Saturday, 12th October 2024

ಪ್ರೇಮ ಜೀವನಕ್ಕೆ ಬೇಕು ಗೆಳೆತನದ ಚುಕ್ಕಾಣಿ

ಹರೀಶ್ ಪುತ್ತೂರು

ಪ್ರೇಮದಲ್ಲಿ ಅಧಿಕಾರ, ಅಹಂಕಾರ ಸುಳಿಯಬಹುದು. ಆದರೆ ಗೆಳೆತನವೆಂಬುದು ಶುದ್ಧ ಕಾಳಜಿ, ನಿರ್ವಾಜ್ಯ ಪ್ರೀತಿಗೆ ದಾರಿ ತೋರುವ ಪರಿಶುದ್ಧ ಬೆಳಕು.

ಪ್ರೀತಿಸುವಾಗ ರಾಧೆಗೂ ಗೊತ್ತಿತ್ತು ಕೃಷ್ಣ ತನಗೆ ಸಿಗುವುದಿಲ್ಲ ಅಂತ. ಆದರೂ ಪ್ರೀತಿಸಿದಳು. ಕೃಷ್ಣ ದ್ವಾರಕೆಯಿಂದ ತನ್ನನ್ನು ಬಿಟ್ಟು ಹೊರಟಾಗಲೂ ಇನ್ನೆಂದಿಗೂ ಅವನು ತಿರುಗಿ ಬರಲಾರ ಎಂದು ಗೊತ್ತಿದ್ದೂ ಸಹ ಜೀವನವಿಡೀ ಅವನ ನೆನಪಿನಲ್ಲಿಯೇ ಉಳಿದಳು.

ಯಾವ ನಿರೀಕ್ಷೆಯೂ ಇಲ್ಲದೇ ಸ್ವಚ್ಛ ಮನಸ್ಸಿನಿಂದ ಪ್ರೀತಿಸಿದ ಕಾರಣ ಇಂದಿಗೂ ಅವರಿಬ್ಬರ ಪ್ರೀತಿ ಎಲ್ಲರಿಗೂ ಆದರ್ಶಪ್ರಾಯವಾಗಿದೆ. ಬರಹ ಗಾರರಿಗೆ ಒಂದಲ್ಲಾ ಒಂದು ದಿನ ಕಾವ್ಯಕ್ಕೆ ವಸ್ತು ಸಿಗದೇ ಹೋಗಬಹುದು. ಆದರೆ ಪ್ರೇಮ ಕವಿಗಳಿಗೆ ಅಂತಹ ಕೊರತೆ ಎದುರಾಗುವುದಿಲ್ಲ. ಏಕೆಂದರೆ ಪ್ರೇಮ ಎನ್ನುವ ಪರಿಭಾಷೆಯೇ ಅಂಥದ್ದು. ಅದು ನಿತ್ಯ ನೂತನ. ಎಷ್ಟು ಬರೆದರೂ ಸವೆಯದು. ಎಷ್ಟು ಕೇಳಿದರೂ ಮತ್ತಷ್ಟು ಕೇಳಬೇಕೆನ್ನುವ
ಆಸಕ್ತಿಯನ್ನು ಪ್ರೇಮ ಕಾವ್ಯಗಳು ಹುಟ್ಟು ಹಾಕುತ್ತವೆ.

ಎಲ್ಲೋ ಹುಟ್ಟಿ ಎಲ್ಲೋ ಬೆಳೆದ ಜೋಡಿಗಳು ಇಂದು ಜೊತೆಯಾಗಿ ಜೀವನ ನಡೆಸುವುದನ್ನು ಕಾಣುತ್ತೇವೆ, ಸಂಸಾರಗಳ ಸಾಗರದಲ್ಲಿ ಅವರಿಬ್ಬರು ಹಾಲು ಜೇನಿನಂತ ಕೂಡಿರುವುದನ್ನು ನೋಡಿ ಸಂತೋಷಪಡುತ್ತೇವೆ. ಈ ಪ್ರೀತ ಒಂಥರ ಸುನಾಮಿ ಇದ್ದಂತೆಯೆ ಸರಿ, ಯಾವಾಗ ಹೇಗೆ ಬೇಕಾದರು ಬಂದು ಅಪ್ಪಳಿಸಬಹುದು. ಇದರ ಹೊಡೆತಕ್ಕೆ ಯಾವುದು ಏನಾಗುವುದೋ ತಿಳಿಯದು. ಗಂಡು ಹೆಣ್ಣಿನ ಪ್ರೀತಿ ಪ್ರೇಮದಲ್ಲಿ ಮೊದಲ ಹೆಜ್ಜೆ ಗುರುತನ್ನು ಪತ್ತೆ ಹಚ್ಚಿದಾಗ ಸಿಗುವುದೇ ಕಣ್ಣು ಕಣ್ಣುಗಳ ಸಮ್ಮಿಲನ.

