Saturday, 14th December 2024

ಉಚಿತ ಚಿಕಿತ್ಸೆ ನೀಡುವ ನಾಟಿ ವೈದ್ಯ

ಹಳ್ಳಿಯಲ್ಲೇ ದೊರೆಯುವ ಸೊಪ್ಪು, ಬೇರುಗಳನ್ನು ಉಪಯೋಗಿಸಿ, ನಾಟಿ ಔಷಧ ನೀಡುವ ಒಂದು ಪರಂಪರೆ ನಮ್ಮ ನಾಡಿನಲ್ಲಿದೆ. ಅಂತಹ ನಾಟಿ ವೈದ್ಯರ ಚಿಕಿತ್ಸೆಯಿಂದ ದನಕರುಗಳು ಸಹ ಗುಣಮುಖವಾಗುತ್ತವೆ. ಇಂದಿಗೂ ಅಂತಹ ನಾಟಿ ಚಿಕಿತ್ಸೆಯನ್ನು ಉಚಿತವಾಗಿ ನೀಡುವ ವೈದ್ಯರೊಬ್ಬರ ಪರಿಚಯ ಇಲ್ಲಿದೆ.

ರವಿ ಮಡೋಡಿ, ಬೆಂಗಳೂರು

ಭಾರತೀಯ ವೈದ್ಯ ಪರಂಪರೆಯಲ್ಲಿ ನಾಟಿ ವೈದ್ಯ ಪದ್ಧತಿಗೆ ವಿಶೇಷವಾದ ಸ್ಥಾನ. ಇದು ಹಳ್ಳಿಗಳಲ್ಲಿ ಅಸ್ತಿತ್ವದಲ್ಲಿದ್ದು ಸೊಪ್ಪು, ಬಂದಳಿಕೆಗಳು, ನಾರು, ಬೇರುಗಳನ್ನು ಉಪಯೋಗಿಸಿ ಜನರಿಗೆ ಮತ್ತು ಜಾನುವಾರುಗಳ ಆರೋಗ್ಯ ಕಾಪಾಡುತ್ತದೆ. ಇಂದು ಈ ಕಲೆಯನ್ನು ಅಲ್ಲಲ್ಲಿ ಕೆಲವರು ಉಳಿಸಿಕೊಂಡು ಬಂದಿದ್ದಾರೆ. ಅಂತವರಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕನಗೋಡುಮನೆ ವಾಸಿ ಸುಬ್ರಹ್ಮಣ್ಯಯ್ಯ ಕೂಡ ಒಬ್ಬರು.

ಮೂಲತಃ ಸುಬ್ರಮಣ್ಯಯ್ಯ ಅವರು ಕೃಷಿಕರು. ಅಣ್ಣ ನಾಗೇಂದ್ರಯ್ಯ ಅವರು ಆಧುನಿಕ ಪಶು ಆಸ್ಪತ್ರೆಗಳು ಊರಿನಲ್ಲಿ ಸ್ಥಾಪಿತ ವಾಗುವ ಮುಂಚೆಯೇ ಜಾನವಾರುಗಳಿಗೆ ಔಷಧ ವನ್ನು ಕೊಡುತ್ತಿದ್ದರು. ಕಾಲ ಕ್ರಮೇಣ ಸುಬ್ರಮಣ್ಯ ಅವರಿಗೂ ಕೂಡ ಈ ಬಗ್ಗೆ ಆಸಕ್ತಿ ಒಡಮೂಡಿತು. ಅಲ್ಲಿನ ಪದ್ಧತಿಗಳನ್ನು, ಔಷಧಗಳನ್ನು ನಾಗೇಂದ್ರಯ್ಯ ಅವರಿಂದ ಕೇಳಿ ಅದರ ಜ್ಞಾನವನ್ನು ಪಡೆದು ಕೊಂಡರು. ನಾಗೇಂದ್ರಯ್ಯ ಅವರ ಕಾಲವಾದ ನಂತರ ಆ ಪದ್ಧತಿಯನ್ನು ಇವರು ಮುಂದುವರೆಸಿಕೊಂಡು ಬಂದರು. ಯಾವುದೇ ಫಲಾಪೇಕ್ಷೆ ಗಳಿಲ್ಲದೇ ಸುತ್ತಮುತ್ತಲಿನ ಪ್ರದೇಶದವರಿಗೆ ಹಲವಾರು ವರುಷಗಳಿಂದ ಉಚಿತವಾಗಿ ನೀಡುತ್ತ ಬಂದಿದ್ದಾರೆ.

