Friday, 13th December 2024

ಹಾಲೋವಿನ್ನೋ ಪಿತೃಪಕ್ಷವೋ !

ಹಿರಿಯರ ಆತ್ಮಗಳನ್ನು ನೆನಪಿಸಿಕೊಂಡು ಗೌರವಿಸುವ ಪಾಶ್ಚಾತ್ಯರ ಹಾಲೋವೀನ್ ಹಬ್ಬ ಈ ವಾರ ಕೊನೆಗೊಂಡಿದೆ. ನಮ್ಮದೇಶದ ಹಿರಿಯರ ಹಬ್ಬ ಎನಿಸಿದ ಪಿತೃಪಕ್ಷದ ಉದ್ದೇಶವೂ ಇದೇ ಅಲ್ಲವೆ?

ಟಿ.ಎಸ್.ಶ್ರವಣ ಕುಮಾರಿ

ಆ ಸಂಜೆ ಕರೆಗಂಟೆ ಸದ್ದುಮಾಡಿ ನಮ್ಮನ್ನು ಕರೆಯಿತು. ಅಮೆರಿಕದಲ್ಲಿ ಸಮಯಾ ಸಮಯ ವಿಲ್ಲದೆ ಯಾರೂ ಯಾರ ಮನೆಯ ಕರೆಗಂಟೆಯನ್ನೂ ಒತ್ತುವುದಿಲ್ಲ. ಹೊರಹೋಗಿದ್ದ ಮಗಳು, ಅಳಿಯ ಬೀಗದಕೈ ತೆಗೆದುಕೊಂಡೇ ಹೋಗಿರ್ತಾರೆ. ‘ಯಾರೇ ಕರೆ ಗಂಟೆ ಒತ್ತಿದರೂ ಸ್ವಲ್ಪ ಜಾಗರೂಕತೆಯಿಂದ ನೋಡಿಕೊಂಡು ಬಾಗಿಲು ತೆರೆಯಿರಿ’ ಎಂದು ಸಲಹೆ ನೀಡಿ ದ್ದರು. ನನ್ನವರು ಎದ್ದು ಹೋಗಿ ಕಂಡಿಯಲ್ಲಿ ಇಣುಕಿದರೆ ಇಬ್ಬರು ಮಕ್ಕಳೊಂದಿಗೆ ಒಬ್ಬಾತ ನಿಂತಿದ್ದರು.

ಬಾಗಿಲು ತೆರೆದ ತಕ್ಷಣ ಚಿತ್ರವಿಚಿತ್ರ ವೇಷಭೂಷಣಗಳಲ್ಲಿ ಕರಿಬೆಕ್ಕುಗಳಂತೆ ಕಂಗೊಳಿಸು ತ್ತಿದ್ದ ಅವೆರಡೂ ಒಟ್ಟಿಗೆ ಪಟಪಟ ಎಂದು ಏನೋ ಅಂದವು. ನಮಗಿಬ್ಬರಿಗೂ ಅರ್ಥವಾಗ ಲಿಲ್ಲ. ನಮ್ಮಿಬ್ಬರ ಪೆದ್ದುಮುಖವನ್ನು ನೋಡಿದ ತಕ್ಷಣ ಆತ ‘ದೆ ಹ್ಯಾವ್ ಕಂ ಫಾರ್ ಹಾಲೋವೀನ್ ಸೆಲೆಬ್ರೇಷನ್ ಎಂದರು. ಆಗಲಾದರೂ ಅರ್ಥವಾಯಿತೇ!? ಅದೇನು?’ ‘ಏನು ಮಾಡಬೇಕು?’ ಎಂಬ ಭಾವವನ್ನು ಸೂಸುತ್ತಾ ಪಿಳಿಪಿಳಿ ಬಂದವರ ಮುಖ ನೋಡಿದೆವು. ‘ಇವುಕ್ಕೇನೂ ಗೊತ್ತಿಲ್ಲ’ ಎಂದು ಅರ್ಥ ವಾದವ ‘ಇಟ್ ಈಸ್ ಆಲ್‌ರೈಟ್, ಡೋಂಟ್ ವರಿ ಎಂದು ನಗುತ್ತಾ ಮಕ್ಕಳನ್ನು ಕರೆದುಕೊಂಡು ಹೊರಟ.

