ಸುಲಲಿತ ಪ್ರಬಂಧ
ವಿಜಯಶ್ರೀ ಹಾಲಾಡಿ
ಅಮ್ಮಮ್ಮನಿಗೆ ಸರಿಯಾಗಿ ಅರವತ್ತು ವರ್ಷ ಆಗುವಾಗ ನೀನು ಹುಟ್ಟಿದ್ದು. ನಿಮ್ಮಿಬ್ಬರ ಸಂವತ್ಸರವೂ ಒಂದೇ; ‘ರಾಕ್ಷಸ’ ಸಂವತ್ಸರ.
ಹಾಗಾಗಿ ನಿಮ್ಮಿಬ್ಬರ ಗುಣವೂ ಒಂದೇ, ಇಬ್ಬರೂ ಹಟಮಾರಿಗಳು… ಏನನ್ನೇ ಆದರೂ ಹಟ ಹಿಡಿದು ಸಾಧಿಸದೆ ಬಿಡುವವರಲ್ಲ’ ಎಂಬರ್ಥದ ಮಾತುಗಳನ್ನು ಮನೆಯಲ್ಲಿ ಅಮ್ಮ ಅಥವಾ ಇತರ ಹಿರಿಯರು ಆಗಾಗ ಹೇಳುತ್ತಿದ್ದರು. ಆಗೆಲ್ಲ ವಿಜಿಗೂ ಇದು ಹೌದೆನಿಸುತ್ತಿತ್ತು. ಅಮ್ಮಮ್ಮನ (ಅಜ್ಜಿ) ಹಾಗೆ ತಾನೂ ಒಳ್ಳೆಯ ಕೆಲಸಗಾರ್ತಿಯಾಗಬೇಕು, ಶಾಲೆಯ ಓದಿನಲ್ಲೂ ಮುಂದಿರಬೇಕು
ಅಂದುಕೊಳ್ಳುತ್ತಿದ್ದಳು. ಆದರೆ ‘ರಾಕ್ಷಸ’ ಎಂಬ ಸಂವತ್ಸರದ ಹೆಸರು ಅವಳಿಗೆ ಇಷ್ಟವಾಗಿರಲಿಲ್ಲ.
‘ಅಜ್ಜಿ ಎಷ್ಟು ಒಳ್ಳೆಯವರು, ಅವರು ಹುಟ್ಟಿದ ವರ್ಷಕ್ಕೆ ಈ ಹೆಸರಾ? ನನ್ನದೂ ಅದೇ ಆಯ್ತಲ್ಲ’ ಎಂದೆಲ್ಲ ಚಿಂತಿಸುತ್ತ ‘ಅಯ್ಯೋ,
ಅದು ಬರೀ ಹೆಸರು ಅಷ್ಟೇ; ಮತ್ತೆಂತದಿಲ್ಲ’ ಎಂದು ಸಮಾಧಾನಪಟ್ಟುಕೊಳ್ಳುತ್ತಿದ್ದಳು. ವಿಜಿ ಹುಟ್ಟುವ ಹೊತ್ತಿಗೆ ಅಜ್ಜಿಗೆ ಆಗಲೇ ದೊಡ್ಡ ವಯಸ್ಸಿನ ಮೊಮ್ಮಕ್ಕಳಿದ್ದರು, ಅದಲ್ಲದೆ ಮರಿಮಕ್ಕಳೂ ಇದ್ದರು!
ಮೊಮ್ಮಕ್ಕಳಲ್ಲಿ ವಿಜಿ ಕೊನೆಯವಳು ಮತ್ತು ತೀರಾ ಚಿಕ್ಕವಳಾದ್ದರಿಂದ ಪ್ರೀತಿ, ಮುದ್ದು ತುಸು ಹೆಚ್ಚು. ಅಜ್ಜಿ ವಿಜಿಯ ಅಪ್ಪಯ್ಯನ ಅಮ್ಮನಾದರೂ ಅವರನ್ನು ಕರೆಯುತ್ತಿದ್ದುದು ಅಮ್ಮಮ್ಮ ಎಂದು. ಅಜ್ಜಿಗೆ ಹನ್ನೆರಡು ವರ್ಷವಿದ್ದಾಗಲೇ ಮದುವೆಯಾಯಿತಂತೆ, ಹದಿನೈದು ವರ್ಷಕ್ಕೆ ಅವರಿಗೆ ಮಗು ಹುಟ್ಟಿಯಾಗಿತ್ತಂತೆ ಎಂಬ ಮಾತುಗಳನ್ನೆಲ್ಲ ಹಿರಿಯರ ಬಾಯಲ್ಲಿ ವಿಜಿ ಕೇಳಿದ್ದಳು.
