Friday, 13th December 2024

ಚಿತ್ರೀಕರಣ ಮುಗಿಸಿದ ಪುರುಷೋತ್ತಮ

ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಾಡಿ ಬಿಲ್ಡಿಂಗ್‌ನಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಜಿಮ್ ರವಿ ಪ್ರಥಮಬಾರಿಗೆ ಪುರುಷೋತ್ತಮ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.

ಮಾತ್ರವಲ್ಲ ರವಿಸ್ ಜಿಮ್ ಬ್ಯಾನರ್‌ನಲ್ಲಿ ಚಿತ್ರ ನಿರ್ಮಾಣಕ್ಕೂ ಬಂಡವಾಳ ಹೂಡಿದ್ದಾರೆ. ದಿಲ್ದಾರ ಮತ್ತು ನಾನು ನಮ್ಮುಡ್ಗಿ ಖರ್ಚ್‌ಗೊಂದು ಮಾಫಿಯ ಚಿತ್ರಗಳನ್ನು ನಿರ್ದೆಶನ ಮಾಡಿರುವ ಅಮರ್‌ನಾಥ್.ಎಸ್.ವಿ ಚಿತ್ರಕಥೆ, ಸಂಭಾಷಣೆ ಬರೆದು ಆಕ್ಷನ್
ಕಟ್ ಹೇಳುತ್ತಿದ್ದಾರೆ. ಮೈಸೂರಿನ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆದಿದೆ. ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿರುವ ಚಿತ್ರತಂಡ ಹಾಡುಗಳ ಚಿತ್ರೀಕರಣವನ್ನು ಮಾತ್ರ ಬಾಕಿ ಉಳಿಸಿಕೊಂಡಿದೆ.

ನಾನು ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿರುವುದು ಹೊಸ ಅನುಭವ. ನಿರ್ಮಾಣವೂ ಹೊಸತೆ. ಎಲ್ಲರ ಆಶೀರ್ವಾದವೂ ನನ್ನ ಮೇಲಿದೆ, ಹಾಗಾಗಿ ಇಲ್ಲಿವರೆಗಿನ ಚಿತ್ರೀಕರಣ ಅಂದುಕೊಂಡಂತೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ರವಿರಾಜ್ ಒಡೆತನದ ಆಕಾರ್ ಅಪಾರ್ಟ್‌ಮೆಂಟ್ಸ್, ದಿನೇಶ್ ಅವರ ಕಾರ್ಲೆ ಹೋಟೆಲ್, ವಕೀಲ ಮಹದೇವ್ ದೇಸಿಕ್ ಕಛೇರಿ, ಕೆಆರ್‌ಎಸ್ ಹಿನ್ನೀರು, ಚಾಮುಂಡಿಬೆಟ್ಟ, ಅರಮನೆ, ಸಾಗರಕಟ್ಟೆ ಮುಂತಾದ ಕಡೆ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಹಾಡುಗಳ ಚಿತ್ರೀಕರಣ ಬಾಕಿಯಿದೆ. ಲಾಕ್‌ಡೌನ್ ಮುಗಿದ ನಂತರ ಬಾಕಿ ಎರಡು ಹಾಡುಗಳನ್ನು ಚಿತ್ರೀಕರಿಸಿಕೊಂಡು, ದಸರಾಗೆ ಚಿತ್ರವನ್ನು ಬಿಡುಗಡೆ ಮಾಡಲು ಚಿಂತನೆ ನಡೆಸಲಾಗಿದೆ ಎನ್ನುತ್ತಾರೆ ನಾಯಕ ರವಿ.

ಅಪೂರ್ವಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಮೈಸೂರಿನ ಬೆಡಗಿ ನಿವೇದಿತಾ ಮತ್ತೊಬ್ಬ ನಾಯಕಿಯಾಗಿ ಬಣ್ಣಹಚ್ಚಿದ್ದಾರೆ. ಇವರೊಂದಿಗೆ ಎ.ವಿ.ಹರೀಶ್, ಪ್ರಭು ಆಲೂರು ಚಿಕ್ಕಬಸವಯ್ಯ, ಕಿರಣ್, ಶರಣ್, ಕೃಷಿ ಹಾಗೂ ಹಲವು ರಂಗಭೂಮಿ ಕಲಾವಿದರುಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಆನಂದ್ ಪ್ರಿಯಾ, ಪ್ರಮೋದ್ ಮರವಂತೆ ಚಿತ್ರಕ್ಕೆ ಸಾಹಿತ್ಯ ನೀಡಿದ್ದಾರೆ.