Sunday, 13th October 2024

ಗ್ರಾಮೀಣ ಪ್ರದೇಶದಲ್ಲಿ ಮಲ್ಲಮ್ಮನ ಪವಾಡ

ಸುರೇಶ ಗುದಗನವರ

ಕರಕುಶಲ ವಸ್ತುಗಳನ್ನು ಗ್ರಾಮೀಣ ಮಹಿಳೆಯರಿಂದ ತಯಾರಿಸಿ, ವಿದೇಶಗಳಿಗೆ ರಫ್ತು ಮಾಡಿದ ಸಾಧನೆಯ ಜತೆಯಲ್ಲೇ, ಮಹಿಳೆಯರ ಅಭಿವೃದ್ಧಿಗಾಗಿ
ಸಹಕಾರಿ ಬ್ಯಾಂಕ್ ಸ್ಥಾಪನೆ ಮಾಡಿದ ಈ ಮಹಿಳೆಯ ಸಾಧನೆ ಅನುಪಮ.

ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಲ್ಲಳು. ಇಂದು ಸಮಾಜದಲ್ಲಿ ಕೆಲ ದಿಟ್ಟ ಮಹಿಳೆಯರು ಕಟ್ಟುಪಾಡುಗಳಿಂದ ಹೊರಬಂದು ಕಾರ್ಯ ಕ್ಷೇತ್ರ ವನ್ನು ವಿಶಾಲಗೊಳಿಸಿಕೊಂಡಿದ್ದಾರೆ. ಹಾಗೆಯೇ ವಿಜಯಪುರದ ಗ್ರಾಮೀಣ ಮಹಿಳೆ ಮಲ್ಲಮ್ಮ ಯಾಳವಾರ ದಿಟ್ಟತನದಿಂದ ತಮ್ಮ ಸಾಧನೆಯನ್ನು ನಿರೂಪಿಸಿ ಸಮಾಜಕ್ಕೆ ಮಾದರಿ ಮಹಿಳೆಯಾಗಿದ್ದಾರೆ.

ಮೂಲತಃ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ತಿಳಗೂಳ ಗ್ರಾಮದ ಕುಟುಂಬವೊಂದರಲ್ಲಿ ಮಲ್ಲಮ್ಮ ಜನಿಸಿದರು. ತಂದೆ ಭೀಮಪ್ಪ, ತಾಯಿ ರಾಮವ್ವ. ಇಬ್ಬರೂ ಅನಕ್ಷರಸ್ಥರು. ಹನ್ನೊಂದು ಮಕ್ಕಳ ಕುಟುಂಬದ ಒಂಬತ್ತು ಹೆಣ್ಣು ಮಕ್ಕಳಲ್ಲಿ ಕಿರಿಯವಳಾದ ಮಲ್ಲಮ್ಮನಿಗೆ ಬಡತನದ ಬಿಸಿ ತಟ್ಟಿತ್ತು. ಆದರೆ ತಾಯಿ ರಾಮವ್ವನಿಗೆ ಮಲ್ಲಮ್ಮನ ಮೇಲೆ ವಿಶೇಷ ಕಾಳಜಿ. ಮಲ್ಲಮ್ಮ ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಮುಗಿಸಿದರು. 8ನೆಯ ತರಗತಿಗೆ ಸಮೀಪದ ಕಲಕೇರಿ ಪ್ರೌಢಶಾಲೆಗೆ ಹೋದರು.

ಮಲ್ಲಮ್ಮ ದಿನವೂ ನಾಲ್ಕು ಕಿ. ಮೀ. ನಡದೆ ಹೋಗಬೇಕಾಗುತ್ತಿತ್ತು. ನಿರ್ಜನ ರಸ್ತೆಯಲ್ಲಿ ಸಂಚರಿಸುವ ಭಯದಿಂದ ಮಲ್ಲಮ್ಮ ಓದುವದನ್ನು ನಿಲ್ಲಿಸುವ ತೀರ್ಮಾನಕ್ಕೆ ಬಂದರು. ಆದರೂ ತಾಯಿಯವರ ಮತ್ತು ತನ್ನೂರಿನ ಗುರುಗಳ ಪ್ರೇರಣೆಯಿಂದ ವಿಜಯಪುರದ ಪಿಡಿಜೆ ಪ್ರೌಢಶಾಲೆಗೆ ಹೆಸರನ್ನು ನೊಂದಾಯಿಸಿ ದರು. ಮಲ್ಲಮ್ಮ ಯಶಸ್ವಿಯಾಗಿ ಮೆಟ್ರಿಕ್ ಪೂರ್ಣಗೊಳಿಸಿದ ನಂತರ 1983ರಲ್ಲಿ ಬಿ.ಕಾಂ. ಪದವಿಯನ್ನು ಪಡೆದುಕೊಂಡರು.