ಬದುಕಿನಲ್ಲಿ ದೊಡ್ಡ ದೊಡ್ಡ ಕಷ್ಟಗಳನ್ನು ಎದುರಿಸಿದವರು ಅಜ್ಜಿ. ಅವುಗಳನ್ನೆಲ್ಲ ಧೈರ್ಯವಾಗಿ ನಿಭಾಯಿಸಿ ಗಟ್ಟಿಗಿತ್ತಿಯಾಗಿ ರೂಪುಗೊಂಡವರು. ಮನೆಯ ಎದುರಿದ್ದ ಸ್ವಲ್ಪವೇ ಸ್ವಲ್ಪ ಗದ್ದೆಯಲ್ಲಿ ಮೈ ಮುರಿದು ದುಡಿದು ಕೃಷಿಯ ಕೆಲಸಗಳನ್ನು ಮಾಡಿಕೊಂಡು ಬಂದವರು. ಒಂದು ನಿಮಿಷವಾದರೂ ಸುಮ್ಮನೆ ಕುಳಿತುಕೊಳ್ಳದೆ ತೋಟ, ಗದ್ದೆೆ, ಹಾಡಿ, ಹಕ್ಕಲು ಎಂದು ತಿರುಗುತ್ತಾ ಸೌದೆ, ಸೊಪ್ಪು ಹೊತ್ತು ತಂದು, ನೆಟ್ಟಿ ನೆಟ್ಟು ಶ್ರಮದ ಕೆಲಸ ಮಾಡುತ್ತಾ ಮಕ್ಕಳನ್ನು, ಮೊಮ್ಮಕ್ಕಳನ್ನು ಸಾಕಿ ದೊಡ್ಡ ಮಾಡಿದವರು. ಅವರ ಈ ಗಟ್ಟಿತನದಿಂದಾಗಿಯೇ ವಿಜಿಯ ಮನೆಯಲ್ಲಿ ಎಲ್ಲರೂ ಸ್ವಾಭಿಮಾನದಿಂದ ತಲೆಯೆತ್ತಿ ನಡೆಯಲು ಸಾಧ್ಯವಾಯಿತು.
ಮನೆಯಲ್ಲಿದ್ದ ಬಡತನ ಕಡಿಮೆಯಾಗಿ ಅಪ್ಪಯ್ಯ ಇನ್ನೊಂದೆರಡು ಹೊಸ ಗದ್ದೆಗಳನ್ನು ಖರೀದಿಸುವಂತಾಯಿತು. ಅಜ್ಜಿ ನೆಟ್ಟ ಮರಗಿಡಗಳಿಗೆ ಲೆಕ್ಕವಿಲ್ಲ. ಅಡಕೆ, ತೆಂಗು, ಹಲಸು, ಮಾವು, ಬಾಳೆ ಹೀಗೆ ಅನೇಕ ಸಸಿಗಳನ್ನು ನೆಟ್ಟರು, ತೋಟ ಮಾಡಿದರು. ವಿಜಿಗೆ ಬುದ್ಧಿ ಬರುವ ಸಮಯಕ್ಕೆ ಅವೆಲ್ಲ ಫಲಕೊಡಲು ಶುರು ಮಾಡಿ ಬಹಳ ವರ್ಷಗಳಾಗಿತ್ತು!