ನನ್ನವರು ‘ಏನು?’ ಎನ್ನುವಂತೆ ನನ್ನೆಡೆಗೆ ಹುಬ್ಬು ಏರಿಸಿದರು. ಸ್ವಲ್ಪ ಹೊತ್ತಿನಲ್ಲೇ ಮಗಳು ಅಳಿಯ ಬಂದರು. ‘ಓ ಮಕ್ಕಳು
ಬಂದಿದ್ರಾ. ಇವತ್ತು ಬಿಲ್ಡಿಂಗ್‌ನಲ್ಲಿ ಹಾಲೋವೀನ್ ಡೇ ಸೆಲೆಬ್ರೇಟ್ ಮಾಡ್ತಿದಾರೆ. ಅವ್ರಿಗೆ ಫ್ರಿಜ್‌ನಲ್ಲಿರೋ ಚಾಕೋಲೇಟ್ ಕೊಡ್ಬೇಕಿತ್ತು, ಇಲ್ಲಾ ಒಂದೋ ಎರಡೋ ಡಾಲರ್ ಕೊಡ್ಬೇಕಿತ್ತು’ ಅಂದಳು ಮಗಳು. ‘ನಮ್ಗೇನು ಗೊತ್ತು? ನೀನು ಅದ್ರ ಬಗ್ಗೆ ಏನೂ ಹೇಳಿರ್ಲಿಲ್ವಲ್ಲಾ’ ಅಂದೆ. ‘ಹೌದು, ಹಾಲೋವೀನ್‌ನಲ್ಲಿ ಭಾಗವಹಿಸ್ತಾ ಇರೋರು ಮನೆ ಮುಂದೆ ಏನಾದ್ರೂ ಒಂದು ಗುರುತನ್ನು ಇಡಿ ಅಂದಿದ್ರು. ನಾವೇನೂ ಇಟ್ಟಿರ್ಲಿಲ್ವಲ್ಲ. ಹಾಗಾಗಿ ಯಾರೂ ಬರಲ್ಲ ಅಂದುಕೊಂಡೆ.

ಇಲ್ಲಿ ಅಕ್ಟೋಬರ್ ಕೊನೇಲಿ ಹಾಲೋವಿನ್ ಡೇ’ ಅಂತ ಸೆಲೆಬ್ರೇಟ್ ಮಾಡ್ತಾರೆ. ಮನೆ ಮುಂದೆ, ಮನೆಯೊಳ್ಗೆ ಕುಂಬಳ ಕಾಯನ್ನೋ, ಇನ್ನೇನನ್ನೋ ಕೊರೆದು ಮಾಡಿದ ಲ್ಯಾಂಟರ್ನೋ ಅಥವಾ ಆ ಥರಾ ಏನೇನೋ ಆಕಾರಗಳನ್ನೋ, ತಲೆ ಬುರುಡೆ, ಸ್ಕೆೆಲಿಟನ್, ಮ್ಯಾಜಿಕ್ ವ್ಯಾಂಡ್, ಕರಿ ಬೆಕ್ಕು, ಭೂತ, ಪಿಶಾಚಿ, ಮಾಂತ್ರಿಕರು ಈ ಥರಾ ಮಾಡೆಲ್‌ಗಳನ್ನ ಇಟ್ಟು, ಲೈಟಿಂಗ್ ಮಾಡಿ
ಡೆಕೋರೇಟ್ ಮಾಡ್ತಾರೆ.