ಜಾನುವಾರುಗಳ ಜ್ವರ, ತಂಡಿ, ಕಾಲುಬಾಯಿ, ಮಳಲು, ಊರಿಮೂತ್ರ, ಜೀರ್ಣ ಶಕ್ತಿ ಕೊರತೆ, ಉಷ್ಣರೋಗ, ನರರೋಗಗಳು, ಗರ್ಭಕೋಶದ ಕಾಯಿಲೆಗಳು, ಮಳವು ಜಾರು ವುದು ಇತ್ಯಾದಿ ಕಾಯಿಲೆಗಳಿಗೆ ಔಷಧಗಳನ್ನು ನೀಡುತ್ತಿದ್ದಾರೆ. ದನಕರುಗಳಿಗೆ ಬಂದಿರುವ ಕಾಯಿಲೆಯನ್ನು ಗುಣಪಡಿಸಲು ಪಶು ಇಲಾಖೆಯ ವೈದ್ಯರುಗಳಿಂದ ಸಾಧ್ಯವಾಗದೇ ಕೈಚೆಲ್ಲಿ ಕುಳಿತಾಗ ಇವರು ಔಷಧವನ್ನು ನೀಡಿ ಗುಣಪಡಿಸಿದ ಅನೇಕ ಉದಾಹರಣೆಗಳಿವೆ.

ಹಲವು ಬಾರಿ ಪಶು ಆಸ್ಪತ್ರೆಯ ವೈದ್ಯಾದಿಕಾರಿಗಳು ಇವರನ್ನು ಸಂಪರ್ಕಿಸುವಂತೆ ಮಾಹಿತಿಯನ್ನು ನೀಡುವುದಿದೆ. ಕೇವಲ ಜಾನುವಾರುಗಳಿಗಷ್ಟೇಯಲ್ಲದೇ ಮನುಷ್ಯನ ಕೆಲವು ಕಾಯಿಲೆಗಳಾದ ಜಾಂಡೀಸ್, ಕೈಮಸ್ಕು (ಹಸಿವು ಆಗದಿರುವುದು) ಇತ್ಯಾದಿ ಕಾಯಿಲೆಗಳಿಗೂ ಔಷಧಗಳನ್ನು ನೀಡುತ್ತಿದ್ದಾರೆ.

ಜಾನುವಾರುಗಳ ರೋಗ ಲಕ್ಷಣವನ್ನು ಸೂಕ್ಷ್ಮವಾಗಿ ಅವಲೋಕಿಸಿ ಔಷಧ ನೀಡುತ್ತಾರೆ. ಬಾಯಿಯ ಲೋಳೆಯನ್ನೋ, ಹೊಟ್ಟೆ ಯನ್ನು ಬಡಿದು ಶಬ್ದವನ್ನೋ ಇತ್ಯಾದಿಗಳನ್ನು ಅವಲೋಕಿಸುವಾಗ ರೋಗದ ಸ್ವರೂಪ ಹಾಗೂ ಲಕ್ಷಣಗಳನ್ನು ತಿಳಿಯುವುದಕ್ಕೆ ಸಾಧ್ಯವೆಂದು ಸುಬ್ರಮಣ್ಯ ಅವರು ಹೇಳುತ್ತಾರೆ. ಔಷಧಿ ನೀಡುವ ಕ್ರಮದಲ್ಲಿಯೂ ಕೂಡ ವ್ಯತ್ಯಾಸಗಳಿರುತ್ತದೆ. ಕೆಲವನ್ನು ಪುಡಿ ಮಾಡಿದರೆ, ಕೆಲವನ್ನು ಅರೆದುಕೊಡಬೇಕು. ಕೆಲವನ್ನು ಮಜ್ಜಿಗೆಯಲ್ಲಿ ಕೊಟ್ಟರೇ ಕೆಲವನ್ನು ಬೆಲ್ಲದಲ್ಲಿ ನೀಡಬೇಕು.