ಮಾತೆಂದರೆ ಜೀವ
ಇಂಥಹ ಅಜ್ಜಿಗೆ ಮಾತೆಂದರೆ ಜೀವ. ಕೆಲಸದ ಸಹಾಯಕರು, ಅಕ್ಕಪಕ್ಕದ ಮನೆಯವರು, ಮನೆಗೆ ಬಂದ ನೆಂಟರು ಹೀಗೆ ಎದುರು ಸಿಕ್ಕವರಲ್ಲಿ ಸ್ವಾರಸ್ಯಕರವಾಗಿ ಮಾತಾಡುತ್ತಿದ್ದರು. ಅವರ ಸ್ವರವೂ ಜೋರು. ಬಿಸಿಲು, ಮಳೆ, ಚಳಿಯನ್ನು ಲೆಕ್ಕಿಸದೆ ಕಾಡು ಗುಡ್ಡಗಳಲ್ಲಿ ಸುತ್ತಿ ಕೆಲಸ ಮಾಡುತ್ತಿದ್ದ ಅಜ್ಜಿ ನಾಜೂಕಿನವರಲ್ಲ. ಅವರ ಉಡುಪೆಂದರೆ ಕೈಮಗ್ಗದ ಕೆಂಪು ಸೀರೆ ಅಷ್ಟೇ. ಅಪರೂಪಕ್ಕೆ ಪೇಟೆಗೆ ಹೋಗುವುದಾದರೆ ಪೆಟ್ಟಿಗೆಯಲ್ಲಿದ್ದ ಹೊಸ ಕೆಂಪುಸೀರೆ ಉಟ್ಟು ಸೆರಗನ್ನು ತಲೆಯಮೇಲೆ ಹೊದ್ದು ಕೊಳ್ಳುತ್ತಿದ್ದರು.
‘ಅಲಂಕಾರ’ ಎಂಬ ಪದವೇ ಅವರ ಬದುಕಿನೊಳಗೆ ಇರಲಿಲ್ಲ! ಅವರು ಬೆಂಡೋಲೆ, ಬಳೆ ಅಥವಾ ಇತರ ಯಾವುದೇ ಆಭರಣ ಗಳನ್ನು ಧರಿಸುತ್ತಿರಲಿಲ್ಲ. ವಿಜಿಗೆ ಅವರನ್ನು ಹಾಗೆ ನೋಡಿ ಅದೇ ಅಭ್ಯಾಸವಾಗಿ ಹೋಗಿತ್ತು. ಆದರೆ ದೊಡ್ಡವಳಾದಂತೆ ಅವಳಿಗೆ ಒಂದೊಂದೇ ವಿಷಯ ಅರ್ಥವಾಯಿತು. ಅಜ್ಜಿಗೆ ಬರೀ ಇಪ್ಪತ್ತೊಂದು ವರ್ಷ ಅನ್ನುವಾಗ ಅಜ್ಜಯ್ಯ ಅಂದರೆ ಅವರ ಗಂಡ ತೀರಿಕೊಂಡದ್ದರಿಂದ ಆಗಲೇ ಅವರ ತಲೆಕೂದಲನ್ನು ತೆಗೆಸಿ ಹಾಕಿದ್ದರು (ಕೇಶ ಮುಂಡನ). ಅವರು ಯಾವುದೇ ಅಲಂಕಾರ ಮಾಡಿಕೊಳ್ಳುವುದು ನಿಷಿದ್ಧವಾಗಿತ್ತು, ಕೆಂಪು ಸೀರೆಯನ್ನು ಮಾತ್ರ ಉಡಬೇಕಿತ್ತು.
ಅಷ್ಟು ಎಳೆಯ ವಯಸ್ಸಿನಲ್ಲೇ ಇಷ್ಟೆಲ್ಲ ಕಷ್ಟಗಳನ್ನು ಅಜ್ಜಿ ಎದುರಿಸಿದ್ದರು. ತಿಂಗಳು-ಎರಡು ತಿಂಗಳಿಗೊಮ್ಮೆ ಕ್ಷೌರಿಕರೊಬ್ಬರು ಬಂದು ಅವರ ತಲೆಕೂದಲನ್ನು ನುಣ್ಣಗೆ ಬೋಳಿಸುತ್ತಿದ್ದರು! ಮೊದಲೆಲ್ಲ ಅಜ್ಜಿ ಹೇಗಿದ್ದರೋ, ಎಷ್ಟು ಅತ್ತಿದ್ದರೋ ವಿಜಿಗೆ
ಗೊತ್ತಿಲ್ಲ. ಆದರೆ ಅವಳು ನೋಡಿದ ಕಾಲದಲ್ಲಿ ಯಾರ ಎದುರೂ ಏನನ್ನೂ ಹೇಳಿಕೊಳ್ಳುತ್ತಿರಲಿಲ್ಲ. ಸಣ್ಣವಳಿದ್ದಾಗ
ಅವಳಿಗೆ ಇವೆಲ್ಲ ಗೊತ್ತಾಗಲೇ ಇಲ್ಲ. ಆದರೆ ಮುಂದೆ ಇದನ್ನೆಲ್ಲ ಯೋಚಿಸುವಾಗ ಸಮಾಜದ ಕ್ರೂರತೆಯ ಬಗ್ಗೆ
ಸಿಟ್ಟು ಬರುತ್ತಿತ್ತು. ಅಜ್ಜಿಯ ಮನಸ್ಸಿನೊಳಗೆ ಇಷ್ಟೊಂದು ದೊಡ್ಡ ಸಂಕಟ, ನೋವು ಅಡಗಿ ಕುಳಿತಿತ್ತು…!
