Friday, 2nd June 2023

ಕವಿಯ ಪರೀಕ್ಷೆ

ಬೇಲೂರು ರಾಮಮೂರ್ತಿ

ಕವಿ ಕಾಳಿದಾಸನಿಗೆ ತಾನು ಜ್ಞಾನಿಯಾಗಿರುವುದರ ಅರಿವು ಕೊಂಚ ಹೆಚ್ಚೇ ಆಗಿದ್ದ ದಿನಗಳು. ಒಂದು ಸಾರಿ ಅವನು ಪರ್ಯಟನ
ಮಾಡುತ್ತಾ ಒಂದು ಊರಿನ ಬಳಿ ಬಂದಾಗ ಬಾಯಾರಿಕೆ ಆಗಿತ್ತು. ಬಾವಿಯೊಂದರ ಬಳಿ ಹೆಂಗಸೊಬ್ಬಳು ನೀರು ಸೇದುತ್ತಿದ್ದಳು.

ಕಾಳಿದಾಸ ಅವಳ ಬಳಿ ಸಾರಿ ‘ನನಗೆ ಬಾಯಾರಿದೆ, ಕೊಂಚ ನೀರು ಕೊಡುತ್ತೀರಾ’ ಎಂದ. ಅದಕ್ಕೆ ಆ ಹೆಂಗಸು ‘ನನಗೆ ನಿನ್ನ
ಪರಿಚಯವಿಲ್ಲವಲ್ಲ ಮಗು, ನಿನ್ನ ಪರಿಚಯ ಹೇಳು. ನೀರು ಕೊಡುತ್ತೇನೆ’ ಎಂದಳು. ಆಗ ಕಾಳಿದಾಸ ತನ್ನ ಪರಿಚಯ ಹೇಳಲು
ಪ್ರಾರಂಭಿಸಿದಾಗ, ಆಕೆ ಮರು ಪ್ರಶ್ನೆ ಆರಂಬಿಸಿದಳು. ‘ನಾನೊಬ್ಬ ಪ್ರವಾಸಿ’ ‘ಲೋಕದಲ್ಲಿ ಇಬ್ಬರೇ ಪ್ರವಾಸಿಗಳು, ಒಬ್ಬ ಸೂರ್ಯ
ಮತ್ತೊಬ್ಬ ಚಂದ್ರ. ಅವರಿಬ್ಬರೂ ಹಗಲು ರಾತ್ರಿಗಳನ್ನು ನಡೆಸುತ್ತಿದ್ದಾರೆ’ ‘ನಾನೊಬ್ಬ ಈ ಊರಿನ ಅತಿಥಿ’ ‘ಲೋಕದಲ್ಲಿ ಇಬ್ಬರೇ ಅತಿಥಿಗಳು.

ಒಂದು ಯೌವನ ಮತ್ತೊಂದು ಧನ. ಅವುಗಳು ಹೀಗೆ ಬಂದು ಹಾಗೆ ಹೊರಟುಹೋಗುತ್ತವೆ. ನಿಜ ಹೇಳು ನೀನು ಯಾರು?’
‘ನಾನೊಬ್ಬ ಸಹನಶೀಲ’ ‘ಈ ಲೋಕದಲ್ಲಿ ಸಹನಶೀಲರು ಇಬ್ಬರೇ. ಒಂದು ಭೂಮಿ, ಇನ್ನೊಂದು ಮರ. ಭೂಮಿ ತನಗೆ ಕೇಡು
ಮಾಡುವವನ ಬಗೆಗೂ ಸಹನೆಯಿಂದಿರುತ್ತದೆ. ಮರ ತನಗೆ ಕಲ್ಲು ಎಸೆದವರಿಗೂ ರುಚಿ ರುಚಿಯಾದ ಹಣ್ಣುಗಳನ್ನು ಕೊಡುತ್ತದೆ. ನೀ ಯಾರು ಹೇಳು’ ‘ನಾನೊಬ್ಬ ಹಠಮಾರಿ’ ‘ಅದೂ ಸರಿ ಅಲ್ಲ.

