Wednesday, 11th December 2024

ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ದಶಕ

ವಸಂತ ಗ ಭಟ್‌

ಟೆಕ್‌ ಫ್ಯೂಚರ್‌

ಈಗ ಆರಂಭಗೊಂಡಿರುವ 2021 ವರ್ಷದ ಜತೆಯಲ್ಲೇ ಹೊಸ ದಶಕದ ಆರಂಭವೂ ಆಗಿದೆ. ಕಳೆದ 20 ವರ್ಷಗಳಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆದ ಹೊಸ ಅನ್ವೇಷಣೆಗಳು, ಬದಲಾವಣೆಗಳು ಹಿಂದಿನ ಎರಡು ಶತಮಾನದಲ್ಲಿಯೂ ಸಹ ಆಗಿರಲಿಲ್ಲ. ಮುಂದಿನ ದಶಕ ಕೂಡ ಇನ್ನಷ್ಟು ಹೊಸ ತಂತ್ರಜ್ಞಾನಕ್ಕೆ ತೆರೆದುಕೊಳ್ಳಲು ಸಿದ್ಧಗೊಳ್ಳುತ್ತಿದೆ. ಮುಂದಿನ ದಶಕವನ್ನು ಆಳುವ ಆ ತಂತ್ರಜ್ಞಾನಗಳಾವುವು? ಅಂತಹ ತಂತ್ರಜ್ಞಾನವು ನಮ್ಮ ದಿನಚರಿಯ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು? ಸದ್ಯದಲ್ಲೇ ಬರಲಿರುವ ಅಂತಹ ಕೆಲವು ಆವಿಷ್ಕಾರಗಳನ್ನು ನೋಡೋಣ.

5 ಜಿ ತಂತ್ರಜ್ಞಾನ
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ 5 ಜಿ ಹೆಚ್ಚಿನ ದೇಶಗಳಲ್ಲಿ ಕಾರ್ಯ ನಿರ್ವಹಿಸಬೇಕಾಗಿತ್ತು. ಆದರೆ ಇನ್ನೂ 4 ಜಿ ನೆಟ್‌ವರ್ಕ್‌ಗೆ ಹೆಚ್ಚಿನ ಮೊಬೈಲ್ ಸಂಸ್ಥೆಗಳು ಅಪ್‌ಗ್ರೇಡ್ ಆಗಿಲ್ಲದ ಕಾರಣ ಮತ್ತು 5 ಜಿ ನೆಟ್‌ವರ್ಕ್ ‌ಅನ್ನು ರೂಪಿಸಲು ಖರ್ಚಾಗುವ ಹೇರಳ ಹಣದ ಕಾರಣದಿಂದ ಇಂದಿಗೂ ಕೆಲವೇ ಕೆಲವು ಸಂಸ್ಥೆಗಳು 5 ಜಿ ನೆಟ್‌ವರ್ಕ್‌ಅನ್ನು ಬಳಕೆದಾರನಿಗೆ
ನೀಡುತ್ತಿವೆ. ಆದರೆ ಮನೆಯಲ್ಲಿಯೇ ಕೂತು ಕೆಲಸ ಮಾಡುವಂತೆ ಮಾಡಿದ ಕರೋನಾ ಸಮಸ್ಯೆಯು, ಮುಂದಿನ ದಿನಗಳಲ್ಲಿ ಮನುಷ್ಯರು ಕೆಲಸ ಮಾಡುವ ರೀತಿಯನ್ನೇ ಬದಲಾಯಿಸಿದೆ. ಮನೆಯಿಂದಲೇ ಎಲ್ಲ ಕೆಲಸಗಳನ್ನು ಮಾಡಲು ವೇಗದ ಅಂತರ್ಜಾಲದ ಅನಿವಾರ್ಯ. ಜತೆಗೆ ಮಾನವ ರಹಿತ ಚಾಲನೆ ಮಾಡುವ ಏರ್ ಟ್ಯಾಕ್ಸಿ, ಕಾರು ಇತ್ಯಾದಿಗಳು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿ ಸಲು 5 ಜಿ ಅತ್ಯಂತ ಆವಶ್ಯಕ.

