Wednesday, 11th December 2024

ಮರೆವು ಎಂಬ ವರ

ಭಾರತಿ ಎ.ಕೊಪ್ಪ

ಕಹಿ ಘಟನೆಗಳನ್ನು ಮರೆತು, ನೆಮ್ಮದಿಯ ಜೀವನ ನಡೆಸುವುದೇ ಎಲ್ಲರ ದಿನಚರಿಯಾಗಬೇಕು.

ಪ್ರತಿ ಕೆಲಸದಲ್ಲಿಯೂ ಅಡೆ-ತಡೆಗಳು, ಹಿನ್ನಡೆ-ಮುನ್ನಡೆಗಳು ಸಹಜ. ಜೀವನದ ಪಥದಲ್ಲಿ ಸಿಹಿ-ಕಹಿ ಘಟನೆಗಳನ್ನು ದಾಟಿಯೇ ಸಾಗುವ ಅನಿವಾರ್ಯತೆ. ನಮ್ಮೊಳಗಿನ ಚಂಚಲ ಮನಸ್ಥಿತಿಗೆ ಅನೇಕರ ಜೀವನದ ಯಶೋಗಾಥೆಗಳು ಮಾರ್ಗದರ್ಶಕ ದೀವಿಗೆಗಳಾಗಬಲ್ಲವು.

ಐಸಾಕ್ ನ್ಯೂಟನ್ ವೈಜ್ಞಾನಿಕ ರಂಗದಲ್ಲಿ ದೊಡ್ಡ ಹೆಸರು. ಅವರ ಸ್ವಭಾವ ಕೂಡ ಅನುಕರಣೀಯ. ನಿಧಾನಿ, ಸಮಾಧಾನಿಯಾದ ಅವರಿಂದ ಕೋಪ ಬಲು
ದೂರ. ಅವರಿಗೊಬ್ಬ ಮಿತ್ರನಿದ್ದ. ಅವನೇ ಡೈಮಂಡ್ ಎಂಬ ಹೆಸರಿನ ಪುಟ್ಟ ನಾಯಿ. ಅದು ಅವರ ಕಾಲಿನ ಬಳಿಯೇ ಮಲಗಿರುತ್ತಿತ್ತು. ನಿರ್ದಿಷ್ಟ ಸಮಯದಲ್ಲಿ ತನ್ನ
ಊಟಕ್ಕೋ, ಯಜಮಾನನ ಮಾತಿಗೋ ಸ್ಪಂದಿಸಿ, ಹೊರಹೋಗುತ್ತಿತ್ತು.

ಒಮ್ಮೆ ಕೆಲಸದಲ್ಲಿ ಮಗ್ನನಾಗಿದ್ದ ನ್ಯೂಟನ್, ನಡುವೆ ಹೊರಹೋದರು. ಲೇಖನಿ, ಇಂಕ್ ಬಾಟಲ, ಕಾಗದಗಳೆಲ್ಲವೂ ಮೇಜಿನ ಮೇಲೆಯೇ ಇದ್ದವು. ಸಮೀಪದಲ್ಲಿ ಒಂದು ಕ್ಯಾಂಡಲ್ ಕೂಡ ಉರಿಯುತ್ತಿತ್ತು. ಅತ್ತ ಡೈಮಂಡ್ ಕೂಡ ಯಜಮಾನನ ಬರುವಿಕೆಗಾಗಿ ಕಾಯುತ್ತಿತ್ತು. ಅಷ್ಟರಲ್ಲಿ ಪುಟ್ಟ ಇಲಿಯೊಂದು ಮೇಜಿನತ್ತ ಹೋಯಿತು. ಆಗ ಡೈಮಂಡ್, ಇಲಿಯ ಮೇಲೆ ಹಾರಿತು. ಉರಿಯುತ್ತಿದ್ದ ಕ್ಯಾಂಡಲ, ಪೇಪರಿನ ಮೇಲೆ ಬಿದ್ದು, ಅಲ್ಲಿದ್ದ ಕಾಗದಗಳೆ ಸುಟ್ಟು ಬೂದಿಯಾದವು.
ನ್ಯೂಟನ್ ಮರಳಿ ಬಂದು ನೋಡಿದರು. ಅವರ ಅಮೂಲ್ಯ ಸಂಶೋಧನೆ, ಕೆಲವು ತಿಂಗಳುಗಳಿಂದ ಶ್ರಮವಹಿಸಿ ಬರೆದ ಪ್ರಬಂಧ ಸುಟ್ಟು ಬೂದಿಯಾಗಿತ್ತು. ತನ್ನ ಶ್ರಮ ವ್ಯರ್ಥವಾದುದನ್ನು ಕಂಡು ದುಃಖಿತನಾದರು. ಆದರೆ ಕೋಪಗೊಳ್ಳಲಿಲ್ಲ! ಶಾಂತಚಿತ್ತದಿಂದ ಡೈಮಂಡ್‌ನನ್ನು ಕರೆದು, ‘ನೋಡು ಡೈಮಂಡ್, ನಿನ್ನ ಚೇಷ್ಟೆಯಿಂದಾದ ನಷ್ಟದ ಅರಿವು ನಿನಗಿಲ್ಲ’ ಎಂದರು.

