Saturday, 14th December 2024

ಬಾಲು ಮಾಡಿಸಿದ ಮದುವೆ !

ಮೇರು ಗಾಯಕ ಬಾಲಸುಬ್ರಹ್ಮಣ್ಯಂ ಅವರು ಹಾಡಿದ ಮಧುರವಾದ ಹಾಡುಗಳು, ಇವರಿಬ್ಬರ ಮದುವೆಗೆ ನಾಂದಿ ಹಾಡಿತು!

ಡಾ ಕೆ.ಎಸ್.ಚೈತ್ರಾ

ತೇ ರೆ ಮೇರೆ ಬೀಚ್ ಮೆ ಕೈಸಾ ಹೈ ಯೆ ಬಂಧನ್ ಅಂಜಾನಾ… ಕಾಲೇಜ್ ಡೇ ದಿನ ಆತ ಹಾಡುತ್ತಿದ್ದರೆ ನಾವೆಲ್ಲಾ ಬೆರಗಾಗಿದ್ದೆವು. ತೊಂಬತ್ತರ ದಶಕ, ಕಾಲೇಜಿನ ಸೊಗಸಿನ-ಹೊಂಗನಸಿನ ದಿನಗಳು. ಹರೆಯ ಉಕ್ಕುತ್ತಿತ್ತು, ಹೊಸ ಹೊಸ ಭಾವಗಳು.

ಕಾರಣವಿಲ್ಲದ ನಗು, ಹುಸಿಮುನಿಸು, ಕೆನ್ನೆ ಕೆಂಪೇರುವಿಕೆ ಎಲ್ಲದಕ್ಕೂ ಜತೆಯಾಗಿದ್ದು ಬಾಯಲ್ಲಿ ಗುನುಗುನಿಸುತ್ತಿದ್ದ  ಹಾಡು ಗಳು. ಹೀಗೆ ವಯಸ್ಸು ಮನಸ್ಸು ಎರಡರ ಪ್ರಭಾವದಿಂದ ಇಡೀ ಲೇಡಿಸ್ ಹಾಸ್ಟೆಲ್ಲಿನಲ್ಲೆಲ್ಲಾ ಹಾಡುವವರೇ! ಅದರ ನಡುವೆ ಇದ್ದವಳು ಒಬ್ಬಳೇ ನಿಜವಾದ ಸಂಗೀತಾಭಿಮಾನಿ ಲೀನಾ. ಸಿನಿಮಾ ಹಾಡು ಎಂದರೆ ಪಂಚಪ್ರಾಣ. ಅದರಲ್ಲೂ ಎಸ್.ಪಿ.ಬಾಲ ಸುಬ್ರಹ್ಮಣ್ಯಂ ಎಂದರಾಯಿತು. ಸ್ವಲ್ಪ ಗುಂಡಗಿದ್ದ ಬಾಲು ಸರ್ ಅನ್ನು ‘ಗುಂಡು’ ಎಂದೇ ಕರೆಯುವಷ್ಟು ಅಭಿಮಾನ -ಪ್ರೀತಿ.

ಅವಳ ರೂಮಿನಲ್ಲಿದ್ದುದು ಅಪ್ಪ ಅಮ್ಮ, ದೇವರ ಫೋಟೋ ಜತೆ ಗುಂಡು ಫೋಟೋ. ಅವರನ್ನು ನೋಡಿಲ್ಲ, ಮಾತಾಡಿಲ್ಲ, ಸಂಬಂಧಿಕರಲ್ಲ, ಪರಿಚಯವೂ ಇಲ್ಲ, ಆದರೂ ತಮ್ಮದು ಜನ್ಮಜನ್ಮಾಂತರದ ಸಂಬಂಧ ಎಂಬ ದೃಢವಾದ ನಂಬಿಕೆ ಬೇರೆ. ಲೀನಾಳ ಈ ಅಭಿಮಾನ ಗೊತ್ತಿದ್ದ ಗೆಳತಿಯರು ಆಕೆಗೆ ‘ಗುಂಡುಲೀನಾ’ ಎಂದು ತಮಾಷೆ ಮಾಡಿದರೂ ಆಕೆಗೆ ಹೆಮ್ಮೆಯೇ ಆಗಿತ್ತು. ಹೀಗಿದ್ದ ಲೀನಾ, ಕಾಲೇಜ್‌ಡೇ ದಿನ ಬಿದ್ದುಹೋದಳು… ಪ್ರೀತಿಯೆಂಬ ಮಾಯೆಯಲ್ಲಿ!

