Wednesday, 11th December 2024

ಬುದ್ದಿಗೆ ತುಕ್ಕು ಹಿಡಿಯಬಾರದು

ಬೇಲೂರು ರಾಮಮೂರ್ತಿ

ಗುರುಗಳು ತನ್ಮಯರಾಗಿ ಕೆಲ ಹೊತ್ತು ಕಣ್ಣು ಮುಚ್ಚಿಕೊಂಡಿದ್ದರು. ಶಿಷ್ಯರು ಗುರುಗಳನ್ನೇ ಏಕಾಗ್ರತೆಯಿಂದ ನೋಡುತ್ತಿದ್ದರು. ಕೆಲ ಕ್ಷಣಗಳ ನಂತರ ಗುರುಗಳು ಕಣ್ಣುಬಿಟ್ಟು ಶಿಷ್ಯರನ್ನು ನೋಡಿ ‘ನನ್ನ ಕೆಲ ಕಾಲದ ಮೌನದ ಅರ್ಥ ಏನು ಬಲ್ಲಿರಾ?’ ಅಂತ ಕೇಳಿದರು. ಶಿಷ್ಯರು ‘ನೀವು ಮೌನವಾಗಿದ್ದಿರಿ.

ಅದರಿಂದ ನಮ್ಮ ಏಕಾಗ್ರತೆ ಹೆಚ್ಚಿತು. ನೀವು ಕಣ್ಣು ಬಿಡುವವರೆಗೂ ನಾವು ರೆಪ್ಪೆಯಾಡಿಸದೇ ನಿಮ್ಮನ್ನೇ ನೊಡುತ್ತಿದ್ದೆವು’
ಅಂದರು. ಆಗ ಗುರುಗಳು ‘ಯಾವ ವಸ್ತು ಬಹಳ ಕಾಲ ಉಪಯೋಗಿಸದೇ ಹೋಗುವುದೋ ಅದಕ್ಕೆ ತುಕ್ಕು ಹಿಡಿಯುವುದು. ತುಕ್ಕು ಹಿಡಿಯದಂತೆ ನಡೆಯುವುದೇ ಜೀವನ’ ಎಂದರು.

‘ನಮ್ಮ ತನು ಮನ ಎರಡೂ ಸದಾ ಕಾಲ ಶುದ್ಧಿಯಾಗಿರಬೇಕು. ಅದಕ್ಕೆ ದೇಹದಲ್ಲಿರುವ ನಾಡಿಗಳು ಶುದ್ಧವಾಗಿ ಕಲ್ಮಷರಹಿತ ವಾಗಿರಬೇಕು, ದುರಾಹಾರಾದಿಗಳಿಲ್ಲದೇ ಪ್ರಾಣಾದಿಗಳು ಶುದ್ಧವಾಗಿರಬೇಕು, ಹಿಂದಿನ ಜನ್ಮದ ಕರ್ಮಗಳು ಪುಣ್ಯಪ್ರದ ವಾಗಿರ ಬೇಕು. ಹೀಗೆ ಶುದ್ಧಿತ್ರಯದಿಂದ ಶುದ್ಧವಾಗಿರುವ ಮನಸ್ಸು ಬ್ರಹ್ಮವಿದ್ಯೆಯತ್ತ ಹೊರಡುತ್ತದೆ. ನೋಡಿ ನಮ್ಮ ಲೋಕದ ದೈನಂದಿನ ವ್ಯವಹಾರಗಳಿಂದ, ಒಬ್ಬೊಬ್ಬ ಮನಷ್ಯನಲ್ಲೂ ಅಷ್ಟಿಷ್ಟು ಕಲ್ಮಷವು ತುಂಬಿಕೊಳ್ಳುವುದು.

