ಕಳೆದುಹೋದ ಕಾಲದ ಬಗ್ಗೆ ಬೇಸರಪಡದೆ, ಮುಂದೆ ಕಳೆಯಬೇಕಾದ ದಿನಗಳ ಬಗ್ಗೆ ಯೋಚಿಸೋಣ.
ಜ್ಯೋತಿ.ಭಟ್ ಉಜಿರೆ
ನಮ್ಮ ರಾಷ್ಟ್ರದ ಮಹಾನ್ ಶಕ್ತಿ ಯುವಜನತೆ. ರಾಷ್ಟ್ರದ ಏಳಿಗೆಗೆ ಯುವಪೀಳಿಗೆಯ ಪಾತ್ರ ತುಂಬಾ ಮಹತ್ವದ್ದಾಗಿದೆ. ಯುವ ಜನತೆ ಮನಸ್ಸು ಮಾಡಿದರೆ ಅಸಾಧ್ಯ ಎಂಬ ಕಾರ್ಯಗಳೇ ಇಲ್ಲ. ಇಳಿವಯಸ್ಸಿನಲ್ಲಿ ಸಾಧನೆಗಳನ್ನು ಮಾಡಿರುವ ಅದೆಷ್ಟೋ ಉದಾಹರಣೆಗಳು ನಮ್ಮ ದೇಶದಲ್ಲಿವೆ.
ಇತ್ತೀಚಿನ ದಿನಗಳಲ್ಲಿ ಯುವ ಜನತೆಯ ಚಿತ್ತ ವಾಲುತ್ತಿಹುದು ಬೇಡದ ಚಟಗಳತ್ತ. ಒಂದೊಮ್ಮೆ ದುಶ್ಚಟಗಳ ಬಲೆಯೊಳಗೆ ಸಿಲುಕಿಕೊಂಡ ಯುವಜನತೆಯ ಪಾಡು, ಜೇಡನ ಬಲೆಯೊಳಗೆ ಸಿಲುಕಿಕೊಂಡ ಹಾತೆಯಂತೆ ಅದರಿಂದ ಹೊರಬರುವುದು ಸುಲಭಸಾಧ್ಯವಲ್ಲ. ಈ ರೀತಿ ದುಶ್ಚಟಗಳಿಗೆ ಬಲಿಯಾದ ಅದೆಷ್ಟೋ ಯುವಜನತೆಯ ನಿದರ್ಶನಗಳು ನಮ್ಮ ಕಣ್ಮುಂದಿವೆ. ಆದರೆ ಇವುಗಳಿಗೆಲ್ಲಾ ಕಾರಣರು ಯಾರು? ತಪ್ಪಾದ ಹಾದಿಯತ್ತ ಸಾಗುವ ಯುವಪೀಳಿಗೆಯೇ ಹೊರತು ಮತ್ಯಾರೂ ಅಲ್ಲ. ಬದುಕನ್ನು ರೂಪಿಸಿಕೊಳ್ಳುವ ನಿರ್ಧಾರ ತೆಗೆದುಕೊಳ್ಳಬೇಕಾಗಿರುವುದು ನಾವುಗಳೇ.
ಯೌವನಾವಸ್ಥೆ ಎಂಬುದು ಯುವಕ-ಯುವತಿಯರ ಬಾಳಿನಲ್ಲಿ ಅತ್ಯಂತ ಮಹತ್ವದ ಅವಧಿ. ಕನಸುಗಳ ಸರಮಾಲೆಯನ್ನು ಕಟ್ಟುವ ಸಮಯ. ಇದು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಕಾಲಾವಧಿ ಇದು. ಯಾವುದೇ ನಿರ್ಧಾರ ಮಾಡುವ ಮುನ್ನ ಸಾವಿರ ಬಾರಿ ಆಲೋಚನೆ ಮಾಡಬೇಕಾಗುತ್ತದೆ. ಆದರೆ, ನಿರ್ಧಾರ ತೆಗೆದುಕೊಳ್ಳುವ ಭರದಲ್ಲಿ ಒಂದು ಬಾರಿ ಎಡವಿ ಬಿದ್ದರೆ ಮತ್ತೆ ಮೇಲೇಳುವುದು ಕಷ್ಟ.
ದಾರಿಯ ಆಯ್ಕೆ ಸರಿಯಿರಬೇಕು
ಗುರಿಯೆಡೆಗೆ ಸಾಗುವಾಗ ಎರಡು ರೀತಿಯ ಹಾದಿಗಳು ನಮ್ಮ ಕಣ್ಣೆದುರು ಬರುತ್ತದೆ. ಒಳ್ಳೆಯ ದಾರಿ ಹಾಗೂ ಕೆಟ್ಟ ದಾರಿ. ಒಳ್ಳೆಯ ದಾರಿಯಲ್ಲಿ ಸಾಗುವಾಗ ಅನೇಕ ಸವಾಲುಗಳನ್ನು ಎದುರಿಸಬೇಕಾಗಿ ಬಂದರೂ, ಕೊನೆಯಲ್ಲಿ ಗುರಿ ತಲುಪುವುದು ನಿಶ್ಚಿತ. ಆದರೆ ಕೆಟ್ಟ ದಾರಿಯಲ್ಲಿ ಸಾಗುವುದು ತುಂಬಾ ಸುಲಭ. ಈ ದಾರಿಯಲ್ಲಿ ಅಡಕವಾಗಿರುವ ವಿಷಯಗಳು ನೂರಾರು. ಈ ದಾರಿಯು ಕಟ್ಟ
ಕಡೆಗೆ ಚಟ್ಟದತ್ತ ಕೊಂಡೊಯ್ಯುವುದರಲ್ಲಿ ಸಂಶಯವೇ ಇಲ್ಲ. ಹಾಗಾಗಿ ಬದುಕಿನ ಬವಣೆಯನ್ನು ಬದಲಿಸುವ ಬೆಳಕು ನಾವೇ ಆಗಬೇಕು.