ಏಕ್ ದೂಜೆ ಕೆ ಲಿಯೆ

ಆತ, ನಮ್ಮ ಸೀನಿಯರ್ ಉತ್ತರ ಭಾರತೀಯ, ಬಲರಾಮ್. ತನ್ನಷ್ಟಕ್ಕೆ ತಾನಿದ್ದ ಗಂಭೀರ ಹುಡುಗ. ಆದಿನ ಎಲ್ಲರ ಒತ್ತಾಯಕ್ಕೆ ಹಾಡನ್ನು ಹಾಡಿದ್ದ. ತುಂಬುಕಂಠದ ಬಾಲು ಸರ್ ಹಾಗೇ ಭಾವಪೂರ್ಣ ಗಾಯನ. ಆತ ಹಾಡಬಹುದು ಎಂಬ ಅಂದಾಜೇ ಇರದ ಎಲ್ಲರಿಗೂ ಆಶ್ಚರ್ಯ. ಬರೀ ಗಾರ್ದಭ ಗಾಯನ ಕೇಳಿ ಬೇಸತ್ತಿದ್ದ ನಮ್ಮ ಲೀನಾಳಂತೂ ಪ್ರೇಮದಲ್ಲಿ ಬಿದ್ದಳು, ಅಲ್ಲ ಮುಳುಗಿ ದಳು. ಸ್ವಲ್ಪ ದಪ್ಪಗಿದ್ದ ಬಲರಾಮ್‌ನಲ್ಲಿ ಆಕೆಗೆ ಬಾಲಸುಬ್ರಹ್ಮಣ್ಯಂ ಹೋಲಿಕೆಯೂ ಕಾಣತೊಡಗಿತು. ‘‘ಬಾಲು, ಬಲ ಎಲ್ಲಾ ಒಂದೇ’’ ಎನ್ನತೊಡಗಿದಳು. ನಮಗೆ ಪ್ರೇಮ ಕುರುಡು ಎನ್ನುವುದು ಸ್ವಲ್ಪ ಅರಿವಾಗಿತ್ತು. ಬಲರಾಮನಿಗೆ ಬಯಸದ ಭಾಗ್ಯ
ತಾನಾಗಿ ಒಲಿದಿತ್ತು. ಅಂತೂ ಹಾಡುಗಳ ನಡುವೆ ಇಬ್ಬರ ಸ್ನೇಹ ಏಕ್ ದೂಜೆ ಕೆ ಲಿಯೆ ಎನ್ನುವ ಹಂತ ಮುಟ್ಟಿತು.

ಇದೆಲ್ಲದರ ನಡುವೆ ಲೀನಾಳ ಹುಟ್ಟುಹಬ್ಬ ಬಂದಾಗ ನಡೆದಿದ್ದು ದೊಡ್ಡ ಕತೆ. ಲೀನಾಳಿಗೆ ಆ ದಿನ ಅವಳಿಷ್ಟದ ಹಾಡು ಹಾಡಿ ತನ್ನ ಪ್ರೇಮ ನಿವೇದನೆ ಮಾಡಬೇಕೆಂಬುದು ಬಲರಾಮನ ಪ್ಲಾನು. ಅಲ್ಲಿಯವರೆಗೆ ಹಿಂದಿ ಹಾಡು ಹಾಡುತ್ತಿದ್ದವನು ಹೇಗೋ ಮಾಡಿ ಆಟೋ ರಾಜ ಸಿನಿಮಾದ ಬಾಲು ಸರ್ ಹಾಡಿದ ನನ್ನ ಆಸೆ ಹಣ್ಣಾಗಿ, ನನ್ನ ಬಾಳ ಕಣ್ಣಾದೆ ಹಾಡನ್ನು ಪ್ರಾಕ್ಟೀಸ್
ಮಾಡಿದ್ದ. ಆ ದಿನ ಸಂಜೆ ಕೇಕ್ ಕಟ್ಟಿಂಗ್ ಎಲ್ಲಾ ಆದ ಮೇಲೆ ಈತ ಹಾಡಿದ್ದೇನೋ ಸರಿ; ಆದರೆ ಅದೇ ನಾಯಿತೋ ಗೊತ್ತಾಗ ಲಿಲ್ಲ.