ಕಾಲ ಬದಲಾದಂತೆ ರೋಗಗಳು, ಅದರ ಚರ್ಯೆಗಳು ಕೂಡ ಬದಲಾಗುತ್ತದೆ. 30-40 ವರುಷದ ಹಿಂದಿನ ಜಾನುವಾರು ಕಾಯಿಲೆ ಗಳಿಗೆ ವ್ಯತ್ಯಾಸಗಳಿವೆ. ಹೊಸ ಕಾಯಿಲೆಗಳಿಗೆ ಹೊಸ ಔಷಧಗಳನ್ನು ಸಿದ್ಧಪಡಿಸಿಕೊಳ್ಳಬೆಕಾಗುತ್ತದೆ. ಹಾಗಾಗಿಯೇ ಸುಬ್ರಮಣ್ಯ ರವರು ಈ ಬಗ್ಗೆ ಬಹಳ ಆಸ್ಥೆಯಿಂದ ಅಧ್ಯಯನವನ್ನು ಮಾಡಿ ಕಾಯಿಲೆಗಳ ಸ್ವರೂಪ, ಅದರ ರೋಗ ಲಕ್ಷಣಗಳು ಇವುಗಳನ್ನು ಅವಲೋಕಿಸಿ ಅದಕ್ಕೆ ತಕ್ಕಂತೆ ನಮ್ಮ ಪ್ರಕೃತಿಯಲ್ಲಿರುವ ಯಾವ ಗಿಡದಿಂದ ಈ ರೋಗಗಳನ್ನು ಹೋಗಲಾಡಿಸು ವುದಕ್ಕೆ ಸಾಧ್ಯ ಎಂಬುದನ್ನು ಪ್ರಯೋಗಿಸಿ ಆ ಬಗ್ಗೆ ಪ್ರಯತ್ನವನ್ನು ನಡೆಸುತ್ತಿದ್ದಾರೆ.

ಈಗಾಗಲೇ ಸುಮಾರು ಎಂಟು, ಹತ್ತು ಕಾಯಿಲೆಗಳಿಗೆ ತಮ್ಮದೇಯಾದ ಔಷಧ ಪದ್ಧತಿಯನ್ನು ಸಿದ್ಧಪಡಿಸಿ ಪ್ರಯೋಗಿಸಿದ್ದಾರೆ.
ಕೆಲವು ಮನುಷ್ಯನ ಕಾಯಿಲೆ ಹಾಗೂ ಜಾನವಾರು ಕಾಯಿಲೆಗಳಿಗೆ ಸಾಮ್ಯತೆಗಳಿವೆ ಎನ್ನುತ್ತಾರೆ ಸುಬ್ರಮಣ್ಯ ಅವರು. ಉದಾ ಹರಣೆಗೆ ಜಾಂಡಿಸ್. ಜಾನುವಾರು ಹಾಗೂ ಮನುಷ್ಯರಿಗೆ ಜಾಂಡಿಸ್ ರೋಗಕ್ಕೆ ನಾಟಿ ಪದ್ಧತಿಯಲ್ಲಿ ನೀಡುವ ಔಷಧ ಒಂದೇ ಆದರೂ ಕೊಡುವ ಪ್ರಮಾಣದಲ್ಲಿ ವ್ಯತ್ಯಾಸವಿದೆ. ಮನುಷ್ಯನಿಗೆ ಒಂದು ಚಮಚ ಔಷಧವನ್ನು ನೀಡಿದರೆ ಜಾನುವಾರು ಗಳಿಗೆ ಐದು ಪಟ್ಟು ಹೆಚ್ಚಿನ ಪ್ರಮಾಣ ನೀಡಬೇಕಾಗುತ್ತದೆ. ಪೂರ್ಣ ಪ್ರಮಾಣದ ನಾಟಿ ಪದ್ಧತಿಯನ್ನು ಅನುಸರಿಸುತ್ತಿರುವ ಸುಬ್ರಮಣ್ಯ ರವರು ಆಧುನಿಕ ಪದ್ಧತಿಯ ವಿರೋಧಿಯೇನು ಅಲ್ಲ. ತುರ್ತಾಗಿ ನೀಡಲೇ ಬೇಕಾದ ರೋಗಗಳಿಗೆ ಆಲೋಪತಿ ವಿಧಾನವನ್ನು ಬಳಸುವುದು ಸೂಕ್ತವೆನ್ನುತ್ತಾರೆ.