ವಿಜಿ ತೀರ ಚಿಕ್ಕವಳಾಗಿರುವಾಗಿಂದ ಹಿಡಿದು ಸುಮಾರು ಹತ್ತು ವರ್ಷವಾಗುವವರೆಗೆ ಅಜ್ಜಿಯ ಮಾತುಗಳನ್ನು ಕಿವಿ ತುಂಬಿಕೊಂಡಿ ದ್ದಾಳೆ; ಅವರ ತಮಾಷೆಗೆ ನಕ್ಕಿದ್ದಾಳೆ. ಅಜ್ಜಿ ಹಾಗೇ; ಖುಷಿಯಿಂದ ಇದ್ದಾಗ ಮಾತಿನ ನಡುವೆ ಕುಶಾಲು ಮಾಡುತ್ತಿದ್ದರು. ಕೆಲಸದ ಸಹಾಯಕರಾದ ರುಕ್ಮಿಣಿಬಾಯಿ, ಅಕ್ಕುಬಾಯಿ, ಶೇಷಿಬಾಯಿ, ಬೆಳ್ಳಿಬಾಯಿ ಮುಂತಾದವರೊಂದಿಗೆ ಸಂಭಾಷಿಸುವಾಗ ಅವರನ್ನೆಲ್ಲ ನಗಿಸಿ ತಾವೂ ನಗುತ್ತಿದ್ದರು. ವಿಜಿಯೊಂದಿಗೆ ಊಟಕ್ಕೆ ಕುಳಿತಾಗ ‘ಪತ್ರೊಡೆ ಹ್ವಾಂತ ಎಣ್ಣಿ ಕುಡ್ಕಿ ಕಾಂತ’ ಮುಂತಾದ ನುಡಿಗಟ್ಟುಗಳನ್ನು ಹೇಳಿದರೆ, ಊಟ ಮುಗಿಸಿ ಬಂದಾಗ ‘ಉಂಡ್ಯ, ಉರ್ಟ ಹೆಣೇ?’ ಎಂದು ತಪ್ಪದೇ ಪ್ರಶ್ನಿಸಿ ನಗಾಡುತ್ತಿದ್ದರು.
ಒಮ್ಮೊಮ್ಮೆ ಮಾತ್ರ ಸಣ್ಣ ಪುಟ್ಟ ತಪ್ಪುಗಳಿಗೂ ಬೈದು, ಹೊಡೆದಾಗ ಅಳು ಬರುತ್ತಿತ್ತು, ಬೇಸರವಾಗುತ್ತಿತ್ತು. ಆದರೆ ಅವರ ಕುರಿತು ಕೆಟ್ಟ ಅಭಿಪ್ರಾಯ ಬಂದದ್ದೇ ಇಲ್ಲ. ವಿಜಿಯ ಮನೆಯಲ್ಲಿ ಎಲ್ಲರೂ ಅಜ್ಜಿಗೆ ಬಹಳ ಗೌರವ ಕೊಡುತ್ತಿದ್ದರು. ವಿಜಿ, ಅವಳ ಅಕ್ಕಂದಿರು ಮತ್ತು ಅಣ್ಣನ ಕುರಿತು ಅಜ್ಜಿಗೆ ಹೆಮ್ಮೆ. ‘ನಮ್ಮನೆ ಮಕ್ಕಳು ಓದುವುದರಲ್ಲಿ ಚುರುಕು’ ಎಂಬ ಆತ್ಮವಿಶ್ವಾಸ. ಆದರೆ ಕಷ್ಟ ಪಟ್ಟು ಓದಲೇ ಬೇಕು ಎಂಬುದು ಅವರ ಅಭಿಪ್ರಾಯ, ಕಟ್ಟುನಿಟ್ಟು.
