Saturday, 23rd November 2024

ಆನ್‌ಲೈನ್‌ನಲ್ಲಿ ಸರಕು ವಾಪಸ್‌

ವಸಂತ ಗ ಭಟ್‌

ಟೆಕ್‌ ಫ್ಯೂಚರ್‌

ಇಂದು ಜನಪ್ರಿಯ ಎನಿಸಿರುವ ಆನ್‌ಲೈನ್ ಖರೀದಿಯಲ್ಲಿ, ಗುಣಮಟ್ಟ ಕಡಿಮೆ ಇದ್ದ ತರಕಾರಿ ಅಥವಾ ದಿನಸಿ ಪದಾರ್ಥ ಗಳನ್ನು ವಾಪಸ್ ಮಾಡಿದರೆ, ಹೆಚ್ಚಿನ ಸಂಸ್ಥೆಗಳು ಹಣ ಹಿಂದಿರುಗಿಸುತ್ತಾರೆ ಮತ್ತು ಆ ವಸ್ತುವನ್ನು ಸಹ ಖರೀದಿಸಿ ದವರ ಬಳಿಯೇ ಬಿಟ್ಟು ಹೋಗುತ್ತಾರೆ. ಏಕೆ?

ನೀವು ಮಹಾನಗರಗಳಲಿದ್ದು ಆನ್‌ಲೈನ್ ನಲ್ಲಿ ಯಾವುದೇ ದಿನಸಿ ಸಾಮಾನುಗಳನ್ನು ಖರೀದಿಸಿದ್ದರೆ ಈ ಅಂಶವನ್ನು ಗಮನಿಸಿ ರುತ್ತೀರಿ.

ನೀವು ಆರ್ಡರ್ ಮಾಡಿದ ತರಕಾರಿ ಅಥವಾ ದಿನಸಿ ಪಧಾರ್ಥದ ಗುಣಮಟ್ಟ ಸರಿಯಿಲ್ಲವೆಂದು ನೀವು ಅದನ್ನು ಹಿಂದಿರುಗಿಸಲು ಸಹಾಯಕ ಸಿಬ್ಬಂದಿ ಯೊಂದಿಗೆ ಮಾತನಾಡಿದರೆ, ನೀವು ಆ ಉತ್ಪನ್ನಕ್ಕೆ ಕೊಟ್ಟ ಹಣವನ್ನು ಅವರು ನಿಮಗೆ ಹಿಂದಿರುಗಿಸು ತ್ತಾರೆಯೇ ಹೊರತು ಉತ್ಪನ್ನವನ್ನು ಮತ್ತೆ ವಾಪಸ್ಸು ತೆಗೆದುಕೊಂಡು ಹೋಗುವುದಿಲ್ಲ. ಅಮೆರಿಕ, ಯುರೋಪ್ ನಂತಹ ಕಡಿಮೆ ಜನಸಂಖ್ಯೆಯಿರುವ ದೇಶಗಳಲ್ಲಿ ಈ ಮಾತು ಸ್ವಲ್ಪ ಹೆಚ್ಚು ಬೆಲೆಯ ಉತ್ಪನ್ನ ಗಳಿಗೂ ಅನ್ವಯಿಸುತ್ತದೆ.

ಏಕೆ ಹೀಗೆ ನೀವು ಬೇಡ ಎಂದ ವಸ್ತುಗಳನ್ನು ಆಯಾ ಸಂಸ್ಥೆಗಳು ವಾಪಸ್ ತೆಗೆದುಕೊಂಡು ಹಣವನ್ನು ಕೊಡಬೇಕು ತಾನೇ? ಉತ್ಪನ್ನ ಮತ್ತು ಹಣ ಎರಡನ್ನೂ ನಿಮಗೆ ಕೊಡಲು ಸಂಸ್ಥೆಗಳಿಗೆನು ತಲೆಕೆಟ್ಟಿದೆಯೇ ಎಂದು ನಿಮಗೆ ಅನ್ನಿಸಬಹುದು. ಆದರೆ ವಾಸ್ತವ ಅದಲ್ಲ. ಎಷ್ಟೋ ಬಾರಿ ಒಂದು ನಿರ್ದಿಷ್ಟ ಬೆಲೆಗಿಂತ ಕಡಿಮೆ ಬೆಲೆಯ ಉತ್ಪನ್ನಗಳನ್ನು ವಾಪಸ್ಸು ತೆಗೆದುಕೊಂಡು ಹೋಗಲು ಸಂಸ್ಥೆಗಳಿಗೆ ಉತ್ಪನ್ನಕಿಂತ ಹೆಚ್ಚಿನ ಹಣ ಖರ್ಚಾಗುತ್ತದೆ. ಅದಲ್ಲದೆ ಹೆಚ್ಚಿನ ಬಾರಿ ಅಂತಹ ಉತ್ಪನ್ನಗಳನ್ನು ತೆಗೆದು ಕೊಂಡು ಹೋದರೂ ಅದನ್ನು ಅವರು ಮತ್ತೆ ಮಾರಾಟ ಮಾಡಲಾಗದ ಪರಿಸ್ಥಿತಿ ಇರುತ್ತದೆ.

