ದಾಂಪತ್ಯದಲ್ಲಿ ನೆಮ್ಮದಿ ಇರಲು ಏನು ಮಾಡಬೇಕು? ಹಲವರು ಕೇಳುವ ಪ್ರಶ್ನೆ ಇದು. ಪ್ರೀತಿಯ ಜತೆ ತಾಳ್ಮೆ, ಒಬ್ಬರ ನ್ನೊಬ್ಬರು ಅರ್ಥ ಮಾಡಿಕೊಳ್ಳುವ ಸಹನೆ ಇದ್ದಾಗ ಬದುಕು ಸುಂದರ.
ರಶ್ಮಿ ಹೆಗಡೆ ಮುಂಬೈ
ಒಮ್ಮೆ ಸಂತ ಕಬೀರದಾಸರು ಪ್ರವಚನ ನೀಡುತ್ತಿದ್ದರು. ದೂರದ ಊರುಗಳಿಂದ ಪ್ರವಚನ ಕೇಳಲು ಬರುತ್ತಿದ್ದವರಲ್ಲಿ ಅನೇಕರು ತಮ್ಮ ಸಮಸ್ಯೆಗಳನ್ನೂ ಇವರಲ್ಲಿ ಹೊತ್ತು ತರುತ್ತಿದ್ದರು. ತಮ್ಮ ಸಮಸ್ಯೆೆಗೆ ತಕ್ಕ ಪರಿಹಾರ ಕಬೀರರಿಂದ ಸಿಗಬಹುದೆಂಬ
ನಂಬಿಕೆ ಜನರಿಗಿತ್ತು. ಹೀಗಿರಲು ಒಂದು ದಿನ ವ್ಯಕ್ತಿಯೊಬ್ಬ ಕಬೀರರೆದುರು ತನ್ನ ಅಳಲನ್ನು ತೋಡಿಕೊಂಡ.
‘ನನ್ನ ಸಂಸಾರದಲ್ಲಿ ಸಾಮರಸ್ಯವಿಲ್ಲ, ನೆಮ್ಮದಿಯಂತೂ ಇಲ್ಲವೇ ಇಲ್ಲ. ಸಮಾಧಾನ, ಸಂತೋಷದ ಕ್ಷಣಗಳು ಮಾಯವಾಗಿವೆ. ನಾನು, ನನ್ನ ಪತ್ನಿ ಜಗಳವಾಡದ ದಿನಗಳೇ ಇಲ್ಲ. ನನ್ನ ಮಾತನ್ನು ಕೇಳುವ ಬುದ್ಧಿ ಆಕೆಗಿಲ್ಲ, ಆಕೆಯ ಮಾತು ಕೇಳಲು ನನಗೆ
ಮನಸ್ಸಿಲ್ಲ. ಈ ಪರಿಸ್ಥಿತಿ ಕುಟುಂಬದ ನೆಮ್ಮದಿಯನ್ನೇ ಕೆಡಿಸಿದೆ. ಒಟ್ಟಾರೆ ಸಂಸಾರವೇ ಸಾಕಾಗಿದೆ! ಈ ನನ್ನ ಸಮಸ್ಯೆಗೆ ಏನಾದರೂ ಪರಿಹಾರ ಸೂಚಿಸಿ’ ಎಂದು ಕಣ್ಣೀರಿಡುತ್ತ ಬೇಡಿಕೊಂಡ.