ಯಾವುದೇ ಕ್ಷುದ್ರ ಆತ್ಮಗಳೋ, ಪ್ರೇತಾತ್ಮಗಳೋ ಮನೆಯೊಳಗೆ ಸೇರಬಾರದು ಅಂತ ಇವೆಲ್ಲಾ ಅಲಂಕಾರ! ಸಂಜೆ ಮಕ್ಕಳು ಮುಖಕ್ಕೆ ಬಣ್ಣ ಬಳ್ಕೊಂಡು ಆ ಥರಾನೇ ಡ್ರೆಸ್, ಮೇಕಪ್ ಮಾಡ್ಕೊಂಡು ಮನೆಮನೆಗೆ ಬಂದು ‘ಟ್ರಿಕ್ ಆರ್ ಟ್ರೀಟ್’ ಅಂತ ಹೇಳ್ತಾರೆ. ಟ್ರೀಟ್ ಅಂದ್ರೆ ನಾವು ಅವ್ರಿಗೆ ಚಾಕೋಲೇಟೋ, ಟಾಯ್ಸೋ ಇಲ್ದಿದ್ರೆ ಒಂದೆರಡು ಡಾಲರ್ ದುಡ್ಡೋ ಏನಾದ್ರೂ ಕೊಡ್ಬೇಕು. ಕೊಡ್ತಿದ್ರೆ ಏನಾದ್ರೂ ಟ್ರಿಕ್ ಮಾಡಿ ನಿಮ್ಗೆ ಬುದ್ದಿ ಕಲಿಸ್ತೀವಿ ಅಂತ ಹೆದರ್ಸಿ ತಮಾಶೆ ತೊಗೊಳೋ ರೀತಿ ಅದು. ಮುಂದಿನ್ವರ್ಷ ಮಕ್ಕಳು ಬರೋವಾಗ ನಾನೂ ನಮ್ಮ ಪಾಪಣ್ಣನ್ನ ಕುಂಬಳಕಾಯೋ, ಜೆಲ್ಲಿ ಫಿಶ್ಶೋ ಮಾಡಿ ಕೂರ್ಸಿರ್ತೀನಿ’ ಅಂದು ಮುಂದಿನ ವರ್ಷದ್ದನ್ನ ಈಗ್ಲೇ ಕಲ್ಪಿಸಿಕೊಳ್ತಾ ಮಗನ್ನ ಲೊಚಲೊಚ ಮುದ್ದಾಡಿದ್ಲು.

ಆತ್ಮದ ನೆನಪಿನ ಹಬ್ಬ
‘ಅಲ್ವೇ, ಸಂಭ್ರಮ ಪಡೋದು ಅಂದ್ರೆ ಒಳ್ಳೊಳ್ಳೇ ಡ್ರೆಸ್ ಹಾಕ್ಕೊಂಡು, ಏಂಜಲ್ ಥರಾನೋ, ಫೇರಿ ತರಾನೋ ಬರ್ಬೇಕು. ಇದೇನು ಭೂತ, ಪ್ರೇತ, ಪಿಶಾಚಿ ಇವೆಲ್ಲಾ ಅದೂ ಮಕ್ಕಳು’ ಅಂದೆ. ‘ಇದು ಸತ್ತವರನ್ನು ನೆನಪಿಸಿಕೊಳ್ಳೋ ದಿನ ಇಲ್ಲಿ. ಜೀವಕ್ಕೂ, ಆತ್ಮಕ್ಕೂ ಕನೆಕ್ಷನ್ ಸಿಗತ್ತಂತೆ ಇವತ್ತು. ಅದಕ್ಕೆ ಮಕ್ಕಳೆಲ್ಲಾ ಈ ತರಹ ಡ್ರೆಸ್ ಹಾಕ್ಕೊಂಡು ಮನೆಮನೆ ಸುತ್ಕೊಂಡು ಮೆರೆದ್ರೆ, ದೊಡ್ಡವರು ಹಾರರ್ ಫಿಲ್ಮ್ ನೋಡ್ಕೊಂಡು, ಹಾಂಟೆಡ್ ಮನೆಗಳನ್ನ, ಸ್ಮಶಾನಗಳನ್ನ ತಾವೇ ನಿರ್ಮಿಸಿಕೊಂಡು ಫ್ರೆಂಡ್ಸ್‌ ಜೊತೆಗೆ ಪಾರ್ಟಿ ಮಾಡ್ಕೊಂಡು ಕಾಲ ಕಳೀತಾರೆ. ಇದು ಮೊದ್ಲಿಗೆ ಯೂರೋಪಿಯನ್ ದೇಶಗಳಲ್ಲಿ ಇತ್ತಂತೆ ಈಗ ಎಲ್ಲ ಕಡೆಗೂ ಬಂದಿದೆ’ ಅಂದರು ಅಳಿಯ. ಮಗಳು ‘ಹೋದವರ್ಷ ಸಿಂಧೂನೂ ಶ್ರೀಯಾನ್ನ ಕರಿಬೆಕ್ಕಿನ ಹಾಗೆ ಡ್ರೆಸ್ ಮಾಡಿ, ಒಂದು ಬ್ಯಾಗ್ ತುಂಬಾ
ಏನೇನೋ ಬಿಸ್ಕತ್ತು, ಚಾಕ್ಲೇಟು ತುಂಬಿ ಬೇಬಿ ಸಿಟಿಂಗ್‌ಗೆ ಕಳಿಸ್ದೆ’ ಅಂದ್ಳು. ಈಗ ಅಲ್ಲೂ ಮಕ್ಕಳಲ್ಲಿ ಶುರುವಾಗಿದೆ’ ಅಂದಳು.

