Wednesday, 11th December 2024

ಮರೆಯದಿರೋಣ ಅರ್ಥಪೂರ್ಣ ಆಚರಣೆ

ಗೌರಿ ಚಂದ್ರಕೇಸರಿ

ಮದುವೆಯ ಆಚರಣೆಯಲ್ಲಿ ಹೊಸತನವನ್ನು, ಆಧುನಿಕತೆಯನ್ನು ತರುವ ಭರದಲ್ಲಿ, ಚಿತ್ರ ವಿಚಿತ್ರ ಹೊಸ ಪದ್ಧತಿ ಗಳನ್ನು ಅಳವಡಿಸಲಾಗುತ್ತಿದೆ. ಅರ್ಥಪೂರ್ಣ ಎನಿಸಿರುವ ಕೆಲವು ಪುರಾತನ ಸಂಪ್ರದಾಯಗಳನ್ನು ಮರೆಯಲಾಗು ತ್ತಿದೆ. ನಮ್ಮ ಹಳೆಯ ಅರ್ಥಪೂರ್ಣ ಆಚರಣೆಗಳನ್ನು ಮರೆಯದಿರೋಣ, ಹಳೆಯ ಸೊಗಡನ್ನು ಉಳಿಸಿ ಕೊಳ್ಳೋಣ.

ಕೆಲ ದಿನಗಳ ಹಿಂದೆ ಅದ್ಭುತವಾದ ಶಿಲ್ಪಕಲೆಯನ್ನು ಹೊಂದಿದ ದೇವಸ್ಥಾನ ಒಂದಕ್ಕೆ ಹೋಗಿದ್ದೆವು. ನಮ್ಮ ನಾಡಿನ ಹಿರಿಮೆ ಎನಿಸಿರುವ ಶಿಲಾ ವೈಭವವನ್ನು, ವಾಸ್ತುವೈಭವವನ್ನು ನೋಡಬೇಕೆಂಬ ನಮ್ಮ ಬಯಕೆಯನ್ನು ತುಂಬಿಕೊಳ್ಳಲು ನಾವು ಹೋಗಿದ್ದು. ಆದರೆ, ಅಲ್ಲೊಂದು ಪ್ರೀ ವೆಡ್ಡಿಂಗ್ ಶೂಟ್ ನಡೆದಿತ್ತು.

ಫೋಟೋಗ್ರಾಫರ್ ಹೇಳಿದ ವಿವಿಧ ಭಂಗಿಗಳಿಗೆ ಪೋಸ್ ಕೊಡುತ್ತ ಹುಡುಗ ಮತ್ತು ಹುಡುಗಿ ಇಬ್ಬರೂ ಶೂಟ್‌ನಲ್ಲಿ ತಲ್ಲೀನ ರಾಗಿದ್ದರು. ವಾಸ್ತು ಮತ್ತು ಶಿಲ್ಪಗಳ ಹಿನ್ನೆಲೆಯಲ್ಲಿ ಹುಡಗ ಮತ್ತು ಹುಡುಗಿ ನಿಂತುಕೊಳ್ಳುತ್ತಿದ್ದರು. ಕೆಲವು ಬಾರಿ ಸ್ಲೋ ಮೋಷನ್‌ನಲ್ಲಿ ಓಡಿ ಬಂದ ಹುಡುಗಿ ಹುಡುಗನಿಗೆ ತೆಕ್ಕೆ ಬೀಳುವುದು, ಹುಡುಗ ಅವಳ ಹಣೆಗೆ ಮುತ್ತಿಕ್ಕುವುದು ಹೀಗೆ ಬಗೆ ಬಗೆಯ ಭಂಗಿಗಳನ್ನು, ಚಟುವಟಿಕೆಗಳನ್ನು ಚಿತ್ರೀಕರಿಸಿಕೊಳ್ಳ ಲಾಗುತ್ತಿತ್ತು.

ನೂರಾರು ವರ್ಷಗಳ ಹಿಂದೆ ನಮ್ಮ ಶಿಲ್ಪಿಗಳು ಬಹಳ ಚಾತುರ್ಯದಿಂದ ಕೆತ್ತಿದ್ದ ಶಿಲಾಬಾಲಿಕೆಗನ್ನು ನೋಡುವ ನಮ್ಮ ಕುತೂಹಲಕ್ಕೆ ಈ ಪ್ರಿ ವೆಡ್ಡಿಂಗ್ ಶೂಟ್ ತಡೆಯೊಡ್ಡುತ್ತಿದ್ದುದು ನಿಜ. ನಮ್ಮಂತೆಯೇ ದೇಗುಲವನ್ನು ನೋಡ ಬಂದವರು ಅಲ್ಲಿನ ಶಿಲ್ಪಕಲೆಯನ್ನು ಕಣ್ತುಂಬಿಕೊಳ್ಳುವುದನ್ನು ಬಿಟ್ಟು ಈ ಪ್ರೀ ವೆಡ್ಡಿಂಗ್ ಶೂಟ್‌ನ್ನು ಕುತೂಹಲದಿಂದ ನೋಡುತ್ತಿದ್ದರು.