ಹಗಲಿನಲ್ಲೂ ದೀಪ
ಮೌನವಾಗಿ ಕುಳಿತಿದ್ದ ಕಬೀರ ದಾಸರು, ಸ್ವಲ್ಪ ಸಮಯದ ನಂತರ ಮೌನ ಮುರಿದು, ‘ಒಂದು ಚಿಮಣಿ ದೀಪವನ್ನು ಹಚ್ಚಿಕೊಂಡು ಬರುವೆಯಾ?’ ಎಂದು ತನ್ನ ಪತ್ನಿಗೆ ಆದೇಶ ನೀಡಿದರು. ಸುಡು ಬಿಸಿಲ ಮಧ್ಯಾಹ್ನದಲ್ಲಿ, ಸಾಕಷ್ಟು ಬೆಳಕಿರುವಾಗ ಚಿಮಣಿಯ ಅವಶ್ಯಕತೆ ಇವರಿಗೇಕೆ ಬಂತು ಎಂದು ಕಬೀರರ ವಿಚಿತ್ರ ವರ್ತನೆ ಕಂಡು ಕಕ್ಕಾಬಿಕ್ಕಿಯಾಗಿದ್ದ ಆ ವ್ಯಕ್ತಿ. ಆದರೆ ಏನನ್ನೂ ಪ್ರಶ್ನಿಸದೆ ಒಳಗಿನಿಂದ ಬಂದ ಕಬೀರರ ಪತ್ನಿ ಪತಿಯ ಮಾತಿನಂತೆ ಚಿಮಣಿಯನ್ನು ಕತ್ತಿಸಿಕೊಂಡು ತಂದಿಟ್ಟು ಒಳಕ್ಕೆ ನಡೆದಳು.
ಸ್ವಲ್ಪ ಸಮಯದ ನಂತರ ಕಬೀರರು ಪತ್ನಿಗೆ ‘ಏನಾದರೂ ಸಿಹಿ ತಿಂಡಿ ಮಾಡಿಕೊಂಡು ಬಾ’ ಎಂದಾಗ ಆಕೆ ಮರುಮಾತಾಡದೆ ಬಿಸಿ ಬಿಸಿಯಾದ ಬೋಂಡದಂತಹ ಖಾರ ಕುರುಕಲು ತಿಂಡಿಯನ್ನು ಕರಿದು ತಂದಳು. ಕಬೀರರು ಏನೊಂದೂ ಪ್ರಶ್ನಿಸದೆ ಆ ತಿಂಡಿಯನ್ನು ಆತನಿಗೂ ಕೊಟ್ಟು, ತಾವೂ ತಿನ್ನಲಾರಂಭಿಸಿದರು.
ಕಬೀರರ ಹಾಗೂ ಅವರ ಪತ್ನಿಯ ನಡವಳಿಕೆ ಕಂಡು ಆ ವ್ಯಕ್ತಿಗೆ ವಿಚಿತ್ರವೆನಿಸಿತು. ಸಿಹಿತಿಂಡಿಯನ್ನು ತರಲು ಹೇಳಿದರೆ ಈಕೆ ಖಾರದ ಕುರುಕಲನ್ನು ತಂದಿದ್ದಾಳಲ್ಲಾ! ಒಬ್ಬರಿಗೊಬ್ಬರು ತಾಳೆಯೇ ಇಲ್ಲದ ಸಂಸಾರ ಇವರದ್ದು ಎಂದು ಮನದಲ್ಲೇ ಅಂದು ಕೊಂಡ. ತನ್ನ ಸಮಸ್ಯೆಗೆ ಪರಿಹಾರ ಸಿಗದಿದ್ದ ಕಾರಣ ಅಸಮಾಧಾನದಿಂದ ಪೇಚು ಮೋರೆ ಹಾಕಿಕೊಂಡು, ತಾನಿನ್ನು ಹೋಗಿ ಬರುವೆನೆಂದು ಕಬೀರರಿಗೆ ನಮಸ್ಕರಿಸಿದ. ಆಗ ಅವರು ‘ನಿನ್ನ ಸಮಸ್ಯೆಗೊಂದು ಪರಿಹಾರ ಈಗ ಸಿಕ್ಕಿತೆ ಅಥವಾ ಇನ್ನೂ ಏನಾ ದರೂ ಕೇಳಬೇಕೆ?’ ಎಂದು ಕೇಳಿದರು.