2021 ರ ಅಂತ್ಯದ ವೇಳೆಗೆ ಹೆಚ್ಚಿನ ದೇಶಗಳಲ್ಲಿ 5 ಜಿ ತಂತ್ರಜ್ಞಾನ ಲಭ್ಯವಿರಲಿದ್ದು ನಾವು ಅಂತರ್ಜಾಲವನ್ನು ಬಳಸುವ ಪರಿಯೆ ಸಂಪೂರ್ಣವಾಗಿ ಬದಲಾಗಲಿದೆ. ಸಮೀಕ್ಷೆಯ ಪ್ರಕಾರ 5 ಜಿ ತಂತ್ರಜ್ಞಾನ 2021 ರಲ್ಲಿ ಸುಮಾರು 41.48 ಬಿಲಿಯನ್ ಡಾಲರ್ ಗಿಂತಲೂ ಅಧಿಕ ಮಾರುಕಟ್ಟೆೆಯನ್ನು ಹೊಂದಲಿದೆ.

ಕೃತಕ ಬುದ್ಧಿಮತ್ತೆ

ಸಮೀಕ್ಷೆಗಳ ಪ್ರಕಾರ ಕೇವಲ 2021 ರಲ್ಲೇ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಸುಮಾರು 58 ಬಿಲಿಯನ್ ಅಮೆರಿಕನ್ ಡಾಲರ್ ಗಿಂತಲೂ ಅಧಿಕ ಹೂಡಿಕೆಯಾಗಲಿದೆ ಮತ್ತು ಕೃತಕ ಬುದ್ಧಿಮತ್ತೆಯ ಒಟ್ಟು ಮಾರುಕಟ್ಟೆ ಸುಮಾರು 190 ಬಿಲಿಯನ್ ಡಾಲರ್ ಆಸುಪಾಸಿನಲ್ಲಿರಲಿದೆ. ಮುಂದಿನ ದಶಕದಲ್ಲಿ ಕೃತಕ ಬುದ್ದಿಮತ್ತೆ ಹೆಚ್ಚು ಕಡಿಮೆ ಎಲ್ಲಾ ಕ್ಷೇತ್ರವನ್ನು ಆಳಲಿದೆ. ಮನುಷ್ಯನ ಭಾವನೆಗಳನ್ನು ಅರ್ಥೈಸಿಕೊಂಡು ಆತ ಈ ಸಂಧರ್ಭ ದಲ್ಲಿದ್ದರೆ ಏನು ನಿರ್ಣಯ ಕೈ ಗೊಳ್ಳುತ್ತಿದ್ದ ಎನ್ನುವುದನ್ನು ನಿರ್ಧರಿಸುವ ತಂತ್ರಜ್ಞಾನವೇ ಕೃತಕ ಬುದ್ಧಿಮತ್ತೆ.

ಸ್ವಯಂ ಚಾಲಿತ ಕಾರು, ಟ್ಯಾಕ್ಸಿ, ರೋಬೋಟ್ ಪೋಸ್ಟ್ಮನ್, ಗೋದಾಮು ಗಳಲ್ಲಿ ವಸ್ತುಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸುವ ರೋಬೋಟ್‌ಗಳು ಇವೆಲ್ಲವೂ ಕಾರ್ಯ ನಿರ್ವಹಿಸುವುದು ಕೃತಕ ಬುದ್ಧಿಮತ್ತೆಯಿಂದ. ಬೆಂಗಳೂರಿನ ಕೆಲವು ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಕೃತಕ ಬುದ್ಧಿಮತ್ತೆ ಬಳಸಿ ರೋಗಿಗಳ ನಾಲಿಗೆಯ ಚಿತ್ರವನ್ನೂ ತೆಗೆದು ಅದನ್ನು ಸಂಸ್ಕರಿಸಿ ಯಾವ ಕಾಯಿಲೆಯ ಸಾಧ್ಯತೆ ಇದೆ ಎನ್ನುವುದನ್ನು ತಿಳಿದುಕೊಳ್ಳುವ ಹಲವಾರು ಆ್ಯಪ್ ಗಳನ್ನು ಬಳಸುವ ವೈದ್ಯರಿದ್ದಾರೆ.