ಉದಾಹರಣೆಗೆ ನೀವು ಅಕ್ಕಿ ಅಥವಾ ತುಪ್ಪವನ್ನು ಆರ್ಡರ್ ಮಾಡಿರುತ್ತೀರಿ ಎಂದು ಭಾವಿಸಿ. ಅದರ ಪೊಟ್ಟಣವನ್ನು ಒಡಯದೆ ಅದು ಹೇಗಿದೆ ಎಂದು ಹೇಳುವುದು ಸಾಧ್ಯವಿಲ್ಲ. ನೀವು ಅದನ್ನು ಒಡೆದು ನೋಡಿದ ನಂತರ ನಿಮಗೆ ತಿಳಿಯುತ್ತದೆ, ಅದು ಬಳಕೆಗೆ ಯೋಗ್ಯವಿಲ್ಲವೆಂದು. ಇದನ್ನು ಸಂಸ್ಥೆಯವರು ತೆಗೆದುಕೊಂಡು ಹೋದರೂ ಏನು ಮಾಡಲು ಸಾಧ್ಯ? ಬೇರೆಯವರಿಗೆ ಮಾರಲಾ ಗುವುದಿಲ್ಲ.

ಶೇಖರಿಸಿಡಲು ಹೆಚ್ಚಿನ ಶ್ರಮ ಬೇಕು. ಹಾಗಾಗಿ ಇಂತಹ ಉತ್ಪನ್ನಗಳನ್ನು ಸಂಸ್ಥೆಗಳು ವಾಪಸ್ಸು ಒಯ್ಯುವುದಿಲ್ಲ. ಇವು ಗ್ರಾಹಕನ ಕೈ ಸೇರಿ ನಂತರ ವಾಪಸ್ಸಾಗುವವ ಉತ್ಪನ್ನಗಳ ಕಥೆಯಾದರೆ, ಸಂಗ್ರಹಣಾ ಕೇಂದ್ರದಲ್ಲೇ ಹಾಳಾಗುವ ಉತ್ಪನ್ನಗಳ ಕಥೆ ಏನು ಗೊತ್ತ ? ಮಾರಾಟ ಜಾಲ ಅಮಜೋನ್, ಹೆಚ್ ಅಂಡ್ ಎಂ, ವಾಲ್ ಮಾರ್ಟ್, ಟಾರ್ಗೆಟ್ ತರಹದ ದೈತ್ಯ ಮಾರಾಟ ಜಾಲ ಹೊಂದಿರುವ ಸಂಸ್ಥೆಗಳ ಸಾಗಾಟ ಜಾಲ ಆರಂಭವಾಗುವುದು ಉತ್ಪಾದಕರಿಂದ. ಅವರಿಂದ ಮುಂದೆ ಅದು ಆಯಾ ಸಂಸ್ಥೆಗಳ ದೈತ್ಯ ಸಂಗ್ರಹಣಾ ಕೇಂದ್ರಕ್ಕೆ ಬಂದು ತಲುಪುತ್ತವೆ.

ಅಲ್ಲಿಂದ ಹೋಲ್ ಸೆಲ್ ವ್ಯಾಪಾರಿಗಳು ಮತ್ತು ನಂತರ ಚಿಕ್ಕ ಅಂಗಡಿಗಳು ಅಥವಾ ನೇರವಾಗಿ ಗ್ರಾಹಕರು. ಇಂತಹ ಸಂಕೀರ್ಣ
ಸಾಗಾಟ ಜಾಲವನ್ನು ಹೊಂದಿರುವ ಸಂಸ್ಥೆಗಳಿಗೆ ಒಮ್ಮೆ ವಸ್ತು ಗ್ರಾಹಕನನ್ನು ಸೇರಿ ಆತನಿಗೆ ಇಷ್ಟವಾಗದಿದ್ದರೆ ಅದನ್ನು
ವಾಪಸ್ಸು ಮಾಡುವುದು ಬಹಳ ತ್ರಾಸದಾಯಕ ಕೆಲಸ.