ಆ ವ್ಯಕ್ತಿ ಆಶ್ಚರ್ಯದಿಂದ ‘ಪರಿಹಾರ?ಯಾವ ರೀತಿಯ ಪರಿಹಾರ?’ ಎಂದು ಕೇಳಿದ. ‘ನನ್ನ ಪತ್ನಿಗೆ ದೀಪ ಹಚ್ಚಿಕೊಂಡು ಬಾ ಎಂದು ಹೇಳಿದಾಗ ಆಕೆ, ನಿಮಗೇನು ಹುಚ್ಚೇ? ಇಂಥಹ ಶುಭ್ರವಾದ ಬೆಳಕಿರುವಾಗ ದೀಪವೇಕೆ?’ ಎಂದು ಕಿರಿಕಿರಿಗೊಂಡು ಕೇಳಬಹುದಿತ್ತು. ಆದರೆ ಆಕೆ ಹಾಗೆ ಮಾಡಲಿಲ್ಲ. ಯಾವುದೋ ಮುಖ್ಯ ಕಾರಣಕ್ಕೆ ಬೇಕಾಗಿರಬಹುದೆಂದು ಅರ್ಥಮಾಡಿಕೊಂಡು ಏನನ್ನೂ ಪ್ರಶ್ನಿಸದೆ ದೀಪವನ್ನಿಟ್ಟು ನಡೆದಳು. ಇದು ಆಕೆಯ ಪೆದ್ದುತನವೂ ಅಲ್ಲ ಅಥವಾ ನನ್ನ ಮೇಲಿನ ಭಯವೂ ಅಲ್ಲ. ನನ್ನ ಪತ್ನಿ ನನ್ನನ್ನು ಅರ್ಥ ಮಾಡಿಕೊಂಡ ರೀತಿ ಅದು.
‘ಅಂತೆಯೇ, ನಾನು ಸಿಹಿ ತರಲು ಹೇಳಿದಾಗ ಅದಕ್ಕೆ ವಿರುದ್ಧವಾಗಿ ಆಕೆ ಖಾರದ ತಿಂಡಿಯನ್ನು ತಂದುಕೊಟ್ಟಳು. ನೀನು ಗಮನಿಸಿರಬಹುದು, ನಾನು ಆಕೆಗೆ ಏನನ್ನೂ ಪ್ರಶ್ನೆ ಮಾಡಲಿಲ್ಲ, ಕೋಪಗೊಂಡು ಬೈದೂ ಇಲ್ಲ. ಬಹುಶಃ ಸಿಹಿ ತಿಂಡಿ ಅಥವಾ ಸಕ್ಕರೆ ಇಲ್ಲವಾಗಿರಬೇಕು, ಅದಕ್ಕೇ ಬೇರೆ ತಿಂಡಿ ತಂದಿರಬಹುದೆಂದು ಅರ್ಥಮಾಡಿಕೊಂಡು ಸುಮ್ಮನಾದೆ. ವಾದಕ್ಕಿಳಿದಿದ್ದರೆ ಅಥವಾ ಬೈದಿದ್ದರೆ ಅಲ್ಲಿಯೇ ದೊಡ್ಡ ಜಗಳವಾಗಿರೋದು ಅಥವಾ ಆಕೆಗೆ ಅವಮಾನವೆನಿಸಿ ಮನಸಿಗೆ ನೋವಾಗಿರೋದು.
‘ನಮ್ಮಿಬ್ಬರ ನಡುವೆ ಇರುವ ನಂಬಿಕೆ, ಹೊಂದಾಣಿಕೆ ಹಾಗೂ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವ ರೀತಿ ವನವನ್ನ ಸುಖಮಯವಾಗಿರಿಸಿದೆ. ಜೀವನವೆಂಬ ದೋಣಿಯಲ್ಲಿ ಪಯಣಿಸುತ್ತಿರುವ ಪತಿ ಪತ್ನಿಯ ಸಂಬಂಧದಲ್ಲಿ ಬಿರುಕು ಬಾರದಂತೆ ಕಾಪಾಡಿಕೊಂಡು ಹೋಗುವುದು ಅವರಿಬ್ಬರ ಜವಾಬ್ದಾರಿ. ಆ ದೋಣಿಯಲ್ಲಿ ಸಹಪ್ರಯಾಣಿಕರಾಗಿ ಕುಳಿತಿರುವ ಕುಟುಂಬದ ಉಳಿದ ಸದಸ್ಯರ ಭವಿಷ್ಯವೂ ಅವರೀರ್ವರ ಕೈಯಲ್ಲೇ ಇದೆ ಎನ್ನುವುದನ್ನು ನೆನಪಿನಲ್ಲಿರಿಸಬೇಕು’ ಎಂದಾಗ ಆ ವ್ಯಕ್ತಿಗೆ ಎಲ್ಲವೂ ಅರ್ಥವಾಗಿತ್ತು. ಇಷ್ಟು ಹೊತ್ತು ತನಗೆ ಬುದ್ಧಿಕಲಿಸಲೆಂದೇ ಕಬೀರರು ಈ ರೀತಿಯ ಸನ್ನಿವೇಶವನ್ನು ಸೃಷ್ಟಿ ಮಾಡಿದರೆಂದು ಆತನಿಗೆ ತಿಳಿಯಿತು.