ಅಷ್ಟೇ ಅಲ್ಲದೆ ರಕ್ತದ ಮಾದರಿ ಪಡೆದು ಮುಂಬರುವ ಕಾಯಿಲೆಗಳನ್ನು ಸಹ ಕಂಡುಹಿಡಿಯುವ ಕೃತಕ ಬುದ್ಧಿಮತ್ತೆಯ ತಂತ್ರ ಜ್ಞಾನಗಳಿವೆ. ಮುಂದಿನ ದಶಕದಲ್ಲಿ ಪ್ರಾಯಶಃ ನಿತ್ಯದ ಎಲ್ಲ ಕೆಲಸಗಳಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಕೃತಕ ಬುದ್ಧಿಮತ್ತೆ ಯ ಪಾತ್ರ ಖಂಡಿತವಾಗಿಯೂ ಇರಲಿದೆ.

ಹ್ಯೂಮನ್ ಆಗ್‌ಮೆಂಟೇಶನ್
ಈಗಾಗಲೇ ಈ ಕ್ಷೇತ್ರದಲ್ಲಿ ಹಲವಾರು ಅನ್ವೇಷಣೆಗಳು ನಡೆಯುತ್ತಿದ್ದು ಮುಂದಿನ ದಶಕದಲ್ಲಿ ಇದು ಮನುಷ್ಯನ ಆಯಸ್ಸನ್ನು ಹೆಚ್ಚು ಮಾಡುವು ದರಲ್ಲಿ ಯಾವುದೇ ಸಂಶಯವಿಲ್ಲ. ನಮ್ಮ ಮೆದುಳಿನ ಸಂದೇಶವನ್ನು ಬಳಸಿ ಕೊಂಡು ನಮ್ಮ ನೈಜ ಅಂಗದಂತೆ ಕಾರ್ಯ ನಿರ್ವಹಿಸುವ ಕೃತಕ ಕೈ, ಕಾಲು ಗಳು ಮತ್ತಿತರ ಅಂಗಗಳು ಈಗಾಗಲೇ ಮಾರುಕಟ್ಟೆಯಲ್ಲಿದ್ದು ಅವುಗಳ ಬೆಲೆ
ದುಬಾರಿಯಾಗಿವೆ. ಈ ದಶಕದಲ್ಲಿ ಈ ಕ್ಷೇತ್ರದಲ್ಲಿ ಇನ್ನೂ ಹೆಚ್ಚು ಸಂಶೋಧನೆ ಗಳು ನಡೆಯುವ ಕಾರಣದಿಂದ ಇವುಗಳ ಬೆಲೆ ಕಡಿಮೆಯಾಗಲಿದೆ. ಅದರ ಜತೆಗೆ ಕೃತಕ ಹೃದಯ, ಶ್ವಾಸಕೋಶಗಳ ರೀತಿಯ ಕ್ಲಿಷ್ಟ ಕಾರ್ಯವನ್ನು ನಿರ್ವಹಿಸುವ ಅಂಗ ಗಳನ್ನು ಸಹ ಈ ತಂತ್ರಜ್ಞಾನದಲ್ಲಿ ರೂಪಗೊಳ್ಳುತ್ತಿವೆ.

ರೋಬೋಟಿಕ್ಸ್ ಮತ್ತು ಡ್ರೋನ್

ಕರೋನಾ ಸಮಯದಲ್ಲಿ ನಷ್ಟ ಅನುಭವಿಸಿದ ಹೆಚ್ಚಿನ ಸಂಸ್ಥೆಗಳು ಮತ್ತೆ ಲಾಭದ ಹಳಿಗೆ ಮರಳಲು ಸಂಸ್ಥೆಯ ಆಂತರಿಕ ವ್ಯವಹಾರದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿಕೊಂಡಿವೆ. ಅದರಲ್ಲಿ ಮುಖ್ಯವಾದುದು ಮನುಷ್ಯರ ಅವಲಂಬನೆಯ ಅವಶ್ಯಕತೆ ಅಷ್ಟಾಗಿ ಇರದ ಜಾಗಗಳಲ್ಲಿ ಮನುಷ್ಯರ ಬದಲು ರೊಬೋಟ್‌ಗಳನ್ನು ಬಳಕೆ ಮಾಡುವುದು. ಅದಾಗಲೇ ಅಮೆ ಜೋನ್, ಅಲಿಬಾಬಾ ತರಹದ ಸಂಸ್ಥೆಗಳು ಈ ಕ್ಷೇತ್ರದಲ್ಲಿ ಕಾರ್ಯ ಪ್ರವ್ರತ್ತವಾಗಿ ತಮ್ಮ ಸಂಗ್ರಹಣಾ ಕೇಂದ್ರದಲ್ಲಿ ವಸ್ತುಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸಲು ಮತ್ತು ಪ್ಯಾಕ್ ಮಾಡಲು ಬಳಸುತ್ತಿದ್ದ ರೊಬೋಟ್‌ಗಳ ಸಂಖ್ಯೆಯನ್ನು ಹೆಚ್ಚಿಸಿವೆ.