ಇಲ್ಲಿಂದ ಪಯಣ ಪ್ರಾರಂಭವಾಗುವುದೇ ಸ್ನೇಹದ ಗುಡಿಸಲಿಗೆ, ಅಲ್ಲಿಂದ ಮತ್ತೆ ಮುಂದೆ ಚಲಿಸುವುದೇ ಪ್ರೀತಿಯ ಮೈದಾನಕ್ಕೆ. ನಂತರದ ದಿನಗಳಲ್ಲಿ ಇಬ್ಬರೂ ಜತೆ ಸೇರಿ ಕೈಹಿಡಿದು ನೂರಾರು ಕನಸುಗಳನ್ನು ಹೊತು ಸಾಗುವುದೇ ಪ್ರೇಮದ ಅರಮನೆಗೆ. ಇಲ್ಲಿ ಈ ಜೋಡಿಗಳನ್ನು ನೋಡಿ ಕಣ್ತುಂಬಿ ಕೊಳ್ಳುವ ಸಾವಿರಾರು ಮುಖಗಳಿಂದ ಮೂಡಿ ಬರುವ ಸಂತೋಷವೇ ಈ ಜೋಡಿಗಳಿಗೆ ಹಾರೈಸುವ ಹೂಮಳೆ.

ಬದುಕಿನ ಸಂಜೀವಿನಿ

ಗೆಳೆತನ ಮತ್ತು ಪ್ರೇಮದ ನಡುವಿನ ವಸಂತ ಕಾಲದ ಕಾಳಜಿ, ನಡೆ, ನುಡಿಗಳೆಲ್ಲವೂ ಪರಸ್ಪರ ಮಧುರಾತಿ ಮಧುರವಾಗಷ್ಟೆ ಉಳಿಯುವುದಿಲ್ಲ. ಇಬ್ಬರ ಬದುಕನ್ನು ಪೊರೆಯುವ ಸಂಜೀವಿನಿಯಾಗುತ್ತದೆ. ಮದುವೆಯ ನಂತರದ ದಿನಗಳಲ್ಲೂ ತನ್ನ ಮಾಂತ್ರಿಕತೆಯನ್ನು ಉಳಿಸಿಕೊಂಡು, ಬದುಕನ್ನು ಸಹ್ಯ ಗೊಳಿಸುತ್ತದೆ. ಅದೆಷ್ಟೊ ಮದುವೆಗಳು ಹೆಚ್ಚಿನ ಸಲ ಪ್ರೀತಿಯ ಅಭಾವದಿಂದ ಮುರಿದು ಬೀಳುವುದಿಲ್ಲ. ಗೆಳೆತನದ ಕೊರತೆಯಿಂದ ಮುರಿದು ಬೀಳುತ್ತವೆ.

ಮದುವೆಯ ನಂತರವೂ ಒಂದು ಶುದ್ಧ ಗೆಳೆತನ ಸಾಧ್ಯವಾಗಬೇಕಿದ್ದರೆ, ಗೆಳೆತನ ಪ್ರೇಮದ ಕಡೆಗೆ ಸಾಗುವ ಕಾಲದಲ್ಲಿ ತುಂಬಿಕೊಳ್ಳುವ ಸಂಯಮ
ಸಂಜೀವಿನಿ. ಮದುವೆಯ ನಂತರದ ಕಾಲದಲ್ಲೂ ಒಂದು ಅದ್ಭುತ ಗೆಳೆತನ ಕಟ್ಟಿಕೊಡುತ್ತದೆ. ಪ್ರೀತಿಯ ಅಭದ್ರತೆಯ ಪ್ರಶ್ನೆಗಳಿಗೆಲ್ಲಾ ಗೆಳೆತನ ನಿರಾಳವಾಗಿ ಉತ್ತರಿಸುತ್ತದೆ. ಎದೆಯೊಳಗಿನ ಪ್ರೀತಿಯನ್ನು ಇಷ್ಟದ ಹೃದಯಕ್ಕೆ ದಾಟಿಸಲು ಗೆಳೆತನವೇ ಸೇತುವೆ. ಪ್ರೇಮದಲ್ಲಿ ಅಧಿಕಾರ, ಅಹಂಕಾರ ಸುಳಿಯ ಬಹುದು.