ಲೋಕದಲ್ಲಿ ಇಬ್ಬರೇ ಹಠಮಾರಿಗಳು ಅವು ಉಗುರು ಮತ್ತು ಕೂದಲು, ಎಷ್ಟು ಸಾರಿ ಕತ್ತರಿಸಿದರೂ ಮತ್ತೆ ಮತ್ತೆ ಬೆಳೆಯುತ್ತವೆ’
‘ನಾನೊಬ್ಬ ಮೂರ್ಖ’ ‘ನಿನ್ನ ಉತ್ತರವೇ ಸರಿ ಇಲ್ಲ. ಈ ಲೋಕದಲ್ಲಿ ಇಬ್ಬರೇ ಮೂರ್ಖರು. ಒಬ್ಬ ರಾಜ. ಯೋಗ್ಯತೆ ಇಲ್ಲದಿದ್ದರೂ ಪ್ರಜೆಗಳ ಮೇಲೆ ಏರಿ ರಾಜ್ಯಭಾರ ಮಾಡುತ್ತಾನೆ. ಇನ್ನೊಬ್ಬ ಆಸ್ಥಾನದ ಮಂತ್ರಿ. ರಾಜನನ್ನು ಓಲೈಸುವುದಕ್ಕಾಗಿ ಸುಳ್ಳುಗಳನ್ನೂ ನಿಜವೆಂದು ಬಿಂಬಿಸುತ್ತಾನೆ.’

ಇಷ್ಟೊತ್ತಿಗೆ ಕಾಳಿದಾಸನಿಗೆ ಸುಸ್ತಾಗಿತ್ತು. ಅವನು ಹೆಂಗಸಿನ ಕಾಲಿಗೆ ಬಿದ್ದು ‘ನಾನು ಯಾರೆಂದು ನನಗೇ ಗೊತ್ತಿಲ್ಲ. ಆದರೂ ನನಗೆ
ಬಾಯಾರಿಕೆ ಆಗುತ್ತಿದೆ. ದಯಮಾಡಿ ಸ್ವಲ್ಪ ನೀರು ಕೊಡು ತಾಯೇ’ ಅಂದ. ಕಾಳಿದಾಸ ಎದ್ದು ಕಣ್ಣು ಬಿಟ್ಟಾಗ, ಹೆಂಗಸಿನ ಜಾಗದಲ್ಲಿ ಸಾಕ್ಷಾತ್ ಸರಸ್ವತಿ ನಿಂತಿದ್ದಳು.

‘ಏಳು ಮೇಲೆ, ವಿದ್ಯೆಯಿಂದ ಜ್ಞಾನಾರ್ಜನೆ ಆಗುತ್ತದೆ, ಅಹಂಕಾರವಲ್ಲ. ವಿದ್ಯೆಯಿಂದ ದೊರೆತ ಮಾನ ಸಮ್ಮಾನಗಳನ್ನೇ
ಸರ್ವಸ್ವವೆಂದು ತಿಳಿದಿದ್ದ ನಿನ್ನ ಕಣ್ಣು ತೆರೆಸಬೇಕಿತ್ತು. ಅದಕ್ಕೆ ಈ ಪ್ರಶ್ನೆಗಳನ್ನು ಕೇಳಿದೆ’ ಎಂದಳು. ಕಾಳಿದಾಸ ‘ನನ್ನದು ತಪ್ಪಾಯಿತು ತಾಯಿ. ವಿದ್ಯಾ ದದಾತಿ ವಿನಯಂ ಎನ್ನುವುದನ್ನು ಈ ಜನ್ಮದಲ್ಲಿ ನಾನು ಮರೆಯುವುದಿಲ್ಲ.’ ಎಂದ. ನಂತರ ಕಾಳಿದಾಸನಿಗೆ ಸರಸ್ವತಿ ನೀರು ಕೊಟ್ಟಳು.

error: Content is protected !!