‘ಇರ್ಬೋದೇನೋ ಇಂತವುಗಳಲ್ಲೆಲ್ಲಾ ‘ಅಮೇರಿಕೋಚ್ಛಿಷ್ಟೋ ಜಗತ್ಸರ್ವಂ’ ತಾನೇ. ನಾವೆಲ್ಲಾ ಚಿಕ್ಕೋರಿದ್ದಾಗ, ಕಾಮನ ಹಬ್ಬದ ಸಮಯದಲ್ಲಿ ಅಂತ ಕಾಣತ್ತೆ, ನಮ್ಮೂರಲ್ಲಿ ಚಿಕ್ಕವ್ರಲ್ಲಾ, ಸ್ವಲ್ಪ ದೊಡ್ಡ ಮಕ್ಕಳೇ ಅನ್ನು; ಮೈಗೆಲ್ಲಾ ಹಳದಿ, ಕಪ್ಪು ಪಟ್ಟೆ ಬಳ್ಕೊೊಂಡು, ಕಿವಿ, ಬಾಲ, ಮೀಸೆ ಅಂಟಿಸ್ಕೊಂಡು ಹೋ ಅಂತ ಘರ್ಜನೆ ಮಾಡ್ಕೊಂಡು ? ‘ಹುಲಿವೇಷ’ ಅಂತ ಅವ್ರ ಜೊತೆಗೆ ಒಂದಷ್ಟು ಜನ ತಮಟೆ ಬಡ್ಯೋರ್ನ ಕಕೊರ್ಂಡು ಮನೆಮನೆಗೆ ಬಂದು ದುಡ್ಡು ಕೊಡೋವರ್ಗೂ ಹೋಗ್ತಿರ್ಲಿಲ್ಲ. ನಾವೆಲ್ಲಾ ಹೆದ್ರಿ ಅಲ್ಲಿಂದ ಓಟ್ಟಾ. ಇದೂ ಸ್ವಲ್ಪ ಹಾಗೇನೇ ಇದೆ. ಆದ್ರೆೆ ಅಲ್ಲಿ ಭೂತ, ಪ್ರೇತ ಎಲ್ಲಾ ಇರ್ಲಿಲ್ಲ’ ಅಂದೆ.

