Saturday, 14th December 2024

ಅಡೆತಡೆ ಮೀರಿದಾಗ ಮುನ್ನಡೆ

ಜೀವನದಲ್ಲಿ ಎದುರಾಗುವ ತಡೆಗಳನ್ನು ಎದುರಿಸಿ, ದಾಟಿ ಮುಂದುವರಿದಾಗಲೇ ಪ್ರಗತಿ ಸಾಧ್ಯ.

ಭಾರತಿ.ಎ ಕೊಪ್ಪ

ಪಟ್ಟಣದಲ್ಲಿ ಉದ್ಯೋಗ ಮಾಡಿಕೊಂಡಿದ್ದ ಸುಮಾ ತನ್ನ ಮಗನೊಂದಿಗೆ ಸ್ವಂತ ಊರಿಗೆ ಹೊರಟಿದ್ದಳು. ಕರೋನಾದ ಕಾರಣ
ದಿಂದಾಗಿ ಬಸ್ಸಿನಲ್ಲಿ ಪ್ರಯಾಣಿಸುವುದು ಅಷ್ಟೊಂದು ಸುರಕ್ಷಿತವಲ್ಲ ಎಂದು, ಸುಮಾರು 100 ಕಿ.ಮೀ ದೂರದ ತನ್ನೂರಿಗೆ ಸ್ಕೂಟಿಯಲ್ಲಿಯೇ ಪಯಣಿಸಲು ನಿರ್ಧರಿಸಿದಳು.

ಇನ್ನೇನು ಊರಿಗೆ ಹೊರಡಬೇಕೆನ್ನುವಷ್ಟರಲ್ಲಿ ಬಿಟ್ಟು ಬಿಡದೆ ಮಳೆ ಸುರಿಯಲಾರಂಭಿಸಿತು. ಆದರೆ ಊರಿನ ಸೆಳೆತ ಸುಮಾಳಿಗೆ
ಹೊರಡುವುದನ್ನು ಬೇಡ ಎಂದು ತೀರ್ಮಾನಿಸಲು ಸಾಧ್ಯವಾಗಲಿಲ್ಲ. ಮಳೆಯ ಆಯುಧವೆಂಬಂತೆ ರೈನ್ ಕೋಟ್ ಧರಿಸಿ, ತನ್ನ ಮಗನೊಂದಿಗೆ ಊರಿಗೆ ಹೊರಟೇಬಿಟ್ಟಳು ಸುಮಾ. ಒಂದೇ ಸಮನೆ ಸುರಿಯುತ್ತಿದ್ದ ಮಳೆ, ಕೆಲವು ನಿಮಿಷಗಳ ನಂತರ ಒಂದು ಹನಿಯೂ ಬೀಳದಂತೆ ಮೌನ ತಾಳಿತು. ಮಗನೊಂದಿಗೆ ಸುಮಾ ಮಳೆ ಇಲ್ಲದೆ ಸುರಕ್ಷಿತವಾಗಿ ತನ್ನ ಊರಿನ್ನು ತಲುಪಿದಳು.

ಒಳ್ಳೆಯ ನಿರ್ಧಾರ ಮಾಡಿ ಹೊರಟದ್ದು ಒಳಿತೇ ಆಯ್ತೆಂದು ಸಂತಸವೂ ಮನದಂಗಳದಲ್ಲಿ ಮೂಡಿತು. ಇದೊಂದು ನಿದರ್ಶನ ಅಷ್ಟೇ. ನಾವು ಜೀವನದಲ್ಲಿ ಕೆಲಸದ ಆರಂಭಕ್ಕೆ ಸಣ್ಣಪುಟ್ಟ ಅಡೆತಡೆಗಳು ಬಂದಾಗ ಹಿಂದೇಟು ಹಾಕುತ್ತೇವೆ. ಆ ರೀತಿಯ ಅಡೆತಡೆಗಳನ್ನು ಸಂದರ್ಭೋಚಿತವಾಗಿ ನಿವಾರಿಸಿಕೊಂಡು ಮುನ್ನಡೆದರೆ ಯಶಸ್ಸು ದೊರೆಯುತ್ತದೆ. ಅಡೆತಡೆಗಳನ್ನು ಮೀರಿ
ಸಾಗಿದ ಆತ್ಮತೃಪ್ತಿ ದೊರೆಯುತ್ತದೆ.