ಸ್ವಯಂಸೇವೆ
ಮಲ್ಲಮ್ಮ ಬಿ.ಕಾಂ.ದಲ್ಲಿ ಅಭ್ಯಸಿಸುತ್ತಿರುವಾಗ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕಿಯಾಗಿ ಹಳ್ಳಿಗಳಲ್ಲಿಯ ಸ್ಥಿತಿಯಿಂದ ಮನಪರಿವರ್ತನೆಗೆ ಗುರಿಯಾದರು. 19865ರಲ್ಲಿ ಅವರು ಗ್ರಾಮೀಣ ಬ್ಯಾಂಕಿನ ಹುದ್ದೆಗೆ ಆಯ್ಕೆಯಾದರೂ ಅದನ್ನು ಸ್ವೀಕರಿಸದೇ ಗ್ರಾಮೀಣ ಮಹಿಳೆ ಯರ ಉನ್ನತಿಗಾಗಿ 1986ರಲ್ಲಿ ಸಬಲ ಸಂಸ್ಥೆಯನ್ನು ಪ್ರಾರಂಭಿಸಿದರು. ಅವರೀಗಾಗ ಕೇವಲ ೨೪ ವಯಸ್ಸು. ಆರ್ಥಿಕವಾಗಿ ಸದೃಢವಾಗಿರದಿದ್ದರೆ ಮಹಿಳೆಯ ರನ್ನು ಸಬಲೀಕರಣ ಮಾಡುವದು ಸಾಧ್ಯವಿಲ್ಲವೆಂದು ಅವರು ತಿಳಿದುಕೊಂಡರು. ಅವರು ವಿಜಯಪುರದ ಜಿಲ್ಲೆಯ ಹಳ್ಳಿಗಳಲ್ಲಿ ಪ್ರಚಲಿತವಿದ್ದ ಬಂಜಾರ ಕಲೆಗೆ ಹೊಸ ರೂಪ ನೀಡುವ ಪಣತೊಟ್ಟರು.

ಮಹಿಳೆಯರಿಗೆ ತರಬೇತಿ

ಲಂಬಾಣಿ ತಾಂಡಾಗಳಲ್ಲಿಯ ಲಂಬಾಣೀ ಮಹಿಳೆಯರನ್ನು ಭೇಟಿ ಮಾಡಿ, ಅವರ ಮನವೊಲಿಸಿ ಕೆಲವು ಮಹಿಳೆಯರನ್ನು ಆಯ್ಕೆ ಮಾಡಿದರು. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ ಸಂಸ್ಥೆಗಳ ವಿನ್ಯಾಸಕರಿಂದ ಲಂಬಾಣಿ ಮಹಿಳೆಯರಿಗೆ ತರಬೇತಿ ನೀಡಲು ಪ್ರಾರಂಭಿಸಿದರು. ಮಲ್ಲಮ್ಮ ಸ್ವತಃ ವಿನ್ಯಾಸವನ್ನು ಕಲಿತದ್ದಲ್ಲದೇ ಅವರ ಮಗಳು ತೇಜಸ್ವಿನಿ ನಿಫ್ಟ್ನಿಂದ ತರಬೇತಿ ಪಡೆದಿದ್ದಾರೆ. ಕರಕುಶಲಗಳಾದ ಕಸೂತಿ, ಆಭರಣ ತಯಾರಿಕೆ, ಪ್ಯಾಚ್ ವರ್ಕ, ಮಿರರ್ ಕಸೂತಿ, ಬ್ಲಾಕ್ ಪ್ರಿಂಟಿಂಗ್ ಮುಂತಾದ ಕರಕುಶಲ ವಸ್ತುಗಳು ಮತ್ತು ಉತ್ಪನ್ನಗಳನ್ನು ದೇಶದ ವಿವಿಧ
ಭಾಗಗಳಲ್ಲಿ ಮಾರಾಟ ಮಾಡತೊಡಗಿದರು.

