Wednesday, 11th December 2024

ಮನೆಯಲ್ಲಿ ಹೊಸತನ ತಂದ 2020

ವೇದಾವತಿ ಹೆಚ್.ಎಸ್.

ಮುಗಿದ ಈ ವರ್ಷ ಕುಟುಂಬದಲ್ಲಿ ಹಿಂದೆಂದೂ ಇಲ್ಲದ ಸಂಪರ್ಕ, ಸಮಾಗಮವನ್ನು ಮಾಡಿಕೊಟ್ಟಿತು. ತಿಂಗಳುಗಟ್ಟಲೆ ಗಂಡ, ಹೆಂಡತಿ, ಮಕ್ಕಳು ಒಂದೇ ಮನೆಯಲ್ಲಿದ್ದು ತಮ್ಮ ತಮ್ಮ ಕೆಲಸವನ್ನು ಮಾಡಬೇಕಾದ ಅನಿವಾರ್ಯತೆ ಸೃಷ್ಟಿ ಯಾಯಿತು. ಇದರಿಂದ ಅನ್ಯೋನ್ಯತೆ ಬೆಳೆಸಿಕೊಂಡವರು ಹಲವು ದಂಪತಿ; ಕೆಲವು ಕುಟುಂಬಗಳಲ್ಲಿ ಸಂಕಷ್ಟವೂ ಎದುರಾಯಿತು. 2020 ಕೌಟುಂಬಿಕ ಜೀವನದಲ್ಲಿ ಹಿಂದೆಂದೂ ಕಾಣದ ಸನ್ನಿವೇಶವನ್ನು ರೂಪಿಸಿದ್ದಂತೂ ನಿಜ.

ಅದೆಷ್ಟೋ ಸಂತೋಷದಿಂದ 2020 ವರ್ಷವನ್ನು ಬರ ಮಾಡಿಕೊಂಡು ಸಂಭ್ರಮಾಚರಣೆ ಮಾಡಿಕೊಂಡಿದ್ದೆವು. ಆದರೆ ಮಾರ್ಚ್ ತಿಂಗಳ ಕೊನೆಯಿಂದ ಆರಂಭಿಸಿ, ಕರೋನ ವೈರಸ್ ಮನುಷ್ಯನನ್ನು ಮನೆಯಲ್ಲೇ ಕಟ್ಟಿ ಹಾಕಿಕೂರಿಸಿತು. ಅದಕ್ಕಿಂತ ಮೊದಲು ಬಹಳಷ್ಟು ಮಂದಿಗೆ ಮನೆಯೊಂಬುದು ಬರೀ ನಿದ್ದೆಗೆ ಜಾರುವ ಸ್ಥಳವಾಗಿತ್ತು.

ಅಷ್ಟೊಂದು ಬಿಜಿ ಜೀವನ ನಡೆಸುತ್ತಿದ್ದ ಕಾಲ. ಆದರೆ ಒಮ್ಮೆೆಲೇ ಇಡೀ ದಿನ ಮನೆಯಲ್ಲೇ ಇರಬೇಕಾದ ಪರಿಸ್ಥಿತಿ!! ಇದರಿಂದಾಗಿ  ಅದೆಷ್ಟು ತೊಡಕುಗಳು, ಅದೆಷ್ಟು ಬದಲಾವಣೆಗಳು! ಕರೋನ ಎಂಟ್ರಿಯಾಗುವ ಮೊದಲು ಆನೇಕ ಮಂದಿ ಬೆಳಿಗ್ಗೆ ಸೂರ್ಯೋ ದಯದ ಸಮಯದಲ್ಲಿ ಮನೆಯಿಂದ ಆಫೀಸ್ ಕೆಲಸಕ್ಕೆ ಹೊರಟರೆ ಬರುವುದು ಮಧ್ಯರಾತ್ರಿ.