‘ಈ ಹಬ್ಬದ ಕಾರಣಾನೇ ಬೇರೆ ಅಲ್ವಾ’ ಅಂದರು ಅಳಿಯ. ‘ಸರಿ ಬಿಡಿ, ಇದೊಂತರಾ ಅಮೆರಿಕದ ಪಿತೃ ಪಕ್ಷ, ಮಹಾಲಯಾ ಅಮಾವಾಸ್ಯೆ’ ಎಂದೆ. ಪಿತೃ ಪಕ್ಷದ ಹೋಲಿಕೆ ‘ಅದೇನು?’ ಅನ್ನೋ ಹಾಗೆ ಮುಖ ನೋಡಿದ್ರು. ‘ಭಾದ್ರ ಪದ ಮಾಸದಲ್ಲಿ ಅನಂತನ ಹುಣ್ಣಿಮೆ ಆದ್ಮೇಲೆ ಕೃಷ್ಣಪಕ್ಷದ ಪಾಡ್ಯದಿಂದ ಅಮಾವಾಸ್ಯೆವರೆಗೂ ಪಕ್ಷ ಅಂತ ಮಾಡಿ ಎಲ್ಲಾ ಪಿತೃಗಳಿಗೂ ತರ್ಪಣ ಕೊಡ್ತಾರೆ. ತುಂಬಾ ಜನರಲ್ಲಿ ಬರೀ ಮಹಾಲಯಾ ಅಮಾವಾಸ್ಯೆ ಮಾತ್ರಾ ಆಚರಣೆ ಮಾಡೋ ಪದ್ಧತಿ ದೇಶದುದ್ದಕ್ಕೂ ಇದೆ. ನದಿ ತೀರಗಳಿಗೆ, ಸಂಗಮಗಳಿಗೆ ಹೋಗಿ ಅವತ್ತು ಪಿತೃತರ್ಪಣ ಕೊಡ್ತಾರೆ. ಕೆಲವರು ಅವತ್ತು ತಮ್ಮ ಹಿರಿಯರಿಗೆ ಏನೇನು ಇಷ್ಟವೋ ಅದನ್ನೆಲ್ಲಾ ಮಾಡಿ ‘ಎಡೆ’ ಇಡ್ತಾರೆ.

ಬರೀ ಊಟ ಅಷ್ಟೇ ಅಲ್ಲ, ಹೆಂಡ, ಸಿಗ್ರೇಟು, ನಶ್ಯ ಜೊತೆಗೆ ಹೊಸಬಟ್ಟೆ ಎಲ್ಲಾನೂ ಒಂದು ರೂಮಲ್ಲಿ ಇಟ್ಟು ಊದಿನಕಡ್ಡಿ, ದೂಪ ಹಾಕ್ತಾರೆ.’ ಅಂದೆ. ‘ನಡೀರಿ, ಕಾರಲ್ಲಿ ಹೊರಗಡೆ ಒಂದು ರೌಂಡ್ ಹೋಗಿ ಸುತ್ತಾಡಿಕೊಂಡು ಮನೆಮನೆಗಳ ಮುಂದೆ ಮಾಡಿರೋ ಡೆಕೋರೇಶನ್ ನೋಡ್ಕೊಂಡು ಬರೋಣ’ ಎಂದು ಇಬ್ಬರೂ ನಮ್ಮನ್ನು ಕೂತಲ್ಲಿಂದ ಎಬ್ಬಿದರು. ಮನೆಮನೆಗಳ ಮುಂದೆ ಕುಂಬಳಕಾಯಲ್ಲಿ, ಸೋರೆಕಾಯಲ್ಲಿ ಕೊರೆದಿದ್ದ ಲ್ಯಾಂಟ್ರನ್‌ಗಳೊಳಗೆ ದೀಪಗಳು, ಮಂತ್ರದಂಡವನ್ನು ಕೈಯಲ್ಲಿ ಹಿಡಿದುಕೊಂಡ ಮಾಂತ್ರಿಕನ ಬೊಂಬೆಗಳು, ಟೊಂಗೆಯಲ್ಲಿ ನೇತಾಡುತ್ತಿದ್ದ ಸ್ಕೆಲಿಟನ್ ಮಾದರಿಗಳು, ಬೆಕ್ಕು, ಮೂಳೆ, ಗೋರಿ ಕಲ್ಲು- ನಾವು ಏನೇನನ್ನು ಮನೆಯೊಳಗೆ ಇಟ್ಟುಕೊಳ್ಳಕ್ಕೆ ನಿಷಿದ್ಧ ಅಂದುಕೊಳ್ತೀವೋ ಅವೆಲ್ಲಾ ಅಲ್ಲಿ ಅಲಂಕಾರವಾಗಿ ಕುಳಿತುಕೊಂಡಿದ್ವು. ಅವಕ್ಕೆಲ್ಲಾ ಲೈಟಿಂಗ್!