ಪ್ರಕೃತಿ ಕೂಡ ಅಡೆತಡೆಗಳನ್ನು ನಿವಾರಿಸಿಕೊಂಡು ಸಾಗುವ ಪಾಠವನ್ನು ಸದಾ ನಮಗೆ ಕಲಿಸುತ್ತಿರುತ್ತದೆ. ಮರದ ಕೊಂಬೆಯನ್ನು ಮನುಜ ಅನೇಕ ಬಾರಿ ಕಡಿದರೂ, ಆ ಮರ ಮತ್ತೆ ಚಿಗುರೊಡೆದು ತನ್ನ ಸ್ವಸಾಮರ್ಥ್ಯವನ್ನು ಸಾಬೀತುಪಡಿಸಿಕೊಳ್ಳುತ್ತದೆ ಯಲ್ಲವೆ? ಒಂದು ಬೀಜ ಮಣ್ಣಿಗೆ ಬಿದ್ದರೆ ಆರೈಕೆ ಮಾಡದಿದ್ದರೂ ತಾನಾಗಿ ಮೇಲೆದ್ದು ಬರುತ್ತದೆ. ಪ್ರಕೃತಿಯ ಈ ನಿದರ್ಶನಗಳು ನಮಗೂ ಅನ್ವಯವಾಗುತ್ತದೆ. ಬಾಳ ಹಾದಿಯಲ್ಲಿ ಅನಿವಾರ್ಯವಾಗಿ ತೊಂದರೆ ಎದುರಾದರೆ ಎದೆಗುಂದದೆ ಪುಟಿದೇಳಬೇಕು. ಹೊಸ ಭರವಸೆಯೊಂದಿಗೆ ಮೇಲೇರಬೇಕು.

ವಿದ್ಯಾರ್ಥಿ ಜೀವನದಲ್ಲಂತೂ ಆಗದು ಎಂದು ಕೈ ಕಟ್ಟಿ ಕುಳಿತರೆ ಯಾವ ಸಾಧನೆಯೂ ಸಾಧ್ಯವಾಗದು. ಯಾವುದೇ ಕಲಿಕೆಯಲ್ಲಿ ತೊಡಗುವಾಗ ಮೊದಲು ಕ್ಲಿಷ್ಟವೆನಿಸಬಹುದು. ಪರೀಕ್ಷೆಗಳನ್ನು ಎದುರಿಸುವಾಗ ಕಷ್ಟವೆನಿಸಬಹುದು. ಆದರೆ ‘ನನ್ನಿಂದಾಗದು’ ಎಂದು ಹಿಂದೇಟು ಹಾಕಬಾರದು. ಸತತ ಪ್ರಯತ್ನ, ಪೂರ್ವ ನಿಯೋಜಿತ ಮತ್ತು ಯೋಚಿತ ಕಲಿಕೆಯಿಂದ ಯಶದ ಗರಿಯನ್ನು ಮುಡಿಗೇರಿಸಿಕೊಳ್ಳಲು ಸಾಧ್ಯ. ಅಂಕಗಳಲ್ಲಿ ಹಿನ್ನೆಡೆ ಅನುಭವಿಸಿದರೂ, ಪರೀಕ್ಷಾ ಅಂಕಗಳಾಚೆಗೆ ಜೀವನದಲ್ಲಿ ಯಶಸ್ವಿ ಹೊಂದಿ ದವರ ಕಥೆಗಳನ್ನು ತಿಳಿದು ಆ ನಿಟ್ಟಿನಲ್ಲಿ ಜೀವನದ ಯಾವುದಾದರೂ ರಂಗದಲ್ಲಿ ಯಶಸ್ವಿಯಾಗುವತ್ತ ಛಲದಂಕ ಮಲ್ಲನಂತೆ ಮುಂದಡಿ ಇಟ್ಟು ಗುರಿ ತಲುಪಬೇಕು.

ತಮಸೋಮಾ ಜ್ಯೋತಿರ್ಗಮಯ. ಅಂದರೆ ಬದುಕಿನ ಕತ್ತಲೆಯ ದಿನಗಳನ್ನು ಬೆಳಕಿನ ದಿನಗಳತ್ತ ಕೊಂಡೊಯ್ಯುವಂತಾಗ ಬೇಕಿದೆ. ಹೊಸತನವೆ ಬಾಳು; ಹಳಸಿಕೆಯಲ್ಲ ಸಾವು ಬಿಡುರಸವು ನವನವತೆಯಿಂದನುದಿನವು ಹೊಮ್ಮಿ| ಹಸನೊಂದು ನುಡಿಯಲ್ಲಿ ನಡೆಯಲ್ಲಿ ನೋಟದಲಿ ಪಸರುತಿರೆ ಬಾಳ್ ಚೆಲುವು – ಮಂಕುತಿಮ್ಮ ಎಂಬ ಡಿ.ವಿ.ಜಿ.ಯವರ ಕಗ್ಗದ ಸೊಲ್ಲುಗಳಂತೆ ನಮ್ಮ ಬದುಕಿನಲ್ಲಿ ನಿರಂತರ ಹೊಸತನವನ್ನು ಕಾಣುತ್ತಿರಬೇಕು.

ಹಳತನ್ನು ಸಾವೆಂದು ತಿಳಿದು ದೂರ ತಳ್ಳಬೇಕು. ಅನುದಿನವೂ ಹೊಸತನದಿಂದ ರಸ ಹೊಮ್ಮುತ್ತಿರಬೇಕು. ನಾವಾಡುವ ನುಡಿ ಯಲ್ಲಿ, ನಡೆಯಲ್ಲಿ, ನೋಟದಲ್ಲಿ ಹೊಸತನವಿರಬೇಕು. ಆಗಲೇ ನಮ್ಮ ಬಾಳು ಸುಂದರವಾಗುತ್ತದೆ.