ಗಂಡಹೆಂಡತಿ ಇಬ್ಬರೂ ಹೊರಗೆ ಕೆಲಸ ಮಾಡುತ್ತಿದ್ದಾಗ, ಒಟ್ಟಿಗೆ ಕುಳಿತು ಮಾತನಾಡುವುದೇ ಶನಿವಾರ ಮತ್ತು ಭಾನುವಾರದಲ್ಲಿ ಮಾತ್ರ. ಹೆತ್ತವರು ಹಗಲಿಳರು ದುಡಿಯುತ್ತಾ ಮಕ್ಕಳನ್ನು ನೋಡಿಕೊಳ್ಳಲು ಆಯಾಗಳು ಇಲ್ಲವೇ ಪ್ಲೇ ಹೋಮ್‌ಗೆ ಸೇರಿಸಿ ತಮ್ಮ
ಕೆಲಸಕ್ಕೆ ಹೋಗುವುದು ವಾಡಿಕೆ. ಆದರೆ 2020 ವರ್ಷದ ಮಾರ್ಚ್ ತಿಂಗಳಲ್ಲಿ ಇದಕ್ಕೆಲ್ಲ ತಿಲಾಂಜಲಿ ಹೇಳಬೇಕಾಯಿತು.

ಗಂಡನಿಂದ ಕಿರುಕುಳ

ಮನೆಯಿಂದಲೇ ಮಾಡುವ ಕೆಲಸ ಆರಂಭವಾದ ನಂತರ, ದಿನಚರಿಯೇ ಬದಲಾಯಿತು. ಒಂದಷ್ಟು ತಿಂಗಳ ಕಾಲ ಅಪ್ಪ-ಅಮ್ಮ-ಮಕ್ಕಳು ಮನೆಯಲ್ಲಿ ಇದ್ದು ಮನೆಕೆಲಸಕ್ಕೂ ಜನರಿಲ್ಲದೇ ಒದ್ದಾಡುವಂತಾಯಿತು. ಹೆತ್ತವರಿಗೆ ತಮ್ಮ ಕೆಲಸಕಾರ್ಯಗಳ ಜೊತೆಗೆ ಮಕ್ಕಳ ಅನ್ ಲೈನ್ ಪಾಠಗಳ ಕಡೆಗೂ ಗಮನಹರಿಸಬೇಕಾದ ಮನೆಯ ವಾತಾವರಣದಲ್ಲಿ ಏರುಪೇರಾಗಿ ಸಂಕಟ ಅನುಭವಿಸು ವಂತಾಯಿತು. ಮನೆಯ ಒಡತಿಗೆ ಮಕ್ಕಳ ಕೆಲಸದ ಜೊತೆಗೆ ಗಂಡನ ಕೆಲಸವೂ ಮಾಡಬೇಕಾಗಿ ಬಂದಾಗ ಕೆಲವೊಮ್ಮೆ ಮಾತಿಗೆ ಮಾತು ಬೆಳೆದು ಅದು ವಿಕೋಪಕ್ಕೆ ಹೋಗಿದ್ದು ಕೆಲವು ಸಂಸಾರಗಳಲ್ಲಿ ನೋಡಬಹುದು.

ಹೊರಹೋಗಿ ದುಡಿಯುತ್ತಿದ್ದ ಹೆಂಗಸರಿಗೆ ಮನೆಯಲ್ಲೇ ವರ್ಕ್ ಫ್ರಮ್ ಹೋಮ್ ಮಾಡಬೇಕಾದ ಸಂದರ್ಭ ಒದಗಿ ಬಂದಾಗ ಅದರ ನಡುವೆ ಮಕ್ಕಳ ಮತ್ತು ಗಂಡನ ಕೆಲಸವನ್ನು ಮಾಡಬೇಕಾಗಿ ಬಂದಾಗ ಅವಳ ಕೆಲಸದ ಕಡೆಗೆ ಗಮನಹರಿಸುವುದು ಕಷ್ಟವಾಗುತ್ತಿತ್ತು. ಕೆಲವು ಗಂಡಸರು ಹೆಂಡತಿಯ ಕಷ್ಟವನ್ನು ಆರಿತು ಅವಳಿಗೆ ಸಹಾಯ ಹಸ್ತ ಚಾಚಿದರೆ, ಮತ್ತೆ ಕೆಲವರು ಅವರುಗಳ ತಮ್ಮ ಪಾಡಿಗೆ ತಾವಿದ್ದು, ಸಂಸಾರದಲ್ಲಿ ಬಿರುಕು ಮೂಡಲು ಕಾರಣ ಎನಿಸಿದರು.