ವ್ಯಕ್ತಿಯಿಂದ ಅದನ್ನು ಪಡೆದು ತಮ್ಮ ದೈತ್ಯ ಸಂಗ್ರಹಣಾ ಕೇಂದ್ರಕ್ಕೆೆ ಸಾಗಿಸಲು ಬಹಳಷ್ಟು ಹಣ ಖರ್ಚಾಗುತ್ತದೆ. ಜತೆಗೆ
ಆ ವಸ್ತುಗಳನ್ನು ಮತ್ತೆ ಮಾರಾಟ ಮಾಡಬಹುದೇ ಇಲ್ಲವೇ ಎಂಬುದನ್ನೂ ಸಹ ಪರೀಕ್ಷಿಸಬೇಕು. ಅದು ಉತ್ತಮ ಗುಣಮಟ್ಟ ವನ್ನು ಹೊಂದಿಲ್ಲದಿದ್ದರೆ ಅದನ್ನು ಮಾರಾಟ ಮಾಡಿದ ವ್ಯಾಪಾರಿಗೆ ಹಿಂದಿರುಗಿಸಬೇಕು. ಆಗ ವ್ಯಾಪಾರಿ ಆ ಉತ್ಪನ್ನವನ್ನು ಹಿಂದೆಗೆದುಕೊಳ್ಳದೆ ಇರಬಹುದು.

ಹಾಗಂತ ಸಂಸ್ಥೆಗಳು ಗ್ರಾಹಕರಿಗೆ ಇಷ್ಟವಾಗದ ಉತ್ಪನ್ನಗಳನ್ನು ವಾಪಸ್ ಪಡೆಯದೆ ಇರಲು ಸಹ ಸಾಧ್ಯವಿಲ್ಲ. ವಸ್ತುಗಳನ್ನು ವಾಪಸ್ ಮಾಡಲು ಇರುವ ಇಷ್ಟೆಲ್ಲ ಕಷ್ಟಗಳನ್ನು ಮನಗಂಡ ದೈತ್ಯ ಸಂಸ್ಥೆಗಳು ಕಡಿಮೆ ಬೆಲೆಯ ಹೆಚ್ಚಿನ ಉತ್ಪನ್ನಗಳನ್ನು ಗ್ರಾಹಕ ವಾಪಸ್ ಕಳುಹಿಸಿದ ನಂತರ, ನೇರವಾಗಿ ರದ್ದಿಗೆ ಹಾಕಿ ಬಿಡುತ್ತವೆ. ಕೇವಲ ಅಮೆರಿಕ ದೇಶ ಒಂದರಲ್ಲೇ ಪ್ರತಿ ವರ್ಷ 5 ಬಿಲಿಯನ್ ಪೌಂಡ್ಸ್‌‌ನಷ್ಟು ಈ ರೀತಿಯ ತ್ಯಾಜ್ಯ ವಸ್ತುಗಳು ವಿಲೇವಾರಿಯಾಗದೆ ಅಲ್ಲಲ್ಲಿ ಶೇಖರಗೊಂಡು ನಿಂತಿವೆ. ಅಲ್ಲದೆ ಈ ರೀತಿಯ ತ್ಯಾಜ್ಯವಸ್ತುಗಳನ್ನು ಸುಡುವುದರಿಂದ ಸುಮಾರು 15 ಮಿಲಿಯನ್ ಮೆಟ್ರಿಕ್ ಟನ್ ನಷ್ಟು ಇಂಗಾಲ ವಾತಾವರನ್ನು
ಸೇರುತ್ತಿದೆ.