ನಾಲ್ಕು ಗಂಟೆಗೇ ಎದ್ದೇಳುವ ಅಜ್ಜಿ ಪರೀಕ್ಷೆಗೆ ತಯಾರಿ ಮಾಡುವ ಸಮಯದಲ್ಲೆಲ್ಲ ಬೆಳಗಿನ ಜಾವವೇ ಎಬ್ಬಿಸುತ್ತಿದ್ದರು. ‘ಐದು ಗಂಟೆಗೆ ಕರೆದರೆ ಸಾಕು’ ಎಂದು ರಾತ್ರಿ ಮಲಗುವಾಗ ಹೇಳಿದ್ದರೂ ಬೆಳಿಗ್ಗೆ ನಾಲ್ಕಕ್ಕೆ ಎಚ್ಚರಿಸಿ ಕೂರಿಸುತ್ತಿದ್ದರು! ವಿಜಿ ತೀರಾ ಸಣ್ಣವಳಿರುವಾಗಿಂದಲೂ ಮಲಗುತ್ತಿದ್ದುದು ಅಜ್ಜಿಯ ಪಕ್ಕದಲ್ಲೇ. ಆಗೆಲ್ಲ ಅವರು ಮುದ್ದು ಮಾಡುತ್ತಿದ್ದುದು ಅವಳಿಗೆ ನೆನಪಿದೆ.
ಮತ್ತೆ ಅಜ್ಜಿ ಆ ಕಾಲದ ಇತರ ಹೆಂಗಸರಂತಲ್ಲ. ಮನೆಯ ಆಗುಹೋಗುಗಳಲ್ಲೆಲ್ಲ ಸ್ವಂತ ನಿರ್ಧಾರ ತೆಗೆದುಕೊಂಡು ಸಾಧಿಸಿ ತೋರಿಸಬಲ್ಲ ದಿಟ್ಟೆ.
ಅವರ ದೇಹವೂ ಗಟ್ಟಿ, ಮನಸ್ಸೂ ಗಟ್ಟಿ. ಸ್ವತಂತ್ರ ವ್ಯಕ್ತಿತ್ವ, ಖಚಿತ ಅಭಿಪ್ರಾಯ, ಹೃದಯ ವೈಶಾಲ್ಯತೆ ಮತ್ತು ಕೆಲಸಗಾರಿಕೆ ಅವರ ಗುಣ. ಆದರೆ ಸಿಟ್ಟು ಮಾತ್ರ ಭಯಂಕರ. ಅಜ್ಜಿಗೆ ಸಿಟ್ಟು ಬಂತು ಎಂದಾದರೆ ಅದು ತಣಿಯುವವರೆಗೆ ಅವರೆದುರು
ಯಾರೂ ನಿಲ್ಲುತ್ತಿರಲಿಲ್ಲ!
ಇಂತಹ ಅಜ್ಜಿಗೆ ಒಂದುದಿನ ಹಠಾತ್ತಾಗಿ ಮಾತೇ ನಿಂತು ಹೋಯಿತು! ಆಗ ಅವರಿಗೆ ಸುಮಾರು ಎಪ್ಪತ್ತು ವರ್ಷವಿರಬಹುದು. ಆ ಸನ್ನಿವೇಶದ ನೆನಪು ವಿಜಿಗೆ ಸ್ಪಷ್ಟವಾಗಿಲ್ಲ. ಅವರಿಗೆ ಪಾರ್ಶ್ವವಾಯು (ಸ್ಟ್ರೋಕ್) ಆದದ್ದಂತೆ. ದೇಹದ ಮೇಲೂ ಪರಿಣಾಮ
ಆಗಿದ್ದರಿಂದ ಸರಾಗವಾಗಿ ಓಡಾಡಲು ಕಷ್ಟವಾಯಿತು. ಆ ಕೂಡಲೆ ದೊಡ್ಡ ಆಸ್ಪತ್ರೆಗೆ ಹೋಗಲು ಅವರ ಹಳ್ಳಿಯಲ್ಲಿ
ಯಾವ ಸೌಲಭ್ಯವೂ ಇರಲಿಲ್ಲ. ಅದಲ್ಲದೆ ಅಪ್ಪಯ್ಯ ದೂರದ ಆಂಧ್ರದಲ್ಲಿದ್ದರು. ಫೋನ್ ಎಂಬುದನ್ನು ಆಗ ಅವರೆಲ್ಲ ಕಂಡು, ಕೇಳಿರಲಿಲ್ಲ. ಈ ವಿಷಯವನ್ನು ಅಪ್ಪಯ್ಯನಿಗೆ ಪತ್ರ ಬರೆದು ತಿಳಿಸಿ ಅವರು ಊರಿಗೆ ಬರುವ ಹೊತ್ತಿಗೆ ಅದಾಗಲೇ ಏಳೆಂಟು ದಿನಗಳು ಕಳೆದಿರಬಹುದು.