ಶಿಲ್ಪಕಲಾ ವೈಭವದ ಜಾಗಗಳಿಗೆ ಅಡ್ಡಲಾಗಿ ನಿಂತು, ಗುಂಪುಗುಂಪಾಗಿ ಮಾತನಾಡುತ್ತಾ ಆ ಫೋಟೋ ಶೂಟ್ ನೋಡುತ್ತಿದ್ದರು.
ಫೋಟೋಗ್ರಾಫರುಗಳು ಸಹ ಅಲ್ಲಲ್ಲಿ ನಿಂತು, ಸುಂದರ ಶಿಲ್ಪಗಳಿಗೆ ಅಡ್ಡಲಾಗಿ ತಮ್ಮ ಪರಿಕರಗಳನ್ನು ಹರಡಿಕೊಂಡು, ತಮ್ಮ ಮಾತುಗಳನ್ನು ಜೋರಾಗಿ ಹೇಳುತ್ತಾ, ಫೋಟೋ ತೆಗೆಯುತ್ತಿದ್ದರು. ಇಂದಿನ ದಿನಗಳಲ್ಲಿ ವಿವಾಹಕ್ಕೆ ಮೊದಲೇ ಈ ‘ಪ್ರೀ ವೆಡ್ಡಿಂಗ್ ಶೂಟ್’ ಎನ್ನುವುದು ಸೇರ್ಪಡೆಯಾಗಿದೆ.

ಅದಕ್ಕೆಂದೇ ಸಾಕಷ್ಟು ಹಣವನ್ನು ಸಹ ವೆಚ್ಚಮಾಡಲಾಗುತ್ತಿದೆ. ‘ವಿವಾಹ’ ಎಂಬ ಎರಡು ಮನಸುಗಳನ್ನು ಬೆಸೆಯುವ ಕಾರ್ಯ ಕ್ರಮವು ಹೇಗೆಲ್ಲ ಬದಲಾಗುತ್ತ ನಡೆದಿದೆ ಎಂಬುದಕ್ಕೆ ಇದೊಂದು ನಿದರ್ಶನ. ಹಿಂದಿನ ಕಾಲದ ಶಾಸ್ತ್ರ, ಸಂಪ್ರದಾಯಗಳೆಲ್ಲ ಹೊಸ ಟ್ರೆಂಡ್‌ಗಳ ಸುಳಿಗೆ ಸಿಕ್ಕು ಅರ್ಥವನ್ನು ಕಳೆದುಕೊಳ್ಳುತ್ತಿವೆ. ಮದುವೆಯಂತಹ ಒಂದು ದಿವ್ಯ ಸಂಸ್ಕೃತಿಯಲ್ಲೂ ಪಾಶ್ಚಿಮಾತ್ಯ ಪದ್ಧತಿಗಳನ್ನು ತಂದು ಸುರಿಯುತ್ತಿದ್ದೇವೆ ನಾವು. ನಮ್ಮ ನಾಡಿನ ವಿವಾಹ ಪದ್ಧತಿಯಲ್ಲಿ ಬರುವ ಪ್ರತಿಯೊಂದು ಶಾಸ್ತ್ರದ ಹಿಂದೆಯೂ ಒಂದೊಂದು ವಿಶೇಷ ಅರ್ಥ, ಒಳಾರ್ಥ, ಉದ್ದೇಶವಿದೆ. ಈ ಉದ್ದೇಶಕ್ಕಿಂತ ತುಂಬ ವಿಭಿನ್ನ ಎನಿಸಿರು ಪ್ರೀ ವೆಡ್ಡಿಂಗ್ ಶೂಟ್ ಮಾಡುವುದು, ಮದುವೆ ಸಮಾರಂಭದಲ್ಲಿ ಕೇಕ್ ಕತ್ತರಿಸುವಂತಹ ಅರ್ಥವಿಲ್ಲದ ಸಂಪ್ರದಾಯ ಗಳು ನಮ್ಮ ವಿವಾಹವನ್ನು ಅರ್ಥಹೀನ ಆಧುನಿಕತೆಯತ್ತ ಕೊಂಡೊಯ್ಯುತ್ತಿದೆ.