ಸ್ವಾಮಿ ವಿವೇಕಾನಂದರು ಯುವಜನತೆಗೆ ‘ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ’ ಎಂಬ ಮಹಾನ್ ಸಂದೇಶ ನೀಡಿದರು. ವಿವೇಕಾನಂದರು ಜನತೆಗೆ ತಮ್ಮ ಜೀವನ ಮತ್ತು ಸಂದೇಶಗಳ ಮೂಲಕ ಸ್ಫೂರ್ತಿ ತುಂಬಿದರು. ಯುವಜನತೆ ಹಾದಿತಪ್ಪುವ ಮುನ್ನ ವಿವೇಕಾನಂದರು ಹೇಳಿದ ಈ ಮೂರು ಮಂತ್ರಗಳನ್ನು ನೆನಪಿಟ್ಟುಕೊಂಡರೆ ಸಾಕು. ಅದುವೇ ಏಕಾಗ್ರತೆ, ಆತ್ಮವಿಶ್ವಾಸ
ಮತ್ತು ಚಾರಿತ್ರ್ಯ. ಇವರು ಏಕಾಗ್ರತೆಯು ಜ್ಞಾನಾರ್ಜನೆಗೆ ಏಕೈಕ ಮಾರ್ಗ ಎಂದು ತಿಳಿಸಿ ಹೇಳಿದರು. ಏಕಾಗ್ರತೆಯನ್ನು ಸಾಧಿಸಲು ಅಭ್ಯಾಸ, ಆಸಕ್ತಿ ಹಾಗೂ ವೈರಾಗ್ಯ ಇವೆಲ್ಲವೂ ಅನಿವಾರ್ಯ ಎಂದರು. ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕೆಂದು ಮತ್ತು ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಳ್ಳಬೇಕೆಂದು ಜನತೆಗೆ ಕರೆಕೊಟ್ಟರು. ಓದುವ ಹಾಗೂ ಮಾಡುವ ಕಾರ್ಯಗಳಲ್ಲಿ ಆಸಕ್ತಿ ಬಹುಮುಖ್ಯ ಎಂದು ತಿಳಿಸಿದರು.
ಮೊಬೈಲ್‌ನಿಂದ ದೂರವಿರಿ
ಯಾವುದೇ ಒಂದು ಕಾರ್ಯ ಮಾಡುವಾಗ ಮನಸ್ಸನ್ನು ಚಂಚಲಗೊಳ್ಳದಂತೆ ನೋಡಿಕೊಳ್ಳುವುದೇ ವೈರಾಗ್ಯ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಹೀಗೆ ನೋಡುವುದಾದರೆ ಈಗಿನ ಕಾಲಘಟ್ಟಗಳಲ್ಲಿ ಯಾವುದೇ ಕೆಲಸ ಮಾಡಿದರು ನಮ್ಮನ್ನು ಮೊದಲು ಚಂಚಲ ಗೊಳಿಸುವ ಏಕೈಕ ಸಾಧನ ಮೊಬೈಲ್. ಮೈಯಲ್ಲಿನ ಅಂಗಿಯಂತೆ ಕೈಯಲ್ಲಿನ ಬಂಗಿ ಈ ಮೊಬೈಲ್.
ಓದುವಾಗ ತಿನ್ನುವಾಗ, ಮಲಗುವಾಗ ಹಾಗೂ ಯಾವುದೇ ಇನ್ನಿತರ ಕಾರ್ಯ ಮಾಡುವಾಗಲೂ ಕೂಡ ಮೊಬೈಲ್ ನೋಡುವು ದನ್ನು ನಾವು ಬಿಡುವುದಿಲ್ಲ. ಇಂತಹ ಚಂಚಲತೆಗೆ ಒಳಗಾಗಬಾರದೆಂಬುದು ಇದಕ್ಕೊಂದು ಉದಾಹರಣೆ. ಮೊಬೈಲ್‌ನಿಂದ
ಸಾಧ್ಯವಿದ್ದಷ್ಟೂ ದೂರವಿರಬೇಕು, ಅಗತ್ಯ ಎನಿಸುವ ಸಂದರ್ಭಗಳಲ್ಲಿ ಮಾತ್ರ ಅದನ್ನು ಉಪಯೋಗಿಸಬೇಕು. ಅದರ ಉಪ ಯೋಗವು ಲಾಭದಾಯಕ ಎನಿಸಬೇಕೇ ಹೊರತು, ಸಮಯ ವ್ಯರ್ಥ ಮಾಡುವ ಚಟವಾಗಬಾರದು.