ಅಂತಹ ತುಂಬಿದ ಕಲ್ಮಷದ ಭಾವವನ್ನು ಮನಸ್ಸು ಪ್ರತಿಬಿಂಬಿಸುವುದು. ಅಂತರಂಗದಲ್ಲಿ ಕಲ್ಮಷಗಳಿಲ್ಲದೇ ಹೋದರೆ ನಮ್ಮ ಮನಸ್ಸು ಪ್ರಫುಲ್ಲಿತವಾಗಿ ಅದು ನಮ್ಮ ಮುಖದಲ್ಲಿ ಪ್ರತಿಬಿಂಬಿತವಾಗುತ್ತದೆ. ಅಂತಹ ಕಲ್ಮಷಗಳನ್ನು ತೊಳೆಯುವುದು ಬ್ರಹ್ಮ ವಿದ್ಯೆ. ಉದಾಹರಣೆಗೆ ನಿಮ್ಮ ಮನೆಗಳಲ್ಲಿ ಉಪಯೋಗಿಸದೇ ಬಿಟ್ಟ ಪಾತ್ರೆಗಳು ತುಕ್ಕು ಹಿಡಿಯುತ್ತವೆ, ಮಾಸುತ್ತವೆ, ಮಂಕಾಗು ತ್ತವೆ. ಯಾರಾದರೊಬ್ಬರು ಅಂತಹ ಪಾತ್ರೆಗಳನ್ನು ಹುಳಿ ಹಾಕಿ ತಿಕ್ಕಿದರೆ ತುಕ್ಕು ಹೋಗುತ್ತದೆ.

ಪಾತ್ರೆ ಎಂದಿನಂತೆ ಹೊಳೆಯುತ್ತದೆ. ಅದರಂತೆ ಯಾರಾದರೂ ಒಬ್ಬ ಬ್ರಹ್ಮಸಂಪನ್ನ ಹುಟ್ಟಿ ಬಂದರೆ ಇಡೀ ಲೋಕವು ತನ್ನ ಕಲ್ಮಷವನ್ನು ಕಳೆದುಕೊಂಡು ಮತ್ತೆ ಮೊದಲಿನಂತಾಗುತ್ತದೆ. ಇದು ಧರ್ಮ. ಧೂಳು, ಮರದ ಒಣಗಿದ ಎಲೆ ಮತ್ತು ಮನುಷ್ಯ ಮಾಡಿದ ಕಲ್ಮಷ ನಗರದ ಬೀದಿಬೀದಿಗಳಲ್ಲಿ ತುಂಬಿರುತ್ತದೆ. ಆದರೆ ಯಾವಾಗ ಒಂದು ಜೋರು ಮಳೆ ಬರುತ್ತದೋ ಆಗ ಅವುಗಳೆಲ್ಲ ಕೊಚ್ಚಿಕೊಂಡು ಹೋಗಿ ನಗರ ಶುದ್ಧಿಯಾಗುತ್ತದೆ.

ಭಕ್ತಿ, ಜ್ಞಾನ ಮತ್ತು ವೈರಾಗ್ಯಗಳನ್ನು ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ. ನೀವುಗಳು ನಿಮ್ಮ ಬುದ್ಧಿಗೆ ಅಹಂಕಾರವೆಂಬ
ತುಕ್ಕು ಹಿಡಿಯದಂತೆ ನಿಮ್ಮ ನಿಮ್ಮ ಆಚಾರ ವಿಚಾರಗಳಲ್ಲಿ ಎಚ್ಚರವಾಗಿರಿ. ಪ್ರತಿಯೊಬ್ಬರದೂ ಲೋಕೋದ್ಧಾರವೇ ಅಂತಿಮ ಗುರಿಯಾದರೂ ನಿಜವಾಗಿ ಲೋಕೋದ್ಧಾರವಾಗುವುದು ಆತ್ಮೋದ್ಧಾರ ಮಾಡಿಕೊಂಡ ಬ್ರಹ್ಮಜ್ಞಾನ ಸಂಪಾದಿಸಿಕೊಂಡವರಿಂದ. ಅದರಿಂದಾಗಿಯೇ ನಿಮ್ಮ ಬುದ್ಧಿಶಕ್ತಿಗೆ ತುಕ್ಕು ಹಿಡಿಯದಂತೆ ಸದಾ ಅದನ್ನು ಬಳಸುತ್ತಾ ಇರಬೇಕು’ ಅಂದರು ಗುರುಗಳು.