ಎಷ್ಟೋ ಹೆಣ್ಣು ಮಕ್ಕಳು ಮನೆಯಲ್ಲೇ ಕುಳಿತ ಗಂಡನ ಕಿರುಕಳದಿಂದ ಬೇಸತ್ತು ಕಣ್ಣೀರು ಹಾಕಿದರು. ಗೃಹಿಣಿಯಾಗಿ ಮನೆಯಲ್ಲೇ ಇರುತ್ತಿದ್ದ ಹೆಣ್ಣು  ಮಕ್ಕಳ ಸ್ಥಿತಿಯೂ ಹೆಚ್ಚು ಕಡಿಮೆ ಹೊರಹೋಗಿ ದುಡಿದು ಬರುತ್ತಿದ್ದ ಗೃಹಿಣಿಯ ಜೀವನದಂತೆ ಇತ್ತೇ
ವಿನಃ ಅದಕ್ಕಿಂತ ಭಿನ್ನವಾಗಿರಲಿಲ್ಲ. ದಿನಬೆಳಗಾದರೆ ಗಂಡ-ಮಕ್ಕಳ ಹೆಚ್ಚುವರಿ ಕೆಲಸವನ್ನೂ ಮಾಡುತ್ತಾ, ಮನೆಕೆಲಸದಳು ಗೈರಾದ ಕಾರಣದಿಂದ ಅವಳ ಕೆಲಸವನ್ನೂ ಮಾಡಿ ಮುಗಿಸುವಷ್ಟರಲ್ಲಿ ಅವಳಿಗಿದ್ದ ಒಳ್ಳೆಯ ಹವ್ಯಾಸಗಳು ಮರೆಯಾಗಿ ಹೋದವು.

ಬರುಬರುತ್ತಾ ಅಡುಗೆ ಮನೆಯೇ ಸರ್ವಸ್ವವಾಗತೊಡಗಿತು. ಮೊದಲು ವಾರದ ಕೊನೆಯಲ್ಲಿ ಸ್ವಲ್ಪವಾದರೂ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದವಳಿಗೆ ಈಗ ಅದೂ ಮರೀಚಿಕೆಯಾಗಿತ್ತು. ಮನೆಯಲ್ಲಿ ಎಷ್ಟೇ ದುಡಿದರೂ ಗಂಡನಿಂದ ನೀನಗೇನಿದೆ ಅಷ್ಟೊಂದು ಕಷ್ಟ, ಮನೆಕೆಲಸ ಮಾಡಿಕೊಂಡಿರು ಎಂಬ ಕೊಂಕು ನುಡಿ ಕೇಳುವಾಗ ಕಣ್ಣೀರು ಸುರಿಸುವುದೊಂದೇ ಅವಳಿಗೆ ಸಿಕ್ಕ
ಬಹುಮಾನ. ಈ ಮೊದಲು ಗಂಡ-ಮಕ್ಕಳನ್ನು ಆಫೀಸ್, ಶಾಲೆಗೆಂದು ಕಳುಹಿಸಿದ ನಂತರ ಸ್ವಲ್ಪವಾದರೂ ವಿಶ್ರಾಂತಿ ಅವಳಿಗೆ ಸಿಗುತ್ತಿತ್ತು.

ಈಗ ವಿಶ್ರಾಂತಿಯ ಮಾತೇ ಇಲ್ಲ. ಕರೋನ ವೈರಸ್ ಹಬ್ಬುವ ಮೊದಲು ದಿನದಲ್ಲಿ ಎರಡು ಬಾರಿ ಒಲೆಯನ್ನು ಉರಿಸುತ್ತಿದ್ದವಳು, ನಂತರ ದಿನವಿಡೀ ಅಡುಗೆ ಮಾಡುವುದರಲ್ಲೇ ಕಾಲಕಳೆಯಬೇಕಾಯಿತು. ಮಕ್ಕಳು ಕೇಳುವ ತಿಂಡಿಗಳ ಜತೆಗೆ ಮನೆಯಲ್ಲಿ ದಿನದ ಅಡುಗೆ, ತಿಂಡಿ, ಕಾಫಿಯೆಂದು ತಯಾರಿಸುತ್ತಾ, ಸರಬರಾಜು ಮಾಡುತ್ತಾ ಮನೆಯವರ ಸಂತೋಷದಲ್ಲೇ ತಮ್ಮ ಸಂತೋಷವನ್ನು ಕಂಡ ಅದೇಷ್ಟೋ ಗೃಹಿಣಿಯರು ನಮ್ಮ ನಡುವೆಯೇ ಇದ್ದಾರೆ.

