Friday, 13th December 2024

ತೆರೆಗೆ ಕನ್ನಡದ ಕಟ್ಟಾಳುವಿನ ಕಥೆ: ಪಂಪನನ್ನು ಹೊತ್ತು ತಂದ ಮಹೇಂದರ್‌

ಕನ್ನಡ ಖ್ಯಾತ ನಿರ್ದೇಶಕ ಎಸ್.ಮಹೇಂದರ್ ಫ್ಯಾಮಿಲಿ ಸೆಂಟಿಮೆಂಟ್ ಸಿನಿಮಾಗಳಿಂದಲೇ ಪ್ರಸಿದ್ಧಿ ಪಡೆದವರು. ಕಳೆದ ಎರಡು ವರ್ಷಗಳಿಂದ ಕೊಂಚ ವಿರಾಮ ಪಡೆದುಕೊಂಡಿದ್ದು, ಈಗ ಮರಳಿ ಬಂದಿದ್ದಾರೆ. ಹಾಗಂತ ಅವರು ಸಮ್ಮನೇ ಬರುತ್ತಿಲ್ಲ. ಒಂದೊಳ್ಳೆಯ ಕಥೆ ಇರುವ ಪಂಪನನ್ನು ಹೊತ್ತು ತರುತ್ತಿದ್ದಾರೆ. ಸದ್ದಿಲ್ಲದೆ ಚಿತ್ರೀಕರಣವನ್ನು ಮುಗಿಸಿದ್ದು, ಪಂಪನನ್ನು ಪ್ರೇಕ್ಷಕರ ಮುಂದಿಡಲು ತಯಾರಿ ನಡೆಸಿದ್ದಾರೆ. ಮಹೇಂದರ್ ಅವರ ಈವರೆಗಿನ ಚಿತ್ರಗಳು ಒಂದು ತೂಕವಾದರೆ, ಪಂಪ ಬೇರೆಯದ್ದೇ ಬಗೆಯ ಸಿನಿಮಾವಾಗಿದೆ. ಹಿಂದೆ ಸಿನಿಮಾದ ಶೀರ್ಷಿಕೆಯೇ ಚಿತ್ರದ ಕಥೆ ಹೇಳು ವಂತಿರುತ್ತಿತ್ತು. ಆದರೆ ಈಗ ಟೈಟಲ್ ನಲ್ಲೂ ಕ್ಯೂರಿಯಾಸಿಟಿ ಮೂಡಿಸುವಂತಹ ಅದ್ಭುತ ಚಿತ್ರವನ್ನು ಸಿದ್ಧಮಾಡಿ ಕೊಂಡು ಬಂದಿದ್ದಾರೆ. ಪಂಪನ ಕುರಿತ ಕುತೂಹಲಭರಿತ ವಿಚಾರಗಳನ್ನು ವಿ.ಸಿನಿಮಾಸ್ ನೊಂದಿಗೆ ಹಂಚಿಕೊಂಡಿ ದ್ದಾರೆ.

ಪ್ರಶಾಂತ್.ಟಿ.ಆರ್

ಕನ್ನಡದ ಕಂದ ಈ ಪಂಪ

ಪಂಪ ಅಂದಾಕ್ಷಣ ನಮ್ಮ ಕಣ್ಣ ಮುಂದೆ ಬರುವುದು ಆದಿ ಕವಿ ಪಂಪ. ಅವರ ಸಾಹಿತ್ಯದ ರಸಧಾರೆ, ನಮ್ಮ ಮನದಿಂದ ಉದಿಸಿ,
ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಪಂಪ ಚಿತ್ರದಲ್ಲಿಯೂ ಕನ್ನಡ ಪ್ರೀತಿ, ಪ್ರೇಮ, ಪಾರಮ್ಯವಿದೆ. ಈ ಪಂಪ, ಕನ್ನಡದ ಕಟ್ಟಾಳುವಿನ ಕಥೆಯನ್ನು ಒಳಗೊಂಡಿದೆ. ಕನ್ನಡಕ್ಕಾಗಿ ಎಷ್ಟೆಲ್ಲಾ ಚಳುವಳಿಗಳು ನಡೆದಿವೆ. ನಡೆಯುತ್ತಿವೆ. ಆದರೆ ಪ್ರಸ್ತುತ ಕನ್ನಡದ ಕುರಿತಾದ ಚಳುವಳಿ ಎಂತಹದ್ದು, ಅದನ್ನು ಕೆಲವರು ಹೇಗೆ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬುದನ್ನು ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ. ಈ ಕಥೆಯನ್ನು ಪೊಯೇಟಿಕ್ ಥ್ರಿಲ್ಲರ್ ಜಾನರ್‌ನಲ್ಲಿ, ಸಸ್ಪೆನ್ಸ್‌ ಟಚ್ ನೀಡಿ ತೆರೆಗೆ ತರುತ್ತಿದ್ದಾರೆ. ವಿಭಿನ್ನವಾದ ಕಥಾಹಂದರ ಮತ್ತು ನಿರೂಪಣೆ ಇದರಲ್ಲಿದೆ.

ಜತೆಗೆ, ಹದಿಹರೆಯದ ಪ್ರೀತಿ-ಪ್ರೇಮ, ವಯಸ್ಕನೆಡೆಗಿನ ಆರಾಧನಾಭಾವ, ಭಾಷೆಯ ಮೇಲಿನ ಅಭಿಮಾನ ಮತ್ತು ದುರಭಿಮಾನ, ಹೋರಾಟ, ಸಮಯಸಾಧಕ ಹಾಗೂ ಸ್ವ ಹಿತಾಸಕ್ತ ರಾಜಕಾರಣ ಈ ಎಲ್ಲವನ್ನೂ ಹಿತಮಿತವಾಗಿ ಪಂಪ ಒಳಗೊಂಡಿದೆ.
ಕನ್ನಡಾಭಿಮಾನಿ ಕಥಾನಾಯಕ ಚಿತ್ರದಲ್ಲಿ ನಾಯಕ ಕನ್ನಡದ ಕಟ್ಟಾಳು. ಕನ್ನಡಾಭಿಮಾನವನ್ನೇ ವ್ಯಕ್ತಿತ್ವವನ್ನಾಗಿಸಿಕೊಂಡ ಕಥಾನಾಯಕ. ಪಂಚಳ್ಳಿ ಪರಶಿವಮೂರ್ತಿ ಎನ್ನುವುದು ಹೆಸರಾದರೂ ಸಣ್ಣದಾಗಿ ಪಂಪ ಅಂತಲೇ ಪ್ರಸಿದ್ಧಿ ಪಡೆದರಿರುತ್ತಾರೆ. ವೃತ್ತಿಯಲ್ಲಿ ಕನ್ನಡ ಪ್ರಾಧ್ಯಾಪಕ. ಕನ್ನಡ ಭಾಷೆ, ನೆಲ-ಜಲಗಳ ಬಗೆಗೆ ಪ್ರಾಮಾಣಿಕ ಕಾಳಜಿ ಇರಿಸಿಕೊಂಡವರು. ಕಥೆ, ಕಾದಂಬರಿ, ಕಾವ್ಯಗಳನ್ನು ರಚಿಸುತ್ತಾ ವಿವಿಧ ವಯೋಮಾನದ ಓದುಗರ ಎದೆಯಲ್ಲಿ ಜಾಗ ಗಿಟ್ಟಿಸಿಕೊಂಡವರು.

ಹೀಗೆ ತಮ್ಮ ಕನ್ನಡ ಸಾಹಿತ್ಯ ಕೃಷಿಯ ಮೂಲಕ ಶತ್ರುಗಳೇ ಇಲ್ಲದಂತೆ ಬದುಕುತ್ತಿದ್ದ ಪಂಪ ಅವರ ಮೇಲೆ ಹತ್ಯೆಯ ಯತ್ನ
ನಡೆಯುತ್ತದೆ. ಪ್ರೊಫೆಸರ್ ಪಂಪ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲೇ ಅವರ ಕೊಲೆಯೂ ಘಟಿಸಿಬಿಡುತ್ತದೆ. ಯಾರ ಮನಸ್ಸನ್ನೂ ನೋಯಿಸದ, ಯಾರಿಂದಲೂ ದ್ವೇಷಕ್ಕೆ ಒಳಗಾಗದ ಪಂಪರ ಕೊಲೆ ಮಾಡುವಂತಾ ಸಿಟ್ಟು ಯಾರಿಗಿತ್ತು? ಇವರ ಹತ್ಯೆೆಯ ಹಿಂದೆ ಯಾವೆಲ್ಲಾ ಹಿತಾಸಕ್ತಿಗಳು ಗುಪ್ತಗಾಮಿನಿಯಂತೆ ಕಾರ್ಯ ನಿರ್ವಹಿಸಿದ್ದವು? ಪರಿಶುದ್ಧ ವ್ಯಕ್ತಿತ್ವದ ಕನ್ನಡಾಭಿಮಾನಿ ಪ್ರೊಫೆಸರ್ ಪಂಪರ ಸುತ್ತ ಏನೆಲ್ಲಾ ಆರೋಪಗಳು ಹುಟ್ಟಿಕೊಳ್ಳುತ್ತವೆ? ಇದರ ಹಿಂದಿನ ರಾಜಕಾರಣವೇನು? ಹೀಗೆ ಹತ್ತಾರು ಪ್ರಶ್ನೆಗಳು ಪಂಪನ ಸುತ್ತ ಎಳೆಎಳೆಯಾಗಿ ಬಿಚ್ಚಿಕೊಳ್ಳುತ್ತವೆ.

ರೋಚಕಥೆಯ ತಿರುವು
ಪಂಪ ಚಿತ್ರದ ಕಥೆ ಎಷ್ಟು ರೋಚಕವಾಗಿದೆಯೋ ಅದು ಹುಟ್ಟಿದ್ದು ಕೂಡ ಅಷ್ಟೇ ರೋಚಕವಾಗಿದೆ. ಈ ಸಿನಿಮಾ ಆರಂಭ ಗೊಂಡಿದ್ದರ ಹಿಂದೆಯೂ ಸೋಜಿಗದ ಸಂಗತಿಯಿದೆ. ಟೋಟಲ್ ಕನ್ನಡ ಎನ್ನುವ ಮಳಿಗೆಯನ್ನು ನಡೆಸುತ್ತಾ ಸಾಹಿತ್ಯ, ಸಿನಿಮಾ ವಲಯದಲ್ಲಿ ಜನಪ್ರಿಯತೆ ಪಡೆದಿರುವವರು ವಿ.ಲಕ್ಷ್ಮೀಕಾಂತ್. ಅವರಿಗೆ ಕನ್ನಡದ ಕುರಿತಾಗಿ ಒಂದು ಸಿನಿಮಾ ಮಾಡಬೇಕು ಎನ್ನುವ ಹಂಬಲವಿತ್ತು. ಮೂರು ವರ್ಷಗಳ ಹಿಂದೆ ತಾವೇ ಒಂದು ಕಥೆಯ ಎಳೆ ಸಿದ್ದಪಡಿಸಿಕೊಂಡಿದ್ದರು. ಲಕ್ಷ್ಮೀಕಾಂತ್, ಹಂಸಲೇಖ ಅವರ ಅಭಿಮಾನಿ, ಹಾಗಾಗಿ ಅವರ ಬಳಿ ತೆರಳಿ ತಮ್ಮ ಮನದಿಂಗಿತವನ್ನು ವ್ಯಕ್ತಪಡಿಸಿದ್ದಾರೆ. ತಾವು ರಚಿಸಿದ ಕಥೆಯನ್ನು ಹೇಳಿದ್ದಾರೆ. ಕಥೆ ಕೇಳಿ ಮೆಚ್ಚಿದ, ಹಂಸಲೇಖ, ಎಸ್ ಮಹೇಂದರ್ ಅವರಿಗೆ ಲಕ್ಷ್ಮಿಕಾಂತ್ ಅವರ ಬಯಕೆ ಯನ್ನು ತಿಳಿಸಿದ್ದಾರೆ.

ಕನ್ನಡದ ಅಭಿಮಾನದ ಕಥೆಯನ್ನು ಕೇಳಿ ಬಹುವಾಗಿ ಇಷ್ಟಪಟ್ಟ ಎಸ್ ಮಹೇಂದರ್, ಇಂದಿನ ಟ್ರೆಂಡ್‌’ಗೆ ಒಪ್ಪಿಗೆಯಾಗವಂತೆ ಅದಕ್ಕೊಂದಿಷ್ಟು, ಕಮರ್ಷಿಯಲ್ ಆಯಾಮ ಬೆರೆಸಿ, ಥ್ರಿಲ್ಲರ್ ಅಂಶವನ್ನು ಸೇರಿಸಿ ಅಂತಿಮ ರೂಪಕೊಟ್ಟಿದ್ದಾರೆ. ಅದು ಲಕ್ಷ್ಮೀ ಕಾಂತ್ ಅವರಿಗೂ ಒಪ್ಪಿಗೆಯಾಗಿದ್ದು, ಕಥೆ ತೆರೆಗೆ ಬರಲು ಸಿದ್ಧವಾಗಿದೆ. ಜತೆಯಾದ ಯಶಸ್ವೀ ಜೋಡಿ ಎಸ್.ಮಹೇಂದರ್ ಹಾಗೂ ಹಂಸಲೇಖಾ ಜೋಡಿಯಲ್ಲಿ ಮೂಡಿಬಂದ ಸಿನಿಮಾಗಳು ಗೆದ್ದಿವೆ. ಇಂದಿಗೂ ಕೂಡ ಚಿತ್ರದ ಹಾಡುಗಳು, ಕಥೆ ಪ್ರೇಕ್ಷಕರ ಮನದಲ್ಲಿ ಹಸಿರಾಗಿವೆ. ಈಗ ಪಂಪ ಚಿತ್ರದಲ್ಲಿಯೂ ಈ ಭಲೇ ಜೋಡಿ ಮತ್ತೆ ಒಂದಾಗಿದ್ದು ಚಿತ್ರದ ಬಗೆಗಿನ ಕುತೂಹಲವನ್ನು ಸಹಜವಾಗಿಯೇ ಹೆಚ್ಚಿಸಿದೆ.

ಹಂಸಲೇಖಾ ಕೂಡಾ ಸ್ಕ್ರಿಪ್ಟ್‌ ರಚನೆಯಲ್ಲಿ ಭಾಗಿಯಾಗಿದ್ದು ? ಪಂಪ? ನ ಪವರ್ ಹೆಚ್ಚುವಂತೆ ಮಾಡಿದೆ. ಸಂಗೀತ ಮತ್ತು
ಸಾಹಿತ್ಯ ಹಂಸಲೇಖಾ ಅವರದಾಗಿರುವುದರಿಂದ ಮತ್ತೊಂದು ಮ್ಯೂಸಿಕಲ್ ಮೆಲೋಡಿ ಮೂಡಿಬರುವುದರಲ್ಲಿ ಅನುಮಾನವೇ
ಇಲ್ಲ. ಪಂಪ ಚಿತ್ರದ ಕಥೆ, ಹಾಡುಗಳನ್ನು ಕೇಳುವುದಿಲ್ಲ. ಆದರೆ ಹಾಡಿಲ್ಲದೆ ಚಿತ್ರ ಮುಂದೆ ಸಾಗುವುದಿಲ್ಲ ಎನ್ನುತ್ತಾರೆ ಎಸ್
ಮಹೇಂದರ್. ನನ್ನ ವೃತ್ತಿ ಬದುಕಿನಲ್ಲಿ ಸಾಕಷ್ಟು ಸಿನಿಮಾಗಳನ್ನು ನೀಡಿದ್ದೇನೆ. ಆದರೆ ಕನ್ನಡ ಮತ್ತು ಕನ್ನಡಿಗನ ಕುರಿತಾದ ಪಂಪ ಸಿನಿಮಾ ನನ್ನ ಪಾಲಿಗೆ ದೊರೆತಿದ್ದೇ ನನ್ನ ಅದೃಷ್ಟ ಎಂದು ಭಾವಿಸಿದ್ದೇನೆ. ಅದ್ಭುತವಾದ ಕಥೆ ಮತ್ತು ಕನ್ನಡ ನೆಲದಲ್ಲಿ
ಹುಟ್ಟಿದ ಪ್ರತಿಯೊಬ್ಬರೂ ನೋಡಲೇಬೇಕಾದ ಸ್ಟೋರಿ ಈ ಚಿತ್ರದಲ್ಲಿ ಅಡಕವಾಗಿದೆ. ಪಂಪನನ್ನು ನಿರ್ದೇಶಿಸಿರುವುದಕ್ಕೆ
ನನಗೆ ಅಪಾರ ಹೆಮ್ಮೆಯಿದೆ ಎನ್ನುತ್ತಾರೆ ನಿರ್ದೇಶಕರು. ಕೀ ಕ್ರಿಯೇಷನ್ಸ್‌ ಸಂಸ್ಥೆಯ ಮೂಲಕ ವಿ.ಲಕ್ಷ್ಮೀಕಾಂತ್ ಅವರೇ ಈ
ಚಿತ್ರವನ್ನು ನಿರ್ಮಿಸಿದ್ದಾರೆ.

ನವ ಪ್ರತಿಭೆಗಳಿಗೆ ಮಣೆ
ಎಸ್ ಮಹೇಂದರ್ ಚಿತ್ರ ಎಂದರೆ ಅಲ್ಲಿ ಸ್ಟಾರ್ ಕಲಾವಿದರೇ ತುಂಬಿರುತ್ತಿದ್ದರು. ಆದರೆ ಪಂಪ ಚಿತ್ರದಲ್ಲಿ ಬಹುತೇಕ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಪ್ರೊಫೆಸರ್ ಪಂಪನ ಪಾತ್ರದಲ್ಲಿ ಹಿರಿಯ ರಂಗಭೂಮಿ ಕಲಾವಿದ ಕೀರ್ತಿ ಭಾನು ನಟಿಸಿದ್ದಾರೆ. ಉಳಿದಂತೆ ಸಂಗೀತಾ, ರಾಘವ್ ನಾಯಕ್, ಅರವಿಂದ್, ಆದಿತ್ಯಶೆಟ್ಟಿ, ಭಾವನಾ ಭಟ್, ರೇಣುಕಾ, ರವಿಭಟ್, ಶ್ರೀನಿವಾಸಪ್ರಭು, ಪೃಥ್ವಿರಾಜ್ ಮತ್ತು ಚಿಕ್ಕಹೆಜ್ಜಾಜಿ ಮಹದೇವ್ ಮುಂತಾದವರು ಇತರೆ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಮೂರು ವರ್ಷಗಳ ಸುದೀರ್ಘ ಕಾಲ ತೆಗೆದುಕೊಂಡು ಅಚ್ಚುಕಟ್ಟಾಗಿ ರೂಪುಗೊಂಡಿರುವ ಪಂಪ ಪರಿಪೂರ್ಣವಾಗಿ ತಯಾರಾ ಗಿದೆ. ಕರೋನಾ ಸಂಕಷ್ಟ ಕೊನೆಗೊಂಡ ಬಳಿಕ ಚಿತ್ರ ತೆರೆಗೆ ಬರಲಿದೆ.