ಸದ್ಯದ ಪರಿಸ್ಥಿತಿ ಹೇಗಿದೆಯೆಂದರೆ ಕಡಿಮೆ ಬೆಲೆಯ ಮತ್ತೆ ಮಾರಾಟ ಮಾಡಲಾಗದ ದಿನಸಿ ಅಥವಾ ಮಾತ್ರೆ ಮತ್ತು ಅದೇ ಬೆಲೆಯ ಮರು ಮಾರಾಟ ಮಾಡಲು ಸಾಧ್ಯವಿರುವ ಎಲೆಕ್ಟ್ರೋನಿಕ್ ಉತ್ಪನ್ನಗಳೆರಡನ್ನೂ ವಿಂಗಡಿಸದೆ ಹೆಚ್ಚಿನ ಸಂಸ್ಥೆಗಳು ಖಾಲಿ ಜಾಗ ದಲ್ಲಿ ಅವುಗಳನ್ನು ವಿಲೇವಾರಿ ಮಾಡುತ್ತಿವೆ.

ಬಟ್ಟೆ ಮಾರಾಟದ ಕಷ್ಟಗಳು
ಇ-ಕಾಮರ್ಸ್ ಕ್ಷೇತ್ರದ ನಂತರ ಹೇರಳ ತ್ಯಾಜ್ಯಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಿರುವ ಕ್ಷೇತ್ರವೆಂದರೆ ಅದು ಜವಳಿ. ಪ್ರತಿ ವರ್ಷ ಈ ಕ್ಷೇತ್ರದಲ್ಲಿ ಉತ್ಪತ್ತಿಯಾಗುವ ಸುಮಾರು 30 ಪ್ರತಿಶತದಷ್ಟೂ ಉತ್ಪನ್ನಗಳು ಮಾರಾಟವಾಗದೆ ವಿವಿಧ ರೀತಿಯಲ್ಲಿ ಪರಿಸರಕ್ಕೆ ಹಾನಿ ಮಾಡುತ್ತಿವೆ. ಜಗತ್ತಿನ ಪ್ರಖ್ಯಾತ ವಸ್ತ್ರ ವಿನ್ಯಾಸ ಮಾರಾಟ ಸಂಸ್ಥೆಯಾದ ಹೆಚ್ ಅಂಡ್ ಎಂ 2018 ರಲ್ಲಿ ಸುಮಾರು 4.8 ಬಿಲಿಯನ್ ಡಾಲರ್ ಮೌಲ್ಯದ ಬಟ್ಟೆಯನ್ನು ಮಾರಾಟ ಮಾಡಲಾಗದೆ ಅವುಗಳನ್ನು ವಿಲೇವಾರಿ ಮಾಡಲು ಹೆಣಗಾಡುತ್ತಿದೆ.

ಬಟ್ಟೆ ವ್ಯಾಪಾರದಲ್ಲಿ ಈ ರೀತಿಯ ಹೇರಳ ತ್ಯಾಜ್ಯ ಉಂಟಾಗಲು ಹಲವಾರು ಕಾರಣಗಳಿವೆ. ಖ್ಯಾತ ಬಟ್ಟೆ ಮಾರಾಟ ಮಳಿಗೆಗಳಾದ ನೈಕಿ, ಲೆವಿಸ್, ಹೆಚ್ ಅಂಡ್ ಎಂ ತರಹದ ಸಂಸ್ಥೆಗಳು ಆಯಾ ಸಮಯದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಬಟ್ಟೆಗಳನ್ನು ಸಿದ್ಧ ಪಡಿಸಿ ಮಾರಾಟ ಮಾಡುತ್ತವೆ. ಉದಾಹರಣೆಗೆ ವಿಂಟರ್ ಕಲೆಕ್ಷನ್, ಸಮ್ಮರ್ ಕಲೆಕ್ಷನ್ ಇತ್ಯಾದಿ. ವಿಂಟರ್ ಮುಗಿದು ಸಮ್ಮರ್ ಬಂದರು ವಿಂಟರ್ ಕಲೆಕ್ಷನ್ ಮಾರಾಟವಾಗದಿದ್ದರೆ ಅವುಗಳನ್ನು ಮಳಿಗೆಯಿಂದ ತೆಗೆಯುವುದು ಅನಿವಾರ್ಯ.