ಗೆಳೆತನವೆಂಬುದು ಶುದ್ಧ ಕಾಳಜಿ, ನಿರ್ವಾಜ್ಯ ಪ್ರೀತಿಗೆ ದಾರಿ ತೋರುವ ಪರಿಶುದ್ಧ ಬೆಳಕು. ದುಂಬಿಯು ಹೂವಿಂದ ಹೂವಿಗೆ ಹಾರಿ ಪರಿಮಳವ
ಬೀರುವುದು, ಅದೇ ರೀತಿ ಜೊತೆ ಜೊತೆಯಾಗಿ ದಿನದಿಂದ ದಿನಕ್ಕೆ ಒಂದೊಂದೇ ಮೆಟ್ಟಿಲನ್ನು ಏರಿದಂತೆ ಜೋಡಿಗಳ ಪಯಣವಿದು. ಈ ಜೋಡಿಯ
ವರುಷಗಳ ಗೆಳೆತನದಲ್ಲಿ ಹೊಸತೊಂದು ಸಂಭ್ರಮ ಕಾಲಿಟ್ಟಿತು. ಹಬ್ಬದ ಸಡಗರಕ್ಕಿಂತ ಮಿಗಿಲಾದುದು ಎನ್ನುವಂತಿತ್ತು ಇವರಲ್ಲಿರು ಸಂಭ್ರಮ.

ಇಷ್ಟು ದಿನಕ್ಕಿಂತ ಹೆಚ್ಚಾಗಿ ಒಬ್ಬರ ಬಗ್ಗೆ ಮತ್ತೊಬ್ಬರಿಗೆ ವಹಿಸುತ್ತಿದ್ದ ಕಾಳಜಿ ಈಗ ಮತ್ತಷ್ಟು ಗಾಢವಾಗತೊಡಗಿತು. ಎಸ್ ಎಂ ಎಸ್ ಮೂಲಕ ಸಂದೇಶ ವಿನಿಮಯ ಹೆಚ್ಚಾಯಿತು. ಮೊಬೈಲ್ ರಿಂಗ್ ಆಗುವುದನ್ನೆ ಕಾಯತೊಡಗಿತು ಮನಸು. ಗೆಳೆತನದ ಗಡಿ ದಾಟಿ ಪ್ರೀತಿಯ ಅರಮನೆಯನ್ನೆ ತಲುಪಿದರು. ಆದರೆ ಪ್ರೇಮ ನಿವೇದನೆಯ ಆವರಣಕ್ಕೆ ಬರಲಾಗದ ಕಾಲಾವಧಿ ಇದೆಯಲ್ಲಾ, ಇದು ಬದುಕಿನ ಅದ್ಭುತವಾದ ಸುಮಧುರ ಸವಿಯ ಕಾಲ. ಆತುರಕ್ಕೆ ಬಿದ್ದರೆ ಕಾಯಿಯನ್ನು ಹಿಚುಕಿ ಹಣ್ಣು ಮಾಡಿದಂತಾಗುತ್ತದೆ.

ಪ್ರೀತಿಯಿಂದ ಪ್ರೀತಿ ಹುಟ್ಟಬೇಕು
ಪ್ರೀತಿ ಪ್ರೀತಿಯಿಂದ ಪಡೆಯಬೇಕು, ಒತ್ತಾಯದಿಂದಲ್ಲ, ನಾ ನಿನ್ನ ಪ್ರೀತಿಸುತ್ತೇನೆ ಅಂತ ಸಾವಿರ ಸಾರಿ ಹೇಳಿದರೆ ಪ್ರೀತಿ ಹುಟ್ಟೋಲ್ಲ, ನಿಜವಾದ ಪ್ರೀತಿ
ಹೇಳಿಕೊಳ್ಳುವುದರಿಂದಲ್ಲ ಅಥವಾ ಪದೇ ಪದೇ ಹೇಳಿಕೊಳ್ಳುವುದರಿಂದ ಬರೋಲ್ಲ ಅದು ಹೃದಯದಲ್ಲಿ ಹುಟ್ಟಿ ಪರಸ್ಪರ ಹೃದಯಗಳ ಜೊತೆ ಮಾತಾಡುತ್ತೆ, ಪ್ರೀತಿ ಎಂಬ ಎರಡಕ್ಷಗಳಲ್ಲಿ ತೇಲಾಡುವ ಜೋಡಿಗಳು ತನ್ನಷ್ಟಕ್ಕೆ ಕಾಲದ ತೆಕ್ಕೆಯಲ್ಲಿ ಮಾಗಿ ಹೂವಿನಂತೆ ಘಮಘಮಿಸುತ್ತವೆ. ಇವರ ಪ್ರೀತಿ ಕಾಲಿಗೆ ತೊಡಿಸಿದ ಗೆಜ್ಜೆಯಂತೆ ಸದ್ದು ಮಾಡುತ್ತದೆ, ಅದು ಭವಿಷ್ಯದಲ್ಲಿನ ಬದುಕನ್ನು ಒಪ್ಪ ಓರಣವಾಗಿಸಿಕೊಳ್ಳಲು, ಇವತ್ತಿನಿಂದಲೇ ಇಬ್ಬರನ್ನು ತಯಾರು ಮಾಡುತ್ತದೆ.

