ವೈ.ಕೆ.ಸಂಧ್ಯಾ ಶರ್ಮಾ
ಕಲಾತ್ಮಕ ರಂಗಸಜ್ಜಿಕೆ. ನೃತ್ಯ ಪ್ರಸ್ತುತಿಗೆ ಹೇಳಿ ಮಾಡಿಸಿದ ದೈವೀಕ ಆವರಣ. ದೇವತಾ ನಮನದೊಂದಿಗೆ ಉದಯೋನ್ಮುಖ ನೃತ್ಯ ಕಲಾವಿದೆ ಮೇಘನಾ
ಮಯೂರ್ ವಿಧ್ಯುಕ್ತವಾಗಿ ರಂಗಪ್ರವೇಶ ಮಾಡಿದ ಕ್ಷಣಗಳು.
‘ಶ್ರೀ ಲಲಿತಾ ನಿಕೇತನ’ದ ನಾಟ್ಯಗುರು ರೇಖಾ ಜಗದೀಶ್ ಅವರ ಗರಡಿಯಲ್ಲಿ ರೂಹು ತಳೆದ ಕಲಾಶಿಲ್ಪ ಮೇಘನಾ ಹಸನ್ಮುಖದಿಂದ ಎರಡು ಗಂಟೆಗಳ ಕಾಲ ಲವಲವಿಕೆಯಿಂದ ನರ್ತಿಸಿದಳು. ಹದಿಹರೆಯದ, ಮುದ್ದಾದ ಮೊಗದ ಲಾವಣ್ಯವತಿ ಮೇಘನಾ, ‘ಪುಷ್ಪಾಂಜಲಿ’ ಯಿಂದ ತನ್ನ ಪ್ರಸ್ತುತಿಯನ್ನು ಆರಂಭಿಸಿದಳು.
ಖಚಿತ ಹಸ್ತಚಲನೆ, ಅಡವುಗಳ ಖಾಚಿತ್ಯ, ಸುಮನೋಹರ ಹಸ್ತ ವಿನಿಯೋಗಗಳು ಗಮನಾರ್ಹವಾಗಿದ್ದವು. ನೃತ್ತಗಳ ಆಲಾಪ ಸುಮನೋಹರವಾಗಿದ್ದರೆ, ಜತಿಗಳ ವೈವಿಧ್ಯ ಸೊಬಗನ್ನು ಚೆಲ್ಲಿದ್ದವು.
ಶುದ್ಧ ಧನ್ಯಾಸಿ ರಾಗದ ‘ಪ್ರಣವಾಕಾರ ಸಿದ್ಧಿ ವಿನಾಯಕ’ನನ್ನು ಭಕ್ತಿಪುರಸ್ಸರವಾಗಿ ಆರಾಧಿಸುತ್ತ, ಪಾರ್ವತೀ ತನಯನಲ್ಲಿ ಸಿದ್ಧಿಯನ್ನು ನೀಡೆಂದು ಬೇಡಿದಳು. ಗೌಳೀರಾಗದ ಶಿವಸ್ತುತಿ, (ರಚನೆ -ಸ್ವಾತಿತಿರುನಾಳ್ ) – ‘ಶಂಕರ ಶ್ರೀಗಿರಿ ನಾದಪ್ರಭು’ ವನ್ನು ಮೇಘನಾ, ತನ್ನ ಪೌರುಷ ಸ್ಪರ್ಶದ ನೃತ್ತಗಳ ನಡೆಯಲ್ಲಿ ಸಾಕ್ಷಾ ತ್ಕರಿಸುತ್ತ, ರಭಸದ ಅಡವುಗಳಿಂದ ನರ್ತನವಾಡುತ್ತ, ಢಮರುಗವನ್ನು ಝೇಂಕರಿಸಿದ ರೀತಿ ಶಂಕರನ ಮೇರುವ್ಯಕ್ತಿತ್ವವನ್ನು ಎಳೆಎಳೆಯಾಗಿ ಬಿಚ್ಚಿಟ್ಟವು. ಮಾರ್ಗ ಪದ್ಧತಿಯ ಪ್ರಮುಖ ಹಂತ ವರ್ಣ-ಸಾಧನೆ ಮತ್ತು ನೈಪುಣ್ಯತೆಗಳ ಕನ್ನಡಿಯಿದ್ದಂತೆ.