ಅಪ್ಪಯ್ಯ ಬಂದವರೇ ಅಜ್ಜಿಯನ್ನು ಮಣಿಪಾಲದ ಆಸ್ಪತ್ರೆಗೆ ಕರೆದೊಯ್ದರು. ಈ ನಡುವೆ ವಿಜಿ ಮತ್ತು ನೀಲಿಮಾರಿಗಾದ
ಆಘಾತ ಅಷ್ಟಿಷ್ಟಲ್ಲ. ತೋಟಕ್ಕೆ ಹೋಗಿ ಈ ವಿಷಯವನ್ನು ಚರ್ಚಿಸಿ ಯಾರಿಗೂ ಕಾಣದಂತೆ ಅಳುತ್ತಾ ಕೂತರು. ಅಜ್ಜಿಗೆ ಬೇಗನೆ ಗುಣವಾಗಲಿ ಎಂದು ಹರಕೆಯನ್ನು ಹೊತ್ತರು. ಅಷ್ಟು ಚಟುವಟಿಕೆಯಿಂದಿದ್ದ ಅಜ್ಜಿಗೆ ಈಗ ಮಾತಾಡಲೂ ಆಗುತ್ತಿಲ್ಲ ಎಂಬುದು ಅವರಿಗೆ ನಂಬಲಸಾಧ್ಯವಾದ ವಿಷಯವಾಯಿತು.
ಇಡೀ ಕರ್ನಾಟಕದಲ್ಲೇ ಹೆಸರಾದ ಮಣಿಪಾಲ ಆಸ್ಪತ್ರೆಗೆ ಮುದೂರಿಯಿಂದ ಸುಮಾರು ಮೂರು ಗಂಟೆಗಳ ಪ್ರಯಾಣ. ಅಲ್ಲಿ ಚಿಕಿತ್ಸೆೆ ಪಡೆದು ಬಂದಮೇಲೆ ಅಜ್ಜಿ ಹಲವಾರು ಮಾತ್ರೆಗಳನ್ನು ತಿನ್ನುವಂತಾಯಿತು, ವಿಶ್ರಾಂತಿ ಪಡೆಯುವಂತಾಯಿತು. ಆದರೆ ಅವರ ಮನೋಬಲ ದೊಡ್ಡದು. ಸ್ವಲ್ಪ ಸಮಯದ ಆರೈಕೆಯ ನಂತರ ತುಸು ಚೇತರಿಸಿಕೊಂಡು ಒಂದೊಂದೇ ಕೆಲಸಗಳನ್ನು ಮಾಡತೊಡಗಿದರು! ಆದರೆ ಹೋದ ಮಾತು ಮಾತ್ರ ಹಿಂದಿರುಗಲಿಲ್ಲ!
