ಟೆಕ್ ಫ್ಯೂಚರ್
ವಸಂತ ಗ ಭಟ್
ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್ ಬಳಸುವವರಲ್ಲಿ ಜನಪ್ರಿಯ ಎನಿಸಿರುವ ವಿಂಡೋಸ್ 10 ಈಗ ಹಳೆಯದಾಗಿದ್ದು, ಅದರ ಜಾಗದಲ್ಲಿ ಮೈಕ್ರೊಸಾಫ್ಟ್
ತರುತ್ತಿದೆ ವಿಂಡೋಸ್ 11 ಆಪರೇಟಿಂಗ್ ಸಿಸ್ಟಮ್.
ಐದು ವರ್ಷವಾಯಿತು. 29 ಜುಲೈ 2015 ರಂದು ಮೈಕ್ರೋಸಾಫ್ಟ್’ನ ವಿಂಡೋಸ್ 10 ಆಪರೇಟಿಂಗ್ ಸಿಸ್ಟಮ್ ಬಿಡುಗಡೆಯಾದ ನಂತರ ಅವರಿಂದ ಹೊಸ ಆಪರೇಟಿಂಗ್ ಸಿಸ್ಟಮ್ ಬಿಡುಗಡೆಯಾಗಿಲ್ಲ. ವಿಂಡೋಸ್ 10, ಮೈಕ್ರೋಸಾಫ್ಟ್ ಬಿಡುಗಡೆ ಮಾಡುವ ಕೊನೆಯ ಆಪರೇಟಿಂಗ್ ಸಿಸ್ಟಮ್ ಆಗಲಿದೆಯೆಂದು ಎದ್ದಿದ್ದ ಎಲ್ಲಾ ಊಹಾಪೋಹಗಳಿಗೂ ಉತ್ತರ ನೀಡಿರುವ ಮೈಕ್ರೋಸಾಫ್ಟ್ ಇದೇ ಸೆಪ್ಟೆಂಬರ್ ನಲ್ಲಿ ವಿಂಡೋಸ್ 11 ಆಪರೇಟಿಂಗ್ ಸಿಸ್ಟಮ್ ಅನ್ನು ಬಿಡುಗಡೆ
ಮಾಡಲು ಸಿದ್ಧತೆಗಳನ್ನು ಮಾಡಿಕೊಂಡಿದೆ.
1985 ರಲ್ಲಿ ವಿಂಡೋಸ್ 1 ಆಪರೇಟಿಂಗ್ ಸಿಸ್ಟಮ್ ಬಿಡುಗಡೆಯಾದ ಕಾಲದಿಂದಲೂ ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಗೆ ಸರಿ ಸಮನಾಗಿ ಸ್ಪರ್ಧೆ ನೀಡುವ ಇನ್ನೊಂದು ಆಪರೇಟಿಂಗ್ ಸಿಸ್ಟಮ್ ರೂಪುಗೊಂಡಿಲ್ಲ. ವಿವಿಧ ಸಂಸ್ಥೆಗಳು ಉತ್ಪಾದಿಸಿದ ಲ್ಯಾಪ್‌ಟಾಪ್‌ನಲ್ಲಿ ಸರಾಗವಾಗಿ ಕಾರ್ಯ ನಿರ್ವಹಿಸುವ ಕ್ಷಮತೆ ಹೊಂದಿರುವುದು ವಿಂಡೋಸ್‌ನ ಈ ಹಿರಿಮೆಗೆ ಕಾರಣವಾಗಿರಬಹುದು. 2020 ರ ವರದಿಯ ಪ್ರಕಾರ ಕಂಪ್ಯೂಟರ್ ಆಪರೇಟಿಂಗ್ ಸಿಸ್ಟಮ್‌ನ ಒಟ್ಟು
ಮಾರುಕಟ್ಟೆಯ ಸುಮಾರು 88 ಪ್ರತಿಶತ ಮೈಕ್ರೋಸಾಫ್ಟ್ ಬಳಿಯಿದೆ.