ಅವರು ಕೆಲವೇ ವರ್ಷಗಳಲ್ಲಿ ಯು.ಎಸ್.ಎ. ಸ್ಪೇನ್, ಇಟಲಿ ಮತ್ತು ಫ್ರಾನ್ಸ್ ದೇಶಗಳಿಗೆ ಕರಕುಶಲ ವಸ್ತುಗಳನ್ನು ರಫ್ತು ಮಾಡುವಲ್ಲಿ ಯಶಸ್ವಿಯಾದರು. ಅವರು ಕರಕುಶಲ ವಸ್ತುಗಳ ರಫ್ತು ಪ್ರಚಾರ ಮಂಡಳಿಯ ಸದಸ್ಯರಾಗಿ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರದರ್ಶನಗಳಲ್ಲಿ ಭಾಗವಹಿಸುತ್ತಿದ್ದಾರೆ. 1995 ರಿಂದ ಈ ವಹಿವಾಟು ನಡೆದಿದ್ದು, ಅಂದಾಜು 15 ಕೋಟಿ ರೂ. ಅಧಿಕ ಮೌಲ್ಯದ ವಸ್ತುಗಳನ್ನು ಸಬಲಾ ಸಂಸ್ಥೆಯಿಂದ ಮಾರಲಾಗಿದೆ. ವಿದೇಶಿಗರು ಬಂಜಾರಾ ಕಲೆಗೆ ಮಾರು ಹೋಗಿರುವದು ವಹಿವಾಟಿನಿಂದಲೇ ತಿಳಿಯುತ್ತದೆ. ಸಬಲ ಸ್ವಯಂ ಸೇವಾ ಸಂಸ್ಥೆಯು ವಿಜಯಪುರ ಜಿಲ್ಲೆಯ ಮೂರು ತಾಲ್ಲೂಕಗಳಲ್ಲಿನ ೪೦ ಗ್ರಾಮ ಗಳಲ್ಲಿ ಮತ್ತು 9 ತಾಂಡಾಗಳಲ್ಲಿ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಈ ಸಂಸ್ಥೆಯ ವಿಧವೆಯರು, ನಿರ್ಗತಿಕರು, ಬುಡಕಟ್ಟು ಮತ್ತು ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಯಶಸ್ವಿಯಾಗಿ ಪುನರ್ವಸತಿ ಕಲ್ಪಿಸಿದೆ.

ಬ್ಯಾಂಕ್ ಸ್ಥಾಪನೆ
ಮಲ್ಲಮ್ಮನವರು ಬಡ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುವ ನಿಟ್ಟಿನಲ್ಲಿ ಚೈತನ್ಯ ಮಹಿಳಾ ಬ್ಯಾಂಕನ್ನು 1995ರಲ್ಲಿ ಸ್ಥಾಪಿಸಿದರು. 50 ಸಾವಿರ ಶೇರು ಬಂಡವಾಳದೊಂದಿಗೆ ಪ್ರಾರಂಭಿಸಿದ ಮಲ್ಲಮ್ಮ ಇಂದು 60 ಕೋಟಿ ರುಪಾಯಿಗಳ ದುಡಿಯುವ ಬಂಡವಾಳವನ್ನು ಹೊಂದಿ ಪ್ರಗತಿಪಥದಲ್ಲಿ ಮುನ್ನಡೆ ದಿದ್ದಾರೆ. ಪ್ರಸ್ತುತ ನಾಲ್ಕು ಶಾಖೆಗಳನ್ನು ಹೊಂದಿರುವ ಬ್ಯಾಂಕು 10000ಕ್ಕಿಂತ ಹೆಚ್ಚಿನ ಮಹಿಳಾ ಸದಸ್ಯರನ್ನು, 50000ಕ್ಕಿಂತ ಹೆಚ್ಚಿನ ಗ್ರಾಹಕರನ್ನು ಹೊಂದಿದೆ.

ಸಬಲಾ ಸಂಸ್ಥೆಯ 300ಕ್ಕೂ ಹೆಚ್ಚು ಸ್ವ-ಸಹಾಯ ಗುಂಪುಗಳು ಚೈತನ್ಯ ಬ್ಯಾಂಕಿನೊಂದಿಗೆ ವಹಿವಾಟು ನಡೆಸುತ್ತಿವೆ. ಚೈತನ್ಯ ಮಹಿಳಾ ಬ್ಯಾಂಕ್ 2  ಸಾವಿರ ದಿಂದ ಹಿಡಿದು 50 ಲಕ್ಷದವರೆಗೂ ಮಹಿಳೆಯರಿಗೆ ಸಾಲ ನೀಡಿ ಸ್ವಾವಲಂಬಿಗಳನ್ನಾಗಿ ಮಾಡುವಲ್ಲಿ ಯಶಸ್ಸು ಸಾಧಿಸಿದೆ. ಪತಿ ಶಿವಾನಂದ ಅವರ ನೆರವಿ ನೊಂದಿಗೆ ಗೀತಾಂಜಲಿ ಮಾದರಿ ಶಾಲೆಯನ್ನು ಮಲ್ಲಮ್ಮ ಪ್ರಾರಂಭಿಸಿದ್ದಾರೆ.