ಸಂಕೀರ್ಣ ನೃತ್ತಗಳ ದೀರ್ಘಬಂಧದಲ್ಲಿ ಅಭಿನಯಕ್ಕೂ ಅಷ್ಟೇ ಪ್ರಾಮುಖ್ಯ. ನೃತ್ಯಾಭಿನಯದ ಸಮರ್ಥ ನಿರ್ವಹಣೆ, ತಾಳ-ಲಯಗಳ ಮೇಲಿನ ಹಿಡಿತ, ಅಗಾಧ ನೆನಪಿನ ಶಕ್ತಿ ನಿರೀಕ್ಷಿಸುವ ‘ವರ್ಣ’ ಸಮರ್ಪಣೆ ಸುಲಭದ ಪ್ರಸ್ತುತಿಯಲ್ಲ. ನೃತ್ಯ ವ್ಯಾಕರಣದ ಸಮಸ್ತ ಮಜಲುಗಳನ್ನೂ ಪ್ರದರ್ಶಿಸಬೇಕಾದ ಈ ಕ್ಲಿಷ್ಟವಾದ ಅಷ್ಟೇ ಹೃದ್ಯಭಾಗದಲ್ಲಿ ಕಲಾವಿದೆ ಗೆದ್ದರೆ, ಮುಂದಿನ ಕೃತಿಗಳ ಪ್ರಸ್ತುತಿ ಅಷ್ಟೇ ಸಲೀಸು.
ಕಲಾವಿದೆ ಮಯೂರ ಮುಕ್ಕಾಲು ಗಂಟೆಯ ಕಾಲಾವಧಿಯ ಈ ದೀರ್ಘಬಂಧವನ್ನು ತನ್ನ ದೈಹಿಕ ಧಾರ್ಡ್ಯತೆ ಮತ್ತು ಕಲಾನೈಪುಣ್ಯದಿಂದ ನಿಭಾಯಿಸಿದ ವೈಖರಿ ಸ್ತುತ್ಯಾರ್ಹ. ‘ನಿನ್ನೆ ನೆರೆ ನಂಬಿದೆ…’ ಎಂದು ಭಕ್ತಿ ಪಾರಮ್ಯದಿಂದ ಕೃಷ್ಣನಿಗೆ ನೃತ್ಯಾರ್ಚನೆ ಸಲ್ಲಿಸುತ್ತಾ -ನೃತ್ತಮಾಲೆಗಳಿಂದ ಅವನನ್ನು ವಶಪಡಿಸಿಕೊಳ್ಳುವ ಈ ಕೃತಿಯನ್ನು ಗುರು ವೀಣಾಮೂರ್ತಿ ಮನೋಹರವಾಗಿ ನೃತ್ಯ ಸಂಯೋಜಿಸಿದ್ದರು. ಕುರೂಪಿಯೆಂದು ಕೀಳರಿಮೆಯಿಂದ ಕೊರಗುತ್ತಿದ್ದ ಕುಬ್ಜೆಯನ್ನಪ್ಪಿಕೊಂಡು ಅವಳ ನ್ಯೂನತೆ ನೇರ್ಪಡಿಸಿದ್ದಲ್ಲದೆ ಅವಳಿಗೆ ಸಾಯುಜ್ಯ ದೊರಕಿಸಿಕೊಟ್ಟ ಕರುಣಾಮಯಿಯ ಕಥಾನಕ, ಸಂಚಾರಿಯಲ್ಲಿ ಮನೋಜ್ಞವಾಗಿ ಮೂಡಿಬಂತು.
ಮಮತೆಯ ಸೆಲೆಯಾದ ತಾಯಿ ಯಶೋದೆ ಮತ್ತು ತುಂಟಕೃಷ್ಣನ ನಡುವಣ ವಾತ್ಸಲ್ಯಪೂರಿತ ಸನ್ನಿವೇಶಗಳು ನಾಟಕೀಯ ಚೌಕಟ್ಟಿನಲ್ಲಿ ಮನಮುಟ್ಟಿದವು. ರಮ್ಯಾಭಿನಯದೊಂದಿಗೆ, ಮಂಡಿ ಅಡವು, ಪ್ರದರ್ಶಿಸಿದ ವಿವಿಧ ಚಾರಿಗಳು ಮನಮೋಹಕವಾಗಿದ್ದವು. ಅಂದು- ಸ್ವಾತಂತ್ರ್ಯ ದಿನೋತ್ಸವದ ಸಂದರ್ಭ- ಭಾವನಾ ತ್ಮಕತೆಯ ಮಹಾಪೂರ ಹರಿದು, ಕಲಾವಿದೆ ಅಮಿತೋತ್ಸಾಹದಿಂದ ನರ್ತಿಸಿದ ಬಗೆ ರಸಿಕರ ಹೃನ್ಮನ ತಣಿಸಿತು.