ಮೇಜಿನ ಮೇಲಿದ್ದ ಬೂದಿಯನ್ನು ತಾವೇ ಒರೆಸಿ, ಮತ್ತೆ ಬರೆಯಲು ಪುನರಾರಂಭಿಸಿದರು. ಆದ ಘಟನೆಯನ್ನು ಆ ಕ್ಷಣಕ್ಕೇ ಮರೆತರು. ತನ್ನ ಸಂಶೋಧನಾ
ಪ್ರಬಂಧವನ್ನು ಮತ್ತೊಮ್ಮೆ ಬರೆದರು. ನ್ಯೂಟನ್ ಅವರ ಈ ಸಮಾಧಾನ ಚಿತ್ತ ಮತ್ತು ನಡೆದ ಕೆಟ್ಟ ಘಟನೆಗಳ ಬಗ್ಗೆ ಮತ್ತೆ ಮತ್ತೆ ಚಿಂತಿಸದೆ, ಅಲ್ಲಿಯೇ ಮರೆತು ಬಿಡುವ ಸ್ವಭಾವವನ್ನು ನಾವೂ ಕೂಡ ಅನುಸರಿಸಿದರೆ ಅದೆಷ್ಟೋ ಸಮಸ್ಯೆಗಳಿಂದ ದೂರವಿರಬಹುದಲ್ಲವೇ? ಶ್ರದ್ಧೆಯಿಂದ ಕರ್ತವ್ಯದಲ್ಲಿ ಯಶಸ್ಸನ್ನು ಕೂಡ ಕಾಣಬಹುದಲ್ಲವೇ? ನಮ್ಮ ಜೀವನದಲ್ಲಿ ತಿಳಿದೋ, ತಿಳಿಯದೆಯೋ ಅನೇಕ ಕಹಿ ಘಟನೆಗಳು ನಡೆದು ಹೋಗುತ್ತವೆ.

ಆ ಘಟನೆಗಳಿಗೆ ಸಮಾಧಾನದಿಂದ ಪರಿಹಾರ ಕಂಡುಕೊಳ್ಳಬೇಕಿದೆ. ‘ಮರೆವು ದೇವರು ಕೊಟ್ಟ ಅಮೂಲ್ಯವಾದ ವರ’ ಎಂದು ಭಾವಿಸಿ, ನಡೆದ ಕಹಿ ಘಟನೆಗಳನ್ನು ಮರೆತುಬಿಡಬೇಕು. ಕೆಟ್ಟ ಘಟನೆ ಮತ್ತು ಅದಕ್ಕೆ ಕಾರಣರಾದವರ ಬಗ್ಗೆ ಪ್ರತೀಕಾರ, ಕೋಪ ಬೆಳೆಸುತ್ತಾ ಹೋದರೆ ನಮ್ಮ ಸಮಯವೂ ವ್ಯರ್ಥ ಮತ್ತು ನಮಗೆ
ಹೊಸ ಯೋಚನೆ, ಜೀವನೋತ್ಸಾಹವು ಮೂಡುವುದೇ ಇಲ್ಲ. ‘ಮರೆವು’ ಎಂಬ ದಿವ್ಯೌಷಧವು ನಮ್ಮ ಮನವನ್ನು ಹೊಸ ಯೋಚನೆ ಗಳಿಗೆ ತೆರೆದಿಡುತ್ತದೆ. ಜೀವನದ ಹಾದಿಯಲ್ಲಿ ಭರವಸೆಯ ಬೆಳಕನ್ನು ಬೀರುತ್ತದೆ.