ವಾದ ಪ್ರತಿವಾದ ಸಹಜ
ಸಂಸಾರದಲ್ಲಿ ಜಗಳ, ಮನಸ್ತಾಪ, ವಾದ ಪ್ರತಿವಾದಗಳು ಸಹಜ. ಚಿಕ್ಕಪುಟ್ಟ ಜಗಳವೂ ಇಲ್ಲದ ಸಂಸಾರ ಇರುವುದು ಅಪರೂಪ. ಆದರೆ ಅವನ್ನು ಮಿತಿಮೀರಲು ಬಿಟ್ಟಾಗ ಸಂಬಂಧಗಳು ಹಳಸತೊಡಗುತ್ತವೆ. ಜಗಳಕ್ಕೆ ಕಾರಣಗಳು ಅನೇಕ. ಅವುಗಳಲ್ಲೊಂದು ಒಬ್ಬರನ್ನೊಬ್ಬರು ಸರಿಯಾಗಿ ಅರ್ಥಮಾಡಿಕೊಳ್ಳದಿರುವುದು. ಪ್ರಶ್ನಿಸಲೇಬೇಕಾದ ಸಂದರ್ಭ ಎದುರಾದಾಗ, ಒಬ್ಬರ ನಡವಳಿಕೆ ಹಾಗೂ ನಿರ್ಧಾರಗಳು ಸುಖಸಂಸಾರಕ್ಕೆ ಮಾರಕವಾದಾಗ ಸಿಡಿದೆಳಲೇಬೇಕು, ಅದು ಅನಿವಾರ್ಯ. ಆದರೆ ಸಣ್ಣ ಸಣ್ಣ ವಿಷಯಕ್ಕೂ ಒಬ್ಬರನ್ನೊಬ್ಬರು ಹತ್ತಿಕ್ಕುತ್ತ ನಡೆದರೆ ಮನೆಯಲ್ಲಿ ಉಸಿರಾಡುವುದೇ ಕಷ್ಟ ವಾದೀತು!
ಗಂಡಿಗೆ ತಾನು ಹೆಣ್ಣಿನ ಕೈಯಲ್ಲಿ ಸೋಲಬಾರದೆಂಬ ಹಠ ಹಾಗೂ ಅಹಂಕಾರ. ಹೆಣ್ಣಿಗೆ ತನ್ನ ಸ್ಥಾನಕ್ಕೆ, ತ್ಯಾಗಕ್ಕೆ ಸರಿಯಾದ ಬೆಲೆ ಸಿಗುತ್ತಿಲ್ಲವೆಂಬ ನೋವು, ಹತಾಶೆ. ಇಂಥ ಸಣ್ಣ ಸಣ್ಣ ತಾಕಲಾಟಗಳೇ ಮುಂದೆ ಹೆಮ್ಮರವಾಗಿ ಬೆಳೆದು ತನ್ನ ವಿಷದ ಬೇರನ್ನ
ಎಲ್ಲೆಡೆ ಹರಡಿ ಸಂಸಾರವೆಂಬ ಪವಿತ್ರ ವಾತಾವರಣವನ್ನು ಹಾಳುಮಾಡೋದು.
