗಿನ ಗಂಡು ಚಿರತೆಯನ್ನು (ಹೆಸರು ಮಹಾರಾಜ) ಉದ್ಯಾನವನದ ಉತ್ತರದ ಗಡಿಯ ಬಳಿ ಫೆಬ್ರುವರಿ 22ರಂದು ರೇಡಿಯೋ-ಕಾಲರ್ ತೊಡಿಸಿ ಅಧ್ಯಯನಕ್ಕಾಗಿ ಬಿಡ ಲಾಗಿತ್ತು.
ನಗರದ ಗಡಿಯಲ್ಲೇ ಇರುವ ಎಸ್‌ಜಿಎನ್‌ಪಿಯಲ್ಲಿ ಚಿರತೆಗಳ ಸಂಖ್ಯಾಸಾಂದ್ರತೆ ಹೆಚ್ಚಿದೆ. 45ಕ್ಕೂ ಹೆಚ್ಚು ಚಿರತೆಗಳು ಇಲ್ಲಿವೆ ಯೆಂದು ತಿಳಿದಿದ್ದು, ಇದು ಪ್ರಪಂಚದಲ್ಲೇ ಅತೀ ಹೆಚ್ಚು ಚಿರತೆಗಳ ಸಂಖ್ಯಾಾಸಾಂದ್ರತೆ ಇರುವ ಜಾಗ. ಚಿರತೆಗಳ ಜೀವನಶೈಲಿ,
ನಡವಳಿಕೆ ಅಧ್ಯಯಿಸಲು ಎಸ್‌ಜಿಎನ್‌ಪಿಯಲ್ಲಿ ಜಿಪಿಎಸ್ ಟೆಲಿಮೆಟ್ರಿ ಯೋಜನೆಯ ಅಡಿಯಲ್ಲಿ ರೇಡಿಯೋ-ಕಾಲರಿಂಗ್ ಮಾಡಿ ರುವ ಮೊದಲ ಎರಡು ಚಿರತೆಗಳು ಈ ಸಾವಿತ್ರಿ ಮತ್ತು ಮಹಾರಾಜ.
ಈ ಯೋಜನೆಯಡಿಯಲ್ಲಿ, ಅರಣ್ಯಾಧಿಕಾರಿಗಳು ಚಿರತೆಗಳ ಮೇಲೆ ಬಳಸುವ ರೇಡಿಯೋ-ಕಾಲರ್‌ಗಳು ಉಪಗ್ರಹದ ಮೂಲಕ ಸಂಪರ್ಕ ಸಾಧಿಸಿ, ಎಸ್‌ಎನ್‌ಜಿಪಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಾಸಿಸುತ್ತಿರುವ ಚಿರತೆಗಳನ್ನು ಹಿಂದೆಂದಿ ಗಿಂತಲೂ ಹೆಚ್ಚು ನಿಖರವಾಗಿ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತವೆ. ಹೀಗೆ ಜಿಪಿಎಸ್ ಟೆಲಿಮೆಟ್ರಿ ಮೂಲಕ ಸಂಗ್ರಹಿಸಲಾಗು ತ್ತಿರುವ ಮಾಹಿತಿಯಲ್ಲಿ, ಒಂದು ಬೆಳಿಗ್ಗೆ ಸುಮಾರು 7:30ಕ್ಕೆ ಸಾವಿತ್ರಿ ತುಳಸಿ ಕೆರೆಯ ಸುತ್ತ 11 ಘಂಟೆಗಳ ಅವಧಿಯಲ್ಲಿ 4.57 ಕಿಲೋಮೀಟರ್ ಚಲಿಸಿ ಒಂದು ಪ್ರದಕ್ಷಿಣೆ ಮುಗಿಸಿದ್ದುದು ತಿಳಿದುಬಂದಿದೆ.