ಮರೆಯಾದ ಸಂಪ್ರದಾಯ
ಹಿಂದಿನ ಕಾಲದಲ್ಲಿ ನಡೆಯುತ್ತಿದ್ದ ಮದುವೆಗಳಲ್ಲಿನ ಒರಳು ಪೂಜೆ, ಅರಿಷಿಣ ಸ್ನಾನ, ಬಳೆ ತೊಡಿಸುವಂತಹ ಹಲವಾರು
ಸಂಪ್ರದಾಯಗಳು ಇಂದು ಮರೆಯಾಗುತ್ತಿವೆ. ಬಳೆಗಾರ ಮನೆಗೆ ಬಂದು ಮದುಮಗಳಿಗೆ ಮತ್ತು ಮನೆಯ ಇತರ ಮಹಿಳೆಯರಿಗೆ, ಬೀದಿಯಲ್ಲಿರುವ ಹಿತೈಷಿಗಳಿಗೆ ಬಳೆ ತೊಡಿಸುವ ವಿಶೇಷ ಅರ್ಥದ ಪದ್ಧತಿ ನೆನಪಿನಿಂದ ಮಾಸುತ್ತಿದೆ.

ಈಗಿನ ವಿವಾಹಗಳು ಭರ್ಜರಿಯಾದ ಛತ್ರಗಳು, ಅಲ್ಲಿನ ಡೆಕೋರೇಶನ್, ಲೈಟಿಂಗ್, ಕಣ್ಣು ಕೋರೈಸುವ ವಸ್ತ್ರ ವೈಭವಗಳು, ಆಭರಣಗಳು, ಅವಶ್ಯಕ್ಕಿಂತ ಅಧಿಕ ವೈವಿಧ್ಯ ಹೊಂದಿದ ಭೋಜನ, ದುಂದು ವೆಚ್ಚಕ್ಕೆ ಮಾತ್ರ ಸೀಮಿತವಾಗುತ್ತಿವೆ. ಮದುವೆಯ ಊಟದ ಜತೆಯಲ್ಲೇ ಮಸಾಲೆ ದೋಸೆ, ಪಾನಿ ಪೂರಿಯಂತಹ ವಿವಿಧ ರುಚಿಕರ ತಿನಿಸುಗಳನ್ನು ತಿನ್ನುವ ಹೊಟೆಲಿನಂತೆ ಪರಿವರ್ತನೆಗೊಳ್ಳುತ್ತಿವೆ ಅಲ್ಲಿನ ಡೈನಿಂಗ್ ಹಾಲ್‌ಗಳು.

ಬಾಡಿಗೆಯ ಆಧಾರದಲ್ಲಿ ಬರುವ ಮಹಿಳೆ ಯರು ಕೃತಕವಾಗಿ ಅತಿಥಿಗಳನ್ನು ನಮಸ್ಕರಿಸಿ ಆಹ್ವಾನಿಸುವ ವಿಚಿತ್ರ ಪದ್ಧತಿಯೂ ಮದುವೆಯ ಮನೆಯ ಭಾಗವಾಗುತ್ತಿದೆ. ಮದುವೆ ಮನೆಯಲ್ಲಿ ಒಂದು ದಿವ್ಯ ವಾತಾವರಣವನ್ನು ಸೃಷ್ಟಿಸುತ್ತಿದ್ದ ಮಂಗಳ ವಾದ್ಯ ಗಳಾದ ವಾಲಗ, ಶಹನಾಯಿಗಳೂ ತಮ್ಮ ಹಳೆಯ ಸೊಗಡನ್ನು ಕಳೆದುಕೊಳ್ಳುತ್ತಿವೆ.

ನಮ್ಮ ದೇಶದ ಅರ್ಥಪೂರ್ಣ ಆಚರಣೆ, ಸಂಪ್ರದಾಯ, ಸಂಸ್ಕೃತಿಗಳಿಗೆ ಮಾರು ಹೋಗುತ್ತಿರುವ ಕೆಲವು ವಿದೇಶಿಯರು ನಮ್ಮ ವಿವಾಹ ಪದ್ಧತಿಯ ಅನುಸಾರ ಮದುವೆಯಾಗುತ್ತಿದ್ದಾರೆ. ಆದರೆ ನಮ್ಮವರು ‘ಹಿತ್ತಲ ಗಿಡ ಮದ್ದಲ್ಲ’ ಎನ್ನುವಂತೆ ನಮ್ಮತನವನ್ನು ಬಿಟ್ಟು ಆಧುನಿಕ ಪರಂಪರೆಯನ್ನು ಮತ್ತು ಅವುಗಳಲ್ಲಿ ಕೆಲವು ಬಾರಿ ಅಡಕಗೊಂಡಿರುವ ಅರ್ಥಹೀನ ಆಚರಣೆಗಳನ್ನು ಅಪ್ಪಿ ಕೊಳ್ಳುತ್ತಿದ್ದಾರೆ. ಶ್ರೀಮಂತ ಸಂಸ್ಕೃತಿಯನ್ನು ಹೊಂದಿದ ನಮ್ಮ ಆಚರಣೆಗಳು ‘ಆಧುನಿಕತೆ’ ಎಂಬ ಹೆಸರಲ್ಲಿ ನಶಿಸಿ ಹೋಗ ದಿರಲಿ.