ಲಂಬಾಣಿ ತಾಂಡಾದ ಸೋನಿ ಬಾಯಿ ಜಾಧವ ಅವರು ಸಬಲಾ ಸಂಸ್ಥೆಯಿಂದ ಮತ್ತು ಚೈತನ್ಯ ಮಹಿಳಾ ಬ್ಯಾಂಕಿನಿಂದ ನಮ್ಮ ಮಹಿಳೆಯರಿಗೆ ಬಹಳ ಉಪಯೋಗವಾಗಿದೆ. ಸಬಲಾ ಸಂಸ್ಥೆಯವರು ನಮಗೆಲ್ಲ ಮನೆ ನಿರ್ಮಿಸಿ ಕೊಟ್ಟಿದ್ದಾರೆ. ನಾನು ದಕ್ಷಿಣ ಆಫ್ರಿಕಾ, ಮುಂಬೈ, ಕೋಲ್ಕತ್ತಾ, ನವದೆಹಲಿ
ಸೇರಿದಂತೆ ನಾನಾ ಕಡೆಗೆ ಈ ಸಂಸ್ಥೆಯಿಂದ ತರಬೇತಿ ಮತ್ತು ವಸ್ತು ಪ್ರದರ್ಶನಗಳಲ್ಲಿ ಭಾಗಿಯಾಗಿದ್ದೇನೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ. ಅವರು ದೇವದಾಸಿ ಪದ್ಧತಿ ವಿರುದ್ಧದ ಹೋರಾಟದಲ್ಲಿ ಬೆದರಿಕೆ ಬಂದರೂ ಜಗ್ಗದೆ ಗಟ್ಟಿಯಾಗಿ ನಿಂತು, ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕಾಯಕದಲ್ಲಿ ಯಶಸ್ವಿಯಾಗಿದ್ದಾರೆ.

ಡಾ. ಮಲ್ಲಮ್ಮನವರ ಜೀವನ ಮತ್ತು ಸಾಧನೆಯನ್ನು ಕುರಿತು ವಿನಯ ಬಿರಾದಾರ ಅವರು ‘ಡೆಫೈಂಗ್ ಡಿಕ್ಟಿಮ್’ ಎಂಬ ಕೃತಿಯನ್ನು ಪ್ರಕಟಿಸಿದ್ದಾರೆ. ಡಾ. ಮಲ್ಲಮ್ಮ ಯಾಳವಾರ ಅವರು ಮಹಿಳೆಯರಿಗಾಗಿ ಕಟ್ಟಿ ಬೆಳೆಸಿದ ಸಬಲಾ ಸಂಸ್ಥೆ ಮತ್ತು ಮಹಿಳಾ ಚೈತನ್ಯ ಬ್ಯಾಂಕುಗಳ ಯಶೋಗಾಥೆ ಯಾವ ಪವಾಡಕ್ಕೂ ಕಡಿಮೆಯಿಲ್ಲ. ಗ್ರಾಮೀಣ ಮಹಿಳೆಯೊಬ್ಬರು ತಾವು ಯಾರಿಗೂ ಕಡಿಮೆ ಇಲ್ಲವೆಂದು ಇರುವ ಊರಿನಲ್ಲಿಯೇ ಸ್ವಾವಲಂಬನೆಯ ಜೊತೆಗೆ ನೂರಾರು ಮಹಿಳೆ ಯರಿಗೆ ಉದ್ಯೋಗ ಕೊಟ್ಟು ಜೀವನೋಪಾಯಕ್ಕೆ ದಾರಿಯಾಗಿರುವುದು ಅನುಕರಣೀಯ.

ಗೌರವ ಡಾಕ್ಟೊರೇಟ್
ಮಲ್ಲಮ್ಮ ಯಾಳವಾರ ಅವರ ಸೇವೆಯನ್ನು ಗುರುತಿಸಿ ನಾಡಿನ ಸಂಘ-ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ. ಅವರನ್ನು ಶ್ರೀಲಂಕಾದ ಕೋಲಂಬೊ ವಿಶ್ವ ವಿದ್ಯಾಲಯ ಮತ್ತು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ನೀಡಿ ಗೌರವಿಸಿವೆ. ಅಲ್ಲದೇ ಸರ್ಕಾರದ ಕಿತ್ತೂರ ರಾಣಿ ಚೆನ್ನಮ್ಮ ಪ್ರಶಸ್ತಿ, ಜಾನಕಿದೇವಿ ಬಜಾಜ ಪುರಸ್ಕಾರ, ವೀರ ವನಿತೆ, ಆರ‍್ಯಭಟ, ವರ್ಷದ ಕನ್ನಡಿಗ ಮುಂತಾದ ಹಲವಾರು ಪ್ರಶಸ್ತಿ-ಪುರಸ್ಕಾರಗಳಿಗೆ ಅವರು ಭಾಜನರಾಗಿದ್ದಾರೆ.