ಇದು ಸ್ವತಃ ಅಜ್ಜಿಗೂ, ಮನೆಮಂದಿಗೂ ಬಹುದೊಡ್ಡ ಆಘಾತ. ವಿಜಿ, ನೀಲಿಮಾರಂತು ‘ಅಜ್ಜಿ ಮೊದಲಿನ ತರ ಮಾತಾಡು ವಂತಾಗಲಿ ದೇವರೇ’ ಎಂದು ಕಣ್ಣೀರಿಟ್ಟು ಪ್ರಾರ್ಥಿಸಿದರು. ಅಜ್ಜಿಗೆ ನೆನಪುಗಳೆಲ್ಲ ಸ್ಪಷ್ಟವಾಗಿದ್ದವು; ಆಲೋಚನೆಗಳು ಮೊದಲಿನಂತೇ ಇದ್ದವು. ಆದರೆ ಯೋಚಿಸಿದ್ದನ್ನು ಸರಿಯಾದ ಪದಗಳಲ್ಲಿ ಹೇಳಲು ಆಗುತ್ತಿರಲಿಲ್ಲ.
ಏನನ್ನೋ ಹೇಳಲು ಯತ್ನಿಸುತ್ತಾ ಅರ್ಥವೇ ಇಲ್ಲದ ಶಬ್ದಗಳನ್ನು ಆಡಿ ಕಣ್ಣೀರು ಹಾಕುತ್ತಿದ್ದರು. ‘ಅಯ್ಯೋ ದೇವ್ರೇ ನನಗೆ ಯಾಕೆ ಹೀಗಾಯಿತು’ ಎನ್ನುವಂತೆ ಮುಖ ಮಾಡಿ ಮರುಗುತ್ತಿದ್ದರು. ‘ವಿಜಿ’ ಎಂದು ಕರೆಯಲು ಹೋಗಿ ಸಾಧ್ಯವಾಗದೆ ಅಸ್ಪಷ್ಟವಾಗಿ ತೊದಲಿ ಅವಳ ಮುಖವನ್ನೇ ದಿಟ್ಟಿಸುತ್ತಿದ್ದರು. ಇದೆಲ್ಲ ನೋಡುವಾಗ ವಿಜಿಗೆ ಕರುಳು ಹಿಂಡಿದಂತಾಗುತ್ತಿತ್ತು. ಅವಳ ಪುಟ್ಟ
ಮನಸ್ಸಿಗೆ ಏನು ಮಾಡಬೇಕೆಂಬುದೇ ಹೊಳೆಯುತ್ತಿರಲಿಲ್ಲ.
ಅಜ್ಜಿ ಮತ್ತೆ ಮಾತಾಡುವರೆ?
ಹೀಗೆ ಹಲವು ದಿನಗಳು ಕಳೆದವು. ಅಜ್ಜಿಗೆ ದಿನಕ್ಕೆರಡು ಮಾತ್ರೆಗಳು ಖಾಯಂ ಆದವು. ಕೆಲಸಗಳನ್ನೆಲ್ಲ ಹೆಚ್ಚು ಕಮ್ಮಿ ಮೊದಲಿ ನಂತೇ ನಿರ್ವಹಿಸತೊಡಗಿರು. ಔಷಧದ ಪ್ರಭಾವದಿಂದಾಗಿ ಮಾತು ಮರಳೀತೆಂದು ವಿಜಿ, ನೀಲಿಮಾ ಕಾದರು. ಒಂದಲ್ಲ ಒಂದು ದಿನ ಏನಾದರೊಂದು ಪವಾಡ ಘಟಿಸಿ ಅವರು ಮತ್ತೆ ಮೊದಲಿನಂತೆ ಗಟ್ಟಿ ಗಂಟಲಲ್ಲಿ ಮಾತಾಡುತ್ತಾರೆ, ನಗುತ್ತಾರೆ ಎಂದು ಪರಸ್ಪರ ಹೇಳಿಕೊಂಡರು.
‘ಉಂಡ್ಯಾ ಉರ್ಟಾ ಹೆಣೆ?’ ಎಂದು ಕೇಳುತ್ತಾರೆ ಎಂಬ ಆಸೆ. ಆದರೆ ಹಾಗಾಗಲೇ ಇಲ್ಲ. ಇದೇ ನಿರೀಕ್ಷೆಯಲ್ಲಿ ಐದಾರು ವರ್ಷಗಳೇ ಕಳೆದು ಹೋದವು. ಇನ್ನು ಅಜ್ಜಿ ಮಾತಾಡಲಾರರು ಎಂಬುದು ವಿಜಿಯ ಮನಸ್ಸಿಗೆ ಹೊಳೆದು ಅದೇ ಒಂದು ಕೊರಗಾಯಿತು. ಅವಳ ಬಾಲ್ಯಕಾಲದ ವೇದನೆಗಳಲ್ಲಿ ಇದು ಪ್ರಮುಖವಾದದ್ದು.