ದೀರ್ಘ ಕಾಲದವರೆಗೆ ಹೊಸ ಆಪರೇಟಿಂಗ್ ಸಿಸ್ಟಮ್ ಅನ್ನು ಬಿಡುಗಡೆ ಮಾಡದಿದ್ದರೆ ಬಳಕೆದಾರರಿಗೆ ವಿಂಡೋಸ್ 10 ಹಳೆಯದು ಎನ್ನಿಸಬಹುದು ಎನ್ನುವ
ಉದ್ದೇಶದಿಂದ ಬಿಡುಗಡೆಯಾದ ಆಪರೇಟಿಂಗ್ ಸಿಸ್ಟಮ್ ವಿಂಡೋಸ್ 11. ವಿಂಡೋಸ್ 10 ಲ್ಯಾಪ್‌ಟಾಪ್ ಹೊಂದಿರುವ ಬಳಕೆದಾರರು ಉಚಿತವಾಗಿ ವಿಂಡೋಸ್ 11 ಗೆ ಅಪ್ಡೇಟ್ ಆಗಬಹುದಾಗಿದೆ.
ಏನಿದು ಆಪರೇಟಿಂಗ್ ಸಿಸ್ಟಮ್?
ಆಪರೇಟಿಂಗ್ ಸಿಸ್ಟಮ್ ಒಂದು ಸಂಕೀರ್ಣ ತಂತ್ರಾಂಶ. ನಿಮ್ಮ ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ನಲ್ಲಿರುವ ಇಂಟೆಲ್, ಎಎಂಡಿ ಪ್ರೋಸೆಸರ್‌ಗಳ ಜತೆ ಯಾವುದೇ ಸಾಫ್ಟ್ವೇರ್ ಸಂವಹನ ಮಾಡಬೇಕೆಂದರೆ ಅದು ಆಪರೇಟಿಂಗ್ ಸಿಸ್ಟಮ್ ಮೂಲಕವೇ ನಡೆಯಬೇಕು. ಉದಾಹರಣೆಗೆ ಲ್ಯಾಪ್‌ಟಾಪ್ ನಲ್ಲಿ ಒಂದು ವೀಡಿಯೋ ವನ್ನು ನೋಡಬೇಕು ಎಂದಾದರೆ, ವೀಡಿಯೋ ವನ್ನು ತೋರಿಸುವ ಸಾಫ್ಟ್ವೇರ್ ಆಪರೇಟಿಂಗ್ ಸಿಸ್ಟಮ್‌ಗೆ ವೀಡಿಯೋವನ್ನು ಹಾರ್ಡ್‌ಡಿಸ್ಕ್‌ನಿಂದ ತಂದು ಕೊಡುವಂತೆ ಆದೇಶ ನೀಡುತ್ತದೆ. ಅದರಂತೆ ಆಪರೇಟಿಂಗ್ ಸಿಸ್ಟಮ್ ವೀಡಿಯೋ ಸಂಗ್ರಹಗೊಂಡಿರುವ ಜಾಗದಿಂದ ಅದನ್ನು ತಂದು ವೀಡಿಯೋ ತೋರಿಸುವ ಸಾಫ್ಟ್ವೇರ್‌ಗೆ ನೀಡಿದ ತಕ್ಷಣ ನೀವು ವೀಡಿಯೋವನ್ನು ನೋಡಬಹುದು. ಹೀಗೆ ಲ್ಯಾಪ್‌ಟಾಪ್‌ನ ಎಲ್ಲ ತಂತ್ರಾಂಶಗಳು ಕಾರ್ಯ ನಿರ್ವಹಿಸಲು ಆಪರೇಟಿಂಗ್ ಸಿಸ್ಟಮ್ ಬೇಕೆ ಬೇಕು.
ವಿಂಡೋಸ್ 11 ನ ವೈಶಿಷ್ಟ್ಯತೆ ಗಳು
ವಿಂಡೋಸ್ 10 ಬಳಸುತ್ತಿರುವವರಿಗೆ ಇದರ ಅರಿವಿರುತ್ತದೆ. ವಿಂಡೋಸ್ ನ ಸ್ಟಾರ್ಟ್ ಬಟನ್ ವಿಂಡೋಸ್ 10 ರಲ್ಲಿ ಎಡ ಭಾಗದಲ್ಲಿದ್ದು ವಿಂಡೋಸ್ 11 ನಲ್ಲಿ ಅದು ಮಧ್ಯ ಭಾಗದಲ್ಲಿರಲಿದೆ. ಅಷ್ಟೇ ಅಲ್ಲದೆ ಎಲ್ಲ ಸಾಫ್ಟ್’ವೇರ್ ಗಳು ಸಹ ಪರದೆಯ ಕೆಳಭಾಗದ ಮಧ್ಯದಿಂದ ತೆರೆದುಕೊಳ್ಳಲಿದೆ. ಸತ್ಯ ನಾಡೆಲ್ಲ ಹೇಳುವ ಪ್ರಕಾರ ಇದರ ಮುಖ್ಯ ಉದ್ದೇಶ ವಿಂಡೋಸ್ 11 ಬಳಕೆದಾರರನ್ನು ಕೇಂದ್ರೀಕರಿಸಿ ಮಾಡಿದ ಆಪರೇಟಿಂಗ್ ಸಿಸ್ಟಮ್. ಹಾಗಾಗಿ ಎಲ್ಲ ಅವಕಾಶಗಳು ಪರದೆಯ ಕೆಳಭಾಗದ ಮಧ್ಯದಲ್ಲಿರಲಿದೆ. ಸ್ಟಾರ್ಟ್ ಬಟನ್ ಒತ್ತಿದ ತಕ್ಷಣ ಎಲ್ಲ ಸಾಫ್ಟ್’ವೇರ್‌ಗಳು ಗಾಜಿನ ರೀತಿಯ ವಿನ್ಯಾಸದಲ್ಲಿ ಸುಂದರವಾಗಿ ಪರದೆಯ ಮೇಲೆ ಮೂಡಲಿದೆ.