ಆ ಮನೆ, ಈ ಮನೆ ಎಡತಾಕುತ್ತಿದ್ದ ವಿವಿಧ ವೇಷದಲ್ಲಿದ್ದ ಮಕ್ಕಳು, ಅವರೊಟ್ಟಿಗೆ ಯಾರಾದರೊಬ್ಬರು ದೊಡ್ಡವರು (ಇಲ್ಲೆಲ್ಲಾ ಮಕ್ಕಳನ್ನು ಒಬ್ಬೊಬ್ಬರನ್ನೇ ಬಿಡುವಂತಿಲ್ಲವಲ್ಲ. ಯಾರೇನು ಕೊಟ್ಟರೂ ಅದನ್ನು ಜೊತೆಯಲ್ಲಿರುವ ದೊಡ್ಡವರು ಸ್ಕ್ರೀನಿಂಗ್ ಮಾಡಿದ ಮೇಲೇ ಮಕ್ಕಳ ಕೈಸೇರುವುದು). ಜನ ಯಾವ ರೀತಿಯಲ್ಲಾದ್ರೂ ಸಂಭ್ರಮ ಪಡಲಿ; ಇಂತಹ ಮಾದರಿಗಳನ್ನು, ಡ್ರೆಸ್
ಗಳನ್ನು ತಯಾರಿಸೋವ್ರಿಗೆ, ಮಾರೋವ್ರಿಗಂತೂ ಖಂಡಿತಾ ಹಬ್ಬವೇ ಸರಿ ಬಿಡಿ. ಅಂತೂ ಒಂದು ಗಂಟೆ ಸುತ್ತಾಡಿ ಹಾಲೋವಿನ್ ಸಂಭ್ರಮವನ್ನು ನೋಡಿಕೊಂಡು ಮನೆಗೆ ವಾಪಸ್ಸು ಬರ್ತಿರೋವಾಗ ‘ಮನುಷ್ಯನಿಗೆ ನವರಸಗಳಲ್ಲಿ ಒಂದಾದ ಭಯಾನಕ’ದ ಬಗ್ಗೆ ತೀವ್ರವಾದ ವಿಚಿತ್ರ ಆಕರ್ಷಣೆಯೇನಾದ್ರೂ ಇದೆಯಾ?’ ಅಂತ ಒಂದು ಯೋಚನೆ ಬಂತು.

