Wednesday, 11th December 2024

ರಾಣನ ಹೊತ್ತು ಬರಲಿದ್ದಾರೆ ನಂದಕಿಶೋರ್‌

ಈ ವರ್ಷ ನಂದಕಿಶೋರ್ ನಿರ್ದೇಶನದಲ್ಲಿ ಪೊಗರು ಚಿತ್ರ ಮೂಡಿಬಂದಿತ್ತು. ಸಾಹಸ ಪ್ರಧಾನವಾದ ಪೊಗರು ಅಷ್ಟಾಗಿ ಸದ್ದು ಮಾಡಲೇ ಇಲ್ಲ. ಆದರೂ
ನಂದಕಿಶೋರ್ ಕುಗ್ಗಲಿಲ್ಲ. ಬದಲಿಗೆ ಪ್ರೇಕ್ಷಕರು ಮೆಚ್ಚುವ ಚಿತ್ರವನ್ನು ನೀಡಬೇಕು ಎಂದು ಹಠತೊಟ್ಟರು. ಈ ಸಂದರ್ಭದಲ್ಲೇ ಮತ್ತೆ ಧ್ರುವಸರ್ಜಾ ಅವರ ಜತೆ ದುಬಾರಿ ಚಿತ್ರಕ್ಕೆ ಆಕ್ಷನ್‌ಕಟ್ ಹೇಳಲು ಮುಂದಾದರು. ಚಿತ್ರದ ಸ್ಕ್ರಿಪ್ಟ್ ಪೂಜೆಯೂ ಮುಗಿದಿತ್ತು.

ಆದರೆ ಅದ್ಯಾಕೋ ಚಿತ್ರ ಸೆಟ್ಟೇರಲೇ ಇಲ್ಲ, ಮತ್ತೆ ಮುಂದೂಡಿಕೆಯಾಯಿತು. ಹಾಗಾಗಿ ನಂದಕಿಶೋರ್ ಈಗ ರಾಣನ ಹಿಂದೆ ಬಿದ್ದಿದ್ದಾರೆ. ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಅಭಿನಯಿಸುತ್ತಿರುವ ರಾಣ ಚಿತ್ರದ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈಗಷ್ಟೇ ಚಿತ್ರದ ಶೀರ್ಷಿಕೆ ಘೋಷಣೆಯಾಗಿದೆ. ಈ ಚಿತ್ರದ ಶೀರ್ಷಿಕೆ ಮೊದಲು ನಿರ್ಮಾಪಕ ರಮೇಶ್ ಕಶ್ಯಪ್ ಅವರ ಬಳಿಯಿತ್ತು. ಎ.ಹರ್ಷ ನಿರ್ದೇಶನದಲ್ಲಿ ಯಶ್ ಈ ಚಿತ್ರದಲ್ಲಿ ನಟಿಸಬೇಕಿತ್ತು. ಕಾರಣಾಂತರಗಳಿಂದ
ಚಿತ್ರಕ್ಕೆ ಚಾಲನೆ ಸಿಗಲೇ ಇಲ್ಲ. ಹಾಗಾಗಿ ರಾಣ ಶೀರ್ಷಿಕೆಯನ್ನು ನಿರ್ಮಾಪಕ ಪುರುಷೋತ್ತಮ ಗುಜ್ಜಾಲ್ ಅವರಿಗೆ ನೀಡಿದ್ದಾರೆ.