ಇದರ ಜೊತೆಗೆ ಅಮಜೋನ್ ಅಲಿಬಾಬಾ, ಗೂಗಲ್ ತರಹದ ಸಂಸ್ಥೆಗಳು ಇತರ ಸಂಸ್ಥೆಗಳಿಗೆ ಅವಶ್ಯಕ ರೊಬೋಟ್ ಗಳನ್ನು ಬಾಡಿಗೆ ಕೊಡುವಂತಹ ಯೋಜನೆಯನ್ನು ಸಹ ಆರಂಭಿಸಿವೆ. ಈ ಸಂಸ್ಥೆಗಳು ನಿಮ್ಮ ಅವಶ್ಯಕತೆಗಳಿಗೆ ತಕ್ಕಂತಹ ರೊಬೋಟ್ ‌ಗಳನ್ನು ಪ್ರೋಗ್ರಾಮ್ ಮಾಡಿ ಬಾಡಿಗೆಗೆ ನೀಡುತ್ತಾರೆ. ಜೊತೆಗೆ ವಸ್ತುಗಳನ್ನು ಒಂದು ಕಡೆಯಿಂದ ಇನ್ನೊಂದೆಡೆಗೆ ಸಾಗಿಸಲು ಡ್ರೋನ್ ಇನ್ನೂ ಮುಂದೆ ಹೆಚ್ಚಾಗಿ ಬಳಕೆಯಾಗಲಿದೆ.

ಸಧ್ಯ ಡೊಮಿನೊಸ್, ಅಮಜೋನ್ ಜತೆಗೆ ಅಮೆರಿಕ ಮತ್ತಿತರ ಹಲವು ದೇಶಗಳ ಅಂಚೆ ಕಚೇರಿಯ ಪೋಸ್ಟ್‌ ಗಳ ಸಾಗಾಟಕ್ಕೆ ಡ್ರೋನ್ ಬಳಸುವ ತಯಾರಿ ಅದಾಗಲೇ ಮುಗಿದಿದ್ದು 2021 ರಲ್ಲಿ ಅವು ಕಾನುನಾತ್ಮಕವಾಗಿ ಬಳಕೆಗೆ ಬರುವ ಸಾಧ್ಯತೆ ಹೆಚ್ಚಿದೆ. ಬೆಂಕಿ ಆರಿಸಲು, ಔಷಧ ವಸ್ತುಗಳನ್ನು ದೂರದ ಊರುಗಳಿಗೆ, ಗ್ರಾಮೀಣ ಪ್ರದೇಶಗಳಿಗೆ ವೇಗವಾಗಿ ಸಾಗಿಸುವ ಡ್ರೋನ್‌ಗಳು ಸಹ ಶೀಘ್ರದಲ್ಲೇ ಮಾರುಕಟ್ಟೆೆಯಲ್ಲಿ ಲಭ್ಯವಾಗಲಿದೆ.

ಕ್ಲೌಡ್ ಕಂಪ್ಯೂಟಿಂಗ್
ಒಂದು ಚಿಕ್ಕ ಉದಾಹರಣೆಯೊಂದಿದೆ ಆರಂಭಿಸಬೇಕೆಂದರೆ ಲಾಕ್‌ಡೌನ್ ಆಗುವ ಮುನ್ನ ಜೂಮ್, ಮೈಕ್ರೋಸಾಫ್ಟ್ ಟೀಮ್ಸ್ ತರಹದ ವೀಡಿಯೋ ಕಾಲಿಂಗ್ ಅಪ್ಲಿಕೇಷನ್‌ಗಳನ್ನು ಬಳಸುವವರ ಸಂಖ್ಯೆ ಬಹಳ ಕಡಿಮೆಯಿತ್ತು. ಆದರೆ ಲಾಕ್‌ಡೌನ್ ಆದ ನಂತರ ಅವುಗಳನ್ನು ಬಳಸುವರ ಸಂಖ್ಯೆ ಒಮ್ಮೆಗೇ ಹೆಚ್ಚಾಯಿತು. ಎಷ್ಟರ ಮಟ್ಟಿಗೆ ಎಂದರೆ ಕೇವಲ ಜೂಮ್‌ನ ಬಳಕೆದಾರರ ಸಂಖ್ಯೆ ಕೆಲವೇ ದಿನಗಳಲ್ಲಿ 50 ಪ್ರತಿಶತಕ್ಕಿಂತಲೂ ಹೆಚ್ಚಿತು.