ಇಲ್ದಿದ್ರೆ ಹಾರರ್ ಚಲನಚಿತ್ರಗಳನ್ನು ನೋಡೋಕೆ ಜನ ಯಾಕೆ ಮುಗಿ ಬೀಳ್ತಾರೆ? ದೆವ್ವ ಭೂತದ ಕತೆಗಳ ಬಗ್ಗೆ ಯಾಕೆ ಕುತೂಹಲ ತೋರಿಸ್ತಾರೆ? ಇಂತಹ ಮುಂದುವರೆದ ದೇಶದಲ್ಲೂ ‘ಹಾಂಟೆಡ್ ಹೌಸ್’ಗಳು ಇವೆ. ಜನ ಹೆದರ್‌ಹೆದರ್ ಕೊಂಡು ಹೋಗಿ ನೋಡ್ಕೊಂಡು ಬರ್ತಿರ್ತಾರೆ. ಈ ದೇಶಗಳಲ್ಲಿ ತಯಾರಾಗುವಂತಹ ಭೂತ ಪ್ರೇತಗಳ ಚಿತ್ರಗಳು ನಮ್ಮಲ್ಲೂ ತಯಾರಾ ಗೋಲ್ಲ. ಇಂತವನ್ನೆಲ್ಲಾ ಆಚರಣೆ ಮಾಡೋದು ಮನದಲ್ಲಿ ಸುಪ್ತವಾಗಿರೋ ಭಯಾನ ಹೊರಹಾಕುವ ಒಂದು ವಿಧಾನವೆ? ಮಕ್ಕಳಿಗೆ ‘ಭಯ’ದ ಬಗ್ಗೆ ಭಯ ಹೋಗಿಸುವ ಒಂದು ಉಪಾಯಾನಾ. ಯಾವ ದೇಶದಲ್ಲೇ ಆದ್ರೂ ಸತ್ತವರ ಆತ್ಮಗಳ ಬಗ್ಗೆ ಒಂದು ನಂಬಿಕೆ ಇದ್ದೇ ಇದೆ. ನಾವು ಪಿತೃದೇವತೆಗಳು ಅಂತೀವಿ ಇವರು ‘ಸ್ಪಿರಿಟ್’ ಅಂತಲೋ ‘ಪ್ರೇತಾತ್ಮ’ಗಳೆಂತಲೋ ಕರೀತಾರೆ.

ಒಟ್ಟಿನಲ್ಲಿ ‘ಸಾವು’ ಮನುಷ್ಯನಿಗೆ ಎಂದೂ ನಿಗೂಢವೇ. ಎಲ್ಲರೂ ಯಾವುದೋ ಒಂದು ರೀತಿಯಲ್ಲಿ ಸತ್ತವರನ್ನು ಒಂದು ದಿನವಾದ್ರೂ ನೆನಪಿಸಿಕೊಳ್ಳೋಕೆ, ಅವರೊಂದಿಗೆ ವರ್ಷದಲ್ಲಿ ಒಂದು ದಿನವಾದ್ರೂ ಸಂಪರ್ಕ ಹೊಂದೋದಕ್ಕೆ ಪ್ರಯತ್ನಿಸ್ತೀ ವೇನೋ.  ಮನೆ ಬಂತು. ಇಳಿದು ಬರೋವಾಗ ಕಾರ್ತೀಕ ಮಾಸ ಅಂತ ಸಾಯಂಕಾಲ ಮನೆ ಮುಂದೆ ಕಿಂಡಿಗಳ ಮುಚ್ಚಳ ಇರು ವಂತ ಹಣತೆಯಲ್ಲಿ ಹಚ್ಚಿಟ್ಟಿದ್ದ ದೀಪ ಇನ್ನೇನು ಆರೋದರಲ್ಲಿತ್ತು.

‘ಅರೆ ಇದನ್ನೇ ನೋಡ್ಕೊಂಡು ಆ ಮಕ್ಕಳು ನಾವೂ ಹಾಲೋವೀನ್ ಸೆಲಬ್ರೇಟ್ ಮಾಡ್ತಿದೀವಿ ಅಂದ್ಕೊಂಡರೇನೋ’ ಎನ್ನುತ್ತಾ ಮಗಳು ಮನೆಯ ಬಾಗಿಲು ತೆರೆದಳು. ‘ಇರಬಹುದು. ನಂಗೂ ಅದೇ ಯೋಚನೆ ತಲೇಲಿ ಬಂತು’ ಅಂದರು ಅಳಿಯ. ಒಂದೇ ವಸ್ತು, ವಿಷಯ ಅವರವರ ಭಾವಕ್ಕೆ ತಕ್ಕಂತೆ ಏನು ಅರ್ಥ ಬೇಕಾದರೂ ಹೊರಡಿಸಬಹುದೇನೋ!