ಅಪ್ಪಟ ಸ್ವಮೇಕ್ ಚಿತ್ರ
ನಂದಕಿಶೋರ್ ನಿರ್ದೇಶನದ ಬಹುತೇಕ ಸಿನಿಮಾಗಳು ರಿಮೇಕ್ ಆಗಿರುತ್ತಿದ್ದವು. ಪೊಗರು ಚಿತ್ರದಿಂದ ಸ್ವಮೇಕ್ ಚಿತ್ರಗಳ ನಿರ್ದೇಶನದತ್ತ ಆಸಕ್ತಿ ತೋರಿದ್ದಾರೆ. ರಾಣ ಚಿತ್ರ ಕೂಡ ಸ್ವಮೇಕ್ ಚಿತ್ರ ಎಂಬುದು ವಿಶೇಷ. ರಾಣ ಆಕ್ಷನ್ ಪ್ರಧಾನ ಚಿತ್ರ ಎಂಬುದು ಟೈಟಲ್‌ನಲ್ಲೇ ಗೊತ್ತಾಗುತ್ತದೆ. ಹಾಗಂತ ಕೇವಲ ಆಕ್ಷನ್‌ಗೆ ಸೀಮಿತಗೊಳಿಸಿದೆ, ಲವ್, ಥ್ರಿಲ್ಲರ್ ಅಂಶಗಳು ಚಿತ್ರದ ಕಥೆಯಲ್ಲಿವೆ. ಇದೇ ತಿಂಗಳ ೭ ರಂದು ಚಿತ್ರದ ಮಹೂರ್ತ ನೆರವೇರಲಿದೆ. ಕರ್ನಾಟಕದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಿರುವ ಚಿತ್ರತಂಡ ವಿದೇಶಕ್ಕೂ ಹಾರಲು ಪ್ಲಾನ್ ಮಾಡಿದೆ. ಶ್ರೇಯಸ್‌ಗೆ ನಾಯಕಿಯಾಗಿ ರೇಷ್ಮಾ ನಾಣಯ್ಯ ಬಣ್ಣಹಚ್ಚಲಿದ್ದಾರೆ. ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ ನೀಡುತ್ತಿದ್ದಾರೆ.

ಶೇಖರ್ ಚಂದ್ರು ಛಾಯಾಗ್ರಹಣ, ಕೆ.ಎಂ ಪ್ರಕಾಶ್ ಸಂಕಲನ, ಪ್ರಶಾಂತ್ ರಾಜಪ್ಪ ಅವರ ಸಂಭಾಷಣೆ ರಾಣ ಚಿತ್ರಕ್ಕಿದೆ. ಪಡ್ಡೆಹುಲಿ, ವಿಷ್ಣುಪ್ರಿಯ ಚಿತ್ರಗಳಲ್ಲಿ ಶ್ರೇಯಸ್ ಅಭಿನಯ ನನಗೆ ಹಿಡಿಸಿತು. ಹಾಗಾಗಿ ನಮ್ಮ ಮುಂದಿನ ಚಿತ್ರಕ್ಕೆ ಶ್ರೇಯಸ್ ನಾಯಕ ಎಂದು ಅಂದೇ ನಿರ್ಧರಿಸಿದೆ. ಈ ನಡುವೆ ನಂದ ಕಿಶೋರ್ ನಮ್ಮ ಜತೆಯಾದರು. ಈ ಇಬ್ಬರ ಕಾಂಬಿನೇಷನ್‌ನಲ್ಲಿ ಒಂದೊಳ್ಳೆ ಮಾಸ್ ಸಿನಿಮಾ ನಿರ್ಮಾಣ ಮಾಡಬೇಕೆಂದುಕೊಂಡೆ, ಅಂದುಕೊಂಡಂತೆ ಈಗ ಚಿತ್ರದ
ಶೀರ್ಷಿಕೆ ಬಿಡುಗಡೆಯಾಗಿದೆ. ಇದೇ ತಿಂಗಳು ಮಹೂರ್ತ ಮುಗಿಸಿ ಚಿತ್ರೀಕರಣಕ್ಕೆ ತೆರಳಲಿದ್ದೇವೆ ಎನ್ನುತ್ತಾರೆ ನಿರ್ಮಾಪಕ ಪುರುಷೋತ್ತಮ.

ಏಕ್ ಲವ್ ಯಾ ಬೆಡಗಿ ರಾಣನಿಗೆ ನಾಯಕಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರದಲ್ಲಿ ನಟಿಸಿದ್ದ ರೇಷ್ಮಾ ನಾಣಯ್ಯ, ರಾಣನಿಗೆ ಜತೆಯಾಗಿ ನಟಿಸು ತ್ತಿದ್ದಾರೆ. ಮೊದಲ ಚಿತ್ರ ತೆರೆಗೆ ಬರುವ ಮೊದಲೇ ರೇಷ್ಮಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆ ದಿನಗಳು ಖ್ಯಾತಿಯ ಚೇತನ್ ಜತೆಗೆ ಮಾರ್ಗ ಚಿತ್ರದಲ್ಲಿ ನಟಿಸುತ್ತಿರುವ ರೇಷ್ಮಾ, ಈಗ ರಾಣನ ಜತೆ ರೊಮ್ಯಾನ್ಸ್ ಮಾಡಲಿದ್ದಾರೆ.