ಮರುದಿನದಿಂದ ಬಲ ರಾಮ್ ಎಂದರೆ ಲೀನಾಳಿಗೆ ಅಸಹನೆ. ಅವನಂತೂ ಪೆಚ್ಚುಮುಖ ಮಾಡಿ ನಾನು ಫುಲ್ ಸೆಂಟಿ ಆಗಿ
ಹಾಡಿದ್ದೆ. ಲೀನಾಳಿಗೆ ಇಂಪ್ರೆಸ್ ಆಗಲೆಂದು ಕಣ್ಣು ಬೇರೆ ಮುಚ್ಚಿದ್ದೆ. ಈ ಲೀನಾ ಹಾಡು ಮುಗಿದಿದ್ದೇ ಎದ್ದು ಹಾಸ್ಟೆಲ್ಲಿಗೆ ಹೋಗಿಬಿಟ್ಟಳು. ಈಗ ಮಾತಾಡುತ್ತಿಲ್ಲ ಎಂದು ಗೋಳಾಡಿದ.

ಕೈಕೊಟ್ಟ ಕನ್ನಡ
ಅಂತೂ ನಿಧಾನವಾಗಿ ಲೀನಾ ಬಾಯ್ಬಿಟ್ಟಳು. ಇವನು ನನ್ನ ಬರ್ತ್‌ಡೇ ದಿನ ಗುಂಡುವಿನ ಹಾಡನ್ನು ಶುರು ಮಾಡಿದ್ದು ಎಷ್ಟು ಖುಷಿಯಾಗಿತ್ತು. ಆದರೆ ಹಾಡಿದ್ದು ‘ನನ್‌ನ್‌ ಆಸೆ ಹನ್ನಾಗಿ, ನನ್‌ನ್‌ ಬಾಲ ಕನ್ನಾಗಿ’ ಅಂತ. ಅವನನ್ನು ಪ್ರೀತಿಸುವುದಿರಲಿ, ಕೊಲೆ ಮಾಡೋಣ ಅನ್ನಿಸಿಬಿಡ್ತು. ಪೂರ್ತಿ ನನ್ನ ಮೂಡ್ ಹಾಳಾಗಿಹೋಯ್ತು. ವೇಸ್ಟ್ ಫೆಲೋ ಅಂತಾ ಸಿಕ್ಕಾಪಟ್ಟೆ ಬೇಸರ ಮತ್ತು ಸಿಟ್ಟಿನಿಂದ ಹೇಳಿದಳು. ಪಾಪದ ಹುಡುಗ ಬಲರಾಮ ಈ ಸುದ್ದಿ ಕೇಳಿದ್ದೇ ನಡುಗಿಹೋದ…