ಹಾಗಂತ ಅವುಗಳನ್ನೇ ಮುಂದಿನ ವರ್ಷ ಮಾರಾಟ ಮಾಡಲು ಸಾಧ್ಯವಿಲ್ಲ. ಏಕೆಂದರೆ ಈ ರೀತಿಯ ದುಬಾರಿ ಬಟ್ಟೆಗಳನ್ನು ಖರೀದಿಸಿದವರು ಪ್ರತಿ ಬಾರಿಯೂ ಹೊಸತನ್ನು ನೀರಿಕ್ಷಿಸುತ್ತಾರೆ. ಅಷ್ಟೇ ಅಲ್ಲದೆ ಐಷಾರಾಮಿ ಬ್ರಾಂಡ್ ಗಳು ಪ್ರತಿ ಬಟ್ಟೆಯನ್ನು ನಿರ್ದಿಷ್ಟ ದಿನಗಳ ವರೆಗೆ ಮಾತ್ರ ತಮ್ಮ ಮಳಿಗೆಯಲ್ಲಿ ಮಾರಾಟ ಮಾಡುತ್ತಾರೆ. ನಂತರ ಅವು ಮಾರಾಟವಾಗದಿದ್ದರೂ ಅದನ್ನು ಅಂಗಡಿಯಿಂದ ತೆಗೆಯಲಾಗುತ್ತದೆ. ಮಾರಾಟವಾಗದ ಬಟ್ಟೆ ಸಂಸ್ಥೆಯ ಮೌಲ್ಯವನ್ನು ಕಡಿಮೆ ಮಾಡುತ್ತವೆ ಎನ್ನುವುದು ಅವರ ವಾದ.

ಪರಿಹಾರವೇನು ?
ಉತ್ಪನ್ನಗಳು ಮಾರಾಟವಾಗದೆ ಅಥವಾ ಹಿಂದಿರುಗಿಸುವುದರಿಂದ ಉಂಟಾಗುವ ತ್ಯಾಜ್ಯದ ಸಮಸ್ಯೆಗೆ ಪರಿಹಾರವನ್ನು ಎಲ್ಲ ಸಂಸ್ಥೆಗಳು ಅನ್ವೇಷಿಸುತ್ತಿವೆ. ಹೆಚ್ ಅಂಡ್ ಎಂ ಮಾರಾಟವಾಗದ ತನ್ನ ಬಟ್ಟೆಗಳನ್ನು ನೈಕಿ ಸಂಸ್ಥೆಗೆ ನೀಡುತ್ತಿದೆ. ನೈಕಿ ಅದರಿಂದ ಅದ್ಭುತ ವಿನ್ಯಾಸದ ಶೂ ಗಳನ್ನು ತಯಾರಿಸಿ ಮಾರುತ್ತಿದೆ. ವಲ್ಡರ್ ವಿಷನ್ ಎನ್ನುವ ಎನ್ ಜಿ ಒ ಸಂಸ್ಥೆ ಎಲ್ಲ ದೈತ್ಯ ಸಂಸ್ಥೆಗಳ ಮಾರಾಟವಾಗದ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಅಥವಾ ಉಚಿತವಾಗಿ ಬಡ ರಾಷ್ಟ್ರಗಳಲ್ಲಿ ವಿಲೇವಾರಿ ಮಾಡುತ್ತಿದೆ.

ಇನ್ನಿತರ ಖ್ಯಾತ ಜವಳಿ ಸಂಸ್ಥೆಗಳು ತಮ್ಮ ತ್ಯಾಜ್ಯವನ್ನು ಕಲ್ಲಿದ್ದಲ ಮೂಲಕ ವಿದ್ಯುತ್ ಉತ್ಪಾದಿಸುವ ಕೇಂದ್ರಗಳಿಗೆ ಉರುವಲಿನ ರೂಪದಲ್ಲಿ ನೀಡುತ್ತಿವೆ. ತ್ಯಾಜ್ಯ ವಿಲೇವಾರಿಯ ಮುಖ್ಯ ಸಮಸ್ಯೆಯೆಂದರೆ ಅಮೇರಿಕ ಸೇರಿದಂತೆ ಹೆಚ್ಚಿನ ದೇಶಗಳಲ್ಲಿ ಅದಕ್ಕೆ  ಸರಿಯಾದ ನಿಯಮಗಳು ಇಲ್ಲದೆ ಇರುವುದು. ಭಾರತ ಈ ನಿಟ್ಟಿನಲ್ಲಿ ಆದಷ್ಟು ಬೇಗ ಕಾರ್ಯ ಪ್ರವ್ರತ್ತವಾಗಿ ಸರಿಯಾದ ಕಾನೂನು
ರೂಪಿಸಿ ತ್ಯಾಜ್ಯದಿಂದ ಮುಕ್ತಿ ಪಡೆಯಲು, ಯೋಜನೆ ಮಾಡುವ ಅಗತ್ಯವಿದೆ.