ಮಲೆನಾಡಿನಲ್ಲಿ ಸಿಗುವ ಕಾರ್ ಕೊಡ್ಸ್‌, ಚಿತ್ರಮೂಲ, ಪುತ್ರಂಜೀವಿ, ಗರುಡಪತಾಳ, ಅಮೃತಬಳ್ಳಿ, ಮದ್ದರಸ, ತೊರಂಗಚಕ್ಕೆ, ಜುಮ್ಮನಹರಳು, ಕಂಚುವಾಳ, ದೀಪದಬತ್ತಿ ಗಿಡ ಮುಂತಾದ ಗಿಡಗಳು ಅಮೂಲ್ಯವಾಗಿದೆ. ಈ ಗಿಡಮೂಲಿಕೆಯನ್ನು  ಜಾನು ವಾರು ರೋಗಕ್ಕೆೆ ಹೆಚ್ಚಾಗಿ ಬಳಸಲ್ಪಡುವ ವನಸ್ಪತಿಗಳಾಗಿವೆ. ಆ ಅಪರೂಪದ ಸಸ್ಯಗಳನ್ನು ಉಳಿಸಿ, ಬೆಳಸಿ ಪೋಷಿಸಿದಾಗ ಮಾತ್ರ ಅದು ಮುಂದಿನ ತಲೆಮಾರಿಗೆ ಉಳಿಯುತ್ತದೆ. ಈ ನಿಟ್ಟಿನಲ್ಲಿಯೂ ಕೂಡ ಯೋಚಿಸಿರುವ ಸುಬ್ರಮಣ್ಯವರು ಗಿಡಗಳನ್ನು ಕಾಪಿಡುವ ದೃಷ್ಠಿಕೋನದಿಂದ ವ್ಯವಸ್ಥಿತವಾದ ಪ್ರಯತ್ನವನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಈ ಸಸ್ಯಗಳ ಬಳಕೆ ಮತ್ತು ಅದರ ಉಪಯೋಗ ನಮ್ಮ ಹಿರಿಯರು ತಲೆ ತಲೆಮಾರಿನಿಂದ ಬಳಸಿಕೊಂಡು ಉಳಿಸಿಕೊಂಡು ಬಂದಿದ್ದಾರೆ. ಇಲ್ಲಿ ಯಾವುದೇ ಹಣ ಆಸೆಯನ್ನು ಹೊಂದದೆ, ಕೇವಲ ಸೇವಾ ಮನೋಭಾವನೆಯಿಂದಲೇ ಈ ಕಾರ್ಯದಲ್ಲಿ ತೊಡಗಿರುವುದು ವಿಶೇಷವಾಗಿದೆ. ಒಂದೊಮ್ಮೆ ಔಷಧ ಪಡೆದವರು ಒತ್ತಾಯಪೂರ್ವಕವಾಗಿ ಹಣವನ್ನು ನೀಡಿದರೆ ಅದನ್ನು ಕೂಡ ಸಮಾಜದ ಕಾರ್ಯಗಳಿಗೆ (ಗೋ ಶಾಲೆ, ದೇವಸ್ಥಾನ ಇತ್ಯಾದಿ) ವಿನಿಯೋಗಿಸುತ್ತಿದ್ದಾರೆ.

ತನಗೆ ತಿಳಿದ ವಿದ್ಯೆಯನ್ನು ಯಾವುದೇ ಅಪೇಕ್ಷೆಯಿಲ್ಲದೇ ನಿಷ್ಕಾಮಭಾವದಿಂದ ಸಮಾಜಮುಖಿಯಾಗಿ ತೊಡಗಿಸುತ್ತ ಮೂಕ ಜೀವಗಳನ್ನು ಉಳಿಸುವುದಕ್ಕೆ ಬಳಲ್ಪಡುತ್ತಿರುವುದು ಅತ್ಯಂತ ಪ್ರಶಂಸನೀಯವಾಗಿದೆ. ಉಚಿತ ಚಿಕಿತ್ಸೆ ನೀಡುವ ಕನಗೋಡು ಮನೆಯ ಸುಬ್ರಹ್ಮಣ್ಯಯ್ಯ ಅವರ ಸಂಪರ್ಕ: 7559592535