ಕನ್ನಡ್ ಹಾಡಲು ಹೋಗಿ ಕೊಲೆಯಾಗಿಬಿಟ್ರೆ ಎಂದು ಹೆದರಿಕೆಯಾಗಿದ್ದು ಸಹಜವೇ. ಒಂದೆರಡು ವಾರ ಅವಳ ಸುದ್ದಿಗೇ ಹೋಗ ಲಿಲ್ಲ. ಆದರೂ ದಿಲ್ ದೀವಾನಾ, ಬಿನ್ ಸಜನಾಕೆ ಮಾನೇನಾ ಅಂತ ಬಾಲು ಹಾಡಿದ್ದು ಸುಳ್ಳಲ್ಲವಲ್ಲ! ನಿಧಾನಕ್ಕೆ ಚೇತರಿಸಿ ಕೊಂಡು ಸ್ನೇಹಿತರ ಸಲಹೆಯಂತೆ ಮರಳಿ ಪ್ರೇಮವನ್ನು ಪಡೆಯುವ ಪ್ರಯತ್ನ ಮತ್ತೆ ನೆರವಿಗೆ ನಿಂತದ್ದು ಬಾಲುವೇ! ಅಂತೂ ಒಂದು ವಾರ ಒಂದೇ ಹಾಡನ್ನು ಊಟ, ಓದು, ನಿದ್ದೆ ಎಲ್ಲಾ ಬಿಟ್ಟು ಹಾಡಿ ಹಾಡಿ ಪ್ರಾಕ್ಟೀಸ್ ಮಾಡಿದ್ದೇ ಮಾಡಿದ್ದು. ಕಡೆ ಗೊಂದು ದಿನ ಕ್ಲಾಸ್ ಮುಗಿದ ಮೇಲೆ ಎಲ್ಲರೆದುರು ಹಾಡಲು ನಿಂತೇಬಿಟ್ಟ.

ಮುಖ ಕೆಂಪಾಗಿತ್ತು, ಸಿಕ್ಕಾಪಟ್ಟೆ ಬೆವರು. ಅವನಷ್ಟೇ ಅಲ್ಲ, ನಮಗೂ ಸಿಕ್ಕಾಪಟ್ಟೆ ಟೆನ್ಷನ್. ಏನಾದರಾಗಲಿ ಕಣ್ಣು ಮುಚ್ಚಬೇಡ ಎಂದು ಎಚ್ಚರಿಸಿದ್ದೆವು, ಅಕಸ್ಮಾತ್ ಇವನು ತಪ್ಪಾಗಿ ಹಾಡಿ ಲೀನಾ ಏನಾದರೂ ಮಾಡಿದರೆ ಓಡಲಾದರೂ ಆದೀತು ಎಂಬ ದೂರಾಲೋಚನೆ ನಮ್ಮದು. ಆಕೆ ಹೊರಟು ನಿಂತವಳು ಇವನ ದನಿ ಕೇಳಿ ನಿಧಾನಿಸಿದಳು. ಹಾಡಿದ ಬಲರಾಮ, ಪಲ್ಲವಿ ಅನು ಪಲ್ಲವಿ ಚಿತ್ರದ ಹಾಡು: ನಗುವಾ ನಯನ ಮಧುರ ಮೌನ, ಮಿಡಿವ ಹೃದಯ ಇರೆ ಮಾತೇಕೆ, ಹೊಸ ಭಾಷೆ ಇದು ರಸಕಾವ್ಯ ವಿದು ಇದ ಹಾಡಲು ಕವಿ ಬೇಕೆ? ಹಾಡು ಮುಗಿಸುವಷ್ಟರಲ್ಲಿ ನಗುವ ನಯನಗಳು, ಮಿಡಿವ ಹೃದಯಗಳು ಒಂದಾಗಿದ್ದವು.

ಎರಡು ವರ್ಷಗಳ ಅವರಿಬ್ಬರ ಪ್ರೇಮಪ್ರಯಾಣದಲ್ಲಿ ಸಾಥ್ ನೀಡಿದ್ದು ಬಾಲು ಸರ್. ನಂತರ ಮದುವೆಯ ದಿನ ಮೊಳಗಿದ್ದು ಅವರದ್ದೇ ತಾಳಿ ಕಟ್ಟುವ ಶುಭವೇಳೆ. ಅವರಿಬ್ಬರ ಪ್ರಕಾರ ಅದು ಬಾಲು ಮಾಡಿಸಿದ ಶಾದಿ! ಹೌದು ಬಾಲು ಸರ್, ಅಂದೂ ಇಂದೂ ಮುಂದೂ ನೀವು ಇರುವಿರಿ ಜೊತೆಯಲಿ ಜೊತೆಜೊತೆಯಲಿ, ನಮ್ಮ ಜೊತೆಯಲಿ.