ಜತೆಗೆ ನಿತ್ಯ ಬಳಸುವ ಸಾಫ್ಟ್’ವೇರ್ ಗಳು ಮೇಲೆ ಕಾಣಲಿದ್ದು ಅಷ್ಟಾಗಿ ಬಳಸದ ಸಾಫ್ಟ್’ವೇರ್‌ಗಳು ಕೆಳಗಡೆ ಇರಲಿದೆ. ಪರದೆಯ ಎಡ ಭಾಗದಲ್ಲಿ ಅನ್ದ್ರೋಯಿಡ್ ಮತ್ತು ಐಒಎಸ್ ಆಪರೇಟಿಂಗ್ ಸಿಸ್ಟಮ್ ನಲ್ಲಿರುವಂತೆ ಕಾರ್ಡ್ ಮಾದರಿಯ ಮಾಹಿತಿ ತೆರೆದುಕೊಳ್ಳಲಿದೆ. ಇದು ಸುದ್ದಿ, ಹವಾಮಾನ ವಿವರ, ಸಾಮಾಜಿಕ ಜಾಲತಾಣದ ಹೊಸ ವಿಚಾರ ಇತ್ಯಾದಿಗಳನ್ನು ಹೊಂದಿರಲಿದೆ. ಅವಶ್ಯಕತೆ ತಕ್ಕ ಹಾಗೆ ಇದನ್ನು ಅರ್ಧ ಅಥವಾ ಪೂರ್ತಿ ಪರದೆಯಲ್ಲಿ ನೋಡಬಹುದಾಗಿದೆ.
ಒಟ್ಟಿಗೇ ನಿರ್ವಹಣೆ
ಇದರೊಟ್ಟಿಗೆ ಪರದೆಯನ್ನು ಹಲವಾರು ಸಾಫ್ಟ್’ವೇರ್ ಗಳಿಗಾಗಿ ವಿಭಾಗಿಸುವ ಅವಕಾಶವಿದ್ದು, ನೀವು ಹಲವಾರು ತಂತ್ರಾಂಶಗಳಲ್ಲಿ ಒಟ್ಟಿಗೆ ಕಾರ್ಯ ನಿರ್ವಹಿಸ ಬಹುದಾಗಿದೆ. ಇವಿಷ್ಟೆ ಅಲ್ಲದೆ ಲ್ಯಾಪ್‌ಟಾಪ್‌ಗಳನ್ನು ಮೀಡಿಯಾ ಸಂಬಂಧಿ ಕಾರ್ಯಗಳಿಗೆ ಬಳಸುವವರು ಸಾಮಾನ್ಯವಾಗಿ ಲ್ಯಾಪ್ ಟಾಪ್ ಜತೆ ಇತರ ದೊಡ್ಡ ಪರದೆಗಳನ್ನು ಬಳಸುತ್ತಾರೆ ಮತ್ತು ಒಂದಿಷ್ಟು ಸಾಫ್ಟ್’ವೇರ್ ಗಳನ್ನು ಅದರಲ್ಲಿ ಬಳಸುತ್ತಾರೆ.