ಅಜ್ಜಿ ಮಾತು ನಿಲ್ಲಿಸಿದ್ದರು, ಆದರೆ ಮೊದಲಿನ ಚಟುವಟಿಕೆ ಹಾಗೇ ಇತ್ತು. ಮನೆಗೆ ಬಂದವರಲ್ಲಿ, ಕೆಲಸದ ಸಹಾಯಕರಲ್ಲಿ ಮಾತಾಡಲು ಪ್ರಯತ್ನಿಸಿ ಸಾಧ್ಯವಾಗದೆ ಸುಮ್ಮನಾಗುತ್ತಿದ್ದರು. ಆದರೆ ಈ ನೋವನ್ನು ಅವರು ಸವಾಲಾಗಿ ಸ್ವೀಕರಿಸಿದ್ದರು. ಮೂಲೆಯಲ್ಲಿ ಕುಳಿತುಕೊಳ್ಳದೆ, ಬಿಡದೇ ಕೆಲಸಮಾಡುತ್ತಾ ಪಾರ್ಶ್ವವಾಯುವಿನ ಪರಿಣಾಮದಿಂದ ಬಹುತೇಕ ಹೊರಬಂದಿ ದ್ದರು. ಅವರ ಗಟ್ಟಿ ಮನಸ್ಸಿಗೆ ಸೋತು ಮುಖ, ಕೈಕಾಲು, ದೇಹದ ಮೇಲಿನ ತನ್ನ ಹಿಡಿತವನ್ನು ಪಾರ್ಶ್ವವಾಯು ಹಿಂತೆಗೆದು ಕೊಂಡಿತ್ತು!
ದೊಡ್ಡವಳಾದ ನಂತರ ವಿಜಿಗೆ ತಿಳಿದದ್ದೇನೆಂದರೆ ಇನ್ನೂ ಬೇಗನೆ ಆಸ್ಪತ್ರೆಗೆ ಹೋಗಿದ್ದರೆ ಅಜ್ಜಿಗೆ ಮಾತು ಮರಳುವ ಸಾಧ್ಯತೆ ಇತ್ತು ಎಂದು. ಅದೂ ಅಲ್ಲದೇ ಆ ಕಾಲದಲ್ಲಿ ಎಂದರೆ ಎಂಬತ್ತರ ದಶಕದಲ್ಲಿ ಈಗಿನಷ್ಟು ಆಧುನಿಕ ಚಿಕಿತ್ಸೆಗಳು ಲಭ್ಯವಿರಲಿಲ್ಲ. ವಿಜಿ ಎಷ್ಟೋ ಸಲ ಯೋಚಿಸುತ್ತಿದ್ದಳು; ಅಜ್ಜಿಗೆ ಮಾತು ನಷ್ಟವಾಗದಿದ್ದರೆ ಎಷ್ಟು ಚೆನ್ನಾಗಿತ್ತು ಎಂದು!
ಅವರ ಬದುಕಿನ ಅನುಭವಗಳನ್ನು ಕೇಳಿ ತಿಳಿದುಕೊಳ್ಳಬಹುದಿತ್ತು, ಖುಷಿಯಾಗಿ ಹರಟೆ ಹೊಡೆಯಬಹುದಿತ್ತು. ಆದರೂ ವಿಶೇಷವೆಂದರೆ ಅಜ್ಜಿ ತೊಂಬತ್ತು ವರ್ಷಗಳ ಕಾಲ ಗಟ್ಟಿಮುಟ್ಟಾಗಿಯೇ ಬದುಕಿದರು; ತೋಟ, ಗದ್ದೆಗಳ ಕೆಲಸ ಕಾರ್ಯಗಳನ್ನು ಮೊದಲಿನಂತೇ ಮುನ್ನಡೆಸಿಕೊಂಡು ಹೋದರು. ಪಾರ್ಶ್ವವಾಯು ಎಂಬ ಪಾರ್ಶ್ವವಾಯುವಿಗೇ ಅವರು ಸಡ್ಡು ಹೊಡೆದಿದ್ದರು!