ವಿವೇಕಾನಂದರು ಹೇಳಿದ ಎರಡನೆಯ ಮಂತ್ರ ಆತ್ಮವಿಶ್ವಾಸ, ವಿವೇಕಾನಂದರ ಪ್ರಕಾರ ಆತ್ಮವಿಶ್ವಾಸವೂ ಶಕ್ತಿಯ ಸಂದೇಶ, ಅಮೃತತ್ವದ ಸಂದೇಶ, ನಿರ್ಭೀತಿಯ ಸಂದೇಶಗಳೆಂಬ ಅಂಶಗಳನ್ನು ಒಳಗೊಳ್ಳುತ್ತದೆ. ಇದರಲ್ಲಿ ಇವರು ಯುವ ಜನತೆ ಯಲ್ಲಿರುವ ಭೌತಿಕ ಶಕ್ತಿ, ಸಾಮರ್ಥ್ಯ, ಭಕ್ತಿ, ಆತ್ಮಶ್ರದ್ಧೆ, ಧೈರ್ಯ ಇವುಗಳ ಬಗ್ಗೆ ತಿಳಿಸಿ ಹೇಳಿದ್ದಾರೆ. ಇವೆಲ್ಲವುಗಳು ಪ್ರತಿಯೊಬ್ಬ ರಲ್ಲೂ ಅವರ ಮೇಲಿನ ನಂಬಿಕೆಯನ್ನು ಮತ್ತಷ್ಟು ಹೆಚ್ಚಿಸುವಂತದ್ದು. ಯಾವುದೇ ಕೆಲಸ ಮಾಡುವಾಗಲೂ ಆತ್ಮವಿಶ್ವಾಸ ವೆಂಬುದು ಇರಬೇಕು.
ಅದಿಲ್ಲದೆ ಯಾವ ಕೆಲಸ ಮಾಡಿದರೂ ಕೂಡ ತೃಪ್ತಿಯೆಂಬುದು ಇರಲಾರದು. ಕಡೆಯದಾಗಿ ವಿವೇಕಾನಂದರು ಹೇಳಿರುವಂತೆ ಮೂರನೆಯ ಮಂತ್ರವೆಂದರೆ, ಚಾರಿತ್ರ್ಯ. ಉತ್ತಮ ಚಾರಿತ್ರ್ಯದಿಂದ ಉತ್ತಮ ನಡತೆ ಸಾಧ್ಯ ಎಂದರು. ಈ ಚಾರಿತ್ರ್ಯವೂ ಪರಿ ಶುದ್ಧತೆಯಿಂದ ಕೂಡಿರಬೇಕೆಂದರು. ತಂದೆ-ತಾಯಿಗಳನ್ನು, ಗುರುಗಳನ್ನು, ಸಹಪಾಠಿಗಳನ್ನು, ಹಾಗೂ ನೆರೆಹೊರೆಯ ವರನ್ನು ಪ್ರೀತಿಸುವುದನ್ನು ಕಲಿಯಬೇಕೆಂದರು. ಜನರಿಗೆ ಪ್ರಾಮಾಣಿಕತೆಯಿಂದ ಬದುಕಲು ತಿಳಿಸಿ ಹೇಳಿದರು.
ಹೀಗೆ ವಿವೇಕಾನಂದರ ಈ ಮೂರು ಮಂತ್ರಗಳನ್ನು ಇಂದಿನ ದಿನಗಳಲ್ಲಿ ಯುವ ಪೀಳಿಗೆಯು ಅನುಸರಿಸಿದರೆ ಖಂಡಿತಾ, ಸಾಧನೆಯ ಹಾದಿ ಹೂವಿನ ಹಾಸಿಗೆಯಂತಿರುವುದು. ಎಲ್ಲಾ ರೀತಿಯ ದುಶ್ಚಟಗಳು, ಹಾಗೂ ಅನೇಕರನ್ನು ಕಾಡುವ ಮಾನ
ಸಿಕ ಖಿನ್ನತೆ, ಆತ್ಮಹತ್ಯೆೆಯ ಗೀಳು ಇತ್ಯಾದಿಗಳಿಗೆ ಬಲಿಯಾಗುವುದು ತಪ್ಪುತ್ತದೆ.
ತಮಗೆ ಸಿಕ್ಕಿದ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುವ ಸವಾರರು ನಾವಾಗಬೇಕು. ನಮ್ಮ ಕೈಗಳು ಸಾಧನೆಯ ಬಾಗಿಲನ್ನು ತಟ್ಟುವವಂತಿರಲಿ. ಕಳೆದುಹೋದ ಕಾಲದ ಬಗ್ಗೆ ಬೇಸರಪಡದೆ, ಮುಂದೆ ಕಳೆಯಬೇಕಾದ ದಿನಗಳ ಬಗ್ಗೆ ಯೋಚಿಸೋಣ. ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ.