Friday, 13th December 2024

ಪಾಠ ಹೇಳಲು ಬರುತ್ತಿ‌ದ್ದಾರೆ ಫಿಸಿಕ್ಸ್ ಟೀಚರ‍್

ಪ್ರಶಾಂತ್ ಟಿ.ಆರ‍್.

ಸ್ಯಾಂಡಲ್‌ವುಡ್‌ನಲ್ಲಿ ಪ್ರತಿಭಾನ್ವಿತ ನಿರ್ದೇಶಕರ ದಂಡೇ ಇದೆ. ಪ್ರೇಕ್ಷಕರಿಗೆ ಹೊಸತನ ನೀಡುವ ಚಿತ್ರವನ್ನು ಕೊಡಬೇಕು ಎಂಬ ಹಂಬಲ ಅವರಿಗಿದೆ. ಅದರಂತೆಯೇ ಫಿಸಿಕ್ಸ್ ಟೀಚರ್ ಎಂಬ ಚಿತ್ರ ಮೂಡಿಬಂದಿದೆ. ಟೈಟಲ್ ಕೇಳಿದರೆ ಇದು ಶಿಕ್ಷಕರೊಬ್ಬರ ಕಥೆಯೇ ಇರಬೇಕು ಅನ್ನಿಸುತ್ತದೆ. ಆದರೆ ಇಲ್ಲಿ ಅದಕ್ಕೂ ವಿಭಿನ್ನವಾದ, ವಿಶೇಷವಾದ ಕಥೆಯಿದೆ. ಟೀಚರ್ ಅಂದಾಕ್ಷಣ ಇದು ಶಾಲೆಯಲ್ಲಿ ನಡೆಯುವ ಕಥೆಯಲ್ಲ, ಬದಲಾಗಿ ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುವ, ಸಸ್ಪೆನ್ಸ್, ಸೈಕಲಾಜಿಕಲ್ ಥ್ರಿಲ್ಲರ್ ಸ್ಟೋರಿಯ ಚಿತ್ರವಾಗಿದೆ.

ಆತ ಭೌತಶಾಸ ಶಿಕ್ಷಕ, ಆತನಿಗೆ ತನ್ನದೇ ಆದ ಗುರಿಗಳಿರುತ್ತವೆ. ಅದರತ್ತ ಸಾಗಲು ಮಾರ್ಗ ಕಂಡು ಕೊಂಡಿರುತ್ತಾನೆ. ಈ ನಡುವೆಯೇ ಅನಿರೀಕ್ಷಿತವಾದ ಕೆಲವೊಂದು ಘಟನೆಗಳು ನಡೆಯುತ್ತವೆ. ಆ ಘಟನೆಗಳೇ ಈ ಶಿಕ್ಷಕನ ಬದುಕಲ್ಲಿ ಹೊಸ ತಿರುವಿಗೆ ಕಾರಣವಾಗುತ್ತದೆ. ಆ ಘಟನೆ ಏನು ಎಂಬುದೇ ಚಿತ್ರದ ಸಸ್ಪೆನ್ಸ್.
ವಾಸ್ತವವನ್ನು ಸರಿಯಾಗಿ ಗಮನಿಸದೆ ನಿರ್ಧಾರ ಕೈಗೊಂಡರೆ ಬದುಕಿನಲ್ಲಿ ಎಂತಹ ಅನಾಹುತ ಸಂಭವಿಸ ಬಹುದು ಎಂಬುದನ್ನು ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ. ಸುಮುಖ ನಿರ್ದೇಶನದಲ್ಲಿ ಚಿತ್ರ ಮೂಡಿಬರುತ್ತಿದ್ದು, ಈ ಚಿತ್ರದಲ್ಲಿ ಸುಮುಖ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ.

ಕಥೆ ಹುಟ್ಟಿದ್ದು ಹೇಗೆ  
ಫಿಸಿಕ್ಸ್ ಟೀಚರ್ ನೈಜ ಘಟನೆ ಆಧಾರಿತವಲ್ಲದಿದ್ದರೂ, ಕಥೆಗೆ ನೈಜತೆಯ ಸ್ಪರ್ಶ ನೀಡಲಾಗಿದೆ. ಸುಮುಖ್, ಪಾಸಿಂಗ್ ಶಾಟ್ಸ್ ಫಿಲ್ಮ್ ಎಂಬ ನಿರ್ಮಾಣ ಸಂಸ್ಥೆ ಯನ್ನು ಆರಂಭಿಸಿದ್ದಾರೆ. ಒಳ್ಳೆಯ ಚಿತ್ರವನ್ನು ನಿರ್ಮಾಣ ಮಾಡಬೇಕೆಂದು ಕಥೆ ಹುಡುಕಾಟದಲ್ಲಿದ್ದಾಗ ಫಿಸಿಕ್ಸ್ ಟೀಚರ್ ಕಥೆ ಹೊಳೆದಿದೆ. ವೃತ್ತಿಯಲ್ಲಿ ಶಿಕ್ಷಕರಾಗಿದ್ದ ಸ್ಕಂದ ಸುಬ್ರ್ಮಮಣ್ಯ ಚಿತ್ರದ ಕಥೆ ರಚಿಸಿದ್ದಾರೆ. ಸುಮುಖ್‌ಗೆ ಜತೆಯಾಗೆ ಪ್ರೇರಣಾ ಕಂಬಂ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ರಾಜೇಶ್ ನಟರಂಗ, ಮಂಡ್ಯ ರಮೇಶ್ ಮತ್ತಿತರರು ಚಿತ್ರದ ತಾರಾ ಬಳಗದಲ್ಲಿದ್ದಾರೆ. ಈಗಾಗಲೇ ಚಿತ್ರತಂಡ ಬೆಂಗಳೂರು ಸುತ್ತಮುತ್ತ ಮೊದಲ ಭಾಗದ ಚಿತ್ರೀಕರಣವನ್ನು ಮುಗಿ ಸಿದ್ದು, ಎರಡನೇ ಶೆಡ್ಯುಲ್ ಶೂಟಿಂಗ್‌ಗೆ ತಯಾರಿ ನಡೆಸಿದೆ. ಅಕ್ಟೋಬರ್‌ನಲ್ಲಿ ಚಿತ್ರೀಕರಣ ಮುಗಿಸುವ ಪ್ಲಾನ್ ಇದ್ದು, ಈ ವರ್ಷದ ಕೊನೆಯಲ್ಲಿ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ನಿರ್ಧರಿಸಿದೆ.

ಭರ್ಜರಿ ತಯಾರಿ
ಈ ಹಿಂದೆ ರಾಜಸ್ಥಾನ್ ಡೈರೀಸ್ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದೆ. ಚಿತ್ರ ಕನ್ನಡ ಹಾಗೂ ಮರಾಠಿಯಲ್ಲಿ ಸಿದ್ಧವಾಗಿದೆ. ಕರೋನಾ ಕಾರಣದಿಂದಾಗಿ ಚಿತ್ರವನ್ನು ತೆರೆಗೆ ತರಲು ಸಾಧ್ಯವಾಗಲಿಲ್ಲ. ಆ ನಡುವೆಯೇ ಫಿಸಿಕ್ಸ್ ಟೀಚರ್ ಕಥೆ ಸಿದ್ಧವಾಯಿತು. ಚಿತ್ರದ ಚಿತ್ರೀಕರಣವೂ ಆರಂಭವಾಯಿತು, ಈ ಚಿತ್ರದ ಕಥೆ ನನಗೆ ತುಂಬಾ ಹಿಡಿತು. ಕಥೆಗೆ ತಕ್ಕಂತೆ ತಯಾರಿ ಆರಂಭಿಸಿದೆ. ಸ್ಕಂದ ಸುಬ್ರ್ಮಮಣ್ಯ ಅವರು ಶಿಕ್ಷಕರಾಗಿದ್ದರಿಂದ ಅವರ ಬಳಿ ಒಂದಷ್ಟು ವಿಚಾರಗಳನ್ನು ತಿಳಿದು ಕೊಂಡೆ. ಅಂತು ನಟಿಸಲು ತಯಾರಾದೆ. ಚಿತ್ರದಲ್ಲಿ ಕಥೆಯೇ ಪ್ರಮುಖವಾಗಿದೆ. ಪ್ರತಿ ಪಾತ್ರಧಾರಿಗಳು ಕೂಡ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ ಎನ್ನು ತ್ತಾರೆ ಸುಮುಖ. ಚಿತ್ರದ ಟೀಸರ್ ಇನ್ನೇನು ರಿಲೀಸ್ ಆಗಲಿದೆ.