ವಿಂಡೋಸ್ 10 ವರೆಗೆ ಈ ರೀತಿ ದೊಡ್ಡ ಪರದೆಗಳನ್ನು ಜೋಡಿಸುವ ತಂತಿಯನ್ನು ಲ್ಯಾಪ್‌ಟಾಪ್ ನಿಂದ ತೆರೆದ ತಕ್ಷಣ ಎಲ್ಲ ಸಾಫ್ಟ್’ವೇರ್ ಗಳ ಒಂದರ ಮೇಲೊಂದು ಬಂದು ನಿಂತು ಬಳಕೆದಾರರಿಗೆ ಕಿರಿ ಕಿರಿ ಎನ್ನಿಸುತ್ತಿತ್ತು. ಆದರೆ ವಿಂಡೋಸ್ 11 ನಲ್ಲಿ ಕೃತಕ ಬುದ್ದಿಮತ್ತೆಯ ಸಹಾಯದಿಂದ ಎಲ್ಲ ಪರದೆಗಳ ಮಾಹಿತಿಯನ್ನು ಸಂಸ್ಕರಿಸಿ ಹೇಗೆ ವಿವಿಧ ಪರದೆಗಳಲ್ಲಿ ತಂತ್ರಾಂಶಗಳು ಹಂಚಿಕೆಯಾಗಿದ್ದವೋ ಹಾಗೆಯೇ ಲ್ಯಾಪ್‌ಟಾಪ್ ನಲ್ಲೂ ಅದನ್ನು ತೋರಿಸಲಿದೆ. ಇವು ಗಳ ಜೊತೆಗೆ ವಿಂಡೋಸ್ 11 ನಲ್ಲಿ ಮೈಕ್ರೋಸಾಫ್ಟ್ ಟೀಮ್ಸ್ ತಂತ್ರಾಂಶ ಜೋಡಣೆಯಾಗಿದೆ.
ಅದಾಗಲೇ, ವ್ಯವಹಾರಿಕವಾಗಿ ಪ್ರಖ್ಯಾತಿಗಳಿಸಿರುವ ಟೀಮ್ಸ್ ಸಾಮಾನ್ಯ ಜನರಿಂದಲೂ ಹೆಚ್ಚು ಬಳಕೆಯಾಗಲಿ ಎನ್ನುವುದು ಇದರ ಉದ್ದೇಶ. ಅದಾಗಲೇ ಜೂಮ, ಗೂಗಲ್ ಮಿಟ್ಸ್‌ಗೆ ಹೊಂದಿಕೊಂಡಿರುವ ಜನ ಟೀಮ್ಸ್‌ಅನ್ನು ಎಷ್ಟರ ಮಟ್ಟಿಗೆ ಒಪ್ಪಿಕೊಳ್ಳಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕು. ಇವೆಲ್ಲವುಗಳ ಜತೆ, ಹೊಸ ವಿಚಾರವೆಂದರೆ ವಿಂಡೋಸ್ ೧೧ ನಲ್ಲಿ ಅನ್ದ್ರೋಯಿಡ್ ಅಪ್ಲಿಕೇಷನ್‌ಗಳನ್ನೂ ಬಳಸಬಹುದು. ಅನ್ದ್ರೋಯಿಡ್ ಅಪ್ಲಿಕೇಷನ್ ಗಳನ್ನು ಅಂತರ್ಜಾಲ
ದಿಂದ ಡೌನ್ಲೋಡ್ ಮಾಡಿ ಇನ್ ಸ್ಟಾಲ್ ಮಾಡಲಾಗುವುದಿಲ್ಲ, ಬದಲಾಗಿ ವಿಂಡೋಸ್ ಸ್ಟೋರ್ ಅಪ್ಲಿಕೇಷನ್ ನಿಂದ ಅಮೆಜೋನ್ ತಂತ್ರಾಂಶವನ್ನು ಬಳಸಿ ಅನ್ದ್ರೋಯಿಡ್ ಅಪ್ಲಿಕೇಷನ್‌ಗಳನ್ನು ಡೌನ್ಲೋಡ್ ಮಾಡಬಹುದು.
ಕೊನೆಯದಾಗಿ ಹೇಳುವುದಾದರೆ ವಿಂಡೋಸ್ 11 ಹೊಚ್ಚ ಹೊಸತು ಎನ್ನುವ ವೈಶಿಷ್ಟ್ಯತೆಗಳನ್ನು ಹೊತ್ತು ತಂದಿಲ್ಲ. 5 ವರ್ಷಗಳಿಂದ ಒಂದೇ ರೀತಿಯ ವಿನ್ಯಾಸವನ್ನು ನೋಡಿ ಬೇಸರವಾದವರು ವಿಂಡೋಸ್ 11 ನ್ನು ಬಳಸುವುದರಿಂದ, ಸ್ವಲ್ಪ ಬದಲಾವಣೆ ಸಾಧ್ಯವಾಗಬಹುದಷ್ಟೇ.