ಆತ್ಮೀಯತೆ ಬೆಳೆಸಿದ ಲಾಕ್‌ಡೌನ್ ಅದರೂ ಒಂದೇ ಮನೆಯಲ್ಲೇ ಇದ್ದರೂ ಸಮಯದ ಅಭಾವದಿಂದ ಇದುವರೆಗೆ ಆಡದೇ ಉಳಿದ ಬಹಳಷ್ಟು ಮಾತುಗಳನ್ನು, ಈ ಲಾಕ್‌ಡೌನ್ ಸಮಯದಲ್ಲಿ ಮುಕ್ತವಾಗಿ ಹಂಚಿಕೊಂಡ ದಂಪತಿಗಳೂ ಇದ್ದಾರೆ. ಹೆಂಡತಿ-ಮಕ್ಕಳೊಂದಿಗೆ ಸಂತೋಷದಿಂದ ಊಟ- ತಿಂಡಿಗಳನ್ನು ಸವಿಯುತ್ತಾ ಕರೋನ ಕಾಲದಲ್ಲಿ ಒಬ್ಬರಿಗೊಬ್ಬರು ಪ್ರೀತಿಯನ್ನು ಹಂಚಿಕೊಳ್ಳುತ್ತಾ ಸ್ವರ್ಗಕ್ಕೆ ಮೂರೇ ಗೇಣು ಎಂಬಂತೆ ಜೀವನ ರಥವನ್ನು ಸಾಗಿಸಿದವರೂ ಇದ್ದಾರೆ.

ಕೆಲವರು ತಮಗಿರುವ ಕೆಲಸವನ್ನೂ ಕಳೆದುಕೊಳ್ಳುವ ಪರಿಸ್ಥಿತಿ ಬಂದಾಗ ದಿಟ್ಟವಾಗಿ ಎದುರಿಸಿ ನಿಂತವರೂ ಇದ್ದಾರೆ. ಬಹಳಷ್ಟು
ಜನರು ಕುಟುಂಬ ಸಹಿತ ತಮ್ಮ ಊರಿಗೆ ಸ್ಥಳಾಂತರಗೊಂಡವರೂ ಇದ್ದಾರೆ. ಏನೇ ಇರಲಿ. 2020 ವರ್ಷ ನಮ್ಮ ಜೀವನದಲ್ಲಿ
ಮರೆಯಲಾರದ ವರ್ಷ. ಈ ವರ್ಷ ಬಹಳಷ್ಟು ನೋವನ್ನು ಕೊಟ್ಟ ವರ್ಷವೆನಿಸಿದರೂ, ಕುಟುಂಬದವರೆಲ್ಲರೂ ನಾಲ್ಕಾರು ತಿಂಗಳು ಮನೆಯೊಳಗೇ ಇದ್ದು ಕಾಲಕಳೆದು, ದಾಖಲೆ ನಿರ್ಮಿಸುವಂತಾಯಿತು. ಎಲ್ಲಾ ವರ್ಗದ ಜನರನ್ನು ಮನೆಯೊಳಗೆ ಕಟ್ಟಿ ಕೂರಿಸಿದ ವರ್ಷ ಇದಾಗಿತ್ತು!

ಹೊಸವರ್ಷವಾದರೂ ಹೊಸತನವನ್ನು ಹೊತ್ತು ಮನುಷ್ಯನ ಉನ್ನತ್ತಿಗೆ ದಾರಿಯಾಗಲಿ ಎಂಬುದೇ ನಮ್ಮೆಲ್ಲರ ಹಾರೈಕೆ.