ಒಬ್ಬರ ಪರಿಸ್ಥಿತಿಯನ್ನು ಇನ್ನೊಬ್ಬರು ಅವರ ದೃಷ್ಟಿಕೋನದಿಂದ ನೋಡಿದಾಗ ಸಮಸ್ಯೆಗೆ ಪರಿಹಾರ ಸಿಗುವುದರ ಜತೆಗೆ ಸಂಬಂಧವೂ ಬಲಪಡುವುದು. ತಿಳಿದೋ ತಿಳಿಯದೆಯೋ ಮಾಡಿದ ಒಂದು ಸಣ್ಣ ತಪ್ಪನ್ನೇ ಹಿಡಿದು ದೊಡ್ಡ ಸಮಸ್ಯೆಯನ್ನಾ ಗಿಸಿ, ಕೋರ್ಟ್ ಮೆಟ್ಟಿಲೇರಿ ದಾಂಪತ್ಯಕ್ಕೆ ವಿದಾಯ ಹೇಳಿ, ಮಕ್ಕಳನ್ನೂ ಅನಾಥರನ್ನಾಗಿಸಿ, ಕುಟುಂಬವನ್ನೇ ನರಕಕ್ಕೆ ತಳ್ಳುವುದರ ಹಿಂದೆ ಇರುವುದು ಪ್ರೀತಿಯ ಅಭಾವವಲ್ಲ, ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳದ ಮನಸ್ಥಿತಿ.
ಸಂಸಾರದಲ್ಲಿ ಒಬ್ಬರು ತಪ್ಪು ಮಾಡಿದಾಗ ಇನ್ನೊಬ್ಬರು ಅದನ್ನು ನಿಂದಿಸಿ, ಜಗಳವಾಡುವ ಬದಲು ಒಟ್ಟಿಗೆ ಕುಳಿತು
ಮಾತನಾಡಿ, ಸಮಸ್ಯೆಯನ್ನು ಬಗೆಹರಿಸಿಕೊಂಡಾಗ ಎಲ್ಲವೂ ಸುಖಮಯ. ಪರಸ್ಪರರ ಮೌನವನ್ನೂ ಅರ್ಥಮಾಡಿಕೊಂಡಾಗ ಪ್ರೀತಿಗೊಂದು ಬೆಲೆ. ದಾಂಪತ್ಯದಲ್ಲಿ ಪ್ರೀತಿಯ ಜತೆ ಇರಬೇಕಾದ್ದು ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ನಡೆಯುವ ಕಲೆ.
ಹಂಗಿಸುವುದು ಸಲ್ಲ
ಅದೆಷ್ಟೋ ಬಾರಿ ಸರಿಯಾಗಿದ್ದುದ್ದನ್ನೂ ತಪ್ಪಾಗಿ ಅರ್ಥಮಾಡಿಕೊಂಡು ಮನಸ್ತಾಪಕ್ಕೆ ದಾರಿಮಾಡಿಕೊಡುತ್ತೇವೆ. ಕುಟುಂಬದಲ್ಲಿ
ಸಂಬಂಧಗಳ ನಡುವೆ ದೀರ್ಘಕಾಲೀನ ಸಮತೋಲನವನ್ನು ಕಾಪಾಡಿಕೊಳ್ಳಬೇಕೆಂದರೆ ಪ್ರೀತಿಯ ಜತೆ ಒಬ್ಬರನ್ನೊಬ್ಬರು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಒಬ್ಬರು ತಪ್ಪು ಮಾಡಿದಾಗ ಇನ್ನೊಬ್ಬರು ಆ ತಪ್ಪನ್ನು ಪದೇಪದೇ ಹಂಗಿಸಿ, ಜೀವನದಲ್ಲಿ ತಾವು ತಪ್ಪೇ ಮಾಡಿಲ್ಲವೇನೋ ಎಂಬ ಅಹಂಕಾರದಲ್ಲಿ ಬೀಗತೊಡಗಿದರೆ ಸಂಬಂಧದಲ್ಲಿ ಬಿರುಕು ಕಾಣಬಹುದು.