ಒಬ್ಬರ ಮನಸ್ಥಿತಿಯನ್ನು ಮತ್ತೊಬ್ಬರು ಮಾತಿನ ಹಂಗಿಲ್ಲದೇ ಅರಿತುಕೊಳ್ಳುವ ಪ್ರೌಢತೆ ಬಂದು ನೆಲಸುತ್ತದೆ. ಇಬ್ಬರ ಅಂತರಾಳದ ನಿರೀಕ್ಷೆಗಳು ಒಂದಕ್ಕೊಂದು ಪರಸ್ಪರ ಢಿಕ್ಕಿ ಹೊಡೆಯದೆ,ಒಂದಕ್ಕೊೊಂದು ಕೈ ಜೋಡಿಸಿ ಜತೆಯಾಗಿ ನಡೆಯುತ್ತವೆ. ನಿರೀಕ್ಷೆಗೂ ಮೀರಿದ ಸಂತೋಷಕ್ಕೆ
ಕರೆದೊಯ್ಯುತ್ತದೆ, ಒಂದು ಗೆಳತನಕ್ಕೆೆ ಸಾವಿರ ಮೆಟ್ಟಿಲಿನ ನಂತರವೇ ಪ್ರೆೆಮದ ಗುಡಿ ಕಾಣುತ್ತದೆ. ಗೆಳೆತನ ನೇರವಾಗಿ ಪ್ರೀತಿಯತ್ತ ಹಾರಿದರೆ ಪ್ರೀತಿ ನೇರವಾಗಿ ಪ್ರೇಮದತ್ತ ಪಯಣಿಸುತ್ತದೆ. ಆದರೆ ಸ್ನೇಹವೆಂಬ ಶಕ್ತಿ ಇರದೆ, ಯಾವ ಪ್ರೀತಿ ಪ್ರೇಮವೂ ದೀರ್ಘಕಾಲ ಉಳಿಯದು.

ಸ್ನೇಹದ ದೋಣಿ ಮುಳುಗಿದರೆ, ಪ್ರೀತಿಯ ಬದುಕಿನಲ್ಲಿ ಒಂದು ಕಾರ್ಮೋಡ ತುಂಬಿದ ಅಪರಾತ್ರಿ ಆವರಿಸುತ್ತದೆ. ಅಲ್ಲಿ ಕರ್ಕಶ ಗುಡುಗು, ಸಿಡಿಲುಗಳು
ವಾತಾವರಣವನ್ನು ಅಲ್ಲೋಲ ಕಲ್ಲೋಲ ಮಾಡುತ್ತವೆ. ಅನೀರ್ವಚನೀಯ ಅನುಭವವಾಗ ಬೇಕಿದ್ದ ಮನೋಕೋಶವು ನಿರ್ವಾತವಾಗಿ ಖಾಲಿ ಖಾಲಿ ಉಳಿಯುತ್ತದೆ. ಸ್ನೇಹದ ಬಲವಿಲ್ಲದ ಪ್ರೇಮವು, ಚುಕ್ಕಾಣಿ ಇಲ್ಲದ ದೋಣಿಯಂತೆ ನಡು ನೀರಿನ ಸುಳಿಗೆ ಸಿಲುಕಿ ಒದ್ದಾಡುತ್ತದೆ.

ಪ್ರೀತಿಯು ಸ್ಕೂಟರ್ ಎನಿಸಿದರೆ, ಗೆಳೆತನವು ಅದಕ್ಕೆ ಹಾಕುವ ಪೆಟ್ರೋಲ್. ಸ್ನೇಹದ ಪೆಟ್ರೋಲ್ ಇಲ್ಲದೆ ಪ್ರೇಮ ವಾಹನವು ಮುಂದಕ್ಕೆ ಚಲಿಸಲಾರದು, ಚಲಿಸಿದರೂ ಇಳಿಜಾರಿನಲ್ಲಿ ಚಲಿಸುವ ವಾಹನದಂತೆ ಅಡ್ಡಾದಿಡ್ಡಿಯಾಗಿ ಓಡಾಡೀತು. ಆದ್ದರಿಂದ, ಪ್ರೇಮ ತುಂಬಿದ ಬದುಕು ಹಸನಾಗಿ ಬೆಳಗಬೇಕಾದರೆ, ಅಲ್ಲಿ ಇರಲಿ ಸ್ನೇಹದ ಒರತೆ, ಗೆಳೆತನದ ತುಡಿತ. ಆಗಲೇ ಪ್ರೀತಿಗೆ ಒಂದು ಅರ್ಥ ದೊರೆಯುತ್ತದೆ, ಪ್ರೇಮವು ಪ್ರಚ್ಛನ್ನವಾಗಿ, ಬಾಳನ್ನು ಹರಸುತ್ತದೆ.