ಇತ್ತ ಗಂಡು ಚಿರತೆ ಮಹಾರಾಜ, ನಿರಂತರ ವಾಹನಗಳ ಚಲನೆ ಇರುವ ಚಿಂಚೋಟಿ-ಭಿವಂಡಿ ಹೆದ್ದಾರಿ ಮತ್ತು ವಸೈ-ದಿವಾ ರೈಲು ಮಾರ್ಗವನ್ನು ದಾಟಿ ಎಸ್‌ಎನ್‌ಜಿಪಿಯಿಂದ ಟಿಡಬ್ಲ್ಯುಎಸ್ ಕಡೆಗೆ ಮೂರು ಸಾರಿ ಹೋಗಿರುವುದೂ ತಿಳಿದುಬಂದಿದೆ. 6 ದಿನಗಳ ಅವಧಿಯಲ್ಲಿ ಸುಮಾರು 62 ಕಿಲೋಮೀಟರಿನಷ್ಟು ಮಹಾರಾಜನ ನಡಿಗೆ ದಾಖಲಾಗಿದೆ. ಸಾವಿತ್ರಿ ಎಸ್‌ಎನ್‌ಜಿಪಿ ಮತ್ತು ಥಾಣೆ ಟೆರಿಟೋರಿಯಲ್ ವಿಭಾಗ ಪ್ರದೇಶಗಳೆರಡನ್ನೂ ಬಳಸುತ್ತಾಳೆ. ಇದು ಮನುಷ್ಯರಾದ ನಾವು ಮಾಡಿಕೊಳ್ಳುವ ಗಡಿ, ಸರಹದ್ದು ಗಳು ಬೇರೆ ಪ್ರಾಣಿಗಳ ದೃಷ್ಟಿಯಿಂದ ಕನಿಷ್ಠ ಮಹತ್ವವನ್ನೂ ಪಡೆಯುವುದಿಲ್ಲ ಎಂದು ಪ್ರಮಾಣೀಕರಿಸುತ್ತದೆ.
ಸಂರಕ್ಷಣೆಗೆ ನಾವು ಮನುಷ್ಯರು ಮಾಡಿಕೊಂಡಿರುವ ವನ್ಯಜೀವಿ ಸಂರಕ್ಷಿತ ಪ್ರದೇಶಗಳು ಮಾತ್ರವಲ್ಲ, ಟೆರಿಟೋರಿಯಲ್ ವಿಭಾಗ ಗಳನ್ನೂ ಒಳಗೊಳ್ಳಬೇಕು ಎಂದು ಸಾಬೀತಾಗಿದೆ. ಎಸ್‌ಎನ್‌ಜಿಪಿ, ಟಿಡಬ್ಯುಎಸ್ ಮತ್ತು ಥಾಣೆ ಟೆರಿಟೋರಿಯಲ್ ವಿಭಾಗವನ್ನು ಮುಂಬೈ ನಗರದ ಶ್ವಾಸಕೋಶ ಎನ್ನಬಹುದು – ಮತ್ತು ಆ ಪ್ರದೇಶಗಳ ರಸ್ತೆ, ಹೆದ್ದಾರಿ ಮತ್ತು ರೈಲ್ವೆ ಮಾರ್ಗಗಳು ಮತ್ತು ಸಣ್ಣ ತೊರೆಗಳನ್ನು ದಾಟಿ ಚಿರತೆಗಳು ರಾತ್ರಿ ಹೊತ್ತು ಸಂಚರಿಸುತ್ತವೆ. ಈ ಹಿಂದೆ ಮುಂಬೈ-ಅಹಮದಾಬಾದ್ ಹೆದ್ದಾರಿಯಂಥಾ ವಾಹನ ದಟ್ಟಣೆಯಿರುವ ರಸ್ತೆಗಳನ್ನು ರಾತ್ರಿ ದಾಟುವಾಗ ಅನೇಕ ಚಿರತೆಗಳು ವಾಹನಗಳಿಗೆ ಸಿಲುಕಿ ಮೃತಪಟ್ಟಿವೆ.
ಇಂಥ ಅಧ್ಯಯನಗಳ ಮೂಲಕ ಚಿರತೆಗಳ ಸಂಚಾರದ ಬಗ್ಗೆ ಮತ್ತಷ್ಟು ನಿಖರ ಮಾಹಿತಿ ಕಲೆಹಾಕಿದರೆ ಅವುಗಳ ಸಂರಕ್ಷಣೆಗೆ ಹೊಸ ಮಾರ್ಗಗಳನ್ನು ಕಂಡುಕೊಳ್ಳಬಹುದು. ನಮ್ಮಂತೆಯೇ ಭೂಮಿಯ ಮೇಲೆ ಬದುಕಲು ಸಮನಾದ ಹಕ್ಕು ಇರುವ ಬೇರೆ ಪ್ರಾಣಿಗಳ ಬಗ್ಗೆ ನಾವು ಮತ್ತಷ್ಟು ಆದರ, ಮತ್ತು ಅವುಗಳ ಬಾಳ್ವೆಯ ಬಗ್ಗೆ ಮತ್ತಷ್ಟು ಆಸ್ಥೆ ಬೆಳೆಸಿಕೊಳ್ಳಬಹುದು.