ಈ ರೀತಿ ಒಂದೇ ಬಾರಿಗೆ ಬಳಕೆದಾರದು ಹೆಚ್ಚಾದರು ಜೂಮ್ ಜನಕ್ಕೆ ಕೊಡುವ ಸೇವೆಯಲ್ಲಿ ಯಾವುದೇ ಲೋಪ ದೋಷ ವಾಗಲಿಲ್ಲ. ಒಂದು ಸಂಸ್ಥೆ ಈ ರೀತಿ ಅನಿರೀಕ್ಷಿತ ಬಳಕೆದಾರರನ್ನು ಸಂತೃಪ್ತಿ ಪಡಿಸಲು ಸಾಧ್ಯವಾದದ್ದು ಕ್ಲೌಡ್ ಸಂಗ್ರಹ ಮತ್ತು ಕಂಪ್ಯೂಟಿಂಗ್‌ನಿಂದ. ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಹೇಳಬೇ ಕೆಂದರೆ ನಾವು ಬಳಕೆಮಾಡುವ ಲ್ಯಾಪ್‌ಟಾಪ್‌ನಲ್ಲಿ ಒಂದು ನಿರ್ದಿಷ್ಟ ಹಾರ್ಡ್ ಡಿಸ್ಕ್‌‌ನಲ್ಲಿ ಒಂದಷ್ಟು ಜಾಗವಿರುತ್ತದೆ.

ಅದನ್ನು ಮೀರಿ ಅಲ್ಲಿ ಯಾವುದೇ ಮಾಹಿತಿಯನ್ನು ಸಂಗ್ರಹಿಸಲು ಸಾಧ್ಯವಿಲ್ಲ. ಅದೇ ಗೂಗಲ್ ಡ್ರೈವ್ ಆಗಿದ್ದರೆ ಅದರ ಉಚಿತ ಸಂಗ್ರಹ ಮುಗಿದ ನಂತರ ಹೆಚ್ಚಿನ ಸಂಗ್ರಹವನ್ನು ಯಾವಾಗ ಬೇಕಾದರೂ ಹಣ ಕೊಟ್ಟು ಖರೀದಿಸಿ ಸಂಗ್ರಹಣಾ ಸಾಮರ್ಥ್ಯವನ್ನು
ಹೆಚ್ಚಿಸಿಕೊಳ್ಳಬಹುದು. ಹೆಚ್ಚಿನ ಸಂಸ್ಥೆಗಳು ಇದೇ ಮಾದರಿಯನ್ನು ಅಳವಡಿ ಕೊಂಡು ಸಂಸ್ಥೆಯನ್ನು ನಡೆಸುತ್ತಿವೆ. ಬಳಕೆದಾರರ ಸಂಖ್ಯೆಯನ್ನು ನೋಡಿಕೊಂಡು ಕ್ಲೌಡ್ ಜಾಗವನ್ನು ತೆಗೆದುಕೊಳ್ಳುವುದು ಅಥವಾ ಖರೀದಿಸಿದ ಜಾಗವನ್ನು ವಾಪಸ್ಸು ಮಾಡು ವುದು. ಇದರ ಬಳಕೆ ಮುಂದಿನ ದಶಕದಲ್ಲಿ ಇನ್ನಷ್ಟು ಹೆಚ್ಚಾಗಲಿದ್ದು ತಮ್ಮದೇ ಸ್ವಂತ ಸರ್ವರ್ಗಳನ್ನು ಹೊಂದುವ ಸಂಸ್ಥೆಗಳ ಸಂಖ್ಯೆ  ಅತ್ಯಲ್ಪವಾಗಲಿದೆ.